ಸರ್ವವಿಜೇತ ಯಾರು?

ಅಮೆರಿಕದ ವೃತ್ತಿಪರ ಫುಟ್‌ಬಾಲ್‌ ಶೃಂಗ 2017 ಸೂಪರ್‌ ಬೌಲ್‌ ಕ್ರೀಡಾ ಕೂಟವು ಹ್ಯೂಸ್ಟನ್‌ನಲ್ಲಿ ನಡೆದಾಗ ಆಟಕ್ಕೆ ಮುನ್ನ ಬೃಹತ್‌ ಕಾರ್ಯಕ್ರಮದಲ್ಲಿ ಶ್ರೀಲ ಪ್ರಭುಪಾದರ ಪುಸ್ತಕಗಳನ್ನು ಮಾರಾಟ ಮಾಡಲು ಪ್ರಯತ್ನಿಸಬೇಕೆಂದು ಭಕ್ತರೊಬ್ಬರು ನನಗೂ ಮತ್ತು ಇತರ ಕೆಲವರಿಗೂ ಮನವರಿಕೆ ಮಾಡಿಕೊಟ್ಟರು. ಭಾವೋದ್ರೇಕದ ಜನರ ಗುಂಪಿನಲ್ಲಿ ಸಾಹಸ ಮಾಡುತ್ತ ನಾವು ಕೆಲವು ಪ್ರತಿಗಳನ್ನು ಮಾರಾಟ ಮಾಡಿದೆವು. ಆದರೆ ಹೆಚ್ಚೇನೂ ಅಲ್ಲ. ಲೌಕಿಕ ಕ್ರೀಡೆಗೆ ಖಂಡಿತವಾಗಿಯೂ ಪ್ರಬಲವಾದ ಆಕರ್ಷಣೆ ಇದೆ ಎಂದು ಈಗಾಗಲೇ ಸ್ಪಷ್ಟವಾಗಿದ್ದನ್ನು ಈ ಅನುಭವವು ಬಲಪಡಿಸಿತು. ವಾಸ್ತವವಾಗಿ, ವಿಶ್ವಾದ್ಯಂತ ಪ್ರತಿ ವರ್ಷ ಆರು ನೂರು ಶತಕೋಟಿ ಡಾಲರ್‌ ಅನ್ನು ಕ್ರೀಡಾ ಉದ್ದಿಮೆಗಾಗಿ ಖರ್ಚು ಮಾಡಲಾಗುತ್ತಿದೆ. ಅದು ಸದಾ ಉತ್ಸಾಹಿ ಕ್ರೀಡಾಭಿಮಾನಿಗಳ ಮನರಂಜನೆಗೆ ಸೌಕರ್ಯ ಒದಗಿಸುತ್ತದೆ.

ಕ್ರೀಡೆ ಏಕೆ ಅಷ್ಟು ಜನಪ್ರಿಯ? ವೈಷ್ಣವ ಬೋಧನೆಯ ಪ್ರಕಾರ, ಕ್ರೀಡಾ ಪ್ರವೃತ್ತಿ ಸೇರಿದಂತೆ ಇಲ್ಲಿನ ಎಲ್ಲವೂ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಮೂಲ, ಆನಂದಮಯ ಲೀಲೆಯ ಅಪರಿಪೂರ್ಣ ಅಥವಾ ವಿಕೃತ ಪ್ರತಿಬಿಂಬ. ದುರದೃಷ್ಟವಶಾತ್‌, ಈ ಲೌಕಿಕ ಲೋಕದಲ್ಲಿ ಕ್ರೀಡೆಯು ಆಕರ್ಷಿತವಾಗಿದ್ದರೂ ಅದರ ಸೆಳೆತವು ಮಾಯೆ. ನಾವು ಇಲ್ಲಿ ನಿಜವಾದುದನ್ನು ಆನಂದಿಸುವುದು ಸಾಧ್ಯವಿಲ್ಲ. ಹೆಚ್ಚೆಂದರೆ, ನಾವು ಮರಭೂಮಿಯಲ್ಲಿನ ಮರೀಚಿಕೆಯಂತೆ ವಿಕೃತ ಬಿಂಬದಿಂದ ಆನಂದವನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು.

ನಿಜವಾದ, ಶುದ್ಧ ವಿನೋದ ಅಥವಾ ಕ್ರೀಡೆಯ ವಿಷಯಕ್ಕೆ ಬಂದರೆ, ಶ್ರೀ ಕೃಷ್ಣನು ಪ್ರತಿಸ್ಪರ್ಧಿಯೇ ಇಲ್ಲದ ಸರ್ವವಿಜೇತ, ರಸಿಕ. ಶ್ರೀಮದ್‌ ಭಾಗವತದಲ್ಲಿ (10.18.19) ನಾವು ನೋಡುವಂತೆ, “ಎಲ್ಲ ಕ್ರೀಡೆ ಮತ್ತು ಆಟಗಳನ್ನು ಬಲ್ಲ ಕೃಷ್ಣನು ಎಲ್ಲ ಗೋಪಾಲಕ ಬಾಲಕರನ್ನು ಕರೆದು ಹೇಳಿದನು, `ಹೇ, ಗೋಪಾಲಕರೇ! ನಾವೀಗ ಆಟ ಆಡೋಣ! ನಾವು ಎರಡು ಸಮ ಸಮ ತಂಡವಾಗಿ ವಿಭಾಗಿಸೋಣ.’ ”

ಕ್ರೀಡೆಯಲ್ಲಿ ಭಗವಂತನ ಆನಂದವು ನಮ್ಮಂತೆ ಲೌಕಿಕ ಉದ್ದೇಶ ಹೊಂದಿಲ್ಲ ಅಥವಾ ಕಲುಷಿತವಾಗಿಲ್ಲ. ಅದು ಅಲೌಕಿಕವಾದ ಆನಂದಪರವಶತೆ ಮತ್ತು ಶುದ್ಧ. ಭಗವಂತನು ಕ್ರೀಡಾಸಕ್ತ : ದೈವೀ ಚಟುವಟಿಕೆಗೆ ಸಂಸ್ಕೃತ ಪದ ಲೀಲೆ – ಆಟ. ತನ್ನ ಅಚಿಂತ್ಯ ಶಕ್ತಿಯಿಂದ ಭಗವಂತನು ತನ್ನ ಅವತಾರಗಳಲ್ಲಿ ಗಂಭೀರ ಉದ್ದೇಶಗಳನ್ನು (ಮಾನವ ಕುಲವನ್ನು ಕಾಪಾಡಲು) ಕೇವಲ ಆಟದೊಂದಿಗೆ ಪೂರ್ಣವಾಗಿ ಒಗ್ಗೂಡಿಸುತ್ತಾನೆ. ಮತ್ಸ್ಯನಾಗಿ (ದೈವಿ ಮೀನಾಗಿ ಅವನ ಅವತಾರ) ಅವನು ಮಹಾಪ್ರವಾಹದ ಅಲೆಗಳಲ್ಲಿ ನಲಿದಾಡುತ್ತಾನೆ; ವರಾಹನಾಗಿ (ಅಲೌಕಿಕ ಹಂದಿಯ ಅವತಾರ) ಅವನು ಒಳ್ಳೆಯ ಕಾಳಗವನ್ನು ಆನಂದಿಸುತ್ತಾನೆ. ಎಲ್ಲ ಅವತಾರಗಳಲ್ಲಿಯೂ ಅವನು ಆಟದಲ್ಲಿನ ಆಟಗಾರನಂತೆ ನಿರ್ದಿಷ್ಟ ಪಾತ್ರವನ್ನು ಆಕರ್ಷಿಸುವ ಸಾಧ್ಯತೆಯನ್ನು ಆನಂದಿಸುವುದನ್ನು ನಾವು ಕಾಣುತ್ತೇವೆ. ದೈವ ಚಟುವಟಿಕೆಯನ್ನು ವಿವರಿಸುವ ಅಂಶವನ್ನು ಲೀಲೆಯ ಕಲ್ಪನೆಯು ಸೆರೆಹಿಡಿಯುತ್ತದೆ: ಅದು ಉದ್ದೇಶರಹಿತವಾದುದು. ಮಾನವ ಚಟುವಟಿಕೆಗಳೆಲ್ಲವೂ ಉದ್ದೇಶಗಳಿಂದ ಹೊಮ್ಮುತ್ತವೆ, ಇಲ್ಲದಿರುವ ವಸ್ತುವಿನ ಆಸೆ ಅಥವಾ ಇರುವ ವಸ್ತುವನ್ನು ಕಳೆದುಕೊಳ್ಳುವ ಭಯ. ಆದರೆ ದೇವರ ಬಳಿ ಈಗಾಗಲೇ ಎಲ್ಲವೂ ಇದೆ. ಅವನಿಗೆ ಲಾಭ ಅಥವಾ ನಷ್ಟದ ಪ್ರಶ್ನೆಯೇ ಇಲ್ಲ.

ರಾಜ ಕಂಸನ ಅಸುರ ಮಲ್ಲರಾದ ಚಾಣೂರ, ಮುಷ್ಟಿಕ, ಕೂಟ, ಶಲ, ಮತ್ತು ತೋಶಲರ ವಿರುದ್ಧ ಗೆದ್ದ ಮೇಲೆ ಕೃಷ್ಣ ಮತ್ತು ಬಲರಾಮರು ಹೇಗೆ ವಿಜಯೋತ್ಸವವನ್ನು ಆಚರಿಸಿಕೊಂಡರು ಎನ್ನುವುದನ್ನು ಭಾಗವತದ 10ನೆಯ ಸ್ಕಂಧವು (10.44.29) ವಿವರಿಸುತ್ತದೆ : “ಕೃಷ್ಣ ಮತ್ತು ಬಲರಾಮರು ಆಮೇಲೆ ತಮ್ಮ ಯುವ ಗೋಪಾಲಕ ಬಾಲಮಿತ್ರರನ್ನು ತಮ್ಮ ಜೊತೆ ಸೇರಿಕೊಳ್ಳುವಂತೆ ಕರೆದರು. ಅವರ ಜೊತೆಯಲ್ಲಿ ಕೃಷ್ಣ ಮತ್ತು ಬಲರಾಮ ಇಬ್ಬರೂ ನರ್ತಿಸಿದರು, ಆಟವಾಡಿದರು, ಆಗ ಅವರ ಕಾಲಗೆಜ್ಜೆಗಳು ಸಂಗೀತವಾದ್ಯಗಳನ್ನು ನುಡಿಸಿದಂತೆ ಧ್ವನಿಗೈದವು.”

ಈ ಶ್ಲೋಕಕ್ಕೆ ಶ್ರೀಲ ಪ್ರಭುಪಾದರ ಶಿಷ್ಯರ ಭಾವಾರ್ಥ ಇಂತಿದೆ: “ಈಚಿನ ದಿನಗಳಲ್ಲಿ ಸರ್ವೋತ್ಕೃಷ್ಟ ಮಲ್ಲನನ್ನು ನಿರ್ಧರಿಸುವ ಕುಸ್ತಿ ಪಂದ್ಯಗಳಲ್ಲಿ ಒಬ್ಬ ಮಲ್ಲನು ಜಯಗಳಿಸಿದರೆ, ಕೂಡಲೇ ಅವನ ಮಿತ್ರರು ಬಂಧುಗಳು ಆ ಜಯಗಳಿಸಿದ ಮಲ್ಲನನ್ನು ಕುಸ್ತಿಯ ಕಣದಲ್ಲೇ ಅಭಿನಂದಿಸಲು ಮುನ್ನುಗ್ಗುತ್ತಾರೆ. ಅನೇಕ ವೇಳೆ ಸರ್ವೋತ್ಕೃಷ್ಟ ಮಲ್ಲನು ಅತಿಯಾದ ಆನಂದದಿಂದ ಅವರೊಂದಿಗೆ ನೃತ್ಯಮಾಡುವುದೂ ಉಂಟು. ಇಂತಹ ಮನಃಸ್ಥಿತಿಯಲ್ಲಿಯೇ, ಕೃಷ್ಣ ಬಲರಾಮರು ತಮ್ಮ ಮಿತ್ರರು ಮತ್ತು ಬಂಧುಗಳೊಂದಿಗೆ ತಮ್ಮ ವಿಜಯೋತ್ಸವವನ್ನು ಆಚರಿಸಲು ನರ್ತಿಸಿದರು.”

ವಿಷಪೂರಿತ ಕಾಲಿಯ ಸರ್ಪದ ಹೆಡೆಗಳ ಮೇಲೆ ಕೃಷ್ಣನು ನರ್ತಿಸಿದಾಗ ದೈತ್ಯ ಸರ್ಪವು ವಿನಯ ಸಂಪನ್ನವಾಯಿತು ಮತ್ತು ಶುದ್ಧವಾಯಿತು ಎಂದು ಧರ್ಮ ಗ್ರಂಥಗಳು ಹೇಳುತ್ತವೆ.  ಭಾಗವತವು ಹೇಳುತ್ತದೆ (2.7.34-35) – ದುಷ್ಟ ರಾಜ ಕಂಸ ಅಥವಾ ಆಕ್ರಮಣಕಾರಿ ಗೂಳಿ ಅರಿಷ್ಟಾಸುರರಂತಹ ಆಕ್ರಮಣಕಾರರನ್ನು ಕೃಷ್ಣನು ಸಂಹರಿಸಿದಾಗ, “ಹಾಗೆ ಅವನಿಂದ ಹತರಾದ ದೈತ್ಯರು, ನಿರಾಕಾರ ಬ್ರಹ್ಮಜ್ಯೋತಿಯನ್ನು ಅಥವಾ ವೈಕುಂಠಲೋಕದಲ್ಲಿರುವ ಅವನ ಸ್ವಧಾಮವನ್ನು ಹೊಂದುತ್ತಾರೆ.”

ಕ್ರೀಡಾತ್ಮಕ ಲೀಲೆ

ದಿಟವಾಗಿ, ಶ್ರೀ ಕೃಷ್ಣನ ಕ್ರೀಡಾತ್ಮಕ ಲೀಲೆಯು ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಉಪಯೋಗ ಮತ್ತು ಆನಂದವನ್ನು ಮಾತ್ರ ತರುತ್ತದೆ. ನಾವು ಅವುಗಳ ಬಗೆಗೆ ಓದಿದಾಗ ಅಥವಾ ಕೇಳಿದಾಗ ನಮ್ಮ ನಿಮ್ಮಂತಹ `ಪ್ರೇಕ್ಷಕ’ರಿಗೂ ಕೂಡ ಅದೇ ಫಲವು ಲಭ್ಯವಾಗುತ್ತದೆ. ಆದರೆ, ಲೌಕಿಕ ಲೋಕದಲ್ಲಿ ಯಾರಾದರೂ ಭಗವಂತನ ಕ್ರೀಡಾ ಸ್ವಭಾವವನ್ನು ಅನುಕರಣೆ ಮಾಡಲು ಪ್ರಯತ್ನಿಸಿದರೆ ಅವರು ಕರ್ಮದ ಕಾನೂನಿನಲ್ಲಿ ಸಿಕ್ಕಿಬೀಳುತ್ತಾರೆ. ಉದಾಹರಣೆಗೆ, ರಾಕ್ಷಸ ಗೂಳಿಯನ್ನು ಕೃಷ್ಣನು ಸಂಹರಿಸಿದಾಗ ಬಂದಂತಹ ಸಕಾರಾತ್ಮಕ ಫಲಿತಾಂಶಕ್ಕೆ ಬದಲಾಗಿ, ಈಗ ಗೂಳಿಕಾಳಗದಾಳು ಗೂಳಿಯನ್ನು ಕೊಂದಾಗ ಉಂಟಾಗುವ ಪರಿಣಾಮವೆಂದರೆ ಗೂಳಿ ಮತ್ತು ಗೂಳಿಕಾಳಗದಾಳಿಗೆ ನೋವು. ಪ್ರೇಕ್ಷಕರೂ ಕೂಡ ಕರ್ಮದಲ್ಲಿ ಸಿಕ್ಕಿಬೀಳುತ್ತಾರೆ. 

ಮತ್ತೊಂದು ಸಮಸ್ಯೆ ಇದೆ. ನಾವು ಮೆಚ್ಚುವ ಅಥವಾ ಅತಿಯಾಗಿ ಆರಾಧಿಸುವ ಬಹುತೇಕ ಎಲ್ಲ  ಕ್ರೀಡಾಪಟುಗಳು ಭಗವಂತನ ಶುದ್ಧ ಭಕ್ತರಲ್ಲ, ಹೀಗಾಗಿ ಅವರು ಆಗಾಗ್ಗೆ ಸ್ವೀಕರಿಸುವ ಅತಿಯಾದ ಪ್ರಶಂಸೆಗೆ ಅವರು ಯೋಗ್ಯರಲ್ಲ. ಉದಾಹರಣೆಗೆ, ಅಮೆರಿಕದ ಜನಪ್ರಿಯ ಫುಟ್‌ಬಾಲ್‌ ಆಟಗಾರ ಓ.ಜೆ. ಸಿಂಪ್ಸನ್‌ ಅವರನ್ನು ಅವರ ಕ್ರೀಡಾ ಕೌಶಲ್ಯಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಕೊಂಡಾಡಿದ್ದರೂ ಅವರು ಕೊಲೆ ಆರೋಪಿಯಾದರು ಮತ್ತು ಇನ್ನೊಂದು ಅಪರಾಧಕ್ಕಾಗಿ ಅವರನ್ನು ಬಂಧಿಸಲಾಯಿತು. ಅವರನ್ನು ಈಗ ವೀರ ಎಂದು ಪರಿಗಣಿಸುವುದಿಲ್ಲ. ಆದರ್ಶನೀಯ ಅಥವಾ ವೀರರಾಗಬೇಕಾಗಿದ್ದ ಅನೇಕ ವೃತ್ತಿಪರರು, ಹವ್ಯಾಸಿಗಳೇಕೆ, ಒಲಿಂಪಿಕ್‌ ಕ್ರೀಡಾಪಟುಗಳ ವಿರುದ್ಧ ಕೂಡ ಉದ್ದೀಪನ ಮದ್ದು ಸೇವನೆ, ವಂಚನೆ, ಸಂಗಾತಿಗೆ ಹಿಂಸೆಗಳಲ್ಲದೆ ನರಹತ್ಯೆ ಆರೋಪಗಳಿಗೆ ಕಾನೂನು ಕ್ರಮ ಜರುಗಿಸಲಾಗಿದೆ. ಅಂತಹ ಕ್ರೀಡಾಪಟುಗಳು ನಮಗೆ ಮನರಂಜನೆ ನೀಡಬಹುದು, ಆದರೆ ಅವರು ಲೌಕಿಕ ಲೋಕದಿಂದ ನಮ್ಮನ್ನು ಮುಕ್ತಗೊಳಿಸಲಾರರು. ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಹೇಳುವಂತೆ (8.15), ಈ ಲೌಕಿಕ ಲೋಕವು ದುಃಖಾಲಯಂ ಅಶಾಶ್ವತಂ, ದುಃಖದ ಮತ್ತು ತಾತ್ಕಾಲಿಕ ಸ್ಥಳ. ನಾವು ಎಷ್ಟೇ ಪ್ರಯತ್ನಪಟ್ಟರೂ ಇಲ್ಲಿ ಜಯಿಸುವುದು ಸಾಧ್ಯವಿಲ್ಲ ಮತ್ತು ಅದು ಸಾಧ್ಯವಾದರೂ ಕಷ್ಟಪಟ್ಟು ಪಡೆದ ಜಯವನ್ನು ನಾವು ಯಾರೂ ಕೂಡ ದೀರ್ಘ ಕಾಲ ಅನುಭವಿಸುವುದು ಸಾಧ್ಯವಿಲ್ಲ.

ಸಮಯ ವ್ಯರ್ಥ

ದಯಾಮಯಿ ವೈಷ್ಣವರಾದ ಶ್ರೀಲ ಪ್ರಭುಪಾದರು ಪರ ದುಃಖ ದುಃಖಿ, ಬೇರೆಯವರ ನೋವು ಕಂಡು ದುಃಖಿಸುವವರು. ಒಮ್ಮೆ ಡಲ್ಲಾಸ್‌ನ ಗಾಲ್‌ ಕೋರ್ಸ್‌ ಬಳಿ ಬೆಳಗಿನ ವಾಯುವಿಹಾರದಲ್ಲಿದ್ದಾಗ, “ಇವರೆಲ್ಲ ಏನು ಮಾಡುತ್ತಿದ್ದಾರೆ?” ಎಂದು ಕೇಳಿದರು.

ಅವರು ಗಾಲ್‌ ಆಡುತ್ತಿದ್ದಾರೆ ಎಂದು ಹೇಳಿದಾಗ, ಕಣ್ಣೀರಿಡುತ್ತ ಶ್ರೀಲ ಪ್ರಭುಪಾದರು ಉದ್ಗರಿಸಿದರು, “ಈ ಸಣ್ಣ ಚೆಂಡನ್ನು ಹೊಡೆಯುತ್ತ ಅವರು ಹೇಗೆ ಸಮಯ ಹಾಳು ಮಾಡುತ್ತಿದ್ದಾರೆ, ನೋಡಿ.”

ಮಾನವ ಜನ್ಮ ಪಡೆದ ಯಾವುದೇ ಅದೃಷ್ಟವಂತ ಆತ್ಮಕ್ಕೆ ಲೌಕಿಕ ಕ್ರೀಡೆಯು ಕೇವಲ ಸಮಯ ಹಾಳು ಮಾಡುವಂತಹುದು ಎಂದು ಪ್ರಭುಪಾದರು ಭಾವಿಸಿದ್ದರು. ಅದು ಇಂದ್ರಿಯ ತೃಪ್ತಿಯ ಮೂಲಕ ಸುಖವನ್ನು ಪಡೆಯುವ ಅನೇಕ ವ್ಯರ್ಥ ಪ್ರಯತ್ನಗಳಲ್ಲಿ ಒಂದು.

“ಈ ಯುಗದಲ್ಲಿ ಮಾನವರು ವಿವಿಧ ರಾಜಕೀಯ ಅಭಿಪ್ರಾಯಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮಾತ್ರವೇ ಬಲಿಪಶುಗಳಾಗಿಲ್ಲ. ವಿವಿಧ ಬಗೆಯ ಇಂದ್ರಿಯ ತೃಪ್ತಿ, ಸೆಳೆತಗಳು, ಸಿನಿಮಾ, ಕ್ರೀಡೆ, ಜೂಜು, ಕ್ಲಬ್ಬುಗಳು, ಲೌಕಿಕ ಗ್ರಂಥಾಲಯಗಳು, ದುಷ್ಟ ಸಹವಾಸ, ಧೂಮಪಾನ, ಮದ್ಯಪಾನ, ಮೋಸಮಾಡುವುದು, ಕದಿಯುವುದು, ಕಾದಾಡುವುದು ಇಂತಹವುಗಳೆಲ್ಲ ಕಲಿಯುಗದ ಮಾನವನನ್ನು ಆಹುತಿ ತೆಗೆದುಕೊಳ್ಳುತ್ತಿವೆ” ಎಂದು ಶ್ರೀಲ ಪ್ರಭುಪಾದರು ಬರೆದಿದ್ದಾರೆ. (ಭಾಗವತ 1.1.10, ಭಾವಾರ್ಥ)

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ವ್ಯಾಯಾಮ ಮತ್ತು ಮನರಂಜನೆ ದೊರೆಯುತ್ತದೆ ಎನ್ನುವುದು ನಿಜ. ಆದರೆ ಆಟವನ್ನು ವೀಕ್ಷಿಸುವುದೂ ಸೇರಿದಂತೆ ಲೌಕಿಕ ಕ್ರೀಡೆಯು ಸೂಕ್ಷ್ಮವಾಗಿ ಅಥವಾ ಸ್ಥೂಲವಾಗಿ  ಅಶುದ್ಧ ಅಥವಾ ಕಲುಷಿತಗೊಳಿಸಬಹುದು ಎಂದು ಕಟ್ಟುನಿಟ್ಟಿನ ಭಕ್ತರು ಅರ್ಥಮಾಡಿಕೊಳ್ಳುತ್ತಾರೆ. ಪದೇಪದೇ ಒಳ್ಳೆಯ ಶುದ್ಧ ಆಟವೆಂದು ಹೇಳಿದರೂ ಪ್ರೇಕ್ಷಕರನ್ನು ಸೆಳೆಯುವ ಕ್ರೀಡೆಯು ಅನೇಕ ಬಾರಿ ವಿಕರ್ಮ ಅಥವಾ ಪಾಪ, ನಿಷೇಧಿತ ಚಟುವಟಿಕೆಗಳ ಜೊತೆ ಸಂಪರ್ಕ ಹೊಂದಿರುತ್ತದೆ. ಹೇಗೆ? ಅವುಗಳ ಪ್ರಾಯೋಜಕರಿಂದ ಮಾರಾಟವಾಗುವ ಉತ್ಪನ್ನಗಳ ಮೂಲಕ. ಈ ಲೋಕದಲ್ಲಿ ಕ್ರೀಡೆಯು ಸರ್ವಾಕರ್ಷಕ ಶ್ರೀ ಕೃಷ್ಣನಲ್ಲಿ ಸೃಷ್ಟಿಯಾಗುವುದರಿಂದ ಅದು ನಮ್ಮನ್ನು ಆಕರ್ಷಿಸುತ್ತದೆ. ಆದರೆ ಇದು ಮಾಯಾದೇವಿಯ ಸಾಮೂಹಿಕ ಚಿತ್ತಭ್ರಂಶದ ಅಸ್ತ್ರಗಳಲ್ಲಿ ಒಂದಾಗಬಹುದು ಎನ್ನುವುದನ್ನು ನಾವು ತಿಳಿದುಕೊಂಡಿರಬೇಕು. ಮಾಯಾದೇವಿಯು ಭಗವಂತನ ಪ್ರೀತಿಯ ಸೇವಕಿಯಾಗಿದ್ದು ಭ್ರಾಮಕ ಆಸೆಗಳನ್ನು ತೋರಿಸಿ ನಮ್ಮ ಆದ್ಯತೆಗಳನ್ನು ಪರೀಕ್ಷಿಸುವುದು ಅವಳ ಕೆಲಸ.

ಲೌಕಿಕ ಕ್ರೀಡೆಯಲ್ಲಿ ನಾವು ಸೌಂದರ್ಯ, ಉತ್ಸಾಹಪೂರ್ಣತೆ, ಶೌರ್ಯ, ಉದ್ರೇಕ, ನಾಟಕೀಯ ಘಟನೆ, ಸ್ವಯಂ ಪ್ರೇರಿತ, ಸೃಜನಶೀಲತೆ, ಸಂಕಲ್ಪ, ಶ್ರೇಷ್ಠ ತಂಡ ನಿರ್ವಹಣೆ ಮತ್ತು ಅಪ್ರತಿಮ ತಂತ್ರಗಾರಿಕೆ – ಪೀಲೆ, ಮೊಹಮ್ಮದ್‌ ಅಲಿ, ಮೈಖೇಲ್‌ ಫೆಲ್ಸ್‌, ಮಾರ್ಟೀನ ನವ್ರಟಿಲೋವ ಅಥವಾ ಉಸೈನ್‌ ಬೋಲ್ಟ್‌ರ ಕಲಾವಂತಿಕೆ ಅಥವಾ ತಜ್ಞತೆಯ ಮಿಂಚನ್ನು ಆಗಾಗ ನೋಡಿದರೆ, ಕೃಷ್ಣನು ಹೇಳಿದ್ದನ್ನು ನೆನಪು ಮಾಡಿಕೊಳ್ಳಬಹುದು, “ಎಲ್ಲ ಶ್ರೀಮಂತವಾದ, ಸುಂದರವಾದ ಮತ್ತು ಉಜ್ಜ್ವಲವಾದ ಸೃಷ್ಟಿಗಳು ನನ್ನ ವೈಭವದೊಂದು ಕಿಡಿಯಿಂದ ಮೂಡಿಬಂದಿವೆ ಎಂದು ತಿಳಿ.” ಮತ್ತು “ನಾನು ಪುರುಷರಲ್ಲಿ ಪೌರುಷವಾಗಿದ್ದೇನೆ.” (ಭಗವದ್ಗೀತೆ 10.41, 7.8)

ಲೌಕಿಕ ಕ್ರೀಡಾಂಗಣಗಳಲ್ಲಿ ಅಥವಾ ಟೆಲಿವಿಷನ್‌ನ ಪ್ರಕಾಶಮಯ ತೆರೆಯ ಮೇಲಿನ ವಿಕೃತ ಪ್ರತಿಬಿಂಬಗಳ ಮೂಲಕ ತನ್ನ ವೈಭವದ ಕಿಡಿಯ ಸಾರವನ್ನು ಪಡೆಯಲು ಪ್ರಯತ್ನಿಸಿ ನಾವು ಈ ಐಹಿಕ ಲೋಕದಲ್ಲಿ ಅಡ್ಡಾಡುತ್ತ ಕಾಲಕಳೆಯುವುದು ಕೃಷ್ಣನಿಗೆ ಬೇಡವಾಗಿದೆ. ಅವನ ಪದಂ ಅವ್ಯಯಂ ಅಥವಾ ಶಾಶ್ವತ ಆಧ್ಯಾತ್ಮಿಕ ಲೋಕವನ್ನು ಪಡೆಯುವಂತೆ ಅವನು ಕೋರುತ್ತಾನೆ. ಶ್ರೀಲ ಪ್ರಭುಪಾದರು ವಿವರಿಸುವಂತೆ,

ಯಾರು ನಿರ್ಮಾನ ಮೋಹವೋ ಅವರು ಪದಂ ಅವ್ಯಯಂ ಅಥವಾ ಶಾಶ್ವತ ಲೋಕವನ್ನು ತಲಪಬಹುದು. ಹಾಗೆಂದರೇನು ಅರ್ಥ? ನಾವು ಉಪಾಧಿಗಳ ಹಿಂದೆ ಬಿದ್ದಿದ್ದೇವೆ. ಕೆಲವರಿಗೆ `ಸರ್‌’ ಆಗಬೇಕೆಂದು ಇಷ್ಟ. ಇನ್ನೂ ಕೆಲವರಿಗೆ `ಲಾರ್ಡ್‌’ ಆಗಬೇಕೆಂಬ ಆಸೆ. ಕೆಲವರಿಗೆ ರಾಷ್ಟ್ರಪತಿ ಅಥವಾ ಶ್ರೀಮಂತ ವ್ಯಕ್ತಿ ಅಥವಾ ರಾಜ ಅಥವಾ ಇನ್ನೇನೋ ಆಗಬೇಕೆಂಬ ಆಸೆ… ಉಪಾಧಿಗಳು ಮತ್ತು ಮೋಹಗಳು ನಮ್ಮ ಕಾಮ ಮತ್ತು ಭೋಗಾಸಕ್ತಿ, ಐಹಿಕ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಬೇಕೆಂಬ ಅಪೇಕ್ಷೆಗಳೇ ಕಾರಣ. ಲೌಕಿಕ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಬೇಕೆಂಬ ಈ ಪ್ರವೃತ್ತಿಯನ್ನು ನಾವು ಬಿಡುವವರೆಗೂ ದೇವೋತ್ತಮನ ರಾಜ್ಯ, ಸನಾತನ ಧಾಮಕ್ಕೆ ಹಿಂದಿರುಗುವ ಸಾಧ್ಯತೆಯೇ ಇಲ್ಲ. ಎಂದಿಗೂ ನಾಶವಾಗದ ಆ ಶಾಶ್ವತ ರಾಜ್ಯಕ್ಕೆ ಹೋಗಬಹುದು. ಯಾರಿಂದ ಅದು ಸಾಧ್ಯ? ಹುಸಿ ಲೌಕಿಕ ಸುಖಗಳ ಆಕರ್ಷಣೆಯಿಂದ ಗೊಂದಲಗೊಳ್ಳದವರು (ಮುಕ್ತರಾದವರು), ದೇವೋತ್ತಮನ ಸೇವೆಯಲ್ಲಿ ನೆಲೆಸಿರುವವರಿಗೆ ಅದು ಸಾಧ್ಯ. ಆ ರೀತಿ ನೆಲೆಗೊಂಡವರು ಸುಲಭವಾಗಿ ಪರಮ ಧಾಮವನ್ನು ಸೇರಬಹುದು. (ಗೀತೆ 15.5, ಭಾವಾರ್ಥ)

ಹುಸಿ ಉಪಾಧಿಗಳು

ಈಗಾಗಲೇ ನಮ್ಮ ಬಳಿ ಅಸಂಖ್ಯ ಲೌಕಿಕ ಉಪಾಧಿಗಳಿವೆ – ಪುರುಷ ಅಥವಾ ಸ್ತ್ರೀ, ಅಮೆರಿಕದವ ಅಥವಾ ರಷ್ಯದವ, ಕರಿಯ ಅಥವಾ ಬಿಳಿಯ, ಹಿಂದೂ, ಕ್ರಿಶ್ಚಿಯನ್‌, ಜ್ಯೂ ಅಥವಾ ಮುಸ್ಲಿಂ. ನಿಜವಾಗಿಯೂ ನಾವು ನಮಗಾಗಿ ಇನ್ನಷ್ಟು ಸೃಷ್ಟಿಸುವ ಅಗತ್ಯವಿದೆಯೇ? ಈ ಬಾಹ್ಯ, ಲೌಕಿಕ ಸ್ವಯಂ ಕಲ್ಪನೆಗಳು ಕೇವಲ ನಮ್ಮನ್ನು ವಿಭಾಗಿಸುತ್ತವೆ ಮತ್ತು ಗೊಂದಲಗೊಳಿಸುತ್ತವೆ. ಇದರ ಪರಿಣಾಮವಾಗಿ ನಾವು ನಮ್ಮ ನಿಜವಾದ ಆಧ್ಯಾತ್ಮಿಕ ಗುರುತನ್ನು ಮರೆಯಲು ಅದು ಕಾರಣವಾಗುತ್ತದೆ. ಈ ಅಪಾಯಕಾರಿ ಲೌಕಿಕ ಲೋಕದಿಂದ ಮುಕ್ತರಾಗಲು ನಾವು ಅಂತಹ ಎಲ್ಲ ಹುಸಿ ಉಪಾಧಿಗಳಿಂದ ಮುಕ್ತರಾಗಬೇಕು. ಶ್ರೀ ಕೃಷ್ಣ ಮತ್ತು ಅವನ ಮಿತ್ರರೊಂದಿಗೆ ಆಧ್ಯಾತ್ಮಿಕ ಲೋಕದಲ್ಲಿ ಆನಂದಿಸಬೇಕೆಂಬ ಇಚ್ಛೆ ನಮಗೆ ನಿಜವಾಗಿಯೂ ಇದ್ದರೆ, ನಾವು “ಲೌಕಿಕ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಬೇಕೆಂಬ ಪ್ರವೃತ್ತಿಯನ್ನು ಬಿಟ್ಟು ಬಿಡಬೇಕು.” ಲೌಕಿಕ ಕ್ರೀಡೆಯನ್ನು ಆನಂದಿಸಬೇಕೆಂಬ ಪ್ರಯತ್ನವು ಆ ಪ್ರವೃತ್ತಿಯಲ್ಲಿಯೇ ಬೇರೂರಿದೆ.

ನಿಜವಾದ ವೀರ

ಭಾಗವತಕ್ಕೆ ಬರೆದಿರುವ ಭಾವಾರ್ಥದಲ್ಲಿ (4.25.25) ಶ್ರೀಲ ಪ್ರಭುಪಾದರು ಹೇಳುತ್ತಾರೆ, “ಐಹಿಕ ಕಾರ್ಯಚಟುವಟಿಕೆಗಳು ಮಿಥ್ಯಾಪೂರ್ಣವಾದ ಸಾಹಸಕಾರ್ಯಗಳು. ಆದರೆ, ಐಹಿಕ ಕಾರ್ಯಗಳಲ್ಲಿ ತೊಡಗದಂತೆ ಇಂದ್ರಿಯಗಳನ್ನು ನಿಗ್ರಹಿಸುವುದು ವೀರನ ಲಕ್ಷಣ.”

ತಮ್ಮ ಪುಸ್ತಕಗಳನ್ನು ವಿತರಿಸುತ್ತಿದ್ದ ಭಕ್ತರೊಬ್ಬರಿಗೆ ಬರೆದ ಪತ್ರದಲ್ಲಿ (1975) ಪ್ರಭುಪಾದರು ಇತರರಿಗೆ ಅಲೌಕಿಕ ಜ್ಞಾನವನ್ನು ನೀಡುವುದು ಇಂದ್ರಿಯ ನಿಗ್ರಹಕ್ಕಿಂತ ಹೆಚ್ಚಿನ ವೀರ ಲಕ್ಷಣ ಎಂದು ಸೂಚಿಸಿದ್ದರು. “ಸಮರದ ಕಾಲದಲ್ಲಿ, ಒಬ್ಬ ರೈತ ಬಾಲಕ ಅಥವಾ ಒಬ್ಬ ಸಾಮಾನ್ಯ ಗುಮಾಸ್ತನು ತನ್ನ ದೇಶಕ್ಕಾಗಿ ಹೋರಾಡಲು ಯುದ್ಧ ಭೂಮಿಗೆ ಹೋದರೆ ಅವನ ಪ್ರಾಮಾಣಿಕ ಪ್ರಯತ್ನಗಳಿಗಾಗಿ ರಾಷ್ಟ್ರೀಯ ವೀರನಾಗುತ್ತಾನೆ. ಆದುದರಿಂದ ತನ್ನ ಸಂದೇಶವನ್ನು ಅರುಹಲು ಎಲ್ಲ ಅಪಾಯಗಳನ್ನೂ ಸ್ವೀಕರಿಸುವ ಕೃಷ್ಣಪ್ರಜ್ಞೆಯ ಬೋಧಕನನ್ನು ಕೃಷ್ಣನು ತತ್‌ಕ್ಷಣ ಗುರುತಿಸುತ್ತಾನೆ.”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi