ಜೋಳದ ಹಿಟ್ಟಿನ ಖಾದ್ಯಗಳು

ಜೋಳದ ಹಿಟ್ಟಿನಿಂದ ಮಾಡುವ ವಿವಿಧ ಖಾದ್ಯಗಳ ಬಗ್ಗೆ ವಿವರಿಸಿದ್ದೇವೆ. ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿ ಜೊತೆ ಸೇವಿಸಿ.

ಜೋಳದ ಹಿಟ್ಟಿನ ಪೂರಿ

ಬೇಕಾಗುವ ಪದಾರ್ಥಗಳು

ಜೋಳದ ಹಿಟ್ಟು – 1 ಕಪ್ಪು

ಉಪ್ಪು – ರುಚಿಗೆ

ಬೇಯಿಸಲು – ಸಾಕಷ್ಟು ಎಣ್ಣೆ

ಮಾಡುವ ವಿಧಾನ: ಜೋಳದ ಹಿಟ್ಟಿಗೆ ಉಪ್ಪು ಸೇರಿಸಿ ನೀರಿನಲ್ಲಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ, ಒದ್ದೆಯ ಬಟ್ಟೆಯ ಮೇಲೆ ತಟ್ಟಿ. ಬಾಂಡ್ಲಿಯಲ್ಲಿ ಎಣ್ಣೆ ಕಾಯಿಸಿ, ಎರಡೂ ಬದಿ ಕರಿದು ತೆಗೆದರೆ ರುಚಿಯಾದ ಪೂರಿ ಸಿದ್ಧ. ಇದಕ್ಕೆ ಕಾಯಿ ಚಟ್ನಿ, ಪಲ್ಯ ಹಾಗೂ ತರಕಾರಿ ಸಾಗು ಹೊಂದುತ್ತದೆ.

ಜೋಳದ ಹಿಟ್ಟಿನ ಖಾರ ಪೂರಿ

ಬೇಕಾಗುವ ಪದಾರ್ಥಗಳು

ಜೋಳದ ಹಿಟ್ಟು – 1/2 ಲೋಟ

ಅಕ್ಕಿ ಹಿಟ್ಟು – 1/2 ಲೋಟ

ಉಪ್ಪು – ರುಚಿಗೆ

ಹಸಿರು ಮೆಣಸು – 2-3

ಕರಿಬೇವು – 5 ಎಲೆ

ಕೊತ್ತಂಬರಿ ಸೊಪ್ಪು – 2 ಕಡ್ಡಿ

ಜೀರಿಗೆ – 1/4 ಚಮಚ

ಇಂಗು – ಸ್ವಲ್ಪ

ಬೇಯಿಸಲು – ಸಾಕಷ್ಟು ಎಣ್ಣೆ

ಮಾಡುವ ವಿಧಾನ : ಜೋಳದ ಹಿಟ್ಟು, ಅಕ್ಕಿ ಹಿಟ್ಟನ್ನು ಬೆರೆಸಿ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನು ಸೇರಿಸಿ ಒಂದು ಸಲ ಮಿಕ್ಸಿಯಲ್ಲಿ ರನ್‌ ಮಾಡಿ ಬೆರೆಸಿದ ಹಿಟ್ಟಿಗೆ ಹಾಕಿ ನೀರಿನಲ್ಲಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ ಒದ್ದೆ ಬಟ್ಟೆಯ ಮೇಲೆ ತಟ್ಟಿ ಕಾದ ಎಣ್ಣೆಯಲ್ಲಿ ಎರಡೂ ಬದಿ ಕರಿದರೆ ಸಿದ್ಧ. ಇದು ಮೂರು ದಿನವಾದರೂ ಚೆನ್ನಾಗಿರುತ್ತದೆ. ಹಿಟ್ಟನ್ನು ತುಂಬಾ ಹೊತ್ತು ನೆನೆಸಬಾರದು.

ಹಿಟ್ಟನ್ನು ಕಲೆಸಿದ ಮೇಲೆ ಬೇಗನೆ ಮಾಡಬೇಕು. ನೆನೆಯಲು ಬಿಡಬಾರದು. ಇದನ್ನು ಡಬ್ಬದಲ್ಲಿ ಇಟ್ಟರೆ ಎರಡು ಮೂರು ದಿನ ಇರುತ್ತದೆ.

ಜೋಳದ ಹಿಟ್ಟಿನ ರಾಚಿದ ರೊಟ್ಟಿ

ಬೇಕಾಗುವ ಪದಾರ್ಥಗಳು

ಜೋಳದ ಹಿಟ್ಟು – 1 ಲೋಟ

ಉಪ್ಪು – ರುಚಿಗೆ

ನೀರು – 1 1/2 ಲೋಟ

ಮಾಡುವ ವಿಧಾನ : ದಪ್ಪ ತಳದ ಪಾತ್ರೆಯಲ್ಲಿ ನೀರನ್ನು ಹಾಕಿ ಮರಳಿಸಿ, ಉಪ್ಪು ಮತ್ತು ಹಿಟ್ಟನ್ನು ಸುರಿದು ಸಣ್ಣ ಉರಿಯಲ್ಲಿ ಅರ್ಧಗಂಟೆ ಬೇಯಿಸಿ ಇಳಿಸಿ ಹಿಟ್ಟನ್ನು ಕೆದಕಿ ಉಂಡೆಕಟ್ಟಿ ಚಪಾತಿಯ ಹಾಗೆ ಲಟ್ಟಿಸಿ ಕಾದ ಕಾವಲಿಗೆ ಹಾಕಿ ಎರಡೂ ಬದಿ ಎಣ್ಣೆ ಅಥವಾ ತುಪ್ಪ ಸವರಿ ಬೇಯಿಸಿದರೆ ರುಚಿಯಾದ ರಾಚಿದ ರೊಟ್ಟಿ ಸಿದ್ಧ. ಇದಕ್ಕೆ ಕಾಯಿ ಚಟ್ನಿ, ತರಕಾರಿ ಸಾಗು ಹಾಗೂ ಗೊಜ್ಜು ಹೆಚ್ಚು ಹೊಂದುತ್ತದೆ.

ಜೋಳದ ಹಿಟ್ಟಿನ ನೀರು ದೋಸೆ

ಬೇಕಾಗುವ ಪದಾರ್ಥಗಳು

ಜೋಳದ ಹಿಟ್ಟು – 1 ಲೋಟ

ಉಪ್ಪು – ರುಚಿಗೆ

ನೀರು – ಸಾಕಷ್ಟು

ತುಪ್ಪ ಹಾಗೂ ಎಣ್ಣೆ

ಮಾಡುವ ವಿಧಾನ : ಜೋಳದ ಹಿಟ್ಟಿಗೆ ಉಪ್ಪು ಸೇರಿಸಿ ನೀರಿನಲ್ಲಿ ದೋಸೆಹಿಟ್ಟಿನ ಹದಕ್ಕೆ ಕಲೆಸಿರಿ. ಹಿಟ್ಟು ಸ್ವಲ್ಪ ನೀರಿನ ಹಾಗೆ ಇರಲಿ. ಕಾದ ದೋಸೆ ಕಾವಲಿಗೆ ಎಣ್ಣೆ ಸವರಿ ಹಿಟ್ಟಿನಿಂದ ದೋಸೆಯ ಹಾಗೆ ಹಾಕಿ ಎರಡೂ ಬದಿ ತುಪ್ಪ ಅಥವಾ ಎಣ್ಣೆಯಿಂದ ಬೇಯಿಸಿದರೆ ಸಿದ್ಧ. ಇದಕ್ಕೆ ಕಾಯಿ ಚಟ್ನಿ, ಚಟ್ನಿಪುಡಿ ಹಾಗೂ ತೊಕ್ಕುಗಳು ಹೊಂದುತ್ತವೆ.

ಜೋಳದ ಹಿಟ್ಟಿನ ಲಡ್ಡು

ಬೇಕಾಗುವ ಪದಾರ್ಥಗಳು

ಜೋಳದ ಹಿಟ್ಟು – 1 ಲೋಟ

ಸಕ್ಕರೆ – 3/4 ಲೋಟ

ತುಪ್ಪ – 3-4 ಚಮಚ

ಏಲಕ್ಕಿ ಪುಡಿ – 1/4 ಚಮಚ

ಒಣ ದ್ರಾಕ್ಷಿ – 1 ಚಮಚ

ಗೋಡಂಬಿ ಚೂರು – 1 1/2 ಚಮಚ

ಮಾಡುವ ವಿಧಾನ : ದಪ್ಪ ತಳದ ಬಾಂಡ್ಲಿಯಲ್ಲಿ ತುಪ್ಪ ಹಾಗೂ ಜೋಳದ ಹಿಟ್ಟನ್ನು ಸೇರಿಸಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಹುರಿಯಬೇಕು. ಸಕ್ಕರೆಯನ್ನು ನುಣ್ಣಗೆ ಮಾಡಬೇಕು. ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ಸಕ್ಕರೆ ತುಪ್ಪ ಹಾಗೂ ದ್ರಾಕ್ಷಿ, ಗೋಡಂಬಿ ಮತ್ತು ಏಲಕ್ಕಿ ಪುಡಿಯನ್ನು ತಯಾರಿಸಿದ ಮಿಶ್ರಣಕ್ಕೆ ಸೇರಿಸಿ ಮತ್ತೊಮ್ಮೆ ಬಿಸಿ ಮಾಡಿ ಸ್ವಲ್ಪ ಬಿಸಿ ಇರುವಾಗಲೇ ಉಂಡೆಯನ್ನು ಕಟ್ಟಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi