ಕಾರಮಡೈ ರಂಗನಾಥ ದೇವಾಲಯ

ಚಿತ್ರಲೇಖನ: ಡಾ॥ ಬಿ.ಆರ್‌. ಸುಹಾಸ್‌

ತಮಿಳುನಾಡು, `ದೇವಾಲಯಗಳ ಬೀಡು’ ಎಂದು ಪ್ರಸಿದ್ಧವಾಗಿದೆ. ದೊಡ್ಡ ದೊಡ್ಡ ಗೋಪುರಗಳು, ವಿಶಾಲ ಪ್ರಾಕಾರಗಳ, ಸುಂದರ ಕೆತ್ತನೆಗಳು ಇರುವ, ಭೂರಿ ಭಕ್ತಿಯಿಂದ ತುಂಬಿರುವ ಬೃಹತ್‌ ದೇವಾಲಯಗಳು ತಮಿಳುನಾಡಿನಲ್ಲೆಲ್ಲ ಬಹುಸಂಖ್ಯೆಯಲ್ಲಿ ಕಂಡುಬರುತ್ತವೆ! ಅಂತೆಯೇ, ಇಲ್ಲಿನ ಕೊಯಮತ್ತೂರು ನಗರದಲ್ಲೂ ಅನೇಕ ನೋಡತಕ್ಕ ಸುಂದರ ದೇವಾಲಯಗಳಿವೆ. ಅಂಥ ಒಂದು ದೇವಾಲಯವೇ ಕಾರಮಡೈ ರಂಗನಾಥರ್‌ ದೇವಾಲಯ.

ಮೆಟ್ಟುಪಾಳ್ಯಂ ಎಂಬ ಉಪನಗರದ ಹೆದ್ದಾರಿಯಲ್ಲಿದೆ ಈ ಸುಂದರ ದೇವಾಲಯ. ಲಕ್ಷ್ಮಿ-ವಿಷ್ಣು, ಸೀತೆ-ರಾಮ, ರುಕ್ಮಿಣಿ, ಸತ್ಯಭಾಮಾ-ಶ್ರೀಕೃಷ್ಣ , ನಾರದ-ತುಂಬುರು, ಹನುಮಂತ-ಗರುಡ, ಜಯ-ವಿಜಯ ಮೊದಲಾದ ಕೆತ್ತನೆಗಳ ಸುಂದರವಾದ ಪ್ರವೇಶದ್ವಾರ, ಹಾಗೂ ಎಂಬತ್ತು ಅಡಿಗಳಷ್ಟು ಎತ್ತರದ ಅದ್ಭುತವಾದ ರಾಜಗೋಪುರ, ನಮ್ಮನ್ನು ಸ್ವಾಗತಿಸುತ್ತವೆ. ಪ್ರಾಕಾರದಲ್ಲಿ ಸುಂದರವಾದ ದಶಾವತಾರ ಮೂರ್ತಿಗಳು ಹಾಗೂ ದೇವಾಲಯಕ್ಕೆ ಸಂಬಂಧಿಸಿದ ಕಥೆಯ ಕೆತ್ತನೆಗಳು ಮನಸೆಳೆಯುತ್ತವೆ. ಗರ್ಭಗುಡಿಯಲ್ಲಿ, ಇತರ ರಂಗನಾಥ ದೇವಾಲಯಗಳಲ್ಲಿ ಕಂಡುಬರುವಂತೆ ಮಲಗಿರುವ ವಿಷ್ಣುಮೂರ್ತಿ ಇಲ್ಲಿಲ್ಲ. ಇಲ್ಲಿ ಭಗವಂತನ ಮುಖ ಮಾತ್ರವಿದ್ದು, ಇದು ಸ್ವಯಂಭೂಮೂರ್ತಿ ಎಂದು ಹೇಳುತ್ತಾರೆ. ಗರ್ಭಗುಡಿಯ ಪ್ರವೇಶದಲ್ಲಿ ಶ್ರೀರಾಮಾನುಜರ ವಿಗ್ರಹವಿದೆ. ಸನಿಹದಲ್ಲೇ ಅಮ್ಮನವರ ಮಂದಿರವಿದ್ದು, ಅಲ್ಲಿ ರಂಗನಾಯಕೀದೇವಿಯ ಸುಂದರ ಮೂರ್ತಿಯಿದೆ.

ಇತಿಹಾಸ ಮತ್ತು ಕಥೆಗಳು

ಐತಿಹಾಸಿಕವಾಗಿ ಇದು ಚೋಳರ ಕಾಲದ ದೇವಾಲಯವೆಂದು ಹೇಳಲಾಗಿದೆ. ಕರಿಕಾಲಚೋಳನು ಈ ದೇವಾಲಯಕ್ಕೆ ಸಾಕಷ್ಟು ಸೇವೆ ಮಾಡಿದ್ದಾನೆಂದು ಹೇಳಲಾಗಿದೆ. ತಿರುಮಲೆ ನಾಯಕನು ದೇವಾಲಯ ಗೋಡೆಗಳನ್ನೂ, ದೇವಾಲಯದ ಸುತ್ತಮುತ್ತಲೂ ಮಂಟಪಗಳನ್ನೂ ಕಟ್ಟಿಸಿದನೆಂದು ತಿಳಿದುಬರುತ್ತದೆ. ಅಂತೆಯೇ ಜಯಚಾಮರಾಜೇಂದ್ರ ಒಡೆಯರ್‌ರ ಕಾಲದಲ್ಲೂ ಅನೇಕ ಮಂಟಪಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯ ಶ್ರೀ ರಾಮಾನುಜಾಚಾರ್ಯರೊಂದಿಗೂ ಸಂಬಂಸಿದೆ. ಶ್ರೀರಂಗಂದಿಂದ ತಿರುನಾರಾಯಣಪುರ ಅಥವಾ ಮೇಲುಕೋಟೆಗೆ ಶ್ರೀ ರಾಮಾನುಜಾಚಾರ್ಯರು ಬರುತ್ತಿದ್ದಾಗ ಅವರು ಈ ದೇವಾಲಯವನ್ನು ನೋಡಿ ಇಲ್ಲಿ ವಾಸಿಸಿದ್ದರೆಂದು ಹೇಳುತ್ತಾರೆ. ಇದರ ಸ್ಮರಣಾರ್ಥವಾಗಿಯೇ ಗರ್ಭಗುಡಿಯ ಪ್ರವೇಶದಲ್ಲಿ ಶ್ರೀ ರಾಮಾನುಜರ ಕಲ್ಲಿನ ವಿಗ್ರಹವನ್ನಿರಿಸಲಾಗಿದೆ.

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಎರಡು ಸ್ವಾರಸ್ಯವಾದ ಕಥೆಗಳಿವೆ. ಅವುಗಳನ್ನೀಗ ನೋಡೋಣ. ಒಂದು ಕಥೆಯ ಪ್ರಕಾರ, ಕಾರುಮಡೈಯಲ್ಲಿ ತೋಟ್ಟಿಯಾರರೆಂಬ ಜನಾಂಗದವರು ವಾಸಿಸುತ್ತಿದ್ದರು. ಅವರು ಹಸುಗಳನ್ನು ಮೇಯಿಸುತ್ತಾ ಅವುಗಳ ಹಾಲು ಕರೆದು ಮಾರುತ್ತಾ ಹೊಟ್ಟೆಹೊರೆಯುತ್ತಿದ್ದರು. ಒಂದು ದಿನ, ಅವರಲ್ಲೊಬ್ಬನ ಹಸುವೊಂದು ಹಾಲು ಕರೆಯಲಿಲ್ಲ. ಇದರಿಂದ ಆಶ್ಚರ್ಯಗೊಂಡ ಅವನು, ಆ ಹಸುವಿನ ಮೇಲೆ ಗಮನವಿರಿಸಲು, ಅದು ಒಂದು ಪೊದೆಯಲ್ಲಿ ತನ್ನ ಹಾಲು ಸುರಿಸುತ್ತಿದ್ದುದನ್ನು ಕಂಡ! ಇನ್ನೂ ಆಶ್ಚರ್ಯಗೊಂಡ ಅವನು, ಆ ಪೊದೆಯ ಅಡಿಯಲ್ಲಿ ಏನಿರಬಹುದೆಂದು ನೋಡಲು ಅಲ್ಲಿ ನೆಲವನ್ನು ಅಗೆದ. ಆಗ ಕಾಣಿಸಿಕೊಂಡದ್ದೇ ಶ್ರೀ ರಂಗನಾಥ ಸ್ವಾಮಿಯ ಸ್ವಯಂಭೂ ಮೂರ್ತಿ. ಆದರೆ ಇದು ಸಂಪೂರ್ಣವಾದ ಮಲಗಿರುವ ಮೂರ್ತಿಯಾಗಿರದೇ, ಮೂರ್ತಿಯ ಮುಖ ಮಾತ್ರವಾಗಿತ್ತು. ಇದನ್ನು ನೋಡಿ, ತೋಟ್ಟಿಯಾರರೆಲ್ಲರೂ ಸ್ತಂಭೀಭೂತರಾದರು. ಆ ರಾತ್ರಿ, ತೋಟ್ಟಿಯಾರನ ಕನಸಿನಲ್ಲಿ ಭಗವಂತನೇ ಬಂದು, ಆ ಉದ್ಭವಮೂರ್ತಿಯನ್ನು ಚಂದನಕಾಪುವಿನಿಂದ ಅಲಂಕರಿಸಲು ಹೇಳಿದ. ಅವನು ಹಾಗೆಯೇ ಮಾಡಿದ. ಅನಂತರ ಎಲ್ಲರೂ ಆ ಮೂರ್ತಿಯನ್ನು ಪೂಜಿಸತೊಡಗಿದರು. ಕ್ರಮೇಣ, ದೇವಾಲಯ ನಿರ್ಮಾಣವಾಯಿತು.

ಇನ್ನೊಂದು ಕಥೆಯ ಪ್ರಕಾರ, ಒಬ್ಬ ಬ್ರಿಟಿಷ್‌ ಇಂಜಿನಿಯರ್‌ ದೇವಾಲಯ ಸಮುಚ್ಚಯದ ಬಳಿ ಒಂದು ರೈಲು ಮಾರ್ಗವನ್ನು ಸ್ಥಾಪಿಸಬೇಕೆಂದಿದ್ದ. ಇದರಿಂದ ದೇವಾಲಯದ ಶಾಂತಿಗೆ ಭಂಗ ಬರುತ್ತಿತ್ತು. ಹಾಗಾಗಿ, ಭಕ್ತರು ಇದನ್ನು ಹೇಗಾದರೂ ನಿಲ್ಲಿಸಬೇಕೆಂದು ಭಗವಂತನಲ್ಲಿ ಮೊರೆಯಿಟ್ಟರು. ಅವರ ಮೊರೆಗೆ ಉತ್ತರವೆಂಬಂತೆ, ಶ್ರೀರಂಗನಾಥ ಸ್ವಾಮಿಯೇ ಆ ಬ್ರಿಟಿಷನ ಕನಸಿನಲ್ಲಿ ಬಂದು ರೈಲು ಮಾರ್ಗದ ದಿಕ್ಕನ್ನು ಬದಲಿಸಲು ಆದೇಶಿಸಿದ! ಇದರಿಂದ ಆನಂದಗೊಂಡ ಅವನು, ಅಲ್ಲಿ ರೈಲು ಮಾರ್ಗ ಸ್ಥಾಪನೆಯ ಕಾರ್ಯವನ್ನು ಕೈಬಿಟ್ಟು ದೇವಾಲಯಕ್ಕೆ ಒಂದು ಬಿಳಿಯ ಮರದ ಕುದುರೆಯನ್ನು ಕಾಣಿಕೆಯಾಗಿ ಅರ್ಪಿಸಿದ. ಇಂದಿಗೂ ದೇವಾಲಯದ ಉತ್ಸವಮೂರ್ತಿಯನ್ನು ಈ ಕುದುರೆಯ ಮೇಲೆಯೇ ಮೆರವಣಿಗೆಗೊಯ್ಯಲಾಗುತ್ತದೆ.

ತಲಪುವುದು ಹೇಗೆ?

ಬೆಂಗಳೂರಿನಿಂದ ಕೊಯಮತ್ತೂರಿಗೆ ನೇರವಾದ ಬಸ್ಸುಗಳಿವೆ. ಕಾರಮಡೈ, ಕೊಯಮತ್ತೂರಿನಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಇದು ಮೆಟ್ಟುಪಾಳ್ಯಂ ಹೆದ್ದಾರಿ, ಅಥವಾ ಕೊಯಮತ್ತೂರು-ಊಟಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿದೆ. ಕೊಯಮತ್ತೂರಿನಿಂದ ಕಾರಮಡೈಗೆ ಮೆಟ್ಟುಪಾಳ್ಯಂ/ಊಟಿ ಬಸ್ಸುಗಳಲ್ಲಿ ಹೋಗಬಹುದು, ಇಲ್ಲವೇ ಖಾಸಗಿ ವಾಹನದಲ್ಲಿ ಹೋಗಬಹುದು.

ತೇನ್‌ ತಿರುಪತಿ ದೇವಾಲಯ

ಕಾರಮಡೈ ಬಳಿಯಿರುವ ತೇನ್‌ತಿರುಪತಿ ಎಂಬ ದೇವಾಲಯವು ನೋಡತಕ್ಕದ್ದಾಗಿದೆ. 2000ನೇ ಇಸವಿಯಲ್ಲಿ ನಿರ್ಮಿಸಲಾದ ಈ ಸುಂದರ ದೇವಾಲಯ, ಶ್ರೀನಿವಾಸ ದೇವರ ಶ್ರೀವಿಗ್ರಹ, ನಿತ್ಯಪೂಜೆಗಳು, ಮೊದಲಿಗೆ ದರ್ಶಿಸುವ ಶ್ರೀ ವರಾಹಮೂರ್ತಿ, ಲಡ್ಡು ಪ್ರಸಾದ, ಮೊದಲಾದ ಎಲ್ಲ ವಿಧಗಳಲ್ಲೂ ಆಂಧ್ರದ ಪ್ರಧಾನ ತಿರುಪತಿ ದೇವಾಲಯವನ್ನೇ ಹೋಲುತ್ತದೆ. ಹಾಗಾಗಿ, ಈ ದೇವಾಲಯ ಬಹಳ ಪ್ರಸಿದ್ಧವಾಗಿದೆ.

ಕೊಯಮತ್ತೂರಿನಲ್ಲಿ ನೋಡತಕ್ಕ ಇತರ ದೇವಾಲಯಗಳೆಂದರೆ, ಮರುದಮಲೈ ಷಣ್ಮುಖ ದೇವಾಲಯ, ಈಚನಾರಿ ಗಣೇಶ ದೇವಾಲಯ, ಪೇರೂರ್‌ ಪಟ್ಟೀಶ್ವರರ್‌ ದೇವಾಲಯ, ಧ್ಯಾನಲಿಂಗ ಅಥವಾ ಈಶ-ಯೋಗ ಕೇಂದ್ರ, ಮೆಟ್ಟುಪಾಳ್ಯಂ ಭದ್ರಕಾಳಮ್ಮ ದೇವಾಲಯ, ಕೋಣಿಯಮ್ಮನ್‌ ದೇವಾಲಯ, ಪೊಳ್ಳಾಚಿಯ ಮಾಸಾನಿ ಅಮ್ಮನ್‌ ದೇವಾಲಯ ಮೊದಲಾದವು. ಸುಪ್ರಸಿದ್ಧವಾದ ಪಳನಿ ಷಣ್ಮುಖ ದೇವಾಲಯ ಇಲ್ಲಿಂದ 100 ಕಿ.ಮೀ. ದೂರದಲ್ಲಿದೆ.

ಈ ಲೇಖನ ಶೇರ್ ಮಾಡಿ