ತಿರುಮಲ ಬೆಟ್ಟ ಹತ್ತುವಾಗ…

(ಪಾದಚಾರಿಗಳ ಪಥ)

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲವು ಬೆಟ್ಟಗಳ ಪಟ್ಟಣ. ತಿರುಮಲವು ಮಹಾ ವಿಷ್ಣುವಿಗೆ ಅರ್ಪಿತವಾಗಿದೆ. ಅದು ತಿರುಪತಿಯಿಂದ ಉತ್ತರಕ್ಕೆ 26 ಕಿ.ಮೀ. ದೂರದಲ್ಲಿದೆ.

ತಿರುಮಲ ಗಿರಿಯು ಸಮುದ್ರ ಮಟ್ಟದಿಂದ 3200 ಅಡಿ ಎತ್ತರದಲ್ಲಿದ್ದು, ಪಟ್ಟಣದ ವಿಸ್ತೀರ್ಣ ಅಂದಾಜು 27 ಚದರ ಅಡಿ. ಪೂರ್ವ ಘಟ್ಟದ ಭಾಗವಾಗಿ, ಈ ಪ್ರದೇಶದಲ್ಲಿ ಏಳು ಶಿಖರಗಳಿವೆ. ಏಳು ಶಿಖರಗಳು ಆದಿಶೇಷನ ಶಿರಗಳನ್ನು ಪ್ರತಿನಿಧಿಸುತ್ತವೆ. ಆ ಶಿಖರಗಳೆಂದರೆ – ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭಾದ್ರಿ, ನಾರಾಯಣಾದ್ರಿ ಮತ್ತು ವೆಂಕಟಾದ್ರಿ. ಶ್ರೀ ವೆಂಕಟೇಶ್ವರನ ದೇವಸ್ಥಾನವು ಏಳನೇ ಶಿಖರದ ಮೇಲಿದೆ (ವೆಂಕಟಾದ್ರಿ).

`ತಿರು-ಮಲ’ ದಲ್ಲಿ ಎರಡು ಪದಗಳಿವೆ. ತಿರು ಎಂದರೆ ಪವಿತ್ರ ಅಥವಾ ಪಾವಿತ್ರ್. ಮಲ ಎಂದರೆ ಬೆಟ್ಟ/ಪರ್ವತ. ಅಕ್ಷರಶಃ `ತಿರುಮಲ’ದ ಅರ್ಥ `ಪವಿತ್ರ ಬೆಟ್ಟಗಳು.’

ತಿರುಪತಿಯಿಂದ ತಿರುಮಲೆಗೆ ಕಾಲ್ನಡಿಗೆಯಲ್ಲಿ ಹೋಗಲು ಅನೇಕ ಭಕ್ತರು ಆಶಿಸುತ್ತಾರೆ, ಅದಕ್ಕಾಗಿ ತಿರುಮಲ-ತಿರುಪತಿ ಆಡಳಿತ ಮಂಡಳಿ ಒಳ್ಳೆಯ ವ್ಯವಸ್ಥೆಯನ್ನೂ ಮಾಡಿದೆ. ತಿರುಪತಿಯಿಂದ ತಿರುಮಲೆಗೆ ನಡಿಗೆಯಲ್ಲಿ ಹೋಗಲು ಎರಡು ದಾರಿಗಳಿವೆ : ತಿರುಮಲ ಅಲಿಪಿರಿ ಮೆಟ್ಟು ಮತ್ತು ಶ್ರೀವಾರಿ ಮೆಟ್ಟು. ನಡಿಗೆಯಲ್ಲಿ ಸಾಗಲು ಯಾತ್ರಿಗಳು ಹೆಚ್ಚಾಗಿ ಬಳಸುವುದು ಅಲಿಪಿರಿ ಮೆಟ್ಟುವನ್ನೇ.

ಅಲಿಪಿರಿ ಮೆಟ್ಟು ಪಾದಚಾರಿ ಪಥ

ಸುಮಾರು 10 ಕಿ.ಮೀ. ಈ ಹಾದಿಯಲ್ಲಿ ನಡೆದರೆ ತಿರುಮಲವನ್ನು ತಲಪಲು 4-5 ಗಂಟೆಗಳು ಬೇಕು. ಈ ಹಾದಿಯಲ್ಲಿ ಸಾದಾ ಮತ್ತು ಕಡಿದಾದ ಮೆಟ್ಟಿಲುಗಳಿವೆ. ಕೆಲ ಕಿ.ಮೀ. ನೀವು ಮುಖ್ಯವಾದ ಘಟ್ಟದ ರಸ್ತೆಯನ್ನು ಹಾದು ಹೋಗುವಿರಿ. ಪಾದಚಾರಿ ರಸ್ತೆಯು ಎರಡು ಬೆಟ್ಟಗಳನ್ನು ಮಾತ್ರ ಆವರಿಸುತ್ತದೆ.

ಈ ಪಾದಚಾರಿ ರಸ್ತೆಯಲ್ಲಿ ಹೋಗಬೇಕೆಂದರೆ ನೀವು ಆರಂಭದ ಸ್ಥಳ, ಅಲಿಪಿರಿಗೆ ಹೋಗಬೇಕು. ರೈಲು ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳಿಂದ ಅಲಿಪಿರಿಗೆ ಒಳ್ಳೆಯ ಸಾರಿಗೆ ವ್ಯವಸ್ಥೆ ಇದೆ. ಪ್ರವೇಶದಲ್ಲಿಯೇ TTDಯ ಉಚಿತ ಲಗೇಜ್‌ ಕೇಂದ್ರವಿದೆ. ಪಾದಯಾತ್ರೆಯಲ್ಲಿ ಏನೇನು ಒಯ್ಯುವುದಿಲ್ಲವೋ ಅದನ್ನೆಲ್ಲಾ ಇಲ್ಲಿ ಇಡಬಹುದು. ನಿಮಗೆ ಬೇಕೆನಿಸಿದರೆ ಕ್ಯಾಮೆರಾ, ನೀರಿನ ಬಾಟಲ್‌ ಮುಂತಾದವುಗಳನ್ನು ಒಯ್ಯಬಹುದು. ನೀವು ತಲಪುವ ಮುನ್ನವೇ ನಿಮ್ಮ ಲಗೇಜ್‌ ಬೆಟ್ಟದ ಮೇಲಕ್ಕೆ (ತಿರುಮಲ) ಬಂದಿರುತ್ತದೆ. ಲಗೇಜ್‌ ನೀಡುವಾಗ ನಿಮಗೆ ರಸೀತಿ ನೀಡಲಾಗುತ್ತದೆ. ಅದನ್ನು ತೋರಿಸಿದರೆ ನಿಮ್ಮ ಲಗೇಜ್‌ ನಿಮಗೆ ವಾಪಸು ಬರುತ್ತದೆ. ಇದಕ್ಕೆಲ್ಲ ಯಾವುದೇ ಶುಲ್ಕವಿಲ್ಲ.

