ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ
ವೈದಿಕ ಜ್ಞಾನ ನಿರ್ದಿಷ್ಟವಾದುದು. ಏಕೆಂದರೆ ಅದು ಸ್ವತಃ ಭಗವಂತನಿಂದ ಆರಂಭವಾಗಿ ಪರಿಪೂರ್ಣ ಗುರುಪರಂಪರೆಯಿಂದ ಬಂದುದು. ಭಗವಂತನೇ ವೇದಜ್ಞಾನದ ಮೊದಲ ಮಾತನ್ನು ಆಡಿದ್ದು, ಮತ್ತು ಅದು ದಿವ್ಯವಾದ ಮೂಲಗಳಿಂದ ನಮಗೆ ಬಂದಿದೆ.

ಭಗವಂತನು ಪರಿಪೂರ್ಣವಾದ್ದರಿಂದ ಅವನು ಐಹಿಕ ಪ್ರಕೃತಿಯ ನಿಯಮಗಳಿಗೆ ಬದ್ಧನಾಗುವ ಸಾಧ್ಯತೆಯೇ ಇಲ್ಲ. ಆದರೆ ಚೇತನಾಚೇತನ ವಸ್ತುಗಳು ಎರಡೂ ಪ್ರಕೃತಿ ನಿಯಮಗಳಿಂದ ಮತ್ತು ಕೊನೆಗೆ ಭಗವ೦ತನ ಶಕ್ತಿಯಿಂದ ನಿಯಂತ್ರಿಸಲ್ಪಟ್ಟಿವೆ.
ಈಶೋಪನಿಷತ್ತಿನಲ್ಲಿ ಈ ಜಗತ್ತಿನೊಳಗಿರುವ ಸಕಲ ವಸ್ತುಗಳ ಒಡೆಯನಾರು ಎಂಬುದರ ಬಗ್ಗೆ ಮಾಹಿತಿ ಇದೆ.
ಭಗವದ್ಗೀತೆಯಲ್ಲಿ ಅಪರಾ ಪ್ರಕೃತಿ ಮತ್ತು ಪರಾ ಪ್ರಕೃತಿಯ ಬಗ್ಗೆ ವಿವರಣೆಯಿದೆ. ಪ್ರಕೃತಿ ತತ್ತ್ವಗಳಾದ ಭೂಮಿ, ಅಗ್ನಿ, ಜಲ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರಗಳು. ಎಲ್ಲವೂ ಭಗವಂತನ ಅಪರಾ ಅಥವಾ ಐಹಿಕ ಶಕ್ತಿಗೆ ಸೇರಿದವು.
ಆದರೆ ಜೀವಿಯು ಭಗವಂತನ ಪರಾಪ್ರಕೃತಿ ಅಂದರೆ ಉಚ್ಚ ಶಕ್ತಿಯಾಗಿದೆ.
ಎರಡೂ ಪ್ರಕೃತಿಗಳೂ ಅಥವಾ ಶಕ್ತಿಗಳೂ ಭಗವಂತನಿಂದ ಹೊಮ್ಮಿದವೇ. ಕೊನೆಗೆ ಅವನೇ ಅಸ್ತಿತ್ವವುಳ್ಳ ಸಕಲ ವಸ್ತುಗಳ ನಿಯಾಮಕ. ಪರಾ ಅಥವಾ ಅಪರಾ ಪ್ರಕೃತಿಗೆ ಸೇರದ ಯಾವುದೂ ಈ ಜಗತ್ತಿನಲ್ಲಿಲ್ಲ. ಆದ್ದರಿಂದ ಎಲ್ಲವೂ ಪರಮ ಪುರುಷನ ಆಸ್ತಿ.
ದೇವೋತ್ತಮ ಪರಮ ಪುರುಷ ಪರಿಪೂರ್ಣ ವ್ಯಕ್ತಿ ತನ್ನ ನಾನಾ ಬಗೆಯ ಶಕ್ತಿಗಳ ಮೂಲಕ ಎಲ್ಲವನ್ನೂ ಸರಿಹೊಂದಿಸುವ ಪೂರ್ಣವಾದ ಭಕ್ತಿಶಕ್ತಿ ಅವನಿಗಿದೆ. ಪರಮ ಪುರುಷನನ್ನು ಅನೇಕ ವೇಳೆ ಅಗ್ನಿಗೆ ಹೋಲಿಸಲಾಗಿದೆ.

ಸಾವಯವ ಮತ್ತು ನಿರವಯವ ವಸ್ತುಗಳನ್ನು ಆ ಅಗ್ನಿಯ ಶಾಖ ಮತ್ತು ಬೆಳಕುಗಳಿಗೆ ಹೋಲಿಸಲಾಗಿದೆ.
ಅಗ್ನಿಯು ಶಕ್ತಿಯನ್ನು ಶಾಖ ಮತ್ತು ಬೆಳಕಿನ ರೂಪದಲ್ಲಿ ಪಸರಿಸುವಂತೆ, ಭಗವಂತನು ತನ್ನ ಶಕ್ತಿಯನ್ನು ನಾನಾ ರೂಪಗಳಲ್ಲಿ ಪ್ರದರ್ಶಿಸುತ್ತಾನೆ. ಹೀಗೆ ಅವನು ಎಲ್ಲದರ ನಿಯಂತ್ರಕ, ಪೋಷಕ ಮತ್ತು ನಿಯಾಮಕ.
ಅವನೇ ಎಲ್ಲದರ ಜ್ಞಾತೃ ಮತ್ತು ದಾತ. ಅವನು ಕಲ್ಪನೆಗೆ ನಿಲುಕದ ಶಕ್ತಿಗಳನ್ನು ಶಕ್ತಿ, ಸಂಪತ್ತು, ಖ್ಯಾತಿ, ಸೌಂದರ್ಯ, ಜ್ಞಾನ ಮತ್ತು ವೈರಾಗ್ಯಗಳನ್ನು – ಉಳ್ಳವನು.
ಮಾನವನು ಅದನ್ನು ತಿಳಿದುಕೊಳ್ಳುವಷ್ಟು ಬುದ್ಧಿವಂತನಾಗಿರಬೇಕು. ಭಗವಂತನು ನಮಗೆ ಎಷ್ಟು ಕೊಡುತ್ತಾನೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಉದಾಹರಣೆಗೆ ಹಸು ಹಾಲನ್ನು ಕೊಡುತ್ತದೆ. ಆದರೆ ಅದು ಆ ಹಾಲನ್ನು ಕುಡಿಯುವುದಿಲ್ಲ. ಅದು ಹುಲ್ಲನ್ನೂ, ಬೂಸವನ್ನೂ ತಿನ್ನುತ್ತದೆ.
ಆದರೆ ಹಾಲು ಮನುಷ್ಯರಿಗಾಗಿ ಮೀಸಲು. ಭಗವಂತನ ವ್ಯವಸ್ಥೆ ಹೀಗಿರುತ್ತದೆ. ಅವನು ನಮಗಾಗಿ ಯಾವ ವಸ್ತುಗಳನ್ನು ಮೀಸಲಿಟ್ಟಿರುವನೋ ಅವುಗಳಿಂದ ನಾವು ತೃಪ್ತರಾಗಿರಬೇಕು. ನಮ್ಮಲ್ಲಿರುವ ವಸ್ತುಗಳು ನಿಜವಾಗಿ ಯಾರಿಗೆ ಸೇರಿದವೆಂಬುದನ್ನು ನಾವು ಸದಾ ಚಿಂತಿಸಬೇಕು.
ಆದರೆ ಆಧುನಿಕ ಜಗತ್ತಿನಲ್ಲಿ ಮಾನವರು ಪರಮಾತ್ಮನ ಇರುವಿಕೆಯನ್ನೇ ಮರೆತು ಕೇವಲ ಆಸ್ತಿ ಪಾಸ್ತಿಗಳು, ಐಶ್ವರ್ಯ, ಭೂಮಿ ಎಂದು ಪರಸ್ಪರ ದ್ವೇಷಿಸಿಕೊಂಡು ನಾಯಿಗಳಂತೆ ಕಚ್ಚಾಡುತ್ತಿದ್ದಾರೆ. ಭಗವತ್ಕೃಪೆಯಿಂದ ಪ್ರಾಪ್ತವಾದ ಸೌಕರ್ಯಗಳಿಂದ ಮಾನವ ತೃಪ್ತನಾಗಬೇಕು.

ತಾನೇ ಪ್ರಕೃತಿಯ ಸಂಪನ್ಮೂಲಗಳ ಒಡೆಯನೆಂದು ಹೇಳಿಕೊಂಡರೆ ಶಾಂತಿ ಸಿಕ್ಕುವುದಿಲ್ಲ. ಇದರ ಸಂಪೂರ್ಣ ಒಡೆತನ ಭಗವಂತನದು. ದೇವೋತ್ತಮ ಪರಮ ಪುರುಷನ ಒಡೆತನವನ್ನು ಅವರು ಒಪ್ಪದಿದ್ದರೆ, ಅವರು ತಮ್ಮದೆಂದು ಹೇಳಿಕೊಳ್ಳುವ ಎಲ್ಲ ಆಸ್ತಿಯೂ ಕದ್ದಿರುವ೦ಥದ್ದಾಗುತ್ತದೆ.
ಪರಿಣಾಮವಾಗಿ, ಅವರು ಪ್ರಕೃತಿಯ ನಿಮಯಗಳಿಂದ ಶಿಕ್ಷೆಗೆ ಒಳಗಾಗುತ್ತಾರೆ. ಆದುದರಿಂದ ಮಾನವರು ನಾಯಿ-ಬೆಕ್ಕುಗಳಂತೆ ಕಚ್ಚಾಡಬಾರದು. ಮಾನವ ಜೀವನದ ಮಹತ್ತ್ವವನ್ನೂ ಗುರಿಯನ್ನೂ ಅರಿಯುವಷ್ಟು ಅವರು ಬುದ್ಧಿವಂತರಾಗಿರಬೇಕು.
ವೈದಿಕ ಸಾಹಿತ್ಯಗಳಿಂದ ಪರಮ ಪುರುಷನನ್ನು ಅರಿಯಬೇಕು. ಕೃಷ್ಣ ಪ್ರಜ್ಞೆಯ ದಾರಿಯನ್ನು ಹಿಡಿಯಬೇಕು. ಈ ಪ್ರಕೃತಿಯಲ್ಲಿ ಕ್ಷುದ್ರ ಜಂತುಗಳಿಂದ ಹಿಡಿದು ಪ್ರಾಣಿಗಳವರೆಗೆ ಅವು ಪ್ರಕೃತಿಯ ನಿಯಮಗಳನ್ನು ಮೀರದೇ ಅನುಸರಿಸುತ್ತವೆ. ಅಲ್ಲಿ ಅವುಗಳಿಗೆ ಪಾಪ ಪುಣ್ಯದ ಪ್ರಶ್ನೆಯೇ ಇಲ್ಲ.
ಆದರೆ ವಿವೇಕಿಯಾದ ಮಾನವನ ವಿಚಾರದಲ್ಲಿ ಅದು ಭಿನ್ನವಾಗಿದೆ. ವೈದಿಕ ಶಿಕ್ಷಣ ಇರುವುದು ಮಾನವನಿಗಾಗಿಯೇ. ಮಾನವ ಜನ್ಮ ಮಾತ್ರವೇ ಜವಾಬ್ದಾರಿಯುತ ಜನ್ಮವಾಗಿದೆ.
ಈ ಪ್ರಕೃತಿಯ ನಿಯಮಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಅರಿತುಕೊಂಡು ಮಾನವನು ಅಂಥ ತಿಳುವಳಿಕೆಯಿಂದ ಲಾಭ ಪಡೆಯುವುದನ್ನು ಕಲಿತಿದ್ದಾನೆ.
ಪಾಪದ ಮೂಲ ಎಲ್ಲಿದೆಯೆಂದರೆ, ಭಗವಂತನ ಒಡೆತನವನ್ನು ಅಲ್ಲಗಳೆದು, ಪ್ರಕೃತಿಯ ನಿಯಮಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವುದರಲ್ಲಿ ಪ್ರಕೃತಿಯ ನಿಯಮಗಳ ಅಥವಾ ಭಗವಂತನ ಆಜ್ಞೆಯ ಉಲ್ಲಂಘನೆಯು ಮಾನವನಿಗೆ ವಿನಾಶವನ್ನು ತರುತ್ತದೆ.
ಶಾಂತಚಿತ್ತನೂ, ಪ್ರಕೃತಿಯ ನಿಯಮಗಳನ್ನು ಬಲ್ಲವನೂ, ಅನಾವಶ್ಯಕವಾದ ಅನುರಕ್ತಿ ಅಥವಾ ದ್ವೇಷಗಳಿಗೆ ಒಳಗಾಗದವನೂ ಖಂಡಿತ ಭಗವಂತನ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಮತ್ತು ಅವನು ಶಾಶ್ವತ ಧಾಮವಾದ ಭಗವದ್ಧಾಮಕ್ಕೆ ತಲಪಲು ಖಂಡಿತ ಅರ್ಹನಾಗುತ್ತಾನೆ.
ಸಂಗ್ರಹಾನುವಾದ : ಡಾ. ಕೆ. ವೈ. ಬಾಲರಾಜ್, ಆಧಾರ : ಶ್ರೀ ಈಶೋಪನಿಷತ್ತು (ಮಂತ್ರ – ಒಂದು)






Leave a Reply