ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹಾಗೂ ಶಿಷ್ಯರ ನಡುವಿನ ಸಂವಾದ:
ಸ್ಥಳ : ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್; ದಿನಾಂಕ: 18 ಅಕ್ಟೋಬರ್, 1975
ಶ್ರೀಲ ಪ್ರಭುಪಾದ: ವೈದಿಕ ಪದ್ಧತಿಯಲ್ಲಿ, ಲೈಂಗಿಕತೆಯು ಕೇವಲ ಮಕ್ಕಳನ್ನು ಪಡೆಯುವುದಕ್ಕೆ ಉದ್ದೇಶಿತವಾಗಿತ್ತು. ಬೇರೆ ಮಾತುಗಳಲ್ಲಿ ಹೇಳುವುದಾದರೆ – ನಿರ್ಬ೦ಧ ಲೈಂಗಿಕತೆಗೆ ಅವಕಾಶವಿದೆ, ಆದರೆ ದೊಡ್ಡ ನಿರ್ಬಂಧದೊಂದಿಗೆ – ಕೆಲವು ಧಾರ್ಮಿಕ ನಿಯಮ ಹಾಗೂ ನೀತಿಗಳೊಂದಿಗೆ.

ಗರ್ಭಾಧಾನದ೦ತಹ ಹಲವು ಆಚರಣೆಗಳಿದ್ದವು. ಲೈಂಗಿಕತೆಯನ್ನು ಮಗುವನ್ನು ಪಡೆಯಲಿಕ್ಕಾಗಿ ನಡೆಸಿದರೂ ಅದನ್ನೇನು ರಹಸ್ಯವಾಗಿಡುತ್ತಿರಲಿಲ್ಲ. ಅಲ್ಲಿ ‘ಗರ್ಭಾಧಾನ ಸಂಸ್ಕಾರʼವೆಂಬ ಕಾರ್ಯಕ್ರಮ ನಡೆಸುತ್ತಿದ್ದರು. ಎಲ್ಲ ಬ್ರಾಹ್ಮಣರು, ಸ೦ಬ೦ಧಿಕರು ಬಂದು ಹರಸುತ್ತಿದ್ದರು.
ಪ್ರತಿಯೊಬ್ಬರಿಗೂ, “ಇನ್ನು ಸ್ವಲ್ಪ ಹೊತ್ತಿನಲ್ಲಿ ಈ ಮನುಷ್ಯನು ಸಂಭೋಗ ನಡೆಸಿ ಮಗುವನ್ನು ಪಡೆಯುವನು’ ಎಂದು ತಿಳಿದಿರುತ್ತಿತ್ತು. ಅಲ್ಲೊಂದು ಘನತೆಯಿರುತ್ತಿತ್ತು. ಲೈಂಗಿಕ ಚಟುವಟಿಕೆ ನಾಯಿ ಬೆಕ್ಕುಗಳ ಹಾಗೆ ಯಾವುದೇ ಮದವೇರಿದ ಕ್ಷಣದಲ್ಲಿ ನಡೆಸುವಂಥದಲ್ಲ.
ವಾಸ್ತವವಾಗಿ, ನಾಯಿ ಬೆಕ್ಕುಗಳು ಕೂಡ ಲೈಂಗಿಕತೆಯನ್ನು ಗುಟ್ಟಾಗಿ ನಡೆಸುವುದಿಲ್ಲ. ಮನುಷ್ಯರು ಇದನ್ನು ಗುಟ್ಟಾಗಿ ನಡೆಸುತ್ತಾರೆ ಮತ್ತು ಮಗುವನ್ನು ಪಡೆಯಲಿಚ್ಛಿಸದೆ ಕೆಲವು ನಿರೋಧಕಗಳನ್ನು ಬಳಸುತ್ತಾರೆ. ಅವರ ‘ವೈಜ್ಞಾನಿಕ ಪ್ರಗತಿ’ ಯು ಮಗುವನ್ನು ಕೊಲ್ಲುವುದು ಹೇಗೆ ಎಂಬುದಾಗಿದೆ;
ಹೇಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಗರ್ಭಪಾತಕ್ಕೆ ವ್ಯವಸ್ಥೆ ಮಾಡುವುದು, ಯುವ ಜನರಿಗೆ “ನೀನು ಸಂಭೋಗ ನಡೆಸು, ಆದರೆ ತೊಂದರೆಯಾಗದ ಹಾಗೆ ಮಾತ್ರೆಗಳನ್ನು ತೆಗೆದುಕೋ” ಎಂದು ಹೇಳುವುದು, ಇತ್ಯಾದಿ…
ಯಾಕೆ ಲೈಂಗಿಕತೆಯ ಎಲ್ಲ ಸಮಸ್ಯೆಗಳನ್ನು ಒಟ್ಟಿಗೆ ನಿವಾರಣೆ ಮಾಡಲಾಗುವುದಿಲ್ಲ? ಅದನ್ನು ಅವರು ಮಾಡಲಾರರು. ಏಕೆಂದರೆ ಅವರು ಮೃಗಗಳು. ಅವರು ಮೃಗೀಯ ನಾಗರಿಕತೆಯನ್ನು ಸೃಷ್ಟಿಸಿರುವರು. ಅವರು ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲಾರರು. ಕಂಡೂತಿವನ್ ಮನಿಸಿಜಮ್ ವಿಷಹೇತ ಧೀರಃ. ಅವರೇಕೆ ಜನರನ್ನು ಧೀರರಾಗುವಂತೆ ಬೋಧಿಸಲಾರರು?
‘ನಾನು ಈ ಕಡಿತದ ಅನುಭವ (ಲೈಂಗಿಕತೆಯ ತರಾತುರಿ)ವನ್ನು ಸಹಿಸುತ್ತೇನೆ. ನಾನು ಬ್ರಹ್ಮಚಾರಿಯಾಗಿ ಉಳಿಯುವೆ, ಆಧ್ಯಾತ್ಮದ ವೇದಿಕೆಯಲ್ಲಿ ಉಳಿಯುವೆ ಎಂದು…
ಅವರ ಬೋಧನೆ ಸರಿಯಲ್ಲ. “ನೀವು ಪುನಃ ಪುನಃ ಸಂಭೋಗ ನಡೆಸಬಹುದು” – ಅನಂತರ ಸಮಸ್ಯೆಗಳನ್ನು ಎದುರಿಸಿ, ಮತ್ತು ಈ ಯಾತನೆಗಳನ್ನು ಹೋಗಲಾಡಿಸಲು ಜನರು ಮತ್ತಷ್ಟು ಯಾತನೆಗಳನ್ನು ಆಹ್ವಾನಿಸುವರು. ‘ಬಹು ದುಃಖ ಭಾಜಃ,ʼ ಸಂಭೋಗ ನಡೆಸಿದ ಅನೈತಿಕ ಅಥವಾ ನೈತಿಕ – ಅನಂತರದ ಕೆಲಸ ಯಾತನೆ ಪಡುವುದೇ ಆಗಿದೆ.
ನೈತಿಕ ಸಂಭೋಗದ ಅನಂತರವು ಕೂಡ ನೀವು ನಿಮ್ಮ ಹೆಂಡತಿಯ ಕಾಳಜಿ ವಹಿಸಬೇಕು, ಮಕ್ಕಳ ಕಾಳಜಿ ವಹಿಸಬೇಕು, ಅವರ ಆಹಾರ, ಬಟ್ಟೆ ಶಿಕ್ಷಣ, ಉನ್ನತಿ ಮೊದಲಾದವುಗಳ ಕಾಳಜಿ ವಹಿಸಬೇಕು. ಒಟ್ಟಾರೆ ಯಾತನೆಯನ್ನು ಅನುಭವಿಸುತ್ತಲೇ ಇರಬೇಕು.
ಲೈಂಗಿಕತೆ ಅನೈತಿಕವಾದರೆ ನೀವು ಈ ಕೆಲವು ಸಮಸ್ಯೆ ಗಳನ್ನು ಅನುಭವಿಸಬೇಕು. ನೀವು ನಿರೋಧಕ ಅಥವಾ ಗರ್ಭಪಾತದಿಂದ ಮಗುವನ್ನು ಕೊಲ್ಲುವ ಮೂಲಕ ಪಾಪ ಕಾರ್ಯ ಮಾಡುತ್ತಿರುವಿರಿ; ಆದ್ದರಿಂದ ನಿಮ್ಮ ಮುಂದಿನ ಜನ್ಮದಲ್ಲಿ ನೀವೂ ಹತ್ಯೆಗೊಳಗಾಗುವಿರಿ.
ಅದೇ ವೇಳೆಗೆ ನೀವು ವೈದ್ಯರ ಬಳಿ ಹೋಗಬೇಕು. ವೆಚ್ಚ ಭರಿಸಬೇಕು. ಹಾಗಾದರೆ ಈ ಎಲ್ಲ ಯಾತನೆಗಳಿಂದ ಮುಕ್ತಿ ಎಲ್ಲಿದೆ? ನೈತಿಕ ಅಥವಾ ಅನೈತಿಕ, ಲೈಂಗಿಕತೆಯೆಂದರೆ ಯಾತನೆ ಪಡುವುದು ಎಂದು.
ಆದರೆ ‘ತೃಪ್ಯನ್ತಿ ನೇಹ ಕೃಪಣಾ ಬಹು ದುಃಖಭಾಜಃ’ ಈ ಮೂರ್ಖರು, ಒಮ್ಮೆ ಸಂಭೋಗ ನಡೆಸಿದರೆ ಅದರಿಂದ ತೃಪ್ತರಾಗುವುದಿಲ್ಲ; ”ಅದು ಸರಿ, ನಾನು ಈಗಾಗಲೇ ಒ೦ದು ಮಗುವನ್ನು ಹೊಂದಿದ್ದೇನೆ” ಎಂದಲ್ಲ. ”ನಾನು ಮತ್ತೆ ಮತ್ತೆ ಸ೦ಭೋಗ ನಡೆಸಬೇಕು” ಅವರು ಯೋಜಿಸುತ್ತಾರೆ.

ಯಾರಾದರೂ ಗರ್ಭಪಾತದಂತಹ ಪಾಪಕರ ಕೆಲಸ ನಡೆಸಿದವನು ”ಅದು ನಡೆಯಿತು. ಇನ್ನು ಮುಂದೆ ನಿಲ್ಲಿಸುವೆ” ಎಂದು ಯೋಚಿಸುತ್ತಾನೆಂದು ನೀವು ತಿಳಿಯುವಿರೇ? ಇಲ್ಲ. ಆತ ಹೇಳುವನು ಮತ್ತೊಮ್ಮೆ” ಎಂದು.
‘ತೃಪ್ಯನ್ತಿ ನೇಹ ಕೃಪಣಾ’ – ಇಂತಹ ಕೃಪಣರು ಎಂದಿಗೂ ತೃಪ್ತರಾಗುವುದಿಲ್ಲ. ಅವರಿಗೆ ಗೊತ್ತು, ತಾವು ಪಾಪಕಾರ್ಯ ಮಾಡುತ್ತಿರುವೆವು ಹಾಗೂ ಯಾತನೆ ಪಡುವೆವು ಎಂದು. ಆದರೂ ಅವರು ಈ ಪಾಪಕಾರ್ಯವನ್ನು ನಿಲ್ಲಿಸುವುದಿಲ್ಲ.
ಆದ್ದರಿಂದ, ಮನುಷ್ಯನಿಗೆ ಧೀರನಾಗಲು ಶಿಕ್ಷಣ ನೀಡಬೇಕು; “ನಾನು ಈ ಕಡಿತವನ್ನು ಸಹಿಸುವೆ ಅಷ್ಟೇ. ಇದರಿಂದ ಎಷ್ಟೊಂದು ತೊಂದರೆಗಳಿಂದ ಉಳಿದುಕೊಳ್ಳುವೆ” ಇದು ತಿಳುವಳಿಕೆ, ಮೂರ್ಖರಂತೆ ವರ್ತಿಸಿ, ಮತ್ತೆ ಮತ್ತಷ್ಟು ಮೂರ್ಖರಾಗುತ್ತಾ ಹೋಗಿ ಯಾತನೆ ಪಡುವುದು – ಇದು ನಾಗರಿಕತೆಯೇ?
ನಾಗರಿಕತೆಯೆಂದರೆ ಜನರನ್ನು ಮೂರ್ಖರನ್ನಾಗಿ ಮಾಡುತ್ತ ಅವರು ಯಾತನೆಪಡುತ್ತಾ, ಆಧ್ಯಾತ್ಮಿಕ ಆತ್ಮಹತ್ಯೆ ಮಾಡಿಕೊಳ್ಳುವಂತ ಪ್ರೇರೇಪಿಸುವುದೇ? ಈ ಜನರು ಮೂರ್ಖರಾಗುವ ಮತ್ತು ಯಾತನೆಪಡುವ ನಾಗರಿಕತೆಯನ್ನು ಸೃಷ್ಟಿಸಿರುವರು. ಅವರ ಎಲ್ಲ ಯಾತನೆಗಳು ಪ್ರಕೃತಿಯಿಂದ ವ್ಯವಸ್ಥಿತವಾದುದು.
ಪ್ರಕೃತಿ ಹೇಳುವಳು, “ನೀನು ಕೃಷ್ಣನನ್ನು ಮರೆತಿರುವೆ, ನೀನೀಗ ನನ್ನ ನಿಯಂತ್ರಣದಲ್ಲಿರಬೇಕು. ನೀನು ಮೂರ್ಖನಾಗಿರುವೆ. ಈಗ ಯಾತನೆ ಅನುಭವಿಸು” ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ ಕೃಷ್ಣನು ಹೇಳುವನು,
”ನನ್ನ ಭೌತಿಕ ಪ್ರಕೃತಿಯು ತೀಕ್ಷ್ಣವಾಗಿದ್ದು ಶಿಕ್ಷೆಯನ್ನು ನೀಡುವುದು. ಆಕೆ ಅದನ್ನೇಕೆ ಮಾಡುವಳು? ಅವಳು ನಮಗೆ ಶಿಕ್ಷಣ ನೀಡುತ್ತಿರುವಳು, “ಕೃಷ್ಣನಿಗೆ ಶರಣಾಗತರಾಗಿ, ಇಲ್ಲವಾದರೆ ನೀವು ಹೀಗೆ ಯಾತನೆ ಪಡುವಿರಿ” ಇದು ಪ್ರಕೃತಿಯ ಮಾರ್ಗ.
ಆದರೆ ಮೂರ್ಖರು ಅವರು ಮೂರ್ಖರಾಗಿರುವುದರಿಂದ – ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ: “ನಾನು ಪ್ರಕೃತಿಯ ಸಂಪೂರ್ಣ ನಿಯಂತ್ರಣದಲ್ಲಿರುವೆ, ಮತ್ತವಳ ಕೆಲಸವು ನನ್ನಂತಹ ಮೂರ್ಖನನ್ನು ತೆಕ್ಕೆಗೆ ತೆಗೆದುಕೊಂಡು ಯಾತನೆ ಪಡುವಂತೆ ಮಾಡುವುದಾಗಿದೆ” ಎಂದು ತಿಳಿದಿರುವುದಿಲ್ಲ. ಅಷ್ಟೇ ಅಲ್ಲದೇ, ಈ ಮೂರ್ಖರು ತಮ್ಮನ್ನು ತಾವು ಶಿಕ್ಷಣದಲ್ಲಿ ಮುಂದುವರಿದವರೆಂದು ಭಾವಿಸುವರು.
ಶಿಷ್ಯ: ಪ್ರಭುಪಾದ, ಅವರು ಈ ಯಾತನೆಯನ್ನು ನಿಜವಾದ ಸಂತೋಷವೆನ್ನುವರು.
ಶ್ರೀಲ ಪ್ರಭುಪಾದ: ಅದು ಸರಿ. ನೀನು ನಿನ್ನ ‘ಸಂತೋಷ’ ದೊಂದಿಗೆ ನಡೆ. ನಿನ್ನನ್ನು ಯಾರು ತಡೆಯುವರು? ಈ ‘ಸಂತೋಷ’ವನ್ನು ಅನುಭವಿಸು. ಆದರೆ ಈ ಲೌಕಿಕ ಜಗತ್ತಿನ ಪ್ರತಿಯೊಂದೂ ನಿನ್ನ ಅನಿರ್ಬ೦ಧಿತ. ಸಂತೋಷಕ್ಕೆಂದೇ ಇರುವುದಾದರೆ, ಮತ್ತೇಕೆ ನೀನು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು?
ಏಕೆ ಮಗುವನ್ನು ಗರ್ಭದಲ್ಲೇ ಕೊಲ್ಲುವ ಯೋಚನೆ ಮಾಡಬೇಕು? ಎಲ್ಲವೂ ಆನ೦ದ ದಾಯಕವೆಂದೇ? ಈ ಎಲ್ಲ ವ್ಯವಸ್ಥೆಗಳೂ ಶಿಕ್ಷೆಗಾಗಿ ಅಲ್ಲದೆ, ನಿನ್ನ ಇಂದ್ರಿಯ ಸಂತೋಷಕ್ಕೆ ಇರುವುದಾದರೆ, ನೀನೇಕೆ ನಿರೋಧಗಳನ್ನು ಅನುಸರಿಸಬೇಕು?
ಅದು ಅವರ ಮೂರ್ಖತನಕ್ಕೆ ಸಾಕ್ಷಿ. ಮೂಢಾನಾಭಿಜಾನಾತಿ: ಕೃಷ್ಣನು ಹೇಳುವನು, ”ಮೂರ್ಖರು ಎಂದಿಗೂ ಯಾವುದು ಏನು ಎಂದು ಅರಿಯರು’ ಕೃಷ್ಣನು ಹೇಳಿರುವುದನ್ನು ಎಷ್ಟೊಂದು ಬಾರಿ ಮೂಢಾ ಮಾಯಯಾಪಹೃತ ಜ್ಞಾನಾ ಎಂದು ಏಕೆ ಹೇಳಿರುವನೆಂದು ಅರಿಯಲು ಯತ್ನಿಸಿ.

“ಈ ಜನರು ಮೂರ್ಖರು, ಅವರು ತಿಳುವಳಿಕೆಯೆಂದುಕೊಂಡಿರುವುದು ಮಾಯೆಯಿಂದ ಅಪಹರಿಸಲ್ಪಟ್ಟುದಾಗಿದೆ” ದೇವೋತ್ತಮ ಪರಮಪುರುಷನು ಹೀಗೆ ಹೇಳುತ್ತಿರುವನೆಂದರೆ ಅಲ್ಲಿ ಏನಾದರೂ ಮಹತ್ತರ ಅರ್ಥ ಇರಲೇಬೇಕು.
ಮಾನವ ನಾಗರಿಕತೆಯು ಆಧ್ಯಾತ್ಮಿಕ ಅನುಭೂತಿಗೆ ಇರುವುದಾಗಿದೆ. ಆನಂದಮಯ ಅನುಭೂತಿ, ನೆಮ್ಮದಿಯ ಜೀವನ – ಕೇವಲ ಅಂಧಕಾರದ ಪುನರಾವರ್ತೆಯಲ್ಲ. ಮೃಗಗಳಂತೆ ಇಂದ್ರಿಯ ಸುಖವಲ್ಲ. ಇದು ಮಾನವ ನಾಗರಿಕತೆ.
ಶಿಷ್ಯ: ಶ್ರೀಲ ಪ್ರಭುಪಾದ, ದೈನಂದಿನ ಬದುಕಿನಲ್ಲಿ ನಾವು ಕೇವಲ ಭಕ್ತರು ಮಾತ್ರ ಸ್ವಲ್ಪ ಉದ್ವೇಗದಿಂದ ಮುಕ್ತರಾದಂತೆ ಕಾಣುತ್ತೇವೆ.
ಶ್ರೀಲ ಪ್ರಭುಪಾದ: ಹೌದು, ಅದು ವಾಸ್ತವ. ನಾವು ಅಲ್ಪ ಪ್ರಮಾಣದ ಉದ್ವೇಗಗಳನ್ನು ಹೊಂದಿದ್ದೇವೆ. ನಾವು ಈ ಮೂರ್ಖರ ಜಗತ್ತಿನಲ್ಲಿ ವ್ಯವಹರಿಸಬೇಕಿರುವುದರಿಂದ ಹೀಗೆ. ಇಲ್ಲವಾದರೆ ನಮ್ಮಲ್ಲಿ ಉದ್ವೇಗವಿಲ್ಲ. ಆದರೆ ನಾವು ಈ ಕಾರ್ಯಾಚರಣೆಯನ್ನು ಜನರ ಬಳಿ ಸಾರಿ ಅವರಿಗೆ ಸತ್ಯವನ್ನು ತಿಳಿಸಲೆಂದು ನಡೆಸುತ್ತಿರುವೆವು. ಆದ್ದರಿಂದ ನಾವು ಕೂಡ ಅಲ್ಪ ಉದ್ವೇಗವನ್ನು ಹೊಂದಿರಬೇಕಾಗುತ್ತದೆ. ಇಲ್ಲವಾದರೆ ಉದ್ವೇಗದ ಪ್ರಶ್ನೆಯೇ ನಮ್ಮಲ್ಲಿಲ್ಲ.
ನಾವು ಈ ಮೂರ್ಖರೊಂದಿಗೆ ಬೆರೆಯುತ್ತೇವೆ. ಈ ನಮ್ಮ ಕಾರ್ಯಾಚರಣೆಗಾಗಿ ಹಾಗೆ ಮಾಡಲೇಬೇಕು – ಆದ್ದರಿಂದ ನಮ್ಮಲ್ಲಿ ಕೊಂಚ ಉದ್ವೇಗವಿರುವುದು. ವಿಪರೀತ ಮಟ್ಟದ್ದೇನು ಅಲ್ಲ. ನೀವು ತಿಳಿದಿರಬೇಕು. ಈ ಇಡಿಯ ಜಗತ್ತು ಮೂರ್ಖರು ಹಾಗೂ ಮೂಢರಿಂದ ತುಂಬಿ ಹೋಗಿದೆ. ಇದೇನೂ ಉತ್ಪ್ರೇಕ್ಷೆಯಲ್ಲ, ಅಥವಾ ನೀವು ಬೇರೆಯೇನಾದರೂ ಹೇಳಬಯಸುವಿರೇನು?
ಶಿಷ್ಯ: ಇಲ್ಲ.
ಶ್ರೀಲ ಪ್ರಭುಪಾದ: ಹೌದೆ? ನೀವೇನು ಯೋಚಿಸುವಿರಿ? ನೀವು ಒಪ್ಪುವಿರೋ?
ಶಿಷ್ಯ: ಅವರೆಲ್ಲರೂ ಮೂಢರು.
ಶ್ರೀಲ ಪ್ರಭುಪಾದ: (ನಗುತ್ತಾ), ನಮ್ಮ ತೀರ್ಮಾನ ಅಂತಿಮ. ”ಎಲ್ಲ ಮೂರ್ಖರು ಮತ್ತು ಮೂಢರು, ಆದ್ದರಿಂದ ನಾನು ಈ ಮೂರ್ಖರನ್ನು “ಏನಾದರೂ ಪ್ರಶ್ನೆಯಿದೆಯೇ?” ಎಂದು ಕೇಳಿದರೆ ಅವರು ಸುಮ್ಮನಾಗುವರು. (ನಗುವರು) ”ಹೇಳಿ ಏನಾದರೂ ಪ್ರಶ್ನೆಯಿದೆಯೇ?” ಅವರೇನು ತಾನೇ ಕೇಳುವರು?
ನಾನು ಅವರಿಗೆ ಸವಾಲೆಸೆಯುವೆ. ”ಏನಾದರೂ ಪ್ರಶ್ನೆಯಿದೆಯೇ?” ಎಂದು. ಅವರಿಗೆ ಗೊತ್ತು “ನಾವು ಮೂರ್ಖರೆಂಬುದು ಸಾಬೀತಾಗಿದೆ.” ಕಳೆದ ರಾತ್ರಿಯ ನನ್ನ ಉಪನ್ಯಾಸದಲ್ಲಿ ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನನ್ನು ಛೇಡಿಸುವುದನ್ನು ಉಲ್ಲೇಖಿಸಿದ್ದೆ, ಅಶೋಚ್ಯಾನ್ ಅನ್ವಶೋಚಸ್ತ್ವಮ್ ಪ್ರಜ್ಞಾವಾದಾಂಸ್: “ನಿನ್ನ ಮಾತುಗಳು ಉನ್ನತ ಮಟ್ಟದಾಗಿದೆ.
ಆದರೆ ನೀನೇನು ಮಾಡುತ್ತಿರುವೆ ಗೊತ್ತೇ? ಕೆಳಮಟ್ಟದ ಮೂರ್ಖರಂತೆ ಮಾತಾಡುತ್ತಿರುವೆ. ನಿನ್ನ ಅಂತರಾತ್ಮ, ನಿನ್ನ ನೈಜ ಆಧ್ಯಾತ್ಮಿಕ ಅಸ್ತಿತ್ವವನ್ನು ಮೀರಿ ನೋಡುತ್ತಿರುವೆ, ಮೂರ್ಖತನದಿಂದ ನಿನ್ನನ್ನು ಈ ಮೇಲು ಹೊದಿಕೆ ಭೌತಿಕ ದೇಹವೆಂದು ಪರಿಗಣಿಸುತ್ತಿರುವೆ.
ಆದರೆ ಈ ಭೌತಿಕ ಶರೀರವು ನಿನ್ನೆಲ್ಲ ಯಾತನೆಯ ಮೂಲ ಕಾರಣವಾಗಿರುವುದು.” ನಾನು ಮುಂದುವರಿಸಿದೆ, ”ಇದು ಪ್ರತಿಯೊಬ್ಬರ ಅವಸ್ಥೆಯಾಗಿದೆ. ಎಲ್ಲರೂ ಮೂರ್ಖರು, ಮೂಢರು, ಜೀವನದ ನೈಜ ಸಮಸ್ಯೆಯನ್ನು ಕಡೆಗಣಿಸುತ್ತಿರುವರು” ಎಂದು.






Leave a Reply