ಪಾದಚಾರಿ ರಸ್ತೆಯಲ್ಲಿ ಸಾಗಲು ನಿಮಗೆ 4-5 ತಾಸು ಬೇಕಾಗುತ್ತದೆ. ಇದು ನಿಮ್ಮ ನಿಮ್ಮ ನಡಿಗೆ ಸಾಮರ್ಥ್ಯದ ಮೇಲೆ ಅವಲಂಬಿತ. ಕಡ್ಡಾಯವಲ್ಲದಿದ್ದರೂ ಬರಿಗಾಲಿನಲ್ಲಿ ನಡೆಯುವುದು ಒಳ್ಳೆಯದು. ಏಕೆಂದರೆ ಆ ಇಡೀ ಪ್ರದೇಶವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಪಾದಚಾರಿ ರಸ್ತೆಯ ಹೆಚ್ಚಿನ ಭಾಗಕ್ಕೆ ಕಲ್ಲಿನ ಚಪ್ಪಡಿ ಹಾಕಲಾಗಿದೆ. ನೀವು ನಿತ್ಯ ವ್ಯಾಯಾಮ ಮಾಡುವವರಾಗಿದ್ದರೆ ಪರವಾಗಿಲ್ಲ. ಇಲ್ಲವಾದರೆ ಮೊದಲ 1000 ಮೆಟ್ಟಿಲು ಹತ್ತುವುದು ಕಷ್ಟವಾದೀತು. ಏಕೆಂದರೆ ಆ ಮೆಟ್ಟಿಲುಗಳು ತುಂಬ ಕಡಿದಾಗಿವೆ. ಆದರೂ ನೀವು ಆಗಾಗ್ಗೆ ವಿಶ್ರಮಿಸಿಕೊಳ್ಳಬಹುದು, ಗಾಳಿ ಸೇವನೆ ಮಾಡಬಹುದು. ಪಾದಚಾರಿ ರಸ್ತೆಯ ಇಕ್ಕೆಲಗಳಲ್ಲಿನ ಮರಗಳು ನಿಮಗೆ ಶುದ್ಧ ಗಾಳಿ ನೀಡುತ್ತವೆ. ಕಬ್ಬಿಣದ ಕಂಬಿಗಳಿದ್ದು ನೀವು ನಿಮ್ಮ ಕೈಗಳನ್ನು ಅದರ ಮೇಲಿಟ್ಟು ವಿಶ್ರಮಿಸಿಕೊಳ್ಳಬಹುದು. ಬಹುತೇಕ ಈ ರಸ್ತೆಗೆ ಛಾವಣಿ ಇದೆ. ಹೀಗಾಗಿ ನಿಮಗೆ ಛತ್ರಿ ಒಯ್ಯುವ ತ್ರಾಸ ಇಲ್ಲ.

ಈ ರಸ್ತೆಯ ಉದ್ದಕ್ಕೂ ನೀವು ಶ್ರೀಕೃಷ್ಣನ ಆವಿರ್ಭಾವದ ಪ್ರತಿಮೆಗಳನ್ನು ನೋಡಬಹುದು. ಅಲ್ಲಲ್ಲೇ ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯ ಕಲ್ಪಿಸಲಾಗಿದೆ. ನಾಮಲಕೊಂಡ ಎಂಬ ಸ್ಥಳವನ್ನು ನೀವು ತಲಪಿದ ಕೂಡಲೇ ನೀವು ದರ್ಶನಕ್ಕಾಗಿ ದಾಖಲಿಸಿಕೊಳ್ಳಬೇಕು. TTDಯು ಪ್ರತ್ಯೇಕ ಕೌಂಟರ್‌ ತೆರೆದಿದೆ. ಅಲ್ಲಿ ನಿಮ್ಮ ಬಯೋಮೆಟ್ರಿಕ್‌ ಪಡೆದು ನಿಮಗೆ ದರ್ಶನ ಟಿಕೆಟ್‌ ನೀಡುವರು. ಈ ಸೌಲಭ್ಯವು ಪಾದಚಾರಿ ಯಾತ್ರಿಗಳಿಗೆ ಮಾತ್ರ. ಈ ಟಿಕೆಟ್‌ನಿಂದ ನೀವು ಬೇಗ ದರ್ಶನ ಪಡೆಯಬಹುದಾಗಿದೆ. ಬೇರೆಯವರಂತೆ ನೀವು ಸಾಲಿನಲ್ಲಿ ತುಂಬ ಹೊತ್ತು ಕಾಯಬೇಕಾಗಿಲ್ಲ. (ಈಗ TTDಯು ಪಾದಚಾರಿ ಯಾತ್ರಿಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದೆ).

ನಾಮಲಕೊಂಡವು ದೀಪಾಲಂಕಾರದಿಂದ ಕಂಗೊಳಿಸುತ್ತಿರುತ್ತದೆ. ಈ ಸ್ಥಳದಿಂದ ನಿಮಗೆ ತಿರುಪತಿ ಪಟ್ಟಣದ ನೋಟ ಲಭ್ಯ. ಇಲ್ಲೇ, ನಿಮಗೆ ಇಡ್ಲಿ, ವಡೆ, ದೋಸೆ, ಜ್ಯೂಸ್‌, ಕಾಫಿ-ಟೀ ಎಲ್ಲವೂ ಸಿಗುತ್ತದೆ. ದರವೂ ದುಬಾರಿಯಲ್ಲ. ಈ ಹಸಿರು ವಾತಾವರಣದಲ್ಲಿ ನೀವು ಒಂದಷ್ಟು ವಿಶ್ರಾಂತಿ ತೆಗೆದುಕೊಳ್ಳಬಹುದು. ಇಲ್ಲಿಂದ ಮುಂದೆ 6-7 ಕಿ.ಮೀ. ವರೆಗಿನ ದಾರಿಯು ಸುಲಭದ್ದಾಗಿದೆ, ಅದು ಕಡಿದಾಗಿಲ್ಲ.

ಇಲ್ಲಿಂದ ನಿಮ್ಮ ಯಾತ್ರೆಯು ಅರಣ್ಯ ಶ್ರೇಣಿಯಲ್ಲಿ. ಮಧ್ಯದಲ್ಲಿ ನೀವು ಜಿಂಕೆ ವನವನ್ನೂ ಹಾದು ಹೋಗುವಿರಿ. ಈ ಮಾರ್ಗದಲ್ಲಿ ಇರುವ ಹನುಮಂತನ ಎತ್ತರದ ಪ್ರತಿಮೆಯು ಕಣ್‌ ಸೆಳೆಯುತ್ತದೆ. ಪಾದಚಾರಿ ರಸ್ತೆ ಉದ್ದಕ್ಕೂ ಯಾತ್ರಿಗಳ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಾದಚಾರಿಗಳು ಬೆಳಗ್ಗೆ 4 ರಿಂದ ರಾತ್ರಿ 12 ಗಂಟೆವರೆಗೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದು. ಮಧ್ಯರಾತ್ರಿಯಿಂದ ಬೆಳಗ್ಗೆ 4 ಗಂಟೆವರೆಗೆ ಭದ್ರತಾ ಸಿಬ್ಬಂದಿ ಸೇರಿದಂತೆ ಯಾರಿಗೂ ಇಲ್ಲಿ ಪ್ರವೇಶವಿಲ್ಲ.

ನಿಮ್ಮ ಯಾತ್ರೆ ಶುರು ಮಾಡಲು ಹಾಗೂ ಅದನ್ನು ಆನಂದಿಸಲು ಸೂಕ್ತವಾದ ಸಮಯವೆಂದರೆ ಬೆಳಗ್ಗೆ 5 ಗಂಟೆ ಅಥವಾ ಸಂಜೆ 6 ಗಂಟೆ. ಹನುಮಾನ್‌ ಪ್ರತಿಮೆಯಿಂದ ಸುಮಾರು 2 ಕಿ.ಮೀ ದೂರ ಸಾಗಿದರೆ ಅಲ್ಲಿ ಮತ್ತೊಂದು ಕೌಂಟರ್‌ ಇದೆ. ಅಲ್ಲಿ ನೀವು ನಿಮ್ಮ ದರ್ಶನ ಟಿಕೆಟ್‌ ತೋರಿಸಿ ಅದಕ್ಕೆ ದೇವಸ್ಥಾನ ಅಧಿಕಾರಿಗಳಿಂದ ಮುದ್ರೆ ಒತ್ತಿಸಿಕೊಳ್ಳಬೇಕು. ಈ ಪ್ರಕ್ರಿಯೆ ಮಾಡದಿದ್ದರೆ ನೀವು ಪಾದಚಾರಿ ಯಾತ್ರಿಗಳ ವಿಶೇಷ ದರ್ಶನ ಸೌಲಭ್ಯದಿಂದ ವಂಚಿತರಾಗುವಿರಿ. ಈ ಚೆಕ್‌ ಪೋಸ್ಟ್‌ನಿಂದ ಪಾದಚಾರಿ ರಸ್ತೆಯು ವಾಹನಗಳು ಸಂಚರಿಸುವ ರಸ್ತೆಯನ್ನು ಸೇರಿಕೊಳ್ಳುತ್ತದೆ. ಇದು ಒಂದು ಕಿ.ಮೀ.ದಷ್ಟು ಮಾತ್ರ.

ಈಗ, ನೀವು ಸುಂದರ ಪ್ರಕೃತಿಯ ಮಧ್ಯೆ, ಅತ್ಯಂತ ಕಡಿದಾದ ಒಂದು ಸಾವಿರ ಮೆಟ್ಟಿಲುಗಳನ್ನು ಏರಲು ಸಿದ್ಧರಾಗಬೇಕು. ಒಮ್ಮೆ ಇದನ್ನು ದಾಟಿಬಿಟ್ಟರೆ ನೀವು 9 ಕಿ.ಮೀ., 3550 ಮೆಟ್ಟಿಲು ಹತ್ತಿದಂತೆ. ಈಗ ನೀವು ನಿಮ್ಮ ಲಗೇಜ್‌ ಪಡೆದುಕೊಳ್ಳಬೇಕು. ನಿಮಗೆ ಅಥವಾ ನಿಮ್ಮ ಸಂಗಡಿಗರಿಗೆ ಮುಡಿ ಕೊಡಬೇಕೆಂದಿದ್ದರೆ ಉಚಿತ ಸೌಲಭ್ಯಗಳ ಕೌಂಟರ್‌ಗೆ ಹೋಗಬೇಕು.

ನೀವು ನಿಮ್ಮ ಲಗೇಜ್‌ ಅನ್ನು ಕೌಂಟರ್‌ಗಳಲ್ಲಿ ಇಡಬಹುದು ಅಥವಾ ನೀವು ಪ್ರವೇಶಿಸುವ ದರ್ಶನ ಕಂಪಾರ್ಟ್‌ಮೆಂಟಿನ ಸಮೀಪದ ಸಮುಚ್ಚಯದಲ್ಲಿ ಇಡಬಹುದು. ಇಲ್ಲಿ ನೀವು ವೈಕುಂಠಂ ಸಾಲಿನ ಸಮುಚ್ಚಯಕ್ಕೆ ಬಸ್‌ ಸೌಲಭ್ಯ ಪಡೆಯಬಹುದು. ಇದು ಆನಂದ ನಿಲಯಕ್ಕೆ (ಭಗವಂತನ ದರ್ಶನದ ಪವಿತ್ರ ಸ್ಥಳ) ಒಯ್ಯುತ್ತದೆ. ನೀವು ನಿಮ್ಮ ಮೊಬೈಲ್‌ ಫೋನ್‌, ಕ್ಯಾಮೆರಾ, ಅಥವಾ ಇನ್ನಾವುದೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು TTD ಒದಗಿಸುವ ಲಾಕರ್‌ಗಳಲ್ಲಿ ಇಡುವುದು ಒಳ್ಳೆಯದು. ನಿಮ್ಮ ಬಳಿ ಈ ವಸ್ತುಗಳಿರುವುದು ಪತ್ತೆಯಾದರೆ ನಿಮ್ಮನ್ನು ಸಾಲಿನಿಂದ ಆಚೆಗೆ ಕಳುಹಿಸಲಾಗುತ್ತದೆ.

ಒಮ್ಮೆ ನೀವು ಸಾಲನ್ನು ಪ್ರವೇಶಿಸಿದ ಮೇಲೆ, ದರ್ಶನ ಪಡೆಯಲು ಎರಡು ತಾಸು ಕಾಯಬೇಕಾಗುತ್ತದೆ. ಈ ಸಾಲಿನಲ್ಲಿಯೇ ನಿಮಗೆ ಉಚಿತ ಲಡ್ಡು ಪಡೆಯಲು ಟಿಕೆಟ್‌ ನೀಡುತ್ತಾರೆ. ಈ ಟಿಕೆಟ್‌ ನೀಡಿ ಪ್ರಸಾದ ಪಡೆದುಕೊಳ್ಳಿ.

ಕೆಲವು ಮಂದಿರಗಳು

ರಸ್ತೆಯ ಬಲಕ್ಕೆ –   ಪ್ರಸನ್ನ ಆಂಜನೇಯ ದೇವಸ್ಥಾನ

                   –   ಲಕ್ಷ್ಮೀ ಮತ್ತು ಯೋಗ ನರಸಿಂಹ ಸ್ವಾಮಿ ದೇವಸ್ಥಾನ

ರಸ್ತೆಯ ಎಡಕ್ಕೆ –   ದಾಸ ಆಂಜನೇಯ ದೇವಸ್ಥಾನ

                   –   ರಾಮಾನುಜ ಸನ್ನಿಧಿ (ಕಡಿದಾದ ಮೆಟ್ಟಿಲಿನ ಕೊನೆ) 

ಮೆಟ್ಟಿಲು ಏರಲು ಒಂದಷ್ಟು ಟಿಟ್ಸ್‌

ಬೇಸಿಗೆಯಲ್ಲಿ ಬಿಸಿಲಿನಿಂದ ಮತ್ತು ಚಳಿಗಾಲದಲ್ಲಿ ತಣ್ಣಗಿನ ರಸ್ತೆಯಿಂದ ರಕ್ಷಿಸಿಕೊಳ್ಳಲು ಸಾಕ್ಸ್‌ ಹಾಕಿಕೊಳ್ಳಿ. ಮಲೆ ಏರುವ ಮುನ್ನ ಅಥವಾ ಹಾದಿ ಮಧ್ಯೆ ಹೆಚ್ಚು ಆಹಾರ ಸೇವನೆ ಬೇಡ. ಜಿಡ್ಡಿಲ್ಲದ ಲಘು ಆಹಾರ ಸೇವಿಸಿ. ತತ್‌ಕ್ಷಣದ ಶಕ್ತಿಗಾಗಿ ನಿಂಬು ಸೋಡ (ನಿಂಬು ಜ್ಯೂಸ್‌, ಸೋಡಾ ಮತ್ತು ಉಪ್ಪಿನ ಮಿಶ್ರಣ) ಅಥವಾ ಬಾಳೆ ಹಣ್ಣು ಅಥವಾ ಗ್ಲೂಕೋಸ್‌ ಒಯ್ಯಿರಿ. ನೀವು ಪ್ರತಿ ದಿನ ಒಂದಷ್ಟು ವ್ಯಾಯಾಮ ಮಾಡದಿದ್ದರೆ ಈ ಯಾತ್ರೆ ಕಷ್ಟವಾದೀತು.

ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸರಿಯೇ. ಆದರೆ ನೀವು ತಿರುಮಲೆ ತಲಪಿ ಭಗವಂತನ ದರ್ಶನ ಮಾಡುವುದು ಅವನ ಕೃಪೆಯಿಂದ ಮಾತ್ರ, ಯಾವುದೇ ಗ್ಲೂಕೋಸ್‌ ಅಥವಾ ನಿಂಬು ಜ್ಯೂಸ್‌ನಿಂದ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ವೃದ್ಧರು, ಅಂಗವಿಕಲರು, ಅನಾರೋಗ್ಯ ಸಮಸ್ಯೆ ಉಳ್ಳವರು ಈ ಯಾತ್ರೆ ಕೖೆಗೊಳ್ಳುವುದನ್ನು ನಾನು ಈ ಹಾದಿಯಲ್ಲಿ ನೋಡಿರುವೆ. ಆದುದರಿಂದ ಪಾದಯಾತ್ರೆ ಕೈಗೊಳ್ಳಬೇಕೆಂಬ ಹಂಬಲ ಮತ್ತು ಅಪಾರವಾದ ನಂಬಿಕೆಯೇ ಮುಖ್ಯವಾದವು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi