– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್ ಮೂನ
“ಶ್ರೀ ಕೃಷ್ಣ ಬಲರಾಮರು ವೃಂದಾವನದ ಆಕರ್ಷಣೆಯ ಕೇಂದ್ರವಾಗಿದ್ದರು. ಹುಣ್ಣಿಮೆ ಚಂದ್ರರಂತೆ ಬೆಳೆಯುತ್ತಿದ್ದ ಇವರ ಸಹವಾಸಕ್ಕೆ ಇಡಿಯ ಗೋಕುಲವೇ ಹಾತೊರೆಯುತ್ತಿತ್ತು. ಕೃಷ್ಣ ಬಲರಾಮರು ಈಗ ಕರುಗಳನ್ನು ಮೇಯಿಸುವ ಕೆಲಸವನ್ನು ವಹಿಸಿಕೊಂಡಿದ್ದರು. ಈಗಂತೂ ಗೋಪ ಬಾಲರೊಡನೆ ಸಂಪೂರ್ಣ ದಿನ ಕಳೆಯುವ ಯೋಗ! (ಮುಂದೆ ಓದಿ)”

ಹೀಗೆ ಕೃಷ್ಣನೂ ಅವನ ಗೆಳೆಯರೂ ಬಾಲಲೀಲೆಗಳೊಂದಿಗೆ ಸಂತೋಷದಿಂದ ನಲಿದಾಡುತ್ತಿದ್ದುದನ್ನು ಅಘಾಸುರನೆಂಬ ರಾಕ್ಷಸನು ಕಂಡನು. ಅವನಿಗೆ ಅವರಲ್ಲಿ ಕೃಷ್ಣನು ಯಾರೆಂದು ಕೂಡಲೇ ಗುರುತಿಸಲಾಗಲಿಲ್ಲ. ಆದುದರಿಂದ ಅವರನ್ನೆಲ್ಲಾ ಸಂಹರಿಸಿಬಿಟ್ಟರಾಯಿತೆಂದು ಅವನು ಈ ಮಕ್ಕಳ ಮುಂದೆ ಬಂದು ನಿಂತನು.
ಆಘಾಸುರನು ಪೂತನಿ ಮತ್ತು ಬಕಾಸುರನ ತಮ್ಮ. ಅವನು ”ಈ ಕೃಷ್ಣನು ನನ್ನ ಅಣ್ಣ ಹಾಗೂ ಅಕ್ಕನನ್ನು ಕೊಂದಿದ್ದಾನೆ. ಈಗ ನಾನೂ ಅವನನ್ನು ಅವನ ಎಲ್ಲ ಸ್ನೇಹಿತರು ಹಾಗೂ ಕರುಗಳೊಡನೆ ಕೊಂದು ಬರುತ್ತೇನೆ” ಎಂದು ಬಂದಿದ್ದನು. ಕಂಸನೂ ಅವನನ್ನು ಪ್ರಚೋದಿಸಿ ಕಳುಹಿಸಿದ್ದನು.
ಈ ಆಘಾಸುರನು ಎಷ್ಟು ಭಯಾನಕ ಅಪಾಯಕಾರಿಯೂ ಆಗಿದ್ದನೆಂದರೆ ಸ್ವರ್ಗವಾಸಿಗಳೆಲ್ಲ ಅವನನ್ನು ಕೊಲ್ಲುವುದು ಯಾವಾಗ ಎಂದು ಚಿಂತಿಸುತ್ತಿದ್ದರು. ಆದರೆ ಕೃಷ್ಣನೊಂದಿಗೆ ಆಟವಾಡುತ್ತಿದ್ದ ಹುಡುಗರಿಗೆ ಈ ಯಾವ ಭಯವೂ ಇಲ್ಲದೆ ಸಾಗುತ್ತಿದ್ದರೆ, ಆಘಾಸುರನು ಈ ಸಮಯವನ್ನು ಬಳಸಿಕೊಂಡು ಎಲ್ಲ ಬಾಲಕರನ್ನು, ಕೃಷ್ಣನನ್ನೂ ಕೊಂದು ಬಿಟ್ಟರೆ ವೃಂದಾವನದಲ್ಲಿರುವ ತಂದೆ-ತಾಯಿಯರೂ ದುಃಖವನ್ನು ತಾಳಲಾರದೆ ಸಾಯುವರೆಂದು ಯೋಚಿಸಿದನು.
ಈ ರೀತಿಯಾಗಿ ಯೋಚಿಸಿದ ಅವನು ಮಹಿಮಾ ಎನ್ನುವ ತನ್ನ ಯೋಗಶಕ್ತಿಯಿಂದ ಬೃಹದಾಕಾರವಾಗಿ ಬೆಳೆದನು. ರಾಕ್ಷಸರು ಸಾಮಾನ್ಯವಾಗಿ ವಿವಿಧ ಯೋಗ ಶಕ್ತಿಗಳನ್ನು ಗಳಿಸಿಕೊಂಡಿರುತ್ತಾರೆ. ‘ಮಹಿಮಾ’ ಸಿದ್ಧಿಯನ್ನು ಪಡೆದವನು ತನ್ನ ದೇಹವನ್ನು ಬಯಸಿದಂತೆ ಹಿಗ್ಗಿಸಿಕೊಳ್ಳಬಹುದು. ಹೀಗಾಗಿ ಆಘಾಸುರನು ತನ್ನ ದೇಹವನ್ನು ಎಂಟು ಮೈಲಿಗಳಷ್ಟು ಹಿಗ್ಗಿಸಿಕೊಂಡು ಒಂದು ಬೃಹದಾಕಾರದ ಸರ್ಪದ ರೂಪವನ್ನು ತಳೆದ.
ತನ್ನ ಬಾಯಿಯನ್ನು ಪರ್ವತದ ಗುಹೆಯಂತೆ ತೆರೆದು ಎಲ್ಲ ಹುಡುಗರೊಂದಿಗೆ ಕೃಷ್ಣ ಬಲರಾಮರನ್ನೂ ನುಂಗಬೇಕೆಂದು ಅವರು ಬರುವ ದಾರಿಯಲ್ಲಿ ಕುಳಿತ.
ಆಘಾಸುರನ ಬಾಯಿ ಭೂಮಿಯಿಂದ ಆಕಾಶದವರೆವಿಗೂ ವಿಸ್ತಾರವಾಗಿತ್ತು. ಕೆಳತುಟಿಯು ಭೂಮಿಯಲ್ಲಿದ್ದರೆ ಮೇಲಿನ ತುಟಿಯು ಆಕಾಶದಲ್ಲಿತ್ತು. ದವಡೆಗಳು ಕೊನೆಯೇ ಇಲ್ಲದ ಪರ್ವತದ ಸಾಲಿನಂತಿತ್ತು. ಹಲ್ಲುಗಳು ಪರ್ವತದ ಶಿಖರದಂತಿದ್ದವು. ನಾಲಗೆ ರಾಜಮಾರ್ಗದಂತಿತ್ತು. ಅವನು ಉಸಿರಾಡುತ್ತಿದ್ದುದು ಚಂಡಮಾರುತ ಬೀಸಿದಂತೆ ಅನಿಸುತ್ತಿತ್ತು.
ಅವನ ಕಣ್ಣುಗಳಲ್ಲಿ ಉರಿಯು ಪ್ರಜ್ವಲಿಸುತ್ತಿತ್ತು. ಈ ಬೃಹದಾಕಾರವನ್ನು ಕಂಡ ಹುಡುಗರು ಅದೊಂದು ಪ್ರತಿಮೆಯೆಂದು ಭಾವಿಸಿದರು. ಆದರೆ ಹತ್ತಿರ ಬಂದು ನೋಡಿದಾಗ ಹಾದಿಗೆ ಅಡ್ಡಲಾಗಿ ಬಾಯಿ ತೆರೆದು ಮಲಗಿರುವ ದೊಡ್ಡ ಸರ್ಪ ಎಂಬುದು ಅವರಿಗೆ ತಿಳಿಯಿತು. “ಈ ಆಕೃತಿಯು ಯಾವುದೋ ದೊಡ್ಡ ಪ್ರಾಣಿಯಂತೆ ಕಾಣುತ್ತದೆ.
ನಮ್ಮೆಲ್ಲರನ್ನು ನುಂಗಿಬಿಡಲೆಂದೇ ಇಲ್ಲಿ ಕುಳಿತಿರುವಂತಿದೆ. ನೋಡಿ ನಮ್ಮೆಲ್ಲರನ್ನೂ ತಿಂದು ಬಿಡಲು ಬಾಯಿಯನ್ನು ಅಗಲವಾಗಿ ತೆರೆದಿರುವ ಒಂದು ದೊಡ್ಡ ಸರ್ಪವಲ್ಲವೇ ಇದು” ಎಂದು ಅವರಲ್ಲೇ ಮಾತನಾಡಿಕೊಂಡರು.
ಒಬ್ಬನು “ಹೌದು ಇದು ನಿಜ. ನೋಡಿ ಈ ಬಿಸಿಗಾಳಿಯು ಚಂಡಮಾರುತದಂತಿದೆ. ಅವನ ಉಸಿರಾಟ, ಅವನ ಬಾಯಿಂದ ಬರುವ ಕೆಟ್ಟ ಮೀನಿನ ವಾಸನೆ ಅವನ ಕರುಳಿನ ವಾಸನೆ” ಎಂದನು.
ಆನಂತರ ಅವರು ತಮ್ಮ ತಮ್ಮಲ್ಲೇ ಸಮಾಲೋಚನೆ ನಡೆಸಿದರು. ನಾವೆಲ್ಲರೂ ಈ ಮಹಾಸರ್ಪದ ಬಾಯನ್ನು ಒಟ್ಟಿಗೆ ಹೊಕ್ಕರೆ ಅದು ನಮ್ಮೆಲ್ಲರನ್ನೂ ಒಟ್ಟಿಗೆ ನುಂಗಲು ಹೇಗೆ ಸಾಧ್ಯ? ಒಂದು ವೇಳೆ ನಮ್ಮೆಲ್ಲರನ್ನು ನುಂಗಿದರೂ ಅದು ಕೃಷ್ಣನನ್ನು ನುಂಗಲಾರದು.
ಬಕಾಸುರನನ್ನು ಕೊಂದಂತೆ ಕೃಷ್ಣನು ಇದನ್ನು ಕೊಂದು ಬಿಡುವನು.” ಹೀಗೆ ಯೋಚಿಸಿದ ಅವರು ತಾವರೆಯಂತೆ ಅರಳಿದ ಕೃಷ್ಣನ ಚೆಲುವಾದ ಮುಖವನ್ನು ನೋಡಿ ನಗುತ್ತಾ ಚಪ್ಪಾಳೆ ತಟ್ಟಿದರು. ಅನಂತರ ಎಲ್ಲರೂ ಮುಂದೆ ಹೋಗಿ ದೈತ್ಯಾಕಾರದ ಸರ್ಪದ ಬಾಯನ್ನು ಹೊಕ್ಕರು.
ಈ ಮಧ್ಯೆ, ಪ್ರತಿಯೊಬ್ಬರ ಹೃದಯದಲ್ಲಿರುವ ಪರಮಾತ್ಮನಾದ ಶ್ರೀಕೃಷ್ಣನು ಬೃಹತ್ ಪ್ರತಿಮೆಯಂತಿರುವ ಆ ಆಕೃತಿಯು ಒಬ್ಬ ರಾಕ್ಷಸ ಎನ್ನುವುದನ್ನು ಅರ್ಥಮಾಡಿಕೊಂಡ. ತನ್ನ ಆತ್ಮೀಯ ಗೆಳೆಯರು ಸಾಯುವುದನ್ನು ತಡೆಗಟ್ಟುವುದು ಹೇಗೆ ಎಂದು ಅವನು ಯೋಚಿಸುತ್ತಿರುವಾಗಲೇ ಗೆಳೆಯರು ತಮ್ಮ ಕರುಗಳೊಂದಿಗೆ ಸರ್ಪದ ಬಾಯನ್ನು ಪ್ರವೇಶಿಸಿ ಬಿಟ್ಟಿದ್ದರು. ಆದರೆ ಕೃಷ್ಣನು ಪ್ರವೇಶಿಸಲಿಲ್ಲ. ಇದನ್ನು ನೋಡಿದ ರಾಕ್ಷಸನು “ನನ್ನ ಸೋದರ ಸೋದರಿಯರನ್ನು ಕೊಂದ ಕೃಷ್ಣನೊಬ್ಬನನ್ನು ಬಿಟ್ಟು ಎಲ್ಲರೂ ಪ್ರವೇಶಿಸಿದ್ದಾರೆ” ಎಂದು ಯೋಚಿಸಿದ.
ಎಲ್ಲರ ಯೋಗಕ್ಷೇಮದ ಭರವಸೆ ಕೃಷ್ಣನೇ. ಅವರೆಲ್ಲರೂ ಸರ್ಪದ ಬಾಯಿಯೊಳಗೆ ಹೊರಟುಹೋದುದನ್ನು ಕಂಡು ಅವನೂ ಒಂದು ಕ್ಷಣ ವಿಚಲಿತನಾದ. ಬಹಿರಂಗ ಶಕ್ತಿಯು ಎಷ್ಟು ಆಶ್ಚರ್ಯಕರವಾಗಿ ಕೆಲಸ ಮಾಡುತ್ತಿದೆ ಎಂದು ಅವನು ದಿಗ್ಭ್ರಮೆಗೊಂಡನು. ಅನಂತರ ಈ ರಾಕ್ಷಸನನ್ನು ಸಂಹರಿಸುವುದು ಹೇಗೆ ಹಾಗೂ ತನ್ನ ಗೆಳೆಯರನ್ನು ಕರುಗಳನ್ನು ಉಳಿಸುವುದು ಹೇಗೆ ಎಂದು ಯೋಚಿಸಿ ತಾನೂ ಸರ್ಪದ ಬಾಯೊಳಕ್ಕೆ ಹೊರಟನು.

ಈ ಸಂದರ್ಭವನ್ನು ನೋಡಲು ಆಕಾಶದಲ್ಲಿನೆರೆದ ಮೋಡಗಳ ಹಿಂದೆ ಆಡಗಿದ್ದ ದೇವತೆಗಳು “ಅಯ್ಯೋ! ಅಯ್ಯೋ!” ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಈ ಮಧ್ಯೆ ಮಾಂಸ ಮತ್ತು ರಕ್ತವನ್ನು ಭಕ್ಷಿಸುವ ಆಘಾಸುರನ ಸ್ನೇಹಿತರೆಲ್ಲ, ಅದರಲ್ಲೂ ಮುಖ್ಯವಾಗಿ ಕಂಸನು, ಕೃಷ್ಣನು ರಾಕ್ಷಸನ ಬಾಯನ್ನು ಪ್ರವೇಶಿಸುವುದನ್ನು ಕಂಡು ಇನ್ನೇನು ಅವನು ಸಾಯುವನೆಂದು ಸಂತೋಷಗೊಂಡರು.
ರಾಕ್ಷಸನಾದ ಬಕಾಸುರನು ಕೃಷ್ಣನನ್ನು ಮತ್ತೆ ಅವನ ಗೆಳೆಯರನ್ನೂ ನುಚ್ಚು ನೂರು ಮಾಡಲು ಪ್ರಯತ್ನಿಸುತ್ತಿದ್ದಾಗ ದೇವತೆಗಳು ”ಅಯ್ಯೋ! ಅಯ್ಯೋ!” ಎಂದದ್ದು ಕೃಷ್ಣನಿಗೆ ಕೇಳಿಸಿತು. ಅವನು ಕೂಡಲೇ ರಾಕ್ಷಸನ ಗಂಟಲೊಳಗೆ ತನ್ನ ದೇಹವನ್ನು ಹಿಗ್ಗಿಸಲು ಪ್ರಾರ೦ಭಿಸಿದ. ರಾಕ್ಷಸನಿಗೆ ದೈತ್ಯದೇಹವಿದ್ದರೂ ಕೃಷ್ಣನ ದೇಹವು ಬೆಳೆಯತೊಡಗಿದಂತೆ ಉಸಿರು ಕಟ್ಟಿತು.
ಅವನ ದೊಡ್ಡ ಕಣ್ಣುಗಳು ರಭಸದಿಂದ ಚಲಿಸಿದವು. ಅವನ ಪ್ರಾಣವಾಯುವು ಯಾವ ರೀತಿಯಲ್ಲೂ ಹೊರಬರಲು ಕಷ್ಟವಾಯಿತು. ಕೊನೆಗೆ ಅದು ಅವನ ತಲೆಯ ಚಿಪ್ಪನ್ನು ಕೊರದು ರಭಸವಾಗಿ ಹೊರಹೊಮ್ಮಿತು. ಹೀಗೆ ಪ್ರಾಣವಾಯುವು ಅವನಿಂದ ಹೋದಕೂಡಲೇ ರಾಕ್ಷಸನು ಸತ್ತು ಬಿದ್ದನು.
ಕೃಷ್ಣನು ತನ್ನ ಅಲೌಕಿಕ ಕಣ್ಣೋಟದಿಂದಲೇ ಎಲ್ಲ ಬಾಲಕರಿಗೂ ಕರುಗಳಿಗೂ ಪ್ರಜ್ಞೆ ಬರುವಂತೆ ಮಾಡಿ ಅವರೊಡನೆ ರಾಕ್ಷಸನ ಬಾಯಿಂದ ಹೊರಕ್ಕೆ ಬಂದನು. ಕೃಷ್ಣನು ಆಘಾಸುರನ ಬಾಯಲ್ಲಿ ಇದ್ದಾಗ ರಾಕ್ಷಸನ ಚೇತನವು ಎಲ್ಲ ದಿಕ್ಕುಗಳನ್ನು ಬೆಳಗುತ್ತಾ ಕಣ್ಣು ಕೋರೈಸುವ ಜ್ಯೋತಿಯಾಗಿ ಹೊರಬಂದು ಆಕಾಶದಲ್ಲಿ ನಿಂತಿತ್ತು.
ಕೃಷ್ಣನು ತನ್ನ ಗೆಳೆಯರು ಹಾಗೂ ಕರುಗಳೊಂದಿಗೆ ಹೊರ ಬಂದನು. ಎಲ್ಲ ದೇವತೆಗಳೂ ನೋಡುತ್ತಿರುವ೦ತೆಯೇ ಆಕಾಶದಲ್ಲಿದ್ದ ಆ ಉಜ್ವಲ ದೀಪವು ಕೃಷ್ಣನ ದೇಹದಲ್ಲಿ ಲೀನವಾಗಿಹೋಯಿತು.
ಇದನ್ನು ಕಂಡು ದೇವತೆಗಳಿಗೂ ಹರ್ಷವಾಯಿತು. ಅವರು ದೇವೋತ್ತಮ ಪುರುಷನಾದ ಕೃಷ್ಣನ ಮೇಲೆ ಹೂವುಗಳನ್ನು ಸುರಿಸಿ ಪೂಜಿಸಿದರು. ದೇವಲೋಕದ ನಿವಾಸಿಗಳು ಆನಂದದಿಂದ ನರ್ತಿಸಲಾರಂಭಿಸಿದರು. ಗಂಧರ್ವ ಲೋಕದ ನಿವಾಸಿಗಳು ಕೃಷ್ಣನನ್ನು ಬಗೆ ಬಗೆಯಾಗಿ ಪ್ರಾರ್ಥಿಸಿದರು. ಪ್ರಭುವಿನ ಎಲ್ಲ ಭಕ್ತರೂ ‘ಜಯಜಯ ದೇವೋತ್ತಮ ಪರಮ ಪುರುಷನಿಗೆ ಜಯವಾಗಲಿ!’ ಎಂದು ಘೋಷಿಸಿದರು.
ದೇವಲೋಕದಲ್ಲೆಲ್ಲ ಹರಡಿದ ಈ ಹರ್ಷದ ವಾತಾವರಣವನ್ನು ಕಾಣಲು ಬ್ರಹ್ಮನೂ ಇಳಿದು ಬಂದು ರಾಕ್ಷಸನು ಸತ್ತು ಬಿದ್ದಿರುವುದನ್ನು ಕಂಡನು. ದೇವೋತ್ತಮ ಪರಮ ಪುರುಷನ ಅಸಾಧಾರಣ ದಿವ್ಯ ಲೀಲೆಗಳನ್ನು ಕಂಡು ಬೆರಗಾದನು.
ನಿಜವಾಗಿಯೂ ಆಘಾಸುರನು ಅತ್ಯಂತ ಪಾಪಜೀವಿ. ಪಾಪಿಗಳಿಗೆ ಪರಮ ಸತ್ಯದಲ್ಲಿ ಲೀನವಾಗಲು ಸಾಧ್ಯವಿಲ್ಲ. ಆದರೆ ಈ ಸಂದರ್ಭದಲ್ಲಿ ಕೃಷ್ಣನು ಆಘಾಸುರನ ದೇಹವನ್ನು ಹೊಕ್ಕಿದ್ದರಿಂದ ರಾಕ್ಷಸನು ಪಾಪಕರ್ಮದ ಎಲ್ಲ ಪರಿಣಾಮಗಳಿಂದ ಪರಿಶುದ್ಧನಾದನು. ಪ್ರಭುವಿನ ಶಾಶ್ವತ ರೂಪವನ್ನು ಸದಾ ವಿಗ್ರಹದ ಸ್ವರೂಪದಲ್ಲಿ ಅಥವಾ ಭಗವಂತನ ರೂಪವನ್ನು ಮನಸ್ಸಿನಲ್ಲಿ ಸ್ಮರಿಸುವವರಿಗೆ ಭಗವಂತನ ಸಾಮ್ರಾಜ್ಯವನ್ನು ಪ್ರವೇಶಿಸಿ ದೇವೋತ್ತಮ ಪರಮ ಪುರುಷನೊ೦ದಿಗೆ ಇರುವ ಮಹಾಭಾಗ್ಯವು ಲಭ್ಯವಾಗುತ್ತದೆ.
ಆಘಾಸುರನ ಬೃಹದಾಕಾರದ ಬಾಯಿ ಬಹುದಿನಗಳು ತೆರೆದೇ ಇತ್ತು. ಕ್ರಮೇಣ ಅದು ಒಣಗಿ ಹೋಯಿತು. ಎಲ್ಲ ಗೋಪಬಾಲರಿಗೆ ಅದೊಂದು ವಿನೋದದ ಸ್ಥಳವಾಯಿತು.
ಆಘಾಸುರನ ಸಂಹಾರವು ಕೃಷ್ಣನೂ ಅವನ ಗೆಳೆಯರೂ ಐದು ವರ್ಷಕ್ಕಿಂತ ಕಡಮೆ ವಯಸ್ಸಿದ್ದಾಗ ನಡೆಯಿತು. ಆದ್ದರಿಂದ ಈ ರಾಕ್ಷಸನ ಸಂಹಾರದ ವಿಷಯವಾಗಿ ವ್ರಜಭೂಮಿಯಲ್ಲಿ (ವೃಂದಾವನ) ಒಂದು ವರ್ಷದ ಕಾಲ ಮಾತೇ ಇರಲಿಲ್ಲ. ಅವರಿಗೆ ಆರು ವರ್ಷಗಳಾದ ಅನಂತರ ಬಹು ಅಚ್ಚರಿಯಿಂದ ತಮ್ಮ ತಂದೆ ತಾಯಿಯರಿಗೆ ಈ ಅದ್ಭುತ ಸಾಹಸದ ವಿಷಯವನ್ನು ತಿಳಿಸಿದರು. ಇದಕ್ಕೆ ಕಾರಣವು ಮುಂದಿನ ಅಧ್ಯಾಯದಲ್ಲಿ ಸ್ಪಷ್ಟವಾಗುತ್ತದೆ.
ತನ್ನ ಗೆಳೆಯರನ್ನೆಲ್ಲಾ ಆಘಾಸುರನ ಬಾಯಿಂದ ರಕ್ಷಿಸಿ ರಾಕ್ಷಸನನ್ನು ಕೊಂದನು. ಆದಾದ ಅನಂತರ ಶ್ರೀ ಕೃಷ್ಣನು ತನ್ನ ಗೆಳೆಯರೊಂದಿಗೆ ಊಟ ಮಾಡಲು ಅವರನ್ನೆಲ್ಲಾ ಯಮುನಾ ತೀರಕ್ಕೆ ಕರೆದುಕೊಂಡು ಬಂದು ಅವರಿಗೆ ಹೀಗೆ ಹೇಳಿದನು. “”……ಪ್ರಿಯ ಸ್ನೇಹಿತರೆ, ಯಮುನಾ ನದಿಯ ಈ ತೀರವು ಊಟಮಾಡಲು, ಅನಂತರ ಆಟವಾಡಲು ಬಹಳ ಚೆನ್ನಾಗಿದೆ.
ನೀರಿನಲ್ಲಿ ತಾವರೆಗಳು ಅದೆಷ್ಟು ಸುಂದರವಾಗಿ ಅರಳಿವೆ. ತಮ್ಮ ಸುತ್ತಲೂ ಅವು ಹರಡಿರುವ ಕಂಪನ್ನು ನೀವೇ ತಿಳಿಯಬಹುದು. ನವಿಲುಗಳ ಕೇಕೆ, ಪಕ್ಷಿಗಳ ಚಿಲಿಪಿಲಿ, ಮರಗಳ ಪಿಸುಗುಟ್ಟುವಿಕೆ ಇವೆಲ್ಲ ಸೇರಿ ಒಂದಕ್ಕೊಂದು ಮಾರ್ದನಿಕೊಡುವ ಕಂಪನಗಳನ್ನು ಉಂಟು ಮಾಡುತ್ತಿವೆ.
ಗಿಡಮರಗಳು ಇಲ್ಲಿ ಸೃಷ್ಟಿಸಿರುವ ಪ್ರಕೃತಿಯ ದೃಶ್ಯವು ಇದರಿ೦ದ ಇನ್ನೂ ಚೆಲುವಾಗುತ್ತದೆ. ಬನ್ನಿ ಆಗಲೇ ತಡವಾಗಿದೆ, ನಾವೆಲ್ಲ ಹಸಿದಿದ್ದೇವೆ. ಆದ್ದರಿಂದ ಇಲ್ಲಿಯೇ ಊಟಮಾಡೋಣ. ನಮ್ಮ ಕರುಗಳೂ ನಮ್ಮ ಬಳಿಯೇ ಇದ್ದು ಯಮುನಾ ನದಿಯ ನೀರನ್ನು ಕುಡಿಯಲಿ. ನಾವು ಊಟ ಮಾಡುತ್ತಿರುವಾಗ ಅವು ಇಲ್ಲಿರುವ ಮೆದುವಾದ ಹುಲ್ಲನ್ನು ಮೇಯಲಿ.”

ಈ ಸಲಹೆಗಳನ್ನು ಕೇಳಿದ ಹುಡುಗರೆಲ್ಲರಿಗೂ ಸಂತೋಷವಾಯಿತು. ಅವರು “ಖಂಡಿತ ಹಾಗೇ ಮಾಡೋಣ. ಇಲ್ಲೇ ಕುಳಿತು ಊಟ ಮಾಡೋಣ” ಎಂದರು. ಮೃದುವಾದ ಹುಲ್ಲನ್ನು ತಿನ್ನಲು ಅವರು ಕರುಗಳನ್ನು ಬಿಚ್ಚಿದರು. ಕೃಷ್ಣನನ್ನು ಕೇಂದ್ರವನ್ನಾಗಿ ಮಾಡಿಕೊಂಡು ಎಲ್ಲರೂ ಅವನ ಸುತ್ತಲೂ ಕುಳಿತು ತಾವು ಮನೆಯಿಂದ ತಂದಿದ್ದ ಬುತ್ತಿಯನ್ನು ಬಿಚ್ಚಲು ಪ್ರಾರಂಭಿಸಿದರು.
ಅವರೆಲ್ಲ ಆಹಾರವನ್ನು ತಿನ್ನುತ್ತಾ ತಮ್ಮೆದುರಿಗೇ ನಡುವಿನಲ್ಲಿ ಕುಳಿತಿದ್ದ ಪ್ರಭುವನ್ನೂ ಕಾಣುತ್ತಾ ಸಂತೋಷ ಪಡುತ್ತಿದ್ದರು. ಕೃಷ್ಣನು ತಾವರೆ ಹೂವಿನ ಕೇಂದ್ರವಾಗಿಯೂ ಹುಡುಗರು ವಿವಿಧ ದಳಗಳಂತೆಯೂ ಕಾಣುತ್ತಿದ್ದರು.
ಬಾಲಕರು ಹೂಗಳು, ಮರದ ತೊಗಟೆಗಳು ಮುಂತಾದ ವಸ್ತುಗಳನ್ನು ಸಂಗ್ರಹಿಸಿದ್ದರು. ಅವುಗಳನ್ನೆಲ್ಲಾ ಕೆಳಗಿಟ್ಟುಕೊಂಡು ಅದರ ಮೇಲೆ ತಮ್ಮ ಬುತ್ತಿಯ ಕಟ್ಟನ್ನು ಇಟ್ಟುಕೊಂಡಿದ್ದರು. ಊಟಮಾಡುತ್ತಾ ನಡುವೆ ಕುಳಿತಿದ್ದ ಕೃಷ್ಣನೊಡನೆ ಭಿನ್ನವಾದ ತಮ್ಮ ಬಾಂಧವ್ಯವನ್ನು ತೋರಿಸಿಕೊಂಡರು.
ಹಾಸ್ಯದ ಚಟಾಕಿಗಳನ್ನು ಹಾರಿಸುತ್ತಾ ಆ ಸಮಯವನ್ನು ಸವಿಯತೊಡಗಿದರು. ಇದರೊಂದಿಗೆ ಹುಡುಗಾಟಿಕೆಯೂ ನಡೆಯುತ್ತಿತ್ತು. ಕೆಲವು ಗೆಳೆಯರು ಊಟಮಾಡುತ್ತಿದ್ದ ಕೃಷ್ಣನ ಕೊಳಲನ್ನು ಅವನ ಅಂಗಿಯ ಸುತ್ತಲಿನ ಪಟ್ಟಿಯಲ್ಲಿ ಸೇರಿಸಿ ಬಿಟ್ಟರು.
ಅವನ ಕಹಳೆ ಮತ್ತು ಕೋಲುಗಳನ್ನು ಅವನ ಬಟ್ಟೆಯ ಎಡಕ್ಕೆ ತಳ್ಳಿದರು. ಮೊಸರು, ಬೆಣ್ಣೆ, ಅಕ್ಕಿ ಮತ್ತು ಹಣ್ಣುಗಳ ರಸಾಯನಗಳನ್ನು ಸೇರಿಸಿ ಮಾಡಿದ್ದ ಭಕ್ಷ್ಯವನ್ನು ಎಡದ ಅ೦ಗೈಯಲ್ಲಿ ಹಿಡಿದುಕೊಂಡಿದ್ದ ಹೂವಿನ ದಳಗಳಂತಿದ್ದ ಅವನ ಬೆರಳುಗಳ ಗೆಣ್ಣುಗಳ ಮೂಲಕ ಅದು ಕಾಣುತ್ತಿತ್ತು.
ಮಹಾಯಜ್ಞಗಳಲ್ಲಿ ಅರ್ಪಿಸುವುದನ್ನು, ಸ್ವೀಕರಿಸುವ ದೇವೋತ್ತಮ ಪರಮ ಪುರುಷನು ವೃಂದಾವನದಲ್ಲಿ ಗೆಳೆಯರೊಡನೆ ಊಟವಾಗಿ ಸವಿಯುತ್ತಾ ತಮಾಷೆ ಮಾಡುತ್ತಾ ನಲಿಯುತ್ತಿದ್ದನು. ಕೃಷ್ಣನ ಗೆಳೆಯರಾದರೋ ದೇವೋತ್ತಮ ಪರಮ ಪುರುಷನ ಸಹವಾಸದಲ್ಲಿ ಅಲೌಕಿಕ ಆನಂದವನ್ನು ಅನುಭವಿಸುತ್ತಿದ್ದರು.
ಈ ನಡುವೆ ಹತ್ತಿರದಲ್ಲೇ ಮೇಯುತ್ತಿದ್ದ ಕರುಗಳು ಹೊಸ ಹುಲ್ಲಿನಿಂದ ಆಕರ್ಷಿತವಾಗಿ ಕಾಡಿನಲ್ಲಿ ಬಹುದೂರ ಹೊರಟು ಹೋಗಿದ್ದವು. ಅವು ಕ್ರಮೇಣವಾಗಿ ಕಣ್ಮರೆಯಾಗಿದ್ದವು. ಕರುಗಳು ಸಮೀಪದಲ್ಲಿಲ್ಲ ಎನ್ನುವುದನ್ನು ಕಂಡ ಹುಡುಗರು ಅವು ಕ್ಷೇಮವಾಗಿವೆಯೇ ಎಂದು ಆತಂಕಪಟ್ಟರು. ಕೂಡಲೇ ‘ಕೃಷ್ಣಾ’ ಎಂದು ಕೂಗಿದರು.
ಕೃಷ್ಣನು ಭಯ ನಿವಾರಕನು. “ಕೃಷ್ಣಾ” ಎಂದು ಕೂಗುತ್ತಲೇ ಬಾಲಕರಿಗೆ ಭಯದ ನಿವಾರಣೆಯಾಗಿ ಹೋಯಿತು. ಕೃಷ್ಣನಿಗೆ ತನ್ನ ಗೆಳೆಯರಲ್ಲಿ ಬಹಳ ಪ್ರೀತಿಯಿತ್ತು. ಅವರೆಲ್ಲ ಊಟಮಾಡುವುದನ್ನು ಬಿಟ್ಟು ಕರುಗಳನ್ನು ಹುಡುಕಿಕೊಂಡು ಹೋಗುವುದು ಅವನಿಗೆ ಇಷ್ಟವಿರಲಿಲ್ಲ. ಎಡಗೈಯಲ್ಲಿ ಮೊಸರನ್ನದ ತುತ್ತು ಹಿಡಿದುಕೊಂಡು, “ಗೆಳೆಯರೇ, ನೀವು ಊಟವನ್ನು ನಿಲ್ಲಿಸಬೇಡಿ.
ಸಂತೋಷವಾಗಿರಿ. ಕರುಗಳನ್ನು ಹುಡುಕಲು ನಾನೇ ಹೋಗುತ್ತೇನೆ” ಎಂದು ಹೇಳಿ ಅಲ್ಲಿಂದ ಅವನು ಹೊರಟನು. ಕರುಗಳನ್ನು ಗುಹೆಯಲ್ಲಿಯೂ ಪೊದೆಗಳಲ್ಲಿಯೂ ಹುಡುಕತೊಡಗಿದನು. ಪರ್ವತದ ಕಂದರಗಳಲ್ಲಿ ಕಾಡಿನಲ್ಲಿ ಹುಡುಕಿದರೂ ಕೃಷ್ಣನಿಗೆ ಕರುಗಳು ಕಾಣಿಸಲಿಲ್ಲ.
ಆಘಾಸುರನ ಸಂಹಾರವಾಗಿ ದೇವತೆಗಳೆಲ್ಲ ಬೆರಗಾಗಿ ನೋಡುತ್ತಿದ್ದಾಗ ವಿಷ್ಣುವಿನ ನಾಭಿಯಿಂದ ಬೆಳೆದ ತಾವರೆಯಲ್ಲಿ ಹುಟ್ಟಿದ ಬ್ರಹ್ಮನೂ ಅದನ್ನು ಕಾಣಲು ಬಂದನು. ಕೃಷ್ಣನಂತಹ ಪುಟ್ಟ ಹುಡುಗನೂ ಇಂತಹ ಅದ್ಭುತ ಕಾರ್ಯಗಳನ್ನು ಮಾಡಲು ಹೇಗೆ ಸಾಧ್ಯ ಎಂದು ಅವನಿಗೆ ಆಶ್ಚರ್ಯವಾಗಿತ್ತು.
ಈ ಪುಟ್ಟ ಗೋಪಾಲನು ದೇವೋತ್ತಮ ಪರಮ ಪುರುಷನೇ ಎಂದು ತಿಳಿದಿದ್ದ ಅವನಿಗೆ ಪ್ರಭುವಿನ ವಿಶೇಷ ಬಾಲ ಲೀಲೆಗಳನ್ನು ಇನ್ನಷ್ಟು ನೋಡಬೇಕೆಂದು ಆಸೆಯಾಯಿತು. ಆದ್ದರಿಂದ ಅವನು ಬಾಲಕರ ಎಲ್ಲ ಕರುಗಳನ್ನೂ ಅಪಹರಿಸಿ ಬೇರೆ ಕಡೆಗೆ ಕರೆದೊಯ್ದು ಬಿಟ್ಟಿದ್ದನು. ಆದ್ದರಿಂದ ಕೃಷ್ಣನು ಕರುಗಳನ್ನು ಹುಡುಕಿದರೂ ಅವು ಸಿಗದೆ ಹೋದವು.
ಕೃಷ್ಣನು ಈ ಕರುಗಳಿಗಾಗಿ ಹುಡುಕಾಟ ಮಾಡುತ್ತಾ ಹಿಂತಿರುಗಿ ಬಂದರೆ ಯಮುನಾ ನದೀ ತೀರದಲ್ಲಿ ಊಟ ಮಾಡುತ್ತಿದ್ದ ಅವನ ಗೆಳೆಯರೂ ಕಣ್ಮರೆಯಾಗಿ ಬಿಟ್ಟಿದ್ದರು. ಗೋಪಾಲಕ ಬಾಲಕನ ರೂಪದಲ್ಲಿ ಕೃಷ್ಣನನ್ನು ಬ್ರಹ್ಮನೊಂದಿಗೆ ಹೋಲಿಸಿದಾಗ ಬಹು ಪುಟ್ಟವನಾಗಿ ಕಂಡರೂ ಅವನು ದೇವೋತ್ತಮ ಪರಮ ಪುರುಷನಾದ್ದರಿಂದ ಬ್ರಹ್ಮನೇ ಎಲ್ಲ ಕರುಗಳನ್ನೂ ತನ್ನ ಗೆಳೆಯರನ್ನೂ ಕದ್ದು ಒಯ್ದಿದ್ದಾನೆ ಎಂದು ಅವನಿಗೆ ಕೂಡಲೇ ಅರ್ಥವಾಯಿತು.
ಬ್ರಹ್ಮನು ಹುಡುಗರನ್ನೂ ಕರುಗಳನ್ನೂ ತೆಗೆದುಕೊಂಡು ಹೋಗಿ ಬಿಟ್ಟಿದ್ದಾನೆ. ನಾನೊಬ್ಬನೇ ವೃಂದಾವನಕ್ಕೆ ಹಿಂತಿರುಗುವುದಾದರೂ ಹೇಗೆ? ತಾಯಂದಿರಿಗೆ ತಮ್ಮ ಮಕ್ಕಳನ್ನು ಕಾಣದೇ ದುಃಖವಾಗುವುದಿಲ್ಲವೇ’ ಎಂದು ಚಿಂತಿಸಿದನು.

ತನ್ನ ಗೆಳೆಯರ ತಾಯಂದಿರನ್ನು ಸಂತೋಷ ಪಡಿಸಲು ಹಾಗೂ ದೇವೋತ್ತಮ ಪರಮ ಪುರುಷನ ಮಹಿಮೆಯನ್ನು ಬ್ರಹ್ಮನಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಅವನು ಕೂಡಲೆ ಗೋಪ ಬಾಲಕರಾಗಿ ಮತ್ತು ಕರುಗಳಾಗಿ ವಿಸ್ತರಿಸಿಕೊಂಡನು. ದೇವೋತ್ತಮ ಪರಮ ಪುರುಷನು ತನ್ನ ಶಕ್ತಿಯಿಂದ ಇಷ್ಟೊಂದು ಜೀವಿಗಳಾಗಿ ವಿಸ್ತರಗೊಳ್ಳುತ್ತಾನೆ ಎಂದು ವೇದಗಳಲ್ಲಿ ಹೇಳಿದೆ.
ಬೇರೆ ಬೇರೆ ಮುಖ ಲಕ್ಷಣಗಳು, ದೇಹದ ರಚನೆಗಳನ್ನು ಪಡೆದು ಬಟ್ಟೆಗಳಲ್ಲಿ, ಒಡವೆಗಳಲ್ಲಿ, ನಡೆದುಕೊಳ್ಳುವ ರೀತಿಗಳಲ್ಲಿ, ವೈಯಕ್ತಿಕ ಚಟುವಟಿಕೆಗಳಲ್ಲಿ ಒಬ್ಬರಿಂದ ಇನ್ನೊಬ್ಬರು ಭಿನ್ನರಾಗಿದ್ದ ಹುಡುಗರಂತೆಯೇ ಕಾಣುವಂತೆ ಕೃಷ್ಣನು ತನ್ನನ್ನು ತಾನು ವಿಸ್ತರಿಸಿಕೊಂಡನು. ಈ ಪ್ರತಿ ಬಾಲಕನಿಗೂ ತನ್ನದೇ ಆದ ವೈಯಕ್ತಿಕ ಅಭಿರುಚಿಗಳಿದ್ದವು.
ಪ್ರತ್ಯೇಕ ಆತ್ಮವಾಗಿ ಪ್ರತಿಯೊಬ್ಬನಿಗೂ ಬೇರೆ ಬೇರೆ ಚಟುವಟಿಕೆಗಳಲ್ಲಿ ಆಸಕ್ತಿ, ಒಬ್ಬೊಬ್ಬನದು ಬೇರೆ ಬೇರೆ ತೆರನಾದ ನಡವಳಿಕೆ. ಹೀಗೆ ಕೃಷ್ಣನು ಅಷ್ಟೂ ಹುಡುಗರಾಗಿ ತನ್ನನ್ನು ಪರಿವರ್ತಿಸಿಕೊಂಡನು. ಹಾಗೆಯೇ ಬೇರೆ ಬೇರೆ ಗಾತ್ರ ಬಣ್ಣ ಮತ್ತು ಚಟುವಟಿಕೆಗಳ ಕರುಗಳೂ ತಾನೇ ಅದನು.
ಎಲ್ಲವೂ ಕೃಷ್ಣನ ಚೈತನ್ಯದ ವಿಸ್ತರಣೆಯೇ ಆದ್ದರಿಂದ ಇವೆಲ್ಲವೂ ಸಾಧ್ಯವಾಯಿತು. ವಿಷ್ಣುಪುರಾಣದಲ್ಲೂ ಪರಸ್ಯ ಬ್ರಹ್ಮಣಾಶಕ್ತಿ ಎಂದು ಹೇಳಿದೆ. ಜಡ ವಸ್ತುವೇ ಆಗಲಿ ಜೀವಿಗಳ ಚಟುವಟಿಕೆಗಳೇ ಆಗಲಿ ನಾವು ಬ್ರಹ್ಮಾಂಡದಲ್ಲಿ ಕಾಣುವುದೆಲ್ಲವೂ ಶಾಖ ಮತ್ತು ಬೆಳಕುಗಳು ಬೆಂಕಿಯ ಅಭಿವ್ಯಕ್ತಿಗಳಾಗಿರುವಂತೆ, ಪ್ರಭುವಿನ ಶಕ್ತಿಗಳ ಅಭಿವ್ಯಕ್ತಿ ಮಾತ್ರ.
ಹೀಗೆ ಹಲವಾರು ಬಾಲಕರು ಮತ್ತು ಕರುಗಳ ಸ್ವರೂಪದಲ್ಲಿ ತನ್ನನ್ನು ವಿಸ್ತರಿಸಿಕೊಂಡ ಕೃಷ್ಣನು ವೃಂದಾವನ ಗ್ರಾಮವನ್ನು ಸೇರಿದನು. ಅಲ್ಲಿನ ನಿವಾಸಿಗಳಿಗೆ ಈ ಸಂಗತಿಗಳಾವುವು ತಿಳಿದೇ ಇರಲಿಲ್ಲ. ವೃಂದಾವನವನ್ನು ಪ್ರವೇಶಿಸಿದ ಕರುಗಳು ಎಂದಿನಂತೆ ತಮ್ಮ ತಮ್ಮ ಗೋಶಾಲೆಗಳಿಗೆ ಹೋದವು. ಬಾಲಕರೂ ತಮ್ಮ ತಮ್ಮ ಮನೆಗಳಿಗೆ, ತಾಯಂದಿರ ಬಳಿಗೆ ಹೋದರು.
ಈ ಬಾಲಕರ ತಾಯಂದಿರಿಗೆ ತಮ್ಮ ಮಕ್ಕಳು ಮನೆಗಳಿಗೆ ಬರುವ ಮುನ್ನವೇ ಅವರ ಕೊಳಲಿನ ನಾದ ಕೇಳಿಸಿತ್ತು. ಅವರೆಲ್ಲ ಕೂಡಲೇ ಹೊರಬಂದು ತಮ್ಮ ಮಕ್ಕಳನ್ನು ಆಲಿಂಗಿಸಿಕೊಂಡರು. ಮನೆಯೊಳಗೆ ಕರೆದುಕೊಂಡು ಹೋಗಿ ತಮ್ಮ ಮಕ್ಕಳಿಗೆ ಸ್ನಾನ ಮಾಡಿಸಿ ತಿಲಕವಿಟ್ಟು ಆಭರಣಗಳಿಂದ ಅಲಂಕರಿಸಿ ದಿನವೆಲ್ಲ ಕೆಲಸ ಮಾಡಿ ಬಂದ ಅವರಿಗೆ ತಿನ್ನಲು ಆಹಾರವನ್ನು ಕೊಟ್ಟರು.
ಮೇವುಗಾವಲಿನಲ್ಲಿದ್ದ ಹಸುಗಳೂ ಸಹ ಸಂಜೆ ಹಿಂದಿರುಗಿ ತಮ್ಮ ತಮ್ಮ ಕರುಗಳನ್ನು ಕೂಗಿ ಕರೆದವು. ಕರುಗಳೂ ಕೂಡಲೇ ತಮ್ಮ ತಮ್ಮ ತಾಯಂದಿರ ಬಳಿಗೋಡಿದವು. ತಾಯಿ ಹಸುಗಳು ಪ್ರೀತಿಯಿಂದ ಅವುಗಳ ಮೈಯನ್ನು ನೆಕ್ಕಲು ಪ್ರಾರಂಭಿಸಿದವು. ನಿಜವಾದ ಹುಡುಗರಾಗಲಿ ಕರುಗಳಾಗಲಿ ಅಲ್ಲಿ ಇರಲಿಲ್ಲವಾದರೂ ಅವರ ತಾಯಂದಿರೊಂದಿಗಿನ ಬಾಂಧವ್ಯ ಮಾತ್ರ ಎಂದಿನಂತೆ ಇತ್ತು.
ಅಲ್ಲದೆ ಹಸುಗಳಿಗೆ ತಮ್ಮ ಕರುಗಳ ಬಗ್ಗೆ ತಾಯಂದಿರಿಗೆ ತಮ್ಮ ಮಕ್ಕಳ ಬಗ್ಗೆ ಪ್ರೀತಿಯು ಆ ಕಾರಣವಾಗಿ ವೃದ್ಧಿಯಾಯಿತು. ವೃಂದಾವನದ ಹಸುಗಳಿಗೂ ಹಿರಿಯ ಗೋಪಿಯರಿಗೂ ತಮ್ಮಕರುಗಳ ಹಾಗೂ ಮಕ್ಕಳ ಬಗ್ಗೆ ಇದ್ದ ಪ್ರೀತಿಗಿಂತ ಕೃಷ್ಣನ ಮೇಲಿನ ಪ್ರೀತಿ ಹೆಚ್ಚಾಗಿದ್ದಿತು. ಈ ಘಟನೆಯ ಅನಂತರ ಅವರಿಗೆ ಕೃಷ್ಣನಲ್ಲಿದ್ದಷ್ಟೇ ಪ್ರೀತಿ ಮಿತವಿಲ್ಲದೆ ವೃದ್ಧಿಯಾಯಿತು. ಒಂದು ವರ್ಷಕಾಲ ಕೃಷ್ಣನು ಕರುಗಳಾಗಿ ಮತ್ತು ಗೋಪಾಲ ಬಾಲಕರಾಗಿ ತನ್ನನ್ನು ವಿಸ್ತರಿಸಿ ಕೊಂಡಿದ್ದನು ಮತ್ತು ಮೇವುಗಾವಲಿನಲ್ಲಿಯೂ ಇದ್ದನು.
ಹೀಗೆ ವರ್ಷವು ಕಳೆಯುತ್ತಿದ್ದಂತೆ ಒಂದು ದಿನ ಬಲರಾಮನೊಂದಿಗೆ ಕೃಷ್ಣನು ಕರುಗಳನ್ನು ಕಾಡಿನಲ್ಲಿ ನೋಡಿಕೊಳ್ಳುತ್ತಿದ್ದನು. ಆಗ ಗೋವರ್ಧನ ಗಿರಿಯ ಮೇಲೆ ಕೆಲವು ಹಸುಗಳು ಮೇಯುತ್ತಿದ್ದುದು ಕಂಡು ಬಂದಿತು. ಗಿರಿಯ ಮೇಲಿನ ಆ ಹಸುಗಳೂ ಸಹ ಕಣಿವೆಯಲ್ಲಿ ಹುಡುಗರು ಕರುಗಳನ್ನು ಮೇಯಿಸುತ್ತಿರುವುದನ್ನು ನೋಡಿದವು.
ಅವು ಕೂಡಲೇ ಆ ಕರುಗಳ ಕಡೆಗೆ ಓಡಲು ಪ್ರಾರಂಭಿಸಿದವು. ಅವು ಹಿಂಗಾಲು ಮುಂಗಾಲು ಸೇರಿದಂತೆ ನೆಗೆದು ಬರುತ್ತಿದ್ದವು. ಅವುಗಳ ಮನಸ್ಸು ಕರುಗಳ ಪ್ರೀತಿಯಿಂದ ಎಷ್ಟು ಕರಗಿ ಹೋಗಿತ್ತೆಂದರೆ ಅವು ಗೋವರ್ಧನ ಗಿರಿಯ ಮೇಲಿನಿಂದ ಕೆಳಕ್ಕೆ ಹುಲ್ಲುಗಾವಲಿನವರೆಗೆ ಇದ್ದ ದಾರಿಯ ಕಲ್ಲು ಮುಳ್ಳುಗಳನ್ನು ಲಕ್ಷ್ಯ ಮಾಡಲಿಲ್ಲ.
ಅವುಗಳ ಕೆಚ್ಚಲುಗಳು ಹಾಲಿನಿಂದ ತುಂಬಿಕೊಳ್ಳುತ್ತಿದ್ದಂತೆ ಅವು ಬಾಲಗಳನ್ನು ಮೇಲೆತ್ತಿಕೊಂಡು ಕರುಗಳ ಬಳಿಗೆ ಬಂದವು. ಆ ಕರುಗಳು ಸ್ವಂತ ಕರುಗಳಲ್ಲದಿದ್ದರೂ ಮಾತೃವಾತ್ಸಲ್ಯದಿಂದಾಗಿ ಅವುಗಳ ಕೆಚ್ಚಲಿನಿಂದ ಹಾಲು ಸುರಿಯುತ್ತಿತ್ತು. ಈ ಹಸುಗಳಿಗೆ ತಮ್ಮ ಕರುಗಳೇ ಇದ್ದವು. ಗೋವರ್ಧನ ಗಿರಿಯ ಬುಡದಲ್ಲಿ ಮೇಯುತ್ತಿದ್ದ ಕರುಗಳು ಇನ್ನು ದೊಡ್ಡವಾಗಿದ್ದವು, ಅವುಗಳಿಗೆ ಹುಲ್ಲುತಿಂದೇ ತೃಪ್ತಿಯಾಗುತ್ತಿತ್ತು.
ಅವುಗಳಿಗೆ ಹಾಲು ಬೇಕೂ ಇರಲಿಲ್ಲ. ಆದರೂ ಹಸುಗಳೆಲ್ಲ ಕೆಳಗೆ ಬಂದ ಕೂಡಲೇ ಕರುಗಳ ದೇಹಗಳನ್ನು ನೆಕ್ಕಲು ಪ್ರಾರಂಭಿಸಿದವು ಮತ್ತು ಕರುಗಳೂ ಸಹ ಕೆಚ್ಚಲಿನಿಂದ ಹಾಲನ್ನು ಕುಡಿಯಲು ಪ್ರಾರಂಭಿಸಿದವು. ಹಸು ಮತ್ತು ಕರುಗಳ ನಡುವಿನ ಬಾಂಧವ್ಯ ಬಹಳ ಪ್ರೀತಿಯಿಂದ ಕೂಡಿತ್ತು.
ಗೋವುಗಳು ಗೋವರ್ಧನ ಗಿರಿಯ ಮೇಲಿಂದ ಕೆಳಕ್ಕೆ ಓಡುತ್ತಿದ್ದಾಗ ಅವನ್ನು ಕಾಯುತ್ತಿದ್ದವರು ಅವುಗಳನ್ನು ತಡೆಯಲು ಪ್ರಯತ್ನಿಸಿದರು. ದೊಡ್ಡಹಸುಗಳನ್ನು ದೊಡ್ಡವರು ನೋಡಿಕೊಳ್ಳುತ್ತಾರೆ. ಕರುಗಳನ್ನು ಹುಡುಗರು ನೋಡಿಕೊಳ್ಳುತ್ತಾರೆ. ಕರುಗಳು ಇದ್ದ ಹಾಲನ್ನೆಲ್ಲಾ ಕುಡಿದು ಬಿಡದಂತೆ ಅವುಗಳನ್ನು ಹಸುಗಳಿಂದ ಬೇರ್ಪಡಿಸುತ್ತಾರೆ.

ಆದುದರಿಂದ ಗೋವರ್ಧನ ಗಿರಿಯ ಮೇಲೆ ದನಗಳನ್ನು ಕಾಯುತ್ತಿದ್ದವರು ಅವುಗಳನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅದು ಅವರಿಗೆ ಸಾಧ್ಯವಾಗಲಿಲ್ಲ. ತಮ್ಮ ಅಸಹಾಯಕತೆಗಾಗಿ ಅವರಿಗೆ ನಾಚಿಕೆಯಾಯಿತು. ಕೋಪವು ಬಂತು. ಬೇಸರವೂ ಆಯಿತು. ಆದರೆ ಅವರು ಕೆಳಕ್ಕೆ ಇಳಿದು ಬಂದು ಕರುಗಳನ್ನು ಕಾಯುತ್ತಿದ್ದ ತಮ್ಮ ಮಕ್ಕಳನ್ನು ನೋಡಿದಾಗ ಅವರಲ್ಲಿ ಅಪಾರ ಪ್ರೀತಿ ಉಕ್ಕಿ ಬಂದಿತು.
ಅವರಲ್ಲಿದ್ದ ಕೋಪ, ಬೇಸರಗಳೆಲ್ಲ ಮಾಯವಾದವು. ಆ ಮಕ್ಕಳಲ್ಲಿ ಪ್ರೀತಿ ವಾತ್ಸಲ್ಯವನ್ನು ತೋರಿ ಬಹು ಪ್ರೀತಿಯಿಂದ ಅವರನ್ನು ತಮ್ಮ ತೋಳುಗಳಲ್ಲಿ ಎತ್ತಿಕೊಂಡು ತಬ್ಬಿಕೊಂಡರು, ಮಕ್ಕಳ ಮುಂದಲೆಗಳನ್ನು ಆಘ್ರಾಣಿಸಿ ಅವರ ಸಹವಾಸದಲ್ಲಿ ಬಹುವಾಗಿ ಆನಂದ ಪಟ್ಟರು.
ಹೀಗೆ ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆದ ಮೇಲೆ ಆ ದೊಡ್ಡವರು ಮತ್ತೆ ತಮ್ಮ ಹಸುಗಳನ್ನು ಗೋವರ್ಧನ ಗಿರಿಯ ಮೇಲ್ಭಾಗಕ್ಕೆ ಕೊಂಡೊಯ್ದರು. ಹಾಗೆ ಹೋಗುತ್ತಾ ಈ ಮಕ್ಕಳ ಬಗ್ಗೆಯೇ ಯೋಚಿಸುತ್ತಾ ನಡೆಯುತ್ತಿರಲು ಅವರ ಕಣ್ಣುಗಳಿಂದ ಪ್ರೀತಿಯ ಹನಿಗಳು ಉದುರಲಾರಂಭಿಸಿದವು.
ಬಲರಾಮನು ಇದೆಲ್ಲವನ್ನೂ ಗಮನಿಸುತ್ತಿದ್ದನು. ಕರುಗಳಿಗೂ ಮಕ್ಕಳಿಗೂ ಅಷ್ಟೊಂದು ಗಮನದ ಆಗತ್ಯವಿಲ್ಲದಿದ್ದಾಗ ಹಸುಗಳ ಮತ್ತು ಕರುಗಳ ನಡುವೆ ಹಾಗೂ ತಂದೆಯರು ಮತ್ತು ಮಕ್ಕಳ ನಡುವೆ ತೋರಿಬಂದ ಈ ಅಸಾಧಾರಣ ಪ್ರೀತಿ ಬಾಂಧವ್ಯವನ್ನು ಕಂಡ ಬಲರಾಮನಿಗೆ ಈ ಎಲ್ಲ ಅಪೂರ್ವ ಸಂಗತಿಗಳು ಏಕೆ ಮತ್ತು ಹೇಗೆ ನಡೆಯಿತೆ೦ದು ಆಶ್ಚರ್ಯವಾಗತೊಡಗಿತು.
ಆದುದರಿಂದ ಬಲರಾಮನು ಈ ಪ್ರೀತಿಯ ಪ್ರದರ್ಶನವು ನಿಗೂಢವಾದದ್ದು, ಇದನ್ನು ದೇವತೆಗಳೋ ಅಥವಾ ಯಾರಾದರೂ ಅಸಾಧಾರಣ ವ್ಯಕ್ತಿಯೋ ನಡೆಸಿರಬೇಕು ಎಂದು ತರ್ಕಿಸಿದನು. ವೃಂದಾವನದ ನಿವಾಸಿಗಳೆಲ್ಲ ಕೃಷ್ಣನಲ್ಲಿ ತೋರುತ್ತಿದ್ದ ಪ್ರೀತಿಯನ್ನು ತಮ್ಮ ಮಕ್ಕಳಲ್ಲೂ ತೋರುತ್ತಿದ್ದರು.
ಈ ನಿಗೂಢ ಬದಲಾವಣೆಗಳಿಗೆಲ್ಲಾ ಕೃಷ್ಣನೇ ಕಾರಣನಿರಬೇಕೆನಿಸಿತು ಅವನಿಗೆ. ಬಲರಾಮನು ಕೃಷ್ಣನನ್ನು ಕೇಳಿದನು. “ನನ್ನ ಪ್ರೀತಿಯ ಕೃಷ್ಣ, ಪ್ರಾರಂಭದಲ್ಲಿ ನಾನು ಈ ಕರುಗಳು, ಹಸುಗಳು, ಮತ್ತು ಗೋಪಬಾಲರು ಎಲ್ಲ ಮಹಾ ಋಷಿಗಳೋ, ಸಂತರೋ, ಅಥವಾ ದೇವತೆಗಳೋ ಎಂದು ಭಾವಿಸಿದ್ದೆ. ಆದರೆ ಅವರೆಲ್ಲ ಈಗ ನಿನ್ನ ರೂಪಗಳೇ ಎಂದೆನಿಸುತ್ತದೆ.
ಅವೆಲ್ಲ ನೀನೇ. ನೀನೇ ಕರುಗಳಾಗಿ, ಹಸುಗಳಾಗಿ, ಗೋಪಾಲಕ ಹುಡುಗರಾಗಿ ನಿನ್ನ ಲೀಲೆಯನ್ನು ತೋರಿಸಿರುವೆ. ಈ ಎಲ್ಲದರ ರಹಸ್ಯವೇನು? ಆ ನಿಜವಾದ ಬಾಲಕರು ಕರುಗಳು ಹಸುಗಳು ಎಲ್ಲ ಎಲ್ಲಿ ಹೋದವು? ಬಾಲಕರು ಹಸುಗಳು, ಕರುಗಳ ರೂಪವನ್ನು ನೀನೇಕೆ ಪಡೆದಿರುವೆ? ಇದಕ್ಕೆಲ್ಲ ದಯವಿಟ್ಟು ಕಾರಣವನ್ನು ಹೇಳು” ಎಂದನು. ಬಲರಾಮನ ಈ ಕೋರಿಕೆಗೆ ಕೃಷ್ಣನು ಎಲ್ಲವನ್ನು ವಿವರಿಸಿದನು. ಬ್ರಹ್ಮನು ಹುಡುಗರನ್ನು ಕರುಗಳನ್ನೂ ಕದ್ದದ್ದು ವೃಂದಾವನವಾಸಿಗಳಿಗೆ ಇದು ತಿಳಿಯದ ಹಾಗೆ ತಾನೇ ಆ ಎಲ್ಲ ರೂಪವನ್ನು ಪಡೆದಿದ್ದೆಲ್ಲವನ್ನೂ ತಿಳಿಸಿದನು.
ಕೃಷ್ಣ ಬಲರಾಮರು ಹೀಗೆ ಮಾತನಾಡುತ್ತಿದ್ದಾಗ ಬ್ರಹ್ಮನು ಒಂದು ಕ್ಷಣದ ಅನಂತರ ಹಿಂತಿರುಗಿ ಬಂದನು. ಬ್ರಹ್ಮನ ಒಂದು ಕ್ಷಣವೆಂದರೆ ನಮ್ಮ ಸೌರಮಾನದ ಲೆಕ್ಕಾಚಾರದ ಪ್ರಕಾರ ಒಂದು ವರ್ಷ. ತಾನು ಹುಡುಗರನ್ನೂ ಕರುಗಳನ್ನೂ ಕದ್ದಿದ್ದರಿಂದ ಏನೇನು ಬದಲಾವಣೆಯಾಗಿದೆ ಎಂದು ತಮಾಷೆ ನೋಡಲು ಅವನು ಹಿಂತಿರುಗಿದ್ದನು.
ಆದರೆ ಅವನಿಗೆ ಒಂದು ಕಡೆ ತಾನು ಬೆ೦ಕಿಯೊಡನೆ ಸರಸವಾಡುತ್ತಿದ್ದೇನೆ ಎಂಬ ಹೆದರಿಕೆಯೂ ಆಯಿತು. ಏಕೆಂದರೆ ಕೃಷ್ಣನು ಅವನ ಪ್ರಭು. ಆದರೆ ಅದೇ ಕೃಷ್ಣನ ಕರುಗಳನ್ನೂ ಗೆಳೆಯರನ್ನೂ ಅವನು ಕದ್ದೊಯ್ದಿದ್ದ. ಆದ್ದರಿಂದ ಅವನಿಗೆ ಆತಂಕವಾಗಿ ಒಂದು ಕ್ಷಣದಲ್ಲೇ ಹಿಂತಿರುಗಿ ಬಂದು ಬಿಟ್ಟಿದ್ದನು.
ಹಾಗೆ ಬಂದು ಪರಿಸ್ಥಿತಿಯನ್ನು ನೋಡಿದಾಗ ಅವನಿಗೆ ಆಶ್ಚರ್ಯವಾಗಿತ್ತು. ತಾನು ಅವರೆಲ್ಲರನ್ನೂ ಕದ್ದೊಯ್ದು ತನ್ನ ನಿಗೂಢ ಶಕ್ತಿಯಿಂದ ಅವರೆಲ್ಲರಿಗೂ ನಿದ್ರೆ ಬರುವಂತೆ ಮಾಡಿದ್ದೆ ಎಂದು ಖಚಿತವಾಗಿದ್ದರೂ, ಅವರೆಲ್ಲರೂ ತಾನು ಅವರನ್ನು ಮೊದಲು ನೋಡಿದಾಗ ಆಡುತ್ತಿದ್ದ ಹಾಗೆ ಈಗಲೂ ಕೃಷ್ಣನೊಂದಿಗೆ ಆಡುತ್ತಿರುವುದನ್ನು ಕಂಡನು.
ಆಗ ಬ್ರಹ್ಮನು ಈ ರೀತಿ ಯೋಚಿಸತೊಡಗಿದನು “…. ಹುಡುಗರನ್ನೂ ಕರುಗಳನ್ನೂ ಹಸುಗಳನ್ನೂ ನಾನು ಕರೆದೊಯ್ದೆ. ಅವರೆಲ್ಲರೂ ಖಂಡಿತವಾಗಿಯೂ ಈಗಲೂ ನಿದ್ರೆ ಮಾಡುತ್ತಿದ್ದಾರೆ. ಆದರೆ ಅವರೆಲ್ಲರೂ ಈಗ ಕೃಷ್ಣನೊಂದಿಗೆ ಆಡುತ್ತಿರುವುದು ಹೇಗೆ ಸಾಧ್ಯ? ನನ್ನ ನಿಗೂಢ ಶಕ್ತಿಯ ಪ್ರಭಾವ ಅವರ ಮೇಲೆ ಆಗಲಿಲ್ಲವೇ? ಇಡೀ ಒಂದು ವರ್ಷ ಅವರೆಲ್ಲ ಕೃಷ್ಣನೊಂದಿಗೆ ಆಡುತ್ತಿರುವುದು ಹೇಗೆ?”
ಇದನ್ನೆಲ್ಲಾ ತಿಳಿದಿದ್ದ ಕೃಷ್ಣನು ಆಗ ಬ್ರಹ್ಮನಿಗೆ ಅವರೆಲ್ಲಾ ನಿಜವಾದ ಹುಡುಗರು, ಹಸುಗಳು ಮತ್ತು ಕರುಗಳಲ್ಲವೆಂದು ಮನದಟ್ಟು ಮಾಡಿಕೊಡಲು ಅವರೆಲ್ಲರೂ ವಿಷ್ಣುವಿನ ಸ್ವರೂಪವನ್ನು ತಾಳುವಂತೆ ಮಾಡಿದನು. ಈ ವಿಷ್ಣುವಿನ ರೂಪಗಳಿಗೆಲ್ಲಾ ನೀಲಿಬಣ್ಣ ಪೀತಾಂಬರ ಉಡುಗೆ, ಅವರೆಲ್ಲರಿಗೂ ನಾಲ್ಕು ಕೈಗಳಿದ್ದವು.
ಶಂಖ, ಚಕ್ರ, ಗದಾ, ಪದ್ಮಗಳಿಂದ ಅವರು ಶೋಭಿಸುತ್ತಿದ್ದರು. ಅವರ ಶಿರಗಳ ಮೇಲೆ ಹೊಳೆಯುತ್ತಿದ್ದ ಬಂಗಾರದ ಆಭರಣದ ಕಿರೀಟಗಳು; ಅವರು ಮುತ್ತುಗಳನ್ನೂ, ಕರ್ಣಾಭರಣಗಳನ್ನೂ ಧರಿಸಿದ್ದರು. ಸೊಂಟಕ್ಕೆ ಪುಷ್ಪಹಾರಗಳನ್ನೂ ಸುತ್ತಿಕೊಂಡಿದ್ದರು. ಅವರ ಎದೆಗಳ ಮೇಲೆ ಶ್ರೀವತ್ಸದ ಗುರುತು. ಅವರ ತೋಳುಗಳಿಗೆ ತೋಳಬಂದಿಗಳು ಮತ್ತು ಇತರ ಹೊಳಪಿನ ಒಡವೆಗಳು, ಅವರ ಕುತ್ತಿಗೆಗಳು ಶಂಖದಂತೆಯೇ ಇದ್ದವು.

ಕಾಲುಗಳು ಗೆಜ್ಜೆಗಳಿಂದ ಅಲಂಕರಿಸಲ್ಪಟ್ಟಿದ್ದವು. ನಡುಗಳಿಗೆ ಬಂಗಾರದ ಪಟ್ಟಿ ಮತ್ತು ಕೈ ಬೆರಳುಗಳಿಗೆ ಆಕರ್ಷಕ ಉಂಗುರಗಳಿದ್ದವು. ಚರಣ ಕಮಲಗಳಿಂದ ಹಿಡಿದು ಶಿರದ ತುದಿಯವರೆವಿಗೆ ತುಳಸಿ ಮಾಲೆಯನ್ನು ಹಾಕಲಾಗಿತ್ತು. ಇವೆಲ್ಲದರಿಂದ ಅವರೆಲ್ಲರೂ ಅಲೌಕಿಕ ಸೌಂದರ್ಯದಿಂದ ಶೋಭಿಸುತ್ತಿದ್ದರು.
ಅವರು ಬೀರುತ್ತಿದ್ದ ಮಂದಹಾಸ ಬೆಳದಿಂಗಳಿನಂತಿತ್ತು. ಕಣ್ಣಿನ ನೋಟವು ಉಷಃಕಾಲದಂತಿತ್ತು. ವಿಷ್ಣುವು ಸಾತ್ತ್ವಿಕ ಗುಣವನ್ನು, ಬ್ರಹ್ಮನು ರಾಜಸ ಗುಣವನ್ನು, ಶಿವನು ತಮೋಗುಣವನ್ನು ಪ್ರತಿನಿಧಿಸುತ್ತಾರೆ. ಬ್ರಹ್ಮಾಂಡದಲ್ಲಿ ಪ್ರತಿಯೊಂದನ್ನು ರಕ್ಷಿಸುವ ವಿಷ್ಣುವು ಬ್ರಹ್ಮ ಮತ್ತು ಶಿವರ ಸೃಷ್ಟಿಕರ್ತ ಮತ್ತು ಪಾಲಕ.
ಇವಿಷ್ಟಲ್ಲದೆ ಇನ್ನೂ ಬಹು ಸಂಖ್ಯೆಯಲ್ಲಿ ಬ್ರಹ್ಮರು, ಶಿವರು, ದೇವತೆಗಳು ಇರುವೆಗಳು ಹಾಗೇ ಇನ್ನೂ ಗಣನೆಗೂ ಬಾರದ ಚರಾಚರ ಜೀವಿಗಳು ಶ್ರೀ ವಿಷ್ಣುವಿನ ಸುತ್ತುಗಟ್ಟಿ ನರ್ತನ ಮಾಡುತ್ತಿದ್ದುದನ್ನು ಬ್ರಹ್ಮನು ಕಂಡನು. ಕೃಷ್ಣನನ್ನು ಅವನು ವಿಷ್ಣುರೂಪಗಳಿಗೆ ವಿಸ್ತರಣೆ ಮಾಡಿಕೊಂಡದ್ದನ್ನು ಬ್ರಹ್ಮನು ಅರ್ಥ ಮಾಡಿಕೊಂಡನು.
ಪರಮ ಪ್ರಭುವಿನ ಶಕ್ತಿಯ ವಿಸ್ತರಣೆಯಿಂದ ಬ್ರಹ್ಮಾಂಡದ ಎಲ್ಲ ಚರಾಚರವಸ್ತುಗಳಿಗೆ ಅಸ್ತಿತ್ವವಿದೆ ಎಂದು ತಿಳಿದನು. ಒಂದು ಬೊಂಬೆಯಂತೆ ತಾನೂ ಭೌತಿಕ ಶಕ್ತಿಯ ಸೃಷ್ಟಿ ಎನ್ನುವುದು ಅವನಿಗೆ ಅರಿವಾಯಿತು. ಸೂತ್ರದ ಬೊಂಬೆಗೆ ತಾನೇ ಕುಣಿಯುವ ಸ್ವಾತಂತ್ರ್ಯವಿಲ್ಲ. ಅದು ಕುಣಿಸುವವನ ನಿರ್ದೇಶನದಂತೆ ಕುಣಿಯುತ್ತದೆ. ಹಾಗೆಯೇ ಎಲ್ಲ ದೇವತೆಗಳೂ ಮತ್ತು ಜೀವಿಗಳೂ ದೇವೋತ್ತಮ ಪರಮ ಪುರುಷನ ಅಧೀನರು.
ಕೃಷ್ಣನು ಬ್ರಹ್ಮನ ಬಗ್ಗೆ ಅನುಕಂಪವುಳ್ಳವನಾಗಿ ಬ್ರಹ್ಮನನ್ನು ಮತ್ತಷ್ಟು ಗೊಂದಲಕ್ಕೀಡು ಮಾಡದಿರಲು ಇಡೀ ದೃಶ್ಯದ ಮೇಲೆ ಯೋಗ ಮಾಯೆಯ ತೆರೆಯನ್ನೆಳೆದನು. ಹೀಗೆ ಕೃಷ್ಣನು ತನ್ನ ನಿಗೂಢ ಶಕ್ತಿಯನ್ನು ಮರೆ ಮಾಚಿದಾಗ ಬ್ರಹ್ಮನಿಗೆ ಸ್ವಲ್ಪ ನಿರಾಳವಾಯಿತು. ಅವನಿಗೆ ಯಾವುದೋ ಒಂದು ನಿಸ್ತೇಜ ಸ್ಥಿತಿಯಿಂದ ಹೊರಬಂದಂತಾಯಿತು.
ಬಹಳ ಕಷ್ಟದಿಂದ ಕಣ್ಣುಗಳನ್ನು ತೆರೆಯಲಾರಂಭಿಸಿದನು. ಆಗ ಅವನಿಗೆ ಸುತ್ತಲೂ ಗಿಡಮರಗಳಿಂದ ಕೂಡಿದ ಪರಮ ಭವ್ಯ ವೃಂದಾವನದ ಅತ್ಯಂತ ಮನೋಹರ ದೃಶ್ಯವು ಕಂಡು ಬಂದಿತು. ಆಲ್ಲಿನ ಅಲೌಕಿಕ ನಾಡು ಅವನಿಗೆ ಮೆಚ್ಚುಗೆಯಾಯಿತು. ಅಲ್ಲಿರುವ ಜೀವಿಗಳು ಸಾಮಾನ್ಯ ಸ್ವಭಾವದಿಂದ ಭಿನ್ನವಾಗಿದ್ದವು. ವೃಂದಾವನದ ಕಾಡಿನಲ್ಲಿ ಹುಲಿಗಳಂತಹ ಕ್ರೂರ ಪ್ರಾಣಿಗಳು, ಜಿಂಕೆಗಳು ಮತ್ತು ಮನುಷ್ಯರೊಡನೆ ಶಾಂತವಾಗಿ ಬದುಕುತ್ತಿದ್ದವು.
ವೃಂದಾವನದಲ್ಲಿ ದೇವೋತ್ತಮ ಪರಮ ಪುರುಷನೇ ವಾಸವಾಗಿದ್ದುದರಿಂದ ಆ ಸ್ಥಳವು ಅಲೌಕಿಕವಾಗಿತ್ತು. ಅಲ್ಲಿ ಕಾಮವಾಗಲೀ ಅತಿ ಆಸೆಯಾಗಲೀ ಇರಲಿಲ್ಲ. ಹೀಗೆ ದೇವೋತ್ತಮ ಪರಮ ಪುರುಷನು ಪುಟ್ಟ ಗೋಪಬಾಲಕನ ಪಾತ್ರವನ್ನು ನಿರ್ವಹಿಸುತ್ತಿದ್ದುದನ್ನು ಬ್ರಹ್ಮನು ಕಂಡನು. ಒಂದು ವರ್ಷದ ಹಿಂದೆ ಅವನ ಗೆಳೆಯರೂ, ಹಸುಗಳೂ, ಕರುಗಳೂ ಮಾಯವಾದಾಗ ಅವನು ಮಾಡುತ್ತಿದ್ದಂತೆಯೇ ಈಗಲೂ ಆ ಪುಟ್ಟ ಮಗುವು ಎಡಗೈಯಲ್ಲಿ ಸ್ವಲ್ಪ ಆಹಾರವನ್ನಿಟ್ಟುಕೊಂಡು ಅವರನ್ನೆಲ್ಲಾ ಹುಡುಕುತ್ತಿದ್ದುದನ್ನು ಬ್ರಹ್ಮನು ಕಂಡನು.
ಈ ಎಲ್ಲ ಸತ್ಯವನ್ನು ಅರಿತ ಬ್ರಹ್ಮನು ಕೂಡಲೇ ತನ್ನ ಹಂಸವಾಹನದಿಂದ ಇಳಿದು ಒಂದು ಚಿನ್ನದ ದಂಡದಂತೆ ಕೃಷ್ಣನ ಮುಂದೆ ಬಿದ್ದನು. ಅವನ ನಾಲ್ಕು ಶಿರಗಳ ಮೇಲಿನ ಕಿರೀಟಗಳು ಶ್ರೀಕೃಷ್ಣನ ಚರಣ ಕಮಲಗಳನ್ನು ಸ್ಪರ್ಶಿಸಿದವು. ಬ್ರಹ್ಮನು ಅತ್ಯಾನಂದದಿಂದ ಆನಂದಬಾಷ್ಪವನ್ನು ಸುರಿಸಿ ಕೃಷ್ಣನ ಪಾದಗಳನ್ನು ತೊಳೆದನು.
ಪ್ರಭುವಿನ ಅದ್ಭುತ ಲೀಲೆಗಳನ್ನು ಸ್ಮರಿಸಿಕೊಂಡು ಮತ್ತೆ ಮತ್ತೆ ಕೃಷ್ಣನ ಪಾದಗಳಿಗೆರಗಿದನು. ಬಹು ಹೊತ್ತು ಹೀಗೆ ನಮಸ್ಕಾರ ಮಾಡುತ್ತಲೇ ಇದ್ದು ಬ್ರಹ್ಮನೇ ಎದ್ದು ನಿಂತು ಕೈಗಳಿಂದ ಕಣ್ಣನ್ನು ಉಜ್ಜಿಕೊಂಡು, ಪ್ರಭುವನ್ನು ತನ್ನ ಮುಂದೆ ಕಂಡು ಗೌರವ ಹಾಗೂ ಭಕ್ತಿಯಿಂದ ಪ್ರಾರ್ಥನೆ ಮಾಡಲಾರಂಭಿಸಿದನು.
ಬ್ರಹ್ಮನು ಹೀಗೆಂದನು. “…. ನನ್ನ ಪ್ರೀತಿಯ ಪ್ರಭುವೇ, ನೀನೊಬ್ಬನೇ ಪೂಜ್ಯನಾದ ದೇವೋತ್ತಮ ಪರಮ ಪುರುಷನು. ಆದುದರಿಂದ ನಿನ್ನನ್ನು ಸುಪ್ರೀತಗೊಳಿಸಲು ನನ್ನ ದೀನ ಪ್ರಣಾಮಗಳನ್ನೂ ಪ್ರಾರ್ಥನೆಗಳನ್ನೂ ಅರ್ಪಿಸುತ್ತಿದ್ದೇನೆ. ನಿನ್ನ ದೇಹವು ನೀರು ತುಂಬಿದ ಮೋಡಗಳ ಬಣ್ಣವನ್ನು ಹೊಂದಿದೆ.
ನಿನ್ನ ಪೀತಾಂಬರದಿಂದ ಹೊರ ಹೊಮ್ಮುತ್ತಿರುವ ವಿದ್ಯುತ್ ಪ್ರಭೆಯಿಂದ ನೀನು ಹೊಳೆಯುತ್ತಿದ್ದೀಯೆ…. ನಾನು ಎಲ್ಲ ಜಗತ್ತನ್ನು ಸೃಷ್ಟಿಸಿದ್ದೇನೆ ಎಂದೂ ಭಾವಿಸುತ್ತಾರೆ. ಆದರೆ ನೀನು ನನ್ನ ಕಣ್ಣ ಮುಂದೆ ಮಗುವಿನ ರೂಪದಲ್ಲಿ ನಿಂತಿದ್ದರೂ ನಿನ್ನನ್ನು ನಾನು ಅರ್ಥ ಮಾಡಿಕೊಳ್ಳಲಾರೆ ಎಂಬುದು ಸ್ಪಷ್ಟವಾಯಿತು.
ನೀನೇ ನಿನ್ನ ಗೆಳೆಯರು ಕರುಗಳು ಮತ್ತು ಹಸುಗಳೊಡನೆ ಆಟವಾಡಿಕೊಂಡಿದ್ದೀಯೆ. ಇದರಿಂದ ನೀನು ವಿದ್ಯಾಭ್ಯಾಸವಿಲ್ಲದವನೆಂದು ತೋರಬಹುದು. ನೀನು ನಿನ್ನ ಕೈಯಲ್ಲಿ ಆಹಾರವನ್ನು ಹಿಡಿದುಕೊ೦ಡು ನಿನ್ನ ಕರುಗಳನ್ನು ಹುಡುಕುತ್ತಿರುವಾಗ ಒಬ್ಬಹಳ್ಳಿಯ ಹುಡುಗನಂತೇ ಕಾಣುತ್ತೀಯ.
“ನೀನು ಗೋಪ ಬಾಲಕನಾಗಿ ಕಾಣಿಸಿಕೊಂಡಿರುವುದು ನಿನ್ನ ಭಕ್ತರಿಗಾಗಿ. ನಿನ್ನ ಹಸುಗಳನ್ನೂ ಕರುಗಳನ್ನೂ ಕದ್ದು ನಾನು ಅಪರಾಧವನ್ನು ಮಾಡಿದ್ದರೂ ನೀನು ನನ್ನಲ್ಲಿ ಕರುಣೆ ತೋರುತ್ತಿದ್ದೀಯ” ಎಂದನು. ಬ್ರಹ್ಮನಿಗೆ ತನ್ನ ಸ್ಥಾನವೇನೆಂಬುದೀಗ ಅರಿವಾಗಿತ್ತು.
ಅವನು ಸೃಷ್ಟಿಕರ್ತನೆನಿಸಿಕೊಂಡಿದ್ದರೂ ಕೃಷ್ಣನ ಶಕ್ತಿಯ ಮುಂದೆ ಅದೆಲ್ಲ ಗೌಣವೆನಿಸಿತು. ಇದೆಲ್ಲವನ್ನು ಅರಿತ ಬ್ರಹ್ಮನು ಮತ್ತೆ ಭಕ್ತಿಯಿಂದ “…. ಆದ್ದರಿಂದ ನನ್ನ ಪ್ರೀತಿಯ ಪ್ರಭುವೇ ನಾನು ಯಾವುದೇ, ಜನ್ಮದಲ್ಲಿ ಹುಟ್ಟಲಿ. ನಿನ್ನ ಭಕ್ತನಾಗುವ ಅವಕಾಶವನ್ನು ಕೊಡು. ನಾನು ಹೇಗೆ ಇರಲಿ ಎಲ್ಲೇ ಇರಲಿ ನಿನ್ನ ದಿವ್ಯ ಸನ್ನಿಧಾನದಲ್ಲಿ ಸೇವೆ ಮಾಡಿಕೊಂಡಿರಲು ಅವಕಾಶವನ್ನು ನೀಡು” ಎಂದು ಪ್ರಾರ್ಥಿಸಿದನು.
ಹೀಗೆ ವಿಶ್ವದ ಒಡೆಯನಾದ ಬ್ರಹ್ಮನು ದೇವೋತ್ತಮ ಪರಮ ಪುರುಷನಿಗೆ ತನ್ನ ವಿನಮ್ರ ಮತ್ತು ಗೌರವ ಪೂರ್ವಕ ಪ್ರಣಾಮಗಳನ್ನು ಮೂರು ಬಾರಿ ಅರ್ಪಿಸಿ ಬ್ರಹ್ಮಲೋಕವೆಂಬ ಹೆಸರಿನ ತನ್ನ ನಿವಾಸಕ್ಕೆ ಹಿಂದಿರುಗಲು ಸಿದ್ಧನಾದನು. ದೇವೋತ್ತಮ ಪರಮ ಪುರುಷನು ತನ್ನ ಕೈ ಸನ್ನೆಯಿಂದ ಅವನು ಹಿಂತಿರುಗುವುದಕ್ಕೆ ಅಪ್ಪಣೆ ಕೊಟ್ಟನು.
ಬ್ರಹ್ಮನು ತೆರಳುತ್ತಲೇ, ಶ್ರೀ ಕೃಷ್ಣನು ಯಮುನಾ ನದಿ ತೀರದಲ್ಲಿ ತನ್ನ ಗೋವುಗಳು ಮತ್ತು ಗೋಪಾಲ ಬಾಲಕರನ್ನು ಮತ್ತೆಸೇರಿದನು. ಅವರೆಲ್ಲರೂ ಒಂದು ವರ್ಷದ ಹಿಂದೆ ಮಾಯವಾದಾಗ ಯಾವ ಸ್ಥಿತಿಯಲ್ಲಿದ್ದರೋ ಹಾಗೆಯೇ ಈಗಲೂ ಕಾಣಿಸಿಕೊಂಡರು.
(ಮುಂದುವರಿಯುವುದು)






Leave a Reply