ನಿಜವಾದ ಸಾಹಸಿ ಯಾರು?

ಕೆಲವು ತಿಂಗಳ ಹಿಂದೆ ಇಬ್ಬರು ವ್ಯಕ್ತಿಗಳು ಅಟ್ಲಾಂಟಿಕ್‌ ಸಾಗರವನ್ನು ಮೆಟ್ಟು ದೋಣಿಯಲ್ಲಿ ದಾಟುವ ಪ್ರಯತ್ನ ಮಾಡಿದರು. ಇದು ಅವರ ಮೂರನೆಯ ಪ್ರಯತ್ನವಾಗಿತ್ತು. ತಮ್ಮ ಹಿಂದಿನ ಅನುಭವವು ತಮ್ಮನ್ನು ಈ ಬಾರಿ ಯಶಸ್ವಿಗೊಳಿಸಬಹುದೆಂದು ಅವರು ಆಶಿಸಿದ್ದರು. ಆದರೆ ವಿಧಿ ಸಂಕಲ್ಪ. ಸಮುದ್ರ ಸಾಹಸಕ್ಕೆ ತೆರಳಿ ಒಂದು ವಾರ ಕೂಡ ಆಗಿರಲಿಲ್ಲ. ಅನಾರೋಗ್ಯ ಅವರನ್ನು ಕಾಡಿತು ಮತ್ತು ಬೆದರಿಸುವ ಅಲೆಗಳಿಂದ ಭಯಭೀತರಾದರು. ಆದುದರಿಂದ ಅವರನ್ನು ಅವರ ದೋಣಿಯಿಂದ ಹೆಲಿಕಾಪ್ಟರ್‌ ಮೂಲಕ ಬಲವಂತದಿಂದ ಎಳೆದು ತರಬೇಕಾಯಿತು. “ಬಹುಶಃ ಅದು ಉತ್ತಮ ಯೋಜನೆಗಳಲ್ಲಿ ಒಂದಲ್ಲ” ಎಂದು ಈ ಅಪಾಯಕಾರಿ ಸಾಹಸ ಕೈಗೊಂಡ ವ್ಯಕ್ತಿ ಅನಂತರ ಹೇಳಿದರು. ಅವರ ಜೊತೆಗಾರ ಒಪ್ಪಿಗೆ ಸೂಚಿಸುವಂತೆ ಸುಮ್ಮನೆ ತಲೆ ಅಲ್ಲಾಡಿಸಿದರು.

ಬದುಕನ್ನು ಅಪಾಯಕ್ಕೆ ಒಡ್ಡಿಯಾದರೂ ಪ್ರಕೃತಿಯ ಅಂಶಗಳಿಗೆ ಸವಾಲು ಎಸೆಯುವುದು ಮಾನವನ ಸಹಜ ಗುಣವಾಗಿ ತೋರುತ್ತದೆ. ಈವರೆಗೆ 200ಕ್ಕೂ ಹೆಚ್ಚಿನ ಜೀವಗಳನ್ನು ಬಲಿ ತೆಗೆದುಕೊಂಡಿದ್ದರೂ ಎವರೆಸ್ಟ್‌ ಶಿಖರವನ್ನು ಏರುವುದು ಸಾರ್ವಕಾಲಿಕ ಒಲವಾಗಿದೆ. ಸಾಯುವ ಮುನ್ನ ನಾನು ಮಾಡಬೇಕಾದ ಕೆಲಸಗಳ ವೈಯಕ್ತಿಕ ಪಟ್ಟಿಯಲ್ಲಿ ಅದು ಇದೆ ಎಂದು ನಾನು ಹೇಳಲಾರೆ. ಆದರೆ ಕೆಲವು ಜನರು ಆಕರ್ಷಿತರಾಗುವುದನ್ನು ಅರ್ಥಮಾಡಿಕೊಳ್ಳಬಲ್ಲೆ. 8 ಮೈಲಿಯ ಅಡಚಣೆಗಳನ್ನು ಎದುರಿಸುವಲ್ಲಿ ಯಶಸ್ಸಿನ ಭಾವ, ಗುರಿಯನ್ನು ಸಾಧಿಸಲು ಅಪಾರವಾದ ಕಷ್ಟವನ್ನು ಸಹಿಸುವುದು. ನಿಜ, ಇವು ಇಂದಿನ ಕಠಿಣ ಪ್ರಪಂಚದಲ್ಲಿ ಉಪಯೋಗಕಾರಿ ಸಂಪತ್ತುಗಳು.

ಜಯಿಸಲಾಗದ ಶಕ್ತಿ

ಅಂತಹ ಹಠದ ಧೈರ್ಯೋತ್ಸಾಹವನ್ನು ನಾನು ಮೆಚ್ಚುವೆನಾದರೂ ಅದನ್ನು ಉತ್ತಮವಾಗಿ ಎಲ್ಲಿ ಅಳವಡಿಸಬಹುದು ಎಂದು ಪ್ರಶ್ನಿಸುವೆ. ದೈಹಿಕ ಮತ್ತು ಮಾನಸಿಕ ಶಕ್ತಿಗಳಿಂದ ಪ್ರಕೃತಿಯನ್ನು ಗೆಲ್ಲುವ ಪ್ರಯತ್ನವು ವಿಫಲವಾಗುವುದು ಅಂತಿಮ ತೀರ್ಪು ಎಂದು ವೈದಿಕ ಜ್ಞಾನವು ನಮಗೆ ತಿಳಿಯಪಡಿಸುತ್ತದೆ. ಭಗವದ್ಗೀತೆಯಲ್ಲಿ ಕೃಷ್ಣನು ಐಹಿಕ ಶಕ್ತಿಯನ್ನು “ಜಯಿಸಲಾಗದು” ಎಂದು ವಿವರಿಸುತ್ತಾನೆ. ನಾವು ಅತಿ ಎತ್ತರದ ಪರ್ವತವನ್ನು ಜಯಿಸಬಹುದು ಅಥವಾ ಆಳವಾದ ಸಮುದ್ರದ ತಳಭಾಗಕ್ಕೆ ಹೋಗಬಹುದು. ಆದರೂ ಅಂತ್ಯದಲ್ಲಿ ನಾವು ಲೌಕಿಕ ಕಾನೂನುಗಳಿಗೆ ಬದ್ಧರು ಮತ್ತು ಅದನ್ನು ಜಯಿಸಲಾಗದು. ನಾವು ಸಾಹಸ ಕಾರ್ಯಗಳನ್ನು ಕೈಗೊಂಡರೂ ನಾವು ಅಂತಹ ನಿಯಮಗಳನ್ನು ಗೌರವಿಸಬೇಕು. ಉದಾಹರಣೆಗೆ, ಪರ್ವತವನ್ನು ಏರುವಾಗ ಪರಿಗಣಿಸಬೇಕಾದ ಅತ್ಯಂತ ಪ್ರಮುಖ ಅಂಶವೆಂದರೆ ಗುರುತ್ವಾಕರ್ಷಣ ನಿಯಮ. ನೀರಿನ ಅಡಿಯಲ್ಲಿ ನಾವು ಯಾಂತ್ರೀಕೃತ ಸಾಧನದ ನೆರವಿಲ್ಲದೆ ಉಸಿರಾಡಲು ಸಾಧ್ಯವಾಗದಂತಹ ಸ್ಥಿತಿ ಇದೆ.

ಇತರ ಗ್ರಹಗಳನ್ನು ತಲಪುವ ನಮ್ಮ ಪ್ರಯತ್ನದಲ್ಲಿ ನಾವು ಬಾಹ್ಯಾಕಾಶದಲ್ಲಿ ತೇಲಾಡುವಾಗ ಬಹಳ ದೂರ ಹೋಗಲು ಅಸಂಭವವಾಗುವಂತಹ ಅನೇಕ ವಿಶ್ವ ಕಾನೂನುಗಳನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ, ಅಗಾಧ ಬ್ರಹ್ಮಾಂಡದ ವ್ಯಾಪಕತೆಯ ಬಗೆಗೆ ಹೇಳುವುದಾದರೂ ಏನು? ಇನ್ನು ನಮ್ಮದೇ ಮನೆಗಳಲ್ಲಿ ಜನ್ಮ, ವೃದ್ಧಾಪ್ಯ, ರೋಗ ಮತ್ತು ಸಾವಿನ ಸಮಸ್ಯೆಗಳು ನಮ್ಮನ್ನು ದಿಟ್ಟಿಸಿ ನೋಡುತ್ತವೆ ಮತ್ತು ಅವುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಇವು ಈ ಲೋಕದ ಮೇಲೆ ಹೇರಿರುವ ಪ್ರಾಥಮಿಕ ಬದ್ಧತೆಗಳು ಅಥವಾ ನಿರ್ಬಂಧಗಳು. ದಿಟವಾಗಿ, ಮಾನವ ಪ್ರಯತ್ನವು ಈ ಲೋಕದ ನಿರ್ಬಂಧಗಳ ಪ್ರತಿರೋಧ ಮಾಡಿ,  ಒಂದು ರೀತಿಯ ಭದ್ರತೆ ಹಾಗೂ ಸೌಕರ್ಯವನ್ನು ಪಡೆಯುವ ಯತ್ನವಾಗಿದೆ.

ದಿಟವಾಗಿ ನಾವು ಈ ಲೋಕಕ್ಕೆ ಸೇರಿದವರೇ ಅಲ್ಲ. ನಾವು ಆಧ್ಯಾತ್ಮಿಕ ಪರಿಸರಕ್ಕೆ ಸೇರಿದ ಆಧ್ಯಾತ್ಮಿಕ ಜೀವಿಗಳು. ನಾವು ಭೌತಿಕದಲ್ಲಿದ್ದಾಗ ನೀರಿನ ಆಚೆ ಇರುವ ಮೀನಿನಂತೆ. ಕೃಷ್ಣನು ಹೇಳುತ್ತಾನೆ, “ಈ ಬದ್ಧ ಜಗತ್ತಿನಲ್ಲಿರುವ ಜೀವಿಗಳು ನನ್ನ ನಿತ್ಯವಾದ ಸಣ್ಣ ಸಣ್ಣ ಭಾಗಗಳು. ಲೌಕಿಕ ದೇಹಗಳ ಬದ್ಧ ಜೀವನದಿಂದಾಗಿ ಅವರು ತುಂಬ ಕಷ್ಟಪಡುತ್ತಿದ್ದಾರೆ.”

ಕಷ್ಟ ಏಕೆ?

