ಸಾಂದೀಪನಿ ಮುನಿಗಳ ಆಶ್ರಮದಲ್ಲಿ ಹಲವಾರು ಶಿಷ್ಯರಿದ್ದರು. ಇವರಲ್ಲಿ ಕೃಷ್ಣ ಬಲರಾಮ ಮತ್ತು ಸುಧಾಮ ಪ್ರಮುಖ ಶಿಷ್ಯರಾಗಿದ್ದರು. ಗುರುಕುಲದ ವಾಸವು ಮುಗಿದ ಅನಂತರ ಎಲ್ಲ ಶಿಷ್ಯರು ಅವರವರ ಊರುಗಳಿಗೆ ಹಿಂದಿರುಗಿದರು.

ಸುಧಾಮನು ಕಾಶಿಯಲ್ಲಿ ಬ್ರಾಹ್ಮಣಿಕೆಯನ್ನು ಮಾಡುತ್ತಾ ಹೆಂಡತಿ ಮಕ್ಕಳೊಂದಿಗೆ ಇದ್ದನು. ಆದರೆ ಬಡತನ ಅವನನ್ನು ತುಂಬ ಕಾಡುತ್ತಿತ್ತು. ಬರುವ ಆದಾಯ ಅವನಿಗೆ ಸಾಕಾಗುತ್ತಿರಲಿಲ್ಲ. ಆದರೆ ಅವನು ಕೃಷ್ಣನ ಪರಮ ಭಕ್ತನಾಗಿದ್ದನು. ಹಗಲೂ ರಾತ್ರಿ ಪತ್ನಿ ಮಕ್ಕಳೊಂದಿಗೆ ಕೃಷ್ಣನನ್ನು ಧ್ಯಾನಿಸುತ್ತಿದ್ದನು.
ಕೃಷ್ಣನು ರಾಜನಾಗಿ ರಾಜ್ಯಭಾರವನ್ನು ನಡೆಸುತ್ತಿದ್ದನು. ಅವನು ”ವಿಷ್ಣು”ವಿನ ಅವತಾರವಾದ್ದರಿಂದ ಜಗತ್ತಿನಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಿಳಿದಿರುತ್ತಿದ್ದನು. ಕೃಷ್ಣ ಸುಧಾಮರು ಸ್ನೇಹಿತರಾಗಿದ್ದರೂ ಇಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ಒಬ್ಬ ಶ್ರೀಮಂತನಾಗಿ ಮತ್ತೊಬ್ಬ ಬಡವನಾಗಿದ್ದನು.

ಹೀಗಿರಲು ಸುಧಾಮನ ಪತ್ನಿಯು ಗಂಡನಿಗೆ ”ಕೃಷ್ಣ’ನ ಬಗ್ಗೆ ವಿವರಿಸುತ್ತಾ “ಸ್ವಾಮಿ ನಿಮ್ಮ ಆಪ್ತ ಮಿತ್ರನಾದ ಕೃಷ್ಣನು ತುಂಬ ಶ್ರೀಮಂತನಾಗಿದ್ದಾನೆ! ನೀವು ಸಹಾಯ ಬೇಡಿದರೆ ಖಂಡಿತವಾಗಿಯೂ ಅವನು ಸಹಾಯ ಮಾಡುತ್ತಾನೆ. ಆದ್ದರಿಂದ ನೀವು ಅವನ ಬಳಿಗೆ ಹೋಗಿ ಬನ್ನಿ” ಎಂದಳು.
ಆಗ ಸುಧಾಮನು ಹೋಗಲು ನಿರಾಕರಿಸಿ ಬರಿಗೈಯಲ್ಲಿ ಆತನನ್ನು ನೋಡಲು ಹೋಗಲಾರೆಂದನು. ಕೊನೆಗೆ ಅವಳು ಅಕ್ಕಪಕ್ಕದವರನ್ನು ಯಾಚಿಸಿ ಅವಲಕ್ಕಿಯನ್ನು ತಂದು ಒಂದು ಬಟ್ಟೆಯಲ್ಲಿ ಕಟ್ಟಿ ಕಳುಹಿಸಿದಳು. ಅವನು ಬುತ್ತಿಯನ್ನು ತೆಗೆದುಕೊಂಡು ಮಥುರಾ ನಗರಕ್ಕೆ ಹೊರಟನು.

ಮಥುರಾ ನಗರದಲ್ಲಿ ಅವನನ್ನು ಒಳಗೆ ಹೋಗಲು ಬಿಡದೆ ಕಾವಲುಗಾರರು ನೂಕಿಬಿಟ್ಟರು. ಅವನು ಬಿದ್ದಾಗ ಕೃಷ್ಣಾ ಎಂದು ಕೂಗಿದಾಗ, ಕೃಷ್ಣನಿಗೆ ಕೇಳಿಸಿ ಧಾವಿಸಿ ಓಡಿ ಬಂದನು. ಅವನನ್ನು ಎತ್ತಿ ಉಪಚರಿಸಿ ಒಳಗೆ ಕರೆದುಕೊಂಡು ಹೋದನು.
ಅವನನ್ನು ಸಿಂಹಾಸನದಲ್ಲಿ ಕೂರಿಸಿ ಪಾದಗಳನ್ನು ತೊಳೆದು ಪತ್ನಿಯರ ಸಮ್ಮುಖದಲ್ಲಿ ಎಲ್ಲ ತರಹದ ಉಪಚಾರ ಮಾಡಿದನು. ಕೊನೆಯಲ್ಲಿ ನನಗಾಗಿ ಏನು ತಂದೆಯೆಂದು ಕೇಳಿದಾಗ ಅವನು ಸಂಕೋಚದಿಂದ ” ಅವಲಕ್ಕಿ’ ಯನ್ನು ಬಚ್ಚಿಟ್ಟುಕೊಳ್ಳಲು ಹವಣಿಸಿದನು.
ಆದರೆ ಕೃಷ್ಣನು ಅದನ್ನು ಬಲವಂತವಾಗಿ ಕಿತ್ತುಕೊಂಡು ಒಂದು ಹಿಡಿ ತಿಂದಾಗ ಸುಧಾಮನಿಗೆ ತಿಳಿಯದಂತೆ ಅವನಿಗೆ ಅರಮನೆಯನ್ನು ಕರುಣಿಸಿದನು, ಮತ್ತೊಂದು ಹಿಡಿಯನ್ನು ತಿಂದಾಗ ಅವನ ಪತ್ನಿ ಮಕ್ಕಳಿಗೆ ವಸ್ತ್ರಒಡವೆಗಳು ಮತ್ತು ಭೋಗಗಳು ಪ್ರಾಪ್ತವಾಯಿತು, ಆದರೆ ಮೂರನೆ ಹಿಡಿಯನ್ನು ತಿನ್ನಲು ಹೋದಾಗ ರುಕ್ಕಿಣಿಯು ಓಡಿ ಬಂದು ನಮಗೂ ಕೂಡಿ ಎಂದು ತೆಗೆದುಕೊಂಡು ಅಲ್ಲಿರುವವರೆಲ್ಲರಿಗೂ ಹಂಚಿ ತಾನೂ ತಿಂದಳು.

ತನ್ನ ಪತ್ನಿಯು ಹೇಳಿದ ಹಾಗೆ ಕೃಷ್ಣನ ಬಳಿ ತನ್ನ ಹಣದ ಅಭಾವದ ತೊಂದರೆಯನ್ನು ಹೇಳಿಕೊಳ್ಳಲು ಸುಧಾಮನಿಗೆ ಬಹಳ ಸಂಕೋಚವಾಯಿತು. ಹಣವನ್ನು ಅವನು ಕೇಳಲೇ ಇಲ್ಲ. ಕೃಷ್ಣನೊಡನೆ ಹಲವು ದಿನಗಳನ್ನು ಕಳೆದು ಅವನೊಡನೆ ಅನೇಕ ಚರ್ಚೆಗಳಲ್ಲಿ ತೊಡಗಿ ಆನಂದಿಸಿದನು.
ಆನಂದದಲ್ಲಿ ತೇಲುತ್ತ ಮನೆಗೆ ಹಿಂದಿರುಗಿದನು. ಆದರೆ ತನ್ನ ಮನೆ ತಲಪಿದಾಗ ಅವನಿಗೆ ಆಶ್ಚರ್ಯ ಕಾದಿತ್ತು. ಕೃಷ್ಣನನ್ನು ಕೇಳದಿದ್ದರೂ ಎಲ್ಲವನ್ನೂ ಕೊಟ್ಟಿದ್ದನು. ಇದರಿಂದ ಅವನ ಪತ್ನಿ ಮಕ್ಕಳು ಸಂತೋಷಿಸಿ ಕೃಷ್ಣನನ್ನು ಅನವರತ ಧ್ಯಾನ ಮಾಡುತ್ತಾ ಸುಖದಿಂದ ಇದ್ದರು.






Leave a Reply