ಕೃಷ್ಣ-ಪ್ರೇಮದ ಲಕ್ಷಣ

ಶ್ರೀ ಕೃಷ್ಣನು ಅನೇಕ ಕಾರಣಗಳಿಗಾಗಿ ಈ ಲೋಕದಲ್ಲಿ ಅವತರಿಸುವನು ಮತ್ತು ಅನೇಕ ಕಾರ್ಯಗಳನ್ನು ನಿರ್ವಹಿಸುವನು ಎಂದು ಶ್ರೀಮದ್‌‍ ಭಾಗವತಂ ಮತ್ತು ಇತರ ಧರ್ಮಗ್ರಂಥಗಳು ನಿರೂಪಿಸುತ್ತವೆ.  ಈ ಯುಗದ ಧರ್ಮವಾದ ಪವಿತ್ರ ನಾಮಗಳ ಸಂಕೀರ್ತನೆಯನ್ನು ಬೋಧಿಸಲು ಶ್ರೀ ಕೃಷ್ಣನು ಶ್ರೀ ಚೈತನ್ಯರಾಗಿ ಅವತರಿಸಿದನು ಮತ್ತು ಆಧ್ಯಾತ್ಮಿಕವಾಗಿ ದುರ್ಬಲರಾಗಿದ್ದ ಜನರಿಗೆ ಭಗವಂತನ ಪರಿಶುದ್ಧ ಪ್ರೇಮವನ್ನು ಅನುಗ್ರಹಿಸಲು ಆವಿರ್ಭವಿಸಿದನು ಎಂದು ಶ್ರೀ ಚೈತನ್ಯ ಚರಿತಾಮೃತದ ಕರ್ತೃ ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿ ಅವರು ಹೇಳುತ್ತಾರೆ. ವಿಶೇಷವಾಗಿ ಕೃಷ್ಣಪ್ರೇಮವನ್ನು ಪಸರಿಸಿದ ಶ್ರೀ ಚೈತನ್ಯರನ್ನು ಭಕ್ತರು ಕೊಂಡಾಡುತ್ತಾರೆ. ಇದು ಅತ್ಯಂತ ಕರುಣೆಯ, ಕೃಪೆಯ ಅವತಾರವೆಂದು ಬಣ್ಣಿಸಲಾಗಿದೆ.

ಆದರೆ ಬೇರೆ ಅನೇಕ ಜನರಿಗೆ ಶ್ರೀ ಚೈತನ್ಯರು ಅಥವಾ ಅವರ ಪ್ರೇಮದ ಕೊಡುಗೆ ಕುರಿತು ಗೊತ್ತಿಲ್ಲ. ಆದರೆ ಮಹಾಪ್ರಭುಗಳನ್ನು ಕುರಿತು ಗೊತ್ತಿರುವ ನಾವು ಅವರು ಏನನ್ನು ನೀಡಲು ಅವತರಿಸಿದರೆನ್ನುವುದನ್ನು ಹೆಚ್ಚು ಮೆಚ್ಚುತ್ತಾ ಹೋದರೆ ನಮಗೆ ಅದರ ಲಾಭ ದೊರೆಯುತ್ತದೆಯಷ್ಟೇ ಅಲ್ಲ, ಅರಿಯದವರಿಗೂ ತಿಳಿಯಪಡಿಸಿದಂತಾಗುತ್ತದೆ. ಈ ಸಂದರ್ಭದಲ್ಲಿ ಶ್ರೀ ಚೈತನ್ಯರ ಶಿಷ್ಯರಾದ ಶ್ರೀ ಸನಾತನ ಗೋಸ್ವಾಮಿ ಅವರು ತಮ್ಮ ಶ್ರೀ ಬೃಹದ್‌‍ ಭಾಗವತಾಮೃತದಲ್ಲಿ ಪ್ರೇಮವನ್ನು ಕುರಿತು ವಿವರಿಸಿರುವುದನ್ನು ಇಲ್ಲಿ ಪುನರುಚ್ಚರಿಸಬಹುದು.

1. ಕರ್ಮ ಕಾಂಡ, ಜ್ಞಾನ ಕಾಂಡ ಮತ್ತು ವೈರಾಗ್ಯ ಸೇರಿದಂತೆ ವೈದಿಕ ಸಾಹಿತ್ಯದಲ್ಲಿ ಸೂಚಿಸಿರುವ ಎಲ್ಲ ಮಾರ್ಗಗಳ ಗುರಿ, ಧ್ಯೇಯವು ಪ್ರೇಮ. ಆಧ್ಯಾತ್ಮಿಕ ಅರ್ಹತೆಯ ಮಟ್ಟದಲ್ಲಿ ಎಲ್ಲಿದ್ದರೂ ಅತ್ಯುನ್ನತವಾದುದನ್ನು ಪಡೆಯಲು ಮಾನವ ಜೀವಿಗಳಿಗೆ   ವೇದಗಳು ಮಾರ್ಗದರ್ಶನ ನೀಡುತ್ತವೆ. ಆದುದರಿಂದ ಸ್ಪರ್ಧಾತ್ಮಕ ಮಾರ್ಗಗಳನ್ನು ಉತ್ತೇಜಿಸುವ ಹಾಗೆ ಕಂಡರೂ ವಾಸ್ತವವಾಗಿ ಅವುಗಳ ಗುರಿ ಒಂದೇ : ಪ್ರೇಮ.

2. ವಿಮೋಚನೆ ಅಥವಾ ಲೌಕಿಕ ಶಕ್ತಿಯ ಎಲ್ಲ ಪ್ರಭಾವಗಳಿಂದ ಪೂರ್ಣ ಮುಕ್ತಿಯ ಆಚೆಗೂ ಪ್ರೇಮವೇ ಅಸ್ತಿತ್ವದ ಅಂತಿಮ ಗುರಿ, ಧ್ಯೇಯ. ವೈದಿಕ ಸಾಹಿತ್ಯದ ಅನುಯಾಯಿಗಳು ಸಾಮಾನ್ಯವಾಗಿ ಮುಕ್ತಿಯನ್ನು ಮಾನವ ಜೀವನದ ಗುರಿ ಎಂದು ಸ್ವೀಕರಿಸುತ್ತಾರೆ.  ಶ್ರೀ ಚೈತನ್ಯ ಮಹಾಪ್ರಭುಗಳ ಅಮೂಲ್ಯ ಕೊಡುಗೆಯೆಂದರೆ ಎಲ್ಲದಕ್ಕಿಂತ ಹೆಚ್ಚಾಗಿ ಪ್ರೇಮದ ಪಾರಮ್ಯತೆಯನ್ನು ಹೊರಗೆಡಹುದಾಗಿದೆ.

3. ಪ್ರೇಮವು ಭಗವಂತನನ್ನು ಭಕ್ತನ ನಿಯಂತ್ರಣಕ್ಕೆ ತರುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ, ಕೃಷ್ಣನು ರುಬ್ಬುವ ಕಲ್ಲಿಗೆ ತನ್ನನ್ನು ಕಟ್ಟಲು ತಾಯಿಗೆ ಅವಕಾಶ ಕಲ್ಪಿಸಿದ್ದು. ಮತ್ತೊಂದು ಉದಾಹರಣೆಯೆಂದರೆ, ದೂರ್ವಾಸ ಮುನಿ ಮತ್ತು ಅಂಬರೀಶ ಮಹಾರಾಜ ಪ್ರಕರಣ. ದೂರ್ವಾಸ ಮುನಿಗಳು ಭಗವಂತನ ಸುದರ್ಶನ ಚಕ್ರದಿಂದ ರಕ್ಷಣೆ ಕೋರಿ ಭಗವಾನ್‌‍ ವಿಷ್ಣುವಿನ ಮೊರೆ ಹೊಕ್ಕಾಗ, ತಾನು ತನ್ನ ಭಕ್ತನ ಮೇಲೆ ಅವಲಂಬಿತ ಎಂದು ವಿಷ್ಣು ಹೇಳುತ್ತಾನೆ. ಆದುದರಿಂದ ತನ್ನ ಪರಿಶುದ್ಧ  ಭಕ್ತ ಅಂಬರೀಶ ಮಹಾರಾಜನಲ್ಲಿ ಆಶ್ರಯ ಕೋರುವಂತೆ ಭಗವಂತನು ಮುನಿಗೆ ಸೂಚಿಸುತ್ತಾನೆ. ಇದು ಭಗವಂತನ ಭಕ್ತಪ್ರೇಮ.

4. ಪ್ರೇಮವನ್ನು ಭಗವಂತ ಕೊಟ್ಟಿದ್ದು. ಯಾರ ಪ್ರಯತ್ನದಿಂದಲೂ ಪಡೆದುಕೊಂಡಿದ್ದಲ್ಲ. ಭಕ್ತಿಯೋಗದ ಮಾರ್ಗವು ನಿಯಂತ್ರಿತ ಆಧ್ಯಾತ್ಮಿಕ ಆಚರಣೆಯನ್ನು ಸೂಚಿಸುವುದರಿಂದ ಅದಕ್ಕೆ ಕಟ್ಟುನಿಟ್ಟಿನ ನಿಷ್ಠೆ ತೋರಿದರೆ ಅದು ನಮಗೆ ಸ್ವತಃ ಪ್ರೇಮವನ್ನು ನೀಡುತ್ತದೆ ಎಂದು ನಾವು ಭಾವಿಸಬಹುದು. ಆದರೆ ವಾಸ್ತವವಾಗಿ ನಾವು ಪ್ರಯತ್ನಿಸುತ್ತಿರುವುದು ಕೃಷ್ಣನನ್ನು ಪ್ರಸನ್ನಗೊಳಿಸಲು. ಅವನನ್ನು ಪ್ರೀತಿಸಿ ಅವನ ಸೇವೆಯನ್ನು ಮಾಡಬೇಕೆಂಬ ನಮ್ಮ ಪರಿಶುದ್ಧ ಅಪೇಕ್ಷೆಯಿಂದ ಅವನು ಪ್ರಸನ್ನನಾದರೆ ಅವನು ನಮ್ಮನ್ನು ಅನುಗ್ರಹಿಸುತ್ತಾನೆ. ಅತ್ಯಂತ ಶ್ರೇಷ್ಠವಾದ ಅನುಗ್ರಹವೆಂದರೆ ಭಗವಂತನ ಪ್ರೇಮದ ಉಡುಗೊರೆ.

5.  ಪ್ರೇಮವು ಭಗವಂತನ ಭಕ್ತರ ಅಮೂಲ್ಯ ನಿಧಿ. ಪ್ರೇಮದಿಂದ ಅನುಗ್ರಹಿತರಾದ ಪರಿಶುದ್ಧ ಭಕ್ತರಿಗೆ ಭಗವಂತನ ತೃಪ್ತಿಗಾಗಿ ಮಾತ್ರ ಸೇವೆ ಸಲ್ಲಿಸುವ ಅಪೇಕ್ಷೆಯನ್ನು ಬಿಟ್ಟರೆ ಬೇರಾವ ಆಸೆಯೂ ಇರುವುದಿಲ್ಲ.

6. ಅಲೌಕಿಕ ಪರಮಾನಂದದೊಂದಿಗೆ ಪ್ರೇಮವು ಉಕ್ಕಿ ಹರಿಯುತ್ತದೆ. ಅಸೀಮಿತ ಸುಖಾನಂದವು ಪ್ರೇಮದ ಒಂದು ಸುಪ್ತ ಲಕ್ಷಣ. ಭಕ್ತನು ಸುಖಕ್ಕಾಗಿಯೇ ಸುಖವನ್ನು ಅಪೇಕ್ಷಿಸುವುದಿಲ್ಲ. ಭಗವಂತನಿಗೆ ಸಲ್ಲಿಸುವು ಪರಿಶುದ್ಧ ಭಕ್ತಿಸೇವೆಯ ಫಲವಾಗಿ ಅದು ತನ್ನಿಂದ ತಾನೇ ಬರುತ್ತದೆ.

ಈ ಲೇಖನ ಶೇರ್ ಮಾಡಿ