ಭಗವಂತನನ್ನು ತಲಪುವ ಪ್ರಯತ್ನ ಮಾಡದೆ ನಾವು ಈ ಲೋಕದ ನಿರ್ಬಂಧಗಳನ್ನು ಸ್ವತಂತ್ರವಾಗಿ ಅಪಜಯಗೊಳಿಸಲು ಯತ್ನಿಸಿದಾಗ ಕಷ್ಟಗಳು ಬರುತ್ತವೆ. ನಾವು ಇಲ್ಲಿ ಎದುರಿಸುತ್ತಿರುವ ಎಲ್ಲ ಕಾನೂನುಗಳನ್ನು ಅವನೇ ರೂಪಿಸಿದ್ದು. ಅದು ಸ್ಪಷ್ಟ. ರೂಪಿಸುವವನು ಇಲ್ಲದ ಯಾವುದೇ ಕಾನೂನು ಉಂಟೇ? ಈ ಲೋಕವು ಭಗವಂತನ ದೋಷಾತೀತ ಕಾನೂನುಗಳ ಅಡಿಯಲ್ಲಿದೆ ಮತ್ತು ಅವನ ಶಕ್ತಿಯನ್ನು ಕಡೆಗಣಿಸಿ ಅವುಗಳನ್ನು ಜಯಿಸಲು ಯತ್ನಿಸುವುದು ನಿಷ್ಫಲ ಪ್ರಯತ್ನ.  ನಾವು ಸುಮ್ಮನೆ ಅವುಗಳ ಗೋಜಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಸರಕಾರದ ಕಾನೂನುಗಳನ್ನು ಉಲ್ಲಂಘಿಸಲು ಪ್ರಯತ್ನಿಸುವ ವ್ಯಕ್ತಿಯು ಇನ್ನಷ್ಟು ನಿರ್ಬಂಧಗಳಿಗೆ ಸಿಕ್ಕಿಹಾಕಿಕೊಂಡಂತೆ ಅದು. ದೈವ ನಿಯಮಗಳನ್ನು ನಾವು ಉಲ್ಲಂಘಿಸುವುದು ಸಾಧ್ಯವಿಲ್ಲ. ಅವುಗಳ ವಿರುದ್ಧದ ಪ್ರಯತ್ನದಲ್ಲಿ ನಮ್ಮನ್ನು ನಾವೇ ದಮನ ಮಾಡಿಕೊಳ್ಳಬಹುದು, ಅಷ್ಟೇ ಎಂಬ ಒಂದು ಜನಪ್ರಿಯ ಉಲ್ಲೇಖವಿದೆ. ಆ ಕಾನೂನುಗಳನ್ನು ಅನುಸರಿಸುವುದು ಮತ್ತು ಅವುಗಳ ಸೃಷ್ಟಿಕರ್ತನನ್ನು ನಮ್ಮ ಹಿತೈಷಿ ಭಗವಂತ ಎಂದು ಸ್ವೀಕರಿಸುವುದು – ಇದೇ ನಮ್ಮ ಆಶಯ.

ಇಲ್ಲಿದೆ ನಮ್ಮ ನಿಜವಾದ ಸವಾಲು ಮತ್ತು ನಾವು ಎಲ್ಲಿ ನಮ್ಮ ಶೌರ್ಯ, ಸಾಹಸವನ್ನು ಅಳವಡಿಸಬೇಕೋ ಎಂಬುವುದು : ಈ ಲೋಕದ ಸ್ವತಂತ್ರ ಭೋಕ್ತನಾಗಬೇಕೆಂಬ ಅಪೇಕ್ಷೆ. ನಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಕೆಂಬ ಬಯಕೆಯ ಹುಸಿ ಅಹಂ, ಭಗವಂತನಿಗೆ ಶರಣಾಗಲು ದೊಡ್ಡ ಅಡ್ಡಿಯಾಗಿದೆ.

ದುರಾಸೆ, ಕೋಪ ಮತ್ತು ಭ್ರಮೆಯೊಂದಿಗೆ ಕಾಮ ಮತ್ತು ದ್ವೇಷ – ಭಯಂಕರ ಶತ್ರುಗಳು. ಅವುಗಳನ್ನು ಪರಾಜಯಗೊಳಿಸುವುದು ಹಿಮಾಲಯವನ್ನು ಏರುವಷ್ಟು ದೊಡ್ಡ ಸಾಹಸವೇ ಸರಿ. ನಾವು ಸತತವಾಗಿ ಕೃಷ್ಣನ ಆಶ್ರಯವನ್ನು ಕೋರಿದರೆ ಯಶಸ್ಸು ಖಚಿತ ಎಂದು ಅವನು ನಮಗೆ ಆಶ್ವಾಸನೆ ನೀಡುತ್ತಾನೆ. ಅವನ ಕರುಣೆಯ ದೈವೀ ಹೆಲಿಕಾಪ್ಟರ್‌ ನಮ್ಮನ್ನು ನಮ್ಮ ಕಷ್ಟ ಕೋಟಲೆಗಳಿಂದ ಮೇಲಕ್ಕೆತ್ತುತ್ತದೆ ಮತ್ತು ಅವನ ನಿತ್ಯ ಆನಂದದ ಧಾಮಕ್ಕೆ ಕರೆದುಕೊಂಡು ಹೋಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi