ಮಾನವ ವೇಷದಲ್ಲಿ

ದೇವರು’ ಎಂದರೆ ಸರ್ವೋತ್ಕೃಷ್ಟ ಜೀವಿ ಎಂದು ನಿಘಂಟಿನಲ್ಲಿ ಲಕ್ಷಣ ನಿರೂಪಣೆ ಮಾಡಲಾಗಿದೆ. ಪರಮ ಪ್ರಭು, ಭಗವಾನ್‌ ಎಂದರೆ ಸರ್ವ ಐಶ್ವರ್ಯಗಳಲ್ಲೂ ಸಂಪೂರ್ಣ ಮತ್ತು ಸರ್ವಾಕರ್ಷಕ ಎಂದು ಧರ್ಮಗ್ರಂಥಗಳು ವಿವರಿಸುತ್ತವೆ. ಅವನು ಪರಮ ನಿಯಂತ್ರಕ. ಅವನಿಗೆ ಸ್ಪರ್ಧಿಗಳು ಯಾರೂ ಇಲ್ಲ. ಎಲ್ಲದಕ್ಕೂ ಮಿಗಿಲಾಗಿ ಅವನು ಸಮಸ್ತವನ್ನೂ ಅಡೆತಡೆಯಿಲ್ಲದೆ ಭೋಗಿಸುವಂತಹ ಸರ್ವಶ್ರೇಷ್ಠ. ಭಗವಾನ್‌ ಎಂಬ ಶಬ್ದಕ್ಕೆ ಅನಂತ ಐಶ್ವರ್ಯಗಳ ನಿರ್ವಿವಾದ ಒಡೆಯ ಮತ್ತು ದಣಿವರಿಯದ ಭೋಕ್ತೃ ಎಂದು ಅರ್ಥ. ಅಸ್ತಿತ್ವದ ಎಲ್ಲ ದೈವಿಕ ಸ್ಥಿತಿಗಳ ಶಿಖರವೇ ಭಗವಾನ್‌. ಈ ಕಾರಣದಿಂದಾಗಿ ಪ್ರಾಚೀನ ಕಾಲದಿಂದಲೂ ಮಾನವ ಸಮಾಜದಲ್ಲಿ ಭಗವಾನ್‌ ಆಗಬೇಕೆಂಬ ಗಂಭೀರವಾದ ಅನ್ವೇಷಣೆ ನಡೆಯುತ್ತಲೇ ಇದೆ. ಹೀಗೆ ಭಗವಾನ್‌ ಆಗುವುದು ಸಾಧ್ಯವಿಲ್ಲವಾದರೂ, ಅದಕ್ಕಾಗಿ ಪ್ರಯತ್ನ ಮಾಡುವವರು ಅನೇಕರಿದ್ದಾರೆ. ಇರಲಿ, ವ್ಯಕ್ತಿಯೊಬ್ಬನು ಭಗವಾನ್‌ ಆಗಬಲ್ಲನೋ ಇಲ್ಲವೋ ಎನ್ನುವುದು ಇನ್ನೊಂದು ಚರ್ಚೆಯ ವಿಷಯ.

ಇನ್ನೊಂದು ಕುತೂಹಲ ಕೆರಳಿಸುವ ಪ್ರಶ್ನೆ ಏಳುತ್ತದೆ: ಮಾನವನನ್ನು ಅನುಕರಿಸಲು ದೇವರು ಏಕೆ ಇಷ್ಟಪಡುತ್ತಾನೆ? ಭಗವಂತನು ತನ್ನಲ್ಲೇ ಸ್ವಯಂಪೂರ್ಣನಾಗಿದ್ದರೆ, ಅವನು ಸಾಧಿಸಬೇಕಾಗಿರುವುದು ಇನ್ನೇನೂ ಇಲ್ಲದಿದ್ದರೆ, ಅವನು ಈ ಐಹಿಕ ಜಗತ್ತಿನಲ್ಲಿ ಮಾನವರಂತೆ ಏಕೆ ನಟಿಸುತ್ತಾನೆ? ಮನುಷ್ಯರು ದೇವರಂತಾಗಲು ಪ್ರಯತ್ನಪಡುತ್ತಿರುವಾಗ, ಮಾನವರಂತಾಗಲು ಅವನನ್ನು ಪ್ರಚೋದಿಸುವುದೇನು? ಪರಮ ಪ್ರಭು ಕೃಷ್ಣನು ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿ ಸಾಮಾನ್ಯ ಮನುಷ್ಯರಂತೆ ವರ್ತಿಸಿದ್ದು ಏಕೆ? ಇಲ್ಲಿ ಅವನು ದೇವರಂತೆಯೇ ಬಾಳಿ ಉಪಭೋಗಿಸಬಹುದಿತ್ತು. ಆದರೆ, ಅವನು ಎಲ್ಲವನ್ನೂ ಬಿಟ್ಟು ಸಂನ್ಯಾಸವನ್ನು ಸ್ವೀಕರಿಸಿದ್ದು ಏಕೆ, ಕಟ್ಟು ನಿಟ್ಟಾದ ವೈದಿಕ ಸೂತ್ರಗಳನ್ನು ಅನುಸರಿಸಿದ್ದು ಏಕೆ, ಹರೇಕೃಷ್ಣ ಮಹಾಮಂತ್ರವನ್ನು ಸಂಕೀರ್ತನೆ ಮಾಡಿದ್ದು ಏಕೆ, ಪಾದಚಾರಿಯಾಗಿ ದಕ್ಷಿಣ ಭಾರತದಾದ್ಯಂತ ಸಂಚರಿಸಿದ್ದು ಏಕೆ, ಇತ್ಯಾದಿ…

ಪರಮ ಪ್ರಭು ಕೃಷ್ಣನು ಸಕಲ ಐಶ್ವರ್ಯಗಳಿಂದಲೂ ಸಂಪೂರ್ಣನಾಗಿದ್ದಾನೆ. ಇನ್ನೂ ಹೆಚ್ಚು ಗಳಿಸಬೇಕಾದದ್ದು , ಅದರಲ್ಲೂ ವಿಶೇಷವಾಗಿ ಈ ಐಹಿಕ ಜಗತ್ತಿನಿಂದ ಗಳಿಸಬೇಕಾದದ್ದು ಅವನಿಗೆ ಏನೂ ಇಲ್ಲ. ಇಲ್ಲಿ ಅವತರಿಸಬೇಕು ಎನ್ನುವುದಕ್ಕೆ ಪ್ರಭುವನ್ನು ಒತ್ತಾಯಿಸುವ ಸಂಗತಿ ಏನೂ ಇಲ್ಲ. ಅವನು ತನ್ನ ಮಧುರ ಸಂಕಲ್ಪಕ್ಕೆ ಅನುಸಾರವಾಗಿ ಕಾರ್ಯ ನಿರ್ವಹಿಸುತ್ತಾನೆ. ಪತಿತ ಆತ್ಮರನ್ನು ತನ್ನ ಧಾಮಕ್ಕೆ, ತನ್ನ ಶಾಶ್ವತವಾದ ಆನಂದಧಾಮಕ್ಕೆ, ಗೋಲೋಕ ವೃಂದಾವನಕ್ಕೆ ಮರಳಿ ಕರೆದುಕೊಂಡು ಹೋಗಬೇಕೆಂಬ ಅವ್ಯಾಜ ಕರುಣೆಯಿಂದಾಗಿ ಅವನು ಅವತರಿಸುತ್ತಾನೆ.

ಐದು ಸಾವಿರ ವರ್ಷಗಳ ಹಿಂದೆ ಪ್ರಭು ಕೃಷ್ಣನು ಇದೇ ಉದ್ದೇಶದಿಂದ ಅವತರಿಸಿದ. ಅವನು ಗೀತೆಯನ್ನು ಬೋಧಿಸಿದ ಮತ್ತು ಅಂತಿಮ ಆದೇಶದೊಡನೆ ತನ್ನ ಬೋಧನೆಗಳನ್ನು ಮುಕ್ತಾಯಗೊಳಿಸಿದ: “ಎಲ್ಲ ಬಗೆಯ ಧರ್ಮಗಳನ್ನು ಪರಿತ್ಯಜಿಸಿ ಮತ್ತು ನನಗಷ್ಟೇ ಶರಣಾಗತರಾಗಿ.” ದ್ವಾಪರಯುಗದ ಮುಕ್ತಾಯ ವರ್ಷಗಳಲ್ಲಿ ಗೀತೆಯನ್ನು ಬೋಧಿಸಲಾಯಿತು. ಅನಂತರ ಬಂದದ್ದು ಕಲಿಯುಗ. ಅದು ಮಾನವರ ಎಲ್ಲ ಸದ್ಗುಣಗಳನ್ನೂ ವಿನಾಶ ಮಾಡುತ್ತದೆ. ಕಲಿಯುಗದ ಸಮಸ್ತ ಜನರೂ ಸೋಮಾರಿಗಳು, ಮಂದಮತಿಗಳು, ದುರದೃಷ್ಟವಂತರು ಮತ್ತು ಐಹಿಕ ಪರಿಸ್ಥಿತಿಗಳಿಂದಾಗಿ ಕ್ಷೋಭೆಗೊಳಗಾದವರು ಎಂದು ಪರಿಗಣಿಸಲಾಗಿದೆ. ಕಲಿಯುಗದಲ್ಲಿ ಐಹಿಕತೆಯು ಹೆಚ್ಚಾದ ಹಾಗೆ, ಜನರಿಗೆ ಕೃಷ್ಣನ ಈ ಆದೇಶವನ್ನು ಅರ್ಥಮಾಡಿಕೊಳ್ಳುವುದು ಕೂಡ ಹೆಚ್ಚು ದುಸ್ತರವಾಯಿತು. ಇನ್ನು ಅನುಷ್ಠಾನಕ್ಕೆ ತರುವ ಮಾತೇನು? ಅನಧಿಕೃತ ಆಧ್ಯಾತ್ಮಿಕ ಸಂಸ್ಥೆಗಳಿಂದ ತಪ್ಪುದಾರಿಗೆ ಎಳೆಯಲ್ಪಡುವ ಅಪಾಯ ಮುಗ್ಧ ಜನರಿಗೆ ಸದಾ ಇದ್ದೇ ಇದೆ. ಶರಣಾಗಬೇಕೆಂದು ಗಂಭೀರವಾಗಿ ಯೋಚಿಸುವವರು ಶರಣಾಗುವ ವಾಸ್ತವ ವಿಧಾನವನ್ನು ಖಚಿತಪಡಿಸಿಕೊಳ್ಳುವುದರಲ್ಲಿಯೇ ದಿಗ್ಭ್ರಾಂತರಾಗಿದ್ದಾರೆ. ಇವರಲ್ಲದೆ ಆಸುರೀ ಪ್ರವೃತ್ತಿಯವರೂ, ಈರ್ಷ್ಯಾಪರರೂ ಇದ್ದಾರೆ. ಅವರು ಪ್ರಭು ಕೃಷ್ಣನ ಆದೇಶವನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಂಡು, “ಓಹ್‌ ಇದು ಅತಿಯಾದ ಜುಲುಮೆಯಾಯಿತು. ನಾವು ಯಾಕೆ ಕೃಷ್ಣನಿಗೆ ಶರಣಾಗಬೇಕು?” ಎಂದು ಕೇಳುತ್ತಾರೆ. ಈ ಎಲ್ಲ ವ್ಯತಿಕ್ರಮಗಳೊಡನೆ ಕಲಿಯುಗದ ಜನರು, ಜೀವನದ ಅಂತಿಮ ಗುರಿಯಾದ ಕೃಷ್ಣ ಶರಣಾಗತಿಯನ್ನು ಹೇಗೆ ತಾನೆ ಸಾಧಿಸಲು ಸಮರ್ಥರಾಗುತ್ತಾರೆ?

ಕರುಣಾಸಿಂಧುವಾದ ಪ್ರಭು ಕೃಷ್ಣನು ಈ ಅಂಶಗಳನ್ನು ಪರಿಗಣಿಸಿ ಒಂದು ಕ್ರಾಂತಿಯನ್ನೇ ತರಲು ನಿರ್ಧರಿಸಿದ. ಕಲಿಯುಗದ ಜನರು ಬಹಳಷ್ಟು ಅಧೋಗತಿಗೆ ಇಳಿದವರೂ ಅಧಾರ್ಮಿಕರೂ ಆಗಿದ್ದರೂ, ಅವರಿನ್ನೂ ಅವನ ಪ್ರಿಯ ಮಕ್ಕಳೇ ಆಗಿದ್ದರು. ಪರಮ ಕರುಣಾಮಯಿ ತಂದೆಯಾದ ಅವನು ಅವರನ್ನು ಸಂತೋಷವಾಗಿಡಲು ಸದಾ ಕಾತರನಾಗಿದ್ದ. ಅವರು ಅವನಿಗೆ ಶರಣಾಗತರಾದಾಗ ಮಾತ್ರ ಇದು ಸಾಧ್ಯವಾಗುತ್ತಿತ್ತು. ಆದ್ದರಿಂದ ಪ್ರಭು ದೈವಿಕವಾದ ವಾತ್ಸಲ್ಯಪೂರ್ಣ ಸಂಚೊಂದನ್ನು ಹೂಡಿದ. ಅದು ಮಾನವ ರೂಪದಲ್ಲಿ ಅವತರಿಸುವುದು. ಶರಣಾಗತರಾಗಲು ಜನರಿಗೆ ಬೋಧಿಸುವುದಷ್ಟೇ ಅಲ್ಲ ಅದಕ್ಕಿಂತ ಮಿಗಿಲಾಗಿ ದೇವೋತ್ತಮನನ್ನು ಕುರಿತು ಪ್ರೀತಿಯನ್ನು ಬೆಳೆಸಿಕೊಳ್ಳುವುದನ್ನು ಬೋಧಿಸುವುದು. ಪ್ರಭು ಕೃಷ್ಣನನ್ನು ಪ್ರೀತಿಸುವುದು ಅಪರೂಪವಾದ ಸಾಧನೆಗಳಲ್ಲೇ ಅತ್ಯಂತ ಅಪರೂಪವಾದದ್ದು ಮತ್ತು ಅದು ಜೀವನದ ಅತ್ಯುನ್ನತ ಪರಿಪೂರ್ಣತೆ. ಅದನ್ನು ಅವನು ಮುಕ್ತವಾಗಿ ಹಂಚಲು ಆರಿಸಿಕೊಂಡ.

ಹೀಗೆ ಅವನು ಪ್ರೀತಿಯ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ನಿದರ್ಶಿಸಲು ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದ. ಈಗ ಮತ್ತೆ ಅದೇ ಪ್ರಶ್ನೆ ಉದ್ಭವಿಸುತ್ತದೆ; ಅವನು ಏಕೆ ಅದನ್ನು ಮಾಡಬೇಕಾಗಿತ್ತು? ಇದಕ್ಕೆ ಸರಳವಾದ ಉತ್ತರವೆಂದರೆ, “ಅವನ ಪ್ರೀತಿಯ ಮಕ್ಕಳಾದ ನಮ್ಮ ಬಗೆಗೆ ಅವನಿಗಿರುವ ಅನಂತವಾದ ವಾತ್ಸಲ್ಯದ ಕಾರಣದಿಂದ.” ಇನ್ನೂ ಮುಂದಕ್ಕೆ ನಾವು ನೋಡಬೇಕಾದ ಅಗತ್ಯವಿಲ್ಲ.

“ನನಗೆ ಶರಣಾಗಿ” ಎಂಬ ಸಂದೇಶವನ್ನು ಪ್ರಭು ಕೃಷ್ಣ ನೀಡಿದ್ದ. ಈ ಶರಣಾಗತಿಯ ಪ್ರಕ್ರಿಯೆಯನ್ನು ವೈದಿಕ ಧರ್ಮಗ್ರಂಥಗಳಲ್ಲಿ ವಿಧಿಸಲಾಗಿದೆ. ಆದರೆ ಈ ಯುಗದಲ್ಲಿ ವೈದಿಕ ಜ್ಞಾನ ಮತ್ತು ಸಂಸ್ಕೃತಿಗಳು ಬಹುತೇಕ ಕಣ್ಮರೆಯಾಗಿವೆ. ಹಾಗಾದರೆ, ವೈದಿಕ ಬೋಧನೆಗಳ ವಿಷಯದಲ್ಲಿ ಸಂಪೂರ್ಣವಾಗಿ ಅಜ್ಞಾನಿಗಳಾಗಿರುವ ಮತ್ತು ಇಂದ್ರಿಯ ತುಷ್ಟಿಯಲ್ಲಿ ಮಗ್ನರಾಗಿರುವ ಸಾಮಾನ್ಯ ಜನಸಮುದಾಯವು ಶರಣಾಗತಿಯ ಕಲೆಯನ್ನು ಹೇಗೆ ತಾನೆ ಕಲಿಯಬಲ್ಲದು? ಆದ್ದರಿಂದ ಪ್ರಭುವು ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದ. ಜನ ಸಾಮಾನ್ಯರು ಅಳವಡಿಸಿಕೊಳ್ಳಬಹುದಾದಂತಹ ಸರಳವಾದ ಮತ್ತು ಪ್ರಾಯೋಗಿಕವಾದ ಶರಣಾಗತಿಯ ಮಾರ್ಗವನ್ನು ಬೋಧಿಸಿದ. ವೇದಗಳನ್ನು ಅಧ್ಯಯನ ಮಾಡಬೇಕಾದ ಕಠಿಣ ಕಾರ್ಯವನ್ನು ಅನುಕೂಲವಾದ ರೀತಿಯಲ್ಲಿ ಕೈಬಿಟ್ಟು, ಅದಕ್ಕಿಂತ ಹೆಚ್ಚಿನ ಫಲಿತಾಂಶವನ್ನು ನೀಡುವಂತಹ ಪ್ರಕ್ರಿಯೆ ಅದು. ಚೈತನ್ಯ ಮಹಾಪ್ರಭುಗಳು ಹರೇಕೃಷ್ಣ ಮಹಾಮಂತ್ರವನ್ನು ಜಪಿಸುವ ಉದಾತ್ತ ವಿಧಾನವನ್ನು ಪರಿಚಯಿಸಿದರು. ಅದನ್ನು ತಾವೇ ಮಾಡುವ ಮೂಲಕ ಜನರು ನೋಡಿ ಅನುಸರಿಸಲು ಅನುವು ಮಾಡಿಕೊಟ್ಟರು. ಪ್ರಭು ಕೃಷ್ಣನಾಗಿ ಅದನ್ನೇ ಆವರು ಭಗವದ್ಗೀತೆಯಲ್ಲಿ ಬೋಧಿಸಿದ್ದರು, `ಸತತಮ್‌ ಕೀರ್ತಯಂತೋ ಮಾಮ್‌’; ಆದರೆ ಅದು ಯಾರ ಲಕ್ಷ್ಯಕ್ಕೆ ಬಾರದೇ ಹೋಗಿತ್ತು. ಆದ್ದರಿಂದ ಅವರು ಅದನ್ನು ಮಾಡಿ ತೋರಿಸಬೇಕಾಗಿತ್ತು.

ಪ್ರಭು ಕೃಷ್ಣನೇನೋ ಶರಣಾಗತಿಯ ಪ್ರಕ್ರಿಯೆಯನ್ನು ಸೊಗಸಾಗಿ ವಿವರಿಸಿದ್ದ, “ಸದಾ ನನ್ನನ್ನು ಸ್ಮರಿಸು. ನನ್ನ ಭಕ್ತನಾಗು. ನನ್ನನ್ನು ಆರಾಧಿಸು. ನಿನ್ನ ಗೌರವದ ಕಾಣಿಕೆಗಳನ್ನು ನನಗೆ ಸಮರ್ಪಿಸು.” ಆದರೆ ಜನಸಮುದಾಯಕ್ಕೆ ಅದನ್ನು ಕೈಗೂಡಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಅನೇಕರು ಅದನ್ನು ಸಿದ್ಧಾಂತವಾಗಿ ತೆಗೆದುಕೊಂಡರು. ಇತರರು ಅದನ್ನು ತಪ್ಪಾಗಿ ವ್ಯಾಖ್ಯಾನ ಮಾಡಿದರು. ಕೃಷ್ಣ ಹೇಳುತ್ತಾನೆ, ಮನ್‌ ಮನಾ ಭವ ಮದ್‌ ಭಕ್ತೋ ಮದ್‌ ಯಾಜಿ ಮಾಮ್‌ ನಮಸ್ಕುರು. ಆದರೆ ಅವರು ಅವನ ಬೋಧನೆಗೂ ಆಚಿನದನ್ನು ಕುರಿತು ಮಾತನಾಡುತ್ತಾ, “ಇಲ್ಲ, ಶರಣಾಗುವುದು ಕೃಷ್ಣನಿಗಲ್ಲ, ಅದು ಬೇರೆ ಇನ್ನೇನೋ ಆಗಿದೆ” ಎಂದು ಹೇಳುತ್ತಾರೆ. ಅಥವಾ, “ಒಬ್ಬ ವ್ಯಕ್ತಿಯಾಗಿ ನಾವು ಕೃಷ್ಣನಿಗೆ ಶರಣಾಗಬೇಕಾಗಿಲ್ಲ. ಬದಲಿಗೆ ಕೃಷ್ಣಾಂತರ್ಗತವಾದ ಶಕ್ತಿಗೆ ಶರಣಾಗಬೇಕು.” ಎಂದು ಹೇಳುತ್ತಾರೆ. ಕೃಷ್ಣನ ಅಂತರಂಗಕ್ಕೂ ಬಹಿರಂಗಕ್ಕೂ ಏನೂ ವ್ಯತ್ಯಾಸವಿಲ್ಲ ಎಂದು ಅವರು ತಿಳಿದಿಲ್ಲ. ಆದ್ದರಿಂದ ಪ್ರಭುಕೃಷ್ಣನು ಸ್ವಯಂ ಉದಾಹರಣೆಯಿಂದ ಶರಣಾಗತಿಯ ಪ್ರಕ್ರಿಯೆಯನ್ನು ಬೋಧಿಸಲು ಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದನು. ಸಂಕೀರ್ತನೆ ಮತ್ತು ನರ್ತನದ ಭಕ್ತಿ ಪ್ರಕ್ರಿಯೆಯನ್ನು ಸ್ವತಃ ಆಚರಿಸಿ ಜನಗಳಿಗೆ ತೋರಿಸುವ ಮೂಲಕ ಅವರು ಅದನ್ನು ಅನುಸರಿಸಲು ಅವಕಾಶ ಮಾಡಿಕೊಟ್ಟರು. ಈ ಪ್ರಕ್ರಿಯೆ ಸರಳವಾದದ್ದು ಮತ್ತು ನಿದರ್ಶನ ರೂಪವಾಗಿ ತೋರಿಸಿದಾಗ ಅದು ಇನ್ನೂ ಹೆಚ್ಚು ಸರಳವಾಯಿತು. ಶ್ರೀಲ ಪ್ರಭುಪಾದರು ವಿಶದೀಕರಿಸುತ್ತಾರೆ, “ಕೃಷ್ಣ ಎಂದರೆ ಏನು ಎಂದು ಅವರು ಅರ್ಥಮಾಡಿಕೊಳ್ಳಲಾರರು. ಏಕೆಂದರೆ ಜನರು ಅವರನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದರು. ಕೃಷ್ಣನಿಗೆ ಪರಿಪೂರ್ಣವಾಗಿ ಶರಣಾಗತವಾಗುವುದು ಹೇಗೆ ಎಂದು ಬೋಧಿಸಲು ಕೃಷ್ಣನು ಒಬ್ಬ ಭಕ್ತನ ರೂಪದಲ್ಲಿ ಅವತರಿಸಿದ. ಶ್ರೀ ಚೈತನ್ಯ ಮಹಾಪ್ರಭುಗಳು ಸ್ವತಃ ಕೃಷ್ಣ. ಆದರೆ ಕೃಷ್ಣನನ್ನು ಸಮೀಪಿಸುವುದು ಹೇಗೆ, ಕೃಷ್ಣನಿಗೆ ಸೇವೆ ಸಲ್ಲಿಸುವುದು ಹೇಗೆ ಎಂದು ಅವರು ಪರಿಪೂರ್ಣವಾಗಿಯೇ ಬೋಧಿಸುತ್ತಿದ್ದಾರೆ.”

ಸಾಮಾನ್ಯ ಜನರು ಕೃಷ್ಣ ಯಾರು ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ಶ್ರೀಲ ಪ್ರಭುಪಾದರು ವಿವರಿಸುತ್ತಾರೆ, “ದೇವರು ಎಂದರೆ ಏನು ಎಂದು ಅವರು ಸಂಶೋಧನೆ ಮಾಡುತ್ತಿದ್ದಾರೆ. ದೇವರು ಪ್ರಚಾರ ಮಾಡುತ್ತಿದ್ದಾನೆ, `ನಾನು ಇಲ್ಲಿದ್ದೇನೆ.’ ಕೃಷ್ಣ ಬರುತ್ತಾನೆ. ಈ ಅಜ್ಞ ಜನರು ದೇವರನ್ನು ಮರೆತಾಗ ಅವನು ಬರುತ್ತಾನೆ. ಆದರೂ ಕೂಡ ಅವರು ಸಂಶೋಧನೆಯನ್ನು ಮಾಡುತ್ತಿದ್ದಾರೆ. ಅವನು ದೇವರಂತೆ ವರ್ತಿಸುತ್ತಿದ್ದಾನೆ. ಅವನು ದೇವರಂತೆ ಬೋಧಿಸುತ್ತಿದ್ದಾನೆ. ಆಚಾರ್ಯರು ಅವನನ್ನು ದೇವರೆಂದು ಒಪ್ಪಿಕೊಂಡಿದ್ದಾರೆ. ಆದರೂ ಕೂಡ ಅವರು ದೇವರಿಗಾಗಿ ಹುಡುಕುತ್ತಿದ್ದಾರೆ. ದೇವರು ಹೇಳುತ್ತಾನೆ, ಅಹಂ ಸರ್ವಸ್ಯ ಪ್ರಭವಃ ಮತ್ತಃ ಸರ್ವಂ ಪ್ರವರ್ತತೇ (ಭಗವದ್ಗೀತೆ 10.8), ಅಹಂ ಆದಿರ್‌ರ್ಹಿ ದೇವಾನಾಂ ಮಹರ್ಷಿಣಾಂ ಚ ಸರ್ವಶಃ (ಭಗವದ್ಗೀತೆ 10.2). ಇಷ್ಟಾದರೂ ನೀವು ದೇವರನ್ನು ಹುಡುಕುತ್ತಿದ್ದೀರಾ? ಅದು ಮೂರ್ಖತನ. ದೇವರೇ ನಿಮ್ಮ ಕಣ್ಣ ಮುಂದೆ ಬರುತ್ತಾನೆ. ನೀವು ಒಬ್ಬರು ರಾಕ್ಷಸನಾಗಿದ್ದರೆ, ಆಗ ದೇವರು ಯಾರೆಂದು ನೀವು ಅರ್ಥಮಾಡಿಕೊಳ್ಳಲಾರಿರಿ.”

ಜನರು ಹೀಗೆ ಯೋಚಿಸುತ್ತಾರೆ, “ಕೃಷ್ಣನು ಕೇವಲ ಒಬ್ಬ ವ್ಯಕ್ತಿ. ಹೀಗೆ ಒಬ್ಬ ವ್ಯಕ್ತಿಯಾದವನು ದೇವರಾಗಲು ಹೇಗೆ ಸಾಧ್ಯ? ದೇವರು ಎಂದರೆ ಬೇರೆ ಏನೋ ಆಗಿರಬೇಕು.” ಅವರು ದೇವರನ್ನು ಅರ್ಥಮಾಡಿಕೊಳ್ಳದೇ ಹೋದರೆ ಹೇಗೆ ತಾನೆ ಅವನೊಡನೆ ಸಂಬಂಧ ಕಲ್ಪಿಸಿಕೊಂಡು ಅವನಿಗೆ ಶರಣಾದಾರು? ಆದ್ದರಿಂದ ಪ್ರಭುವು ಒಂದು ಲೋಕೋತ್ತರವಾದ ತಂತ್ರವನ್ನು ಮಾಡಿದ ಮತ್ತು ಮಾನವ ರೂಪದಲ್ಲಿ ಕಾಣಿಸಿಕೊಂಡ. ಏಕೆಂದರೆ ಆ ರೂಪದಲ್ಲಿ ಮಾನವರು ಅವನೊಡನೆ ಸಂಬಂಧ ಕಲ್ಪಿಸಿಕೊಳ್ಳಬಲ್ಲರು. ಭಕ್ತಿಯ ಉದ್ದೇಶ ಮತ್ತು ಪ್ರಕ್ರಿಯೆಯನ್ನು ಕುರಿತು ಬೋಧಿಸುವುದಕ್ಕಾಗಿ ಅವನು ಒಬ್ಬ ಭಕ್ತನಂತೆ ನಟಿಸಿದ್ದಾನೆ. ಅಜ್ಞ ಜನರು ಪ್ರಶ್ನಿಸುತ್ತಾರೆ, “ಪ್ರತಿಯೊಬ್ಬರೂ ತನಗೆ ಶರಣಾಗುವಂತೆ ಕೇಳುವಲ್ಲಿ ಪರಮ ಪ್ರಭುವಿನ ಅಹಂಕಾರ ಮತ್ತು ನಿರಂಕುಶ ಪ್ರಭುತ್ವ ಗೋಚರವಾಗುವುದಿಲ್ಲವೆ? ಅದನ್ನು ಸಾಧಿಸುವುದಕ್ಕಾಗಿ ಅವನು ಬಂದು ಜನರಿಗೆ ಹೇಗೆ ಶರಣಾಗುವುದು ಎಂದು ಬೋಧಿಸುತ್ತಿದ್ದಾನೆ.” ಪ್ರತಿಯೊಬ್ಬರೂ ತನ್ನನ್ನು ಪ್ರೀತಿಸಬೇಕೆಂದು ಬಯಸುವುದು ಪ್ರಭು ಕೃಷ್ಣನ ಅಹಂಕಾರವಾಗಲಿ, ನಿರಂಕುಶ ಪ್ರಭುತ್ವವಾಗಲಿ ಅಲ್ಲ. ಆದರೆ ಶುದ್ಧಾಂಗವಾಗಿ ನಮ್ಮ ಬಗೆಗೆ ಅವನಿಗಿರುವ ಪ್ರೀತಿ ಮತ್ತು ಅನುಕಂಪಗಳೇ ಅವನನ್ನು ಮತ್ತೆ ಮತ್ತೆ ಇಲ್ಲಿಗೆ ಕರೆದುಕೊಂಡುಬರುತ್ತವೆ. ಅವನು ಪರಮ ಪ್ರಭು. ನಾವು ಅವನ ಶಾಶ್ವತದಾಸರು. ಮೂಲಭೂತವಾಗಿ ಅವನಿಗೆ ಶಾಶ್ವತವಾದ ಸೇವೆಯನ್ನು ಸಲ್ಲಿಸಲೆಂದೇ ನಮ್ಮನ್ನು ವಿನ್ಯಾಸಗೊಳಿಸಲಾಗಿದೆ. ಈ ಸ್ಥಿತಿಯೊಂದೇ ಸಾಕು ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಲು. ನಮಗೆ ಸಂತೋಷದ ಮಾರ್ಗವನ್ನು ತೋರಿಸಲು ಅವನು ತನ್ನ ದೇವರ ಸ್ಥಾನವನ್ನು ತೊರೆದು ಒಬ್ಬ ಭಕ್ತನ ಪಾತ್ರವನ್ನು ವಹಿಸುತ್ತಾನೆ. ಅವನು ಸದಾ ಸ್ವ ಸಂತುಷ್ಟನಾಗಿರುವುದರಿಂದ, ಅವನು ಸಾಧಿಸಬೇಕಾಗಿರುವುದು ಏನೂ ಇಲ್ಲ. ಅಂತಹ ಕ್ರಿಯೆಯಿಂದ ಅವನ ಪರಮ ಪ್ರಭುವಿನ ಸ್ಥಾನ ಕೂಡ ಕಣ್ಮರೆಯಾಗುವುದಿಲ್ಲ. ಇದೇ ಪ್ರಭು ಕೃಷ್ಣನ ಪ್ರೀತಿ ಮತ್ತು ಅನುಕಂಪ, ನಮ್ಮ ಬಗೆಗೆ ಇರುವ ಅಹಂಕಾರ ಮತ್ತು ನಿರಂಕುಶ ಪ್ರಭುತ್ವವಲ್ಲ. ಅದರಿಂದಲೇ ಶ್ರೀಲ ರೂಪ ಗೋಸ್ವಾಮಿ ಅವರು ಚೈತನ್ಯ ಮಹಾಪ್ರಭುಗಳನ್ನು ಅತ್ಯಂತ ಉದಾರವಾದ ಅವತಾರ ಎಂದು ಕೊಂಡಾಡಿರುವುದು:

ನಮೋ ಮಹಾ ವದನ್ಯಾಯ ಕೃಷ್ಣಪ್ರೇಮ ಪ್ರದಾಯತೇ ।

ಕೃಷ್ಣಾಯ ಕೃಷ್ಣ ಚೈತನ್ಯ ನಾಮ್ನೇ ಗೌರತ್ವಿಷೇ ನಮಃ ॥

“ಪರಮ ಪ್ರಭು ಶ್ರೀಕೃಷ್ಣ ಚೈತನ್ಯರಿಗೆ ನನ್ನ ಗೌರವ ಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಬೇರೆ ಯಾವುದೇ ಅವತಾರಕ್ಕಿಂತ, ಕೃಷ್ಣಾವತಾರಕ್ಕಿಂತಲೂ, ಅವರು ಹೆಚ್ಚು ಉದಾರಿಗಳು. ಏಕೆಂದರೆ ಹಿಂದೆ ಯಾರೂ ನೀಡಿಲ್ಲದಂತಹದ್ದನ್ನು ಅವರು ಮುಕ್ತವಾಗಿ ಅನುಗ್ರಹಿಸುತ್ತಿದ್ದಾರೆ – ಅದೇ ಕೃಷ್ಣನನ್ನು ಕುರಿತ ಪರಿಶುದ್ಧವಾದ ಪ್ರೇಮ.”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi