ಶ್ರೀ ಕೃಷ್ಣ ಪಾಕಶಾಲೆ
– ಶ್ರೀ ಕುಂಜ ಕಿಶೋರ ದಾಸ
ಇಸ್ಕಾನ್ ಬೆಂಗಳೂರಿನ ಶ್ರೀರಾಧಾಕೃಷ್ಣ ಮಂದಿರದ ಪಾಕಶಾಲೆಯಲ್ಲಿ ತಯಾರಿಸಿ ಭಗವಂತನಿಗೆ ಸಮರ್ಪಿಸುವ ಮಧ್ಯಾಹ್ನದ “ರಾಜಭೋಗ” ಪ್ರಸಾದದಲ್ಲಿ ಪ್ರತಿನಿತ್ಯವೂ ಸುಮಾರು 12-13 ಭಕ್ಷ್ಯಗಳಿರುತ್ತವೆ. ದಕ್ಷಿಣಭಾರತದ ಖಾದ್ಯಗಳಲ್ಲದೇ ದೇಶದ ನಾನಾ ಭಾಗಗಳ ವಿಶೇಷ ತಿನಿಸುಗಳನ್ನು ಭಕ್ತರು ತಯಾರಿಸಿ ಭಗವಂತನಿಗೆ ನೈವೇದ್ಯ ಮಾಡುತ್ತಾರೆ.
ಬ್ರೊಕೋಲಿ – ಪನ್ನೀರ್ ಮಸಾಲಾ

ಬೇಕಾಗುವ ಪದಾರ್ಥಗಳು :
ಪ್ರೊಕೋಲಿ – 1 (ಹದಗಾತ್ರದ್ದು) (ಹಸಿರು ಹೂಕೋಸು)
ಹಸಿರು ಬಟಾಣಿ – 250 ಗ್ರಾಂ
ಹುರುಳಿಕಾಯಿ ( ಎಳೆಯದು) – 100 ಗ್ರಾಂ
ಪನ್ನೀರು – 250 ಗ್ರಾಂ
ಗೋಡಂಬಿ – 25 ಗ್ರಾಂ
ಹಸಿಮೆಣಸಿನಕಾಯಿ – 4-5
ದೊಣ್ಣೆಮೆಣಸಿನಕಾಯಿ – 50 ಗ್ರಾಂ
ಕೊತ್ತಂಬರಿ ಸೊಪ್ಪು – 1/4 ಕಟ್ಟು
ಜೀರಿಗೆ – 1/4 ಟೀ ಚಮಚ
ಇಂಗು – 1 ಚಿಟಿಕೆ
ತುಪ್ಪ – 50 ಗ್ರಾಂ
ಬೆಣ್ಣೆ – 50 ಗ್ರಾಂ
ಗರಂಮಸಾಲೆಪುಡಿ – 4-5 ಚಿಟಿಕೆ
ಆರ್ಗ್ಯಾನಿಕ್ ಹರ್ಬ್ಸ್ – 1/4 ಟೀ ಸ್ಪೂನ್ (ಬೇಕಾದಲ್ಲಿ ಪರಿಮಳಕ್ಕೆ ಬಳಸಬಹುದು)
ಉಪ್ಪು – ರುಚಿಗೆ ತಕ್ಕಷ್ಟು
ಬ್ರೊಕೋಲಿ ಮತ್ತು ಆರ್ಗ್ಯಾನಿಕ್ ಹರ್ಬ್ಸ್ಳು ವಿಶೇಷ ಆಧುನಿಕ ತರಕಾರಿ ಮಳಿಗೆಗಳಲ್ಲಿ ದೊರೆಯುತ್ತದೆ.
ಮಾಡುವ ವಿಧಾನ : ಮೊದಲು ಬ್ರೊಕಲಿ ಹೂವನ್ನು ಚಿಕ್ಕ ಹದಗಾತ್ರದ ಚೂರುಗಳನ್ನಾಗಿ ವಿಂಗಡಿಸಿ. ಇದನ್ನು ಬಿಸಿನೀರಿನಲ್ಲಿ 2-3 ನಿಮಿಷದಷ್ಟು ಕುದಿಸಿ, ನೀರನ್ನು ಬಸಿದು ಪ್ರತ್ಯೇಕವಾಗಿಡಿ. ಹುರುಳಿಕಾಯಿ, ಹಸಿರು ಬಟಾಣಿಯನ್ನು ಬಿಡಿಸಿ, ಬೇಯಿಸಿಕೊಳ್ಳಿ (3/4 ಭಾಗದಷ್ಟುಬೇಯಿಸಿ) ದೊಣ್ಣೆ ಮೆಣಸಿನ ಕಾಯಿ ಹಾಗೂ ಪನ್ನೀರನ್ನು ತಲಾ 1/2 ಇಂಚು ಗಾತ್ರದ ಚಿಕ್ಕ ಚಿಕ್ಕ ತುಂಡು ಮಾಡಿ ಬಿಸಿನೀರಿನಲ್ಲಿ ತೊಳೆದಿಟ್ಟುಕೊಳ್ಳಿ.
ಮುಕ್ಕಾಲು ಬೇಯಿಸಿದ ಹುರುಳಿಕಾಯಿ, ಹಸಿರು ಬಟಾಣಿ (ಗೋಡಂಬಿ), ಹಸಿ ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ.
(ಈ ಮಿಶ್ರಣ ಅತಿ ತೆಳುವು ಅಲ್ಲದೇ ಅತಿ ಗಟ್ಟಿಯೂ ಅಲ್ಲದೇ ಹದವಾಗಿರಲಿ) ಅನಂತರ ದಪ್ಪತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ, ಇಂಗು ಒಗ್ಗರಣೆ ಹಾಕಿ.
ಕೂಡಲೇ ರುಬ್ಬಿದ ತರಕಾರಿ ಮಿಶ್ರಣವನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಸುಮಾರು 1/2 ಲೀಟರ್ ನಷ್ಟು ನೀರು ಸೇರಿಸಿ, ಸಣ್ಣ ಉರಿಯಲ್ಲಿ ಸುಮಾರು 10 ನಿಮಿಷಗಳ ಕಾಲ ಕುದಿಸಿ (ತಳಹತ್ತದಂತೆ ನೋಡಿಕೊಳ್ಳಿ) ಹಾಗೂ ಪನ್ನೀರ್, ದೊಣ್ಣೆ ಮೆಣಸಿನಕಾಯಿ ಬ್ರೊಕಲೀ ಚೂರುಗಳನ್ನು ಸೇರಿಸಿ ಮತ್ತೆ5-6 ನಿಮಿಷ ಕುದಿಸಿ.
ಮುಕ್ಕಾಲು ಕುದಿ ಬಂದಾಗ ಗರಂಮಸಾಲೆ ಪುಡಿ, ಹಸಿರು ಸೊಪ್ಪುಗಳನ್ನು (ಇದು ಬೇಕಾದಲ್ಲಿ ಸೇರಿಸಬಹುದು) ಹಾಕಿ ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಗ್ಯಾಸ್ ಆಫ್ ಮಾಡಿದ ಅನಂತರ ಬ್ರೊಕೋಲಿ – ಪನ್ನೀರ್ ಮಸಾಲೆಗೆ ಬೆಣ್ಣೆ ಸೇರಿಸಿ ಚೆನ್ನಾಗಿ ಬೆರೆಸಿ.
ಬಿಸಿ ಬಿಸಿ ಬ್ರೊಕೋಲಿ-ಪನ್ನೀರ್ ಮಸಾಲೆ ಸಿದ್ಧ. ಇದನ್ನು ಚಪಾತಿ, ಪರಾಟ, ಪಲಾವ್ ಅಥವಾ ಪುಷ್ಪಾನ್ನದೊಂದಿಗೆ ಬೆರೆಸಿ ತಿನ್ನಬಹುದು. ಶ್ರೀರಾಧಾಕೃಷ್ಣ ಚಂದ್ರರಿಗೆ ಸಮರ್ಪಿಸಿ ಪ್ರಸಾದವನ್ನು ಸ್ವೀಕರಿಸಿ.
ಪುಷ್ಪಾನ್ನ

ಬೇಕಾಗುವ ಪದಾರ್ಥಗಳು :
ಬಾಸುಮತಿ ಅಕ್ಕಿ – 250 ಗ್ರಾಂ
ಗೋಡಂಬಿ – 100 ಗ್ರಾಂ
ದ್ರಾಕ್ಷಿ – 50 ಗ್ರಾಂ
ಏಲಕ್ಕಿ – 8-10
ಪಲಾವ್ ಎಲೆ – 5
ಚಕ್ಕೆ ಚೂರು – 1 1/4 ಇಂಚು
ಲವಂಗ – 8-10
ತುಪ್ಪ – 150 ಗ್ರಾಂ
ಅರಿಶಿನ ಪುಡಿ – 2 ಚಿಟಿಕೆ
ಸಕ್ಕರೆ – 1 ಟೇಬಲ್ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ನೀರು – 1/2 ಲೀಟರ್ ಗಿಂತ ಸ್ವಲ್ಪ ಹೆಚ್ಚು
ಮಾಡುವ ವಿಧಾನ : ಬಾಸುಮತಿ ಅಕ್ಕಿಯನ್ನು ತೊಳೆದು ಒಂದು ಶುಭ್ರವಾದ ಬಟ್ಟೆಯಲ್ಲಿ ಹರಡಿ, ಸುಮಾರು, 10-12 ನಿಮಿಷಗಳ ಕಾಲ ಆರಲು ಬಿಡಿ, ನಂತರ ಒಂದು ದಪ್ಪತಳದ ಪಾತ್ರೆಯಲ್ಲಿ ತುಪ್ಪ ಕಾಯಿಸಿ, ಅಕ್ಕಿಯನ್ನು ಸಣ್ಣ ಉರಿಯಲ್ಲಿ 2-3 ನಿಮಿಷ ಹುರಿಯಿರಿ.
ಸಕ್ಕರೆ, ಉಪ್ಪನ್ನುಳಿದು ಬಾಕಿ ಎಲ್ಲಾ ಪದಾರ್ಥಗಳನ್ನು ಹಾಕಿ ಮತ್ತೆ 2 ನಿಮಿಷ ಹುರಿದು ನೀರು ಸೇರಿಸಿ ಸುಮಾರು 10-12 ನಿಮಿಷ ಕುದಿಸಿ.
ಅಕ್ಕಿ ಮುಕ್ಕಾಲು ಬೆಂದ ನಂತರ ಪುನಃ ಸಕ್ಕರೆ ಹಾಗೂ ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ ಚಿಕ್ಕ ಉರಿಯಲ್ಲಿ 2-3 ನಿಮಿಷ ಬೇಯಿಸಿ. ಗ್ಯಾಸ್ ಆಫ್ ಮಾಡಿದ ನಂತರ 5-6 ನಿಮಿಷ ಮುಚ್ಚಳ ತೆಗೆಯದೆ ಹಾಗೇ ಬಿಡಿ. ಕೊನೆಯಲ್ಲಿ ಮುಚ್ಚಳ ತೆಗೆದು ಚೆನ್ನಾಗಿ ಬೆರೆಸಿ, ಪುಷ್ಪಾನ್ನ ಸಿದ್ಧ.






Leave a Reply