ಒಂದಾನೊಂದು ಕಾಲದಲ್ಲಿ ಬ್ರಹ್ಮನ ನಾಲ್ವರು ಪುತ್ರರಾದ ಸನಕ, ಸನಾತನ, ಸನಂದನ ಹಾಗೂ ಸನತ್ಕುಮಾರ ಎನ್ನುವವರು ಬ್ರಹ್ಮಾಂಡಗಳನ್ನೆಲ್ಲ ಸುತ್ತಿಬರಲು ಹೊರಟರು. ಈ ಸಂಚಾರ ಮುಗಿದ ಬಳಿಕ ಅವರು ದೇವೋತ್ತಮ ಪರಮ ಪುರುಷ ಹಾಗೂ ಅವನ ಪರಿಶುದ್ಧ ಭಕ್ತರಿರುವ ಆಧ್ಯಾತ್ಮಿಕ ಆಕಾಶವನ್ನು ಪ್ರವೇಶಿಸಿದರು.

ಆಧ್ಯಾತ್ಮಿಕ ಆಕಾಶದಲ್ಲಿ ವೈಕುಂಠಲೋಕಗಳೆಂಬ ಹೆಸರಿನ ಆಧ್ಯಾತ್ಮಿಕ ಗ್ರಹಗಳಿವೆ. ಬಂಗಾರದಿಂದಲೂ ಮುತ್ತುರತ್ನಗಳಿಂದಲೂ ಮಾಡಲಾಗಿದ್ದ ಆರು ಬಾಗಿಲುಗಳನ್ನು ದಾಟಿಕೊಂಡು ನಾಲ್ವರು ಕುಮಾರರು ಏಳನೆಯ ಬಾಗಿಲನ್ನು ಪ್ರವೇಶಿಸಿದರು. ಸುತ್ತಲಿನ ಗಾಳಿಯೊಂದನ್ನು ಬಿಟ್ಟರೆ ಮೈಮುಚ್ಚಿಕೊಳ್ಳಲು ಬೇರೆ ಏನನ್ನೂ ನಾಲ್ವರು ಕುಮಾರರು ಧರಿಸಿರಲಿಲ್ಲ.
ಕುಮಾರರು ಜಗತ್ತಿನ ಜೀವಿಗಳೆಲ್ಲರಿಗಿಂತ ಹೆಚ್ಚು ವಯಸ್ಸಾಗಿದ್ದವರು ಹಾಗೂ ಆತ್ಮದ ತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡಿದ್ದವರು. ಆದರೂ ಈ ಬಾಲಕರು ಐದು ವರ್ಷದ ಹುಡುಗರಂತೆ ಕಾಣುತ್ತಿದ್ದರು. ಆದರೆ ಪ್ರಭುವಿಗೆ ಸ್ವಲ್ಪವೂ ರುಚಿಸದ ನಡತೆಯುಳ್ಳವರಾಗಿದ್ದ ದ್ವಾರಪಾಲಕರು ಈ ಮುನಿಗಳನ್ನು ನೋಡಿದಾಗ ತಮ್ಮ ಸಿಬ್ಬಂದಿಯ ಜೊತೆ ಸೇರಿ ಅವರನ್ನು ತಡೆದರು. ಮುನಿಗಳು ಈ ತೆರನ ಸ್ವಾಗತಕ್ಕೆ ಸ್ವಲ್ಪವೂ ಅರ್ಹರಾಗಿರಲಿಲ್ಲ.
ಈ ಪ್ರಕರಣದಿಂದಾಗಿ ಕುಮಾರರಿಗೆ ಸಿಟ್ಟು ಬಂತು. ದ್ವಾರಪಾಲಕರನ್ನು ಶಿಕ್ಷಿಸಬೇಕೆಂದು ಆ ನಾಲ್ವರೂ ತಮ್ಮತಮ್ಮಲ್ಲೇ ಮಾತನಾಡಿಕೊಂಡರು. ಬ್ರಾಹ್ಮಣ ಕುಮಾರರು ತಮ್ಮನ್ನು ಶಪಿಸಲಿದ್ದಾರೆಂಬುದು ತಿಳಿದಾಗ ನಿಶ್ಚಯವಾಗಿಯೂ ಪ್ರಭು ಭಕ್ತರೇ ಆಗಿದ್ದ ವೈಕುಂಠಲೋಕದ ದ್ವಾರಪಾಲಕರು ತತ್ ಕ್ಷಣವೇ ಬಹು ಆತಂಕದಿಂದ ಅವರ ಕಾಲುಗಳಿಗೆ ಬಿದ್ದರು.
ಏಕೆಂದರೆ ಬ್ರಾಹ್ಮಣನು ಕೊಟ್ಟ ಶಾಪವನ್ನು ಯಾವ ಅಸ್ತ್ರದಿಂದಾಗಲಿ ನಿವಾರಿಸಲಾಗುವುದಿಲ್ಲ. ಬ್ರಾಹ್ಮಣರಿಂದ ಶಪಿತರಾದ ಬಳಿಕ ದ್ವಾರಪಾಲಕರು ನುಡಿದರು: “ನಿಮ್ಮಂತಹ ಮುನಿವರ್ಯರನ್ನು ಗೌರವಿಸಲು ಅಲಕ್ಷ್ಯ ತೋರಿದ ನಮಗೆ ಅಂಧಕಾರ ಕವಿಯದಿರಲೆಂದು ಹರಸುವಂತೆ ನಾವು ನಿಮ್ಮನ್ನು ಪ್ರಾರ್ಥಿಸುತ್ತೇವೆ.”
ಅದೇ ಕ್ಷಣದಲ್ಲಿ ಪದ್ಮನಾಭ ಎಂದೂ ಕರೆಯಲ್ಪಡುವ ಪ್ರಭುವು ತನ್ನ ಪತ್ನಿ ಲಕ್ಷ್ಮಿಯೊಡನೆ ಆ ಸ್ಥಳಕ್ಕೆ ಬಂದನು. ದ್ವಾರಪಾಲಕರು ಪ್ರಭುವಿಗೆ ಭಕ್ತಿಯಿಂದ ನಮಸ್ಕರಿಸಿದರು. ಬಳಿಕ ದೇವೋತ್ತಮ ಪರಮ ಪುರುಷನು ನುಡಿದನು: “ಜಯ ಹಾಗೂ ವಿಜಯ ಎನ್ನುವ ಹೆಸರುಗಳುಳ್ಳ ಈ ನನ್ನ ಸೇವಕರು ನನ್ನನ್ನು ಅಲಕ್ಷಿಸಿದ್ದರಿಂದ ನಿಮ್ಮಲ್ಲಿ ಬಹುದೊಡ್ಡ ಅಪರಾಧ ಎಸಗಿದ್ದಾರೆ.
ಹೇ ಮಹಾಮುನಿಗಳೆ, ನನ್ನಲ್ಲಿ ಭಕ್ತಿಯುಳ್ಳವರಾದ ನೀವು ಇವರಿಗೆ ವಿಧಿಸಿರುವ ಶಿಕ್ಷೆಗೆ ನನ್ನ ಒಪ್ಪಿಗೆಯುಂಟು. ನನ್ನ ದೃಷ್ಟಿಯಲ್ಲಿ ಬ್ರಾಹ್ಮಣನು ಅತ್ಯುನ್ನತನೂ ಪ್ರೀತಿಪಾತ್ರನೂ ಆದ ವ್ಯಕ್ತಿ. ನನ್ನ ಸೇವಕರು ನಿಮ್ಮಲ್ಲಿ ಅವಿಶ್ವಾಸ ತೋರಿಸಿದ್ದು ನಾನು ನಿಮ್ಮಲ್ಲಿ ಅವಿಶ್ವಾಸ ತೋರಿಸಿದಂತೆಯೇ ಆಯಿತು. ನನ್ನ ಸೇವಕರು ಸೇವಕರಂತೆ ನಡೆದುಕೊಳ್ಳಲಿಲ್ಲ. ಇದು ನಾನೇ ಮಾಡಿದ ಅಪರಾಧವೆಂದು ನಾನು ಪರಿಗಣಿಸುತ್ತೇನೆ. ಆದ್ದರಿಂದ, ಈ ಪ್ರಕರಣದಿಂದ ನೊಂದಿರುವ ನಾನು ನಿಮ್ಮಲ್ಲಿ ಕ್ಷಮಾಯಾಚನೆ ಮಾಡುತ್ತೇನೆ.”
ಪ್ರಭುವಿನ ಈ ಉತ್ಕೃಷ್ಟ ಭಾಷಣವು ಅರ್ಥಮಾಡಿಕೊಳ್ಳಲಿಕ್ಕೆ ಕಷ್ಟವಾಗಿದ್ದಿತು. ಅದಕ್ಕೆ ಕಾರಣ ಆ ಭಾಷಣವು ಮಹತ್ವದ ಅರ್ಥವುಳ್ಳದ್ದೂ ಉದಾತ್ತ ಸಂದೇಶವುಳ್ಳದ್ದೂ ಆಗಿತ್ತು. ಮುನಿಗಳು ಪ್ರಭುವಿನ ಮಾತನ್ನು ತೆರೆದ ಕಿವಿಗಳಿಂದ ಕೇಳಿದರಲ್ಲದೆ ಅದರ ಬಗೆಗೆ ಪರ್ಯಾಲೋಚನೆಯನ್ನೂ ಮಾಡಿದರು.

ಪ್ರಭುವು ಆಡಿದ ಮಾತನ್ನು ಕೇಳಿದರೇನೋ ಹೌದು. ಆದರೆ ಅವನು ಏನು ಮಾಡಲಿದ್ದಾನೆಂಬುದು ಅವರಿಗೆ ಅರ್ಥವಾಗಲಿಲ್ಲ. ಮುನಿವರ್ಯರು ನುಡಿದರು : ”ಹೇ ದೇವೋತ್ತಮ ಪರಮ ಪುರುಷನೆ, ನಮಗೆಂದು ನೀನು ಏನು ಮಾಡಲಿದ್ದೀಯೋ ಅದು ನಮಗೆ ಅರ್ಥವಾಗುತ್ತಿಲ್ಲ. ಏಕೆಂದರೆ ನೀನು ಎಲ್ಲರ ಪರಮ ಒಡೆಯನಾದರೂ, ನಾವು ನಿನಗೇನೋ ಒಳ್ಳೆಯದು ಮಾಡಿದ್ದೇವೆ ಎಂಬಂತೆ ನೀನು ನಮ್ಮ ಪರವಾಗಿ ಮಾತನಾಡುತ್ತಿದ್ದೀಯೆ.
ಹೇ ಪ್ರಭುವೇ, ಈ ಇಬ್ಬರು ಮುಗ್ಧ ವ್ಯಕ್ತಿಗಳಿಗೆ ಅಥವಾ ನಮಗೂ ಯಾವ ಶಿಕ್ಷೆ ಕೊಡಬೇಕೆಂದಿರುವೆಯೋ ಮರುಮಾತಿಲ್ಲದೆ ನಾವದನ್ನು ಒಪ್ಪಿಕೊಳ್ಳುತ್ತೇವೆ. ಏನೂ ತಪ್ಪು ಮಾಡದ ಇಬ್ಬರು ವ್ಯಕ್ತಿಗಳಿಗೆ ನಾವು ಶಾಪ ನೀಡಿದ್ದೇವೆಂಬುದನ್ನು ನಾವು ಬಲ್ಲೆವು.”
ಪ್ರಭುವು ಉತ್ತರಕೊಟ್ಟನು: “ಹೇ ಬ್ರಾಹ್ಮಣರೇ, ನೀವು ಈ ಇಬ್ಬರಿಗೆ ವಿಧಿಸಿದ ಶಿಕ್ಷೆಯು ಮೂಲದಲ್ಲಿ ನಾನು ಗೊತ್ತುಪಡಿಸಿದ್ದುದೇ. ಆದ್ದರಿಂದ ಈ ಇಬ್ಬರೂ ಮುಂದಿನ ಜನ್ಮದಲ್ಲಿ ರಾಕ್ಷಸರ ಕುಟುಂಬದಲ್ಲಿ ಜನಿಸುತ್ತಾರೆ. ಆದರೆ ಕೋಪದಿಂದ ತೀವ್ರಗೊಳಿಸಲ್ಪಟ್ಟ ಚಿತ್ರದ ಏಕಾಗ್ರತೆಯಿಂದ ಅವರು ನನ್ನಲ್ಲಿ ದೃಢವಾಗಿ ಒಂದಾಗಿರುತ್ತಾರೆ.
ಮತ್ತು ಅತಿ ಶೀಘ್ರದಲ್ಲೇ ನನ್ನ ಬಳಿ ಬರುತ್ತಾರೆ.’ ವೈಕುಂಠದ ಒಡೆಯನನ್ನು ನೋಡಿದ ಬಳಿಕ ಮುನಿಗಳು ಅವನಿಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿದರು. ತರುವಾಯ ವೈಷ್ಣವನ ದೈವಿಕ ಸಂಪತ್ತು ಎಷ್ಟೆಂಬುದನ್ನು ಅರಿತವರಾಗಿ ಅತ್ಯಾನಂದದಿಂದ ಹಿಂತಿರುಗಿದರು. ಬಳಿಕ ಪ್ರಭುವು ತನ್ನ ಸೇವಕರಾದ ಜಯ ಮತ್ತು ವಿಜಯರಿಗೆ ಹೇಳಿದನು: ‘ಈ ಸ್ಥಳಬಿಟ್ಟು ಹೋಗಿ, ಆದರೆ ನೀವು ಭಯಪಡಬೇಕಾದ್ದಿಲ್ಲ.
ನಿಮಗೆ ಸಕಲ ಸನ್ಮಂಗಳವೂ ಉಂಟಾಗಲಿ. ಆ ಬ್ರಾಹ್ಮಣರು ನಿಮಗೆ ನೀಡಿರುವ ಶಾಪವನ್ನು ಶೂನ್ಯಗೊಳಿಸುವ ಸಾಮರ್ಥ್ಯ ನನಗಿದೆಯಾದರೂ, ನಾನು ಹಾಗೆ ಮಾಡುವುದಿಲ್ಲ. ಪ್ರತಿಯಾಗಿ ಅವರು ನೀಡಿರುವ ಶಿಕ್ಷೆಗೆ ನನ್ನ ಸಮ್ಮತಿಯುಂಟು. ಕೋಪದಿಂದ ಹಠಯೋಗವನ್ನು ಸಾಧನೆ ಮಾಡುವ ಮೂಲಕ ಬ್ರಾಹ್ಮಣರಿಗೆ ಅವಿಧೇಯರಾಗಿ ನಡೆದ ನಿಮ್ಮ ಪಾಪವು ನಿಮ್ಮನ್ನು ಬಿಟ್ಟುಹೋಗುತ್ತದೆ. ಮತ್ತು ನೀವು ಬಹು ಬೇಗ ಮತ್ತೆ ನನ್ನಲ್ಲಿಗೆ ಬರುತ್ತೀರಿ.”
ವೈಕುಂಠದ ದ್ವಾರದಲ್ಲಿ ಹೀಗೆಂದು ಮಾತನಾಡಿದ ಪ್ರಭುವು ತನ್ನ ಧಾಮಕ್ಕೆ ಹಿಂತಿರುಗಿದನು. ಆದರೆ ದೇವತೆಗಳಲ್ಲೇ ಶ್ರೇಷ್ಠರಾದ ಆ ಇಬ್ಬರು ದ್ವಾರಪಾಲಕರ ಸೌಂದರ್ಯ ಹಾಗೂ ಮೈಕಾಂತಿಯು ಆ ಬ್ರಾಹ್ಮಣರ ಶಾಪದಿಂದಾಗಿ ಕುಂದಿತ್ತು. ಹಾಗಾಗಿ ಅವರೀರ್ವರಿಗೂ ಮಂಕುಕವಿದು ಪರಮ ಪ್ರಭುವಿನ ಧಾಮವಾದ ವೈಕುಂಠದಿಂದ ಕೆಳಕ್ಕೆ ಬಿದ್ದರು.
ದೇವೋತ್ತಮ ಪುರುಷನ ಆ ಇಬ್ಬರು ಪ್ರಮುಖ ದ್ವಾರಪಾಲಕರು ಮುಂದೆ, ಕಶ್ಯಪಮುನಿಯ ಶಕ್ತಿಶಾಲಿ ವೀರ್ಯವು ಅವರನ್ನು ಸುತ್ತುವರಿದಿತ್ತಾಗಿ, ದಿತಿಯ ಗರ್ಭವನ್ನು ಪ್ರವೇಶಿಸಿದರು. ಹೀಗೆ ಮುಂದೆ ಅವರು ಬಹು ಪರಾಕ್ರಮಿ ಅಸುರರಾದ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪುಗಳಾಗಿ ಜನಿಸಿದರು.






Leave a Reply