ಅವರೇಕೆ ವಿಚಿತ್ರವಾಗಿ ಕಾಣುತ್ತಾರೆ?

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಕೆಲವು ವರದಿಗಾರರ ನಡುವೆ ನ್ಯೂಯಾರ್ಕಿನ ಜಾನ್‌ ಎಫ್‌. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸಂವಾದ.

ವರದಿಗಾರ: ಸ್ವಾಮೀಜಿ, ನಿಮ್ಮ ಆಂದೋಲನ ಕುರಿತು ಏನೂ ಗೊತ್ತಿಲ್ಲದ ಹಾಗೂ ಅದರ ಬಗೆಗೆ ಏನಾದರೂ ಅರಿಯಬೇಕೆಂಬ ಜನರಿಗೆ ನಿಮ್ಮ ವಿಶೇಷ ಸಂದೇಶ ಏನು?

ಶ್ರೀಲ ಪ್ರಭುಪಾದ: ಈ ಆಂದೋಲನವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಏಕೆಂದರೆ ಇದು ಆಧ್ಯಾತ್ಮಿಕ ಆಂದೋಲನ. ದುರದೃಷ್ಟವಶಾತ್‌, ಜನರಿಗೆ ಅಧ್ಯಾತ್ಮ ಎಂದರೇನು ಮತ್ತು ಆಧ್ಯಾತ್ಮಿಕ ಆಂದೋಲನ ಎಂದರೇನು ಎಂಬುದರ ಮಾಹಿತಿ ಗೊತ್ತಿಲ್ಲ. ದೇಹವಿದೆ ಎಂಬುದನ್ನಷ್ಟೇ ಅವರು ಅರ್ಥ ಮಾಡಿಕೊಳ್ಳಬಲ್ಲರು. ಆದರೆ ದೇಹವೊಂದು ಯಂತ್ರ ಮತ್ತು ಈ ಯಂತ್ರದ ಚಾಲಕ ಆತ್ಮ. ಆದುದರಿಂದ ನಾವು ನಮ್ಮ ಆಂದೋಲನವನ್ನು ಈ ವೇದಿಕೆಯಿಂದ ಪ್ರಾರಂಭಿಸುತ್ತಿದ್ದೇವೆ. ಜನರು ಯಂತ್ರದಲ್ಲಿಯೇ ತಲ್ಲೀನರಾಗಿಬಿಟ್ಟಿದ್ದಾರೆ. ಆದರೆ ಅವರಿಗೆ ಯಂತ್ರ ಚಾಲಕರು ಯಾರೆಂಬುದು ಗೊತ್ತಿಲ್ಲ. ನಾವು ಅದನ್ನೇ ಬೋಧಿಸುತ್ತಿರುವುದು.

ವರದಿಗಾರ: ಸ್ವಾಮೀಜಿ, ನಿಮ್ಮ ಆಂದೋಲನ ಹೆಚ್ಚು ಗಮನಸೆಳೆದಿದೆ. ಏಕೆಂದರೆ ನಿಮ್ಮ ಆನೇಕ ಅನುಯಾಯಿಗಳು ಪಾಶ್ಚಾತ್ಯರು ಹೇಳುವಂತೆ ವಿಚಿತ್ರ ಉಡುಗೆ ತೊಡುತ್ತಾರೆ. ಈ ರೀತಿಯ ಉಡುಗೆ ತೊಡಲು ಏಕೆ ಅವರಿಗೆ ಹೇಳಿರುವಿರಿ? ರಸ್ತೆಯಲ್ಲಿ ಡ್ರಮ್ಮು ಬಳಸಲು/ನುಡಿಸಲು  ಆದೇಶಿಸಿರುವಿರಿ?

