-ಕೃಷ್ಣದಾಸ
ವ್ರಜಮಂಡಲ ಪರಿಕ್ರಮದ ಮಹತ್ವ, ವೃಂದಾವನದ ಮಹಾತ್ಮೆ, ಅಲ್ಲಿನ ಕೆಲವು ಪ್ರಮುಖ ದೇವಾಲಯಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ನಿಮಗೆ ಮಾಹಿತಿ ನೀಡಿದ್ದೇವೆ. ಈ ಸಂಚಿಕೆಯಲ್ಲಿ ವೃಂದಾನವದಲ್ಲಿ ನೀವು ನೋಡಬೇಕಾದ ಇನ್ನೂ ಕೆಲವು ದೇವಾಲಯಗಳ ಬಗ್ಗೆ ಸ್ಥೂಲ ಮಾಹಿತಿ ನೀಡುತ್ತಿದ್ದೇವೆ.
ಶ್ರೀ ಕೃಷ್ಣ ಬಲರಾಮ ಮಂದಿರ:

ಈ ದೇವಾಲಯದ ಶ್ರೀಲ ಪ್ರಭುಪಾದರು 1976ರಲಿ ಸ್ಥಾಪಿಸಿದರು. ಗೌರ ನಿತಾಯ್, ಕೃಷ್ಣ ಬಲರಾಮ ಮತ್ತು ರಾಧಾ ಶ್ಯಾಮಸುಂದರ ವಿಗ್ರಹಗಳು ಇಲ್ಲಿವೆ. ಎಡಭಾಗದ ಮಂಟಪದಲ್ಲಿ ಗೌರ ನಿತಾಯ್ ವಿಗ್ರಹದ ಕೆಳಗೆ ಶ್ರೀಲ ಪ್ರಭುಪಾದ ಮತ್ತು ಶ್ರೀಲ ಭಕ್ತಿ ಸಿದ್ಧಾಂತ ಗೋಸ್ವಾಮಿ ಅವರ ಚಿಕ್ಕ ಮೂರ್ತಿಗಳಿವೆ. ದೇವಾಲಯದೊಳಗೆ ಶ್ರೀಲ ಪ್ರಭುಪಾದರ ಇನ್ನೊಂದು ದೊಡ್ಡ ವಿಗ್ರಹವೂ ಇದೆ.
ಇಲ್ಲಿ ವ್ಯವಸ್ಥಿತ ಅತಿಥಿಗೃಹ, ರೆಸ್ಟೋರೆಂಟ್, ಸಾಂಪ್ರದಾಯಿಕ ಗುರುಕುಲಗಳೂ ಇವೆ. ಮಂದಿರದಿಂದ 1 ಕಿ.ಮೀ ದೂರದಲ್ಲಿ 500 ಗೋವುಗಳ ಗೋಶಾಲೆ ಇದೆ.
ಶ್ರೀ ಗೋವಿಂದಜಿ ದೇವಾಲಯ:

ಜೈಪುರ (ಅಂಬೇರ್) ಮಾನ್ ಸಿಂಗ್ 1590ರಲ್ಲಿ ಈ ಸುಂದರ ದೇವಾಲಯವನ್ನು ನಿರ್ಮಿಸಿದ. ಆತ ಅಕ್ಬರನ ಸೇನೆಯಲ್ಲಿ ದಂಡನಾಯಕನಾಗಿದ್ದ. ಮಾನ್ ಸಿಂಗ್, ರಘುನಾಥ ಭಟ್ಟ ಗೋಸ್ವಾಮಿಯವರ ಅನುಯಾಯಿಯಾಗಿದ್ದ. ಸಾವಿರಾರು ಕಾರ್ಮಿಕರು ಸತತ 5 ವರ್ಷ ಕೆಲಸ ಮಾಡಿ ಈ ದೇವಾಲಯ ನಿರ್ಮಿಸಿದರು. ಆಗ್ರಾದ ಕೆಂಪು ಕೋಟೆ ನಿರ್ಮಾಣಕ್ಕೆಂದು ಬಳಸಲಾಗುತ್ತಿದ್ದ ಕೆಂಪು ಕಲ್ಲುಗಳನ್ನು ಅಕ್ಬರ್ ಈ ದೇವಾಲಯ ನಿರ್ಮಾಣಕ್ಕೆ ನೀಡಿದ್ದ ಎಂದು ಹೇಳಲಾಗಿದೆ.
ರಾಧಾಕೃಷ್ಣರ ಸಂಗಮ ಸ್ಥಳ ಯೋಗಪೀಠದ ನಡುವೆ ಈ ದೇವಾಲಯವಿದೆ. ಗೋವಿಂದಜಿ ಮೂಲ ವಿಗ್ರಹ ಮೊದಲು ದೊರೆತಿದ್ದು ರೂಪ ಗೋಸ್ವಾಮಿ ಅವರಿಗೆ. ಔರಂಗಾಜೇಬ್ ಈ ದೇವಾಲಯದ ಮೇಲೆ ದಾಳಿ ನಡೆಸಿದಾಗ ಇಲ್ಲಿದ್ದ ಮೂಲ ವಿಗ್ರಹವನ್ನು ಜೈಪುರಕ್ಕೆ ಸ್ಥಳಾಂತರಿಸಲಾಯಿತು.
ಶ್ರೀಲ ಪ್ರಭುಪಾದರ ಸಮಾಧಿ:

ಕೃಷ್ಣ ಬಲರಾಮ ಮಂದಿರ ಎದುರು ಅಮೃತ ಶಿಲೆಯಿಂದ ನಿರ್ಮಿಸಲಾದ, ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರ ಭವ್ಯ ಸಮಾಧಿ ಇದೆ. ಸಾಮಾನ್ಯವಾಗಿ ಮೃತರ ಪಾರ್ಥಿವ ಶರೀರಗಳನ್ನು ಅಗ್ನಿಗಾಹುತಿ ಮಾಡಿ, ನಂತರ ಅದರ ಬೂದಿಯನ್ನು ಪವಿತ್ರ ನದಿಗಳಲ್ಲಿ ನಿಸರ್ಜಿಸಲಾಗುತ್ತದೆ. ಆದರೆ ಶ್ರೀ ಕೃಷ್ಣನ ಪರಮೋಚ್ಛ ಭಕ್ತರಾದ “ಪರಮಹಂಸ”ರ ಮೃತದೇಹಗಳನ್ನು ಅಗ್ನಿಗರ್ಪಿಸುವುದಿಲ್ಲ.
ಅದನ್ನು ಹಾಗೆಯೇ ಸಮಾಧಿ ಮಾಡಲಾಗುತ್ತದೆ. ಅದರಂತೆ ಪ್ರಭುಪಾದರ ಪಾರ್ಥಿವ ಶರೀರವನ್ನೂ ಇಲ್ಲಿ ಸಮಾಧಿ ಮಾಡಲಾಗಿದೆ. ಸಮಾಧಿ ಮೇಲೆ ಪ್ರಭುಪಾದರ ಒಂದು ವಿಗ್ರಹ ಸ್ಥಾಪಿಸಲಾಗಿದೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಪ್ರಭುಪಾದರ ತೀರೋಭಾವ ಮತ್ತು ಜನ್ಮಾಷ್ಟಮಿಯಂದು ಆವಿರ್ಭಾವ ಕಾರ್ಯಕ್ರಮವನ್ನು ಇಲ್ಲಿ ಆಚರಿಸಲಾಗುತ್ತದೆ. ಇಲ್ಲಿರುವ ಮ್ಯೂಸಿಯಂನ ಮೇಲ್ಮಹಡಿಯಲ್ಲಿ ಒಂದು ವಿಡಿಯೋ ಕೇಂದ್ರವಿದೆ. ಇಲ್ಲಿ ಪ್ರಭುಪಾದರ ವಿಡಿಯೋ ಚಿತ್ರಣಗಳನ್ನು ಪ್ರದರ್ಶಿಸಲಾಗುತ್ತದೆ.
ಶ್ರೀಲ ಪ್ರಭುಪಾದರ ಮ್ಯೂಸಿಯಂ:

ಶ್ರೀಲ ಪ್ರಭುಪಾದರ ವೃಂದಾವನದಲ್ಲಿದ್ದಾಗ ವಾಸಿಸುತ್ತಿದ್ದ ಕೊಠಡಿಗಳು ಇಲ್ಲಿವೆ. 1977ರ ನವೆಂಬರ್ 14ರಂದು ಶ್ರೀಲ ಪ್ರಭುಪಾದರು ಕೃಷ್ಣಪಾದ ಸೇರುವ ಸಂದರ್ಭದಲ್ಲಿ ಮಲಗಿದ್ದ ಹಾಸಿಗೆಯೂ ಇಲ್ಲಿದೆ. ಇದರ ಮೇಲೆ ಒಂದು ಹೂಮಾಲೆ ಇರಿಸಲಾಗಿದೆ. ವೃಂದಾವನದಲ್ಲಿದ್ದಾಗ ವಿಶ್ವ ಪರ್ಯಟನೆ ಮಾಡುವಾಗ ಪ್ರಭುಪಾದರು ಬಳಸುತ್ತಿದ್ದ ಅನೇಕ ವಸ್ತುಗಳನ್ನು ನೀವು ಇಲ್ಲಿ ನೋಡಬಹುದು.
ಪ್ರಭುಪಾದರ ಊಟದ ತಟ್ಟೆಗಳು, ಜಪಮಾಲೆ, ಜನಿವಾರ, ಚಾಪೆ, ಚಪ್ಪಲಿ, ಕಾಲು ಚೀಲ (socks). ಧೋತಿ, ಹ್ಯಾಟ್, ಹೊದಿಕೆ, ಅವರು ಸಹಿ ಮಾಡಿದ “ಬ್ಯಾಕ್ ಟು ಗಾಡ್ಹೆಡ್” ಸಂಚಿಕೆಗಳು ನಿಮಗೆ ಪ್ರಭುಪಾದರ ದಿನಗಳನ್ನು ನೆನಪಿಸುತ್ತವೆ. ಪ್ರತಿವರ್ಷ ಪ್ರಭುಪಾದರು ಕೃಷ್ಣಪಾದ ಸೇರಿದ ದಿನ, ಸಮಯ 7-30ಕ್ಕೆ ಸರಿಯಾಗಿ ಇಲ್ಲಿ ವಿಶೇಷ ಆರತಿ ನೆರವೇರಿಸಲಾಗುವುದು.
ವಂಶಿವಟ ಪ್ರದೇಶ ಮತ್ತು ದೇವಾಲಯ:

ವಂಶಿ ಎಂದರೆ ಕೊಳಲು. ವಟವೃಕ್ಷ ಎಂದರೆ ಆಲದ ಮರ. 5000 ವರ್ಷಗಳ ಹಿಂದೆ, ಕೃಷ್ಣನ ಕಾಲದಲ್ಲಿ ಇಲ್ಲೊಂದು ಬೃಹತ್ ವಂಶಿ ವಟವೃಕ್ಷ ಇತ್ತು. 450 ವರ್ಷಗಳ ಹಿಂದೆ ಯಮುನೆ ಪ್ರವಾಹದಲ್ಲಿ ಈ ವೃಕ್ಷ ಕೊಚ್ಚಿಕೊಂಡು ಹೋಯಿತು ಎಂದು ಹೇಳಲಾಗಿದೆ. ಪರಮಾನಂದ ಭಟ್ಟರು ವಂಶಿ ವಟ ವೃಕ್ಷದ ಒಂದು ಚಿಕ್ಕ ಕೊಂಬೆಯನ್ನು ಬೇರೆಡೆ ನೆಡಲು ಮುಂದಾದರು. ಅಲ್ಲಿ ಅವರಿಗೆ ಗೋಪಿನಾಥ ವಿಗ್ರಹ ದೊರೆಯಿತು. ವಜ್ರನಾಭ ಈ ವಿಗ್ರಹವನ್ನು ಇಲ್ಲಿ ಮೊದಲು ಪ್ರತಿಷ್ಠಾಪಿಸಿದ. ಅವರು ಈ ವಿಗ್ರಹವನ್ನು ಪೂಜಿಸಲು ಮಧುಪಂಡಿತರಿಗೆ ನೀಡಿದರು.
ರಾಧಾವಲ್ಲಭ ದೇವಾಲಯ:
ಗೋಪಾಲ ಭಟ್ಟ ಗೋಸ್ವಾಮಿಯವರ ಶಿಷ್ಯ ಹಿತ್ ಹರಿವಂಶ ಗೋಸ್ವಾಮಿ ಈ ದೇವಾಲಯ ಸ್ಥಾಪಿಸಿದರು. ರಾಧಾವಲ್ಲಭ ಪಂಥವನ್ನು ಆರಂಭಿಸಿದವರೂ ಇವರೇ. ಕೃಷ್ಣಸೇನೆಯಲ್ಲಿ ತೊಡಗುವ ಉದ್ದೇಶದಿಂದ ವೃಂದಾವನದತ್ತ ತೆರಳುತ್ತಿದ್ದಾಗ ದಾರಿಯಲ್ಲಿ ಆತ್ಮದೇವ ಎಂಬ ಬ್ರಾಹ್ಮಣನ ಪರಿಚಯವಾಯಿತು. ಆತ್ಮದೇವನ ಬಳಿ ರಾಧಾವಲ್ಲಭ ವಿಗ್ರಹವಿತ್ತು. ಆತ ನಿತ್ಯವೂ ಅದನ್ನು ಪೂಜಿಸುತ್ತಿದ್ದ.
ಆತನಿಗೆ ಮದುವೆ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳೂ ಇದ್ದರು. ಒಂದು ದಿನ ಕನಸಿನಲ್ಲಿ ಭಗವಂತ ಕಾಣಿಸಿಕೊಂಡು, ರಾಧಾವಲ್ಲಭ ವಿಗ್ರಹವನ್ನು ಹರಿವಂಶ ಗೋಸ್ವಾಮಿ ನೀಡಬೇಕು ಮತ್ತು ಒಬ್ಬ ಮಗಳನ್ನು ಅವರಿಗೆ ಮದುವೆ ಮಾಡಿಕೊಡಬೇಕು ಎಂದು ಸೂಚಿಸಿದ. ನಂತರ ಆತ್ಮದೇವ ಸೇವಾ ಕುಂಜದ ಬಳಿ ಒಂದು ಗುಡಿ ನಿರ್ಮಿಸಿ, ರಾಧವಲ್ಲಭ ವಿಗ್ರಹವನ್ನು ಅಲ್ಲಿ ಪ್ರತಿಷ್ಠಾಪಿಸಿದ.
1626ರಲ್ಲಿ ಇಲ್ಲಿ ಸುಸಜ್ಜಿತ ದೇವಾಲಯ ನಿರ್ಮಿಸಲಾಯಿತು. 1670ರಲ್ಲಿ ಮತಾಂಧ ಔರಂಗಜೇಬನ ಸೈನಿಕರು ಈ ದೇವಾಲಯವನ್ನು ಅಪವಿತ್ರಗೊಳಸಿದರು. ಆದ್ದರಿಂದ ಮೂಲ ದೇವಾಲಯದ ಪಕ್ಕದಲ್ಲಿ ಹೊಸ ದೇವಾಲಯ ನಿರ್ಮಿಸಿ, ವಿಗ್ರಹವನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. ಈಗ ಇಲ್ಲಿಯೇ ಪೂಜೆ ನಡೆಯುತ್ತಿರುವುದು. 1871-72ರಲ್ಲಿ ಈ ದೇವಾಲಯದ ನಿರ್ಮಾಣ ಪೂರ್ಣಗೊಂಡಿತು. ಇಲ್ಲಿ ರಾಧಾರಾಣಿ ವಿಗ್ರಹವಿಲ್ಲ. ಬದಲಾಗಿ ಮಂಟಪದಲ್ಲಿ ಒಂದು ಕಿರೀಟವನ್ನು ಇರಿಸಲಾಗಿದೆ. ಈ ದೇವಾಲಯ ಬಾಂಕೆ ಬಿಹಾರಿ ದೇವಾಲಯದ ಸಮೀಪದಲ್ಲಿದೆ.
ನಿಧಿವನ:

ಸೇವಾಕುಂಜದಂತೆಯೇ ಇದೂ ಒಂದು ಚಿಕ್ಕ ವನ ಅಥವಾ ತೋಪು. ರಾಧಾಕೃಷ್ಣರು ನೃತ್ಯ ಮತ್ತಿತರ ಪ್ರಣಯ ಲೀಲೆಗಳ ಬಳಿಕ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಇಲ್ಲಿ “ನಿದ್ರಿಸುವ ದೇವಾಲಯ” ಎಂಬ ಒಂದು ವಿಶಿಷ್ಟ ದೇಗುಲವಿದೆ. ಇಲ್ಲೊಂದು ಪಲ್ಲಂಗವಿದ್ದು, ರಾಧಾಕೃಷ್ಣರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದುದು ಈ ಸ್ಥಳದಲ್ಲೇ. ನಿಧಿವನದಲ್ಲಿ ವಿಶಾಖ ಕುಂಡವಿದೆ. ರಾಸ ನೃತ್ಯದ ಬಳಿಕ ವಿಶಾಖ ದೇವಿಯ ದಾಹ ತಣಿಸಲು ಕೃಷ್ಣ ತನ್ನ ಕೊಳಲಿನಿಂದ ಭೂಮಿಯನ್ನು ಬಗೆದ ಜಾಗವಿದು.
ನಿಧಿವನದ ಪ್ರವೇಶ ದ್ವಾರದ ಬಳಿಯೇ ಹರಿದಾಸ ಸ್ವಾಮಿ ಸಮಾಧಿ ಇದೆ. ಶಹಜಿ ದೇವಾಲಯ ಮತ್ತು ಲೋಯಿ ಬಜಾರ್ ನಡುವೆ ನಿಧಿವನ ಇದೆ. ಇದರ ಸಮೀಪದಲ್ಲೇ ರಾಧಾರಮಣ ದೇವಾಲಯವೂ ಇದೆ.
ಶ್ರೀನಿವಾಸ ಆಚಾರ್ಯ ಸಮಾಧಿ:
ಶ್ರೀನಿವಾಸ ಆಚಾರ್ಯರು ಗೋಪಾಲ ಭಟ್ಟ ಗೋಸ್ವಾಮಿಯವರ ಅನುಯಾಯಿಗಳು. ಅವರು ಜೀವ ಗೋಸ್ವಾಮಿಯವರ ಶಿಷ್ಯರೂ ಹೌದು. ಇಲ್ಲಿನ ರಾಧಾ ಮಾಧವ ದೇವಾಲಯದಲ್ಲಿ ಶ್ರೀನಿವಾಸ ಆಚಾರ್ಯ, ರಾಮಚಂದ್ರ ಕವಿರಾಜ ಮತ್ತು ಹೇಮಲತಾ ಠಾಕುರಾಣಿ ಅವರ ಸಮಾಧಿ ಇದೆ. ರೂಪ ಗೋಸ್ವಾಮಿ ಸಮಾಧಿಯ ಪಕ್ಕದಲ್ಲೇ ಶ್ರೀನಿವಾಸ ಆಚಾರ್ಯ ಸಮಾಧಿ ಇತ್ತು. ಆದರೆ ಅವರ ಪುತ್ರಿ ಹೇಮಲತಾ ಠಾಕುರಾಣಿ ಇಲ್ಲಿಗೆ ಬಂದ ನಂತರ ಅದನ್ನು ಈಗಿರುವ ಜಾಗಕ್ಕೆ ಸ್ಥಳಾಂತರಿಸಿದರು.
ರಾಧಾಗೋಕುಲಾನಂದ ದೇವಾಲಯ:
ಲೋಕನಾಥ ಗೋಸ್ವಾಮಿ ಅವರ ರಾಧಾ-ವಿನೋದ ವಿಗ್ರಹಗಳು, ಬಲದೇವ ವಿದ್ಯಾಭೂಷಣರ ವಿಜಯಗೋವಿಂದ, ವಿಶ್ವನಾಥ ಚಕ್ರವರ್ತಿಯವರ ರಾಧಾ ಗೋಕುಲಾನಂದ ವಿಗ್ರಹಗಳು ಈ ದೇವಾಲಯದಲ್ಲಿವೆ. ನರೋತ್ತಮ ದಾಸ ಠಾಕುರರು ಪೂಜಿಸುತ್ತಿದ್ದ ಶ್ರೀಕೃಷ್ಣ ಮತ್ತು ಚೈತನ್ಯ ಮಹಾಪ್ರಭುಗಳ ವಿಗ್ರಹಗಳೂ ಇಲ್ಲಿವೆ. ಇವೆಲ್ಲಾ ಬೇರೆ ಬೇರೆ ಮೂಲ ದೇವಾಲಯಗಳಲ್ಲಿ ಪೂಜಿಸಲ್ಪಡುತ್ತಿದ್ದ ವಿಗ್ರಹಗಳು. ನಂತರ ಆ ವಿಗ್ರಹಗಳನ್ನು ಪೂಜಿಸುತ್ತಿದ್ದ ಗೋಸ್ವಾಮಿಗಳು ಅವುಗಳನ್ನು ಇಲ್ಲಿ ತಂದು ಪ್ರತಿಸ್ಥಾಪಿಸಿದರು.
ಚೈತನ್ಯ ಮಹಾಪ್ರಭುಗಳು ರಘುನಾಥ ದಾಸ ಗೋಸ್ವಾಮಿಗಳಿಗೆ ನೀಡಿದ ಗೋವರ್ಧನ ಶಿಲೆ ಇಲ್ಲಿದೆ. ಈ ಶಿಲೆ ಮೇಲೆ ಚೈತನ್ಯರ ಹೆಬ್ಬೆರಳ ಗುರುತು ಇದೆ. ಚೈತನ್ಯರು ಈ ಶಿಲೆಯನ್ನು ತಮ್ಮ ಎದೆ ಅಥವಾ ಕಣ್ಣಿಗೆ ಒತ್ತಿಕೊಂಡು ಕೃಷ್ಣ ಜಪ ಮಾಡುತ್ತಿದ್ದರು. ಕೇಶಿ ಘಟ್ಟ ಮತ್ತು ರಾಧಾರಮಣ ದೇವಾಲಯಗಳ ನಡುವೆ ಈ ದೇವಾಲಯವಿದೆ.
ದಾವಾನಲ ಕುಂಡ:
ಶ್ರೀಕೃಷ್ಣನು ಕಾಡ್ಗಿಚ್ಚಿನ ಬೆಂಕಿಯನ್ನು ನುಂಗಿ ಬೃಜ ನಿವಾಸಿಗಳನ್ನು ಸಂರಕ್ಷಿಸಿದ ಪ್ರದೇಶವೇ ದಾವಾನಲ ಕುಂಡ. ಕೃಷ್ಣನು ಕಾಳಿಂಗ ಮರ್ದನ ಮಾಡಿದ ಬಳಿಕ ಈ ಘಟನೆ ನಡೆಯಿತು. ಈ ಪ್ರದೇಶ ಫೋಗಲ್ ಆಶ್ರಮದ ಸಮೀಪವಿದೆ.
ವಿಶ್ರಾಮ ಕುಂಡ:

ದಾವಾನಲ ಕುಂಡದ ಬಳಿ ಕಾಳಿಧಾರಿ ಉದ್ಯಾನವಿದೆ. ಕಾಡ್ಗಿಚ್ಚಿನ್ನು ನುಂಗಿದ ಬಳಿಕ ಶ್ರೀಕೃಷ್ಣ ನೇರವಾಗಿ ಈ ಸ್ಥಳಕ್ಕೆ ಬಂದನೆಂಬ ಪ್ರತೀತಿ ಇದೆ. ಈ ಉದ್ಯಾನದಲ್ಲಿರುವ ವಿಶ್ರಾಮ ಕುಂಡ.
ಗೋಪೀಶ್ವರ ಮಹದೇವ ದೇವಾಲಯ:
ಇಲ್ಲಿರುವ ಶಿವಲಿಂಗನ್ನು ಶ್ರೀಕೃಷ್ಣ ಮರಿಮಗ ವಜ್ರನಾಭ ಸುಮಾರು 4900 ವರ್ಷ ಹಿಂದೆ ಪ್ರತಿಸ್ಥಾಪಿಸಿದನು. ಇಲ್ಲೊಂದು ಬೃಹತ್ ಅರಳಿ ಮರವಿದ್ದು ಇದು ಭಕ್ತರ ಸಕಲ ಇಷ್ಟಗಳನ್ನು ಪೂರೈಸುವ ಕಲ್ಪವೃಕ್ಷ ಎನ್ನಲಾಗುತ್ತದೆ. ಇಲ್ಲಿ ಈಗಿರುವ ದೇವಾಲಯವನ್ನು ನಿರ್ಮಿಸಿದವನು ಗ್ವಾಲಿಯರ್ ಮಹಾರಾಜ.
ಗೋಪೀಶ್ವರ ಎಂದರೆ ಗೋಪಿಕೆಯರ ಒಡೆಯ ಈಶ್ವರ ಎಂದರ್ಥ. ಒಮ್ಮೆ ಶ್ರೀಕೃಷ್ಣನು ಗೋಪಿಯರ ಜತೆ ರಾಸ ನೃತ್ಯದಲ್ಲಿ ನಿರತನಾಗಿದ್ದಾಗ ಅಲ್ಲಿಗೆ ಶಿವ ಬಂದ. ಆತ ಪುರುಷನಾಗಿದ್ದರಿಂದ ಅಲ್ಲಿಂದ ಹೊರಟು ಹೋಗುವಂತೆ ಗೋಪಿಯರು ಅವನಿಗೆ ಸೂಚಿಸಿದರು. ಅಲ್ಲಿಂದ ಹೊರಟ ಶಿವ ಯಮುನಾ ತೀರದ ಆಚೆಗಿರುವ ಮಾನ್ ಸರೋವರದಲ್ಲಿ (ವೃಂದಾವನದಿಂದ 3 ಕಿ.ಮೀ ದೂರದಲ್ಲಿದೆ) ಮಿಂದು ಸ್ತ್ರೀ ರೂಪ ಧರಿಸಿ ಮತ್ತೆ ಬಂದ.
ರಾಸ ನೃತ್ಯ ನಡೆಯುತ್ತಿದ್ದ ಸ್ಥಳಕ್ಕೆ ಯಾರೂ ಬರದಂತೆ ಪ್ರವೇಶ ದ್ವಾರವನ್ನು ಕಾಯುವಂತೆ ಕೃಷ್ಣ ಅವನಿಗೆ ಸೂಚಿಸಿದ. ಆದ್ದರಿಂದ ಈ ಸ್ಥಳದಲ್ಲಿ ನಿರ್ಮಿಸಲಾಗಿರುವ ದೇವಾಲಯವನ್ನು ಗೋಪೀಶ್ವರ ದೇವಾಲಯ ಎಂದು ಕರೆಯುತ್ತಾರೆ. ಇದು ವಂಶಿವಟ ಪ್ರದೇಶದಲ್ಲಿದೆ.
ಶ್ರೀ ಚೈತನ್ಯ ವಿಶ್ರಾಮ ಸ್ಥಳ:

ಇಲ್ಲೊಂದು ವಟವೃಕ್ಷವಿದ್ದು, ಶ್ರೀಚೈತನ್ಯ ಮಹಾಪ್ರಭುಗಳು ಇದರ ಕೆಳಗೆ ಕುಳಿತಿದ್ದರೆಂಬ ನಂಬಿಕೆ ಇದೆ. ಇಲ್ಲಿ ಮುರಾರಿ ಗುಪ್ತರಿಗೆ ಸೇರಿದ ಜಗನ್ನಾಥ ವಿಗ್ರಹವಿದೆ. ವೃಂದಾವನ ಪರಿಕ್ರಮ ಪಥದ ಪಕ್ಕದಲ್ಲೇ ಈ ಸ್ಥಳವಿದೆ






Leave a Reply