ಪಾತ್ರ ಪರಿಚಯ:
ಕಥನಕಾರ, ಶ್ರೀರಾಮ, ಮಹಾರಾಜ ದಶರಥ, ಲಕ್ಷ್ಮಣ, ವಿಶ್ವಾಮಿತ್ರ, ಋಷಿ, ವಸಿಷ್ಠ, ಸೀತೆ, ಜನಕ ಮಹಾರಾಜ, ಸೇವಕ, ಪರಶುರಾಮ, ರಾವಣ
– ಶ್ರೀಮತಿ ಪದ್ಮನಿ ಬಾಲು
ದೃಶ್ಯ – 1
ಕಥನಕಾರ : ಒಂದಾನೊಂದು ಕಾಲದಲ್ಲಿ ಅಯೋಧ್ಯಾನಗರದಲ್ಲಿ ಬಹಳ ಧರ್ಮಾತ್ಮನೂ ಮತ್ತು ಗುಣ ಸಂಪನ್ನನೂ ಆದ ದಶರಥ ಮಹಾರಾಜನು ರಾಜ್ಯವಾಳುತ್ತಿದ್ದನು. ಆದರೆ ರಾಜನು ಪುತ್ರವಿಹೀನನಾಗಿದ್ದ ಕಾರಣ ತನ್ನ ಅನಂತರ ರಾಜ್ಯವನ್ನಾಳಲು ಸಮರ್ಥನಾದ ಮಗನನ್ನು ಪಡೆಯುವುದಕ್ಕಾಗಿ ಋಷ್ಯಶೃಂಗ ಮುನಿಯ ಆಶೀರ್ವಾದದಿಂದ ಒಂದು ಮಹಾಯಜ್ಞವನ್ನು ಪುತ್ರ ಕಾಮೇಷ್ಠಿ ಯಾಗವನ್ನು ಆಚರಿಸಿದನು.

ಕೆಲ ಕಾಲಾನಂತರ ರಾಜಪತ್ನಿಯರು ನಾಲ್ವರು ಶೂರರಾದ ಪುತ್ರರಿಗೆ ಜನ್ಮ ನೀಡಿದರು. ಅವರಿಗೆ ರಾಮ, ಲಕ್ಷ್ಮಣ, ಭರತ, ಶತ್ರುಘ್ನರೆಂದು ಹೆಸರಿಟ್ಟರು. ಅವರೆಲ್ಲರೂ ಪರಮ ದೇವೋತ್ತಮ ಪುರುಷನಾದ ಶ್ರೀ ಮಹಾವಿಷ್ಣುವಿನ ವಿಸ್ತರಣೆಗಳು. ರಾಮನಾದರೋ ಎಲ್ಲರ ಪ್ರೇಮದ ಪುತ್ಥಳಿ.
ಸದ್ಗುಣ ಸಂಪನ್ನನಾದ ರಾಮನಲ್ಲಿ ದಶರಥನಿಗೆ ಆಗಾಧವಾದ ಅನುರಾಗ. ರಾಜನ ನಾಲ್ವರು ಪುತ್ರರೂ ಸುಂದರರೂ ಮತ್ತು ಬಲಶಾಲಿಗಳೂ ಆಗಿ ವರ್ಧಿಸುತ್ತಿದ್ದರು. ರಾಮನು ಹದಿನಾರು ವರ್ಷದ ಯುವಕನಾಗಿದ್ದಾಗ ಅವನ ತಂದೆಯು ತಮ್ಮ ವಂಶದ ಹಿರಿಮೆಯನ್ನು ಕುರಿತು ವಿವರಿಸುತ್ತಿದ್ದನು.
ದಶರಥ: ನನ್ನ ಮುದ್ದು ರಾಮ ಲಕ್ಷ್ಮಣರೇ, ನಮ್ಮ ವಂಶದ ಮೂಲ ಪುರುಷ ಸಾಕ್ಷಾತ್ ಸೂರ್ಯದೇವ. ಅನೇಕ ಮಹಾ ಮಹಿಮರಾದ ಮೇಧಾವಿಗಳಾದ ಅರಸರು ನಮ್ಮ ಭೂಮಿಯನ್ನಾಳಿದ್ದಾರೆ. ಇಕ್ಷ್ವಾಕು ಮಹಾರಾಜನೇ ಅಯೋಧ್ಯಾ ನಗರವನ್ನು ನಿರ್ಮಿಸಿದವನು.
ನಮ್ಮನ್ನು ಪಾಪ ವಿಮುಕ್ತರನ್ನಾಗಿ ಮಾಡಲು ಭಗೀರಥ ಮುನಿಯು ಸ್ವರ್ಗಲೋಕದ ನದಿಯಾದ ಗಂಗೆಯನ್ನು ಭೂಮಿಗೆ ತಂದನು. ಅಷ್ಟೇ ಅಲ್ಲದೆ ಮಹಾತ್ಮನೂ, ಸತ್ಯವಂತನೂ ಮತ್ತು ಸಚ್ಚರಿತನೂ ಆಗಿದ್ದ ರಾಜಾ ಹರಿಶ್ಚಂದ್ರನೂ ಸಹ ನಮ್ಮ ವಂಶಜನೇ.
ಹರಿಶ್ಚಂದ್ರನನ್ನು ಪರೀಕ್ಷಿಸುವುದಕ್ಕಾಗಿ ವಿಶ್ವಾಮಿತ್ರ ಮುನಿಯು ಅವನಿಗೆ ಅನೇಕ ಕಷ್ಟಗಳನ್ನು ಕೊಟ್ಟನು. ಆದರೆ ಅವನು ಎಲ್ಲವನ್ನೂ ಪರಿಹರಿಸಿಕೊಂಡು ನಿಷ್ಕಳಂಕನಾಗಿ ಹೊರಬಂದನು. ಕೊನೆಗೆ ಮುನಿಯು ಹರಿಶ್ಚಂದ್ರನಿಂದ ಸುಪ್ರೀತನಾದನು.
ಸೇವಕ: ಮಹಾರಾಜ, ವಿಶ್ವಾಮಿತ್ರ ಮುನಿಗಳು ತಮ್ಮನ್ನು ಕಾಣಲು ಬಯಸುತ್ತಾರೆ.
ದಶರಥ : ಕೂಡಲೇ ಅವರನ್ನು ಆದರದಿಂದ ಒಳಗೆ ಕರೆದುಕೊಂಡು ಬನ್ನಿ… ವಿಶ್ವಾಮಿತ್ರ ಮಹರ್ಷಿಗೆ ಪ್ರಣಾಮಗಳು. ಆಯೋಧ್ಯಾ ನಗರಿಗೆ ತಮ್ಮನ್ನು ಸ್ವಾಗತಿಸುತ್ತೇನೆ. ನಮ್ಮ ರಾಜಧಾನಿಯು ತಮ್ಮ ಪಾದಧೂಳಿನಿಂದ ಪಾವನವಾಯಿತು.
ತಾವು ಆಗಮಿಸಿ ನಮಗೆ ಮೇರೆ ಮೀರಿದ ಸೌಭಾಗ್ಯವನ್ನು ಕರುಣಿಸಿದ್ದೀರಿ… ಯಾರಲ್ಲಿ!? ನಮ್ಮ ಗೌರವಾನ್ವಿತ ಅತಿಥಿಗಳ ಸತ್ಕಾರಕ್ಕಾಗಿ ಪೂಜಾ ಸಾಮಗ್ರಿಗಳನ್ನು ಅಣಿ ಮಾಡಿ. ಕೂಡಲೇ ಭೋಜನ ಪಾನೀಯಗಳನ್ನು ಸಿದ್ಧ ಪಡಿಸಿ.

ವಿಶ್ವಾಮಿತ್ರ : ನಿನಗೆ ಮಂಗಳವಾಗಲಿ, ರಾಜನ್ ದೀರ್ಘಾಯುಷ್ಮಾನ್ ಭವ, ನನ್ನನ್ನು ಉಪಚರಿಸುವ ತವಕ ಒತ್ತಟ್ಟಿಗಿರಲಿ.
ದಶರಥ: ರಾಮ ಲಕ್ಷ್ಮಣರೇ, ಬ್ರಹ್ಮ ಸೃಷ್ಟಿಗೆ ಸಮಾನವಾದ ಬ್ರಹ್ಮಾಂಡವನ್ನು ಸೃಷ್ಟಿಸಿದ ವಿಶ್ವಾಮಿತ್ರರಿಗೆ ನಮಸ್ಕರಿಸಿ. ವಿಶ್ವಾಮಿತ್ರ: ಕಲ್ಯಾಣಮಸ್ತು, ದಶರಥ ಮಹಾರಾಜ, ನಾನೊಂದು ಕೋರಿಕೆಯನ್ನು ನಿನ್ನ ಮುಂದಿಡಲು ಬಂದಿದ್ದೇನೆ.
ದಶರಥ: ಅದೇನೆಂದು ಹೇಳಿ ಮುನಿವರ್ಯ. ತಮ್ಮ ಬೇಡಿಕೆಯನ್ನು ಈಡೇರಿಸಲು ಕಂಕಣಬದ್ಧನಾಗಿದ್ದೇನೆ. ಧನ ಸಂಪತ್ತೇ, ಭೂ ಸಂಪತ್ತೇ, ಸಕಲೈಶ್ವರ್ಯವೇ, ಜನ ಸಂಪತ್ತೇ ತಮಗೇನು ಬೇಕೋ ಅದನ್ನು ಪರಿಗ್ರಹಿಸಿ.
ವಿಶ್ವಾಮಿತ್ರ : ಪ್ರಸ್ತುತದಲ್ಲಿ ನಾನೊಂದು ಯಾಗವನ್ನು ಕೈಗೊಂಡಿದ್ದೇನೆ. ಆದರೆ ಮಾರೀಚ ಮತ್ತು ಸುಬಾಹುರೆಂಬ ರಾಕ್ಷಸರಿಬ್ಬರು ಅದಕ್ಕೆ ಬಹಳ ವಿಘ್ನಗಳನ್ನೊಡ್ಡುತ್ತಿದ್ದಾರೆ. ನಾನು ಯಾಗನಿರತನಾಗಿರುವ ಕಾರಣ ಅವರನ್ನು ಕೊಲ್ಲುವುದು ಧರ್ಮ ವಿರುದ್ಧ.
ದಶರಥ: ಖಂಡಿತವಾಗಿಯೂ ನಾನು ನಿಮಗೆ ಸಹಾಯ ಮಾಡುತ್ತೇನೆ. ಅಸುರರಿಂದ ತಮ್ಮ ಆಶ್ರಮವನ್ನು ರಕ್ಷಿಸಲು ನನ್ನ ಸೈನ್ಯವನ್ನು ಸಜ್ಜುಗೊಳಿಸುತ್ತೇನೆ.
ವಿಶ್ವಾಮಿತ್ರ: ಅವರನ್ನು ವಧಿಸಲು ನನಗೆ ನಿನ್ನ ಸೈನ್ಯದ ಅಗತ್ಯವಿಲ್ಲ. ನನಗೆ ಬೇಕಾಗಿರುವುದು ಕೇವಲ ಒಬ್ಬ ವ್ಯಕ್ತಿ.
ದಶರಥ : ಒಬ್ಬನೇ?….. ಯಾರವನು?
ವಿಶ್ವಾಮಿತ್ರ : ರಾಮ.
ದಶರಥ: ರಾಮ! ರಾಮನೇ? ಆಗದು, ಆಗದು…. ನನ್ನ ಕಣ್ಮಣಿ ರಾಮ ಬೇಡ. ನನ್ನ ರಾಮನನ್ನು ನನ್ನಿಂದ ಅಗಲಿಸಬೇಡಿ. ಅವನಿನ್ನೂ ಕೇವಲ ಹದಿನಾರು ವರ್ಷದ ಹಸುಳೆ. ಇನ್ನೂ ಅವನ ವಿದ್ಯಾಭ್ಯಾಸವೂ ಸಹ ಸಂಪೂರ್ಣವಾಗಿಲ್ಲ. ಅವನಿನ್ನೂ ಧನುರ್ವಿದ್ಯೆಯಲ್ಲಿ ಪರಿಣತನಾಗಿಲ್ಲ.

ಆ ಅಸುರರನ್ನು ಕೊಲ್ಲಲು ರಾಮನಿಗೆ ಹೇಗೆ ತಾನೇ ಸಾಧ್ಯವಾಗುವುದು? ನನ್ನ ಬೃಹತ್ ಸೈನ್ಯವು ಆ ರಾಕ್ಷಸರನ್ನು ಕೊಲ್ಲಲಿ. ದೇವರಾಜನಾದ ಇಂದ್ರನೂ ಸಹ ದಾನವರೊಡನೆ ಕಾದಾಡಲು ನನ್ನ ಸೈನ್ಯವನ್ನು ಉಪಯೋಗಿಸಿಕೊಂಡ. ನಾನೇ ಸ್ವತಃ ಒಂದು ……
ವಿಶ್ವಾಮಿತ್ರ : ಆದರೆ ನಾನಿಲ್ಲಿಗೆ ಬಂದಿರುವುದು ರಾಮನಿಗಾಗಿ.
ದಶರಥ : ಬೇಕಿದ್ದರೆ ನನ್ನ ಕಣ್ಣುಗಳಿಂದ ರೆಪ್ಪೆಗಳನ್ನು ಬೇರ್ಪಡಿಸಿ, ಆದರೆ ನನ್ನ ರಾಮನನ್ನು ನನ್ನಿಂದ ದೂರ ಮಾಡಬೇಡಿ!!!
ವಿಶ್ವಾಮಿತ್ರ : ಒಬ್ಬ ಹೆಂಗಸಿನಂತೆ ಬಡ ಬಡಿಸಬೇಡ ಮತ್ತು ಕಾರಣಗಳನ್ನು ಕೊಡಬೇಡ. ರಾಮನನ್ನು ನನ್ನ ಸಂಗಡ ಕಳುಹಿಸುವಿಯೋ ಅಥವಾ ಇಲ್ಲವೋ ಹೇಳಿ ಬಿಡು.
ದಶರಥ : ಸಾಧ್ಯವೇ ಇಲ್ಲ.
ವಿಶ್ವಾಮಿತ್ರ : ನೀನು ಹರಿಶ್ಚಂದ್ರನ ಕೀರ್ತಿಗೆ ಕಳಂಕವನ್ನುಂಟು ಮಾಡುತ್ತಿದ್ದೀಯೆ. ಬೇಡಿದ್ದನ್ನು ಕೊಡುವೆನೆಂದು ಮಾತು ಕೊಟ್ಟು ಈಗ ಇಲ್ಲವೆನ್ನುತ್ತಿರುವೆ. ನಿನಗೆ ಧಿಕ್ಕಾರವಿರಲಿ. ಒಬ್ಬ ನಯವಂಚಕನೆದುರು ನಿಲ್ಲಲು ನನಗಿಷ್ಟವಿಲ್ಲ. ಇಗೋ ಹೊರಟೆ. ನಿನ್ನ ಕುಟುಂಬದೊಡನೆ ಸುಖವಾಗಿರು.
ವಸಿಷ್ಠ : ಮಹರ್ಷಿಗಳೇ, ದಯಮಾಡಿ ಕೋಪಗೊಳ್ಳಬೇಡಿ.
ವಿಶ್ವಾಮಿತ್ರ : ಹೇ, ವಸಿಷ್ಠ ಮಹಾಮುನಿಯೇ, ನೀವು ನಿಮ್ಮ ಶಿಷ್ಯನಿಗೆ ನೀಡಿದ ಶಿಕ್ಷಣವು ನಿಷ್ಫಲವಾಗಿದೆ.
ವಸಿಷ್ಠ: ವಿಶ್ವಾಮಿತ್ರ, ರಾಮನ ಸೌಂದರ್ಯ ಸೌಶೀಲ್ಯಗಳು ಯಾರನ್ನಾದರೂ ಮೋಹಿಸಿ ಬಂಧಿಸುವಂತಹವು. ದಶರಥ, ಚಿಂತಿಸಬೇಡ. ವಿಶ್ವಾಮಿತ್ರರ ರಕ್ಷಣೆಯಿರುವಾಗ ರಾಮನಿಗೆ ಯಾವುದೇ ರೀತಿಯ ಅಪಾಯವೂ ತಟ್ಟುವುದಿಲ್ಲ. ರಾಮನಿಗೆ ಯುದ್ಧವಿದ್ಯೆಯಲ್ಲಿ ಶಿಕ್ಷಣ ನೀಡುವುದಕ್ಕಾಗಿಯೇ ಅವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಬಯಸುತ್ತಾರೆ.

ದಶರಥ : ಎಲೈ ಮಹರ್ಷಿಯೇ, ನನ್ನ ಅಜ್ಞಾನವನ್ನು ಮನ್ನಿಸಿ ನಮ್ಮ ಮೇಲೆ ಕರುಣೆ ತೋರಿಸಿ. ತಾವು ರಾಮನನ್ನು ಕರೆದುಕೊಂಡು ಹೋಗಬಹುದು. ಆದರೆ ಅವನೊಡನೆ ದಯಮಾಡಿಲಕ್ಷ್ಮಣನನ್ನೂ ಕರೆದುಕೊಂಡು ಹೋಗಿ… ಯಾರಲ್ಲಿ, ರಾಮ ಲಕ್ಷ್ಮಣರನ್ನು ಕರೆ ತನ್ನಿ.
(ರಾಮ ಲಕ್ಷ್ಮಣರು ಪ್ರವೇಶಿಸಿ ತಂದೆ ಮತ್ತು ಮಹರ್ಷಿಗಳಿಗೆ ನಮಸ್ಕರಿಸುತ್ತಾರೆ)
ರಾಮ ಲಕ್ಷ್ಮಣರೇ ನೀವು ವಿಶ್ವಾಮಿತ್ರ ಋಷಿಯೊಡನೆ ಹೋಗಿ, ಅವರ ಆದೇಶಗಳನ್ನು ಪಾಲಿಸಿ.
ರಾಮ: ಹಾಗೆಯೇ ಆಗಲಿ ತಂದೆ (ಹೊರಡುತ್ತಾನೆ)
ದೃಶ್ಯ – 2 ( ಅರಣ್ಯ ಪ್ರದೇಶ)
ವಿಶ್ವಾಮಿತ್ರ : ರಾಮ ಲಕ್ಷ್ಮಣರೇ, ಎದ್ದೇಳಿ. ನಿಮ್ಮ ಪ್ರಾತಃಕರ್ಮಗಳನ್ನು ಮುಗಿಸುವ ವೇಳೆಯಾಯಿತು. ನಾನು ನಿಮಗೆ ಬಲ ಮತ್ತು ಅತಿ ಬಲವೆಂಬ ವಿದ್ಯೆಯನ್ನುಪದೇಶಿಸುತ್ತೇನೆ. ನೀವು ಇದರಿಂದ ಹಸಿವು, ಆಯಾಸ ಮತ್ತು ನಿದ್ರೆಯನ್ನು ಗೆಲ್ಲಬಹುದು. ಅಷ್ಟೇ ಅಲ್ಲದೆ ನಿಮ್ಮ ಶತ್ರುಗಳನ್ನೆಲ್ಲ ಜಯಿಸಬಹುದು.
(ಮಂತ್ರವನ್ನು ಹೇಳುತ್ತಾ ಜಲ ತರ್ಪಣ ಮಾಡುತ್ತಾರೆ) ಇನ್ನು ಹೊರಡೋಣ ನಡೆಯಿರಿ. (ಮುಂದೆ ಸಾಗುತ್ತಾರೆ. ರಾಕ್ಷಸಿಯೊಬ್ಬಳ ಗರ್ಜನೆ ಕೇಳಿ ಬರುತ್ತದೆ) ಈಗ ನೀವು ಕೇಳುತ್ತಿರುವ ಶಬ್ದ ತಾಟಕಿ ಎಂಬ ರಾಕ್ಷಸಿಯ ಕೂಗು. ಅವಳು ಮಾರೀಚ ಮತ್ತು ಸುಬಾಹುರ ತಾಯಿ. ಅವಳೇ ಇಲ್ಲಿ ಕತ್ತಲೆಯನ್ನುಂಟು ಮಾಡುತ್ತಿರುವವಳು. ಆಗೋ ನೋಡು, ಅಲ್ಲಿದ್ದಾಳೆ. ತಡ ಮಾಡದೆ ಅವಳನ್ನು ಕೊಲ್ಲು.
ರಾಮ: ನಾನು ಸ್ತ್ರೀ ಹತ್ಯೆ ಮಾಡಲು ಹೇಗೆ ತಾನೆ ಸಾಧ್ಯ?
ವಿಶ್ವಾಮಿತ್ರ : ಅವಳನ್ನು ಕೊಲ್ಲಲು ಹಿಂಜರಿಯಬೇಡ, ರಾಮ. ರಾತ್ರಿಯಾಗುತ್ತಲೇ ಅವಳ ಶಕ್ತಿ ಅನೇಕ ಪಟ್ಟು ವರ್ಧಿಸುತ್ತದೆ. ಆದ್ದರಿಂದ ಅವಳನ್ನು ತತ್ ಕ್ಷಣವೇ ವಧಿಸು. (ರಾಮ ಶಬ್ದ ಕೇಳಿಸಿದ ದಿಕ್ಕಿಗೆ ಬಾಣ ಬಿಡುತ್ತಾನೆ) ನಾವು ಇಲ್ಲಿ ಸ್ವಲ್ಪ ಕಾಲ ವಿಶ್ರಮಿಸೋಣ.

ರಾಮ: ಲಕ್ಷ್ಮಣ, ಗುರುಗಳಿಗೆ ಸ್ವಲ್ಪ ಹಣ್ಣು ಹಂಪಲಗಳನ್ನು ತೆಗೆದುಕೊಂಡು ಬಾ.
ಲಕ್ಷ್ಮಣ: ಹಾಗೆಯೇ ಆಗಲಿ ರಾಮ.
ವಿಶ್ವಾಮಿತ್ರ : ರಾಮ, ಧನುರ್ವಿದ್ಯೆಯಲ್ಲಿ ನೀನು ಬಹಳ ಪ್ರವೀಣನಾಗಿದ್ದೀಯೆ. ನಾನು ನಿನಗೆ ಕೆಲವು ಅದೃಶ್ಯವಾದ ಬಾಣಗಳನ್ನು ಕೊಡುತ್ತೇನೆ. ನನ್ನ ತಪಃಶಕ್ತಿಯಿಂದ ಗಳಿಸಿಕೊಂಡ ಆಯುಧಗಳ ಉಪಯೋಗವು ಸಾಮಾನ್ಯ ಮಾನವರಿಗೆ ತಿಳಿಯದ ಕಾರಣ ಅವುಗಳನ್ನು ಅವಶ್ಯಕವಿದ್ದಾಗ ಮಾತ್ರ ಉಪಯೋಗಿಸು. (ಲಕ್ಷ್ಮಣನು ಹಣ್ಣುಗಳನ್ನು ತರುತ್ತಾನೆ) ನಡೆಯಿರಿ, ನನ್ನ ಆಶ್ರಮಕ್ಕೆ ಹೋಗೋಣ.
ದೃಶ್ಯ – 3 ( ಆಶ್ರಮ)
ಋಷಿ: ವಿಶ್ವಾಮಿತ್ರರೇ ನಾವು ನಿಮಗಾಗಿಯೇ ಕಾಯುತ್ತಿದ್ದೆವು. ಎಲ್ಲವೂ ಸಿದ್ಧವಾಗಿದೆ.
ವಿಶ್ವಾಮಿತ್ರ : ಕೂಡಲೇ ಪ್ರಾರಂಭಿಸೋಣ.
ರಾಮ: ಲಕ್ಷ್ಮಣ ನಾವು ಬಹಳ ಜಾಗರೂಕರಾಗಿರಬೇಕು, ಯಜ್ಞವು ಪ್ರಾರಂಭವಾಗುತ್ತಿದೆ.
ಲಕ್ಷ್ಮಣ: ಹಾಗೆಯೇ ಆಗಲಿ ರಾಮ. (ಯಜ್ಞವು ಪ್ರಾರಂಭವಾಗುತ್ತದೆ. ತೆರೆಯ ಹಿಂದೆ ಹೊಗೆ ಕಾಣಿಸಿಕೊಳ್ಳುತ್ತದೆ) ರಾಮ, ನೋಡು, ಹೊಗೆ ಬರುತ್ತಿದೆ. ಅದು ರಾಕ್ಷಸರದೇ ಕೆಲಸವಿರಬೇಕು. (ರಾಮನು ಬಾಣಗಳನ್ನು ಹೊಡೆಯುತ್ತಾನೆ. ರಾಮನ ಬಲವಾದ ಬಾಣಗಳು ಮಾಯಾವಿಯಾದ ಮಾರೀಚನನ್ನು ಸಮುದ್ರದಲ್ಲೆಸೆಯುತ್ತವೆ. ಅವನೊಬ್ಬನು ಮಾತ್ರ ಬದುಕಿಕೊಳ್ಳುತ್ತಾನೆ)
ವಿಶ್ವಾಮಿತ್ರ : ಯಾಗವು ನಿರ್ವಿಘ್ನವಾಗಿ ನೆರವೇರಿತು. ನೀವು ಅಸುರರನ್ನು ಸಂಹರಿಸಿದ್ದೀರ. ರಾಮ ನಿನಗೊಬ್ಬ ಸುಂದರಿಯಾದ ವಧು ದೊರಕಲಿ. ಜನಕ ಮಹಾರಾಜನ ರಾಜಧಾನಿಯಾದ ಮಿಥಿಲೆಗೆ ಹೋಗೋಣ. ಅಲ್ಲಿ ಶೂರರಾದ ರಾಜಕುಮಾರರು ಒಂದು ಧನುರ್ವಿದ್ಯಾ ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ.

ದೃಶ್ಯ – 4 ( ಪಂದ್ಯ ನಡೆಯುವ ಸ್ಥಳ)
ಜನಕ ಮಹಾರಾಜ : ವಿವಾಹಕ್ಕಾಗಿ ಇಟ್ಟಿರುವ ಪಂದ್ಯಕ್ಕೆ ಎಲ್ಲರಿಗೂ ಸ್ವಾಗತ. ಇಲ್ಲಿರುವ ಬಿಲ್ಲನ್ನು ಹೆದೆಯೇರಿಸಿ ಕಟ್ಟುವವರು ಸೀತೆಯ ಕೈ ಹಿಡಿಯುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಸೀತೆಯು ಸಾಮಾನ್ಯರಂತೆ ಜನಿಸಿದವಳಲ್ಲ ಅವಳನ್ನು ದೇವತೆಗಳು ನನಗೆ ಪ್ರಸಾದಿಸಿದ್ದಾರೆ.
ಉತ್ತಮನಾದವನು ಜಯಿಸಲಿ. ಪಂದ್ಯವು ಪ್ರಾರಂಭವಾಗಲಿ.
(ರಾಜರನೇಕರು ಪ್ರಯತ್ನಿಸಿ ವಿಫಲರಾಗುತ್ತಾರೆ)
ಇದೇನು? ಮತ್ತ್ಯಾರೂ ಪ್ರಯತ್ನಿಸ ಬಯಸುವುದಿಲ್ಲವೇ? ನಿಮ್ಮ ಶೌರ್ಯವೆಲ್ಲಿ ಹೋಯಿತು? ಧೈರ್ಯ ಪರಾಕ್ರಮಗಳೇನಾದವು? ನಿಮ್ಮನ್ನು ನೀವು ಹೇಗೆ ತಾನೆ ಯುದ್ಧ ಪಟುಗಳೆಂದುಕೊಳ್ಳುತ್ತೀರಿ? ಈ ಶ್ರೇಷ್ಠವಾದ ಬಿಲ್ಲನ್ನೆತ್ತ ಬಲ್ಲವರು ಯಾರೂ ನಿಮ್ಮಲ್ಲಿಲ್ಲವೇ?
ನನ್ನ ಮಗಳನ್ನು ವಿವಾಹವಾಗಲು ಅರ್ಹತೆಯಿರುವವರೊಬ್ಬರೂ ಇಲ್ಲಿಲ್ಲವೆಂದು ಕಾಣುತ್ತದೆ (ನಿಶ್ಯಬ್ದ). ಒಳ್ಳೆಯದು, ಒಬ್ಬ ಕ್ಷತ್ರಿಯನೂ ಇಲ್ಲವಲ್ಲ!
ಲಕ್ಷ್ಮಣ: ನನ್ನ ಸ್ವಾಮಿಯಾದ ರಾಮನೆದುರು ಇಂತಹ ಮಾತುಗಳನ್ನಾಡಲು ಈ ಜನಕನಿಗೆಂತಹ ಧೈರ್ಯ? ರಾಮನನ್ನು ಕಂಡೊಡನೆ ಅವನೇ ನಿಜವಾದ ಶೂರನೆಂಬುದು ಗೋಚರಿಸುವುದಿಲ್ಲವೆ? ಅವನ ಬಿಲ್ಲು ರಾಮನಿಗೆ ಒಂದು ಹುಲ್ಲು ಕಡ್ಡಿಯ ಸಮ.
ಪ್ರಭು ರಾಮನೇನಾದರೂ ನನಗೆ ಅನುಮತಿ ಕೊಟ್ಟಲ್ಲಿ ನಾನು ಈ ಬಿಲ್ಲನೆತ್ತಿಕೊಂಡು ಪ್ರಪಂಚವನ್ನೆಲ್ಲ ಸುತ್ತಿ ಬರುತ್ತೇನೆ. ಇಲ್ಲಿ ತನ್ನಿ, ನಾನು ಅದನ್ನು ಎಲ್ಲರೆದುರಿಗೂ ಚೂರು ಚೂರಾಗಿ ಮುರಿದು ಬಿಸಾಡುತ್ತೇನೆ. ಆಗ ಜನಕನೇನೆನ್ನುವನೋ ನೋಡೋಣ.
ರಾಮ: ಲಕ್ಷ್ಮಣ, ಸುಮ್ಮನಾಗು. ನಾವಿಲ್ಲಿ ಕೇವಲ ಅತಿಥಿಗಳು.

ರಾವಣ: (ನಗುತ್ತಾನೆ) ಅದನ್ನೆತ್ತುವವರಾರೂ ಇಲ್ಲವೆಂದು ಹೇಳುತ್ತಿರುವೆಯಾ…? ರಾವಣನೆಂಬುವನಿದ್ದಾನೆ. (ನಗುತ್ತಾನೆ) ದೇವತೆಗಳನ್ನು ಪರಾಜಯಗೊಳಿಸಬಲ್ಲ ಪರಮೇಶ್ವರನಿಂದಲೇ ವರ ಪಡೆದಿದ್ದಾನೆ. ಸಾಗರವನ್ನೇ ಆಪೋಶನ ತೆಗೆದುಕೊಳ್ಳಬಲ್ಲ, ವಿಜಯಿಗಳನ್ನೆಲ್ಲ ಜಯಿಸಬಲ್ಲ, ಪ್ರಕೃತಿಯನ್ನೆಲ್ಲ ಜಯಿಸಬಲ್ಲ, ನಾನು ರಾವಣ. (ನಗುತ್ತಾನೆ)
ಕೈಲಾಸ ಪರ್ವತವನ್ನೆತ್ತಲು ನಾನು ಶಿವನಿಗೆ ಸಹಾಯ ಮಾಡಿದೆ. ಈ ಚಿಕ್ಕ ಬಿಲ್ಲನ್ನೆತ್ತುವುದು ನನಗೊಂದು ಮಹಾ ಕಾರ್ಯವೇ? (ನಗುತ್ತಾನೆ – ಬಿಲ್ಲನ್ನೆತ್ತಲು ಪ್ರಯತ್ನಿಸಿ ವಿಫಲನಾಗುತ್ತಾನೆ )
ವಿಶ್ವಾಮಿತ್ರ : ರಾಮ, ನೀನು ಎಲ್ಲರ ಆತಂಕವನ್ನೂ ಪರಿಹರಿಸಬೇಕು. (ರಾಮನು ಬಿಲ್ಲನ್ನೆತ್ತಿ ಅದನ್ನು ಮುರಿಯುತ್ತಾನೆ. ಪರುಶುರಾಮನ ಆಗಮನ)
ಜನಕ: ಪರುಶುರಾಮರಿಗೆ ಸ್ವಾಗತ. ಇಂದು ತಮ್ಮ ಆಗಮನದಿಂದ ನಾವೆಲ್ಲರೂ ಕೃತಾರ್ಥರಾಗಿದ್ದೇವೆ.
ಪರುಶುರಾಮ : ಪವಿತ್ರವಾದ ಬಿಲ್ಲನ್ನು ಮುರಿದವರಾರು?
ಜನಕ: ಹೇ, ಪರುಶುರಾಮ, ಈ ಬಿಲ್ಲನ್ನು ಮುರಿಯುವುದು ತಪ್ಪೆಂದು ನಮಗೆ ತಿಳಿದಿರಲಿಲ್ಲ.
ಪರುಶುರಾಮ : ನಿಮಗೆ ಅರಿವಿತ್ತೋ ಇಲ್ಲವೋ, ಆದರೆ ಇದಕ್ಕೆ ಮರಣವೇ ಶಿಕ್ಷೆ.
ಜನಕ: ದಯವಿಟ್ಟು ನಮ್ಮ ಮೇಲೆ ಕೃಪೆ ತೋರಿ. ವಿವಾಹ ಕಾಲದಲ್ಲಿ ರಾಮನನ್ನು ಆಶೀರ್ವದಿಸಿ.
ಪರುಶುರಾಮ : ರಾಮ, ರಾಮ, ರಾಮನೆಂಬುವನ್ಯಾರು? ಭಗವಾನ್ ವಿಷ್ಣುವಿನ ಹೆಸರಾದ ರಾಮನೆಂಬ ನಾಮವನ್ನು ಹೊಂದಿರುವವನು ಪ್ರಪಂಚದಲ್ಲಿ ನಾನೊಬ್ಬನೇ.
ಲಕ್ಷ್ಮಣ: ಬಿಲ್ಲನ್ನು ಮುರಿದವನು ನಾನು.
ಪರುಶುರಾಮ : ನೀನೇ ಏನು?

ಲಕ್ಷ್ಮಣ: ಅದನ್ನೇ ನಾನೀಗ ಹೇಳಿದ್ದು.
ಪರುಶುರಾಮ : ನನ್ನ ಬಳಿ ಹೀಗೆ ಮಾತನಾಡಲು ನಿನಗೆಷ್ಟು ಧೈರ್ಯ? ಸಾಯಲು ಸಿದ್ಧನಾಗು.
ಲಕ್ಷ್ಮಣ: ನಾನಲ್ಲ, ನೀನು ಸಿದ್ಧನಾಗಬೇಕು.
ಪರುಶುರಾಮ : ವಿಶ್ವಾಮಿತ್ರ, ಏಕೈಕ ಶೂರನಾದ ಈ ಪರುಶುರಾಮನೊಡನೆ ದನಿಯೆತ್ತರಿಸಿ ಮಾತನಾಡುತ್ತಿರುವ ಈ ಮೂರ್ಖನಾರು?
ವಿಶ್ವಾಮಿತ್ರ : ಅವನು ದಶರಥ ಪುತ್ರನಾದ ಲಕ್ಷ್ಮಣ, ನನ್ನ ಶಿಷ್ಯ.
ಪರುಶುರಾಮ : ನಿನ್ನ ಶಿಷ್ಯನು ಸದ್ಯದಲ್ಲೇ ಮೃತನಾಗುತ್ತಾನೆ.
ರಾಮ: ನನ್ನ ತಮ್ಮನು ಬಹಳ ಉತ್ತೇಜಿತನಾಗಿ ಮಾತನಾಡುತ್ತಿದ್ದಾನೆ. ನಿಜವಾಗಿ ಬಿಲ್ಲನ್ನು ಮುರಿದವನು ನಾನು.
ಪರುಶುರಾಮ: ನೀನೇ?
ರಾಮ: ಬಿಲ್ಲನ್ನು ಹೆದೆಯೇರಿಸಬೇಕೆಂಬ ಪಂದ್ಯವಿತ್ತು. ನಾನು ಬಗ್ಗಿಸುತ್ತಿರುವಾಗ ಅದು ಮುರಿದು ಹೋಯಿತು.
ಪರಶುರಾಮ: ಹಾಗಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ. (ತನ್ನ ಕೊಡಲಿಯನ್ನು ಮೇಲಕೆತ್ತಲು ಪ್ರಯತ್ನಿಸುತ್ತಾನೆ. ಆದರೆ ಆಗುವುದಿಲ್ಲ) ಇದೇನು? ನೀನಾರೋ ಸಾಮಾನ್ಯನಲ್ಲ. ಹಿಂದೆಂದೂ ಹೀಗಾಗಿಲ್ಲ. ಎಲ್ಲಿ ವಿಷ್ಣುವಿನ ಈ ಬಿಲ್ಲನ್ನೆತ್ತು. ನೋಡೋಣ. (ರಾಮನು ಬಿಲ್ಲನೆತ್ತಿ ಬಗ್ಗಿಸಿ ಹೆದೆಯೇರಿಸುವನು)
ನನ್ನ ಪ್ರಭುವೇ, ನೀನು ವಿಷ್ಣು. ನನ್ನ ಅಜ್ಞಾನವನ್ನು ದಯಮಾಡಿ ಕ್ಷಮಿಸು. ನನ್ನ ಅವತಾರ ಕಾರಣವೂ ಸಂಪೂರ್ಣವಾಯಿತು. ಹಿಮಾಲಯದ ನನ್ನ ಆಶ್ರಮದಲ್ಲಿ ನಿನ್ನಲ್ಲಿ ಧ್ಯಾನಮಗ್ನನಾಗುತ್ತೇನೆ. ಜಯರಾಮ ಜಯರಾಮ.
(ಪರುಶುರಾಮನು ಹೊರಡುವನು. ಸಂಕೀರ್ತನೆಯಾಗುತ್ತಿರಲು ಸೀತಾರಾಮರ ವಿವಾಹವಾಗುವುದು)






Leave a Reply