ಇಲ್ಲಿ ಹೆಚ್ಚಿನ ನೀರು ಇಲ್ಲದಂತಹ ಸಬ್ಜಿಗಳನ್ನು ತಯಾರಿಸುವ ಬಗ್ಗೆ ವಿವರಿಸಿದ್ದೇವೆ. ತರಕಾರಿಗಳ ಈ ಪಲ್ಯಗಳು ಪೌಷ್ಟಿಕಾಂಶದಿಂದ ಕೂಡಿವೆ. ಚಪಾತಿ, ಪೂರಿ, ದೋಸೆ, ರೊಟ್ಟಿಯಲ್ಲದೆ ಅನ್ನದೊಂದಿಗೆ ಕೂಡ ತಿನ್ನಬಹುದು. ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಗೆ ಕೊಡಿ.
ಬಾಳೆಕಾಯಿ ಪಲ್ಯ

ಬೇಕಾಗುವ ಪದಾರ್ಥಗಳು
ಬಾಳೆಕಾಯಿ – 10, 12
ತುಪ್ಪ – 45 ಎಂಎಲ್
ಸಾಸಿವೆ – 1 ಟೀ ಚಮಚ
ಜೀರಿಗೆ – 1 ಟೀ ಚಮಚ
ಕರಿಬೇವು – 5 ಎಸಳು
ಕತ್ತರಿಸಿದ ಹಸಿ ಮೆಣಸಿನಕಾಯಿ – 2
ತುರಿದ ಶುಂಠಿ – 2 ಟೇಬಲ್ ಚಮಚ
ಇಂಗು – 3/4 ಟೀ ಚಮಚ
ಸಾಸ್ಗಾಗಿ
ನೀರು – ಅರ್ಧ ಬಟ್ಟಲು
ಅರಿಶಿನ – 1 ಟೀ ಚಮಚ
ಗರಂ ಮಸಾಲ – 4 ಟೀ ಚಮಚ
ಉಪ್ಪು – 1 1/2 ಟೀ ಚಮಚ
ಮಾಡುವ ವಿಧಾನ : ಕೈಗೆ ಕಲೆಯಾಗದಿರಲು ನೀರಿನಡಿಯಲ್ಲಿ ಬಾಳೆಕಾಯಿಯ ಸಿಪ್ಪೆ ತೆಗೆಯಿರಿ. ಇದರಿಂದ ಬಾಳೆಕಾಯಿ ಕಪ್ಪಗಾಗುವುದನ್ನೂ ತಡೆಯಬಹುದು. ಅನಂತರ ಬಾಳೆಕಾಯಿಯನ್ನು ಘನಾಕೃತಿಯಲ್ಲಿ ಕತ್ತರಿಸಿ ನೀರಿರುವ ಪಾತ್ರೆಯಲ್ಲಿ ಹಾಕಿ. ಬಾಣಲೆಯಲ್ಲಿ ತುಪ್ಪ ಹಾಕಿ ಕರಗಿಸಿ. ಸಾಸಿವೆ ಹಾಕಿ ಸಿಡಿಸಿ. ಅನಂತರ ಜೀರಿಗೆ, ಇಂಗು, ಕರಿಬೇವು, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ತುರಿದ ಶುಂಠಿಯನ್ನು ಹಾಕಿ. ಇದಕ್ಕೆ ಕತ್ತರಿಸಿದ ಬಾಳೆಕಾಯಿಯನ್ನು ಹಾಕಿ. 15 ನಿಮಿಷ ಬೇಯಿಸಿ. ಅಗತ್ಯವಾದರೆ ಅರ್ಧ ಬಟ್ಟಲು ನೀರು ಹಾಕಿ. ಒಂದು ಬಟ್ಟಲಿಗೆ ನೀರು, ಅರಿಶಿನ, ಗರಂ ಮಸಾಲ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಬೇಯುತ್ತಿರುವ ಬಾಳೆಕಾಯಿ ಮೇಲೆ ಸುರಿಯಿರಿ. 5 ನಿಮಿಷ ಬೇಯಲಿ. ಪಲ್ಯ ಸಿದ್ಧ.
ಇನ್ನೊಂದು ವಿಧಾನ : ಬಾಳೆಕಾಯಿಗೆ ಸಾಸ್ ಹಾಕುವ ಮುನ್ನ ಕತ್ತರಿಸಿದ ಟೊಮ್ಯಟೊ ಹಾಕಿ 5 ರಿಂದ 10 ನಿಮಿಷ ಬೇಯಿಸಿ.
ಕರಿದ ಹಾಗಲಕಾಯಿ, ಆಲೂಗಡ್ಡೆ, ಟೊಮ್ಯಾಟೊ ಪಲ್ಯ

ಬೇಕಾಗುವ ಪದಾರ್ಥಗಳು
ಹಾಗಲಕಾಯಿ – 6
ಆಲೂಗಡ್ಡೆ – 3
ಟೊಮ್ಯಾಟೊ – 3
ತುಪ್ಪ – 45 ಎಂಎಲ್, ಕರಿಯಲು ಬೇಕಾದಷ್ಟು
ಸಾಸಿವೆ – 1 ಟೀ ಚಮಚ
ಜೀರಿಗೆ – 1 ಟೀ ಚಮಚ
ಇಂಗು – 1 ಟೀ ಚಮಚ
ಕರಿಬೇವು – 4 ಎಸಳು
ಕತ್ತರಿಸಿದ ಹಸಿ ಮೆಣಸಿನಕಾಯಿ – 2
ತುರಿದ ಶುಂಠಿ – 2 ಟೇಬಲ್ ಚಮಚ
ಅರಿಶಿನ – 1 ಟೀ ಚಮಚ
ಉಪ್ಪು – 1 1/2 ಟೀ ಚಮಚ
ಗರಂ ಮಸಾಲ – 1/3 ಟೀ ಚಮಚ
ನಿಂಬೆ ರಸ
ತಾಜಾ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ : ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ತೆಳುವಾಗಿ ವರ್ತುಲಾಕಾರದಲ್ಲಿ ಕತ್ತರಿಸಿ ಜಾಲರಿ ಪಾತ್ರೆಯಲ್ಲಿ ಹಾಕಿ. ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆಯಿರಿ. ಅದನ್ನು ಘನಾಕೃತಿಯಲ್ಲಿ ಕತ್ತರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿ. ಟೊಮ್ಯಾಟೋಗಳನ್ನು ತೊಳೆದು ಕತ್ತರಿಸಿ ಇಡಿ. ಬಾಣಲೆಯಲ್ಲಿ ತುಪ್ಪ ಹಾಕಿ ಕರಗಿಸಿ. ಕತ್ತರಿಸಿದ ಹಾಗಲಕಾಯಿಯನ್ನು ಸ್ವಲ್ಪ ಸ್ವಲ್ಪವಾಗಿ ತುಪ್ಪದಲ್ಲಿ ಹಾಕಿ ಕರಿಯಿರಿ. ಎಣ್ಣೆ ಹೀರಲು ಕಾಗದ ಹಾಕಿದ ಜರಡಿ ಪಾತ್ರೆಯಲ್ಲಿ ಕರಿದ ಹಾಗಲಕಾಯಿಯನ್ನು ಹಾಕಿ. ಸ್ವಲ್ಪ ಕಡಮೆ ಉರಿಯಲ್ಲಿ ಆಲೂಗಡ್ಡೆಯನ್ನು ಕರಿಯಿರಿ. ಅದನ್ನೂ ಕೂಡ ಎಣ್ಣೆ ಹೀರಲು ಕಾಗದ ಹಾಕಿದ ಜರಡಿ ಪಾತ್ರೆಯಲ್ಲಿ ಹಾಕಿ.
ಇನ್ನೊಂದು ದೊಡ್ಡ ಪ್ಯಾನ್ಗೆ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕರಗಿಸಿ. ಸಾಸಿವೆಯನ್ನು ಹಾಕಿ ಸಿಡಿಸಿ. ಅನಂತರ ಜೀರಿಗೆ, ಇಂಗು, ಕರಿಬೇವು, ಕತ್ತರಿಸಿದ ಮೆಣಸಿನಕಾಯಿ, ತುರಿದ ಶುಂಠಿ ಮತ್ತು ಕತ್ತರಿಸಿದ ಟೊಮ್ಯಾಟೋವನ್ನು ಹಾಕಿ 2 ನಿಮಿಷ ಬೇಯಿಸಿ. ಕರಿದ ಆಲೂಗಡ್ಡೆ ಮತ್ತು ಗರಿಗರಿಯಾದ ಹಾಗಲಕಾಯಿಯನ್ನು ಅದಕ್ಕೆ ಹಾಕಿ. ಅರಿಶಿನ, ಉಪ್ಪು ಮತ್ತು ಗರಂ ಮಸಾಲ ಹಾಕಿ ಚೆನ್ನಾಗಿ ಕಲಸಿ. ನಿಂಬೆ ರಸವನ್ನು ಚಿಮುಕಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಬೆಂಡೆ ಮತ್ತು ಆಲೂಗಡ್ಡೆ ಪಲ್ಯ

ಬೇಕಾಗುವ ಪದಾರ್ಥಗಳು
ಬೆಂಡೆಕಾಯಿ – 1 ಕಿಲೋ
ಆಲೂಗಡ್ಡೆ – 4
ತುಪ್ಪ – 45 ಎಂಎಲ್
ಸಾಸಿವೆ – 1 ಟೀ ಚಮಚ
ಜೀರಿಗೆ – 1 ಟೀ ಚಮಚ
ತುರಿದ ಶುಂಠಿ – 2 ಟೇಬಲ್ ಚಮಚ
ಕತ್ತರಿಸಿದ ಹಸಿ ಮೆಣಸಿನಕಾಯಿ – 2
ಇಂಗು – 1 ಟೀ ಚಮಚ
ಅರಿಶಿನ – 1 ಟೀ ಚಮಚ
ಗರಂ ಮಸಾಲ – 1 1/2 ಟೀ ಚಮಚ
ಉಪ್ಪು – 1 1/2 ಟೀ ಚಮಚ
ಮಾಡುವ ವಿಧಾನ : ಬೆಂಡೆಕಾಯಿಯನ್ನು ತೊಳೆದು ಬಟ್ಟೆಯಿಂದ ಒರೆಸಿಡಿ. ಇಲ್ಲವಾದರೆ ಬೇಯಿಸುವಾಗ ಅಂಟಾಗುತ್ತದೆ. ಒಣಗಿದ ಬೆಂಡೆಯನ್ನು ವರ್ತುಲಾಕಾರದಲ್ಲಿ ಕತ್ತರಿಸಿ. ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆಯಿರಿ. ಬೆಂಡೆಯ ಚೂರಿಗೆ ಸಮನಾಗಿ ಆಲೂಗಡ್ಡೆಯನ್ನು ಚೂರು ಮಾಡಿ. ಪ್ಯಾನ್ಗೆ ತುಪ್ಪವನ್ನು ಹಾಕಿ ಮದ್ಯಮ ಉರಿಯಲ್ಲಿ ಕಾಯಿಸಿ. ಸಾಸಿವೆಯನ್ನು ಹಾಕಿ ಸಿಡಿಸಿ. ಜೀರಿಗೆ, ತುರಿದ ಶುಂಠಿ, ಕತ್ತರಿಸಿದ ಹಸಿ ಮೆಣಸಿನಕಾಯಿ, ಇಂಗು ಹಾಕಿ ಬೆರೆಸಿ. ಅನಂತರ ಆಲೂಗಡ್ಡೆ, ಅರಿಶಿನ, ಗರಂ ಮಸಾಲ ಹಾಕಿ ಕಲಸಿ. ಕೊನೆಗೆ ಉಪ್ಪು ಹಾಕಿ. ಇದಾದ ಮೇಲೆ ಬೆಂಡೆಯನ್ನು ಹಾಕಿ ಮರದ ಸೌಟಿನಲ್ಲಿ ಕಲಸಿ. ಬೆಂಡೆಕಾಯಿಯನ್ನು ಒಣಗಿರುವಂತೆಯೇ ಬೇಯಿಸಬೇಕು. ಆದುದರಿಂದ ನೀರು ಹಾಕಬೇಡಿ. ನೀರು ಹಾಕಿದರೆ ಅಂಟಾಗುತ್ತದೆ. ಪ್ಯಾನ್ ಅನ್ನು ಮುಚ್ಚಿ ಮತ್ತು ಆ ಮುಚ್ಚಳಕ್ಕೆ ನೀರು ಹಾಕಿ. ಇದು ಬೆಂಡೆಕಾಯಿ ಬೇಯಲು ಸಹಾಯ ಮಾಡುತ್ತದೆ ಮತ್ತು ಸೀದುಹೋಗುವುದನ್ನು ತಡೆಯುತ್ತದೆ. 20 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಪಲ್ಯ ಸಿದ್ಧ.






Leave a Reply