ಆಕರ : ಆಪ್ತ ಮಾತುಕಥೆ, ಆಗಸ್ಟ್ 10, 1976, ಟೆಹರಾನ್
ಪ್ರಭುಪಾದರು ಟೆಹರಾನ್ನಲ್ಲಿ ತಂಗಿದ್ದಾಗ ಶಿಷ್ಯರೊಡನೆ ಲೋಕಾಭಿರಾಮವಾಗಿ ಮಾತುಕಥೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ಕೃಷ್ಣನು ಪರಿಪೂರ್ಣ ಜ್ಞಾನವನ್ನು ನೀಡುತ್ತಿದ್ದರೂ ಅದರ ಪ್ರಯೋಜನ ಪಡೆಯದ ನಾವು ಅದೆಷ್ಟು ದುರದೃಷ್ಟವಂತರು ಎಂದು ವಿವರಿಸುತ್ತ ಈ ಕಥೆ ಹೇಳಿದರು.
ಒಮ್ಮೆ ಶಿವಪಾರ್ವತಿಯರು ಸಾಮಾನ್ಯರಂತೆ ವೇಷಧರಿಸಿ ಇರುಳಿನ ಹೊತ್ತು ನಗರ ಸಂಚಾರಕ್ಕೆ ಹೊರಟಿದ್ದರು. ದಾರಿಯಲ್ಲಿ ಅವರಿಗೊಬ್ಬ ಭಿಕ್ಷುಕ ಎದುರಾದ, ಚಿಂದಿ ಬಟ್ಟೆಯುಟ್ಟಿದ್ದ ಅವನು ಅತ್ಯಂತ ದೀನನಾಗಿ ಆರ್ತನಾದ ಮಾಡುತ್ತ ಭಿಕ್ಷೆ ಬೇಡುತ್ತ ಕುಳಿತಿದ್ದ.
ಅದನ್ನು ಕೇಳಿದ ಪಾರ್ವತಿ, ಪರಶಿವನಿಗೆ – ”ಈ ಬಡ ಮನುಷ್ಯನು ದೀನನಾಗಿ ಬೇಡುತ್ತಿದ್ದಾನೆ. ಅವನಿಗೇನನ್ನಾದರೂ ಕೊಡಬಾರದೆ?” ಎ೦ದು ಕೇಳಿದಳು. ಅದಕ್ಕೆ ಶಿವ, “ಕೊಡಬಾರದು ಎಂದೇನಿಲ್ಲ, ಆದರೆ ಈತನಿಗೆ ನಾನು ಕೊಡುವುದನ್ನು ಅನುಭವಿಸುವ ಯೋಗ್ಯತೆಯೇ ಇಲ್ಲ.

ಅವನೊಬ್ಬ ದುರದೃಷ್ಟವಂತ ಮನುಷ್ಯ” ಎಂದು ಉತ್ತರಿಸಿದ.
ದಾರಿಯಲ್ಲಿ ಈ ದಂಪತಿಯನ್ನು ನೋಡಿದ ಭಿಕ್ಷುಕ ತನ್ನ ದನಿಯನ್ನು ಮತ್ತಷ್ಟು ದೀನವಾಗಿಸಿ ಕೂಗಲಾರಂಭಿಸಿದ. ಪಾರ್ವತಿಯ ಮನಕರಗಿ, ಶಿವನನ್ನು ಕುರಿತು ಆತನಿಗೆ ಏನಾದರೂ ನೀಡಲೇಬೇಕು ಎಂದು ಒತ್ತಾಯಿಸಿದಳು.
ಅವಳ ಕೋರಿಕೆಯನ್ನು ಮನ್ನಿಸಿದ ಶಿವ, ಭಿಕ್ಷುಕನಿಗೆ ಮುತ್ತುರತ್ನಗಳಿಂದ ತುಂಬಿದ ಕಲ್ಲಂಗಡಿ ಹಣ್ಣೊಂದನ್ನು ನೀಡಿದ. ಅದನ್ನು ಪಡೆದುಕೊಂಡ ಭಿಕ್ಷುಕನಿಗೆ ಅಷ್ಟೇನೂ ಸಂತೋಷವಾಗಲಿಲ್ಲ.
”ಈ ಹಣ್ಣನ್ನು ಇಟ್ಟುಕೊಂಡು ನಾನೇನು ಮಾಡಲಿ?” ಅವನು ಯೋಚಿಸಿದ. ಕೊನೆಗೆ ಅದನ್ನು ನಾಲ್ಕು ಕಾಸಿಗೆ ಮಾರಿಬಿಟ್ಟ ಅದು ಖರ್ಚಾಗುತ್ತಿದ್ದಂತೆ, ಎಂದಿನಂತೆ ಭಿಕ್ಷೆ ಬೇಡಲು ತೊಡಗಿದ.
ನೀತಿ : ಯೋಗವಿದ್ದರೂ ಅನುಭವಿಸುವ ಯೋಗ್ಯತೆ ಇಲ್ಲದ ಮೇಲೆ ಅದು ನಿಷ್ಫಲವಾಗುವುದು!






Leave a Reply