ಶ್ರೀಕೃಷ್ಣ ಪಾಕಶಾಲೆ

ಹಲಸಿನ ಹಣ್ಣಿನ ವಿಶೇಷ, ಭಕ್ಷ್ಯಗಳು

ಎಸ್‌.ವಿ.ಗಾಯತ್ರಿ ಶೆಣೈ

ಹಲಸಿನಕಾಯಿ ಹಾಗೂ ಹಲಸಿನ ಹಣ್ಣು ಹೆಚ್ಚಾಗಿ ದೊರಕುವ ಮೇ ತಿಂಗಳಿನಲ್ಲಿ ನಮ್ಮ ಪ್ರಿಯ ಓದುಗರಿಗೆಂದೇ ಬಾರಿ ಹಲಸಿನಿಂದ ತಯಾರಿಸಬಹುದಾದ ಭಕ್ಷ್ಯಗಳನ್ನು ಕೊಡಲಾಗಿದೆ. ವಿಶೇಷ ಭಕ್ಷ್ಯಗಳನ್ನು ಮಾಡಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ತಾವೂ ಪ್ರಸಾದವನ್ನು ಸವಿದು ತಮ್ಮ ಬಂಧು-ಮಿತ್ರರಿಗೂ ಹಂಚಿರಿ.

ಹಲಸಿನ ಹಣ್ಣಿನ ಇಡ್ಲಿ

ಬೇಕಾಗುವ ಪದಾರ್ಥಗಳು:

ಚೆನ್ನಾಗಿ ಮಾಗಿದ ಹಲಸಿನ ತೊಳೆ -25

ತೆಂಗಿನಕಾಯಿ – 1/2 ಹೋಳು

ಅಕ್ಕಿರವೆ – 300 ಗ್ರಾಂ

ಬೆಲ್ಲ – 200 ಗ್ರಾಂ

ಏಲಕ್ಕಿ ಪುಡಿ – 1/2 ಚಿಕ್ಕ ಚಮಚ

ತುಪ್ಪ- 2 ದೊಡ್ಡ ಚಮಚ

ಮಾಡುವ ವಿಧಾನ : ಅಕ್ಕಿಯನ್ನು ತೊಳೆದು ಬಸಿಯಿರಿ. ನೀರೆಲ್ಲಾ ಆರಿದ ಅನಂತರ ಸಣ್ಣರವೆಮಾಡಿಕೊಂಡು ಜರಡಿ ಹಿಡಿದಿಡಿ. ಹಲಸಿನ ತೊಳೆಯನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ ರುಬ್ಬಿ, ಹಲಸಿನ ಹಣ್ಣು ನುಣ್ಣಗಾಗುತ್ತಾ ಬರುವಾಗ ಬೆಲ್ಲ ಹಾಕಿ ರುಬ್ಬಿಟ್ಟುಕೊಳ್ಳಿ.

ಅನಂತರ ರುಬ್ಬಿಟ್ಟ ಹಣ್ಣಿನ ಹೂರಣ, ತೆಂಗಿನತುರಿ, ಅಕ್ಕಿರವೆ ಹಾಗೂ ಏಲಕ್ಕಿಪುಡಿಯನ್ನು ಬೆರೆಸಿ ಹಿಟ್ಟು ಹೆಚ್ಚು ತೆಳುವು ಅಲ್ಲದಂತೆ ಗಟ್ಟಿಯೂ ಅಲ್ಲದಂತೆ ಹದವಾಗಿ ಕಲೆಸಿ 10 ನಿಮಿಷ ಇಡಿ. ಇಡ್ಲಿ ಮಾಡುವ ತಟ್ಟೆ ಅಥವಾ ಬಟ್ಟಲಿಗೆ ತುಪ್ಪ ಹಚ್ಚಿ ಇಡ್ಲಿ ಹಿಟ್ಟನ್ನು ಹಾಕಿ (ಇಡ್ಲಿ ಪಾತ್ರೆಯಲ್ಲಿ) ಹಬೆಯಲ್ಲಿಸುಮಾರು 20-25 ನಿಮಿಷಗಳ ಕಾಲ ಬೇಯಿಸಿ.ಬೆಂದಿದ್ದಲ್ಲಿ ಇಡ್ಲಿ ತಟ್ಟೆಯಿಂದ ಬಿಟ್ಟುಕೊಳ್ಳುತ್ತದೆ.

ಹಲಸಿನ ಹಣ್ಣಿನ ಪಾಯಸ

ಬೇಕಾಗುವ ಪದಾರ್ಥಗಳು:

ಮಾಗಿದ ಹಲಸಿನ ತೊಳೆ – 20

ತೆಂಗಿನಕಾಯಿ – 1

ಅಕ್ಕಿ – 200 ಗ್ರಾಂ

ಬೆಲ್ಲ – 250 ಗ್ರಾಂ

ಏಲಕ್ಕಿ ಪುಡಿ – 1/2 ಚಿಕ್ಕ ಚಮಚ

ತುಪ್ಪ – 1 ದೊಡ್ಡ ಚಮಚ

ಗೋಡಂಬಿ – 20-25

ಮಾಡುವ ವಿಧಾನ : ಅಕ್ಕಿಯನ್ನು ತೊಳೆದು 1/2 ಗಂಟೆ ನೆನೆಸಿಡಿ. ತೆಂಗಿನಕಾಯಿ ತುರಿದು ರುಬ್ಬಿ. ಅದು ನುಣ್ಣುಗಾಗುವ ಮೊದಲು ನೆನೆದ ಅಕ್ಕಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಹಲಸಿನ ಹಣ್ಣನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಕತ್ತರಿಸಿ 2 ಬಟ್ಟಲು ನೀರಿನಲ್ಲಿ 10-15 ನಿಮಿಷ ಬೇಯಿಸಿ.

ಹಲಸಿನ ಹಣ್ಣು ಬೆಂದ ಅನಂತರ ಬೆಲ್ಲದ ಪುಡಿ ಸೇರಿಸಿ ಕುದಿಸಿ. ಅನಂತರ ರುಬ್ಬಿದ ತೆಂಗಿನ ಮಿಶ್ರಣವನ್ನು ಇದಕ್ಕೆ ಹಾಕಿ ತಳಹತ್ತದಂತೆ ನೋಡಿಕೊಳ್ಳಿ. ಬೇಕಾದಷ್ಟು ತೆಳ್ಳಗೆ ಮಾಡಿಕೊಳ್ಳಿ, ಕೊನೆಯದಾಗಿ ತುಪ್ಪವನ್ನು ಬಿಸಿಮಾಡಿ ಗೋಡಂಬಿ ಚೂರುಗಳನ್ನು ಹುರಿದು ಪಾಯಸಕ್ಕೆಬೆರೆಸಿ.

ಹಲಸಿನ ಬೀಜದ ದಾಡು (ಬಿಕ್ಕಂಡಾ ದಾಡು)

ಬೇಕಾಗುವ ಪದಾರ್ಥಗಳು :

ಹಲಸಿನ ಕಾಯಿ ಬೀಜ – 10-15

ತೆಂಗಿನಕಾಯಿ – 1/2 ಹೋಳು

ಹಸಿಮೆಣಸಿನಕಾಯಿ – 3-4 (ರುಚಿಗೆ ತಕ್ಕಷ್ಟು)

ಹುಣಸೇಹಣ್ಣು – ಚಿಕ್ಕ ಚೂರು

ಇಂಗಿನ ಪುಡಿ – 2-3 ಚಿಟಿಕೆ

ಕೊಬ್ಬರಿ ಎಣ್ಣೆ – 2 ಚಿಕ್ಕ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಹಲಸಿನ ಬೀಜವನ್ನು ತೊಳೆದು ಶುಭ್ರಗೊಳಿಸಿ ಕುಕ್ಕರ್‌ನಲ್ಲಿ 2-3 ಸೀಟಿ ಬರುವವರೆಗೂ ಬೇಯಿಸಿ. ಆರಿದನಂತರ ತೆಂಗಿನಕಾಯಿ ತುರಿದು ಅದರೊಂದಿಗೆಹಲಸಿನಕಾಯಿಬೀಜ, ಹಸಿಮೆಣಸಿನಕಾಯಿ,ಹುಣಸೇಹಣ್ಣು ಮತ್ತು ಇಂಗಿನ ಪುಡಿಯನ್ನು ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿ ರುಬ್ಬಿ.  ಅನಂತರ ಉಪ್ಪು ಹಾಗೂ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಮಾಡಿ.

ಹಲಸಿನ ಕಾಯಿ – ಕಡ್ಲೆಕಾಳು ಗಸಿ

ಬೇಕಾಗುವ ಪದಾರ್ಥಗಳು :

ಹಲಸಿನಕಾಯಿ ಚಿಕ್ಕದಾದರೆ – 1, ದೊಡ್ಡದಾದರೆ – 1/2

ಕಾಬೂಲ್ ಕಡ್ಲೆಕಾಳು ಅಥವಾ ಚಿಕ್ಕ ಕಡ್ಲೆಕಾಳು – 250 ಗ್ರಾಂ

ಬ್ಯಾಡಗಿ ಮೆಣಸಿನಕಾಯಿ – 6-7

ತೆಂಗಿನಕಾಯಿ – 1

ಹುಣಸೇ ಹಣ್ಣು – ಅರ್ಧ ಲಿಂಬೆಗಾತ್ರದಷ್ಟು

ಅಡಿಗೆ ಎಣ್ಣೆ – 2 ಚಿಕ್ಕ ಚಮಚ

ಕರಿಬೇವು – 2 ಎಸಳು

ಸಾಸಿವೆ – 1 1/2 ಚಿಕ್ಕ ಚಮಚ

ಮಾಡುವ ವಿಧಾನ : ಹಲಸಿನ ಕಾಯಿ ಸಿಪ್ಪೆತೆಗೆದು ಮೇಲಿನ ಅಂಟನ್ನು ತೆಂಗಿನ ನಾರು ಬಳಸಿ ತೆಗೆದು ಹದ ಗಾತ್ರದ ಹೋಳುಗಳನ್ನಾಗಿ ಕತ್ತರಿಸಿ ನೀರಿನಲ್ಲಿ ಹಾಕಿ. ತೆಂಗಿನಕಾಯಿ ತುರಿದಿಟ್ಟುಕೊಳ್ಳಿ. ಹಲಸಿನಕಾಯಿ ಹಾಗೂ ಕಾಬೂಲ್ ಕಡ್ಲೆಕಾಳುಗಳನ್ನು ಪ್ರತ್ಯೇಕವಾಗಿ ಕುಕ್ಕರಿನಲ್ಲಿ 2-3 ಸೀಟಿ ಬರುವವರೆಗೂ ಬೇಯಿಸಿಕೊಳ್ಳಿ.

ಅನಂತರ ತೆಂಗಿನಕಾಯಿ ತುರಿ, ಒಣಮೆಣಸಿನಕಾಯಿ, ಹುಣಸೇಹಣ್ಣು ಹಾಕಿ ಮಸಾಲೆ ರುಬ್ಬಿ. ರುಬ್ಬುವಾಗ ಕೊನೆಯಲ್ಲಿ 1/2 ಚಮಚ ಹಸಿ ಸಾಸಿವೆಯನ್ನು ಬೆರೆಸಿ ರುಬ್ಬಿ.

ಬೆಂದ ಹಲಸಿನ ಕಾಯಿಗೆ ಉಪ್ಪು ಹಾಗೂ ಮಸಾಲೆ ಬೆರೆಸಿ 10-15 ನಿಮಿಷಳ ಕಾಲ ಕುದಿಸಿ, ಕೊನೆಯಲ್ಲಿ ಒಗ್ಗರಣೆ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಕರಿಬೇವು ಮತ್ತು ಸಾಸಿವೆಯನ್ನು ಹಾಕಿ ಒಗ್ಗರಣೆ ಮಾಡಿ ಹಲಸಿನ ಕಾಯಿ ಗಸಿಗೆ ಸೇರಿಸಿ.

ಈ ಗಸಿಯನ್ನು ಅನ್ನದೊಂದಿಗೆ, ಚಪಾತಿ ಅಥವಾ ಪೂರಿಯೊಂದಿಗೆ ಬಳಸಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi