ತಂತ್ರಜ್ಞಾನ ಮತ್ತು ನಿರುದ್ಯೋಗ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ ಶಿಷ್ಯರೊಬ್ಬರ ನಡುವೆ ಜಿನಿವಾದಲ್ಲಿ, 1974ರಲ್ಲಿ ನಡೆದ ಸಂವಾದ

ಭಕ್ತ: ಭಾರತದಲ್ಲಿ ಶೇಕಡ 80 ಮಂದಿ ಗ್ರಾಮ ಪ್ರದೇಶಗಳಲ್ಲಿ ವಾಸಿಸುತ್ತಾರೆ ಎಂದು ಅಲ್ಲಿನ ರಾಜಕಾರಣಿಯೊಬ್ಬರು ಇತ್ತೀಚೆಗೆ ಭಾಷಣದಲ್ಲಿ ತಿಳಿಸಿದರು. ಅವರು ಒಂದು ಪ್ರಸ್ತಾವವನ್ನೂ ಮುಂದಿಟ್ಟಿದ್ದಾರೆ. ಕೃಷಿಯಲ್ಲಿ ಹೆಚ್ಚು ತಂತ್ರಜ್ಞಾನ ಬಳಸಬೇಕೆಂದು ಅವರು ಹೇಳುತ್ತಾರೆ. ಗೋಧಿಯನ್ನು ಕೈಯಲ್ಲಿ ಕೊಯ್ಲು ಮಾಡುವುದಕ್ಕಿಂತ ಮೋಟಾರು ಬಳಸಬಹುದು ಮತ್ತು ಭೂಮಿ ಉಳುವುದಕ್ಕೆ ಎತ್ತು ನೇಗಿಲನ್ನು ಎಳೆಯುವ ಬದಲು ಟ್ರ್ಯಾಕ್ಟರ್‌ ಉಪಯೋಗಿಸುವುದು. ಇವು ಅವರ ಸಲಹೆಗಳು.

ಶ್ರೀಲ ಪ್ರಭುಪಾದ: ಭಾರತದಲ್ಲಿ ಈಗಾಗಲೇ ಅನೇಕ ಪುರುಷರು ನಿರುದ್ಯೋಗಿಗಳಾಗಿದ್ದಾರೆ. ಆದುದರಿಂದ ಯಾಂತ್ರೀಕರಣ ಒಳ್ಳೆಯ ಪ್ರಸ್ತಾವ ಅಲ್ಲ. ನೂರು ಜನರು ಮಾಡುವ ಕೆಲಸವನ್ನು ಒಬ್ಬ ಯಂತ್ರದ ಮೇಲೆ ಕೂತು ಮಾಡಬಹುದು. ಆದರೆ ಅಷ್ಟೇಕೆ ನಿರುದ್ಯೋಗಿಗಳು ಇರಬೇಕು? ಒಬ್ಬರೇ ಒಬ್ಬರನ್ನು ತೊಡಗಿಸಿಕೊಳ್ಳುವುದಕ್ಕಿಂತ ನೂರು ಮಂದಿಗೆ ಕೆಲಸ ಕೊಡುವುದು ಒಳ್ಳೆಯದಲ್ಲವೇ?  ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಹೆಚ್ಚಿನ ನಿರುದ್ಯೋಗವಿದೆ. ಈ ದೇಶಗಳಲ್ಲಿ ಎಲ್ಲವನ್ನೂ ಯಂತ್ರಗಳೇ ಮಾಡುವುದರಿಂದ ನೀವು ಅನೇಕ ಹಿಪ್ಪಿಗಳನ್ನು, ಹತಾಶ ಯುವಜನರನ್ನು ಸೃಷ್ಟಿಸುತ್ತಿರುವಿರಿ. ಅವರು ಬೇರೆ ಏನೂ ಮಾಡದಿರುವುದರಿಂದ ಅದೂ ಕೂಡ ನಿರುದ್ಯೋಗವೇ. ಆದುದರಿಂದ ಅನೇಕ ಸಂದರ್ಭಗಳಲ್ಲಿ ಯಂತ್ರಗಳು ನಿರುದ್ಯೋಗವನ್ನು ಸೃಷ್ಟಿಸುತ್ತದೆ.

ಪ್ರತಿಯೊಬ್ಬರೂ ಉದ್ಯೋಗದಲ್ಲಿರಬೇಕು. ಇಲ್ಲವಾದರೆ ತೊಂದರೆ ಉಂಟಾಗುತ್ತದೆ. `ಸೋಮಾರಿಯ ಮನವು ಸೈತಾನನ ಆವಾಸ ಸ್ಥಾನ’.  ಮಾಡಲು ಏನೂ ಕೆಲಸವಿಲ್ಲದೆ ಇಷ್ಟೊಂದು ಜನರಿರುವಾಗ, ಇನ್ನಷ್ಟು ನಿರುದ್ಯೋಗ ಸೃಷ್ಟಿಸಲು ನಾವು ಯಾಕೆ ಯಂತ್ರಗಳನ್ನು ಅಳವಡಿಸಬೇಕು?  ಅತ್ಯುತ್ತಮ ನೀತಿ ಎಂದರೆ ಯಾರೂ ನಿರುದ್ಯೋಗಿಗಳಾಗಿರಬಾರದು, ಪ್ರತಿಯೊಬ್ಬರೂ ಚಟುವಟಿಕೆಯಿಂದ ಇರಬೇಕು.

ಭಕ್ತ:  ಯಂತ್ರಗಳು `ಸಮಯ ಕಬಳಿಸುವ ದುಡಿಮೆಯಿಂದ ನಮಗೆ ಮುಕ್ತಿ ನೀಡುತ್ತವೆ’ ಎಂದು ಕೆಲವರು ವಾದಿಸಬಹುದು.

ಶ್ರೀಲ ಪ್ರಭುಪಾದ: ಯಾವುದಕ್ಕಾಗಿ ಈ ಸ್ವಾತಂತ್ರ್ಯ?  ಕುಡಿತ ಮತ್ತಿತರ ದುರಭ್ಯಾಸಗಳಿಗೇ?  ಈ ಸ್ವಾತಂತ್ರ್ಯದ ಅರ್ಥವೇನು? ಕೃಷ್ಣ ಪ್ರಜ್ಞೆಯ ವಿಕಾಸಕ್ಕಾಗಿ ನೀವು ಜನರನ್ನು ಸ್ವತಂತ್ರಗೊಳಿಸಿದರೆ ಅದು ಬೇರೆ ವಿಷಯ. ನಿಸ್ಸಂದೇಹವಾಗಿ, ಕೃಷ್ಣ ಪ್ರಜ್ಞೆ ಆಂದೋಲನಕ್ಕೆ ಯಾರಾದರು ಬಂದರೆ ಖಂಡಿತ ಅವರನ್ನು ಪೂರ್ಣವಾಗಿ ತೊಡಗಿಸಿಕೊಳ್ಳಲಾಗುತ್ತದೆ. ಈ ಆಂದೋಲನವು ಉಣ್ಣಲು ಮತ್ತು ಮಲಗಲು ಅಲ್ಲ. ಆದರೆ, ಕೃಷ್ಣನಿಗಾಗಿ ಕೆಲಸ ಮಾಡಲು ಇರುವ ಆಂದೋಲನವಿದು. ಆದುದರಿಂದ, ಇಲ್ಲಿ, ಕೃಷ್ಣ ಆಂದೋಲನ ಅಥವಾ ಅಲ್ಲಿ, ಹೊರ ಸಮಾಜದಲ್ಲಿ, ಪ್ರತಿಯೊಬ್ಬರೂ ಉದ್ಯೋಗದಲ್ಲಿರಬೇಕು ಮತ್ತು ಚಟುವಟಿಕೆಯಿಂದ ಇರಬೇಕು. ಆಗ ಒಳ್ಳೆಯ ನಾಗರಿಕತೆ ಇರುತ್ತದೆ.

ವೈದಿಕ ನಾಗರಿಕತೆಯಲ್ಲಿ, ಪ್ರತಿಯೋಬ್ಬರೂ ಉದ್ಯೋಗದಲ್ಲಿರುವಂತೆ ನೋಡಿಕೊಳ್ಳಬೇಕಾದುದು ಸಮಾಜದ ಮುಖ್ಯಸ್ಥನ ಕರ್ತವ್ಯವಾಗಿತ್ತು. ಅದು ಬ್ರಾಹ್ಮಣನಾಗಿರಬಹುದು, ಕ್ಷತ್ರಿಯನಾಗಿರಬಹುದು ಅಥವಾ ವೈಶ್ಯನಾಗಿರಬಹುದು ಅಥವಾ ಶೂದ್ರನಾಗಿರಬಹುದು. ಪ್ರತಿಯೊಬ್ಬರೂ ದುಡಿಯಬೇಕು, ಆಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಪ್ರಸ್ತುತದಲ್ಲಿ ನಾವು ನೋಡುವುದೇನು? ಅತ್ಯಧಿಕವಾದ ತಂತ್ರಜ್ಞಾನದ ಕಾರಣ ನಿರುದ್ಯೋಗವಿದೆ ಮತ್ತು ಅಪಾರ ಸಂಖ್ಯೆಯಲ್ಲಿ ಸೋಮಾರಿಗಳು ಕಾಣುತ್ತಾರೆ. ಹಿಪ್ಪಿಗಳು ಸೋಮಾರಿಗಳು. ಅವರಿಗೆ ಏನೂ ಮಾಡಬೇಕೆನಿಸುವುದಿಲ್ಲ.

ಭಕ್ತ: ತಂತ್ರಜ್ಞಾನದಿಂದ ನಾವು ಇನ್ನೂ ಚೆನ್ನಾಗಿ ಕೆಲಸ ಮಾಡಬಹುದು, ಹೆಚ್ಚು ಸಮರ್ಥವಾಗಿ ಮಾಡಬಹುದು. ಆಗ ಶ್ರಮಿಕರ ಉತ್ಪಾದನಾ ಸಾಮರ್ಥ್ಯ ಕೂಡ ಅಧಿಕಗೊಳ್ಳುತ್ತದೆ ಎಂಬ ವಾದವೂ ಇರಬಹುದು.

ಶ್ರೀಲ ಪ್ರಭುಪಾದ: ಕಡಿಮೆ ಸಾಮರ್ಥ್ಯವಿದ್ದರೂ ಪರವಾಗಿಲ್ಲ, ಹೆಚ್ಚು ಜನರಿಗೆ ಉದ್ಯೋಗ ದೊರೆಯುವುದು ಒಳ್ಳೆಯದು. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ;

ಸಹಜಂ ಕರ್ಮ ಕೌನ್ತೇಯ ಸದೋಷಮಪಿ ನ ತ್ಯಜೇತ್‌

ಸರ್ವಾರಮ್ಭಾಹಿ ದೋಷೇಣ ಧೂಮೇನಾಗಿರ್‌ ಇರಿವಾವೃತಾಃ

ಅಗ್ನಿಯು ಹೊಗೆಯಿಂದ ಆವೃತವಾದಂತೆ, ಪ್ರತಿಯೊಂದು ಪ್ರಯತ್ನವೂ ಯಾವುದಾದರೂ ದೋಷದಿಂದ ಆವೃತವಾಗಿರುತ್ತದೆ. ಕುಂತಿಯ ಮಗನಾದ ಅರ್ಜುನನೆ, ಮನುಷ್ಯನ ಸ್ವಧರ್ಮದಿಂದ ಬರುವ ಕರ್ಮವು ದೋಷದಿಂದ ಕೂಡಿದ್ದರೂ ಅದನ್ನು ಬಿಡಬಾರದು. (ಭಗವದ್ಗೀತೆ 18.48)

ಹಿಂದಿ ಗಾದೆಯೊಂದು ಇದೆ; ಬೇಕಾರಿ ಸೇ ಬೇಗಾರಿ ಅಚ್ಚಿ ಹೈ `ಬೇಕಾರಿಗಿಂತ ಬೇಗಾರಿ ಒಳ್ಳೆಯದು.’ ಬೇಕಾರಿ ಎಂದರೆ `ಉದ್ಯೋಗ ರಹಿತ’, ಬೇಗಾರಿ ಎಂದರೆ, `ಸಂಬಳವಿಲ್ಲದೆ ಕೆಲಸ ಮಾಡು’ ಎಂದು. ಭಾರತದಲ್ಲಿ ಆ ರೀತಿ ವೇತನವಿಲ್ಲದೆ ದುಡಿಯಲು ಮುಂದೆ ಬರುವವರಿದ್ದಾರೆ. ಮುಖ್ಯವಾಗಿ ಅನೇಕ ಗ್ರಾಮಸ್ಥರು ಹಾಗೆ ದುಡಿಯುತ್ತಾರೆ. ಅವರು ಅಂಗಡಿ ಅಥವಾ ಕೆಲವು ಗಣ್ಯರ ಬಳಿ ಕೆಲಸ ಕೇಳುತ್ತಾರೆ. `ನನಗೆ ಏನಾದರೂ ಕೆಲಸ ಕೊಡಿ. ನನಗೆ ಸಂಬಳ ಬೇಡ. ನಿಮಗೆ ಇಷ್ಟವಾದರೆ, ಏನಾದರೂ ತಿನ್ನಲು ಕೊಡಿ. ಇಲ್ಲವಾದರೆ ಅದೂ ಬೇಡ’ ಎನ್ನುತ್ತಾರೆ. ಯಾರು ತಾನೇ ಸುಮ್ಮನೆ ದುಡಿಸಿಕೊಳ್ಳುತ್ತಾರೆ?. ಅವರಿಗೆ ಕೆಲಸವೂ ಸಿಗುತ್ತದೆ, ಜೊತೆಗೆ ಉಣ್ಣಲು ಮತ್ತು ಆಶ್ರಯ ಸೌಲಭ್ಯ ಕೂಡ ಲಭಿಸುತ್ತದೆ. ಅವನು ಚೆನ್ನಾಗಿ ಕೆಲಸ ಮಾಡುತ್ತಿದ್ದರೆ ಆ ಗಣ್ಯರು, `ಸ್ವಲ್ಪ ಸಂಬಳ ತೆಗೆದುಕೋ’ ಎನ್ನುತ್ತಾರೆ. ಆದುದರಿಂದ ಸೋಮಾರಿಯಾಗಿ, ಕೆಲಸವಿಲ್ಲದೆ ಇರುವುದಕ್ಕಿಂತ ಯಾವುದೇ ವೇತನವಿಲ್ಲದೆ ದುಡಿಯುವುದು ಒಳ್ಳೆಯದು. ಆದರೆ ಆಧುನಿಕ ನಾಗರಿಕತೆಯಲ್ಲಿ, ಯಂತ್ರಗಳ ಹಾವಳಿಯಿಂದ ನಿರುದ್ಯೋಗಿಗಳು ಹೆಚ್ಚು ಕಾಣಸಿಗುತ್ತಾರೆ. ಇದರೊಂದಿಗೆ ಸೋಮಾರಿಗಳೂ ಹೆಚ್ಚಾಗುತ್ತಾರೆ. ಇದು ಒಳ್ಳೆಯ ಲಕ್ಷಣವಲ್ಲ.

ಭಕ್ತ: ಅವೆಲ್ಲಾ ಓಬೀರಾಯನ ಕಾಲದ ಅಭಿಪ್ರಾಯಗಳೆಂದು ಅನೇಕ ಜನರು ಹೇಳುತ್ತಾರೆ. ನಿರುದ್ಯೋಗ ಪ್ರಮಾಣ ಹೆಚ್ಚಿದರೂ ಪರವಾಗಿಲ್ಲ, ತಂತ್ರಜ್ಞಾನ ಇರಲಿ ಎಂದು ಅವರು ಬಯಸುತ್ತಾರೆ. ಏಕೆಂದರೆ ಅದು ಕತ್ತೆ ದುಡಿಮೆಯಿಂದ ಸ್ವಾತಂತ್ರ್ಯ, ಮುಕ್ತಿ ಕೊಡುತ್ತದೆ ಎಂದು ಅವರು ಭಾವಿಸುತ್ತಾರೆ. ಅಲ್ಲದೆ, ಟೆಲಿವಿಷನ್‌, ಚಲನಚಿತ್ರಗಳು, ಮೋಟಾರು ವಾಹನ ಇವೇ ಮುಂತಾದವುಗಳಿಂದ ಖುಷಿ ಪಡೆಯಲು ತಮಗೆ ಸ್ವಾತಂತ್ರ್ಯ ಸಿಗುತ್ತದೆ ಎಂದೂ ಅವರು ಹೇಳುತ್ತಾರೆ.

ಶ್ರೀಲ ಪ್ರಭುಪಾದ: ತಂತ್ರಜ್ಞಾನ ಸ್ವಾತಂತ್ರ್ಯವಲ್ಲ. ಬದಲಾಗಿ, ಅದು ನರಕಕ್ಕೆ ಮುಕ್ತ ದಾರಿ. ಇದು ಸ್ವಾತಂತ್ರ್ಯವಲ್ಲ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಯೊಬ್ಬರೂ ದುಡಿಯಬೇಕು. ನೀವು ಬುದ್ಧಿವಂತರಾಗಿದ್ದರೆ, ನೀವು ಬ್ರಾಹ್ಮಣನ ಕೆಲಸ ಮಾಡಬಹುದು, ಧರ್ಮ ಗ್ರಂಥಗಳನ್ನು ಓದುವುದು ಮತ್ತು ಗ್ರಂಥಗಳ ರಚನೆ ಹಾಗೂ ಜ್ಞಾನ ಪ್ರಸಾರ ಮಾಡಬಹುದು. ಅದು ಬ್ರಾಹ್ಮಣರ ಕೆಲಸ. ನಿಮ್ಮ ಜೀವನೋಪಾಯದ ಬಗೆಗೆ ನೀವು ಚಿಂತಿಸಬೇಕಾಗಿಲ್ಲ. ಸಮಾಜವೇ ಅದನ್ನು ಒದಗಿಸುತ್ತದೆ. ವೈದಿಕ ನಾಗರಿಕತೆಯಲ್ಲಿ ಬ್ರಾಹ್ಮಣರು ಸಂಬಳಕ್ಕಾಗಿ ದುಡಿಯುತ್ತಿರಲಿಲ್ಲ. ವೈದಿಕ ಸಾಹಿತ್ಯ ಓದುವುದರಲ್ಲಿ ಮತ್ತು ಬೋಧಿಸುವುದರಲ್ಲಿ ಅವರು ನಿರತರಾಗಿರುತ್ತಿದ್ದರು. ಸಮಾಜವೇ ಅವರಿಗೆ ಆಹಾರ ನೀಡುತ್ತಿತ್ತು.

ಕ್ಷತ್ರಿಯರು ಸಮಾಜದ ಇತರ ಸದಸ್ಯರಿಗೆ ರಕ್ಷಣೆ ನೀಡುತ್ತಿದ್ದರು. ಅಪಾಯವಿರುತ್ತದೆ, ಆಕ್ರಮಣವಿರುತ್ತದೆ. ಜನರನ್ನು ರಕ್ಷಿಸುವುದು ಕ್ಷತ್ರಿಯರ ಕರ್ತವ್ಯ. ಅದಕ್ಕಾಗಿ ಅವರು ತೆರಿಗೆ ವಿಧಿಸಬಹುದು. ಕ್ಷತ್ರಿಯರಿಗಿಂತ ಕಡಮೆ ಬುದ್ಧಿವಂತರಾದ ವೈಶ್ಯರು ವರ್ತಕ ಸಮುದಾಯದವರು, ಆಹಾರ ಉತ್ಪಾದನೆ ಮತ್ತು ಹಸುವಿಗೆ ರಕ್ಷಣೆ ನೀಡುವುದು ಅವರ ಜವಾಬ್ದಾರಿ. ಇವೆಲ್ಲಾ ಅಗತ್ಯವಾದುವೇ. ಅಂತಿಮವಾಗಿ ಶೂದ್ರರಿದ್ದಾರೆ. ಈ ಮೂರೂ ಮೇಲ್ವರ್ಗಕ್ಕೆ ನೆರವಾಗುತ್ತಾರೆ.

ಇದು ಸಮಾಜದ ಸ್ವಾಭಾವಿಕ ವಿಭಾಗವಾಗಿದೆ. ಕೃಷ್ಣನೇ ಇದನ್ನು (ಚಾತುರ್‌ ವರ್ಣ್ಯಂ ಮಯಾ ಸೃಷ್ಟಂ) ಸೃಷ್ಟಿಸಿರುವುದರಿಂದ ಇದು ಉತ್ತಮವಾದುದು. ಎಲ್ಲರೂ ಉದ್ಯೋಗಸ್ಥರಾಗಿದ್ದಾರೆ. ಬುದ್ಧಿವಂತ, ಸೇನಾ, ವರ್ತಕ ಮತ್ತು ಕೊನೆಗೆ ಶೂದ್ರರೂ ಉದ್ಯೋಗಸ್ಥರಾಗಿದ್ದಾರೆ. ರಾಜಕೀಯ ಪಕ್ಷಗಳನ್ನು ಸಂಘಟಿಸಿ ಹೋರಾಡುವ ಅಗತ್ಯವಿಲ್ಲ. ವೈದಿಕ ಕಾಲದಲ್ಲಿ ಅಂತಹವೆಲ್ಲ ಇರಲಿಲ್ಲ. ಪ್ರತಿಯೊಬ್ಬರೂ ಅವರವರ ಕರ್ತವ್ಯದಲ್ಲಿ ನಿರತರಾಗಿರುವುದನ್ನು ರಾಜ ನೋಡಿಕೊಳ್ಳುತ್ತಿದ್ದ. ಆದುದರಿಂದ ಜನರಿಗೆ ನಿಷ್ಠೆ ಇಲ್ಲದ ವಂಚಕ ರಾಜಕೀಯ ಪಕ್ಷಗಳನ್ನು ಸಂಘಟಿಸಿ ಪರಸ್ಪರ ಹೋರಾಟ ನಡೆಸಲು ಪುರಸತ್ತು ಇರುತ್ತಿರಲಿಲ್ಲ. ಅಂತಹುದಕ್ಕೆ ಅವಕಾಶವೇ ಇರಲಿಲ್ಲ.

ಆದರೆ ಎಲ್ಲದರ ಆರಂಭವನ್ನು ಅರ್ಥ ಮಾಡಿಕೊಳ್ಳಬೇಕು. `ನಾನು ಈ ದೇಹವಲ್ಲ’ ಮತ್ತು ಇದನ್ನು ಭಗವದ್ಗೀತೆಯಲ್ಲಿ ಪದೇ ಪದೆ ಒತ್ತಿ ಹೇಳಲಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi