ನವದ್ವೀಪ ಪರಿಕ್ರಮ (ಭಾಗ-8)
– ಡಾ.ಬಿ.ಆರ್.ಸುಹಾಸ್
ಶ್ರೀ ನವದ್ವೀಪ ಪರಿಕ್ರಮದಲ್ಲಿ ಐದನೆಯ ದ್ವೀಪ ಕೋಲದ್ವೀಪ. ಇದು ನವವಿಧ ಭಕ್ತಿಯ ಪಾದಸೇವನೆಯ ರಸವನ್ನು ಪ್ರತಿನಿಧಿಸುತ್ತದೆ. ಇದು ಗಂಗಾನದಿಯ ಪಶ್ಚಿಮ ಭಾಗಕ್ಕಿದೆ. ಈಗಿನ ನವದ್ವೀಪ ನಗರವಿರುವುದು ಈ ಕೋಲ ದ್ವೀಪದಲ್ಲೇ.

ಚೈತನ್ಯ ಮಹಾಪ್ರಭುಗಳ ಕಾಲದಲ್ಲಿ ಇದು ಕುಲಿಯಾಪಾಹಾದ ಎಂದು ಹೆಸರಾಗಿತ್ತು. ಇದನ್ನು ವರಾಹಕ್ಷೇತ್ರವೆಂದೂ ಕರೆಯಲಾಗುತ್ತದೆ. ಶ್ರೀ ಭಕ್ತಿವಿನೋದ ಠಾಕುರರ ಅಭಿಪ್ರಾಯದಲ್ಲಿ ಈ ದ್ವೀಪಕ್ಕೆ ಸಮನಾದ ಸ್ಥಳ ಭೂಮಿಯಲ್ಲೇ ಇಲ್ಲ.
ವಿಷ್ಣುವಿನ ಅವತಾರವಾದ ಶ್ರೀವರಾಹದೇವನು ಇಲ್ಲಿ ಪ್ರತ್ಯಕ್ಷವಾದುದರಿಂದ ಇದು ಕೋಲದ್ವೀಪ, ವರಾಹಕ್ಷೇತ್ರ ಎಂದು ಹೆಸರಾಯಿತೆಂದು ಸ್ಥಳ ಪುರಾಣ ಹೇಳುತ್ತದೆ. ಆ ಕಥೆ ಹೀಗಿದೆ:
ಗಂಗಾನದಿಯ ದಡದಲ್ಲಿ, ಪಂಚವೇಣೀ ಸಂಗಮದ (ಗಂಗಾ, ಅಲಕನಂದಾ, ಮಂದಾಕಿನೀ ಮತ್ತು ಗುಪ್ತರೂಪದ ಸರಸ್ವತೀ ನದಿಗಳ ಸಂಗಮ) ಬಳಿ, ಗಂಗೆಯ ಪಶ್ಚಿಮಕ್ಕೆ ಕುಲಿಯ ಪರ್ವತವೆಂಬ ಪರ್ವತವಿದೆ. ಸತ್ಯಯುಗದಲ್ಲಿ ಇಲ್ಲಿ ವಾಸುದೇವನೆಂಬ ಒಬ್ಬ ಬ್ರಾಹ್ಮಣನಿದ್ದ. ಅವನು ನಿತ್ಯವೂ ವರಾಹಮೂರ್ತಿಯನ್ನು ಪೂಜಿಸುತ್ತಿದ್ದ.
ಆಗ ಒಂದು ದಿನ, ಅವನ ಭಕ್ತಿಗೆ ಮೆಚ್ಚಿ ಶ್ರೀವರಾಹ ಅಥವಾ ಕೋಲದೇವ ಅವನಿಗೆ ಪ್ರತ್ಯಕ್ಷನಾದ. ಆಕಾಶವನ್ನು ಮುಟ್ಟುತ್ತಿದ್ದ ಬೆಟ್ಟದಂತೆ ಬೃಹದಾಕಾರ ಹೊಂದಿದ್ದ ಕೋಲದೇವನು, ತನಗೆ ನವದ್ವೀಪಧಾಮವು ಬಹಳ ಪ್ರಿಯವಾದುದೆಂದೂ ಮೂರು ಲೋಕಗಳಲ್ಲೂ ನವದ್ವೀಪಧಾಮಕ್ಕೆ ಸಾಟಿಯಾದುದು ಯಾವುದೂ ಇಲ್ಲವೆಂದೂ ಅವನಿಗೆ ಹೇಳಿದ.
ಈ ಧಾಮವನ್ನು ಸೇವಿಸುವುದರಿಂದ ಇತರ ಎಲ್ಲ ಪುಣ್ಯ ಕ್ಷೇತ್ರಗಳನ್ನೂ ಸೇವಿಸಿದಂತಾಗುವುದೆಂದೂ ಹೇಳಿದ ಭಗವಂತನು, ತಾನು ಕಲಿಯುಗದಲ್ಲಿ ಇಲ್ಲಿ ಲೀಲೆಗಳನ್ನು ಮಾಡಿ ತೋರಿಸುವೆನೆಂದೂ ಹೇಳಿದ. ಹೀಗೆ ವರಾಹದೇವ ಅಥವಾ ಕೋಲದೇವನು ಇಲ್ಲಿ ಪ್ರತ್ಯಕ್ಷನಾದುದರಿಂದ ವಾಸುದೇವನು ಇದನ್ನು ಕೋಲದ್ವೀಪ ಎಂದು ಕರೆದ.
ಈ ಕೋಲದ್ವೀಪವು ಗೋವರ್ಧನ ಪರ್ವತಕ್ಕಿಂತ ಬೇರೆಯಲ್ಲ ಎಂದು ಹೇಳಲಾಗಿದೆ. ವೃಂದಾವನದಲ್ಲಿರುವಂತೆ ಈ ಕ್ಷೇತ್ರದ ಉತ್ತರಕ್ಕೆ ಬಹುಳವನವೂ ದಕ್ಷಿಣಕ್ಕೆ ರಾಸಸ್ಥಳಿಯೂ ಇದೆ. ಇಲ್ಲಿಗೆ ಬರುವ ವ್ಯಕ್ತಿಯ ಅಪರಾಧಗಳೆಲ್ಲವೂ ನಾಶವಾಗುವುದರಿಂದ ಈ ಕ್ಷೇತ್ರಕ್ಕೆ ಅಪರಾಧಭರ್ಜನಪಾರ್ತ ಎಂಬ ಹೆಸರೂ ಇದೆ.
ಶ್ರೀ ಚೈತನ್ಯ ಮಹಾಪ್ರಭುಗಳು ಇಲ್ಲಿಗೆ ಬಂದಾಗ, ವಿದ್ವಾಂಸರಾದ ದೇವಾನಂದ ಪಂಡಿತರೂ ಗೋಪಾಲಚಕ್ರವರ್ತಿಗಳೂ ಸೇರಿದಂತೆ ಅನೇಕ ಅಪರಾಧಿಗಳ ತಪ್ಪುಗಳನ್ನು ತಿದ್ದಿ ಅವರ ಅಹಂಕಾರಯುಕ್ತ ಮನಸ್ಸುಗಳನ್ನು ಕರಗಿಸಿದರು. ಈ ವಿಷಯವನ್ನು ಮುಂದೆ ನೋಡೋಣ.
ನವದ್ವೀಪ ನಗರವಿರುವುದು ಈ ಕೋಲದ್ವೀಪದಲ್ಲೇ. ಇದು ಕಲ್ಕತ್ತೆಗೆ 130 ಕಿ.ಮೀ. ಉತ್ತರಕ್ಕಿದ್ದು, ಗಂಗಾನದಿಯ ದಂಡೆಯ ಮೇಲಿದೆ. ಈ ನಗರದಿಂದ ಮುಂದಕ್ಕಿರುವುದೇ ಮಾಯಾಪುರ.
ನವದ್ವೀಪವು ಕ್ರಿ.ಶ. ಹನ್ನೊಂದನೆಯ ಮತ್ತು ಹನ್ನೆರಡನೆಯ ಶತಮಾನಗಳಲ್ಲಿ ಬಂಗಾಳದ ರಾಜಧಾನಿಯಾಗಿತ್ತು. ಈಗ ಕೋಲದ್ವೀಪದಲ್ಲಿರುವ ಪ್ರಮುಖ ಪ್ರೇಕ್ಷಣೀಯ ಪವಿತ್ರ ಸ್ಥಳಗಳ ಕಿರು ಪರಿಚಯ ಮಾಡಿಕೊಳ್ಳೋಣ.
