ಮಕ್ಕಳಿಗೆ ತಿಂಡಿಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕಲು ತಿಂಡಿಯೆಂದರೆ ಇನ್ನೂ ಹೆಚ್ಚು ಖುಷಿ. ರುಚಿಯಾಗಿ ಮತ್ತು ಬಿಸಿಯಾಗಿ ಏನಾದರು ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆ ಮಾಡಬೇಕೆನಿಸಿದರೆ ಬ್ರೆಡ್ ಕಟ್ಲೆಟ್, ಆಲೂ-ಪಾಲಕ್ ಕಟ್ಲೆಟ್, ಅವಲಕ್ಕಿ ಕಟ್ಲೆಟ್ ಹೀಗೆ ವಿವಿಧ ಬಗೆ ಬಗೆಯ ಕಟ್ಲೆಟ್ ಮಾಡಬಹುದು. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಆಲೂ ಪಾಲಕ್ ಕಟ್ಲೆಟ್

ಬೇಕಾಗುವ ಪದಾರ್ಥಗಳು :
ಬೇಯಿಸಿದ ಆಲೂಗಡ್ಡೆ – 3
ಪಾಲಕ್ ಸೊಪ್ಪು – 2 ಕಟ್ಟು
ಕಡ್ಲೆಕಾಯಿ ಬೀಜದ ಪುಡಿ – 4 ಚಮಚ
ಕಡ್ಲೆಹಿಟ್ಟು – 4 ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಶುಂಠಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಗರಂ ಮಸಾಲ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬ್ರೆಡ್ ಕ್ರಮ್ಸೌ – 6 ಚಮಚ
ತುಪ್ಪ – ಅಗತ್ಯವಿದ್ದಷ್ಟು
ಮಾಡುವ ವಿಧಾನ: ಮೊದಲು ಪಾಲಕ್ ಸೊಪ್ಪನ್ನು ಬಿಡಿಸಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆದು ಚೆನ್ನಾಗಿ ಮಸೆದು ಇದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ, ಕೊತ್ತಂಬರಿ ಸೊಪ್ಪು, ಕಡ್ಲೆಕಾಯಿ ಬೀಜದ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಕಡ್ಲೆಹಿಟ್ಟು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಕಟ್ಲೆಟ್ ಆಕಾರಕ್ಕೆ ತಟ್ಟಿ ಬ್ರೆಡ್ ಕ್ರಮ್ಸೌ ಮೇಲೆ ಉರುಳಿಸಿ ತವಾದಲ್ಲಿ ಎರಡು ಬದಿ ತುಪ್ಪ ಹಾಕಿ ಬೇಯಿಸಿದರೆ ಆಲೂ ಪಾಲಕ್ ಕಟ್ಲೆಟ್ ಸವಿಯಲು ಸಿದ್ಧ. ಇದನ್ನು ಸಾಸ್ ಜೊತೆ ಸವಿಯಿರಿ.
ವೆಜ್ ಕಟ್ಲೆಟ್

ಬೇಕಾಗುವ ಪದಾರ್ಥಗಳು :
ಆಲೂಗಡ್ಡೆ – 3
ಕ್ಯಾರೆಟ್ – 2
ಹಸಿ ಬಟಾಣಿ – 1/2 ಕಪ್
ಬ್ರೆಡ್ ಕ್ರಮ್ಸೌ – 6 ಚಮಚ
ಮೈದಾ – 2 ಚಮಚ
ಅಕ್ಕಿಹಿಟ್ಟು – 2 ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ – 2
ಎಣ್ಣೆ – ಅಗತ್ಯವಿದ್ದಷ್ಟು
ಮಾಡುವ ವಿಧಾನ : ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಿ. ಕ್ಯಾರೆಟ್ ಅನ್ನು ಸಣ್ಣದಾಗಿ ಕತ್ತರಿಸಿ ಬಟಾಣಿಯೊಂದಿಗೆ ಬೇಯಿಸಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಕ್ಯಾರೆಟ್, ಆಲೂಗಡ್ಡೆ, ಬಟಾಣಿ ಹಾಕಿ ನೀರು ಇಂಗುವವರೆಗೂ ಹುರಿಯಿರಿ. ಅನಂತರ ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಕೆಳಗಿಳಿಸಿ. ಒಂದು ಬಟ್ಟಲಿನಲ್ಲಿ ಮೈದಾ ಮತ್ತು ಅಕ್ಕಿ ಹಿಟ್ಟನ್ನು ಚಿಟಿಕೆ ಉಪ್ಪು ಮತ್ತು ನೀರು ಹಾಕಿ ತೆಳುವಾಗಿ ಕಲಸಿಕೊಳ್ಳಿ. ತರಕಾರಿ ಮಿಶ್ರಣವನ್ನು ಕಟ್ಲೆಟ್‌ಗಳನ್ನಾಗಿ ಮಾಡಿ ಈ ಮೈದಾ ಮಿಶ್ರಣದಲ್ಲಿ ಅದ್ದಿ ಅನಂತರ ಬ್ರೆಡ್ ಕ್ರಮ್ಸೌನಲ್ಲಿ ಉರುಳಿಸಿ ಕಾದ ತವಾದ ಮೇಲೆ ಹಾಕಿ ಎರಡು ಕಡೆಯೂ ಎಣ್ಣೆ ಹಾಕಿ ಬೇಯಿಸಿ. ಇದನ್ನು ಪುದೀನ ಚಟ್ನಿಯೊಂದಿಗೆ ಸವಿಯಿರಿ.
ಮೊಳಕೆ ಹೆಸರು ಕಾಳು ಕಟ್ಲೆಟ್

ಬೇಕಾಗುವ ಪದಾರ್ಥಗಳು :
ಮೊಳಕೆ ಬರಿಸಿದ ಹೆಸರು ಕಾಳು – 1 1/2 ಕಪ್
ಹಸಿ ಬಟಾಣಿ – 1 ಕಪ್
ಹಸಿಮೆಣಸಿನಕಾಯಿ – 5
ಧನಿಯಾಪುಡಿ – 1 ಚಮಚ
ಜೀರಿಗೆ ಪುಡಿ – 1/2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕಡಲೆ ಹಿಟ್ಟು – 1/2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಮೊಳಕೆ ಕಾಳು ಮತ್ತು ಬಟಾಣಿಯನ್ನು ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ. ಅನಂತರ ನೀರನ್ನು ಬಸಿದು ತರಿ-ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಧನಿಯಾಪುಡಿ, ಜೀರಿಗೆ ಪುಡಿ, ಕಡ್ಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಗುಂಡಗೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ.
ಬಾಳೆಕಾಯಿ ಕಟ್ಲೆಟ್

ಬೇಕಾಗುವ ಪದಾರ್ಥಗಳು :
ಬಾಳೆಕಾಯಿ – 1
ಆಲೂಗಡ್ಡೆ – 2
ಹಸಿಬಟಾಣಿ – 1/2 ಕಪ್
ಕ್ಯಾರೆಟ್ ತುರಿ – 1/2 ಕಪ್
ಅಚ್ಚ ಖಾರದಪುಡಿ – 1 1/2 ಚಮಚ
ಅಕ್ಕಿ ಹಿಟ್ಟು – 3 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ: ಆಲೂಗಡ್ಡೆ ಮತ್ತು ಬಾಳೆಕಾಯಿಯನ್ನು ಬೇಯಿಸಿ ಪುಡಿಮಾಡಿ. ಬಟಾಣಿಯನ್ನು ಬೇಯಿಸಿ ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿ. ಇದಕ್ಕೆ ಕ್ಯಾರೆಟ್ ತುರಿ, ಅಚ್ಚ ಖಾರದಪುಡಿ, ಅಕ್ಕಿಹಿಟ್ಟು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ ಬೇಕಾದ ಆಕಾರಕ್ಕೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಬ್ರೆಡ್ ಕಟ್ಲೆಟ್

ಬೇಕಾಗುವ ಪದಾರ್ಥಗಳು :
ಬ್ರೆಡ್ ಸ್ಲೈಸ್ – 6
ಆಲೂಗಡ್ಡೆ – 2
ಹಸಿ ಬಟಾಣಿ – 1/2 ಕಪ್
ಹಸಿ ಮೆಣಸಿನಕಾಯಿ – 3
ಅಚ್ಚ ಖಾರದ ಪುಡಿ – 1 ಚಮಚ
ಅರಿಶಿನ – ಚಿಟಿಕೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಗರಂ ಮಸಾಲ – 1/2 ಚಮಚ
ಅಕ್ಕಿಹಿಟ್ಟು – 2 ಚಮಚ
ಸಣ್ಣ ರವೆ – 2 ಚಮಚ
ಸಾಸಿವೆ – 1/2 ಚಮಚ
ಕಡಲೆ ಬೇಳೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನ ಕಾಯಿ, ಅರಿಶಿನ ಹಾಕಿ ಬಾಡಿಸಿ. ಬೇಯಿಸಿದ ಆಲೂಗಡ್ಡೆ ಮತ್ತು ಬಟಾಣಿಯನ್ನು ಚೆನ್ನಾಗಿ ಮಸೆದು ಈ ಮಿಶ್ರಣಕ್ಕೆ ಸೇರಿಸಿ. ಬ್ರೆಡ್ ಅನ್ನು ನೀರಿನಲ್ಲಿ ಅದ್ದಿ ತತ್‌ಕ್ಷಣ ತೆಗೆದು ಆಲೂಗಡ್ಡೆಗೆ ಹಾಕಿ. ಅಚ್ಚ ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕಟ್ಲೆಟ್ ಆಕಾರಕ್ಕೆ ತಟ್ಟಿ ಅಕ್ಕಿಹಿಟ್ಟು ಮತ್ತು ಸಣ್ಣ ರವೆಯಲ್ಲಿ ಅದ್ದಿ ಕಾದ ತವಾದ ಮೇಲೆ ಹಾಕಿ ಬೇಯಿಸಿದರೆ ಬ್ರೆಡ್ ಕಟ್ಲೆಟ್ ತಿನ್ನಲು ಸಿದ್ಧ.






Leave a Reply