-ಶ್ರೀ ಚಂಚಲಾಪತಿ ದಾಸ
“ಮರೆಹೊಕ್ಕವರಿಗೆ ಆಸರೆಕೊಡುವ ಸ್ವಭಾವದ ಮತ್ತು ಚರಿತ್ರೆಯಲ್ಲಿ ಶ್ಲಾಘನೆಗೆ ಪಾತ್ರನಾದ ಪರೀಕ್ಷಿತ ಮಹಾರಾಜನು ಶರಣಾಗತನಾದ ಮತ್ತು ಕಾಲಿಗೆ ಬಿದ್ದ ಬಡ ಕಲಿಯನ್ನು ಕೊಲ್ಲಲಿಲ್ಲ. ಆದರೆ, ಸಹಾನುಭೂತಿಯಿಂದ ನಸುನಕ್ಕನು. ಏಕೆಂದರೆ, ಅವನು ಬಡವರಲ್ಲಿ ಕರುಣೆ ಉಳ್ಳವನಾಗಿದ್ದನು.” (ಭಾಗವತ, 1.17.30)

ಸಾಮಾನ್ಯ ಕ್ಷತ್ರಿಯನೂ ಕೂಡ ಶರಣಾಗತನನ್ನು ಕೊಲ್ಲುವುದಿಲ್ಲ. ಹೀಗಿರುವಾಗ ಸ್ವಾಭಾವಿಕವಾಗಿ ದೀನರಲ್ಲಿ ದಯೆ ಮತ್ತು ಸಹಾನುಭೂತಿ ಉಳ್ಳ ಮಹಾರಾಜ ಪರೀಕ್ಷಿತನ ಬಗ್ಗೆ ಹೇಳುವುದೇನು! ಅವನು ನಗುತ್ತಿದ್ದುದು ಏಕೆಂದರೆ ಕೃತಕ ವೇಷಧಾರಿಯಾದ ಕಲಿಯು ತಾನು ತಳ ವರ್ಗದವ ಎಂದು ಪರಿಚಯ ಮಾಡಿಕೊಂಡಿದ್ದ.
ತಾನು ಕೊಲ್ಲಲು ಇಚ್ಛಿಸಿದಾಗ, ತನ್ನ ಹರಿತವಾದ ಖಡ್ಗದಿಂದ ಯಾರೂ ರಕ್ಷಿತರಾಗದಿರುವಾಗ, ಕೆಳ ವರ್ಗದ ಬಡಪಾಯಿಯಾದ ಕಲಿಯು ಸಕಾಲದಲ್ಲಿ ಶರಣಾಗತನಾಗಿ ಬದುಕಿದ್ದು ವಿಪರ್ಯಾಸ. ಆದುದರಿಂದ ಪರೀಕ್ಷಿತ ರಾಜನ ಮಹಿಮೆ ಮತ್ತು ದಯಾಪರತೆಗಳನ್ನು ಚರಿತ್ರೆಯಲ್ಲಿ ಶ್ಲಾಘಿಸಲಾಗಿದೆ. ಅವನು ದಯೆ ಸಹಾನುಭೂತಿಗಳಿಂದ ಕೂಡಿದ ಚಕ್ರವರ್ತಿಯಾಗಿದ್ದು, ತನ್ನ ಶತ್ರು ಬಂದು ಶರಣಾದರೂ ಸ್ವೀಕರಿಸಲು ತಕ್ಕವನಾಗಿದ್ದನು. ಹೀಗೆ ಕಲಿಪುರುಷನು ವಿಧಿಯ ಇಚ್ಛೆಯಂತೆ ರಕ್ಷಿಸಲ್ಪಟ್ಟನು.
ಈ ಶ್ಲೋಕವು ಕಲಿ ಪುರುಷನು ಕಾಲಿಗೆರಗಿದಾಗ ಪರೀಕ್ಷಿತ ಮಹಾರಾಜನ ಪ್ರತಿಕ್ರಿಯೆಯನ್ನು ವಿವರಿಸುತ್ತದೆ. ರಾಜನ ಕೆಲವು ಅದ್ಭುತ ಗುಣಗಳನ್ನು ಅದು ಹೇಳುತ್ತದೆ. ಅವನು ವೀರ, ಶ್ರೇಷ್ಠ ದೊರೆ, ಅದೇ ಸಮಯದಲ್ಲಿ ದಯಾಳು, ದೀನ ವತ್ಸಲ ಮತ್ತು ಶರಣಾದವರನ್ನು ಕ್ಷಮಿಸುವ ಅರ್ಹತೆ ಉಳ್ಳವನು. ಅವನ ಗುಣಗಾನ ಮಾಡಲಾಗುತ್ತದೆ.
ಆದುದರಿಂದ ಕಲಿ ಪುರುಷನು ಕಾಲಿಗೆರಗಿದಾಗ ಅವನು ಕೊಲ್ಲಲಿಲ್ಲ. ಅವನು ನಗೆ ಬೀರಿದ. ಖಡ್ಗ ಕೈಗೆತ್ತಿಕೊಂಡಾಗ ತಾನು ಯಾರನ್ನೂ ಬಿಡುವುದಿಲ್ಲ. ಆದರೆ ಈಗ ಇವನನ್ನು ಕೊಲ್ಲುವುದಿಲ್ಲ ಎಂದು ರಾಜನು ಯೋಚಿಸಿದನು. ಹೀಗಾಗಿ ಸಕಾಲದಲ್ಲಿ ಶರಣಾದ ಕಲಿ ಪುರುಷನು ರಕ್ಷಿಸಲ್ಪಟ್ಟನು.
ಏಕೆ ಕಾಪಾಡಿದ?
ಪರೀಕ್ಷಿತನು ಕಲಿಯನ್ನು ಏಕೆ ಕಾಪಾಡಿದ? ಅವನನ್ನು ಕೊಲ್ಲಬಹುದಿತ್ತಲ್ಲವೇ? ಅನೇಕ ಬಾರಿ ಈ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಾಗಾಗಿದ್ದರೆ ನಾವು ಆಧ್ಯಾತ್ಮಿಕ ಬದುಕಿಗಾಗಿ ಹೋರಾಡುತ್ತ ಕಲಿಯುಗದಲ್ಲಿ ಇರುತ್ತಿರಲಿಲ್ಲ. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ ಇವು ಕ್ಷತ್ರಿಯನ ಗುಣಗಳು.
ಶೌರ್ಯಂ ತೇಜೋ ಧೃತಿರ್ದಾಕ್ಷಂ ಯುದ್ಧೇ ಚಾಪ್ಯ ಪಲಾಯನಂ ದಾನಮೀಶ್ವರ ಭಾವಶ್ಚ ಕ್ಷಾತ ಕರ್ಮ ಸ್ವಭಾವಜಂ (ಭಗವದ್ಗೀತೆ, 18. 43)
”ಶೌರ್ಯ, ತೇಜಸ್ಸು, ದೃಢ ಸಂಕಲ್ಪ, ದಕ್ಷತೆ, ಯುದ್ಧದಲ್ಲಿ ಧೈರ್ಯ, ಔದಾರ್ಯ ಮತ್ತು ನಾಯಕತ್ವ ಇವು ಕ್ಷತ್ರಿಯರ ಸಹಜ ಗುಣಗಳು.”
ಕ್ಷತ್ರಿಯನ ಗುಣಗಳನ್ನು ಕೃಷ್ಣ ವಿವರಿಸುತ್ತಾನೆ : ಶೌರ್ಯ, ಶಕ್ತಿ, ದೃಢ ಸಂಕಲ್ಪ, ಪರಿಸ್ಥಿತಿಯನ್ನು ನಿಭಾಯಿಸುವ ದಕ್ಷತೆ ಇವು ನಾಯಕನ ಗುಣಗಳು ಅಥವಾ ಅರ್ಹತೆ. ಯುದ್ಧ ಭೂಮಿಯಲ್ಲಿ ಅವನು ಪಲಾಯನ ಮಾಡದೆ ಸವಾಲನ್ನು ಸ್ವೀಕರಿಸುತ್ತಾನೆ. ಅವನು ಉದಾರ ಸ್ವಭಾವದವನು. ಯಾರಾದರೂ ಶರಣಾದರೆ ಅವರನ್ನು ಕೊಲ್ಲುವುದಿಲ್ಲ. ಇದೂ ಕೂಡ ಕ್ಷತ್ರಿಯನ ಗುಣ. ಆದುದರಿಂದ ಕಲಿ ಪುರುಷನು ಶರಣಾದಾಗ ಪರೀಕ್ಷಿತನು ಅವರನ್ನು ಕೊಲ್ಲಲಿಲ್ಲ. ಹೀಗಾಗಿ ಪ್ರಶ್ನೆ ಹಾಗೆ ಉಳಿಯುತ್ತದೆ.

ಅದು ಸರಿಯೇ. ಅವನು ಕಲಿ ಪುರುಷ, ಸಾಮಾನ್ಯ ಶತ್ರುವಲ್ಲ. ಅವನು ಸಮಾಜದಲ್ಲಿ ಅಧರ್ಮ ನೆಲೆಸುವಂತೆ ಮಾಡುವನು ಎಂದು ಗೊತ್ತಿದ್ದರೂ ಅವನನ್ನು ಬಿಟ್ಟು ಬಿಟ್ಟಿದ್ದೇಕೆ? ಇದು ಶಿಷ್ಟಾಚಾರ, ಶರಣಾದವರನ್ನು ರಕ್ಷಿಸುವ ಕ್ಷತ್ರಿಯ ಗುಣ ಎಂದು ನೀವು ಹೇಳಲಾಗದು. ಶ್ರೀಲ ಪ್ರಭುಪಾದರು ಅದಕ್ಕೆ ಉತ್ತರಿಸಿದ್ದಾರೆ.
ಕಲಿ ಪುರುಷ ಕಾಪಾಡಬೇಕೆಂಬುದು ದೇವರ ಇಚ್ಛೆ. ಏಕೆಂದರೆ ದ್ವಾಪರಯುಗ ಅಂತ್ಯಗೊಳ್ಳುತ್ತಿತ್ತು ಮತ್ತು ಈಗ ಕಲಿ ಪುರುಷನು ಪ್ರಭುವಿನ ಇಚ್ಛೆಯಂತೆ ಪರೀಕ್ಷಿತ ಮಹಾರಾಜನ ರಾಜ್ಯವನ್ನು ಪ್ರವೇಶಿಸಬೇಕು ಹಾಗೂ ಕ್ರಮೇಣ ಸಮಾಜದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಬೇಕು. ಆದುದರಿಂದ ಅದು ದೈವ ನಿಯಮದಂತೆ ನಡೆದಿದೆ ಮತ್ತು ಪರೀಕ್ಷಿತನು ಕಲಿಯನ್ನು ಕೊಳ್ಳದಿರುವುದಕ್ಕೆ ಭಗವಂತನ ಆಂತರಿಕ ಪ್ರೇರಣೆಯೇ ಕಾರಣ.
ಪಾದಗಳಿಗೆರಗುವುದು, ಬಾಗುವುದು ಇವು ಸಾಮಾನ್ಯವಾಗಿ ಶರಣಾಗುವುದರ ಮತ್ತು ಭಕ್ತಿ ಸೇವೆಯ ಮುಖ್ಯವಾದ ಅಂಶಗಳು. ಶ್ರೀಲ ಪ್ರಭುಪಾದರು ಬೋಧಿಸಿರುವ ಸಂಸ್ಕೃತಿಯಂತೆ ನಾವು ದೇವರ ವಿಗ್ರಹವನ್ನು ಅಥವಾ ಉನ್ನತಿ ಹೊಂದಿದ ಭಕ್ತರನ್ನು ನೋಡಿದ ಕೂಡಲೇ ನಮಗೆ ಗೌರವ ಸಲ್ಲಿಸಬೇಕೆನಿಸುತ್ತದೆ. ಆಧ್ಯಾತ್ಮಿಕ ಗುರುಗಳನ್ನು ಕಂಡಾಗ ನಾವು ಬಾಗಿ ವಂದಿಸಬೇಕೆಂದು ಹೇಳಲಾಗಿದೆ.
ಆದುದರಿಂದ ಭಕ್ತಿಯಲ್ಲಿ ಬಾಗಿ ವಂದಿಸುವುದು ಒಂದು ಮುಖ್ಯವಾದ ಆಚರಣೆ. ಇದು ಶರಣಾಗತಿಯ ಭಾವವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ನೆರವಾಗುತ್ತದೆ. ಈ ಶರಣಾಗತಿ ಭಾವವು ನಾವು ಯಾರಿಗೆ ನಮಿಸುತ್ತಿರುವೆವೋ ಅವರಲ್ಲಿ ಕರುಣೆ ಮತ್ತು ದಯೆಯನ್ನು ಮೂಡಿಸುತ್ತದೆ. ನಮಗೆ ಕೃಷ್ಣನ ಕೃಪೆ ಮತ್ತು ದಯೆ ಬೇಕು ಮತ್ತು ಅದಕ್ಕಾಗಿ ತಲೆ ಬಾಗಿ ಪ್ರಾರ್ಥಿಸುತ್ತೇವೆ.
ಆದುದರಿಂದ ವಿಗ್ರಹದ ಮುಂದೆ ಬಂದ ಕೂಡಲೇ ನಾವು ತಲೆ ಬಾಗಿ ವಂದಿಸುತ್ತೇವೆ. ಅನೇಕ ಧರ್ಮೀಯರು ಮತ್ತು ಕೆಲವು ವೈಷ್ಣವ ಸಂಪ್ರದಾಯಸ್ಥರಲ್ಲಿ ಈ ಸಂಸ್ಕೃತಿ ಇಲ್ಲದಿರುವುದು ದುರ್ದೈವದ ಸಂಗತಿ.
ಪ್ರಹ್ಲಾದನ ಮಹಿಮೆ
ಪ್ರಭುವು ನರಸಿಂಹನ ಅವತಾರದಲ್ಲಿ ಪ್ರತ್ಯಕ್ಷನಾದಾಗ ತೋರಿದ ಲೀಲೆಯನ್ನು ಭಾಗವತದಲ್ಲಿ ವರ್ಣಿಸಲಾಗಿದೆ. ಹಿರಣ್ಯ ಕಷಿಪುವನ್ನು ವಧಿಸಿದ ಮೇಲೆ ಭಗವಂತನು ಕೋಪೋದ್ರಿಕ್ತನಾಗಿದ್ದ. ಯಾರಿಂದಲೂ ಅಲ್ಲಿಗೆ ಬಂದು ನರಸಿಂಹನನ್ನು ಸ್ತುತಿಸಿದರು. ಆದರೆ ನರಸಿಂಹನಲ್ಲಿ ಕಿಂಚಿತ್ತೂ ಬದಲಾವಣೆಯಾಗಲಿಲ್ಲ.

ಆಗ ಬ್ರಹ್ಮನು ಲಕ್ಷ್ಮೀದೇವಿಗೆ ಮನವಿ ಮಾಡಿಕೊಂಡನು. ಆದರೆ ಪ್ರಭುವಿನ ಕೋಪ ಶಮನವಾಗಲಿಲ್ಲ. ಹತಾಶನಾದ ಬ್ರಹ್ಮನು ಸುತ್ತಮುತ್ತ ಕಣ್ಣಾಡಿಸಿದ. ಆಗ ಅವನಿಗೆ ಬಾಲಕ ಪ್ರಹ್ಲಾದ ಕಾಣಿಸಿದ. ಅವನು ಕೂಡಲೇ ಪ್ರಹ್ಲಾದನಿಗೆ ಪ್ರಭು ನರಸಿಂಹನಿಗೆ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಿದ.
ಅಲ್ಲಿ ನೆರೆದಿದ್ದ ದೇವತೆಗಳು ಮತ್ತು ಮುನಿಗಳ ಮಧ್ಯೆ ಅವನು ತೀರಾ ಸಣ್ಣ ಬಾಲಕ. ಆದರೂ ಅವನು ನರಸಿಂಹನ ಪಾದಗಳಿಗೆರಗುತ್ತಾನೆ. ನರಸಿಂಹ ಅತ್ತ ನೋಡುತ್ತಾನೆ. ಅವನ ಚರ್ಯೆಯಲ್ಲಿ ತತ್‌ಕ್ಷಣ ಪರಿವರ್ತನೆ. ಬಾಲಕನನ್ನು ನೋಡಿದ ಕೂಡಲೇ ಶ್ರೀ ನರಸಿಂಹ ಕರುಣಾ ಮೂರ್ತಿಯಾಗಿ ಭಾವಪರವಶಗೊಳ್ಳುತ್ತಾನೆ.
ಶ್ರೀ ಚೈತನ್ಯ ಮಹಾಪ್ರಭುಗಳನ್ನು ಕಂಡಾಗ ಭಕ್ತರು ಆನಂದ ಪರವಶರಾಗುತ್ತಿದ್ದರು. ಇಲ್ಲಿ ಭಗವಂತನೇ ಭಾವಪರವಶನಾಗಿದ್ದಾನೆ. ಕೃಷ್ಣನು ಗೀತೆಯಲ್ಲಿ ಅದನ್ನೇ ಹೇಳಿರುವುದು, ನಾನು ಸಮೋ ಹಂ ಸರ್ವ ಭೂತೇಷು – ನನಗೆ ಎಲ್ಲರೂ ಸಮಾನರು. ಆದರೆ ನನ್ನ ಭಕ್ತನು ನನಗೆ ಸ್ನೇಹಿತನು ಮತ್ತು ನಾನು ಅವರಲ್ಲಿರುತ್ತೇನೆ. ಮತ್ತು ಅವನು ನನ್ನಲ್ಲಿರುತ್ತಾನೆ. ಸರಕಾರದಂತೆ ಕೃಷ್ಣನು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಆದರೆ ಕೃಷ್ಣನಿಗೆ ಭಕ್ತರ ವಿಷಯವೇ ಬೇರೆ. ಅವರು ಅವನಲ್ಲಿ ನಿಷ್ಠೆ ಇಟ್ಟಿರುವಂತೆ ಅವನೂ ಕೂಡ ತನ್ನ ಭಕ್ತರಲ್ಲಿ ನಿಷ್ಠೆಹೊಂದಿರುತ್ತಾನೆ. ಇದು ಕೃಷ್ಣನ ವಿಶೇಷ ಗುಣ.
ಹೃದಯದಿಂದ
ತಲೆಬಾಗಿಸಿ ನಮಿಸುವ ಶರಣಾಗತಿ ಕ್ರಿಯೆಯು ದೈಹಿಕ ಮಟ್ಟದಲ್ಲಿ ಮಾತ್ರ ಆಗಬಾರದೆಂದು ಪ್ರಭುಪಾದರು ಎಚ್ಚರಿಸಿದ್ದಾರೆ. ಅದು ಹೃದಯದಿಂದಲೂ ಬರಬೇಕೆಂದು ಅವರು ಹೇಳಿದ್ದಾರೆ. ಅವರು ದಂಡವತ್ ಎಂಬ ಪದವನ್ನು ಬಳಸಿದ್ದಾರೆ. ಕೆಲವು ಶಿಷ್ಯರು ತಮ್ಮ ಗುರುಗಳಿಗೆ ಏನಾದರೂ ಆದೇಶವಿತ್ತಾಗ ಅವರು ಅದನ್ನು ಅನುಸರಿಸುವುದಿಲ್ಲ. ಅವರು ದೇಹ, ಮನಸ್ಸು ಮತ್ತು ಮಾತಿನಲ್ಲಿ ದಂಡವತರಾಗಿರಬೇಕು. ನಾವು ಇಲ್ಲಿ ತಲೆ ಬಾಗಿ ನಮಿಸುವುದರ ಶಕ್ತಿಯನ್ನು ಕಾಣುತ್ತೇವೆ.
ಅಮೇರಿಕದ ಮಂದಿರವೊಂದರಲ್ಲಿ ಅಮೆರಿಕದ ಯುವಕನು ಪ್ರಭುಪಾದರನ್ನು ಭೇಟಿ ಮಾಡಲು ಬರುತ್ತಾನೆ. ಭಕ್ತರು ಅವರಿಗೆ ಬಾಗಿ ನಮಿಸುತ್ತಿರುವುದನ್ನು ನೋಡಿ, ಯಾರಿಗೂ ತಲೆ ಬಾಗದಿರುವುದು ತನ್ನ ಸಿದ್ಧಾಂತ ಎನ್ನುತ್ತಾನೆ. ಬಾಗುವುದೆಂದರೆ ಶರಣಾಗತಿ ಎಂದು ಪ್ರಭುಪಾದರು ಅವನಿಗೆ ವಿವರಿಸಲೆತ್ನಿಸುತ್ತಾರೆ.

ಅವನೆಲ್ಲಿ ಕೆಲಸ ಮಾಡುತ್ತಾನೆಂದು ಅವರು ವಿಚಾರಿಸಿದಾಗ ಅವನು ಅದನ್ನು ತಿಳಿಸುತ್ತಾನೆ. ಹಾಗಾದರೆ ಮೇಲಧಿಕಾರಿಗೆ ತಲೆ ಬಾಗುವೆ ಎಂದು ಪ್ರಭುಪಾದರು ಹೇಳಿದಾಗ ಅವನು, ತಾನು ತನ್ನ ಅಧಿಕಾರಿಗೆ ತಲೆ ಬಾಗುವುದಿಲ್ಲ, ನಾವೆಲ್ಲ ಸಮಾನರು ಎನ್ನುತ್ತಾನೆ. ತಾನು ಯಾರಿಗೂ ಬಾಗುವುದಿಲ್ಲ ಮತ್ತು ತನಗೂ ಯಾರು ಬಾಗಬಾರದು ಎನ್ನುತ್ತಾನೆ.
ಯಾರು ತಲೆ ಬಾಗಿಸಬಾರದೆಂಬ ರೋಗವದು. ಆದರೆ ಸರಿಯಾಗಿ ವಿಶ್ಲೇಷಿಸಿದರೆ ನೀನು ತಲೆ ಬಾಗಿಸುವುದು ಅರ್ಥವಾಗುತ್ತದೆ ಎಂಬ ಪ್ರಭುಪಾದರ ಮಾತಿನಿಂದ ಅವನಿಗೆ ಅಚ್ಚರಿ. ತಾನೆಲ್ಲಿ ತಲೆ ಬಾಗುತ್ತಿರುವೆ ಎಂದು ಕೇಳುತ್ತಾನೆ. ಅದಕ್ಕೆ ಪ್ರಭುಪಾದರು, ಈಗ ನೀನು ಯುವಕ, ಕ್ರಮೇಣ ನೀವು ವೃದ್ಧಾಪ್ಯಕ್ಕೆ ಬಾಗಲೇಬೇಕು.
ಅನಂತರ ರೋಗಗಳಿಗೆ ತಲೆ ಬಾಗಬೇಕಾಗಬಹುದು. ಕೊನೆಯಲ್ಲಿ ಸಾವಿಗೆ ಶರಣಾಗಬೇಕು ಎಂದು ವಿವರಿಸುತ್ತಾರೆ. ನಾನು ಯಾರಿಗೆ ತಲೆ ಬಾಗಿದರೆ ಸಂತೋಷದಿಂದ ಇರಬಲ್ಲೆ ಎಂದು ಒಬ್ಬ ಬುದ್ಧಿವಂತ ಕೇಳುತ್ತಾನೆ. ಕೃಷ್ಣನಿಗೆ ಎಂಬುದೇ ಉತ್ತರ.
ಪ್ರತಿಯೊಂದು ಆತ್ಮವೂ ಸ್ವರೂಪವಾಗಿ ಕೃಷ್ಣನಿಗೆ ಬಾಗಿ ಶರಣಾಗುತ್ತಿರುತ್ತದೆ. ಆದರೆ ಬದ್ಧಾತ್ಮಗಳು ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ.
ರೂಪ ಗೋಸ್ವಾಮಿಯವರು ವಾಚೋ ವೇಗಂ ಮನಸಃಕ್ರೋಧ ವೇಗಂ ಜಿಹ್ವ ವೇಗಂ ಉದರೋಪಸ್ಥ ವೇಗಂ ಎಂದು ಹೇಳುತ್ತಾರೆ. ಅಂದರೆ ಮಾತಿಗೆ ಪ್ರಚೋದನೆ, ನಾಲಗೆಯ ಒತ್ತಾಸೆ ರುಚಿ, ಮಾನಸಿಕ ಒತ್ತಡಕ್ರೋಧ, ಹೆಚ್ಚು ಸೇವಿಸಬೇಕೆಂಬ ಉದರ ಕಟ್ಟಾಸೆ. ಇವುಗಳಲ್ಲದೆ ನಮ್ಮ ದೇಹದ ಅತ್ಯಂತ ಪ್ರಬಲ ಪ್ರಚೋದನೆ ಎಂದರೆ ಜನನಾಂಗಗಳ ಒತ್ತಡ.
ಬದ್ಧಾತ್ಮದ ನಮ್ಮ ಬದುಕನ್ನು ವಿಶ್ಲೇಷಿಸಿದರೆ ಅದು ಈ ಎಲ್ಲ ಒತ್ತಡಗಳಿಗೆ ಬಾಗುತ್ತಿರುವುದು ಸ್ಟಪ್ಟವಾಗುತ್ತದೆ. ಜಗತ್ತಿನ ಅನೇಕ ನಾಯಕರ, ಗಣ್ಯರ ಜೀವನ ಚರಿತೆಯನ್ನು ನೀವು ಓದಿರಬಹುದು. ಈ ಎಲ್ಲ ಒತ್ತಡಗಳಿಗೆ ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಅದನ್ನು ನೀವು ವಿಶ್ಲೇಷಿಸಿದರೆ ಅವರ ಯಶಸ್ಸು ಮತ್ತು ವೈಫಲ್ಯಗಳು ಸ್ಪಷ್ಟವಾಗುತ್ತವೆ. ಅದನ್ನು ಶ್ರೇಷ್ಠ ವ್ಯಕ್ತಿಯ ಜೀವನವೆಂದು ಪರಿಗಣಿಸಲಾಗುತ್ತದೆ. ಆದರೆ ಶ್ರೀಲ ಪ್ರಭುಪಾದರು ಸಂಪೂರ್ಣ ಭಿನ್ನವಾದ ವಿಶ್ಲೇಷಣೆಯನ್ನು ಪ್ರಸ್ತುತ ಪಡಿಸುತ್ತಾರೆ.
ನಾವು ಸತತವಾಗಿ ನಮ್ಮ ದೇಹವನ್ನು ಈ ಒತ್ತಡಗಳಿಗೆ ಬಾಗಿಸುತ್ತೇವೆ ಮತ್ತು ಅದು ನಮ್ಮ ಸ್ಥಿತಿಯಾಗಿದೆ. ಈ ಒತ್ತಡಗಳಿಗೆ ಬಾಗುವುದರ ಪರಿಣಾಮ ಏನು? ಅದು ಹೆಚ್ಚು ಹೆಚ್ಚು ಸಂಕಷ್ಟವನ್ನು ನೀಡುತ್ತದೆ. ಹೋರಾಟವೇ ಬದುಕಿನ ಯಶಸ್ಸು ಎಂದು ಜನರು ಯೋಚಿಸುತ್ತಾರೆ. ಹೀಗಾಗಿ ಇದು ಅಷ್ಟು ಸುಲಭವಾದ ನಿರ್ಣಯವಲ್ಲ.
ಆ ವ್ಯಕ್ತಿಯನ್ನು ನೋಡಿ, ಅವನು ನೂರು ಬಾರಿ ವಿಫಲನಾಗಿರಬಹುದು, ಆದರೆ ಇನ್ನು ಹೋರಾಡುತ್ತಲೇ ಇದ್ದಾನೆ. ಅದು ಅವನ ಹಿರಿಮೆ. ವೈದಿಕ ದೃಷ್ಟಿಯಿಂದ ನೋಡಿದರೆ, ಅವನು ಸಫಲ ಅಥವಾ ವಿಫಲ ಏನಾದರೂ ಆಗಿರಬಹುದು, ಕೊನೆಗೆ ಸಾವು ಅವನನ್ನು ಜಯಿಸುತ್ತದೆ. ಅಂತಿಮವಾಗಿ ಇಂತಹ ಹೋರಾಟಗಳು ವೈಫಲ್ಯದಲ್ಲಿ ಕೊನೆಗೊಳ್ಳುತ್ತವೆ.
ಇದು ಸಾಧನೆ!
1947ರಲ್ಲಿ, ಭಾರತೀಯರ ಸರಾಸರಿ ಜೀವಿತಾವಧಿ 60 ವರ್ಷಗಳಾಗಿತ್ತು. ಸ್ವಾತಂತ್ರ್ಯದ ಆನಂತರ ಸರಕಾರವು ಅದ್ಭುತ ಕಾರ್ಯ ಕ್ಷಮತೆ ತೋರಿದೆ. ಆರೋಗ್ಯ, ಸಂಶೋಧನೆ, ತಂತ್ರಜ್ಞಾನ ಎಲ್ಲವೂ ಸುಧಾರಣೆಗೊಂಡಿವೆ. ಇವು ಸರಾಸರಿ ಆಯಸ್ಸು 75-82 ಕ್ಕೆ ಏರಿಸಿದೆ. 60 ರಿಂದ 80 ವರ್ಷ, ನಾವೆಷ್ಟು ಯಶಸ್ಸು ಸಾಧಿಸಿದ್ದೇವೆ ಎಂದು ಅವರು ಹೇಳುತ್ತಾರೆ!

ಆಧ್ಯಾತ್ಮಿಕದ ದೃಷ್ಟಿಯಿಂದ ಇದು ಹಾಸ್ಯಾಸ್ಪದ. 20 ವರ್ಷ ಆಯಸ್ಸು ಹೆಚ್ಚಿಸಿರುವುದರಿಂದ ನಾವೇನು ಸಾಧಿಸಿದ್ದೇವೆ? ವಾಸ್ತವವಾಗಿ ನಾವು ಶಾಶ್ವತವಾದ ಆಧ್ಯಾತ್ಮಿಕ ಆತ್ಮ. ನಮ್ಮ ಶಾಶ್ವತ ಪ್ರಕೃತಿಯನ್ನು ಅರಿಯುವಂತೆ ನಾವು ಪರಿಹಾರ ಕಂಡುಕೊಂಡಿದ್ದೇವೆಯೇ? ಆನಂತದ ಅಸ್ತಿತ್ವಕ್ಕೆ ಹೋಲಿಸಿದಾಗ ಈ 60, 70, 80, 100, 120 ಎಲ್ಲವೂ ಅರ್ಥಹೀನ.
ವಿಜ್ಞಾನ, ತಂತ್ರಜ್ಞಾನ ಇವೆಲ್ಲವೂ ನಕಲಿ ಎಂದು ನಾವು ಹೇಳುತ್ತಿಲ್ಲ. ರೋಗ ಪೀಡಿತರಾದಾಗ ನಾವೂ ಒಳ್ಳೆಯ ಆರೋಗ್ಯ ಸೌಲಭ್ಯಗಳನು ಬಳಸಿಕೊಂಡು ಅದರ ಮೌಲ್ಯವನ್ನು ಅಂಗೀಕರಿಸುತ್ತೇವೆ. ಆದರೆ ಸತ್ಯವನ್ನು ಅರ್ಥ ಮಾಡಿಕೊಳ್ಳಲು ತಾತ್ತ್ವಿಕವಾಗಿ ವಿಶ್ಲೇಷಿಸುವಾಗ, ಇವೆಲ್ಲ ಹೇಗೆ ಅಲ್ಪ ಯಶಸ್ಸುಗಳು ಎಂಬುವುದನ್ನು ನಾವು ಗಮನಿಸಬೇಕು.
ಏಕೆಂದರೆ ಅಂತಿಮವಾಗಿ ನಾವು ಶಾಶ್ವತ ಬದುಕಿಗೆ ಅರ್ಹರು. ಅದಕ್ಕೆ ಬದಲಾಗಿ 20 ವರ್ಷ ಆಯಸ್ಸು ಹೆಚ್ಚಿಸಿಕೊಂಡು ಅನಂತರ ಸತ್ತರೆ ಅದು ಲೌಕಿಕ ದೃಷ್ಟಿಯಿಂದ ಸಾಧನೆಯಷ್ಟೆ. ಆಧ್ಯಾತ್ಮಿಕ ದೃಷ್ಟಿಯಿಂದ ಅದನ್ನು ನಾವು ಅಲ್ಪ ಅಥವಾ ನಗಣ್ಯ ಎಂದು ಪರಿಗಣಿಸುತ್ತೇವೆ.
ನಿಯಂತ್ರಣ ಅಗತ್ಯ
ಆತ್ಮದ ಚಿರಂತತೆ, ನಮ್ಮ ಅಸ್ತತ್ವ ಇವುಗಳಿಗೆ ಹೋಲಿಸಿದರೆ ನಮ್ಮ ಲೌಕಿಕ ವಸ್ತುಗಳು ಎಷ್ಟು ನಗಣ್ಯ ಎಂಬ ಮುಖ್ಯ ಸಂದೇಶವನ್ನು ವೈದಿಕ ಸಂಸ್ಕೃತಿ ನೀಡುತ್ತದೆ. ನಾವು ಆಧ್ಯಾತ್ಮಿಕ ಅರಿವಿನ ವೇದಿಕೆಗೆ ಬರಬೇಕು. ಅಲ್ಲಿ ನಾವು ನಮ್ಮ ನಿಜವಾದ ಸ್ವಭಾವವನ್ನು ಅನುಭವಿಸಬಹುದು.
ಆದರೆ ಲೌಕಿಕ ಲೋಕದಲ್ಲಿದ್ದಾಗ ದೇಹವು ಈ ಪ್ರಬಲ ಶಕ್ತಿಗಳನ್ನು ಹೊಂದಿರುತ್ತದೆ. ಮನಸ್ಸಿಗೆ ವೇಗ ಹೇಗೆ ಬಂತೆಂಬ ಬಗೆಗೆ ಕೃಷ್ಣನು ಭಗವದ್ಗೀತೆಯಲ್ಲಿ ಪ್ರಸ್ತಾವಿಸಿರುವುದು ಕುತೂಹಲಕಾರಿಯಾಗಿದೆ. ಪ್ರಭುವು ಇದನ್ನು ಭಿನ್ನವಾಗಿ ವಿಶ್ಲೇಷಿಸುತ್ತಾನೆ. ಇದು ನಮಗೆ ಮುಖ್ಯವಾದುದು, ಏಕೆಂದರೆ ಆಧ್ಯಾತ್ಮಿಕರಾಗಿ ನಮಗೆ ನಮ್ಮ ಮನಸ್ಸಿನ ನಿಯಂತ್ರಣ ಮತ್ತು ಪ್ರಜ್ಞೆಯ ಸುಧಾರಣೆ ಅಗತ್ಯವಾಗಿದೆ. ಇಂದ್ರಿಯಗಳಿಗೂ ಈ ಒತ್ತಡಗಳಿವೆ ಎಂದು ಅವನು ಹೇಳುತ್ತಾನೆ.
ಯತತೋ ಹ್ಯಪಿ ಕೌನ್ತೇಯ ಪರುಷಸ್ಯ ವಿಪಶ್ಚಿತಃ|
ಇಂದಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ|| (ಗೀತೆ 2.60)
ಇಂದ್ರಿಯಗಳು ಎಷ್ಟು ಬಲಶಾಲಿ ಮತ್ತು ಆವೇಶದಿಂದ ಕೆಲಸ ಮಾಡುತ್ತವೆ ಎಂಬುವುದನ್ನು ಕೃಷ್ಣನು ಬೋಧಿಸುತ್ತಾನೆ. ಕೃಷ್ಣನು ಹೇಳುತ್ತಿರುವ ಅಂಶಗಳನ್ನು, ಇಂದ್ರಿಯಾಣಿ ಪ್ರಮಾಥೀನಿಯನ್ನು ವಿವರಿಸಲು ಪ್ರಭುಪಾದರು ಮೂರು ಪದಗಳನ್ನು ಬಳಸುತ್ತಾರೆ. ಈ ಇಂದ್ರಿಯಗಳು ಉದ್ರೇಕಗೊಳ್ಳುತ್ತವೆ ಎಂದರೆ ಅವು ಚುರುಕುಗೊಳ್ಳುತ್ತವೆ.

ಅವು ಹೆಚ್ಚು ಹೆಚ್ಚಾಗಿ ಉದ್ದೀಪನಗೊಳ್ಳುತ್ತವೆ ಎಂಬುವುದು ಅವರು ಬಳಸಿರು ಒಂದು ಪದ. ಮತ್ತೊಂದು ಪದವೆಂದರೆ ಪ್ರಚೋದನೆ ಅಥವಾ ರಭಸ, ವೇಗ. ಇಂದ್ರಿಯ ವಸ್ತುಗಳ ಜೊತೆ ಸಂಪರ್ಕಕ್ಕೆ ಬಂದಾಗ ಅವು ವೇಗದ ಚಟುವಟಿಕೆ ತೋರುತ್ತವೆ. ಮೂರನೇಯ ಪದವೆಂದರೆ, ಅವು ತುಂಬಾ ಶಕ್ತಿಶಾಲಿ.
ಈ ವಿಷಯಗಳನ್ನೆಲ್ಲ ಮಾತನಾಡಿದ ಮೇಲೆ ಕೃಷ್ಣನು ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೋಪಜಾಯತೇ ಎಂದು ಹೇಳುತ್ತಾನೆ. ಇಂದ್ರಿಯ ವಸ್ತುಗಳ ಜೊತೆ ಸಂಪರ್ಕಕ್ಕೆ ಬಂದಾಗ ಇಂದ್ರಿಯಗಳು ತುಂಬ ಶಕ್ತಿಶಾಲಿಯಾಗುತ್ತವೆ. ಅವು ಬಲವಂತದಿಂದ ಮನಸ್ಸನ್ನು ಸೆಳೆದುಕೊಂಡುಬಿಡುತ್ತವೆ. ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ವಿವೇಚನಾಶೀಲರ ಮನಸ್ಸನ್ನೂ ಅವು ಆಕರ್ಷಿಸುತ್ತವೆ. ಏಕೆಂದರೆ ಇಂದ್ರಿಯಗಳು ಉದ್ವಿಗ್ನಗೊಳ್ಳುತ್ತವೆ.
ಮಾನವ ಸಮಾಜದ ಮೇಲೆ ಕಲಿಯುಗದ ಪ್ರಭಾವವನ್ನು ಪ್ರಭುಪಾದರು ವಿವರಿಸುತ್ತಾರೆ. ಇಂದ್ರಿಯ ನಿಯಂತ್ರಣದ ಪ್ರಾಮುಖ್ಯವನ್ನು ನಾವು ಅರ್ಥಮಾಡಿಕೊಂಡಿಲ್ಲ. ಇಂದ್ರಿಯಗಳು ಉದ್ರೇಕಗೊಂಡಾಗ ಜನರು ಅಧೀರರಾಗುತ್ತಾರೆ. ಅವುಗಳನ್ನು ನಿಯಂತ್ರಿಸಲಾಗದು. ಇಂದ್ರಿಯಗಳನ್ನು ನಿಯಂತ್ರಿಸಲಾಗದಿದ್ದಾಗ ನಾವು ಧೀರರಾಗದೆ ಆಧ್ಯಾತ್ಮಿಕ ಜ್ಞಾನವನ್ನು ಗ್ರಹಿಸಲಾರೆವು.
ಕಲಿಯುಗದ ಜನರಲ್ಲಿ ಆಗಿರುವುದು ಅದೇ. ಇವೆಲ್ಲ ಕಲಿಯ ಪ್ರಭಾವದ ಪರಿಣಾಮಗಳು. ಕಲಿಯು ಮಾನವ ಸಮಾಜದೊಳಗೆ ತನ್ನ ಮೊದಲ ಹೆಜ್ಜೆಯನ್ನು ಹೇಗೆ ಊರಿದ್ದಾನೆ ಮತ್ತು ತನ್ನ ಅಧರ್ಮವನ್ನು ಹೇಗೆ ಹರಡಲು ಪ್ರಯತ್ನಿಸುತ್ತಿದ್ದಾನೆ ಎಂಬುವುದನ್ನು ನಾವು ನೋಡುತ್ತಿದ್ದೇವೆ. ಅವನು ಪರೀಕ್ಷಿತ ಮಹಾರಾಜನಿಗೆ ಶರಣಾದ. ಕರುಣಾಮಯಿಯಾದ ಪರೀಕ್ಷಿತನು ಅವನನ್ನು ಕೊಲ್ಲಲಿಲ್ಲ.






Leave a Reply