ಸಾಮಾನ್ಯವಾಗಿ ನಾವು ತೊಗರಿಬೇಳೆ, ಹೆಸರುಬೇಳೆ ಮತ್ತು ಇತರ ಬೇಳೆಗಳನ್ನು ಬಳಸಿ ಸಾರು ಮಾಡುತ್ತೇವೆ. ಮನೆಯಲ್ಲಿ ತರಕಾರಿ ಇಲ್ಲದೆ ಇರುವಾಗ ಅಥವಾ ಕೆಲಸದ ಒತ್ತಡದ ನಡುವೆ ತರಕಾರಿ ತರಲು ಪುರುಸೊತ್ತು ಸಿಗಲಿಲ್ಲ, ಅಂತಹ ದಿನಗಳಲ್ಲಿ ಯಾವಾಗಲೂ ಮಾಡುವ ಬೇಳೆಸಾರಿಗಿಂತ ಭಿನ್ನ ರುಚಿಯನ್ನು ನೋಡಬಯಸುವುದಾದರೆ ಈ ದಾಲ್‌ಗಳನ್ನು ಮಾಡಬಹುದು. ಈ ರೀತಿಯ ದಾಲ್‌ಗಳು ಆರೋಗ್ಯಕರ, ಬಾಯಿರುಚಿಕರ ಮತ್ತು ನಿಮ್ಮ ಶ್ರಮವನ್ನು ಕಡಮೆ ಮಾಡುವುದು.
ಹಲವು ಬಗೆಯ ದಾಲ್‌ಗಳನ್ನು ಮಾಡುವುದನ್ನು ತಿಳಿಸಿದ್ದೇವೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರು ಮಾಡಿ, ಶ್ರೀರಾಧಾಕೃಷ್ಣಚಂದ್ರರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಕಡಲೆಬೇಳೆ ತೊವ್ವೆ

ಬೇಕಾಗುವ ಪದಾರ್ಥಗಳು :
ಕಡಲೆಬೇಳೆ – 2 ಕಪ್
ಒಣಕೊಬ್ಬರಿ ತುರಿ – 1/2 ಕಪ್
ಶುಂಠಿಪೇಸ್ಟ್ – 1/2 ಚಮಚ
ಒಣಮೆಣಸಿನಕಾಯಿ – 4
ಅರಿಶಿನ – 2 ಚಿಟಿಕೆ
ಇಂಗು – 1 ಚಿಟಿಕೆ
ಕರಿಬೇವು – 1 ಎಸಳು
ತುಪ್ಪ – 4 ಚಮಚ
ಸಕ್ಕರೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಕಡಲೆಬೇಳೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅನಂತರ ಇದನ್ನು ಕುಕ್ಕರಿನಲ್ಲಿ ಮೂರು ಕಪ್ ನೀರು ಹಾಕಿ ಬೇಯಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಒಂದು ಚಮಚ ತುಪ್ಪವನ್ನು ಬಿಸಿಮಾಡಿಕೊಂಡು ಅದರಲ್ಲಿ ಒಣಕೊಬ್ಬರಿ ತುರಿಯನ್ನು ಹಾಕಿ ಬಾಡಿಸಿಕೊಳ್ಳಿ, ಅದು ಗುಲಾಬಿಬಣ್ಣಕ್ಕೆ ಬಂದಾಗ ತೆಗೆದುಬಿಡಿ. ಅನಂತರ ಅದೇ ಬಾಣಲೆಯಲ್ಲಿ ಉಳಿದ ತುಪ್ಪವನ್ನು ಹಾಕಿ ಬಿಸಿಮಾಡಿ ಅದರಲ್ಲಿ ಇಂಗು, ಒಣಮೆಣಸಿನಕಾಯಿ, ಶುಂಠಿಪೇಸ್ಟ್, ಕರಿಬೇವು, ಅರಿಶಿನ ಹಾಕಿ ಬಾಡಿಸಿ, ಬೇಯಿಸಿದ ಕಡಲೆಬೇಳೆ, ಉಪ್ಪು, ಸಕ್ಕರೆ ಸೇರಿಸಿ ಕುದಿಸಿ. ಇದಕ್ಕೆ ಅರ್ಧದಷ್ಟು ಹುರಿದ ಕೊಬ್ಬರಿತುರಿ ಬೆರೆಸಿ, ಮಂದ ಉರಿಯಲ್ಲಿ 10 ನಿಮಿಷ ಕುದಿಸಿ ಕೆಳಗಿಳಿಸಿ. ಇದನ್ನು ಒಂದು ಬಟ್ಟಲಿಗೆ ಹಾಕಿ ಇದರ ಮೇಲೆ ಒಂದು ಚಮಚ ತುಪ್ಪ ಉಳಿದ ಕೊಬ್ಬರಿತುರಿ ಉದುರಿಸಿ, ಇದನ್ನು ಪರೋಟ-ಪೂರಿ ಜೊತೆ ಸವಿಯಬಹುದು.
ದಾಲ್ ತಡ್ಕಾ

ಬೇಕಾಗುವ ಪದಾರ್ಥಗಳು :
ತೊಗರಿಬೇಳೆ – 1 ಕಪ್
ನೆನೆಸಿದ ಕಡಲೆಬೇಳೆ – 4 ಚಮಚ
ಹೆಸರುಬೇಳೆ – 1/2 ಕಪ್
ಟೊಮೆಟೊ – 2
ಶುಂಠಿಪೇಸ್ಟ್ – 1/2 ಚಮಚ
ಹಸಿಮೆಣಸಿನಕಾಯಿ – 3
ಕರಿಬೇವು – 1 ಎಸಳು
ಅಚ್ಚಮೆಣಸಿನ ಕಾಯಿ ಪುಡಿ – 1 ಚಮಚ
ಧನಿಯಪುಡಿ – 1 ಚಮಚ
ಜೀರಿಗೆಪುಡಿ – 1/2 ಚಮಚ
ಗರಂ ಮಸಾಲ – 1 ಚಮಚ
ಸಾಸಿವೆ – 1/2 ಚಮಚ
ಇಂಗು – 2 ಚಿಟಿಕೆ
ಎಣ್ಣೆ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಪ್ರೆಷರ್‌ಕುಕ್ಕರಿನಲ್ಲಿ ತೊಗರಿಬೇಳೆ, ಹೆಸರುಬೇಳೆ, ನೀರಿನಲ್ಲಿ ನೆನೆಸಿದ ಕಡಲೆಬೇಳೆ, ಉಪ್ಪು, ಎಣ್ಣೆ, ಅರಿಶಿನ, ನೀರು ಹಾಕಿ ಎರಡು ವಿಷಲ್ ಬರುವಂತೆ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದರಲ್ಲಿ ಶುಂಠಿಪೇಸ್ಟ್, ಕತ್ತರಿಸಿದ ಟೊಮೆಟೊವನ್ನು ಹಾಕಿ ಬಾಡಿಸಿ. ಇದು ಬೆಂದ ಮೇಲೆ ಮೆಣಸಿನಕಾಯಿಪುಡಿ, ಧನಿಯಪುಡಿ, ಗರಂಮಸಾಲಾ, ಜೀರಿಗೆಪುಡಿ, ಅರಿಶಿನ ಹಾಕಿ. ಅನಂತರ ಬೇಯಿಸಿದ ಬೇಳೆ ಹಾಕಿ ಕುದಿಸಿ. ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಕಾದನಂತರ ಸಾಸಿವೆ, ಇಂಗು, ಕರಿಬೇವು, ಹಸಿಮೆಣಸಿನಕಾಯಿ ಹಾಕಿ ಬಾಡಿಸಿ. ಇದನ್ನು ಕುದಿಯುತ್ತಿರುವ ದಾಲ್‌ಗೆ ಹಾಕಿದರೆ ರುಚಿಯಾದ ದಾಲ್‌ತಡ್ಕಾ ತಿನ್ನಲು ಸಿದ್ಧ.
ತೊಗರಿ ತೊವ್ವೆ

ಬೇಕಾಗುವ ಪದಾರ್ಥಗಳು :
ತೊಗರಿಬೇಳೆ – 2 ಕಪ್
ಟೊಮೆಟೊ – 3
ಶುಂಠಿಪೇಸ್ಟ್ – 1/2 ಚಮಚ
ಹಸಿಮೆಣಸಿನ ಕಾಯಿ ಪೇಸ್ಟ್ – 1 ಚಮಚ
ಅಚ್ಚಮೆಣಸಿನ ಕಾಯಿ ಪುಡಿ – 1/2 ಚಮಚ
ಗರಂ ಮಸಾಲ – 1/2 ಚಮಚ
ಜೀರಿಗೆ – 1 ಚಮಚ
ಅರಿಶಿನ – 2 ಚಿಟಿಕೆ
ತುಪ್ಪ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಬೇಳೆಯನ್ನು ತೊಳೆದು ಅಗತ್ಯವಿದ್ದಷ್ಟು ನೀರು, ಅರಿಶಿನ, ಒಂದು ಚಮಚ ಎಣ್ಣೆ ಹಾಕಿ 3 ವಿಷಲ್ ಬರುವಂತೆ ಪ್ರೆಷರ್ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಅನಂತರ ಇದನ್ನು ಚೆನ್ನಾಗಿ ಮಸೆದು ಇಡ್ಲಿ ಹಿಟ್ಟಿನಂತೆ ಮಾಡಿಕೊಳ್ಳಿ.
ಮೂರು ಚಮಚ ತುಪ್ಪ ಬಿಸಿ ಮಾಡಿಕೊಂಡು ಇದರಲ್ಲಿ ಜೀರಿಗೆ, ಶುಂಠಿ, ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಬಾಡಿಸಿ. ಅನಂತರ ಕತ್ತರಿಸಿದ ಟೊಮೆಟೊ ಹಾಕಿ ಬೇಯಿಸಿ. ಇದಕ್ಕೆ ಬೇಯಿಸಿದ ಬೇಳೆ ಉಪ್ಪು ಹಾಕಿ ಕುದಿಸಿ. ಅನಂತರ ಕೆಳಗಿಳಿಸಿ ಹೆಚ್ಚಿದ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ, ಬೇಕಾದಲ್ಲಿ 1/2 ಚಮಚ ಸಕ್ಕರೆ ಹಾಕಬಹುದು. ಇದು ಬಿಸಿ ಅನ್ನದೊಂದಿಗೆ ಚೆನ್ನಾಗಿ ಹೊಂದುತ್ತದೆ.
ದಾಲ್ ಮಖನಿ

ಬೇಕಾಗುವ ಪದಾರ್ಥಗಳು :
ರಾಜ್ಮ – 1 ಕಪ್
ಕಪ್ಪು ಉದ್ದಿನಬೇಳೆ – 1/2 ಕಪ್
ಕಡಲೆಬೇಳೆ – 1/4 ಕಪ್
ಟೊಮೆಟೊ ಪ್ಯೂರಿ – 1 ಕಪ್
ಮೆಂತೆಕಾಳು – 10
ಜೀರಿಗೆ – 1/2 ಚಮಚ
ಶುಂಠಿಪೇಸ್ಟ್ – 1/2 ಚಮಚ
ಅಚ್ಚ ಮೆಣಸಿನಕಾಯಿಪುಡಿ – 2 ಚಮಚ
ಗರಂ ಮಸಾಲ – 1/2 ಚಮಚ
ಹಾಲಿನ ಕೆನೆ – 1/2 ಕಪ್
ಎಣ್ಣೆ – 2 ಚಮಚ
ಬೆಣ್ಣೆ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ರಾಜ್ಮವನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಉದ್ದಿನಬೇಳೆ ಮತ್ತು ಕಡಲೆಬೇಳೆಯನ್ನು 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೆನೆದ ಕಾಳು/ಬೇಳೆಗಳನ್ನು ಕುಕ್ಕರಿನಲ್ಲಿ ಸ್ವಲ್ಪ ಎಣ್ಣೆ, ಉಪ್ಪು, ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿಮಾಡಿ. ಇದಕ್ಕೆ ಜೀರಿಗೆ, ಮೆಂತ್ಯವನ್ನು ಹಾಕಿ. ಅನಂತರ ಶುಂಠಿ, ಟೊಮೆಟೊ ಪ್ಯೂರಿಯನ್ನು ಹಾಕಿ ಬೇಯಿಸಿ. ಇದು ಬೇಯುತ್ತಿದ್ದಂತೆ ಕಾಳು/ಬೇಳೆಗಳನ್ನು ಹಾಕಿ ಕುದಿಸಿ ಅನಂತರ ಮೆಣಸಿನಕಾಯಿಪುಡಿ, ಗರಂ ಮಸಾಲ ಸೇರಿಸಿ ಹತ್ತು ನಿಮಿಷ ಕುದಿಸಿ. ಕೊನೆಯಲ್ಲಿ ಹಾಲಿನ ಕೆನೆ, ಬೆಣ್ಣೆಯನ್ನು ಹಾಕಿದರೆ ದಾಲ್‌ಮಖನಿ ಸಿದ್ಧ. ಇದನ್ನು ಪರೋಟ, ಚಪಾತಿ ಜೊತೆ ತಿನ್ನಲು ರುಚಿಯಾಗಿರುತ್ತದೆ.
ಮಸೂರ್ ದಾಲ್

ಬೇಕಾಗುವ ಪದಾರ್ಥಗಳು :
ಮಸೂರ್ ದಾಲ್ – 1 ಕಪ್
ಸಣ್ಣದಾಗಿ ಕತ್ತರಿಸಿದ ಕಾಲಿಫ್ಲವರ್, ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, ಬಟಾಣಿ – ಪ್ರತಿಯೊಂದು 1/2 ಕಪ್
ಟೊಮೆಟೊ – 1
ಶುಂಠಿ – 1/2 ಇಂಚು
ಹಸಿಮೆಣಸಿನಕಾಯಿ – 2
ಸಾಸಿವೆ – 1/2 ಚಮಚ
ಅಚ್ಚಮೆಣಸಿನಕಾಯಿಪುಡಿ – 1/2 ಚಮಚ
ಇಂಗು – 1 ಚಿಟಿಕೆ
ಒಣಮೆಣಸಿನಕಾಯಿ -2
ಅರಿಶಿನ – 2 ಚಿಟಿಕೆ
ನಿಂಬೆರಸ – 1 ಚಮಚ
ಕರಿಬೇವು – 1 ಎಸಳು
ಕೊತ್ತಂಬರಿಸೊಪ್ಪು – ಸ್ವಲ್ಪ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಮಸೂರ್ ದಾಲ್ ಅನ್ನು ತೊಳೆದಿಡಿ. ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಬಿಸಿಮಾಡಿ, ಇದಕ್ಕೆ ಸಾಸಿವೆ, ಇಂಗು, ಕರಿಬೇವು, ಹಸಿಮೆಣಸಿನಕಾಯಿ ಮತ್ತು ಒಣ ಮೆಣಸಿನಕಾಯಿ ಹಾಕಿ ಬಾಡಿಸಿ. ಅನಂತರ ಕತ್ತರಿಸಿದ ಶುಂಠಿ, ಟೊಮೆಟೊ, ಕಾಲಿಫ್ಲವರ್, ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಬಟಾಣಿ ಹಾಕಿ ಮಿಕ್ಸ್ ಮಾಡಿ ಬೇಯಿಸಿ. ಅನಂತರ ಅರಿಶಿನ, ಅಚ್ಚ ಮೆಣಸಿನಕಾಯಿ ಪುಡಿ, ಮಸೂರ್ ದಾಲ್, ರುಚಿಗೆ ತಕ್ಕಷ್ಟು ಉಪ್ಪು, 3 ಕಪ್ ನೀರು ಹಾಕಿ 3 ವಿಷಲ್ ಬರುವವರೆಗೆ ಬೇಯಿಸಿ. ಅನಂತರ ಒಲೆಯಿಂದ ಕೆಳಗಿಳಿಸಿ. ತಣ್ಣಗಾದ ಮೇಲೆ ಕುಕ್ಕರ್‌ನ ಮುಚ್ಚಳ ತೆಗೆದು ನಿಂಬೆರಸ, ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಸೂರ್ ದಾಲ್ ಸವಿಯಲು ಸಿದ್ಧ.






Leave a Reply