ದೇವಾನಂದ ಗೌಡೀಯ ಮಠ

ಈ ಮಠವು ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೂ, ಸಂಜೆ ನಾಲ್ಕರಿಂದ ರಾತ್ರಿ ಎಂಟು ಗಂಟೆಯವರೆಗೂ ತೆರೆದಿರುತ್ತದೆ. ನವದ್ವೀಪ ನಗರಕ್ಕೆ ಹೋಗಿ, ಅಲ್ಲಿನ ದೋಣಿಘಾಟ್ ಎಂಬ ಸ್ಥಳದಿಂದ ಆಟೋರಿಕ್ಷಾದಲ್ಲಿ ಈ ಸ್ಥಳವನ್ನು ತಲಪಬಹುದು.
ಮಠದ ದ್ವಾರದ ಮೇಲೆ ಯುದ್ಧ ಮಾಡುತ್ತಿರುವ ಸಿಂಹಗಳ ಮತ್ತು ಆನೆಗಳ ಹಾಗೂ ಕೈ ಜೋಡಿಸಿಕೊಂಡು ನಿಂತಿರುವ ಭಕ್ತರ ಕೆತ್ತನೆಗಳಿವೆ, ಹಾಗೂ ಶ್ರೀದೇವಾನಂದ ಗೌಡೀಯಮಠ ಎಂದು ಬರೆದಿದೆ.
ಈ ಮಠವನ್ನು ಶ್ರೀ ಭಕ್ತಿಪ್ರಜ್ಞಾನ ಕೇಶವಗೋಸ್ವಾಮಿಗಳು ಸ್ಥಾಪಿಸಿದರು. ಭಗವಂತನ ವಿಗ್ರಹಗಳಿರುವ ವೇದಿಕೆಯ ಬಲಗಡೆಗೆ ಇವರ ಸಮಾಧಿ ಮಂದಿರವಿದೆ. ಬಂಗಾಳದ ಬರಿಸಾಲ ಜಿಲ್ಲೆಯಲ್ಲಿ 1898ರಲ್ಲಿ ಜನಿಸಿದ ಇವರು ಉಪಾಧ್ಯಾಯರಾಗಿದ್ದು, ಮುಂದೆ, ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಭಕ್ತಿಸಿದ್ಧಾಂತ ಸರಸ್ವತಿಗಳ ಶಿಷ್ಯರಾಗಿ, ಶ್ರೀಲ ಶ್ರೀಧರ ಮಹಾರಾಜರಿಂದ ಸಂನ್ಯಾಸ ಸ್ವೀಕರಿಸಿದರು.
ಸಂನ್ಯಾಸಿಗಳಾದ ಕೂಡಲೇ, ಅವರು ತಮ್ಮ ಗುರುಗಳಾದ ಭಕ್ತಿಸಿದ್ಧಾಂತರ ಆಸೆಯನ್ನು ಪೂರ್ಣಗೊಳಿಸಲು ಈ ಮಠವನ್ನು ಸ್ಥಾಪಿಸಿದರು. ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರಿಗೆ ಸಂನ್ಯಾಸಾಶ್ರಮದ ದೀಕ್ಷೆ ನೀಡಿದವರು ಇವರೇ.
ಈ ಮಠ- ದೇಗುಲದ ಪ್ರಮುಖ ವಿಗ್ರಹಗಳೆಂದರೆ ಶ್ರೀರಾಧಾಕೃಷ್ಣ ವಿಗ್ರಹಗಳು. ಇಲ್ಲಿ ಈ ವಿಗ್ರಹಗಳ ಹೆಸರು, ಶ್ರೀರಾಧಾವಿನೋದಬಿಹಾರಿ. ಮೂಲ ವಿಗ್ರಹಗಳ ಎಡಕ್ಕೆ ಶ್ರೀ ಕೋಲವರಾಹದೇವ ಎಂಬ ವರಾಹದೇವರ ವಿಗ್ರಹವಿದೆ.
ಈ ಮಠವಿರುವ ಸ್ಥಳದಲ್ಲಿ ಹಿಂದೆ ಶ್ರೀ ಚೈತನ್ಯ ಮಹಾಪ್ರಭುಗಳು ದೇವಾನಂದಪಂಡಿತರೆಂಬುವರು ಮಾಡಿದ್ದ ಅಪರಾಧಗಳನ್ನು ಕ್ಷಮಿಸಿದ್ದರು. ಹಾಗಾಗಿ, ಇಲ್ಲಿಗೆ ಬರುವ ಯಾತ್ರಿಕರ ಪಾಪಗಳೆಲ್ಲವೂ ಕಳೆಯುತ್ತವೆ ಎಂದು ಹೇಳಲಾಗಿದೆ. ದೇವಾನಂದ ಪಂಡಿತರ ಕಥೆ ಹೀಗಿದೆ:
ಒಂದು ದಿನ, ಶ್ರೀವಾಸಪಂಡಿತರು ದೇವಾನಂದ ಪಂಡಿತರೆಂಬ ಮಹಾವಿದ್ವಾಂಸರ ಮನೆಯ ಮುಂದೆ ನಡೆದುಹೋಗುತ್ತಿದ್ದಾಗ, ಒಳಗಿನಿಂದ ಅವರು ಭಾಗವತವನ್ನು ಪಠಿಸುತ್ತಿದ್ದುದನ್ನು ಕೇಳಿ, ಒಳಹೋದರು.
ಮಹಾಭಕ್ತರಾಗಿದ್ದ ಶ್ರೀವಾಸರಿಗೆ ಭಾಗವತದ ಪ್ರತಿಯೊಂದು ಪದವೂ ಭಗವತ್ಪ್ರೇಮದಿಂದ ಕೂಡಿದ್ದ ಅಮೃತವಿದ್ದಂತೆ. ಹಾಗಾಗಿ ಅವರು ಭಾಗವತವನ್ನು ಕೇಳಿದಾಗ ಅವರಲ್ಲಿ ಭಗವತ್ಪ್ರೇಮವು ಉಕ್ಕಿ ಅವರು ಅಳತೊಡಗಿದರು.
ಆದರೆ ದೇವಾನಂದರ ಪಾಠಪ್ರವಚನಗಳನ್ನು ಕೇಳುತ್ತಿದ್ದ ವಿದ್ಯಾರ್ಥಿಗಳೆಲ್ಲರೂ ಗೊಡ್ಡು ಪಂಡಿತರಾಗಿದ್ದು ಭಕ್ತಿಯ ಅನುಭವವಿಲ್ಲದವರಾಗಿದ್ದರು. ಶ್ರೀವಾಸರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾರದೇ ಅವರು ಶ್ರೀವಾಸರನ್ನು ಪ್ರವಚನಕ್ಕೆ ಅಡ್ಡಿಯಾದರೆಂದು ಮನೆಯಿಂದ ಹೊರಗೆ ತಳ್ಳಿಬಿಟ್ಟರು.
ಅವರ ಗುರುಗಳಾದ ದೇವಾನಂದ ಪಂಡಿತರು ಇದನ್ನು ನೋಡಿಯೂ ತಡೆಯದೇ ಸುಮ್ಮನಿದ್ದರು. ಇಂಥ ಒಂದು ವೈಷ್ಣವಾಪರಾಧಕ್ಕೆ ಅವರೂ ಭಾಜನರಾದರು.
ದೇವಾನ೦ದ ಪಂಡಿತರು ಮಹಾವಿದ್ವಾಂಸರಾಗಿದ್ದರು. ಶ್ರೀಮದ್ಭಾಗವತದ ವಿಷಯದಲ್ಲಂತೂ ಅವರನ್ನು ಮೀರಿಸುವ ಪಂಡಿತರೇ ಇರಲಿಲ್ಲ. ಆದ್ದರಿಂದ ಅವರ ಪ್ರವಚನಗಳನ್ನು ಕೇಳಲು ಅನೇಕ ವಿದ್ಯಾರ್ಥಿಗಳು ಬರುತ್ತಿದ್ದರು. ಆದರೆ ದೇವಾನಂದರು ಮಹಾವಿದ್ವಾಂಸರಾಗಿದ್ದರೇ ಹೊರತು, ಭಕ್ತಿಯ ರಸವನ್ನು ಸವಿದಿರಲಿಲ್ಲ.

ಹೀಗಾಗಿ ಅವರ ಪ್ರವಚನಗಳೂ ಭಕ್ತಿವಿಹೀನವಾಗಿ ಶುಷ್ಕಪಾಂಡಿತ್ಯದಿಂದ ಕೂಡಿದ್ದವು. ಒಂದು ದಿನ, ಚೈತನ್ಯ ಮಹಾಪ್ರಭುಗಳು ನವದ್ವೀಪದ ಬೀದಿಗಳಲ್ಲಿ ಅಡ್ಡಾಡುತ್ತಾ ದೇವಾನಂದರ ಮನೆಯ ಸನಿಹದಲ್ಲಿದ್ದ ಮಹೇಶ್ವರ ವಿಶಾರದರ ಮನೆಗೆ ಬಂದಾಗ, ದೇವಾನಂದರು ಪ್ರವಚನ ಮಾಡುತ್ತಿದ್ದುದನ್ನು ಕೇಳಿ ಕುಪಿತರಾಗಿ, “ಈ ಮೂರ್ಖರು ಏನು ಹೇಳುತ್ತಿದ್ದಾರೆ?
ಭಾಗವತದ ಸಾರಾಂಶವನ್ನೇ ಇವರು ತಿಳಿದಿಲ್ಲ. ಭಗವಂತನ ಗ್ರಂಥಾವತಾರವಾದ ಭಾಗವತದ ಮುಖ್ಯ ಗುರಿಯೇ ಭಗವದ್ಭಕ್ತಿ’ ಎಂದು ಗದರಿಕೊಂಡರು. ಇನ್ನೊಮ್ಮೆ ದೇವಾನಂದರು ನೇರವಾಗಿ ಎದುರಿಗೇ ಸಿಕ್ಕಿದಾಗ, ಅವರು ತಮಗೆ ಬಹಳ ಪ್ರಿಯರಾದ ಶ್ರೀವಾಸರಲ್ಲಿ ಅಪರಾಧವೆಸಗಿದ್ದುದನ್ನು ಸ್ಮರಿಸಿಕೊಂಡು ಅವರನ್ನು ತರಾಟೆಗೆ ತೆಗೆದುಕೊಂಡರು,
‘ಹೇ ದೇವಾನಂದರೇ, ಭಾಗವತವನ್ನು ಕೇಳಿ ಅದರ ದಿವ್ಯರಸವನ್ನು ಅನುಭವಿಸಿ ಕೃಷ್ಣಪ್ರೇಮದಿಂದ ತುಂಬಿ ಅಳುತ್ತಿದ್ದ ಒಬ್ಬ ಭಕ್ತನನ್ನು ಹಾಗೆ ಅವಮಾನಿಸಿ ತಳ್ಳುವುದು ಸರಿಯೇ? ನೀವು ಭಾಗವತದ ಪ್ರವಚನಕಾರರಾಗಿರಬಹುದು. ಆದರೆ ನೀವೇ ಅದರ ಅಪಾರವಾದ ಅಮೃತರಸವನ್ನು ಸೇವಿಸಿಲ್ಲ.”
ಚೈತನ್ಯರು ಇಷ್ಟೆಲ್ಲಾ ಹೇಳುತ್ತಿದ್ದರೂ ದೇವಾನಂದರು ಏನನ್ನೂ ಹೇಳದೇ ಅವರನ್ನು ಉಪೇಕ್ಷಿಸಿ ಹೊರಟು ಹೋದರು.
ಒಂದು ದಿನ, ದೇವಾನಂದ ಪಂಡಿತರು ವಕ್ರೇಶ್ವರಪಂಡಿತರನ್ನು ಭೇಟಿ ಮಾಡುವಂತಾಯಿತು. ವಕ್ರೇಶ್ವರ ಪಂಡಿತರೆಂಬುವರು ಶ್ರೀಚೈತನ್ಯ ಮಹಾಪ್ರಭುಗಳ ನಿಕಟವರ್ತಿಗಳೂ ಮಹಾಭಕ್ತರೂ ಆಗಿದ್ದು, ತಮ್ಮ ಭಕ್ತಿಯುತ ನರ್ತನಕ್ಕೆ ಪ್ರಸಿದ್ಧರಾಗಿದ್ದರು. ಒಮ್ಮೆ ಅವರು ಕೃಷ್ಣಪ್ರೇಮದಲ್ಲಿ ಮುಳುಗಿ ಎಪ್ಪತ್ತೆರಡು ಗಂಟೆಗಳ ಕಾಲ ನಿರಂತರವಾಗಿ ನರ್ತಿಸಿದ್ದರು.
ಅವರು ಒಮ್ಮೆ ಕುಲಿಯಾಗ್ರಾಮ (ನವದ್ವೀಪ) ಕ್ಕೆ ಬಂದು, ಭಕ್ತರೊಬ್ಬರ ಮನೆಯಲ್ಲಿ ಇಳಿದುಕೊಂಡು, ಸಂಜೆಯಾಗುತ್ತಲೇ ಭಗವಂತನ ನಾಮಸಂಕೀರ್ತನೆ ಮಾಡುತ್ತಾ ಉನ್ಮಾದಿತರಾದಂತೆ ನರ್ತಿಸತೊಡಗಿದರು. ಅಲ್ಲಿ ಏನು ನಡೆಯುತ್ತಿದೆ ನೋಡೋಣವೆಂಬ ಕುತೂಹಲದಿಂದ ಬಂದ ದೇವಾನಂದಪಂಡಿತರು, ವಕ್ರೇಶ್ವರರ ಭಕ್ತಿಯ ಪರಾಕಾಷ್ಠೆಯನ್ನು ನೋಡಿ ಮೂಕವಿಸ್ಮಿತರಾದರು.
ಬೇಗನೆ ಜನರು ಗುಂಪುಗೂಡತೊಡಗಲು, ಅವರು ಒಂದು ಕೋಲಿನಿಂದ ಅವರೆಲ್ಲರನ್ನೂ ಅಡ್ಡಗಟ್ಟಿ ವಕ್ರೇಶ್ವರರು ಇನ್ನೂ ಆರು ಗಂಟೆಗಳ ಕಾಲ ಅನಿರ್ಬ೦ಧಿತರಾಗಿ ನರ್ತಿಸಲು ಅನುವು ಮಾಡಿಕೊಟ್ಟರು.
ಈ ಘಟನೆಯಿಂದ ಪ್ರಭಾವಿತರಾದ ದೇವಾನಂದರು ಕ್ರಮೇಣ ವಕ್ರೇಶ್ವರರೊಂದಿಗೆ ಸಹವರ್ತಿಸುತ್ತಾ ಅವರಿಗೆ ವಿವಿಧ ಸೇವೆಗಳನ್ನು ಮಾಡುತ್ತಾ ಅವರ ಭಕ್ತಿಪೂರಿತ ಮಾತುಗಳನ್ನೂ ಉಪದೇಶಗಳನ್ನೂ ಕೇಳುತ್ತಾ, ಅವರಿಗೆ ತಮ್ಮ ಹಿಂದಿನ ವರ್ತನೆಯ ಬಗ್ಗೆ ಪಶ್ಚಾತ್ತಾಪವುಂಟಾಯಿತು.
ಈ ಹೊತ್ತಿಗೆ ಶ್ರೀ ಚೈತನ್ಯರು ಸಂನ್ಯಾಸ ಸ್ವೀಕರಿಸಿ ಪುರಿಯಲ್ಲಿ ಸ್ವಲ್ಪಕಾಲ ಕಳೆದ ಬಳಿಕ, ವೃಂದಾವನಕ್ಕೆ ಹೋಗುತ್ತಾ ದಾರಿಯಲ್ಲಿ ಕುಲಿಯಾಗ್ರಾಮಕ್ಕೆ ಬಂದರು. ಆಗ ಅವರು ಅನೇಕ ಭಕ್ತರನ್ನು ಅವರ ಅಪರಾಧಗಳಿಂದ ಮುಕ್ತರನ್ನಾಗಿಸಿದರು. ಆಗ ದೇವಾನಂದಪಂಡಿತರು ಅವರ ಬಳಿಗೆ ಬಂದು ಅವರ ಪಾದಕಮಲಗಳಿಗೆರಗುತ್ತಾ ತಮ್ಮ ಹಿಂದಿನ ವರ್ತನೆಗೆ ಕ್ಷಮೆ ಯಾಚಿಸಿದರು.
ಆಗ ಶ್ರೀ ಚೈತನ್ಯರು, “ನೀವು ನನ್ನ ಭಕ್ತರಾದ ವಕ್ರೇಶ್ವರರಲ್ಲಿ ತೋರಿದ ಭಕ್ತಿಗಾಗಿ ನಿಮ್ಮಲ್ಲಿ ಪ್ರಸನ್ನನಾಗಿದ್ದೇನೆ” ಎಂದು ಹೇಳುತ್ತಾ ಅವರ ಅಪರಾಧಗಳನ್ನು ಕ್ಷಮಿಸಿದರು. ಇದು ನಡೆದದ್ದು ಈ ಸ್ಥಳದಲ್ಲೇ ಆದ್ದರಿಂದ, ದೇವಾನಂದ ಪಂಡಿತರ ಹೆಸರಿನಲ್ಲೇ ಇಲ್ಲಿ ಈ ಮಠವನ್ನು ಸ್ಥಾಪಿಸಲಾಗಿದೆ.
ಪ್ರೌಢಮಾಯೆ ಮತ್ತು ವೃದ್ಧ (ಕ್ಷೇತ್ರಪಾಲ) ಶಿವ ದೇವಾಲಯ
ಈ ದೇವಾಲಯವು ನವದ್ವೀಪನಗರದ ಮುಖ್ಯ ಮಾರುಕಟ್ಟೆಯಲ್ಲಿ, ಒಂದು ಆಲದ ಮರದ ಕೆಳಗಿದೆ. ಈ ಪ್ರದೇಶವನ್ನು ಪಾಪೋದಮಾತಲ ಅಥವಾ ಪರಮಾತಲ ಎಂದು ಕರೆಯುತ್ತಾರೆ. ಇಲ್ಲಿ ದರ್ಶನದ ಅವಧಿಯು ಬೆಳಗ್ಗೆ ಹತ್ತು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗಿರುತ್ತದೆ.
ಭಕ್ತರಿಗೆ ಕೆಲವೊಮ್ಮೆ ಇಲ್ಲಿ ಇಷ್ಟವಾಗದ ಒಂದು ವಿಚಾರವೆಂದರೆ, ಇಲ್ಲಿನ ಪೂಜೆಯು ವೈಷ್ಣವ ರೀತಿಯಾಗಿರದೇ, ಪ್ರಾಣಿಬಲಿಯನ್ನೂ ಉಳ್ಳದಾಗಿರುತ್ತದೆ. ಇಲ್ಲಿನ ವಿಗ್ರಹಗಳು, ವೃದ್ಧಶಿವ ಅಥವಾ ಕ್ಷೇತ್ರಪಾಲ ಶಿವ, ಮತ್ತು ಪ್ರೌಢಮಾಯೆ.
ವೃದ್ಧಶಿವ ಅಥವಾ ಕ್ಷೇತ್ರಪಾಲ ಶಿವ, ನವದ್ವೀಪಧಾಮದ ನಿತ್ಯರಕ್ಷಕ. ಪ್ರೌಢಮಾಯೆ ಅವನ ಪತ್ನಿಯಾಗಿದ್ದು, ಯೋಗಮಾಯೆಯೇ ಆಗಿದ್ದಾಳೆ. ಯೋಗಮಾಯೆಯು ಇಡೀ ನವದ್ವೀಪಧಾಮವನ್ನು ಆವರಿಸಿ, ಭಕ್ತರಲ್ಲದವರು ಪ್ರವೇಶಿಸುವುದನ್ನು ತಡೆಯುತ್ತಾಳೆ. ಭಕ್ತರಿಗಾದರೋ, ಈ ಧಾಮದ ಮಹಿಮೆಯನ್ನು ತೋರಿಸುತ್ತಾಳೆ.
ಅಭಕ್ತರು ಈ ನವದ್ವೀಪಧಾಮವನ್ನು ಭೌತಿಕವಾಗಿ ಪ್ರವೇಶಿಸಬಹುದು; ಆದರೆ ಅವರಿಗೆ ಈ ಧಾಮದ ಮಹಿಮೆಯು ಅರ್ಥವಾಗುವುದಿಲ್ಲ. ಶ್ರೀಕೃಷ್ಣನು ತನ್ನ ಲೀಲೆಗಳನ್ನು ತೋರಿಸಲು ಕಾಣಿಸಿಕೊಳ್ಳುವಾಗ ಯೋಗಮಾಯೆಯೂ ಅವನೊಂದಿಗೆ ಕಾಣಿಸಿಕೊಂಡು ಅವನ ಲೀಲೆಗಳಿಗೆ ವಾತಾವರಣವನ್ನು ಅನುಕೂಲಗೊಳಿಸುತ್ತಾಳೆ.
ವೃಂದಾವನದಲ್ಲಿ ಅವಳು ಶ್ರೀಕೃಷ್ಣನ ಭಕ್ತರಿಗೆಲ್ಲಾ ಒಂದು ರೀತಿಯ ಮರೆವನ್ನುಂಟುಮಾಡಿ ಅವರು ಅವನನ್ನು ತಮ್ಮ ಪುತ್ರ, ಪ್ರೇಮಿ, ಪ್ರಿಯಬಂಧು ಎಂದೆಲ್ಲಾ ಭಾವಿಸಿ ಭಕ್ತಿ ಪ್ರೇಮಗಳಲ್ಲಿ ಮುಳುಗುವಂತೆ ಮಾಡುತ್ತಾಳೆ. ಅಂತೆಯೇ ಈ ನವದ್ವೀಪದಲ್ಲಿಯೂ ಶ್ರೀಚೈತನ್ಯರ ಸಹವರ್ತಿಗಳಿಗೆ ಅವರೊಬ್ಬ ಮಹಾನ್ ಭಕ್ತರು ಎಂಬ ಭಾವನೆಯುಂಟು ಮಾಡುತ್ತಾಳೆ. ಆದರೆ ಇದು, ಅವರೇ ತಮ್ಮ ದೈವತ್ವವನ್ನು ತೋರುವವರೆಗಿರುತ್ತದೆ.
ಹಿಂದೆ, ಪ್ರೌಢಮಾಯಾ ಮತ್ತು ವೃದ್ಧ ಶಿವರ ದೇವಾಲಯವು ಮಾಯಾಪುರದಲ್ಲಿ (ಅಂತರ್ದ್ವೀಪ) ಇಸ್ಕಾನ್ ದೇವಾಲಯ ಮತ್ತು ಯೋಗಪೀಠಗಳ ನಡುವೆ ಇತ್ತು. ಆದರೆ ಗಂಗಾನದಿಯು ತನ್ನ ದಿಕ್ಕನ್ನು ಬದಲಿಸಿದುದರಿಂದ, ಈ ಪ್ರದೇಶವೆಲ್ಲಾ ಗಂಗೆಯಿಂದ ಆವೃತವಾಗಿ, ಈ ದೇವಾಲಯವು ಮುಳುಗಿ ಹೋಯಿತು. ಆದ್ದರಿಂದ ಪ್ರೌಢಮಾಯಾ ಮತ್ತು ವೃದ್ಧಶಿವರ ವಿಗ್ರಹಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು.
ಯೋಗಮಾಯೆಯು ವ್ರಜಭೂಮಿಯಲ್ಲಿ ಪೌರ್ಣಮಾಸಿಯಾಗಿಯೂ, ನವದ್ವೀಪದಲ್ಲಿ ಪ್ರೌಢಮಾಯೆಯಾಗಿಯೂ, ಸೀಮಂತದ್ವೀಪದಲ್ಲಿ ಪಾರ್ವತಿಯಾಗಿಯೂ ನೆಲೆಸಿದ್ದಾಳೆ.
ಧರ್ಮೇಶ್ವರ (ಮಹಾಪ್ರಭು ಬಾರಿ) ದೇವಾಲಯ

ಈ ದೇವಾಲಯವು ಪರಮಾತಲ ಪ್ರದೇಶದ ಸಮೀಪವೇ ಇದೆ. ಪರಮಾತಲ ಪ್ರದೇಶದಿಂದ ಐದು ನಿಮಿಷದ ನಡಿಗೆಯಲ್ಲಿ ಈ ದೇಗುಲವನ್ನು ತಲಪಬಹುದು. ಇದು ಶ್ರೀಚೈತನ್ಯ ಮಹಾಪ್ರಭುಗಳ ದೇವಾಲಯವಾಗಿದ್ದು, ಇಲ್ಲಿನ ಚೈತನ್ಯರ ವಿಗ್ರಹವನ್ನು ಅವರ ಪತ್ನಿ ವಿಷ್ಣುಪ್ರಿಯೆಯು ಅವರು ಸಂನ್ಯಾಸ ಸ್ವೀಕರಿಸಿದ ಬಳಿಕ ಪೂಜಿಸುತ್ತಿದ್ದಳೆಂದು ಹೇಳಲಾಗಿದೆ.
ಇಲ್ಲಿನ ಚೈತನ್ಯರ ವಿಗ್ರಹದಲ್ಲಿ ಅವರ ಕೈಗಳು ಭಕ್ತನ ಕಡೆಗೆ ಚಾಚಿಕೊಂಡಿವೆ. ಅವರು ಧರಿಸುತ್ತಿದ್ದರೆನ್ನಲಾದ ಮರದ ಪಾದುಕೆಗಳೂ ಇಲ್ಲಿವೆ.
ಚೈತನ್ಯರು ಸಂನ್ಯಾಸ ತೆಗೆದುಕೊಂಡಾಗ ಅವರ ಪತ್ನಿ ವಿಷ್ಣುಪ್ರಿಯೆಯ ವಯಸ್ಸು ಕೇವಲ ಹದಿನಾರು. ಅವರ ಅಂತರ್ಧಾನವಾದಾಗ ಅವರ ವಯಸ್ಸು ತೊಂಬತ್ತಾರು. ಹಾಗಾಗಿ, ಈ ವಿಗ್ರಹವನ್ನು ಅವರು ಎಂಬತ್ತಾರು ವರ್ಷಗಳ ಕಾಲ ಪೂಜಿಸಿದ್ದರು.
(ಮುಂದುವರಿಯುತ್ತದೆ)






Leave a Reply