ಶ್ರೀಲ ಪ್ರಭುಪಾದ: ಅದು ನಮ್ಮ ಬೋಧನಾಕ್ರಮ. ಹೇಗಾದರೂ ಜನರ ಗಮನ ಸೆಳೆಯುವುದು. ದೇವೋತ್ತಮ ಪರಮ ಪುರುಷನೊಂದಿಗೆ ಶಾಶ್ವತ ಬಾಂಧವ್ಯವನ್ನು ಪುನರ್‌ ಸ್ಥಾಪಿಸಿಕೊಳ್ಳಲು ಅವಕಾಶ ಕಲ್ಪಿಸಿದಂತೆ ಅದು.

ವರದಿಗಾರ: ರಸ್ತೆಯಲ್ಲಿ  ಈ ರೀತಿ ಪ್ರದರ್ಶನ ಮಾಡುವ ನಿಮ್ಮ ಶಿಷ್ಯರು ಪಾಶ್ಚಾತ್ಯರಿಗೆ ವಿಚಿತ್ರವಾಗಿ ಕಾಣುತ್ತಾರೆಂಬುದು ನಿಮಗೆ ತಿಳಿದೇ ಇದೆ. ಅದರ ಬಗೆಗೆ ಏನು ಹೇಳುವಿರಿ?

ಶ್ರೀಲ ಪ್ರಭುಪಾದ: ನಿಜ, ಅವರು ವಿಚಿತ್ರವಾಗಿ ಕಾಣಬಹುದು. ಏಕೆಂದರೆ ಅವರು ಆಧ್ಯಾತ್ಮಿಕವಾಗಿ ಕೆಲಸ ಮಾಡುತ್ತಿದ್ದಾರೆ. ಲೌಕಿಕ ವ್ಯಕ್ತಿಗಳಿಗೆ ನಾವು ವಿಚಿತ್ರವಾಗಿ ಕಾಣಬಹುದು.

ವರದಿಗಾರ: ಆಧ್ಯಾತ್ಮಿಕವಾಗಿರಲು ಈ ಅಭಿವ್ಯಕ್ತಿ ಒಂದೇ ಮಾರ್ಗವೇ?

ಶ್ರೀಲ ಪ್ರಭುಪಾದ: ಇಲ್ಲ. ಅದಕ್ಕಿಂತ ಹೆಚ್ಚಿನದಿದೆ. ಉದಾಹರಣೆಗೆ, ನಮ್ಮಲ್ಲಿ ಅನೈತಿಕ ಲೈಂಗಿಕ ಕ್ರಿಯೆ ಇಲ್ಲ, ನಾವು ಮಾಂಸ ಭಕ್ಷಿಸುವುದಿಲ್ಲ, ಮದ್ಯವಿಲ್ಲ.  ನಮ್ಮಲ್ಲಿ ಜೂಜು ಇಲ್ಲ.

ವರದಿಗಾರ: ಆದರೆ, ಸ್ವಾಮೀಜಿ ನಾನು ಹೇಳುವುದೇನೆಂದರೆ , ಈ ರೂಪದಲ್ಲಿ – ಈ ರೀತಿ ವೇಷಭೂಷಣ, ಡ್ರಮ್‌ ಬಳಸುವುದು, ಮತ್ತು ರಸ್ತೆಯಲ್ಲಿ ನರ್ತಿಸುವುದು, ಆಧ್ಯಾತ್ಮಿಕಕ್ಕೆ ಇದು ಮಾತ್ರ ಮಾರ್ಗವೇ?

ಶ್ರೀಲ ಪ್ರಭುಪಾದ: ಅಲ್ಲ.  ನಾವು ಸುಮಾರು 70 ಪುಸ್ತಕಗಳನ್ನು ಪ್ರಕಟಿಸಿದ್ದೇವೆ. (ವೇದ ಸಾಹಿತ್ಯ ಕುರಿತಂತೆ ಶ್ರೀ ಪ್ರಭುಪಾದರ ಭಾಷಾಂತರಗಳು, ವ್ಯಾಖ್ಯಾನಗಳು). ಈ ಆಂದೋಲನದ ಬಗೆಗೆ ವಿಜ್ಞಾನ, ತತ್ತ್ವಶಾಸ್ತ್ರದ ಮೂಲಕ ಅರಿಯಬೇಕೆಂದಿದ್ದರೆ, ನಿಮಗೆ ನಮ್ಮ ಗ್ರಂಥಗಳಿವೆ. ನಮ್ಮ ಪುಸ್ತಕಗಳನ್ನು ನೋಡಿಲ್ಲವೇ?

ವರದಿಗಾರ: ಹೌದು, ನೋಡಿದ್ದೇನೆ. ಆದರೆ, ಈ ರೀತಿ ವೇಷ ತೊಡದೆ ಹಾಗೂ ರಸ್ತೆಯಲ್ಲಿ ನರ್ತಿಸದೆ ಜನರು ಆಧ್ಯಾತ್ಮಿಕವಾಗುವುದು ಸಾಧ್ಯವಿಲ್ಲವೇ?

ಶ್ರೀಲ ಪ್ರಭುಪಾದ: ಖಂಡಿತ, ಸಾಧ್ಯ.  ನೀವು ಧರಿಸಿರುವ ಉಡುಗೆಯಲ್ಲೇ ನೀವು ಆಧ್ಯಾತ್ಮಿಕರಾಗಬಹುದು. ಪುಸ್ತಕಗಳಿಂದ ನೀವು ಆಧ್ಯಾತ್ಮಿಕ ಬದುಕಿನ ಬಗೆಗೆ ಅರಿಯಬೇಕು. ವೇಷ ಭೂಷಣವೇ ಮುಖ್ಯವಲ್ಲ. ಆದರೂ ಲೌಕಿಕ ಜಗತ್ತಿನಲ್ಲಿ ಒಬೊಬ್ಬರು ಒಂದೊಂದು ರೀತಿ ಉಡುಗೆ ತೊಡುತ್ತಾರೆ.

ವರದಿಗಾರ: ನಾವು, ಸಾಮಾನ್ಯರು ಧರಿಸುವ ಉಡುಗೆ ಎಲ್ಲ ವಲಯದಲ್ಲಿಯೂ ಸಂಚರಿಸುವಂತೆ ಮಾಡುತ್ತದೆ. ಆದರೆ ನಿಮ್ಮ ಶಿಷ್ಯರು ತೊಡುವ ಉಡುಗೆ. . .

ಶ್ರೀಲ ಪ್ರಭುಪಾದ: ವಿಷಯವೇನೆಂದರೆ, ಒಂದು ನಿರ್ದಿಷ್ಟ ಕೆಲಸ ನಿರ್ವಹಿಸುವವರು ಬೇರೆ ಬೇರೆ ರೀತಿಯ ವಸ್ತ್ರ ತೊಡಬಹುದು. ಉದಾಹರಣೆಗೆ, ಪೊಲೀಸ್‌ ವಸ್ತ್ರ ಭಿನ್ನ. ಅವನು ಪೊಲೀಸ್‌ ಎಂದು ಬೇರೆಯವರು ಗುರ್ತಿಸುವುದು ಸುಲಭವಲ್ಲವೇ? ಅದೇ ರೀತಿ ನಾವು ಭಿನ್ನ ಉಡುಗೆ ತೊಟ್ಟಿದ್ದೇವೆ. ಇದರಿಂದ ಎಲ್ಲರಿಗೂ ನಾವು ಹರೇ ಕೃಷ್ಣದವರೆಂದು ತಿಳಿಯುತ್ತದೆ.

ಎರಡನೆಯ ವರದಿಗಾರ: ಸ್ವಾಮಿ, ಒಮ್ಮೆ ನಾನು ನಿಮ್ಮ ಆಂದೋಲನ ಕುರಿತಂತೆ ಟೆಲಿವಿಷನ್‌ ಕಾರ್ಯಕ್ರಮ ನೋಡಿದೆ. ಅಲ್ಲಿ ಏನು ಹೇಳಿದರೆಂದರೆ, ಪುರುಷರು ಆದೇಶಿಸುತ್ತಾರೆ, ಮಹಿಳೆಯರು ಪಾಲಿಸುತ್ತಾರೆ. ಇದು ನಿಜವೇ?

ಶ್ರೀಲ ಪ್ರಭುಪಾದ: ಅಗತ್ಯವಿಲ್ಲ. ನಾವು ಶ್ರೀ ಕೃಷ್ಣನ ನಿರ್ದೇಶನದ ಭಗವದ್ಗೀತೆಯನ್ನು ಅನುಸರಿಸುತ್ತೇವೆ. ಅದು ಸ್ತ್ರೀ ಪುರುಷರಿಬ್ಬರಿಗೂ ಅನ್ವಯಿಸುತ್ತದೆ.

ಎರಡನೆಯ ವರದಿಗಾರ: ಆದರೂ, ಪುರುಷರು ಸ್ತ್ರೀಯರಿಗಿಂತ ಮೇಲೆ ಎಂದು ಪರಿಗಣಿಸಲಾಗಿದೆಯೇ?

ಶ್ರೀಲ ಪ್ರಭುಪಾದ: ಹೌದು, ಸ್ವಾಭಾವಿಕವಾಗಿ. ಸಹಜವಾಗಿ ಮಹಿಳೆಯರಿಗೆ ಪುರುಷನ ರಕ್ಷಣೆ ಬೇಕು – ಬಾಲ್ಯದಲ್ಲಿ ತಂದೆಯಿಂದ, ಅನಂತರ ಗಂಡನಿಂದ ಮತ್ತು ವೃದ್ಧಾಪ್ಯದಲ್ಲಿ ಹಿರಿಯ ಗಂಡು ಮಕ್ಕಳಿಂದ ರಕ್ಷಿಸಲ್ಪಡುತ್ತಾಳೆ. ಅದು ಸ್ವಾಭಾವಿಕ.

ಎರಡನೆಯ ವರದಿಗಾರ: ಅದು ಅಮೆರಿಕನ್ನರ ಆಲೋಚನೆಗೆ ವಿರುದ್ಧವಾಗಿದೆ. ನಿಮಗದು ಗೊತ್ತೆ?

ಶ್ರೀಲ ಪ್ರಭುಪಾದ: ಅಮೆರಿಕದಲ್ಲಿ, ಇರಬಹುದು. ಆದರೆ ಇದು ಸ್ವಾಭಾವಿಕ ಪರಿಸ್ಥಿತಿ. ಮಹಿಳೆಯರಿಗೆ ರಕ್ಷಣೆಯ ಅಗತ್ಯವಿದೆ.

ಮೂರನೆಯ ವರದಿಗಾರ: ಸ್ವಾಮೀಜಿ, ನಿಮ್ಮ ಎಲ್ಲ ಶಿಷ್ಯರು ಅತ್ಯುನ್ನತ ಸತ್ಯವನ್ನು ಮನಗೊಳ್ಳುವ ಸಾಧ್ಯತೆಗಳಿವೆಯೇ?

ಶ್ರೀಲ ಪ್ರಭುಪಾದ: ಅವರಲ್ಲಿ ಈಗಾಗಲೇ ಇದೆ.

ಮೂರನೆಯ ವರದಿಗಾರ: ಈಗಾಗಲೇ ಇದೇ?

ಶ್ರೀಲ ಪ್ರಭುಪಾದ: ಖಂಡಿತ. ನಿಮಗೆ ಬೇಕೆಂದರೆ ನಾನು ನಿಮಗೂ ಅದನ್ನು ಹಂಚಬಹುದು. ಅತ್ಯುನ್ನತ ಸತ್ಯವೆಂದರೆ, ನಮ್ಮ ನಿಮ್ಮಂತೆ ದೇವರೂ ವ್ಯಕ್ತಿಯೇ. ಈ ಒಬ್ಬ ವ್ಯಕ್ತಿಯ ಮತ್ತು ನಮ್ಮೆಲ್ಲರ ಮಧ್ಯೆ ಇರುವ ವ್ಯತ್ಯಾಸವೇನು? ಇದೇ ವ್ಯತ್ಯಾಸ – ಅವನು ನಮ್ಮೆಲ್ಲರನ್ನು ಪೋಷಿಸುತ್ತಾನೆ, ನಾವು ಅವನಿಂದ ಪಾಲಿಸಲ್ಪಟ್ಟಿದ್ದೇವೆ. ಆದರೆ ಅವನೂ ನಮ್ಮ ನಿಮ್ಮಂತೆ ವ್ಯಕ್ತಿಯೇ, ನಾನು ಹೇಳುವುದು ಅರ್ಥವಾಯಿತಾ?

ಮೂರನೆಯ ವರದಿಗಾರ: ಹಾ, ನನಗೆ ತಿಳಿಯಿತು.

ಶ್ರೀಲ ಪ್ರಭುಪಾದ: ಆದುದರಿಂದ ನನ್ನ ಶಿಷ್ಯರು ಈಗಾಗಲೇ ಅತ್ಯುನ್ನತ ಸತ್ಯವನ್ನು ಅರಿತುಕೊಂಡುಬಿಟ್ಟಿದ್ದಾರೆ. ಇಲ್ಲವಾದರೆ, ಅವರು ಏಕೆ ನನ್ನಂಥ ಗುರುವಿನ ಹಿಂದೆ ಬರುತ್ತಿದ್ದರು? ನಾನು ಬಡ ಭಾರತೀಯ. ಅವರು ಏಕೆ ನನ್ನನ್ನು ಅನುಸರಿಸುತ್ತಿದ್ದಾರೆ?  ಅವರು ಅಮೆರಿಕನ್ನರು. ಅವರು ಶ್ರೀಮಂತರು. ನಾನು ಅವರಿಗೆ ಆಮಿಷ ತೋರುವುದು ಹೇಗೆ? ಈ ಯುವ ಜನರು, ವಿದ್ಯಾವಂತರು, ಅರ್ಹತೆ ಉಳ್ಳವರು. ಅವರು ಯಾಕೆ ನನ್ನನ್ನು ಹಿಂಬಾಲಿಸುತ್ತಿದ್ದಾರೆ?  ಅವರು ಉನ್ನತ ಜ್ಞಾನ ಪಡೆದಿಲ್ಲದಿದ್ದರೆ ನನ್ನನ್ನು ಏಕೆ ಅನುಸರಿಸುತ್ತಾರೆ?

ನಾಲ್ಕನೆಯ ವರದಿಗಾರ: ಸ್ವಾಮೀಜಿ, ದಯೆಯಿಟ್ಟು , ಇಲ್ಲೊಂದು ಪ್ರಶ್ನೆ. ನನಗೆ ಅನಿಸುತ್ತದೆ, ಬಹುಶಃ ಇತರ ಸಹಾನುಭೂತಿ ವೀಕ್ಷಕರದೂ, ಏನೆಂದರೆ ನೀವು ನಿಮ್ಮ  ಆಧ್ಯಾತ್ಮಿಕ ಮಕ್ಕಳಿಗೆ ಕೃಷ್ಣ ಪ್ರಜ್ಞೆ ಆಂದೋಲನದ ಹೃದಯಾಂತರಾಳದಲ್ಲಿ ಹೋಗುವಂತೆ ಗುರಿ ರೂಪಿಸಿದ್ದೀರಂತೆ. ಆದರೆ, ನನಗೆ ತಿಳಿದಂತೆ ಅವರು ಆಸ್ಪತ್ರೆಗಳಂತಹ ಕಡೆ ಕೆಲಸ ಮಾಡುವುದಿಲ್ಲ.  ಅಥವಾ `ಹೊರ ಜಗತ್ತಿ’ ನಲ್ಲಿ ಸೇವೆ ಸಲ್ಲಿಸುವುದಿಲ್ಲ. ಅವರು ದೇವಸ್ಥಾನದಲ್ಲಿ ಉಚಿತ ಊಟ ಹಂಚುವುದು ಅಥವಾ ಶ್ರೀಕೃಷ್ಣನ ವಚನವನ್ನು ಬೋಧಿಸುವುದು ಮಾತ್ರ ಮಾಡುತ್ತಾರಷ್ಟೆ.

ಶ್ರೀಲ ಪ್ರಭುಪಾದ: ನನ್ನ ಅನೇಕ ಶಿಷ್ಯರು ಸಾಮಾನ್ಯ ವೃತ್ತಿ ರಂಗದಲ್ಲಿ ದುಡಿಯುತ್ತಿದ್ದಾರೆ. ಆದರೆ ನಿಜವಾದ ಸೇವೆ ಏನೆಂಬುದು ನಿಮಗೆ ಗೊತ್ತೆ?

ನಾಲ್ಕನೆಯ ವರದಿಗಾರ: ಇದಕ್ಕೆ ನಿಮ್ಮಿಂದ ಉತ್ತರ ಬರಬೇಕು, ನನ್ನಿಂದ ಅಲ್ಲ.

ಶ್ರೀಲ ಪ್ರಭುಪಾದ: ನೀವು ಆಸ್ಪತ್ರೆ ಪ್ರಾರಂಭಿಸಿದಿರಿ ಎಂದುಕೊಳ್ಳಿ. ನೀವು ಕೆಲ ರೋಗಗಳನ್ನು ಸದ್ಯಕ್ಕೆ ಗುಣಪಡಿಸಬಹುದು. ಆದರೆ ಸಾಯುವುದೇ ಇಲ್ಲ ಎಂದು ನೀವು ರೋಗಿಗೆ ಭರವಸೆ ನೀಡುವುದು ಸಾಧ್ಯವೇ?  ಅವನನ್ನು ಸಾವಿನಿಂದ ರಕ್ಷಿಸಬಲ್ಲಿರಾ? ನಿಮ್ಮ ಎಲ್ಲ ದೊಡ್ಡ ಆಸ್ಪತ್ರೆಗಳಿದ್ದರೂ ನೀವು ಸಾವು, ಬದುಕು, ವೃದ್ಧಾಪ್ಯ, ರೋಗಗಳಿಂದ ಮಾನವರನ್ನು ರಕ್ಷಿಸಬಲ್ಲಿರಾ? ನಿಮಗಿದು ಸಾಧ್ಯವೇ?

ನಾಲ್ಕನೆಯ ವರದಿಗಾರ: ದೈಹಿಕವಾಗಿ, ಸಾಧ್ಯವಿಲ್ಲ. ಆದರೆ ಆಧ್ಯಾತ್ಮಿಕವಾಗಿ ಸಾಧ್ಯ.

ಶ್ರೀಲ ಪ್ರಭುಪಾದ: ಆದುದರಿಂದ ನಾವು ಅದನ್ನು ನೀಡುತ್ತಿದ್ದೇವೆ – ಎಲ್ಲಿ ಸಾವಿಲ್ಲವೋ, ಹುಟ್ಟಿಲ್ಲವೋ, ವೃದ್ಧಾಪ್ಯವಿಲ್ಲವೋ ಹಾಗೂ ರೋಗ ರುಜಿನಗಳಿಲ್ಲವೋ ಅಲ್ಲಿಗೆ, ದೇವೋತ್ತಮ ಪರಮ ಪುರುಷನ ಸಾಮ್ರಾಜ್ಯಕ್ಕೆ ಅವರು ಮರಳುವಂತೆ ಮಾಡುವ ಪ್ರಕ್ರಿಯೆಯನ್ನು ಒದಗಿಸುತ್ತೇವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi