ಯಾರು ಕೃಷ್ಣನ ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚಿಂತಿಸುವರೋ ಮಾತನಾಡುವರೋ ಪೂಜಿಸುವರೋ ಅವರು ಅವನ ಪ್ರೀತಿಯೊಂದಿಗೆ ಸೇರಿಕೊಂಡುಬಿಡುತ್ತಾರೆ. ಏಕೆಂದರೆ ಕೃಷ್ಣನೇ ಪರಮ. ಅವನ ಹೆಸರು, ಸ್ವರೂಪ, ಗುಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕೃಷ್ಣನೊಂದಿಗಿನ ನಮ್ಮ ನಿಕಟ ಬಾಂಧವ್ಯವನ್ನು ವಿಶ್ವಾಸನೀಯವಾಗಿ ಪುನರ್ ಸ್ಥಾಪಿಸಿಕೊಳ್ಳಬಹುದು. ಹೇಗೆಂದರೆ ಅವನ ಬಗ್ಗೆ ಕೇಳುವುದರಿಂದ, ಮಾತನಾಡುವುದರಿಂದ ಮತ್ತು ಅವನನ್ನು ಸ್ಮರಿಸುವುದರಿಂದ.

ನಾವು ಕೃಷ್ಣನ ಅವಿಭಾಜ್ಯ ಅಂಗವೇ ಆಗಿರುವುದರಿಂದ ಅವನೊಂದಿಗೆ ನಿಕಟ ಪ್ರೀತಿ ಬೆಳೆಸಿಕೊಳ್ಳಲು ಪ್ರತಿಯೊಂದು ಜೀವಿಗೂ ಸಾಮರ್ಥ್ಯವಿದೆ ಎಂದು ಶ್ರೀಲ ಪ್ರಭುಪಾದರು ಬೋಧಿಸುತ್ತಾರೆ. ನಮ್ಮಲ್ಲಿ ಕೆಲವರು ಇದನ್ನು ಅರ್ಥಮಾಡಿಕೊಂಡು ಅದರ ಸಾಫಲ್ಯಕ್ಕಾಗಿ ಪ್ರಯತ್ನಿಸುತ್ತೇವೆ. ಇದರಲ್ಲಿ ಆಸಕ್ತಿ ಇಲ್ಲದ ಕೆಲವರು ಲೌಕಿಕ ಜಗತ್ತಿನಲ್ಲಿ ಪ್ರೀತಿ ವಾತ್ಸಲ್ಯಕ್ಕಾಗಿ ಹುಡುಕಾಡುತ್ತಾ ಮೂಢರಾಗಿಯೇ ಇರುತ್ತಾರೆ. ದೇವರನ್ನು ಸಂತುಷ್ಟಗೊಳಿಸಲು ಜೀವಿಗಳ ಅಸ್ತಿತ್ವವನ್ನು ಸೃಷ್ಟಿಸಲಾಯಿತು. ಒಬ್ಬ ವ್ಯಕ್ತಿ ಪ್ರಜ್ಞಾವಂತ, ಜ್ಞಾನಿಯಾಗಿರುತ್ತಾನೆ. ಅವನು ಆನಂದವನ್ನು ಅಪೇಕ್ಷಿಸಿ ಅನುಭವಿಸುತ್ತಾನೆ.
ವ್ಯಕ್ತಿಯಾಗಿ ದೇವರೆಂದರೆ ಈ ಎಲ್ಲ ಅಂಶಗಳೂ ಅವನಲ್ಲಿ ಅಪರಿಮಿತ ಪ್ರಮಾಣದಲ್ಲಿರಬೇಕು. ಅವನಲ್ಲಿ ಅಸೀಮಿತ ಶಕ್ತಿ ಇದೆ. ಆನಂದವನ್ನು ಅನುಭವಿಸುವ ಶಕ್ತಿ ಕೂಡ ಅಸೀಮಿತ. ಅವನ ವಿಭಿನ್ನ ಶಕ್ತಿಗಳಲ್ಲಿ ಚಿತ್ ಶಕ್ತಿಯೂ ಒಂದು. ಇದರಲ್ಲಿ ನಾವೆಲ್ಲಾ ದೂಳಿನ ಒಂದು ಕಣದಂತೆ. ಇದು ನಮ್ಮ ಸ್ಥಿತಿ. ಇದನ್ನು ಅರಿಯದೆ ನಾವು ಸುಖವನ್ನು ಹುಡುಕುತ್ತ ಲೌಕಿಕ ಜಗತ್ತಿನಲ್ಲಿದ್ದೇವೆ.
ದೇವರನ್ನು ನಿಕಟವಾಗಿ ಅರಿಯುವ ವಿಧಾನವೊಂದನ್ನು ಚೈತನ್ಯ ಮಹಾಪ್ರಭುಗಳು ನಮಗೆ ನೀಡಿದ್ದಾರೆ. ವ್ಯಕ್ತಿಯೊಬ್ಬರನ್ನು ಅರಿಯಬೇಕೆಂದರೆ ಅವರ ಜೊತೆ ಮೊದಲು ಬಾಂಧವ್ಯ ಏರ್ಪಡಬೇಕು. ಕಾಲಕ್ರಮೇಣ ಅದು ಹೆಚ್ಚು ಬಲಗೊಳ್ಳುತ್ತದೆ. ಆಗ ಆ ವ್ಯಕ್ತಿಯ ಬಗೆಗೆ ಅರಿವು ಪ್ರಕಟಗೊಳ್ಳುತ್ತದೆ. ಈಗ ನಿಮಗೆ ದೇವರನ್ನು ಅರಿತುಕೊಳ್ಳಬೇಕೆಂದರೆ ಅದು ದೇವರೊಂದಿಗಿನ ಸಂಬಂಧವೇ ಅಗಿದೆ. ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಒಬ್ಬರ ಹೃದಯ ತೀವ್ರ ಭಾವಾವೇಶದಿಂದ ತುಂಬುಕೊಳ್ಳುವ ಚಟುವಟಿಕೆಯಾಗಿದೆ.

ಶ್ರೀ ಚೈತನ್ಯ ಮಹಾಪ್ರಭುಗಳು ಈ ರೀತಿ ಕೃಷ್ಣಪ್ರಜ್ಞೆಯನ್ನು ಸಾದರಪಡಿಸುತ್ತಾರೆ. ಇದೇನೂ ಒಣ ತತ್ವಜ್ಞಾನವಲ್ಲ. ಪ್ರಭುಪಾದರು ಭರ್ತಿ, ತುಂಬುವುದು ಎಂದೆಲ್ಲ ಬಳಸುತ್ತಾರೆ. ಒಬ್ಬರ ಹೃದಯ ತುಂಬಿದ ಮೇಲೆ ಯಾವುದೇ ಲೌಕಿಕ ಒಲವಿಗೆ ಅಲ್ಲಿ ಸ್ಥಳವಿಲ್ಲ. ಅದೇ ಪ್ರಜ್ಞೆಯ ಸ್ಥಿತಿ ಗತಿ. ನೀವು ಅಂತಹ ಮಹತ್ವಾಕಾಂಕ್ಷಿಗಳಾಗಬೇಕೆಂದು ಶ್ರೀಮದ್ ಭಾಗವತ ಬೋಧಿಸುತ್ತದೆ.
ಕೃಷ್ಣನ ಜೊತೆಗಿನ ನಮ್ಮ ನಿಕಟ ಸಂಬಂಧವನ್ನು ವಿಶ್ವಾಸನೀಯವಾಗಿ ಪುನರುಜ್ಜೀವಗೊಳಿಸಬಹುದು. ಹೇಗೆ? ಅವನನ್ನು ಕುರಿತಂತೆ ಮಾತನಾಡುತ್ತ, ಕೇಳುತ್ತ ಅಥವಾ ಸ್ಮರಿಸಿಕೊಳ್ಳುತ್ತ. ಕೃಷ್ಣನ ಬಗೆಗೆ ನಾವು ಕೇಳಿಸಿಕೊಳ್ಳಲು ಶ್ರೀಮದ್ ಭಾಗವತ ನಮ್ಮನ್ನು ಸಿದ್ಧಗೊಳಿಸುತ್ತಿದೆ. ಅರ್ಜುನನಂತೆ ನಾವು ನೇರವಾಗಿ ಸಂಪರ್ಕ ಹೊಂದಿಲ್ಲದಿರಬಹುದು, ಆದರೆ ಈ ಎಲ್ಲ ಅಂಶಗಳೂ ನಮ್ಮನ್ನು ಅವನ ಒಡನಾಟಕ್ಕೆ ತರುತ್ತದೆ. ಸೂರ್ಯನ ಸಮೀಪಕ್ಕೆ ಹೋದಂತೆ ನಾವು ತೀವ್ರ ಬಿಸಿಯನ್ನು ನಿರೀಕ್ಷಿಸುತ್ತೇವೆ. ಅದೇ ರೀತಿ ಕೃಷ್ಣನಿಗೆ ನಿಕಟವಾದಷ್ಟೂ ನಾವು ಅವನ ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗುತ್ತೇವೆ ಹಾಗೂ ಅದು ನಮ್ಮ ಹೃದಯವನ್ನು ಶುದ್ಧಗೊಳಿಸುತ್ತದೆ. ಇದೇ ವಿಧಾನ – ನಷ್ಟ ಪ್ರಾಯೇಷು ಅಭದ್ರೇಷು ನಿತ್ಯಂ ಭಾಗವತ ಸೇವಯಾ.

ನಾವು ಭಾಗವತ ಸೇವೆಯನ್ನು ಕ್ರಮಬದ್ಧವಾಗಿ ಮಾಡಿದರೆ – ಎರಡು ರೀತಿಯ ಭಾಗವತವಿದೆ – ಒಂದು ಭಾಗವತ ಗ್ರಂಥ, ನಿತ್ಯಂ. ಭಾಗವತ ಗ್ರಂಥಕ್ಕೆ ನಾವು ಹೇಗೆ ಸೇವೆಗೈಯುವುದು ಸಾಧ್ಯ? ಭಾಗವತ ಕೇಳುವ ಮೂಲಕ. ಮತ್ತೊಂದು ಭಾಗವತವು ಭಕ್ತರನ್ನು ಸೂಚಿಸುತ್ತದೆ. ಶ್ರೇಷ್ಠ ಭಕ್ತರಿಗೆ ಸೇವೆ ಸಲ್ಲಿಸುವ ಮೂಲಕ, ನಿತ್ಯಂ ಭಾಗವತ ಸೇವಯಾ ನಷ್ಟ ಪ್ರಾಯೇಷು ಅಭದ್ರೇಷು; ಹೃದಯಲ್ಲಿರುವ ಎಲ್ಲ ಅಶುಭಗಳೆಲ್ಲ ತೊಡೆದುಹೋಗುತ್ತವೆ. ಇದೇ ವಿಧಾನ. ಈ ರೀತಿ ನಾವು ಕೃಷ್ಣನ ಬಗೆಗೆ ಕೇಳುತ್ತೇವೆ, ಕೃಷ್ಣ ನಾಮ ಪಠಿಸುತ್ತೇವೆ, ಅವನ ವೈಭವದ ಕೀರ್ತನೆ ಕೇಳುತ್ತೇವೆ – ಈ ರೀತಿ ನಾವು ಕೃಷ್ಣನ ಸಂಪರ್ಕಕ್ಕೆ ಬರುತ್ತೇವೆ. ಅದು ನಮ್ಮನ್ನು ಕೃಷ್ಣನ ಒಲವಿಗೆ ಸಿದ್ಧಗೊಳಿಸುತ್ತದೆ. ಪ್ರೀತಿಯನ್ನು ಬೆಳೆಸುತ್ತದೆ.

ಯಾರಿಗಾದರೂ ಸೀತಾಳೆ (ಚಿಕನ್ ಪಾಕ್ಸ್) ಬಂದರೆ ಅವರನ್ನು ನಾವು ಬೇರೆ ಕೋಣೆಯಲ್ಲಿಡುತ್ತೇವೆ. ಸೋಂಕು ತಗುಲಬಾರದೆಂಬುದೇ ಉದ್ದೇಶ. ಅದೇ ರೀತಿ ಪ್ರಭುಪಾದರು ಅದನ್ನು ಸಕಾರಾತ್ಮವಾಗಿ ಹೇಳುತ್ತಾರೆ. ನಾವು ಕೃಷ್ಣನಿಗೆ ಸಲ್ಲಿಸಿದ ನೈವೇದ್ಯದ ರುಚಿಯನ್ನು ಅವನು ನೋಡಿದ ಮೇಲೆ, ನಾವು ಅದನ್ನು ಸೇವಿಸಿದರೆ ಕೃಷ್ಣನ ಸಂಪರ್ಕಕ್ಕೆ ಬರುತ್ತೇವೆ. ಸಂಪರ್ಕಕ್ಕೆ ಬರಲು ನಾನಾ ಮಾರ್ಗಗಳಿವೆ – ಪವಿತ್ರ ನಾಮ ಸಂಕೀರ್ತನೆ, ಕೃಷ್ಣ ಮೂರ್ತಿ ದರ್ಶನ, ಇವೆಲ್ಲಾ ಕೃಷ್ಣನ ಸಂಪರ್ಕಕ್ಕೆ ಕ್ರಮೇಣ ಬರುವ ಅನೇಕ ಅವಕಾಶಗಳು. ಆಧ್ಯಾತ್ಮಿಕ ಪ್ರಭಾವವು ನಮ್ಮ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಕೃಷ್ಣನ ಮೇಲೆ ನಮಗಿರುವ ಸ್ವಾಭಾವಿಕ ಒಲವನ್ನು ಪುನರುಜ್ಜೀವಗೊಳಿಸಿಕೊಳ್ಳಬಹುದು. ಆಗ ನಾವು ಕೃಷ್ಣನ ಜೊತೆ ಪ್ರಜ್ಞೆ ತುಂಬಿದ ಸ್ಥಿತಿಯಲ್ಲಿರಬಹುದು. ಅದೇ ನಮ್ಮ ಮಹತ್ವಾಕಾಂಕ್ಷೆ ಹಾಗೂ ಅದೇ ಕೃಷ್ಣ ಪ್ರಜ್ಞೆಯ ಮಾರ್ಗ.






Leave a Reply