ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ 29ನೇ ಜೂನ್, 1974 ರಂದು, ಶೀಲ ಪ್ರಭುಪಾದರು ಮತ್ತು ವರದಿಗಾರರೊಂದಿಗೆ ನಡೆದ ಸಂವಾದ
ಅನುವಾದ : ಡಾ. ಕೆ. ವೈ. ಬಾಲರಾಜ್
ವರದಿಗಾರ 3 : ಪರಮ ಪೂಜ್ಯರೇ, ನಿಮ್ಮ ಪುಸ್ತಕಗಳಲ್ಲಿ ನೀವು ಬ್ರಹ್ಮಲೋಕದ ಬಗ್ಗೆ ಮಾತನಾಡುತ್ತೀರಿ. ಅದು ಸ್ವರ್ಗವೇ ಅಲ್ಲವೇ, ಅಲ್ಲಿ ತಾನೇ ನಾವು ಭಗವಂತನನ್ನು ಕಾಣಬಹುದು.

ಶ್ರೀಲ ಪ್ರಭುಪಾದ : ಇಲ್ಲ. ಮೊದಲಿಗೆ ಸ್ವರ್ಗವೆಂಬುದು ಭೌತಿಕ ಗ್ರಹವ್ಯೂಹಗಳ ಉನ್ನತವಾದ ಲೋಕ. ಅಲ್ಲಿ ನೀವು ಭಗವಂತನನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಅನೇಕ ಭೌತಿಕ ಲೋಕಗಳಿವೆ ಅಥವಾ ಗ್ರಹವ್ಯೂಹಗಳಿವೆ. ಅದರಲ್ಲಿ ಸ್ವರ್ಗವೂ ಒಂದು.
ಹಾಗೆಯೇ ಬ್ರಹ್ಮಲೋಕವೂ ಒಂದು. ಅನೇಕ ಭೌತಿಕ ಸೌರವ್ಯೂಹ ಮಂಡಲಗಳು ಮತ್ತು ಅಸಂಖ್ಯಾತ ಗ್ರಹ ಮಂಡಲಗಳನ್ನು ನೀವು ನೋಡಿಲ್ಲವೇ? ಇಂತಹ ಗ್ರಹವ್ಯೂಹಗಳಲ್ಲಿ ಬ್ರಹ್ಮಲೋಕ, ಚಂದ್ರಲೋಕ, ವರುಣಲೋಕ, ಸೂರ್ಯಲೋಕ ಮತ್ತು ಅನೇಕ ಲೋಕಗಳಿವೆ.
ವರದಿಗಾರ 3 : ಹಾಗಾದರೆ ನಾವು ಸ್ವರ್ಗದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ನಾವು ಒಂದು ಭೌತಿಕ ಸ್ಥಳದ ಬಗ್ಗೆ ಮಾತನಾಡುತ್ತಿದ್ದೇವೆಯೇ? ಯಾರಾದರೂ ಭೌತಿಕ ಗ್ರಹದ ಮೇಲೆ ಇರಲು ಸಾಧ್ಯವೇನು?
ಶ್ರೀಲ ಪ್ರಭುಪಾದ : ನಾವು ಹಗಲು-ರಾತ್ರಿ ನೋಡುತ್ತಿರುವ ವಿಶ್ವದಲ್ಲಿರುವ ಗ್ರಹಗಳು ಅವು ಭೌತಿಕವಾದುದಲ್ಲವೇ? ಸೂರ್ಯನನ್ನೇ ತೆಗೆದುಕೊಳ್ಳೋಣ. ಅದೊಂದು ಭೌತಿಕ ಗ್ರಹವಲ್ಲವೇ?
ವರದಿಗಾರ 3 : ಹೌದು.
ಶ್ರೀಲ ಪ್ರಭುಪಾದ : ಭೌತಿಕ ಎಂದರೆ ಏನು?
ವರದಿಗಾರ 3 : ಭೌತಿಕದ ಮೇಲೆ ಅಸ್ತಿತ್ವದಲ್ಲಿರುವುದು…..
ಶ್ರೀಲ ಪ್ರಭುಪಾದ : ರಾತ್ರಿಯಲ್ಲಿ ಅಸ್ತಿತ್ವದಲ್ಲಿರುವಂಥಹ ಅಸಂಖ್ಯಾತ ಗ್ರಹಗಳನ್ನು ನೋಡುತ್ತೀಯಾ. ಅದು ಭೌತಿಕವಾಗಿದೆಯೋ ಇಲ್ಲವೋ?
ವರದಿಗಾರ 3 : ಹೌದು. ನಕ್ಷತ್ರಗಳು ಮತ್ತು ಗ್ರಹಗಳು ಭೌತಿಕವಾಗಿವೆ.

ಶ್ರೀಲ ಪ್ರಭುಪಾದ : ಹೌದು. ಈ ಉದಾಹರಣೆಯನ್ನು ತೆಗೆದುಕೊಳ್ಳಿ. ನೀವು “ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ ಎಂದಾಗ ನೀವು ಒಂದು ಸ್ಥಳದ ಬಗ್ಗೆ ಮಾತನಾಡುತ್ತಿದ್ದೀರಿ. ಅಲ್ಲಿ ಜೀವಿಗಳು, ಮನುಷ್ಯರು, ಪರ್ವತಗಳು, ನದಿ ಸಾಗರಗಳಿವೆ. ಎಲ್ಲವೂ ಅಲ್ಲಿವೆ. ಆದರೆ ಅಲ್ಲಿರುವ ಪ್ರತಿಯೊಂದು ಆ ಗ್ರಹದ ಮಾದರಿಗೆ ತಕ್ಕಂತೆ ವಿಶಿಷ್ಟ ಮಾದರಿಯಾಗಿದೆ.
ಆದ್ದರಿಂದ ಸ್ವರ್ಗದಲ್ಲಿ ಎಲ್ಲವೂ ಉತ್ಕೃಷ್ಟಗುಣ, ಮಾದರಿಯಲ್ಲಿವೆ. ಆದ್ದರಿಂದ ನಾನು ಈ ಪ್ರಸ್ತುತ ದೇಹದಲ್ಲಿ ಅಲ್ಲಿಗೆ ಹೋಗಿ ವಾಸ ಮಾಡಲು ಸಾಧ್ಯವಿಲ್ಲ. ಈ ಭೂ ಗ್ರಹ ತೆಗೆದುಕೊಂಡರೂ ಈ ಗ್ರಹ ಒಂದರಲ್ಲಿಯೇ ಅನೇಕ ವೈಪರೀತ್ಯ ಹವಾಮಾನದ ಸ್ಥಿತಿಗಳಿವೆ.
ಉತ್ತರ ಧ್ರುವದಲ್ಲಿ ಕೆಲವು ಜೀವಿಗಳು ಮಾತ್ರ ವಾಸಮಾಡಬಹುದು. ಆದರೆ ನಮಗೆ ಅಲ್ಲಿ ವಾಸ ಮಾಡಲು ಕಷ್ಟವಾಗುತ್ತದೆ. ಒಂದು ಸ್ಥಳದ ವಾತಾವರಣ ಕೆಲವು ರೀತಿಯ ಮನುಷ್ಯರಿಗೆ ಸರಿಯಿರುತ್ತದೆ. ಮತ್ತೆ ಕೆಲವರಿಗೆ ಬೇರೆಯಾದ ಸ್ಥಳ ಅವರಿಗೆ ಸರಿಯೆನಿಸಬಹುದು.
ಆದ್ದರಿಂದ ಗ್ರಹದಿಂದ ಗ್ರಹಕ್ಕೆ, ಪ್ರತಿಯೊಂದು ಗ್ರಹದ ಸ್ಥಳದಿಂದ ಸ್ಥಳಕ್ಕೆ ನೀವು ಬೇರೆ ಬೇರೆ ಜೀವಿಗಳನ್ನು ಕಾಣುತ್ತೀರಿ. ಈ ಜೀವಿಗಳು ಬೇರೆ ಬೇರೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಬೇರೆ ಬೇರೆ ಭೌತಿಕ ಶರೀರಗಳನ್ನು ಪಡೆದಿವೆ.
ಉದಾಹರಣೆಗೆ ನಿಮಗೆ ಸಾಗರ, ಸಮುದ್ರದಲ್ಲಿ ವಾಸ ಮಾಡಲು ಸಾಧ್ಯವಿಲ್ಲವೆಂದುಕೊಂಡು ಸಾಗರದಲ್ಲಿ ಯಾರೂ ವಾಸ ಮಾಡಲು ಸಾಧ್ಯವಿಲ್ಲ ಎಂದು ಹೇಳಲು ಬರುವುದಿಲ್ಲ, ಅದು ಮೂರ್ಖತನವಾಗುತ್ತದೆ. ನಿಮಗೆ ಅಲ್ಲಿ ವಾಸ ಮಾಡಲು ಆಗುವುದಿಲ್ಲವೆಂದು ಒಪ್ಪಿಕೊಳ್ಳಬೇಕು. ಆದರೆ ಸಾಗರದಲ್ಲಿ ಅನೇಕ ರೀತಿಯ ಮೀನುಗಳು ಆರಾಮವಾಗಿ ಜೀವಿಸುತ್ತವೆ.
ಆದ್ದರಿಂದ ನಿಮ್ಮ ಒಂದು ಅನುಭವದ ಪ್ರಮಾಣವನ್ನು ಬೇರೆ ಜೀವಿಗಳ ಮೇಲೆ ಹೇರಬೇಡಿ. ಅದು ಒಳ್ಳೆಯ ವಾದವಲ್ಲ, ಈ ಭೂಗ್ರಹದ ಮೇಲಿನ ಅನೇಕ ವಿಜ್ಞಾನಿಗಳು ಬೇರೆ ಗ್ರಹಗಳಲ್ಲಿ ಜೀವಿಗಳಿಲ್ಲ ಎಂದು ಹೇಳುತ್ತಿದ್ದಾರೆ ಏಕೆ? ಈ ವಿಜ್ಞಾನಿಗಳು ಅದಕ್ಕೆ ಅನೇಕ ಕಾರಣಗಳನ್ನು ಕೊಡುತ್ತಿದ್ದಾರೆ : “ಈ ಭೌತಿಕ ವಸ್ತು ಇಲ್ಲ”, “ಆ ಭೌತಿಕ ವಸ್ತು ಇಲ್ಲ” ಎಂದು.
ಆದರೆ ವಿಜ್ಞಾನಿ ಮಹಾಶಯರೇ, ಈ ಭೌತಿಕ ದೇಹದಲ್ಲಿ ನಾವು ಪಡೆಯುವ ಅನುಭವದ ಸ್ಥಿತಿಗಳನ್ನು ಇನ್ನೊಂದು ಬೇರೆಯಾದ ಲೋಕದ ಗ್ರಹಗಳ ಜೀವಿಗಳು ಪಡೆಯುತ್ತವೆ ಎಂದು ನೀವು ಹೇಗೆ ಹೇಳಬಲ್ಲಿರಿ? ಬೇರೆ ಗ್ರಹಗಳ ನಿಜವಾದ ವಾಸ್ತವಿಕತೆ ನಿಮಗೆ ಗೊತ್ತಿಲ್ಲ. ಅಲ್ಲಿ ಜೀವಿಗಳೇ ಇಲ್ಲವೆಂದು ನೀವು ಹೇಗೆ ಹೇಳಬಲ್ಲಿರಿ?
ವರದಿಗಾರ 3 : ನಾನು ಒಪ್ಪಿಕೊಳ್ಳುತ್ತೇನೆ. ಬಹಳ ಸಲ ವಿಜ್ಞಾನಿಗಳು ತಾವು ಏನು ಮಾತನಾಡುತ್ತಿದ್ದೇವೆ ಎಂಬುದನ್ನು ಅರಿಯದೇ ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಟ್ಟು ಬಿಡುತ್ತಾರೆ. ನಿಜವಾದ ಜೀವಿಗಳಿರುವ ಸ್ವರ್ಗ ಸೌರವ್ಯೂಹ ಲೋಕವೊಂದಿದೆ ಮತ್ತು ಅದು ಈ ಭೌತಿಕ ವಿಶ್ವದಲ್ಲಿದೆ?
ಶ್ರೀಲ ಪ್ರಭುಪಾದ : ಹೌದು. ಭಗವಂತನ ಭಕ್ತರಾಗದೆ ಸದ್ಗುಣವಂತರಾಗಿ ಬಾಳಿದ ಆತ್ಮಗಳ ಸ್ಥಳವೊಂದಿದೆ. ಅದುವೇ ಸ್ವರ್ಗ. ಅದು ಬಹಳಷ್ಟು ಐಹಿಕ ಸಂಪತ್ತಿನಿಂದ ಕೂಡಿರುವ ಸ್ಥಳ. ಆದರೆ ಸ್ವರ್ಗ ಆಧ್ಯಾತ್ಮಿಕ ವಿಶ್ವವಲ್ಲ. ಆಧ್ಯಾತ್ಮಿಕ ವಿಶ್ವವು ಭಗವಂತನಲ್ಲಿ ನಿಷ್ಕಲ್ಮಷ ಭಕ್ತಿಯನ್ನು ಬೆಳೆಸಿಕೊಂಡಂತಹ ಆತ್ಮಗಳಿಗೆ ನಿಗದಿಯಾದ ಸ್ಥಳವಾಗಿದೆ.

ಆದುದರಿಂದ ನೀವು ಸ್ವರ್ಗದಲ್ಲಿ ಭಗವಂತನನ್ನು ಕಾಣುವುದಿಲ್ಲ. ನೀವು ಅನೇಕ ಸಾವಿರ ವರ್ಷಗಳ ನಿಮ್ಮ ಜೀವನದಲ್ಲಿ ಸುಖವನ್ನು ಅನುಭವಿಸಿ ಕೊನೆಯಲ್ಲಿ ಸಾವನ್ನು ಅಪ್ಪಿ ಇನ್ನೊಂದು ಗ್ರಹದ ಮೇಲೆ ಮತ್ತೊಂದು ದೇಹವನ್ನು ಪಡೆಯುತ್ತೀರಿ.
ವರದಿಗಾರ 3 : ಪರಮ ಪೂಜ್ಯರೇ, ಎಲ್ಲ ಮನುಷ್ಯರೂ ಒಂದೇ ರೀತಿ ಒಗ್ಗೂಡುವಂಥ ಒಂದು ಕಾಲ ಬರುವುದೇನು?
ಶ್ರೀಲ ಪ್ರಭುಪಾದ : ಅದು ಹೇಳಲು ಕಷ್ಟ. ಆದರೆ ನಾವು ಆಧ್ಯಾತ್ಮಿಕ ಹಂತದಲ್ಲಿ ಒಂದಾಗುತ್ತೇವೆ. ಆದರೆ ಭೌತಿಕ ಅಥವಾ ಐಹಿಕ ಹಂತದಲ್ಲಿ ಒಂದಾಗುವುದಿಲ್ಲ.
ವರದಿಗಾರ 3 : ಹಾಗಾದರೆ ಎಲ್ಲಾ ಮನುಕುಲದ ಆಧ್ಯಾತ್ಮಿಕ ಏಕತೆ ಈಗಿನ ಪೀಳಿಗೆಯಲ್ಲಿ ಆಗಲು ಸಾಧ್ಯವೇ?
ಶೀಲ ಪ್ರಭುಪಾದ : ಆಧ್ಯಾತ್ಮಿಕ ಜೀವನದ ನಿಜವಾದ ಆಧ್ಯಾತ್ಮಿಕ ತತ್ತ್ವಗಳನ್ನು ತೆಗೆದುಕೊಂಡರೆ ಅದು ಯಾವ ಕಾಲದಲ್ಲೂ ಸಾಧ್ಯ. ಆದರೆ ಆಧ್ಯಾತ್ಮಿಕ ಜೀವನದ ಮೂಲದಲ್ಲಿ ಜನಯ್ಯಾರೂ ಈ ತತ್ತ್ವಗಳನ್ನು ತೆಗೆದುಕೊಳ್ಳುವುದಿಲ್ಲ.
ಉದಾಹರಣೆಗೆ ಆಧ್ಯಾತ್ಮಿಕ ಜೀವನದ ಮೂಲದಲ್ಲಿ ಮಾಂಸಭಕ್ಷಣೆ ಮಾಡಬಾರದು. ಈ ತತ್ತ್ವವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ನೀವು ಯೋಚಿಸುತ್ತೀರಾ? ಆದರೂ ಮಾಂಸಭಕ್ಷಣೆ ನಿಷೇಧ ಎಂಬುದು ಆಧ್ಯಾತ್ಮಿಕ ಜೀವನ ಮೂಲಭೂತವಾದ ತತ್ತ್ವ.
ವರದಿಗಾರ 3 : ಅದೊಂದು ಆವಶ್ಯಕತೆಯೇ?.
ಶ್ರೀಲ ಪ್ರಭುಪಾದ : ಹೌದು. ಈ ಮಾಂಸಭಕ್ಷಣ ನಿಷೇಧಿಸದಿದ್ದರೆ ನಿಮಗೆ ಆಧ್ಯಾತ್ಮಿಕ ಜೀವನ ಅರ್ಥವಾಗುವುದಿಲ್ಲ. ಯಾರು ಈ ಪಾಪಜೀವನದ ಕೆಸರಿನಲ್ಲಿದ್ದಾರೋ ಅಂಥವರಿಗೆ ಭಗವಂತ ಅಥವಾ ಭಗವಂತನ ಮೇಲಿನ ಭಕ್ತಿ ಏನೆಂಬುದು ಅರ್ಥವಾಗುವುದಿಲ್ಲ.
ವರದಿಗಾರ 3 : ಆಧ್ಯಾತ್ಮಿಕ ಜೀವನದ ಬೇರೆ ಬೇರೆ ಸಿದ್ಧಾಂತಗಳಿಗೂ ಇದೇ ರೀತಿ ತತ್ತ್ವವೇ?
ಶೀಲ ಪ್ರಭುಪಾದ : ಹೌದು. ಯಾರು ಪಾಪಿಷ್ಠರಾಗಿದ್ದಾರೋ, ಯಾರು ಆಧ್ಯಾತ್ಮಿಕ ತತ್ತ್ವಗಳನ್ನು ಅನುಸರಿಸುವುದಿಲ್ಲವೋ ಅಂಥವರು ಭಗವಂತ, ಭಗವಂತನ ಭಕ್ತಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಮೂಲ ಆಧ್ಯಾತ್ಮಿಕ ತತ್ತ್ವ ಗಳಲ್ಲಿ ನಾಲ್ಕು ನಿಷೇಧಗಳಿವೆ – ನಾವು ವಿದ್ಯಾರ್ಥಿಗಳಿಗೆ ಜೂಜು, ಅನೈತಿಕ ಕಾಮ, ಮಾಂಸ ಅಥವಾ ಮೀನು ಅಥವಾ ಮೊಟ್ಟೆ ತಿನ್ನುವುದು, ಚಹ, ಕಾಫಿ, ಸಿಗರೇಟ್ ಅಂಥಹ ಅಮಲ ಪದಾರ್ಥಗಳಲ್ಲಿ ತೊಡಗದಿರಲು ಬೋಧಿಸುತ್ತೇವೆ.
ವರದಿಗಾರ 3 : ಚಹ ಮತ್ತು ಕಾಫಿ ಕುಡಿಯುವುದನ್ನು ಕೂಡ ನಿಷೇಧಿಸಲಾಗಿದೆಯೇ?
ಶ್ರೀಲ ಪ್ರಭುಪಾದ: ಹೌದು. ಅದು ಒಂದು ರೀತಿಯ ಅಮಲು, ಜೂಜು, ಅನೈತಿಕ ಕಾಮ, ಮಾಂಸ ಭಕ್ಷಣೆ ಮತ್ತು ಅಮಲು ಪದಾರ್ಥಸೇವನೆ ಇವು ಪಾಪ ಜೀವನದ ನಾಲ್ಕು ಕಂಬಗಳು. ಆದ್ದರಿಂದ ಎಲ್ಲಿಯವರೆಗೂ ನಾವು ಈ ನಾಲ್ಕು ವಸ್ತುಗಳನ್ನು ಬಿಡುವುದಿಲ್ಲವೋ ಅಲ್ಲಿಯವರೆಗೂ ಭಗವಂತ ಎಂದರೆ ಏನು? ಭಗವಂತನ ಸಾಮ್ರಾಜ್ಯವೇನು? ಈ ಐಹಿಕ ಜಗತ್ತಿನಲ್ಲಿ ನಮ್ಮ ನಿಜವಾದ ವ್ಯವಹಾರವಾದ ಭಗವಂತನ ಬಳಿ ಹೋಗಲು ತಯಾರಿ ಇವು ಅರ್ಥವಾಗುವುದಿಲ್ಲ.






Leave a Reply