ಗೀತಾ ಪಠನ ವ್ಯರ್ಥವಲ್ಲ

– ಸಂಸ್ಕೃತದಿಂದ ಕನ್ನಡಕ್ಕೆ : ಪತಿತಪಾವನ ದಾಸ

ಒಂದು ಊರಲ್ಲಿ ತನ್ನ ಮೊಮ್ಮಗನ ಜೊತೆ ಒಬ್ಬ ವೃದ್ಧನು ವಾಸಿಸುತ್ತಿದ್ದನು. ಪ್ರತಿದಿನ ಬೇಗನೆ ಎದ್ದು ಭಗವದ್ಗೀತೆಯನ್ನು ಓದುವುದು ಅವನ ಅಭ್ಯಾಸವಾಗಿತ್ತು. ತಾತನ ಆಚರಣೆಯನ್ನು ಕಂಡ ಮೊಮ್ಮಗ ʼನಾನು ಕೂಡ ತಾತನ ಹಾಗೆ ಆಗಬೇಕು.ʼ ಎನ್ನಿಸಿತು. ಆದ್ದರಿಂದ ಅವನು ತಾತನ ಅನುಕರಣೆಯನ್ನು ಪ್ರಾರಂಭಿಸಿದನು. ಭಗವದ್ಗೀತೆಯ ಪಠನವನ್ನು ಆರಂಭಿಸಿದನು. ಅನೇಕ ಬಾರಿ ಓದಿದರೂ ಗೀತಾ ಶ್ಲೋಕಗಳ ಅರ್ಥ ಅವನಿಗೆ ತಿಳಿಯುತ್ತಿರಲಿಲ್ಲ.

ಅವನು ಒಂದು ದಿನ, “ತಾತ, ನಿಮ್ಮ ಹಾಗೆ ನಾನೂ ಗೀತೆಯನ್ನು ಓದುತ್ತಿರುವೆ. ಓದುವ ಸಮಯದಲ್ಲಿ ಸ್ವಲ್ಪ ಏನೋ ಅರ್ಥವಾದ ಹಾಗೆ ಅನ್ನಿಸುತ್ತದೆ. ಆದರೆ ಪುಸ್ತಕ ಮುಚ್ಚಿದ ಮೇಲೆ ಎಲ್ಲವೂ ಮರೆತುಹೋಗುತ್ತದೆ. ಆದ್ದರಿಂದ ಗೀತಾ ಪಠನದಿಂದ ನನಗೇನು ಲಾಭ? ನಾನು ಅದರ ಓದನ್ನು ನಿಲ್ಲಿಸಬೇಕು ಎಂದು ಯೋಚಿಸುವೆ.”

ತಾತ ಆ ಕ್ಷಣ ಏನೂ ಉತ್ತರ ನೀಡಲಿಲ್ಲ. ಬದಲಿಗೆ, “ಈ ಬಿದುರಿನ ಬುಟ್ಟಿಯನ್ನು ಎತ್ತಿಕೊಂಡು ನದಿಗೆ ಹೋಗಿ ನೀರು ತಾ!” ಎಂದನು. ಮೊಮ್ಮಗನೋ ನದಿಗೆ ಹೋಗಿ ಬುಟ್ಟಿಯಲ್ಲಿ ನೀರು ತುಂಬಿಸಿಕೊಂಡು ಮನೆಗೆ ಹಿಂದಿರುಗಿದನು. ಆದರೆ ಮನೆ ತಲಪುವಷ್ಟರಲ್ಲಿ ಬುಟ್ಟಿಯಲ್ಲಿ ಸ್ವಲ್ಪವೂ ನೀರೇ ಇರಲಿಲ್ಲ. ಆಗ ತಾತ ಹೇಳಿದ, “ನೀನು ನಿಧಾನವಾಗಿ ನಡೆಯುತ್ತಿರುವೆ. ಬೇಗನೆ ನಡೆದು ಬರಬೇಕು” ಎಂದು.

ಮತ್ತೆ ನದಿಗೆ ಹೋದ ಮೊಮ್ಮಗೆ ನೀರು ತುಂಬಿಸಿಕೊಂಡು ಬೇಗನೆ ನಡೆದು ಬಂದನು. ಆದರೂ ಬುಟ್ಟಿಯಲ್ಲಿ ನೀರು ಉಳಿಯಲಿಲ್ಲ. ಅವನು ತಾತನಿಗೆ ಹೇಳಿದನು, “ಬಿದಿರು ಬುಟ್ಟಿಯಲ್ಲಿ ನೀರು ತರಲು ಆಗುವುದಿಲ್ಲ. ಆದ್ದರಿಂದ ನಾನು ಮಡಕೆಯಲ್ಲಿ ತರುವೆ.” ಎಂದು. ಅದಕ್ಕೆ ತಾತ, “ಇಲ್ಲ. ಬುಟ್ಟಿಯಲ್ಲಿಯೇ ತರಬೇಕು. ಮತ್ತೆ ಪ್ರಯತ್ನಿಸು. ಮತ್ತೆ ಮತ್ತೆ ಪ್ರಯತ್ನ ಮಾಡು.” ಎಂದನು.

ಹುಡುಗನು ಅನೇಕ ಬಾರಿ ಪ್ರಯತ್ನ ಮಾಡಿದನು. ಆದರೂ ನೀರು ತರುವಲ್ಲಿ ಸಫಲನಾಗಲಿಲ್ಲ. ಕೊನೆಗೆ ದುಃಖಿತನಾಗಿ ನುಡಿದನು, “ನಾನು ಬಹು ಬಾರಿ ಪ್ರಯಾಸವನ್ನು ಮಾಡಿದೆನು. ಆದರೂ ಬುಟ್ಟಿಯಲ್ಲಿ ನೀರನ್ನು ತರಲಾಗಲಿಲ್ಲ. ಈ ರೀತಿಯ ವ್ಯರ್ಥ ಕೆಲಸಗಳಲ್ಲಿ ಏಕೆ ನನ್ನನ್ನು ತೊಡಗಿಸುವಿರಿ?” ಎಂದನು.

ಆಗ ತಾತ ಹೇಳಿದ, “ವ್ಯರ್ಥ ಪ್ರಯಾಸ ಅಲ್ಲ ಇದು. ನಿನ್ನಿಂದ ನೀರು ತರಲಾಗಲಿಲ್ಲ ಎಂಬುದೇನೋ ಸತ್ಯ. ಆದರೂ ಪ್ರಯಾಸ ವ್ಯರ್ಥವಾಗಲಿಲ್ಲ. ಬುಟ್ಟಿಯನ್ನು ಸ್ವಲ್ಪ ಪರೀಕ್ಷಿಸಿ ನೋಡು.”

ಹುಡುಗ ಬುಟ್ಟಿಯನ್ನು ದಿಟ್ಟಿಸಿದನು. ಮುಂಚೆ ಬುಟ್ಟಿ ಕೊಳೆಯಾಗಿತ್ತು. ಈಗ ಸ್ವಚ್ಛವಾಗಿದೆ. ಒಳಗೂ ಹೊರಗೂ ಹೊಳೆಯುತ್ತಿದೆ. ಆಶ್ಚರ್ಯದಿಂದ ಬುಟ್ಟಿಯನ್ನೇ ನೋಡುತ್ತಿದ್ದ ಹುಡುಗನಿಗೆ ವೃದ್ಧ ಹೇಳಿದ, “ಮುಂಚೆ ಈ ಬುಟ್ಟಿ ಕೊಳೆಯಾಗಿತ್ತು, ಈಗ ಸ್ವಚ್ಛವಾಗಿದೆ. ನೀರನ್ನು ತರಲಾಗದಿದ್ದರೂ ಬುಟ್ಟಿ ಸ್ವಚ್ಛವಾಯಿತು.

ಗೀತೆಯ ಪಠನವೂ ಹೀಗೆಯೇ. ಓದುವ ಹೊತ್ತಿನಲ್ಲಿ ಎಲ್ಲ ಶ್ಲೋಕಗಳು ಅರ್ಥವಾಗದೇ ಇರಬಹುದು. ಕೆಲವು ಮರೆತೂ ಹೋಗಬಹುದು. ಆದರೂ ಓದುವ ಕ್ರಮವನ್ನು ಬಿಟ್ಟುಬಿಡಬಾರದು.  ಓದುವುದರಿಂದ ಅಂತರಂಗ ಬಹಿರಂಗ ಶುದ್ಧಿಯಾದರೂ ಆಗೇ ಆಗುತ್ತದೆ. ಕಾಲಕ್ರಮೇಣ ಎಲ್ಲ ಅರ್ಥವಾದರೆ ಜೀವನ ಸಫಲವಾಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi