ಜಗತ್ತಿನ ಯುವಜನತೆಗೆ ಧೈರ್ಯ, ಆತ್ಮಸ್ಥೆರ್ಯ, ಪ್ರಚಂಡ ಶಕ್ತಿ ಹಾಗೂ ಕೃಷ್ಣಭಕ್ತಿಯ ಮಹಾನ್ ಪ್ರೇರಣೆ ನೀಡಿದ ಶತಮಾನ ಸಾಧಕ
– ವಿದ್ಯಾವಾಚಸ್ವತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ
ಶ್ರೀಕೃಷ್ಣನನ್ನು ಭಾಗವತವನ್ನು ಸಜ್ಜನರ ಹೃದಯದಲಿರಿಸಿ ಸಂಸ್ಕೃತಿಯ ಬೋಧ ಗೀತಾರ್ಥಶೋಧ ಭಕ್ತಿರಸಗಂಗೆ ಹರಿಸಿ ಭಾರತದ ಧರ್ಮ ವೇದಗಳ ಮರ್ಮ ಆದರ್ಶ ಕರ್ಮ ಸುರಿಸಿ ಜಗದೆತ್ತರಕ್ಕೆ ಮುಗಿಲೆತ್ತರಕ್ಕೆ ಬೆಳೆದಾತ ಬಂದು ಬೆಳಕಾದಿರಿ ನಮ್ಮ ಹರಸಿ ಪ್ರಭುಪಾದ ನೀವು ನೋಡಿದರೆ ಸಾಕು ತೆರಳುವುವು ನಮ್ಮ ನೋವು ಕೃಷ್ಣಭಕ್ತಿಯಲಿ ನಿತ್ಯ ಚಿಂತನಕೆ ಬರದಿರದು ಎಂದೂ ಸಾವು ಆಧುನಿಕ ಶುಕರಾಗಿ ಸರ್ವಜ್ಞಮುಖರಾಗಿ ತೋರಿದಿರಿ ಕೃಷ್ಣನನ್ನು ಪಾಶ್ಚಾತ್ಯಮನದ ಯುವಜನರಿಗೆಲ್ಲ ತೊಡಿಸಿದಿರಿ ವಿಷ್ಣುವನ್ನು̤

ಎತ್ತಲೂ, ಸುತ್ತಲೂ, ಕತ್ತಲೋ ಕತ್ತಲು, ಕಗ್ಗತ್ತಲು, ಕಣ್ಣುಕುಕ್ಕುವ ಕಗ್ಗತ್ತಲು ಹಮ್ಮಿಕೊಂಡಿದ್ದಾಗ, ತಿಳಿವು ಹೊಳವುಗಳ ಅಳಿವು ಆಗುವ ಪ್ರಸಂಗ ಧಾವಿಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಕತ್ತಲು ಸರಿಯಿತು, ಬೆಳಕು ಹರಿಯಿತು, ಬರೀ ಬೆಳಗಲ್ಲೋ ಅಣ್ಣ, ಪ್ರಜ್ಞಾಲೋಕದ ಜ್ಞಾನ ಪ್ರವಾಹ ಮಿಂಚಿನ ಗೊಂಚಲು ಗೊಂಚಲುಗಳಾಗಿ ದೇವಲೋಕದಿಂದ ಮಾನುಷರೂಪ ಪಡೆದು ಮೂಡಿ ಬಂತು.
ಭುವನದ ಜನರಿಗೆಲ್ಲ ಕೃಷ್ಣಭಕ್ತಿಯ ಅದ್ಭುತ ಬೆಳಕನ್ನು ನೀಡಬಲ್ಲ ಜ್ಞಾನಸೂರ್ಯರಾಗಿ ಆ ವ್ಯಕ್ತಿ ಇಲ್ಲಿ ಭೂಮಂಡಲದಲ್ಲಿ ಅವತರಿಸಿದರು. ಅಜ್ಞಾನದ ಅಂಧಕಾರದಲ್ಲಿ ತೊಳಲಾಡುತ್ತಿದ್ದ ಲಕ್ಷಲಕ್ಷಜನರ ಒಳಗಣ್ಣು ತೆರೆಸಿದರು. ದೇಶದೇಶಗಳ ಮೇಧಾವಿ ಸಮುದಾಯ ಪುನರ್ಚಿಂತನೆ ನಡೆಸುವಂತೆ ಪ್ರೇರಣೆ ನೀಡಿದರು. ಅದರ ಫಲವಾಗಿ ಜಗತ್ತಿನಾದ್ಯಂತ ನಾನಾ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ಅರಿಷಡ್ವರ್ಗಗಳನ್ನು ದೂರ ಸರಿಸಿದರು.
ಸಪ್ತವ್ಯಸನಗಳನ್ನು ಬಿಟ್ಟರು. ಅಷ್ಟಮದಗಳನ್ನು ಮೆಟ್ಟಿ ನಿಂತರು. ನಾರಾಯಣನಾಮ ಪಾರಾಯಣದ ಮಹತ್ವ ಅರಿತು ಕೃಷ್ಣಪ್ರೇಮಪ್ರವಾಹದ ಪ್ರಭಾವದಲ್ಲಿ ಮಹಾನ್ ಚೈತನ್ಯ ಪಡೆದುಕೊಂಡರು, ಅವರೆಲ್ಲ. ಕೃಷ್ಣ ಮಂತ್ರದ ಜಪವನ್ನು ಹತ್ತಾರು ರಾಷ್ಟ್ರಗಳ ಕೋಟಿ ಕೋಟಿ ಜನ ಶ್ರದ್ಧಾಭಕ್ತಿಗಳಿಂದ ಮಾಡುವಂತೆ ಸಂಮೋಹಿನೀ ಪ್ರಯೋಗಮಾಡಿದ ಜಗತ್ತಿನ ಶ್ರೇಷ್ಠ ಕೃಷ್ಣಭಕ್ತರೇ ಸ್ವಾಮಿ ಪ್ರಭುಪಾದರು.
1997ರ ಏಪ್ರಿಲ್ 22, ಅಮೆರಿಕಾದ ಲಾಸ್ ಏಂಜಲೀಸ್ನ ಡಾ.ಶ್ರೀನಿವಾಸಮೂರ್ತಿ ಹಾಗೂ ಮಾಲತಿಯವರ ಸ್ವಗೃಹದಲ್ಲಿ ಕಾರ್ಯಕ್ರಮ ‘ಪುರಂದರ ಸ್ಮರಣೆ’, ವ್ಯವಸ್ಥೆಯಾಗಿತ್ತು. ‘ನಾನು ಪುರಂದರದಾಸರ ಜೀವನ ದರ್ಶನ-ಸಾಧನ ಕುರಿತು ಮಾತನಾಡಬೇಕು, ಲಾಸ್ ಏಂಜಲೀಸನ್ ಹರೇಕೃಷ್ಣ ದೇವಸ್ಥಾನದ ನಿರಂತರದಾಸ್ ಅಧ್ಯಕ್ಷತೆ ವಹಿಸುತ್ತಿದ್ದು, ಅಮೆರಿಕನ್ ಕೃಷ್ಣಭಕ್ತರೂ ಇರುವುದರಿಂದ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರೆ ಅರ್ಥಪೂರ್ಣವಾಗಿರುತ್ತದೆ.’ ಎಂದು ಶ್ರೀನಿವಾಸಮೂರ್ತಿ ಸಲಹೆ ಇತ್ತರು.
ಸಮಯಕ್ಕೆ ಸರಿಯಾಗಿ ನಿರಂತರ ದಾಸ್ ಆಗಮಿಸಿದರು. ಆಜಾನುಬಾಹು ಅಮೆರಿಕನ್ ಯುವಕ. ಸಂಪೂರ್ಣ ಭಾರತೀಯ ಕೃಷ್ಣಭಕ್ತನ ಉಡುಗೆ ತೊಟ್ಟು ಗೋಪೀ ಚಂದನ ಧರಿಸಿ, ಜಪಮಾಲೆಯ ಚೀಲ ಹಿಡಿದು ಬಂದ ಅವರು ಕೃಷ್ಣನ ಭಾವಚಿತ್ರಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು.
ನನ್ನ ಉಪನ್ಯಾಸ ಒಂದೂವರೆ ಘಂಟೆಗಳ ಕಾಲನಡೆದು ಆನಂತರ ಅವರ ಅಧ್ಯಕ್ಷ ಭಾಷಣದಲ್ಲಿ ಅವರು ತಿಳಿಸಿದ ಅಂಶ ಆಶ್ಚರ್ಯತಂದಿತ್ತು. ಅವರು ಪಾಶ್ಚಾತ್ಯ ಸಂಗೀತದ ಅತ್ಯಂತ ಜನಪ್ರಿಯ ಸಂಗೀತಗಾರರಾಗಿದ್ದು, ಯುರೋಪ್ ಹಾಗೂ ಅಮೆರಿಕಾದಲ್ಲಿ ಅಪಾರ ಹೆಸರುಗಳಿಸಿದ್ದ ವ್ಯಕ್ತಿ.
ಆದರೆ ಪ್ರಭುಪಾದರ ಕೃಷ್ಣಭಕ್ತಿ ಸಂಸ್ಕೃತಿ, ಅದಕ್ಕೆ ಹೆಚ್ಚಾಗಿ ಕೃಷ್ಣನಾಮ ಸಂಕೀರ್ತನೆ ಅವರಲ್ಲಿ ಮಹಾನ್ ಪರಿವರ್ತನೆ ತಂದವು. ಕೃಷ್ಣ ದೇವಸ್ಥಾನದಲ್ಲಿ ಎಲ್ಲರೊಡನೆ ಕಣ್ಣುಮುಚ್ಚಿ ತಾದಾತ್ಮವಾಗಿ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ! ಎಂದು ಹೇಳುತ್ತಿರುವಂತೆಯೇ ಆತನ ಸಂಗೀತ ವಿದ್ಯೆಗೆ ಹೊಸದೊಂದು ವಿಲಕ್ಷಣವಾದ ಆಳ, ಅರ್ಥ ಹಾಗೂ ಸಾರ್ಥಕತೆ ಬಂದಂತೆ ಆತನಿಗೆ ಭಾಸವಾಗಿತ್ತು.
ತನ್ನ ಜೀವನದ ಗಳಿಕೆಯನ್ನೆಲ್ಲಾ ಹರೇಕೃಷ್ಣ ಸಂಸ್ಥೆಗೆ ಸಮರ್ಪಿಸಿ, ಧನ್ಯತೆಯನ್ನು ಕಂಡುಕೊಂಡ ನಿರಂತರ ದಾಸ್ ಒಂದು ಮಾತು ಹೇಳಿದರು. ‘ಬದುಕಿನ ಎಲ್ಲ ಆಸಕ್ತಿಗಳನ್ನೂ ಕಳೆದುಕೊಂಡು, ನಿಸ್ತೇಜರಾಗಿ ಜೀವಚ್ಛವದಂತಿದ್ದ ಸಹಸ್ರ ಸಹಸ್ರ ಅಮೆರಿಕನ್ ಯುವಜನತೆಯನ್ನು ಆಧ್ಯಾತ್ಮಿಕ ಮಾರ್ಗಕ್ಕೆ ಕರೆತಂದು ಹರೇಕೃಷ್ಣ ದೀಕ್ಷೆ ನೀಡಿ, ಹೊಸ ಉತ್ಸಾಹ, ವಿಶ್ವಾಸ, ಭರವಸೆ ಹಾಗೂ ದೈವಿಕ ಸಂಭ್ರಮವನ್ನು ತಂದುಕೊಟ್ಟಯುಗಪುರುಷ ಪೂಜ್ಯ ಶ್ರೀಲ ಪ್ರಭುಪಾದರು’ ಎಂದು ಅವರು ಹೇಳಿದರು.

2005ರ ಮೇನಲ್ಲಿ ನಾನು ಲಾಸ್ ಎಂಜಲೀಸ್ ನಗರಕ್ಕೆ ಭೇಟಿಯಿತ್ತಾಗ, ಅಲ್ಲಿಯ ವುಡ್ ಲ್ಯಾಂಡ್ ಹಿಲ್ಸ್ ಪ್ರದೇಶದಲ್ಲಿರುವ ಶ್ರೀನಿವಾಸಮೂರ್ತಿಯವರ ಮನೆಯಲ್ಲಿ ನಿರಂತರದಾಸ್ ಅವರಿಂದ ಭಗವದ್ಗೀತೆಯ ಉಪನ್ಯಾಸವನ್ನು ವ್ಯವಸ್ಥೆ ಮಾಡಲಾಗಿತ್ತು. ನನ್ನನ್ನೂ ಆಹ್ವಾನಿಸಿದರು. ನಿರಂತರದಾಸ್ ಭಗವದ್ಗೀತೆಯ ಶ್ಲೋಕಗಳನ್ನು ಆಸ್ಖಲಿತವಾಗಿ ಹೇಳುತ್ತಾ, ಅನೇಕ ವ್ಯಾಖ್ಯಾನಗಳಿಂದ ಉದ್ಧರಿಸಿ, ಅತ್ಯಂತ ಪ್ರಬುದ್ಧವಾದ ಶಾಸ್ತ್ರೀಯ ಉಪನ್ಯಾಸ ನೀಡಿದರು.
ಈ ಪವಾಡ ನಿಮಗೆ ಹೇಗೆ ಸಾಧ್ಯವಾಯಿತು ಎಂದು ಅವರನ್ನು ಕೇಳಿದಾಗ, ‘ಎಲ್ಲ ಪ್ರಭುಪಾದರ ಅನುಗ್ರಹ – ಅವರ ದಯವಾದರೆ ಎಲ್ಲವೂ ಪ್ರಾಪ್ತಿಯಾಗುತ್ತದೆ.’ ಎಂದು ಉತ್ತರಿಸಿದರು ನಿರಂತರದಾಸ್, ಹಾಗೂ ನರಸಿಂಹ ಚತುರ್ದಶಿ ಮತ್ತು ರುಕ್ಕಿಣೀ ದ್ವಾದಶಿ ಕಾರ್ಯಕ್ರಮಗಳಿಗೆ ದೇವಾಲಯಕ್ಕೆ ನನ್ನನ್ನು ಆಹ್ವಾನಿಸಿದರು.
1999ರ ಆಗಸ್ಟ್ 14ರಂದು ಲಂಡನ್ನಿನ ಆಕ್ಸ್ಫರ್ಡ್ ರಸ್ತೆಯಲ್ಲಿ ಕೃಷ್ಣ ರಥೋತ್ಸವ ವ್ಯವಸ್ಥೆಯಾಗಿತ್ತು. ಲಂಡನ್ನಿನ ಅತ್ಯಂತ ಪ್ರತಿಷ್ಠಿತ ರಸ್ತೆಯಾದ ಆಕ್ಸ್ಫರ್ಡ್ ರಸ್ತೆಯಲ್ಲಿ ಸಹಸ್ರಸಹಸ್ರ ಜನ ನಿಂತು ವೀಕ್ಷಿಸುತ್ತಿದ್ದ ಆ ಮೆರವಣಿಗೆಯಲ್ಲಿ ಒಬ್ಬವ್ಯಕ್ತಿ ತಾದಾತ್ಮಚಿತ್ತದಿಂದ ಕೃಷ್ಣ ಸಂಕೀರ್ತನೆ ಮಾಡುತ್ತಾ ಕುಣಿಯುತ್ತಿದ್ದ.
ನನ್ನನ್ನು ಕಂಡೊಡನೆಯೇ ನೀವು ಭಾರತೀಯರಾ ಎಂದು ಪ್ರಶ್ನಿಸಿದ. ಹೌದು ಎಂದೊಡನೆಯೇ ಕೈಹಿಡಿದು ಉತ್ಸವದೊಳಗೆ ಕರೆದೊಯ್ದ ರಥ ಕೃಷ್ಣ ದೇವಾಲಯದ ಬಳಿ ಬಂದಾಗ, ಆ ಬ್ರಿಟಿಷ್ ಯುವಕ ದೇವಾಲಯದೊಳಗೆ ಕರೆದೊಯ್ದು ಅಚ್ಚರಿಯೆಂಬಂತೆ ಅಲ್ಲಿ ನನ್ನ ಪರಿಚಿತ ಗೆಳೆಯರಾದ ಡಾ.ಕುಮಾರ್ ಬಂದಿದ್ದರು.
ಸಂಭ್ರಮದಿಂದ ಬಂದ ಅವರು ನನ್ನನ್ನು ಆ ಬ್ರಿಟಿಷ್ ಯುವಕನಿಗೆ ಪರಿಚಯಿಸಿದರು. ಅವನು ತಾನು ಜಗನ್ಮೋಹನದಾಸ ಎಂದು ಪರಿಚಯಿಸಿಕೊಂಡ. ಮ್ಯಾಂಚೆಸ್ಟರ್, ಲಿವರ್ ಪೂಲ್, ಬರ್ಮಿಂಗ್ ಹ್ಯಾಂಗ್ಲ್ಲಿ ನಾನು ಭಾಗವತದ ಉಪನ್ಯಾಸ ಮಾಡಿದ ವಿಷಯವನ್ನು ಡಾ.ಕುಮಾರ್ ಅವನಿಗೆ ಹೇಳಿದರು.
ಪುಳುಕಿತನಾದ ಅವನು ‘ಜಾರ್ಜ್ ಹ್ಯಾರಿಸನ್ ರಂತಹ ಜಗತ್ಪ್ರಸಿದ್ಧ ಸಂಗೀತಗಾರರು ಪ್ರಭುಪಾದರ ಪಾದಕ್ಕೆ ಬಂದು ಪ್ರಭಾವಿತರಾಗಿ ಹರೇಕೃಷ್ಣ ಧ್ವನಿ ಮುದ್ರಿಕೆಗಳ ಮೂಲಕ ಇಂಗ್ಲಿಷಿನಲ್ಲಿ ಕೃಷ್ಣಭಕ್ತಿಯ ವ್ಯಾಪಕ ಪ್ರಸರಣವಾಗಲು ಹೇಗೆ ಕಾರಣನಾದರು ಎಂಬುದನ್ನು ನಿರೂಪಿಸಿದ.
ಅಷ್ಟೇ ಅಲ್ಲದೆ ಯಶಸ್ವೀ ಮ್ಯಾನೇಜ್ಮೆಂಟ್ ಪರಿಣತನಾಗಿದ್ದ ತನ್ನ ಬದುಕಿನಲ್ಲಿ ಆತ್ಮ ಸಂತೋಷ ಹಾಗೂ ಅಲೌಕಿಕ ಸುಖಗಳು ಲಭ್ಯವಾಗಿದ್ದು, ಇದೀಗ ನೂರಾರು ಯುರೋಪಿಯನ್ ಯುವಕ ಯುವತಿಯರನ್ನು ಸ್ವಚ್ಛಂದತೆ ತಮೋಗುಣ, ಬೇಜವಾಬ್ದಾರಿ ಮತ್ತು ಅರ್ಥಹೀನ ಬದುಕಿನ ದಾರಿಯಿಂದ ಕೃಷ್ಣಪ್ರಜ್ಞೆಯ ದಾರಿಗೆ ಕರೆತಂದು ಅವರ ಹೃದಯಗಳಲ್ಲಿ ಮನಸ್ಸುಗಳಲ್ಲಿ ಇದ್ದ ಎಲ್ಲ ಕಲಿ ಕಲ್ಮಷ ಸಂಗತಿಗಳನ್ನು ನಿವಾರಿಸಿ, ಇಂಗ್ಲೆಂಡಿನ ಊರು ಊರುಗಳಲ್ಲಿ ಕೃಷಭಕ್ತಿ ಪ್ರಸರಣವಾಗುತ್ತಿರುವ ಬಗ್ಗೆ ತಿಳಿಸಿದ.
ಇಂಗ್ಲೆಂಡ್ ಹಾಗೂ ಯುರೋಪಿನ ಈ ಶುಭೋದಯದ ನವತಾರೆ ಪ್ರಭುಪಾದರು ಎಂದು ಹೇಳಿದ.
ಸ್ವಿಟ್ಜರ್ಲ್ಯಾಂಡ್ ಜ್ಯೂರಿಕ್ ನಲ್ಲಿ 2001ರ ಸೆಪ್ಟೆಂಬರ್ 27ರಂದು ಬೆಳಗಿನ ಕಾರ್ಯಕ್ರಮಕ್ಕಾಗಿ ಅಲ್ಲಿ ಎಬಿಬಿ ಸಂಸ್ಥೆಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿರುವ ಪ್ರಹ್ಲಾದ ಕುಲಕರ್ಣಿ, ಅಲ್ಲಿಯ ಹರೇಕೃಷ್ಣ ದೇವಸ್ಥಾನಕ್ಕೆ ಕರೆದೊಯ್ದರು. ಬರ್ಗ್ ಸ್ಟ್ರಾಪ್ ಬಡಾವಣೆಯ ಐವತ್ನಾಲ್ಕನೆಯ ಸಂಖ್ಯೆಯ ಆ ದೇವಾಲಯದೊಳಗೆ ಪ್ರವೇಶಿಸಿದೊಡನೆಯೇ ನೂರಾರು ಜನ ಯುರೋಪಿಯನ್ ಕೃಷ್ಣಭಕ್ತರು ಪ್ರಶಸ್ತ ಪರಿಸರ ನಿರ್ಮಿಸಿದ್ದು ಕಂಡು ಬಂದಿತು.

ಅಲ್ಲಿಯ ಪ್ರಧಾನ ನಿರ್ವಹಣೆಯ ಹೊಣೆ ಹೊತ್ತಿದ್ದ ಕೃಷ್ಣಚಂದ್ರದಾಸ್ ಅವರು ನನ್ನನ್ನು ಸ್ವಾಗತಿಸಿದರು. ಅವರು ಜರ್ಮನ್ಮೂಲದವರು. ಶಿಸ್ತಿನಿಂದ ಕುಳಿತಿದ್ದ ಎಲ್ಲರೂ ಧ್ಯಾನಮಗ್ನರಾದರು. ಕೃಷ್ಣಚಂದ್ರದಾಸ್ ಅವರು ಪ್ರಾರ್ಥನಾ ಶ್ಲೋಕವಾಗಿ –
ನಮೋ ಓಂ ವಿಷ್ಣುಪಾದಾಯ ಕೃಷ್ಣಪ್ರೇಷ್ಠಾಯ ಭೂತಲೇ |
ಶ್ರೀಮತೇ ಭಕ್ತಿವೇದಾಂತ ಸ್ವಾಮಿನ್ ಇತಿ ನಾಮಿನೇ ||
ಎಂಬ ಶ್ಲೋಕ ಹೇಳಿದರು. ಒಂದು ದಿನ ‘ಪುರಂದರ ದಾಸರ ಕೃಷ್ಣಭಕ್ತಿ’ ಹಾಗೂ ಮೂರು ದಿನಗಳ ಕಾಲ ‘ಭಾಗವತದ ಭಕ್ತಿ ತತ್ತ್ವ’ದ ಬಗ್ಗೆ ನನ್ನ ಉಪನ್ಯಾಸಗಳು ವ್ಯವಸ್ಥೆಯಾದವು. ಭಾರತದ ಯಾವುದೇ ಹಿನ್ನಲೆಯಿಲ್ಲದ ನೂರಾರು ಜನ ಯೂರೋಪಿನ ಯುವ ಬ್ರಹ್ಮಚಾರಿಗಳು ಕೊರೆಯುವ ಸ್ವಿಟ್ಜರ್ ಲ್ಯಾಂಡಿನ ಆ ಪ್ರಚಂಡ ಚಳಿಯಲ್ಲಿ ಬೆಳಗಿನ ಝಾವ ಎರಡೂವರೆ ಘಂಟೆಗೆ ಎದ್ದು ತಮ್ಮ ದೈನಂದಿನ ದೈನಿಕ ಕಾರ್ಯಕ್ರಮಕ್ಕೆ ತೊಡಗುತ್ತಿದ್ದರು.
ಸೆಪ್ಟೆಂಬರ್ 2003ರ ಒಂದು ದಿನ. ಆಸ್ಟ್ರಿಯಾದ ಸುಪ್ರಸಿದ್ಧನಗರ ವಿಯನ್ನಾದಲ್ಲಿ ನಾನು ಮತ್ತು ನನ್ನ ಪತ್ನಿ ರಾಜಲಕ್ಷ್ಮಿ ಅಲ್ಲಿನ ಮೆರಿನಾ ಸ್ಕ್ವೇರ್ ಬಳಿ ನಡೆದು ಹೋಗುತ್ತಿದ್ದೆವು. ಜೊತೆಯಲ್ಲಿ ನನ್ನ ಮಗಳು ಕೀರ್ತಿ ಹಾಗೂ ಅಳಿಯ ಗಿರೀಶ್ ಸಹ ಇದ್ದರು. ಗಿರೀಶ್ ಅಲ್ಲಿಯೇ ಕೆಲಸ ಮಾಡುತ್ತಿದ್ದವರು.
ಇದ್ದಕ್ಕಿದ್ದಂತೆಯೇ 18 ವರ್ಷದ ಒಬ್ಬ ಆಸ್ಟ್ರಿಯನ್ ಯುವಕ ಬಂದು ಜರ್ಮನ್ ಭಾಷೆಯಲ್ಲಿ ನಮ್ಮೊಡನೆ ಮಾತಾಡತೊಡಗಿದ. ಅವನ ಕೈಗಳಲ್ಲಿದ್ದ ಚೀಲಗಳ ತುಂಬ ಪ್ರಭುಪಾದರ ಪುಸ್ತಕಗಳು ತುಳುಕುತ್ತಿದ್ದವು. ಜರ್ಮನ್ ನಮಗೆ ಅರ್ಥವಾಗುವುದಿಲ್ಲ ಎಂದು ಗೊತ್ತಾದೊಡನೆಯೇ ಅವನು ಹರಕು ಮುರುಕು ಇಂಗ್ಲೀಷ್ನಲ್ಲೇ ಮಾತನಾಡಿದ.
ಅವನ ಸೂಕ್ಷ್ಮತೆ, ಮೇಧಾಶಕ್ತಿ ಅಚ್ಚರಿ ತರುವಂತಿತ್ತು. ಅವನ ದೃಷ್ಟಿಯಲ್ಲಿ ಈ ಶತಮಾನದಲ್ಲಿ ನೆನಪಿನಲ್ಲಿ ಉಳಿಯಬೇಕಾದವರು ಇಬ್ಬರೇ. ಮನುಷ್ಯರು ಹೇಗೆ ಇರಬಾರದು ಎನ್ನುವುದಕ್ಕೆ ರಾಕ್ಷಸ ಸ್ವಭಾವದ ಹಿಟ್ಲರ್ ಒಂದು ಉದಾಹರಣೆಯಾದರೆ, ಜಗತ್ತಿನ ಪ್ರತಿವ್ಯಕ್ತಿ ಬದುಕು ಸಾರ್ಥಕವಾಗಬೇಕಾದರೆ ಹೇಗೆ ಬದುಕಬೇಕು ಎನ್ನುವುದಕ್ಕೆ ಸ್ವಾಮಿ ಪ್ರಭುಪಾದರು ನಿದರ್ಶನ ಎಂದ. ತನ್ನಂತಹ ನೂರಾರು ಯುವಕರು ಜರ್ಮನಿ, ಫ್ರಾನ್ಸ್ ಆಸ್ಟ್ರಿಯಾ, ರೋಮ್ಗಳಲ್ಲಿ ಕೃಷ್ಣಭಕ್ತಿಯನ್ನು ನಿರಂತರ ಪ್ರಚಾರ ಮಾಡುತ್ತಿರುವ ವಿಚಾರ ತಿಳಿಸಿದ.
2005ರ ಜನವರಿಯಿಂದ ಆಗಸ್ಟ್ವರೆಗೂ ಅಮೆರಿಕಾದ ಪ್ರತಿನಗರದಲ್ಲಿ ಕೃಷ್ಣಭಕ್ತಿ ಉತ್ಕರ್ಷವಾಗುತ್ತಿರುವುದನ್ನು ನಾನು ನನ್ನ ಪತ್ನಿ ಕಣ್ಣಾರೆ ಕಂಡೆವು. ಇಂದು ಅಮೆರಿಕಾದಾದ್ಯಂತ ನೂರಾರು ಕೃಷ್ಣದೇವಾಲಯಗಳು ಕಂಗೊಳಿಸುತ್ತಿದ್ದರೆ, ಅವುಗಳ ರೂಪ ಕಲ್ಪನೆಯನ್ನು ಕಂಡು ಕೃಷ್ಣಭಕ್ತಿಯ ಬೀಜವನ್ನು ಪ್ರಬಲವಾಗಿ ಬಿತ್ತಿದ್ದ ಪ್ರಭುಪಾದರಿಗೆ ಅದರ ಸಿಂಹಪಾಲು ಗೌರವ ಸಲ್ಲುತ್ತದೆ.
ಡೆಟ್ರಾಯಿಟ್ ನಗರದ ನದಿಯ ದಂಡೆಯಲ್ಲಿ ಹೆನ್ರಿಫೋರ್ಡ್ ಮೊಮ್ಮಗ ಕೃಷ್ಣಭಕ್ತನಾಗಿ ಅರಮನೆಯಂತಹ ಬೃಹತ್ ಸೌಧವನ್ನೇ ಕೊಂಡು ಅದನ್ನು ಕೃಷ್ಣ ದೇವಾಲಯವನ್ನಾಗಿ ಮಾಡಿರುವುದನ್ನು ಕಂಡೆವು. ಆ ದೇವಾಲಯದೊಳಗೆ ದಶಾವತಾರದ ಭವ್ಯಶಿಲಾಮೂರ್ತಿಗಳನ್ನು ಸುಂದರವಾಗಿ ಕೆತ್ತಿ ನಿಲ್ಲಿಸಿದ್ದಾರೆ.

ನಾನು ಅಲ್ಲಿಗೆ ಹೋಗಿದ್ದಾಗ, ಡೆಟ್ರಾಯಿಟ್ನ ಉದ್ಯಮಿಯೊಬ್ಬ ಕಾರಿನಲ್ಲಿ ಬಂದಿಳಿದ. ಒಳಗೆ ಬಂದು ಸಾಷ್ಟಾಂಗ ನಮಸ್ಕಾರ ಮಾಡಿ ದೇವರ ಮಂಗಳಾರತಿ, ತೀರ್ಥ ಸ್ವೀಕರಿಸಿದ. ನನ್ನನ್ನು ಕರೆದೊಯ್ದಿದ್ದ ಕೇಶವರಾವ್ ಆತನಿಗೆ ನನ್ನನ್ನು ಪರಿಚಯಿಸಿದರು. ಕುತೂಹಲಕ್ಕಾಗಿ ನಾನು ”ಕೃಷ್ಣಪ್ರಜ್ಞೆಯ ಹಿನ್ನಲೆಯಲ್ಲಿ ಯಾವ ಗ್ರಂಥಗಳನ್ನು ಓದಿದ್ದೀರಿ, ಇಂತಹ ಶ್ರೀಮಂತ ಆಟೋಮೊಬೈಲ್ ಉದ್ಯಮಿಯಾದ ನೀವು ಇಸ್ಕಾನ್ಗೆ ಆಕರ್ಷಿತರಾಗಲು ಕಾರಣವೇನು?’ ಎಂದು ಅವರನ್ನು ಪ್ರಶ್ನಿಸಿದೆ.
ನನಗೆ ಯಾವ ಶಾಸ್ತ್ರಜ್ಞಾನವೂ ಇಲ್ಲ, ಭಕ್ತಿಯಂತೂ ಮೊದಲೇ ಇಲ್ಲ. ಆದರೆ ಒಂದು ಶ್ರದ್ಧೆ ಇದೆ. ಕೃಷ್ಣ ನನಗೆ ಸಂತೋಷ, ಸಮಾಧಾನ ತಂದಿದ್ದಾನೆ. ಕಾಡುತ್ತಿದ್ದ ಒಂಟಿತನ ನಿವಾರಿಸಿದ್ದಾನೆ. ನಾನೀಗ ಒಬ್ಬಂಟಿಯಲ್ಲ. ಅನಂತಶಕ್ತಿಯೊಂದು ನನ್ನೊಳಗಿದೆ ಎನ್ನುವ ಭರವಸೆ ಈಗ ನನಗೆ ಬಂದಿದೆ.
ಈ ದೇಹ ಇರುವಾಗಲೇ, ಈ ಜನ್ಮದಲ್ಲೇ ನಾನು ಕೃಷ್ಣನ ಸಾಕ್ಷಾತ್ ದರ್ಶನ ಮಾಡುತ್ತೇನೆ ಎಂಬ ವಿಶ್ವಾಸ, ಭರವಸೆ, ಶ್ರದ್ಧೆ ನನಗಿದೆ. ಈ ಅದ್ಭುತ ಅಂತಃಶಕ್ತಿ ನೀಡಿದ ಮಹಾಪ್ರಭುಗಳೇ ಪ್ರಭುಪಾದರು. ಅವರು ಬರೆದಿರುವ ಭಾಗವತ ನನ್ನ ಕಣ್ಣು ತೆರೆಸಿತು ಎಂದು ಆ ವ್ಯಕ್ತಿ ಹೇಳುತ್ತಿದ್ದಾಗ ಆತನ ಕಣ್ಣು ಮಂಜಾಯಿತು.
ಪ್ರಭುಪಾದರು ಶತಮಾನ ಸಾಧಕರು. ಮನಸ್ಸುಗಳನ್ನು, ದೇವಾಲಯಗಳನ್ನು, ಕೃಷ್ಣ ಪ್ರಜ್ಞಾ ಕೇಂದ್ರಗಳನ್ನು ಸುಸಂಸ್ಕೃತ ವಿಶ್ವಜನಾಂಗವೊಂದನ್ನು ಅವರು ಕಟ್ಟಿದರು. ಆದರೆ ಅದಕ್ಕಿಂತ ಮುಖ್ಯವಾಗಿ ಮಂಗಳಕ್ಕೆ ಮಂಗಳವಾದ, ಪಾವನಕ್ಕೆ ಪಾವನವಾದ ಭಾಗವತ ಗ್ರಂಥರಾಶಿ ರಚಿಸಿದರು. ಭ್ರಮೆ ಹರಿಯುವ, ಮನಸ್ಸು, ಬುದ್ಧಿಶುದ್ಧವಾಗುವ, ಉತ್ತಮ ಜ್ಞಾನ ಲಭಿಸುವ, ಭಕ್ತಿಸಿದ್ಧಿಸುವ, ಆಡಿದ ಮಾತು ಮಂತ್ರವಾಗುವ ಮಹಾನ್ ಗ್ರಂಥ ಭಾಗವತವೆನ್ನುವುದನ್ನು ಪ್ರಭುಪಾದರು ಬರೆದು ತೋರಿಸಿದರು.
1896ರಲ್ಲಿ ಜನಿಸಿದ ಪ್ರಭುಪಾದರು ತಮ್ಮ ಗುರುಗಳಾದ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿಯವರನ್ನು 1922ರಲ್ಲಿ ಕಲ್ಕತ್ತನಗರದಲ್ಲಿ ಮೊದಲಬಾರಿಗೆ ಭೇಟಿ ಮಾಡಿದರು. ಅದೇ ಜೀವನದ ಮಹಾ ಸಾಧನೆಗಳಿಗೆ ಪ್ರೇರಣೆಯಾಯಿತು. ಆ ಗುರುಗಳಾದರೋ ಎಂತಹವರೆಂದರೆ ಅರವತ್ನಾಲ್ಕು ಗೌಡೀಯ ಮಠಗಳ ಸಂಸ್ಥಾಪಕರಾಗಿದ್ದವರು.
1933ರಲ್ಲಿ ಪ್ರಭುಪಾದರು ಅವರ ಶಿಷ್ಯರಾಗಿ ದೀಕ್ಷೆ ಸ್ವೀಕರಿಸಿ ತಮ್ಮ ಇಡೀ ಜೀವನವನ್ನು ವೈದಿಕ ಸಂಸ್ಕೃತಿಯ ಪುನರುತ್ಥಾನಕ್ಕೆ ಮೀಸಲಿಡುವುದಾಗಿ ಸಂಕಲ್ಪ ಮಾಡಿದರು. ಗುರುಗಳ ಅಪೇಕ್ಷೆಯಂತೆ ಇಂಗ್ಲಿಷ್ ಭಾಷೆಯಲ್ಲಿ ವೇದ ವಿಜ್ಞಾನ ಪ್ರಸರಣೆ ಪ್ರಾರಂಭಿಸಿದ ಅವರು ಭಗವದ್ಗೀತೆಗೆ ಇಂಗ್ಲಿಷ್ನಲ್ಲಿ ವ್ಯಾಖ್ಯಾನ ರಚಿಸಿದರು.
1944ರಲ್ಲಿ ಬ್ಯಾಕ್ ಟು ಗಾಡ್ ಹೆಡ್ ಇಂಗ್ಲಿಷ್ ಪಾಕ್ಷಿಕ ಪ್ರಾರಂಭಿಸಿದರು. ಆಶ್ಚರ್ಯದ ವಿಷಯವೆಂದರೆ ಆ ಪತ್ರಿಕೆಯ ಲೇಖನಗಳನ್ನು ಬರೆದು, ಅದನ್ನು ಕಂಪೋಸ್ ಮಾಡಿ, ಪ್ರೂಫ್ ನೋಡಿ, ತನ್ನ ಕೈಯಿಂದಲೇ ಮುದ್ರಿಸುತ್ತಿದ್ದ ಪ್ರಭುಪಾದರು ಒಂದೊಂದೇ ಪ್ರತಿಯನ್ನು ತಾವೇ ಕೊಂಡೊಯ್ದು ಹಂಚುತ್ತಿದ್ದರು. 1950ರಲ್ಲಿ ವಾನಪ್ರಸ್ಥಾಶ್ರಮಕ್ಕೆ ಬಂದ ಅವರು ವೃಂದಾವನದ ಕೃಷ್ಣ ತಾಣದಲ್ಲಿ ಅಧ್ಯಯನ-ಗ್ರಂಥ ರಚನೆ ಮುಂದುರಿಸಿದರು.
1959ರಲ್ಲಿ ಸಂನ್ಯಾಸ ಸ್ವೀಕರಿಸಿದರು. ರಾಧಾ-ದಾಮೋದರ ಪರಿಸರದ ಪ್ರಶಾಂತತೆಯಲ್ಲಿ ಭಾಗವತ ಪುರಾಣದ ವ್ಯಾಖ್ಯಾನಗಳ ರಚನೆಯನ್ನು ಪ್ರಾರಂಭಿಸಿದರು. ‘ಇತರೇ ಗ್ರಹಗಳತ್ತ ಸುಲಭ ಪ್ರಯಾಣ’ ಎಂಬ ಗ್ರಂಥವನ್ನೂ ಆಗಲೇ ರಚಿಸಿದರು.

ಭಾಗವತದ ಮೂರು ಸಂಪುಟಗಳ ರಚನೆಯಾದ ಮೇಲೆ 1965ರ ಸೆಪ್ಟೆಂಬರ್ನಲ್ಲಿ ಅಮೆರಿಕಾಕ್ಕೆ ಬಂದು ಪ್ರಭುಪಾದರು, ಅಲ್ಲಿಂದಾಚೆ ಐವತ್ತಕ್ಕೂ ಹೆಚ್ಚು ಸದ್ಗ್ರಂಥ ಉದ್ಗ್ರಂಥಗಳನ್ನು ರಚಿಸಿ ಜಗತ್ತಿನ ಮೇರುಕೃತಿ ರಚನೆಯ ಇತಿಹಾಸದಲ್ಲಿ ಸಕ್ರಮವಾಗಿ ವಿಕ್ರಮವನ್ನು ಸಾಧಿಸಿದರು. ನ್ಯೂಯಾರ್ಕ್ ನಗರಕ್ಕೆ ಬಂದಾಗ ಬರಿಗೈಯಲ್ಲಿ ಬಂದವರು ಪ್ರಭುಪಾದರು. ಮೊದಲ ಒಂದು ವರ್ಷ ಅಗ್ನಿಪರೀಕ್ಷೆಗಳನ್ನೆದುರಿಸಿದರು.
ಕೃಷ್ಣಭಕ್ತಿಯ ಉತ್ಕಟ ಶ್ರದ್ಧೆ, ವಿಶ್ವಾಸದಿಂದ ಬಂದ ಎಲ್ಲ ಕಷ್ಟ ನಷ್ಟ ಸಂಕಷ್ಟಗಳನ್ನು ನಿವಾರಿಸಿದರು. 1966ರ ಜುಲೈನಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘವನ್ನು ಪ್ರಾರಂಭಿಸಿದರು. 1972ರಲ್ಲಿ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಲ್ಲಿ ವೇದಪಾಠಕ್ರಮಗಳ ಆಧಾರದ ಮೇಲೆ ಪ್ರಾಥಮಿಕ ಹಾಗು ಮಾಧ್ಯಮಿಕ ಸ್ತರದ ಗುರುಕುಲ ವಿದ್ಯಾಭ್ಯಾಸಗಳನ್ನು ಪ್ರಾರಂಭಿಸಿದರು.
ಜಗತ್ತಿನ ಐವತ್ತಕ್ಕೂ ಹೆಚ್ಚು ಮುಖ್ಯ ಭಾಷೆಗಳಲ್ಲಿ ಪ್ರಭುಪಾದರ ಗ್ರಂಥಗಳು ಅನುವಾದವಾಗಿ ವಿಶ್ವಮನ್ನಣೆಯನ್ನು ಅವು ಗಳಿಸುವಲ್ಲಿ ಯಶಸ್ವಿಯಾಗಿವೆ. ತಮ್ಮ ಇಳಿವಯಸ್ಸಿನಲ್ಲೂ ಅಪಾರಕ್ರಮ, ಉತ್ಕಟ ಇಚ್ಛಾಶಕ್ತಿ, ಮಹೋನ್ನತವಾದ ಜ್ಞಾನಶಕ್ತಿ, ಮತ್ತು ಪರಮೋತ್ಕೃಷ್ಟವಾದ ಕೃಷ್ಣ ಭಕ್ತಿ ವಿಶ್ವಾಸಗಳಿಂದ ಹನ್ನೆರಡೇ ವರ್ಷಗಳಲ್ಲಿ ಹದಿನಾಲ್ಕು ಬಾರಿ ವಿಶ್ವ ಪರ್ಯಟನೆ ಮಾಡಿದ ಪ್ರಭುಪಾದರು ಆರು ಖಂಡಗಳಲ್ಲೂ ಕೃಷ್ಣಧ್ವಜ ಹಾರಿಸುವಲ್ಲಿ ಯಶಸ್ವಿಯಾದರು.
ಅಮೆರಿಕಾದ ಹಿಪ್ಪಿಗಳಿಗೆ, ಯುರೋಪಿನ ಸ್ವಚ್ಛಂದ ಪ್ರವೃತ್ತಿಯ ಗಾಯಕರಿಗೆ, ನಿರಾಶೆ-ಹತಾಶೆಗಳಿಂದ ನೊಂದು ಬೆಂದಿದ್ದ ಲಕ್ಷಲಕ್ಷ ಯುವಕ ಯುವತಿಯರಿಗೆ ಬೆಳಕಾಗಿ, ಬೆಳದಿಂಗಳಾಗಿ, ಸಾತ್ವಿಕತೆಯ ಆಶಾ ಕಿರಣವಾಗಿ, ಸಾಂತ್ವನವಾಗಿ ಬಂದವರೇ ಸ್ವಾಮಿ ಪ್ರಭುಪಾದರು. ಆ ಎಲ್ಲ ಯುವ ಮನಸ್ಸುಗಳಿಗೆ ಪ್ರಭುಪಾದರು ನೀಡಿದ ಸಂದೇಶವೆಂದರೆ “ಆದದ್ದಾಯಿತು.
ಹಿಂದಾಗಿದ್ದು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂದು ನಿಮ್ಮದಾಗಿದೆ. ಕೆಟ್ಟದ್ದನ್ನು ಮರೆಯಿರಿ. ಕೆಟ್ಟ ಚಿಂತನೆ, ಸಹವಾಸ ತೊರೆಯಿರಿ. ಇಂದಿನ ಬದುಕನ್ನು ಅರಿಯಿರಿ. ಕೃಷ್ಣಭಕ್ತಿಯ ಗುಂಪಿನಲ್ಲಿ ಬೆರೆಯಿರಿ. ವಾಸ್ತವದ ಬಾಗಿಲು ತೆರೆಯಿರಿ, ಜ್ಞಾನದ ಬೆಳಕಿನಲ್ಲಿ ಸಜ್ಜನರ ಹೊಳಪಿನಲ್ಲಿ ಕೃಷ್ಣಭಕ್ತಿಯ ಬೆಳದಿಂಗಳಿನಲ್ಲಿ ಓಡಾಡಿ, ದುರ್ವಿಚಾರ ಬಿಡಿ, ಒಳ್ಳೆ ಕೆಲಸ ಮಾಡಿ, ಸಜ್ಜನ ಸಂಗಬೇಡಿ, ಕೃಷ್ಣ ಭಕ್ತರನ್ನು ಕೂಡಿ. ಆ ಕೃಷ್ಣನನ್ನು ಒಂದು ಬಾರಿಯಾದರೂ ನೋಡಿ. ಇದೇ ಪ್ರಭುಪಾದರ ನಾಡಿ, ಅವರು ಕೋಟ್ಯಾಂತರ ಯುವ ಜನರ ಮೇಲೆ ಮಾಡಿದ ಮೋಡಿ.






Leave a Reply