‘ಗಾವೋ ವಿಶ್ವಸ್ಯಮಾತರಃ’ ಸಮಗ್ರ ಪ್ರಪಂಚಕ್ಕೆ ಗೋವುಗಳು ಮಾತೃ ಸ್ವರೂಪಿಗಳು. ಗೋಮಾತೆ ಪವಿತ್ರಳು. ಪೂಜಾರ್ಹಳು. ಅನಾದಿ ಕಾಲದಿಂದಲೂ ಗೋಮಾತೆಯನ್ನು ಭೂಲೋಕದಲ್ಲಿ ಆರಾಧಿಸುತ್ತಿರುವುದರ ಬಗ್ಗೆ ಕೇಳಿದ್ದೇವೆ.

ವೇದಗಳ ಪ್ರಕಾರ ಗೋಮಾತೆಗೆ-ಗೋಪೂಜೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಅನಾದಿಕಾಲದಿಂದಲೂ ಮನುಷ್ಯರು ಗೋಪೂಜೆ ಮಾಡುತ್ತಿದ್ದರು. ಹಾಗಾದರೆ ಗೋವು ಮಾತೃಸ್ವರೂಪಿ ಎನ್ನುವುದು ಸತ್ಯವೇ?
ಗ್ರಾಮೀಣ ಜನಜೀವನದಲ್ಲಿ ನೈಸರ್ಗಿಕ ಸಂಪನ್ಮೂಲ ಬದುಕಿನ ಅನಿವಾರ್ಯ. ತಮ್ಮ ಮನೆ ನಿರ್ಮಾಣದಿಂದ ನಿತ್ಯ ಉಡುವ ಉಡುಪುಗಳವರೆಗೆ ಜನರು ನೈಸರ್ಗಿಕ ಸಂಪನ್ಮೂಲಗಳ ಮೊರೆ ಹೋಗುತ್ತಾರೆ. ಅದೇ ರೀತಿ ಸ್ವಾವಲಂಬನೆಯ ಬದುಕಿನಲ್ಲಿ ಗೋವನ್ನು ಬದುಕಿನ ಅವಿಭಾಜ್ಯ ಅಂಗವಾಗಿ ಕಾಣುತ್ತಿದ್ದು, ತನ್ನ ಮನೆಯಲ್ಲಿ ಕನಿಷ್ಠ ಒಂದು ಹಸುವನ್ನಾದರೂ ಸಾಕುತ್ತಿರುವುದನ್ನು ಇಂದಿಗೂ ಹಳ್ಳಿಗಳಲ್ಲಿ ಕಾಣಬಹುದು.
ಹಸು ಮತ್ತು ಎತ್ತು ಗ್ರಾಮೀಣ ಜನರ ಜೀವನಕ್ಕೆ ಅತ್ಯಂತ ಸಹಕಾರಿ. ಸುಮಾರು ಶೇ 80ರಷ್ಟು ಜನ ಗೋ ಆವಲಂಬಿತರು. ಕೇವಲ ಹುಲ್ಲನ್ನು ಮಾತ್ರ ತಿಂದು, ಮನುಷ್ಯರಿಗೆ ಅವಶ್ಯವಾದುದನ್ನೆಲ್ಲ ಗೋಮಾತೆ ನೀಡುತ್ತಾಳೆ. ದೇಹಕ್ಕೆ ಬೇಕಾದ ಎಲ್ಲಾ ಜೀವಸತ್ತ್ವಗಳನ್ನು ಒಳಗೊಂಡಿರುವ ಹಾಲನ್ನೀವ ಗೋಮಾತೆ ಹೆತ್ತ ತಾಯಿಗೆ ಸಮಾನ.
ಜೀವನಪರ್ಯಂತ ಹಾಲು ನೀಡುವ ಗೋಮಾತೆಯನ್ನು ವೇದಗಳಲ್ಲೂ ‘ಮಾತೆ’ಗೆ ಹೋಲಿಸಲಾಗಿದೆ. ಅದೇ ಕಾರಣಕ್ಕೆ ಆಕೆ “ಗಾವೋ ವಿಶ್ವಸ್ಯ ಮಾತರಃ”
ಗೋವಿನ ಹಾಲಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸುವ ಮನುಷ್ಯ, ಬೆಣ್ಣೆ, ಮೊಸರು, ಗಿಣ್ಣು, ತುಪ್ಪ ಎಲ್ಲವೂ ಗೋಮಾತೆಯ ಕೊಡುಗೆಯೆಂದೇ ಬಗೆಯಬೇಕು. ಇಷ್ಟು ಮಾತ್ರವಲ್ಲ, ಗೋವಿನ ಸಗಣಿಯಿಂದ ಕೃಷಿಗಾಗಿ ಅತ್ಯುತ್ತಮ ಗೊಬ್ಬರ, ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಸಗಣಿಯಿಂದ ಅಡುಗೆ ಮಾಡಲು ಉರುವಲಾಗಿ ಬಳಸುವ ಬೆರಣಿ, ದೇಹದ ಅನೇಕ ರೋಗಗಳಿಗೆ ಮದ್ದಾಗಬಲ್ಲ ಗೋಮಯ- ಗೋಮೂತ್ರಗಳೂ ಕೂಡ ನಮಗೆ ವರದಾನವೇ.
ಅಂತೆಯೇ ರೈತರ ಅರ್ಥಪೂರ್ಣ ಬದುಕು ರೂಪಿಸುವಲ್ಲಿ ಎತ್ತುಗಳ ಪಾತ್ರ ಹಿರಿದು. ಆರೋಗ್ಯವಂತ ಎತ್ತುಗಳನ್ನು ಹೊಲ ಉಳುಮೆಗೆ ರೈತರು ಬಳಸುತ್ತಾರೆ. ವಿಷಾದವೇನೆಂದರೆ ಪ್ರಸ್ತುತ ದಿನಗಳಲ್ಲಿ ಎತ್ತುಗಳಿಗಿಂತ ವೇಗವಾಗಿ ಯಂತ್ರಗಳು ಕಾರ್ಯನಿರ್ವಹಿಸುವ ಕಾರಣ, ಹೊಲ ಉಳುಮೆಗೆ ಯಂತ್ರಗಳನ್ನು ಬಳಸಲಾಗುತ್ತಿದೆ.

ಸಾಂಪ್ರದಾಯಿಕವಾಗಿ ಬೆಳೆದು ಬಂದ ಎತ್ತುಗಳ ಬಳಕೆ ಕಡಿಮೆಯಾಗುತ್ತಿದೆ. ಆದರೆ ಕೆಲವೊಂದು ಸಾಂದರ್ಭಿಕ ಸನ್ನಿವೇಶ ಮತ್ತು ಮಾನ್ಸೂನ್ ಸಂದರ್ಭಗಳಲ್ಲಿ ಯಂತ್ರಗಳ ಬಳಕೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿರುವುದು ಗಮನಾರ್ಹ. ರೈತರಿಗೆ ಎಲ್ಲಾ ಸಮಯದಲ್ಲಿ ಸಹಕಾರ ನೀಡಬಲ್ಲ ಎತ್ತು ಜನರ ಪಾಲಿಗೆ ‘ತಂದೆ’ಯಂತೆ.
ವೇದಶಾಸ್ತ್ರದಲ್ಲಿ ಗೋವು ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧವನ್ನು ಕಲ್ಪಿಸಲಾಗಿದೆ. ಗೋಮಾತೆ ಕರುವಿಗೆ ಬೇಕಾಗಿರುವುದಕ್ಕಿಂತ ಹೆಚ್ಚು ಹಾಲನ್ನು ಉತ್ಪಾದಿಸಿ, ಮನುಷ್ಯನಿಗೆ ನೀಡುತ್ತಾಳೆ. ಕರು, ಹಾಲು ಕುಡಿದಂತೆ ಆಕೆಯ ಕೆಚ್ಚಲು ಹಿಗ್ಗುತ್ತ ಹೋಗಿ, ಪರಿಣಾಮವಾಗಿ ಕೆಲವೊಮ್ಮೆ ಇದು ಆಕೆಯ ಸಾವಿಗೂ ಕಾರಣವಾಗುತ್ತದೆ. ಆದಾವುದನ್ನೂ ಲೆಕ್ಕಿಸದೆ ಆಕೆ ಸಂತೋಷದಿಂದ ಮತ್ತೆ ಮತ್ತೆ ಹಾಲನ್ನು ಉತ್ಪಾದಿಸಿ ನೀಡುವಳು.
ಪ್ರಸ್ತುತ ದಿನಗಳಲ್ಲಿ ಡೈರಿಗಳು ಆರಂಭವಾಗಿದ್ದು, ಮನುಷ್ಯ ಆರ್ಥಿಕ ಲಾಭಕ್ಕಾಗಿ ದನಗಳನ್ನು ಸಾಕುತ್ತಿದ್ದಾನೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಗೋ ಸಂತತಿಯ ಕುರಿತು ನಿರ್ಲಕ್ಷ ತಾಳುತ್ತಿರುವ ಜನ, ಗೋವನ್ನು ನಾಯಿಗಿಂತ ಹೀನ ರೀತಿಯಲ್ಲಿ ಕಾಣುತ್ತಿರುವುದನ್ನು ಕಾಣಬಹುದು.
ಆದರೆ ನಮ್ಮಲ್ಲಿ ಗೋಸಂತತಿಯ ಕುರಿತು ಜಾಗೃತಿಯನ್ನುಂಟುಮಾಡುವ ಅನೇಕ ಸಂಸ್ಥೆಗಳು ಇವೆ. ಇಸ್ಕಾನ್ ಇದಕ್ಕೊಂದು ನಿದರ್ಶನ. ಗೋ ಸಂತತಿಯ ಅಭಿವೃದ್ಧಿಯತ್ತ ಗಮನಹರಿಸುವ ಇಸ್ಕಾನ್, ಹತ್ತು ಹಲವು ಕಾರ್ಯಕ್ರಮಗಳ ಮುಖಾಂತರ ಜನರಲ್ಲಿ ಗೋ ಕಾಳಜಿಯ ಕುರಿತು ಸಾಮಾಜಿಕ ಜಾಗೃತಿಯನ್ನುಂಟು ಮಾಡುತ್ತಿರುವುದು ಗಮನಾರ್ಹ. ಭಗವದ್ಗೀತೆಯಲ್ಲಿ ಕೂಡ ಗೋರಕ್ಷಣೆಯನ್ನು ಧರ್ಮದ ಪ್ರಧಾನ ಅಂಗವಾಗಿ ಉಲ್ಲೇಖಿಸಲಾಗಿದೆ.
ಗ್ರಾಮೀಣ ಜನರಿಗೆ ಸ್ವಾವಲಂಬನೆ ಬದುಕನ್ನು ರೂಪಿಸುವಲ್ಲಿ ಸಹಕಾರ ನೀಡುವುದೇ ಇಸ್ಕಾನ್‌ನ ಪ್ರಮುಖ ಉದ್ದೇಶ. ಸಾಂಪ್ರದಾಯಿಕವಾಗಿ ಬೆಳೆದುಬಂದ ಕೃಷಿ ಪದ್ಧತಿಯನ್ನು ಮುಂದುವರಿಸಲು ಮತ್ತು ಆಧುನಿಕ ಯಂತ್ರಗಳ ಬಳಕೆಯನ್ನು ಕಡಿಮೆ ಮಾಡಲು ರೈತರಲ್ಲಿ ಅರಿವು ಮೂಡಿಸುವಲ್ಲಿ ಇಸ್ಕಾನ್ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ಜಾಗೃತಿಯನ್ನುಂಟು ಮಾಡುವುದರ ಮೂಲಕ ಮನುಷ್ಯ ಮತ್ತು ಪ್ರಾಣಿಗಳ ಮಧ್ಯೆ ಬಾಂಧವ್ಯ ಮೂಡಿಸುವುದು ಇಸ್ಕಾನ್‌ನ ಉದ್ದೇಶ.

ಪಶ್ಚಿಮ ರಾಷ್ಟ್ರಗಳಲ್ಲಿ ದಿನನಿತ್ಯ ಸಾವಿರಾರು ಗೋವುಗಳ ವಧೆಯಾಗುತ್ತಿರುವುದು ಶ್ರೀಲ ಪ್ರಭುಪಾದರಿಗೆ ದಿಗ್ಭ್ರಮೆ ಮೂಡಿಸಿತ್ತು. ಯಾವುದೇ ಪ್ರಜ್ಞೆಯಿಲ್ಲದ ಮನುಷ್ಯ ಮಾಂಸಕ್ಕಾಗಿ ಗೋಸಂಹಾರ ಮಾಡುತ್ತಿದ್ದು, ಪ್ರಸ್ತುತ ದಿನಗಳಲ್ಲಿ ಹೊಲ ಉಳಲು ಯಂತ್ರಗಳನ್ನು ಬಳಸುತ್ತಿದ್ದಾನೆ. ಆದರೆ ಯಾವುದೇ ಯಂತ್ರ ಹುಲ್ಲನ್ನು ತಿಂದು ಹಾಲು ನೀಡಲು ಸಾಧ್ಯವೇ? ಇದು ಗಮನಿಸಬೇಕಾದ ಅಂಶ.
ಜೀವನಪರ್ಯಂತ ಹಾಲನ್ನೀವ ಹಸುವಿನ ಚರ್ಮ ಕೂಡ ಸತ್ತಮೇಲೆ ಉಪಯುಕ್ತ. ಗೋವಿನ ಕೊಬ್ಬು ಗೊರಸು ಎಲ್ಲವನ್ನೂ ಲಾಭಕ್ಕಾಗಿ ಬಳಸುವ ಮನುಷ್ಯ, ಇತ್ತೀಚಿನ ದಿನಗಳಲ್ಲಿ ಮುಗ್ಧ ಗೋವನ್ನು ನಿರ್ದಾಕ್ಷಿಣ್ಯವಾಗಿ ಕೊಂದುಬಿಡುತ್ತಾನೆ ಎಂದು ಶ್ರೀಲ ಪ್ರಭುಪಾದರು ವಿಷಾದದಿಂದ ಹೇಳುತ್ತಿದ್ದರು.
ವೇದಗಳಲ್ಲಿ ಶ್ರೀ ಕೃಷ್ಣ ಪರಮಾತ್ಮನ ಕುರಿತು ಉಲ್ಲೇಖವಿದೆ. ಗೋವುಗಳಿಗೆ ಸಂತಸವನ್ನು ಉಂಟುಮಾಡುವವನೇ ಗೋವಿಂದ. ಐದು ಸಾವಿರ ಹಿಂದೆ ಗೊಲ್ಲ ಸಮುದಾಯದಲ್ಲಿ ಶ್ರೀಕೃಷ್ಣ ಹುಟ್ಟಿದ. ಆ ಸಮುದಾಯದವರು ಸಾವಿರಾರು ಗೋವುಗಳನ್ನು ಸಾಕುತ್ತಿದ್ದು, ಆತೀ ಶ್ರೀಮಂತರೆನಿಸಿಕೊಂಡವರು. ಹಾಲಿನ ಉತ್ಪನ್ನಗಳನ್ನು ಮಾರಿ ಹಣ ಸಂಪಾದನೆ ಮಾಡುತ್ತಿದ್ದ ಅವರು, ಕಂದಾಯ ರೂಪದಲ್ಲಿ ತುಪ್ಪ, ಬೆಣ್ಣೆ ಮುಂತಾದವುಗಳನ್ನು ರಾಜನಿಗೆ ನೀಡುತ್ತಿದ್ದರೆಂದು ಪುರಾಣದಲ್ಲಿ ಹೇಳಲಾಗಿದೆ.
ವೇದಶಾಸ್ತ್ರದಲ್ಲಿ ಗೋವು ಧರ್ಮದ ಸಂಕೇತವಾಗಿ ಗುರುತಿಸಲಾಗಿದ್ದು, ಎತ್ತನ್ನು ‘ಧರ್ಮ’ವೆಂದು ಕರೆಯಲಾಗುತ್ತಿದೆ. ಧರ್ಮವು ಕೆಟ್ಟ ಪ್ರವೃತ್ತಿಯಿಂದ ಕೂಡಿದ ಕಲಿಯಿಂದ ಆಕ್ರಮಣಕ್ಕೊಳಗಾಗಿ, ಶುದ್ಧತೆ, ನಿಷ್ಠೆ ಮತ್ತು ದಯೆಗಳ ಪ್ರತೀಕವೆನಿಸಿದ ಮೂರು ಕಾಲುಗಳು ಮುರಿಯಲ್ಪಟ್ಟವು.
ಇದನ್ನು ತಿಳಿದ ಪರೀಕ್ಷಿತ ರಾಜ ಕಲಿಯನ್ನು ಕೊಲ್ಲಲು ಮುಂದಾದಾಗ, ಕಲಿ ಅದೇ ರಾಜ್ಯದಲ್ಲಿ ತಾನು ನೆಲೆಯೂರಲು ಅವಕಾಶ ಬೇಡಿಕೊಳ್ಳುತ್ತಾನೆ. ಆಗ ರಾಜ ಎಲ್ಲಿ ಪ್ರಾಣಿವಧೆ ನಡೆಯುತ್ತದೋ ಅಲ್ಲಿ ನೆಲೆಸೆಂದು ಆದೇಶಿಸುತ್ತಾನೆ.
ಹೀಗೆ, ಗೋವಿನ ಶ್ರೇಷ್ಠತೆಯನ್ನು ಸಾರುವ ಹಲವಾರು ಕತೆಗಳು ಪುರಾಣಗಳಲ್ಲಿವೆ. ಅವು ಇಂದಿಗೂ ಪ್ರಸ್ತುತ. ನಮಗೆ ಸದಾ ಉಪಕಾರವನ್ನೇ ಮಾಡುವ ಕಾಮಧೇನುಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದು. ಅಲ್ಲವೇ?






Leave a Reply