ಬಂಗಾಳಿ ವಿಶೇಷ ಭಕ್ಷ್ಯಗಳು

ಶ್ರೀ ಕೃಷ್ಣ ಪಾಕಶಾಲೆ

– ಶ್ರೀಮತಿ ಪುಷ್ಪ ರಾಧಾದೇವಿದಾಸಿ

ಕಡಿ ಪಕೋರಾ (ಪಕೋಡಾ ಕಡಿ)

ಬೇಕಾಗುವ ಪದಾರ್ಥಗಳು :

ಕಡಿಗೆ:

ಮೊಸರು – ½ ಲೀಟರ್‌

ಕಡ್ಲೆಹಿಟ್ಟು – ¾ ಬಟ್ಟಲು

ನೀರು – 1 ಲೀಟರ್‌

ಉಪ್ಪು –  ರುಚಿಗೆ ತಕ್ಕಷ್ಟು

ಒಗ್ಗರಣೆಗೆ:

ಸಾಸಿವೆ – 1 ಟೀ ಚಮಚ

ಮೆಂತ್ಯ – 1 ಟೀ ಚಮಚ

ಇಂಗು – 3 ಚಿಟಿಕೆ

ಕರಿಬೇವು – 3 ಎಸಳು

ಮೆಣಸಿನಕಾಯಿ – 5

ಅರಿಶಿನ ಪುಡಿ – 2 ಟೀ ಚಮಚ

ಅಡಿಗೆ ಎಣ್ಣೆ – 2 ಟೇಬಲ್ ಚಮಚ

ಪಕೋರಾ (ಪಕೋಡಾ) ಗೆ:

ಕಡ್ಲೆ ಹಿಟ್ಟು – 2 ಬಟ್ಟಲು

ಅಡಿಗೆ ಸೋಡಾ – 1/2 ಟೀ ಚಮಚ

ಅರಿಶಿನಪುಡಿ -1/2 ಟೀ ಚಮಚ

ಅಡಿಗೆ ಎಣ್ಣೆ – ಕರಿಯಲು ಬೇಕಾಗುವಷ್ಟು

ಮಾಡುವ ವಿಧಾನ: ಬಾಣಲೆಯಲ್ಲಿ ಪಕೋರಾ ಕರಿಯಲು ಬೇಕಾಗುವಷ್ಟು ಎಣ್ಣೆಯಿಟ್ಟು, ಅದು ಕಾಯುವುದರೊಳಗೆ ಮೊದಲಿಗೆ, ಒಂದು ಪಾತ್ರೆಯಲ್ಲಿ ಕಡ್ಲೆ ಹಿಟ್ಟು, ಅಡುಗೆ ಸೋಡಾ, ಉಪ್ಪು, ಅರಿಶಿನ ಪುಡಿ ಚೆನ್ನಾಗಿ ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ( ಬೋಂಡಾ ಹಿಟ್ಟಿನ ಹದಕ್ಕೆ) ಪಕೋರಾ ಹಿಟ್ಟನ್ನು ತಯಾರಿಸಿಕೊಳ್ಳಿ.

ಎಣ್ಣೆ ಕಾದನಂತರ ಹದಗಾತ್ರದ ಪಕೋರಾಗಳನ್ನು ಮಾಡಿ ಕರಿದು ತೆಗೆಯಿರಿ. ಅಗಲವಾದ ಪಾತ್ರೆಯಲ್ಲಿ ನೀರನ್ನು ಹಾಕಿ ಕರಿದ ಪಕೋರಾಗಳನ್ನು 5 ನಿಮಿಷಗಳ ಕಾಲ ನೆನೆಸಿ ತೆಗೆಯಿರಿ. ಈಗ ಕಡಿ ತಯಾರಿಸಲು ಬೇಕಾಗುವ ಎಲ್ಲ ಪದಾರ್ಥಗಳನ್ನು ಗಂಟು ಕಟ್ಟದಂತೆ ಚೆನ್ನಾಗಿ ಕಲೆಸಿ ದೊಡ್ಡ ಉರಿಯಲ್ಲಿ ಕುದಿಸಿ.

ಕುದಿಸುವಾಗ ಮೊಸರಿನಿಂದ ನೀರು ಬೇರ್ಪಡದಂತೆ 12-15 ನಿಮಿಷ ಕೈಯಾಡಿಸುತ್ತಿರಿ. ಅನಂತರ ನೆನೆಸಿ ತೆಗೆದು ಪ್ರತ್ಯೇಕವಾಗಿಟ್ಟ ಪಕೋರಾಗಳನ್ನು ಇದಕ್ಕೆ ಹಾಕಿ ಮತ್ತೆ 5-6 ನಿಮಿಷ ಕುದಿಸಿ ಕೆಳಗಿಳಿಸಿ. ಪಕೋರಾ ಕಡಿ ಸಿದ್ಧ. ಇದನ್ನು ಅನ್ನ, ಪೂರಿ, ಚಪಾತಿ ಅಥವಾ ರೊಟ್ಟಿಯೊಂದಿಗೆ ಶ್ರೀರಾಧಾಕೃಷ್ಣರಿಗರ್ಪಿಸಿ ಸ್ವೀಕರಿಸಿ.

ಪಾಲಕ್‌ ಶಾಕ್‌ ಚರ್ಚರಿ

(ಪಾಲಕ್‌ ಮತ್ತು ಮಿಶ್ರ ತರಕಾರಿ ಮಸಾಲೆ)

ಬೇಕಾಗುವ ಪದಾರ್ಥಗಳು :

ಪಾಲಕ್ ಸೊಪ್ಪು- 2 (ಹದಗಾತ್ರದ್ದು) ಕಟ್ಟು

ಆಲೂಗಡ್ಡೆ – 2 ಚಿಕ್ಕದು

ಸಿಹಿಕುಂಬಳಕಾಯಿ – 200 ಗ್ರಾಂ

ದೊಡ್ಡ ಬದನೆಕಾಯಿ -200 ಗ್ರಾಂ

ಚಪ್ಪರದ ಅವರೆಕಾಯಿ – 200 ಗ್ರಾಂ

ಟೊಮ್ಯಾಟೋ (ಹೆಚ್ಚಾಗಿ ಹಣ್ಣಲ್ಲದು)

ಪಲಾವ್ ಎಲೆ – 3

ಒಣಮೆಣಸಿನಕಾಯಿ – 3-4 ( ರುಚಿಗೆ ತಕ್ಕಷ್ಟು)

ಹಸಿಮೆಣಸಿನಕಾಯಿ – 3-4 ( ರುಚಿಗೆ ತಕ್ಕಷ್ಟು)

ಜೀರಿಗೆ – 1/2 ಟೀ ಚಮಚ

ಹಸಿಶುಂಠಿ – ಚಿಕ್ಕ ಚೂರು

ಅಡುಗೆ ಎಣ್ಣೆ – 50 ಗ್ರಾಂ

ಪಂಚ ಪೋರಣ (5 ಪದಾರ್ಥಗಳ ಒಗ್ಗರಣೆ):

ಜೀರಿಗೆ – ¼ ಟೀ ಚಮಚ

ಮೆಂತ್ಯ – ¼ ಟೀ ಚಮಚ

ಸಾಸಿವೆ – ¼ ಟೀ ಚಮಚ

ಸೋಂಪು – ¼ ಟೀ ಚಮಚ

ಕಪ್ಪು ಜೀರಿಗೆ – ¼ ಟೀ ಚಮಚ

ಮಾಡುವ ವಿಧಾನ: ಎಲ್ಲ ತರಕಾರಿ ಹಾಗೂ ಸೊಪ್ಪನ್ನು ತೊಳೆದು 1 ಇಂಚಿನಷ್ಟು ಉದ್ದುದ್ದ ಕತ್ತರಿಸಿಕೊಳ್ಳಿ. ಒಂದು ಅಗಲವಾದ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಪಂಚಪೋರಣದಲ್ಲಿ ಹೇಳಿದ ಪದಾರ್ಥಗಳ ಒಗ್ಗರಣೆ ಮಾಡಿ ಅನಂತರ ಅರಿಶಿನಪುಡಿ, ಪಲಾವ್‌ ಎಲೆ, ಒಣಮೆಣಸಿನಕಾಯಿ ಚೂರು ಮಾಡದೇ ಹಾಗೇ ಹಾಕಿ ಅನಂತರ ಜೀರಿಗೆ ಹಸಿಮೆಣಸಿನಕಾಯಿ ಮತ್ತು ಶುಂಠಿ ಮಸಾಲೆ ಹಾಕಿ.

ಪರಿಮಳ ಬಂದನಂತರ ಪಾಲಕ್‌ ಸೊಪ್ಪಿನ ಹೊರತಾಗಿ ಕತ್ತರಿಸಿಟ್ಟ ಎಲ್ಲ ತರಕಾರಿಗಳನ್ನು ಸೇರಿಸಿ ಬೇಯಿಸಿ. ತರಕಾರಿಗಳು ಅರ್ಧ ಬೆಂದನಂತರ ಪಾಲಕ್ ಸೊಪ್ಪನ್ನು ಸೇರಿಸಿ ಮುಚ್ಚಳ ಮುಚ್ಚಿ 3 -4 ನಿಮಿಷ ಬೇಯಿಸಿ. ಈಗ ಟೊಮ್ಯಾಟೋ ಚೂರುಗಳನ್ನು ಹಾಕಿ ಮತ್ತೆ ಮುಚ್ಚಳ ಮುಚ್ಚಿ 5-6 ನಿಮಿಷ ಚೆನ್ನಾಗಿ ಬೇಯಿಸಿ.

ರುಚಿಗೆ ತಕ್ಕಷ್ಟು ಉಪ್ಪು ಹಾಕಿ 4-5 ನಿಮಿಷ ತಳ ಹತ್ತದಂತೆ ಕೈಯಾಡಿಸುತ್ತಿರಿ. ಈ ಮಿಶ್ರ ತರಕಾರಿ ಮಸಾಲೆಯನ್ನು ಅನ್ನ ಅಥವಾ ಚಪಾತಿಯೊಂದಿಗೆ ಸೇವಿಸಬಹುದು.

ಗೋನ್ಗರ್‌ ಚರ್ಚರಿ

(ಮಸಾಲೆ ಗೋರಿಕಾಯಿ)

ಬೇಕಾಗುವ ಪದಾರ್ಥಗಳು :

ಗೋರಿಕಾಯಿ – 500 ಗ್ರಾಂ

ಆಲೂಗಡ್ಡೆ -250 ಗ್ರಾಂ

ಹಸಿಮೆಣಸಿನಕಾಯಿ – 3-4

ಉಪ್ಪು – ರುಚಿಗೆ ತಕ್ಕಷ್ಟು

ಜೀರಿಗೆ – 1/2 ಟೀ ಚಮಚ

ತುಪ್ಪ – 2 ಟೀ ಚಮಚ

ಅರಿಶಿನ ಪುಡಿ – 1/2 ಟೀ ಚಮಚ

ಹಿಂಗು – 1 ಚಿಟಿಕೆ

ಮಾಡುವ ವಿಧಾನ: ಗೋರಿಕಾಯಿ ಹಾಗೂ ಆಲೂಗಡ್ಡೆಯನ್ನು ಶುದ್ಧಗೊಳಿಸಿ 1/2 ಇಂಚು ಗಾತ್ರದಲ್ಲಿ ಕತ್ತರಿಸಿಟ್ಟುಕೊಳ್ಳಿ. ಮೊದಲು ಗೋರಿಕಾಯಿಯನ್ನು 5 ನಿಮಿಷ ಬೇಯಿಸಿಕೊಳ್ಳಿ. ಅನಂತರ ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ ಇಂಗು, ಜೀರಿಗೆ, ಅರಿಶಿನ ಪುಡಿ, ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ.

ಈಗ ಕತ್ತರಿಸಿದ ಆಲೂಗಡ್ಡೆ ಚೂರುಗಳನ್ನು ಹಾಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ. ಅನಂತರ ಗೋರಿಕಾಯಿ ಸೇರಿಸಿ ಉಪ್ಪು ಬೆರೆಸಿ ಮತ್ತೆ ನಿಮಿಷ ಬೇಯಿಸಿ. ಎಲ್ಲಾ ಪದಾರ್ಥಗಳು ಚೆನ್ನಾಗಿ ಬೆರೆತನಂತರ ದೊಡ್ಡ ಉರಿಯಲ್ಲಿ 2 ನಿಮಿಷ ಬೇಯಿಸಿ.

ಬೇಕಾದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ. ಇದನ್ನು ಅನ್ನ ಚಪಾತಿ ಅಥವಾ ರೊಟ್ಟಿಯೊಂದಿಗೆ ತಿನ್ನಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi