ಶ್ರೀ ಗೋದ್ರುಮ ದ್ವೀಪ (ಭಾಗ-6)
– ಡಾ.ಬಿ.ಆರ್.ಸುಹಾಸ್
ಆಮ್ರಘಟ (ಆಮ್ಘಟ)
ಆಮ್ರ ಎಂದರೆ ಮಾವು. ಒಮ್ಮೆ, ಶ್ರೀ ಚೈತನ್ಯ ಮಹಾಪ್ರಭುಗಳು ಒ೦ದು ಮಾವಿನ ಓಟೆಯನ್ನು ಇಲ್ಲಿ ನೆಟ್ಟು ಅದು ಕೂಡಲೇ ದೊಡ್ಡ ಮರವಾಗಿ ಬೆಳೆದು ಮಾವಿನ ಹಣ್ಣುಗಳನ್ನು ಬಿಡುವಂತೆ ಪವಾಡ ಮಾಡಿದರು. ಭಕ್ತರು ಕೂಡಲೇ 200 ಮಾವಿನ ಹಣ್ಣುಗಳನ್ನು ಕಿತ್ತು ಶ್ರೀಕೃಷ್ಣನಿಗೆ ಅರ್ಪಿಸಿದರು.
ಪ್ರತಿದಿನವೂ, ಚೈತನ್ಯ ಮತ್ತು ನಿತ್ಯಾನಂದರೊಂದಿಗೆ ಕೀರ್ತನೆ ಮಾಡಿದ ಬಳಿಕ, ಮಾವಿನಹಣ್ಣುಗಳನ್ನು ತಿನ್ನುವ ಹಬ್ಬವನ್ನು ಆಚರಿಸುತ್ತಿದ್ದರು ಭಕ್ತರು. ಆ ಮಾವಿನ ಮರವಾದರೋ ವರ್ಷವಿಡೀ ನಿರಂತರವಾಗಿ ಮಾವಿನ ಹಣ್ಣುಗಳನ್ನು ಬಿಡುತ್ತಿತ್ತು. ಒಂದು ಹಣ್ಣನ್ನು ತಿಂದ ಮಾತ್ರಕ್ಕೆ ಭಕ್ತರಿಗೆ ತೃಪ್ತಿಯಾಗುತ್ತಿತ್ತು.
ಹೀಗೆ ಒಂದು ವರ್ಷಕಾಲ, ಚೈತನ್ಯರೂ ಭಕ್ತರೂ ಸಂತೋಷದಿಂದ ಮಾವಿನ ಹಣ್ಣುಗಳನ್ನು ಸೇವಿಸಿದರು. ಒಂದು ವರ್ಷದ ಕಡೆಯಲ್ಲಿ ಮರ ಅದೃಶ್ಯವಾಯಿತು. ಹೀಗೆ ಮಾವಿನ ಮರದ ಸಂಬಂಧದಿಂದ ಈ ಸ್ಥಳಕ್ಕೆ ಆಮ್ರಘಟ ಎಂಬ ಹೆಸರು ಬಂದಿದೆ. ಇದು ಆಮ್ ಘಟ ಎಂಬ ಗ್ರಾಮದಲ್ಲಿದೆ. ಮಾವಿನ ಮರವಿದ್ದ ನಿರ್ದಿಷ್ಟ ಸ್ಥಳವನ್ನು ಗುರುತಿಸಲಾಗುವುದಿಲ್ಲ.
ಮಾಯಾಪುರದಿಂದ ಈ ಹಳ್ಳಿಗೆ ಟ್ಯಾಕ್ಸಿಯಲ್ಲಿ ಒಂದು ಗಂಟೆಯಲ್ಲಿ ಹೋಗಬಹುದು. ಇದನ್ನು ನೋಡುವುದರೊಂದಿಗೆ ನರಸಿಂಹಪಲ್ಲಿ ಕ್ಷೇತ್ರವನ್ನೂ ನೋಡಬಹುದು. ಭಕ್ತಿವಿನೋದರ ಮನೆಯಿಂದ ಬೈಕ್ ರಿಕ್ಷಾದಲ್ಲಿ ಇಪ್ಪತ್ತು ನಿಮಿಷಗಳಲ್ಲಿ ತಲಪಬಹುದು.
ಹರಿಹರ ಕ್ಷೇತ್ರ

ಹರಿಹರಕ್ಷೇತ್ರವೆಂಬ ಈ ದೇವಾಲಯದಲ್ಲಿ ಅರ್ಧಭಾಗ ವಿಷ್ಣುವೂ ಅರ್ಧಭಾಗ ಶಿವನೂ ಆಗಿರುವ ಸುಂದರ ವಿಗ್ರಹವಿದೆ. ಭಗವಂತನು, ತನಗೆ ಶಿವನು ಎಷ್ಟು ಪ್ರಿಯನೆಂದು ತೋರಿಸಲು ಇಂಥ ರೂಪದಲ್ಲಿ ಪ್ರಕಟಗೊಂಡಿದ್ದಾನೆ. ದೇವತೆಗಳಲ್ಲೆಲ್ಲಾ ದೊಡ್ಡವನೂ ಮಹಾಮಹಿಮನೂ ಆದ ಮಹಾದೇವ ಶಿವನು, ಶ್ರೀಹರಿಯ ಪರಮ ಭಕ್ತನೆಂದು ಭಾಗವತದಲ್ಲಿ ನಿರೂಪಿತನಾಗಿದ್ದಾನೆ. ವೈಷ್ಣವಾನಾಂ ಯಥಾ ಶಂಭುಃ, ಅಂದರೆ ವೈಷ್ಣವರಲ್ಲಿ ಶಿವನು ಅಗ್ರಗಣ್ಯ ಎನ್ನಲಾಗಿದೆ. ಇಂಥ ಭಗವಾನ್ ಶಿವನು, ಶ್ರೀಹರಿಗೆ ಎಷ್ಟು ಪ್ರಿಯನಾಗಿರಬೇಡ?!
ಈ ಅಪೂರ್ವ ವಿಗ್ರಹದಲ್ಲಿ ವಿಷ್ಣುವಿನ ಭಾಗ ಕಪ್ಪಾಗಿದೆ, ಶಿವನ ಭಾಗ ಬಿಳುಪಾಗಿದೆ. ವಿಗ್ರಹದ ಎಡಕ್ಕೆ, ಅಂದರೆ ವಿಷ್ಣುಭಾಗದ ಕಡೆಗೆ, ವಿಷ್ಣುವಿನ ಪತ್ನಿ ಲಕ್ಷ್ಮಿದೇವಿಯ ವಿಗ್ರಹವಿದ್ದರೆ, ಬಲಕ್ಕೆ, ಅಂದರೆ ಶಿವಭಾಗದ ಕಡೆಗೆ, ಶಿವನ ಪತ್ನಿ ಪಾರ್ವತಿಯ ವಿಗ್ರಹವಿದೆ.
ಪಾರ್ವತಿಯ ವಿಗ್ರಹದ ಪಕ್ಕದಲ್ಲಿ ಬುರ್ಹೋ ಶಿವ ಅಥವಾ ವೃದ್ಧ ಶಿವನ ಲಿಂಗ ರೂಪವಿದೆ. ಇವಲ್ಲದೇ, ಗೋಪಾಲ ಸ್ವಾಮಿಯ ವಿಗ್ರಹ ಹಾಗೂ ಗದಾಧರ ಪಂಡಿತರ ಪಾದದ ಗುರುತುಗಳನ್ನೂ ಕಾಣಬಹುದು. ಈ ದೇವಾಲಯದ ಸನಿಹವೇ, ಹಳೆಯದಾದ, ಶಿಥಿಲವಾದ ಒಂದು ದೇವಾಲಯವಿದೆ. ಅದರಲ್ಲಿ ಹನುಮಂತ, ಗಣೇಶ, ಮತ್ತು ಕಾಲಭೈರವರ ವಿಗ್ರಹಗಳನ್ನು ಕಾಣಬಹುದು.
ಭಾಗವತ ಪುರಾಣದಲ್ಲಿ ದುಷ್ಟನಾದ ಕಾಶೀರಾಜನೊಬ್ಬನು ಶ್ರೀಕೃಷ್ಣನ ಮೇಲೆ ಯುದ್ಧಕ್ಕೆ ಬರುವ ಕಥೆಯೊಂದಿದೆ. ಇವನನ್ನೂ ಇವನ ಸಂಗಡ ಇದ್ದ ಇನ್ನಿತರ ದುಷ್ಟರನ್ನೂ ಸಂಹರಿಸಲು ಶ್ರೀಕೃಷ್ಣನು ತನ್ನ ಚಕ್ರಾಯುಧವನ್ನು ಪ್ರಯೋಗಿಸಿದ.
ಅದು ಅವನನ್ನು ಕಾಶಿಯವರೆಗೂ ಅಟ್ಟಿಸಿಕೊಂಡು ಹೋಗಿ ಕೊಂದಿತಲ್ಲದೇ, ಕಾಶೀ ನಗರವನ್ನೇ ಸುಟ್ಟು ಬಿಟ್ಟಿತು. ನವದ್ವೀಪ ಮಹಾತ್ಮ್ಯೆಯ ಪ್ರಕಾರ, ಶಿವನು ಆಗ ಕಾಶಿಯಿಂದ ನವದ್ವೀಪಕ್ಕೆ ಬಂದು ನೆಲೆಸಿದ. ಇದರಿಂದ ಈ ಸ್ಥಳ, ಮಹಾಕಾಶಿ ಅಥವಾ ಮಹಾವಾರಣಾಸಿ ಎಂದೂ ಪ್ರಸಿದ್ಧವಾಯಿತು.
ಭಕ್ತಿವಿನೋದರು, ಆ ಕಾಶಿಗಿಂತಲೂ ಈ ನವದ್ವೀಪಕಾಶಿಯು ಶ್ರೇಷ್ಠ ಎಂದು ಬರೆದಿದ್ದಾರೆ. ಇಲ್ಲಿ ಶಿವನು ಸದಾ ಗೌರಹರಿಯ ನಾಮಗಳನ್ನು ಹಾಡುತ್ತಾ, ಕುಣಿಯುತ್ತಾ, ತನ್ನ ಭಕ್ತರಲ್ಲೂ ಗೌರಹರಿಯ ನಾಮಗಳನ್ನು ಹಾಡುತ್ತಾ, ಕುಣಿಯುತ್ತಾ, ತನ್ನ ಭಕ್ತರಲ್ಲೂ ಗೌರಹರಿಯ ಭಕ್ತಿಯನ್ನು ಪ್ರೇರೇಪಿಸುತ್ತಿರುತ್ತಾನೆ ಎನ್ನುತ್ತಾರೆ.
ಕಾಶಿಯಲ್ಲಿ ಸಾವಿರಾರು ವರ್ಷಗಳ ಕಾಲ ನೆಲೆಸಿರುವ ಸಂನ್ಯಾಸಿಗಳು ಮುಕ್ತಿಯನ್ನು ಪಡೆದರೆ, ಇಲ್ಲಿ, ಭಕ್ತರು, ಆ ಮುಕ್ತಿಯನ್ನೂ ತಳ್ಳಿಬಿಡುತ್ತಾರಂತೆ. ಗೌರಹರಿಯ ನಾಮಗಳನ್ನು ಹಾಡುವುದರ ಫಲ, ಈ ಅನನ್ಯ ಭಕ್ತಿ. ಇಲ್ಲಿ ಯಾರಾದರೂ ದೇಹವನ್ನು ಬಿಟ್ಟರೆ, ಸಾಯುವ ಆ ಸಮಯದಲ್ಲಿ, ಸ್ವಯಂ ಶಿವನೇ ಬಂದು ಅವನ ಕಿವಿಯಲ್ಲಿ ಗೌರಾಂಗ ಪ್ರಭುವಿನ ನಾಮವನ್ನು ಉಚ್ಚರಿಸಿ ಮುಕ್ತಿಧಾಮಕ್ಕೆ ಕಳಿಸುತ್ತಾನೆ ಎಂದು ಹೇಳುತ್ತಾರೆ.
ಗಂಡಕೀ ನದಿಯ ದಂಡೆಯ ಮೇಲಿರುವ ಈ ಕ್ಷೇತ್ರವನ್ನು ನರಸಿಂಹಪಲ್ಲಿಯನ್ನು ಸಂದರ್ಶಿಸಿದಾಗಲೇ ನೋಡಬಹುದು. ದರ್ಶನವು ಹಗಲಿನ ಹೊತ್ತಿನಲ್ಲಿ ಮಾತ್ರ ಇರುತ್ತದೆ. ಆದರೆ ನಿತ್ಯ ಇರುವುದಿಲ್ಲ. ಸ್ಥಳೀಯ ಕುಟುಂಬವೊಂದು ಈ ದೇವಾಲಯವನ್ನು ನೋಡಿಕೊಳ್ಳುತ್ತಿದೆ. ಇದು ಮುಚ್ಚಿದ್ದರೆ, ಪೂಜಾರಿಗಾಗಿ ಸ್ಥಳೀಯ ಗ್ರಾಮಸ್ಥರನ್ನು ವಿಚಾರಿಸಬಹುದು.
ನರಸಿಂಹಪಲ್ಲಿ (ದೇವಪಲ್ಲಿ, ದೇವಪುರ)

ಇದು, ಶ್ರೀನರಸಿಂಹದೇವನು ಹಿರಣ್ಯಕಶಿಪುವನ್ನು ಕೊಂದ ಬಳಿಕ ವಿಶ್ರಮಿಸಿದ ಸ್ಥಳವೆಂದು ಪ್ರತೀತಿಯಿದೆ. ಇಲ್ಲೊಂದು ಕೆರೆಯಿದ್ದು, ನರಸಿಂಹನು ತನ್ನ ರಕ್ತಸಿಕ್ತವಾಗಿದ್ದ ಕೈಗಳನ್ನು ಇದರಲ್ಲಿ ತೊಳೆದುಕೊಂಡನೆಂದು ಹೇಳುತ್ತಾರೆ. ಆಗ, ಮಂದಾಕಿನೀ ನದಿಯು ಈ ಸ್ಥಳದ ಸಮೀಪ ಹರಿಯುತ್ತಿತ್ತು.
ನರಸಿಂಹನು ಈ ನದಿಯಲ್ಲಿ ಮುಖ ತೊಳೆದುಕೊಂಡು ಆಯಾಸ ಪರಿಹರಿಸಿಕೊಂಡನು. ಆ ಸಮಯದಲ್ಲಿ ನೂರಾರು ದೇವತೆಗಳು ನರಸಿಂಹದೇವನನ್ನು ಪೂಜಿಸಲು ಇಲ್ಲಿ ಪ್ರತ್ಯಕ್ಷವಾದರು. ವಿಶ್ವಕರ್ಮನು ಬಂದು ನರಸಿಂಹನಿಗೆ ಒಂದು ಅರಮನೆಯನ್ನೂ ದೇವತೆಗಳಿಗೆ ನೂರಾರು ಅರಮನೆಗಳನ್ನೂ ಕಟ್ಟಿಕೊಟ್ಟನು. ಕೆಲಕಾಲದ ಬಳಿಕ, ಮಂದಾಕಿನಿ ನದಿಯು ತನ್ನ ಕ್ರಮವನ್ನು ಬದಲಿಸಿತು, ಹಾಗೂ ಈ ಅರಮನೆಗಳೆಲ್ಲವೂ ಮುಚ್ಚಿಹೋದವು. ಈಗ ಆ ಅರಮನೆಗಳಿದ್ದ ಪ್ರದೇಶಗಳಲ್ಲಿ ಗಿರಿಗಳನ್ನು ಕಾಣಬಹುದು. ಹೀಗಿದೆ ಇಲ್ಲಿಯ ಸ್ಥಳ ಪುರಾಣ.
ಇಲ್ಲಿರುವ ದೇವಾಲಯದಲ್ಲಿ ಬಹಳ ಹಳೆಯದಾದ ನರಸಿಂಹದೇವರ ವಿಗ್ರಹವಿದೆ. ಹಿರಣ್ಯಕಶಿಪುವನ್ನು ಸಂಹರಿಸುತ್ತಿರುವ ಹಾಗಿರುವ ಭಗವಂತನ ವಿಗ್ರಹದ ಪಾದದ ಕೆಳಗೆ ಶರಣಾಗುತ್ತಿರುವ ಪ್ರಹ್ಲಾದನ ವಿಗ್ರಹವಿದೆ. ಶ್ರೀ ಚೈತನ್ಯರೂ ಅವರ ಸಂಗಡಿಗರೂ ನರಸಿಂಹದೇವನ ದರ್ಶನಕ್ಕಾಗಿ ಇಲ್ಲಿಗೆ ಬರುತ್ತಿದ್ದರು.
ಈ ಸ್ಥಳ ತಲಪಲು, ಮಾಯಾಪುರದಿಂದ ಟ್ಯಾಕ್ಸಿಯ ಮೂಲಕ ಒಂದು ಗಂಟೆ ಪ್ರಯಾಣ ಮಾಡಬಹುದು, ಇಲ್ಲವೇ, ಜಾಲಂಗಿ ನದಿಯನ್ನು ದೋಣಿಯಲ್ಲಿ ದಾಟಿ ಸ್ವರೂಪ್ ಗಂಜ್ ಅನ್ನು ತಲಪಿ, ಅಲ್ಲಿಂದ ಬೈಕ್ ರಿಕ್ಷಾದ ಮೂಲಕ ಅರ್ಧ ಗಂಟೆಯಲ್ಲಿ ಇಲ್ಲಿಗೆ ಬರಬಹುದು. ದರ್ಶನದ ಅವಧಿ, ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆಯವರೆಗಿರುತ್ತದೆ.
ಹೀಗೆ, ಕೀರ್ತನಾ ಸ್ವರೂಪವಾದ ಗೋದ್ರುಮದ್ವೀಪ, ಭಕ್ತಿಯನ್ನು ಪ್ರೇರೇಪಿಸುವ ಮಹಿಮಾನ್ವಿತ ಕ್ಷೇತ್ರಗಳನ್ನೊಳಗೊಂಡು ಸುಂದರವಾಗಿದೆ.
(ಮುಂದುವರಿಯುವುದು)






Leave a Reply