ಶ್ರಾವಣ ಬಂತೆಂದರೆ ಹಬ್ಬದ ಸಾಲಿಗೆ ನಾಂದಿ. ಬಗೆಬಗೆಯ ಭಕ್ಷ್ಯಗಳನ್ನು ಮಾಡಿ ಭಗವಂತನಿಗೆ ಅರ್ಪಿಸಿ ಪ್ರಸಾದ ಸ್ವೀಕರಿಸುವ ಸಂಭ್ರಮದ ಕಾಲ. ಹಬ್ಬಗಳಿಗೆಂದೇ ಇಲ್ಲಿ ಕೆಲವು ಸ್ವಾದಿಷ್ಟ ತಿನಿಸುಗಳನ್ನು ಸುಲಭವಾಗಿ ಮಾಡುವ ವಿಧಾನ ನೀಡಲಾಗಿದೆ. ಇವುಗಳನ್ನು ತಯಾರಿಸಿ ಭಗವಂತನಿಗೆ ಸಮರ್ಪಿಸಿ ಸವಿಯಿರಿ.
ಖೋವಾ ಹೋಳಿಗೆ

ಬೇಕಾಗುವ ಸಾಮಾನು
ಗೋಧಿ ಹಿಟ್ಟು : ಅರ್ಧ ಕಪ್
ಚಿರೋಟಿ ರವೆ : ಅರ್ಧ ಕಪ್
ಎಣ್ಣೆ : 1 ಟೇಬಲ್ ಸ್ಪೂನ್
ಉಪ್ಪು : ಒಂದು ಚಿಟಿಕೆ
ಖೋವಾ : ಅರ್ಧ ಕಪ್
ಸಕ್ಕರೆ ಪುಡಿ / ಪುಡಿ ಬೆಲ್ಲ : ಅರ್ಧ ಕಪ್
ಏಲಕ್ಕಿ ಪುಡಿ : 4 ಟೇಬಲ್ ಸ್ಪೂನ್
ಪುಡಿ ಮಾಡಿದ ವಾಲ್‌ನಟ್, ಪಿಸ್ತಾ, ಬಾದಾಮಿ, ಗೋಡಂಬಿ ಮಿಶ್ರಣ : 4 ಕಪ್
ತುಪ್ಪ : ಹುರಿಯಲು ಅಗತ್ಯವಾದಷ್ಟು
ಮಾಡುವ ವಿಧಾನ : ಖೋವಾ, 1 ಟೇಬಲ್ ಸ್ಪೂನ್ ತುಪ್ಪ, ಸಕ್ಕರೆ ಅಥವಾ ಬೆಲ್ಲ, ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳ ಪುಡಿಗಳನ್ನು ಮಿಶ್ರಣ ಮಾಡಿ. ಅವುಗಳನ್ನು ಉಂಡೆಗಳನ್ನಾಗಿ ಮಾಡಿ ಇಡಿ. ಗೋಧಿ ಹಿಟ್ಟು, ರವೆ, ಉಪ್ಪು ಮತ್ತು ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ಮೃದುವಾಗಿರುವಂತೆ ಕಲಸಿ. ಅವುಗಳನ್ನು ಉಂಡೆಗಳನ್ನಾಗಿ ಮಾಡಿಡಿ. ಗೋಧಿ ಹಿಟ್ಟು ಮಿಶ್ರಣ ಉಂಡೆಯನ್ನು ಅಗಲಿಸಿ (ಕೈಯಲ್ಲಿ ಸಾಧ್ಯವಾಗದಿದ್ದರೆ ಲಟ್ಟಿಸಿ) . ಅನಂತರ ಅದರ ಮೇಲೆ ಖೋವಾ ಉಂಡೆ ಇಡಿ. ಅದನ್ನು ಹಿಟ್ಟಿನಿಂದ ಮುಚ್ಚಿ. ಹಿಟ್ಟು ಹಾಕಿದ ಕಡೆಯಿಂದ ಮೃದುವಾಗಿ ಲಟ್ಟಿಸಿ. ಹೋಳಿಗೆ ಗುಂಡಗಿರಲಿ. ತವೆಯ ಮೇಲೆ ಹೋಳಿಗೆ ಹಾಕಿ ತುಪ್ಪ ಅಥವಾ ಎಣ್ಣೆ ಬಳಸಿ ಎರಡೂ ಕಡೆ ಬೇಯಿಸಿ. ಕೆಳಗಿಳಿಸಿದ ಖೋವಾ ಹೋಳಿಗೆಗೆ ಇನ್ನಷ್ಟು ತುಪ್ಪ ಸವರಿ ದೇವರಿಗೆ ಅರ್ಪಿಸಿ. ಅನಂತರ ಸವಿಯಿರಿ.
ಬಾದಾಮ್ ಪೂರಿ

ಬೇಕಾಗುವ ಸಾಮಾನು
ಮೈದಾ ಹಿಟ್ಟು : 2 ಕಪ್
ಬಾದಾಮಿ : ಅರ್ಧ ಕಪ್ (ಪೇಸ್ಟ್)
ಸಕ್ಕರೆ : 3 1/2 ಕಪ್
ಅಕ್ಕಿ ಹಿಟ್ಟು : 1 1/4 ಕಪ್
ಹಾಲು : 100 ಎಂಎಲ್
ಕೇಸರಿ : 1 ಗ್ರಾಂ
ಏಲಕ್ಕಿ : ಅರ್ಧ ಟೀ ಚಮಚ
ತುಪ್ಪ : 25 ಎಂಎಲ್
ಎಣ್ಣೆ : 1 ಕಪ್
ನೀರು : 1 ಕಪ್
ಮಾಡುವ ವಿಧಾನ : ಮೊದಲು ಹಿಟ್ಟನ್ನು ನಾದಬೇಕು. ಅಕ್ಕಿ ಹಿಟ್ಟು, ಮೈದಾ, ಹಾಲು ಮತ್ತು ಬಾದಾಮಿ ಪೇಸ್ಟ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ ನಾದಿಕೊಳ್ಳಿ. ಪಾತ್ರೆಗೆ ಸ್ವಲ್ಪ ನೀರು ಹಾಕಿ ಕುದಿಸಿ. ಇದಕ್ಕೆ ಕೇಸರಿ, ಸಕ್ಕರೆ ಮತ್ತು ಏಲಕ್ಕಿಯನ್ನು ಸೇರಿಸಿ. ಸಕ್ಕರೆ ಪಾಕ ತಯಾರಿಸಿಕೊಳ್ಳಿ. ಕಲಸಿಟ್ಟ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ. ಒಂದೊಂದೇ ಉಂಡೆಯನ್ನು ತೆಗೆದುಕೊಂಡು ಪೂರಿ ಆಕಾರದಲ್ಲಿ ಲಟ್ಟಿಸಿಕೊಳ್ಳಿ. ಪೂರಿಗೆ ಸ್ವಲ್ಪ ತುಪ್ಪ ಸವರಿಕೊಂಡು ಒಂದರ ಮೇಲೆ ಇನ್ನೊಂದು ಪೂರಿ ಇರಿಸಿಕೊಂಡು ಪದರಗಳನ್ನು ಮಾಡಿ. ಅನಂತರ ಅದನ್ನು ಲಟ್ಟಿಸಿ ಸಣ್ಣ ತುಂಡು ಮಾಡಿ. ಇದೇ ರೀತಿ ಎಲ್ಲ ಉಂಡೆಗಳ ಪದರ ಮಾಡಿಕೊಂಡು ಮತ್ತು ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈ ತುಂಡುಗಳನ್ನು ತ್ರಿಕೋನ ಅಥವಾ ವೃತ್ತಾಕಾರವಾಗಿ ಲಟ್ಟಿಸಿಕೊಳ್ಳಬಹುದು. ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಕಾಯಿಸಿಕೊಳ್ಳಿ. ಲಟ್ಟಿಸಿದ ಪೂರಿ ತುಂಡುಗಳನ್ನು ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಹೀಗೆ ಕರಿದ ಎಲ್ಲ ಪೂರಿಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿಕೊಳ್ಳಿ. 10 ನಿಮಿಷ ಅದು ಪಾಕದಲ್ಲಿ ನೆನೆಯಲಿ. ಅನಂತರ ಪಾಕದಿಂದ ಹೊರಗೆ ತೆಗೆದು ತಟ್ಟೆಯಲ್ಲಿಡಿ. ಭಗವಂತನಿಗೆ ಅರ್ಪಿಸಿ ಸವಿಯಿರಿ.
ಕೇಸರಿ ಮೋದಕ

ಬೇಕಾಗುವ ಸಾಮಾನು
ಕೇಸರಿ : ಎರಡು, ಮೂರು ಚಿಟಿಕೆಯಷ್ಟು
ಮೈದಾ ಹಿಟ್ಟು : 3 ಕಪ್
ಚಿರೋಟಿ ರವೆ : 3 ಟೇಬಲ್ ಚಮಚ
ಸಕ್ಕರೆ ಸಿರಪ್ : 6-7 ಟೀ ಚಮಚ
ತುರಿದ ತೆಂಗಿನ ಕಾಯಿ : 1 1/2 ಕಪ್
ಏಲಕ್ಕಿ ಪುಡಿ : 1/2 – 1 ಟೀ ಚಮಚ
ತುಪ್ಪ : 1 ಟೇಬಲ್ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ : 2-3 ಕಪ್
ಮಾಡುವ ವಿಧಾನ : ಕೇಸರಿಯನ್ನು ಒಂದು ಸಣ್ಣ ಬಟ್ಟಲಿಗೆ ಹಾಕಿ 3-4 ಚಮಚ ನೀರು ಬೆರಸಿ (ಬಿಸಿ ಹಾಲು ಹಾಕಿದರೆ ರುಚಿ ಹೆಚ್ಚು) ಇದಕ್ಕೆ ಮುಚ್ಚಳ ಮುಚ್ಚಿ 10-15 ನಿಮಿಷ ಇರಿಸಿ. ಮೈದಾ ಹಿಟ್ಟನ್ನು ಒಂದು ಬೇಸನ್‌ಗೆ ಹಾಕಿ ಅದಕ್ಕೆ ರವೆ ಸೇರಿಸಿ. ಇದಕ್ಕೆ ಕೇಸರಿ ಮಿಶ್ರಣವನ್ನು ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿಡಿ . ಈ ಹಿಟ್ಟು 10 ನಿಮಿಷ ನೆನೆಯಲಿ. ಮಂದ ಉರಿಯಲ್ಲಿ ಪಾತ್ರೆ ಇಟ್ಟು ಅದಕ್ಕೆ ಸಕ್ಕರೆ ಸಿರಪ್ ಹಾಕಿ. ಅದಕ್ಕೆ ತೆಂಗಿನ ತುರಿ ಹಾಕಿ ಚೆನ್ನಾಗಿ ಬೆರೆಸಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ. ಚೆನ್ನಾಗಿ ಕಲಸಿ ಆರಲು ಬಿಡಿ. ಕಲಸಿಟ್ಟಿರುವ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ಅದನ್ನು ಚಪ್ಪಟೆ ಆಕಾರದಲ್ಲಿ ಲಟ್ಟಿಸಿಕೊಂಡು ತೆಂಗಿನ ತುರಿ ಕಣಕವನ್ನು ಅದರಲ್ಲಿಟ್ಟು ಎಲ್ಲ ಅಂಚುಗಳನ್ನು ಮಡಚಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಳ್ಳಿ. ಸಿದ್ಧಪಡಿಸಿಟ್ಟ ಮೋದಕಗಳನ್ನು ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ತಟ್ಟೆಯಲ್ಲಿ ಹಾಕಿ ಆರಲು ಬಿಡಿ. ಅನಂತರ ರುಚಿಯಾದ ಕೇಸರಿ ಮೋದಕವನ್ನು ಸವಿಯಿರಿ.
ಮಸಾಲ ವಡೆ

ಬೇಕಾಗುವ ಸಾಮಾನು
ಕಡಲೇ ಬೇಳೆ : 1 ಕಪ್
ಹಸಿರು ಅಥವಾ ಒಣ ಮೆಣಸಿನ ಕಾಯಿ : 4
ಇಂಗು : 1/4 ಟೀ ಸ್ಪೂನ್
ಶುಂಠಿ : ಒಂದು ಅಂಗುಲ ಚೂರು
ಸೋಂಪು : ಒಂದು ಟೀ ಸ್ಪೂನ್
ಕರಿಬೇವು : ಸ್ವಲ್ಪ
ಕೊತ್ತಂಬರಿ ಸೊಪ್ಪು : 2 ಟೇಬಲ್ ಸ್ಪೂನ್
ಅಕ್ಕಿ ಹಿಟ್ಟು : 1 ಟೇಬಲ್ ಸ್ಪೂನ್ (ಕಡ್ಡಾಯವಲ್ಲ)
ಮಾಡುವ ವಿಧಾನ : ಕಡಲೇ ಬೇಳೆಯನ್ನು ಮೂರು ತಾಸು ನೆನೆಸಿಡಿ. ಅನಂತರ ನೀರು ಸೋಸಿ ಬೇಸನ್‌ನಲ್ಲಿ ಹಾಕಿಡಿ. ಮೆಣಸಿನ ಕಾಯಿ, ಉಪ್ಪು, ಶುಂಠಿ, ಇಂಗು ಮತ್ತು ಸೋಂಪು ಇವುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ. ಅನಂತರ ನೀರು ಸೋಸಿಟ್ಟ ಬೇಳೆಯಲ್ಲಿ ಅರ್ಧ ಭಾಗವನ್ನು ಅದರ ಜೊತೆಗೆ ಹಾಕಿ ರುಬ್ಬಿ. ಉಳಿದ ಅರ್ಧ ಭಾಗವನ್ನು ರುಬ್ಬಿ. ಸಾಧ್ಯವಾದಷ್ಟೂ ನೀರು ಹಾಕಬೇಡಿ. ತುಂಬ ನುಣ್ಣಗೆ ರುಬ್ಬ ಬೇಡಿ. ಬೇಳೆ ಕಾಣುವಂತೆ ಇರಲಿ. ಎರಡು ಭಾಗದಲ್ಲಿ ರುಬ್ಬಿ. ರುಬ್ಬಿದ್ದನ್ನು ಪಾತ್ರೆಗೆ ಹಾಕಿಡಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕರಿ ಬೇವು, ಕೊತ್ತಂಬರಿ ಸೊಪ್ಪು ಮತ್ತು ರುಚಿ ಇಷ್ಟವಿದ್ದರೆ ಪುದೀನ ಸೊಪ್ಪು ಹಾಕಿ. ಚೆನ್ನಾಗಿ ಕಲಸಿ. ಅಗತ್ಯವೆನಿಸಿದರೆ ಅಕ್ಕಿ ಹಿಟ್ಟನ್ನು ಈ ಮಿಶ್ರಣಕ್ಕೆ ಬೆರೆಸಿ. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಉರಿ ಕಡಮೆ ಇರಲಿ. ಕಲಸಿಟ್ಟ ಹಿಟ್ಟಿನಿಂದ ನಿಂಬೆ ಗಾತ್ರದಷ್ಟು ಹಿಟ್ಟು ತೆಗೆದುಕೊಂಡು ಕೈಯಲ್ಲಿ ತಟ್ಟಿ. ಮಧ್ಯ ಭಾಗಕ್ಕಿಂತ ಅಂಚಿನ ಭಾಗವು ಸ್ವಲ್ಪ ತೆಳ್ಳಗಿರಲಿ. ಎಣ್ಣೆಯಲ್ಲಿ ಹಾಕಿ ಕರಿಯಿರಿ. ವಡೆಯನ್ನು ಎಣ್ಣೆಯಿಂದ ತೆಗೆದು ಕಾಗದದ ಹಾಳೆಯ ಮೇಲೆ ಹಾಕಿದರೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಬಿಸಿ ಬಿಸಿ ವಡೆಯ ರುಚಿ ನೋಡಿ!






Leave a Reply