ಯದಾಸ್ಯ ಚಿತ್ತಮರ್ಥೇಷು ಸಮೇಷ್ವಿಂದ್ರಿಯವೃತ್ತಿಭಿಃ ।
ನ ವಿಗೃಹ್ಣಾತಿ ವೈಷಮ್ಯಂ ಪ್ರಿಯಮಪ್ರಿಯಮಿತ್ಯುತ ॥
“ಉನ್ನತ ಭಕ್ತನ ಮನಸ್ಸು ಇಂದ್ರಿಯ ಕಾರ್ಯಗಳಲ್ಲಿ ಸಮಸ್ಥಿತಿ ಪಡೆಯುತ್ತದೆ ಹಾಗೂ ಪ್ರಿಯ ಮತ್ತು ಅಪ್ರಿಯ ಎರಡಕ್ಕೂ ಅತೀತವಾಗಿರುತ್ತದೆ.” (ಭಾಗವತ 3.32.24)

ಭಾವಾರ್ಥ: ಉನ್ನತ ಹಂತದಲ್ಲಿರುವ ಭಕ್ತನ ವ್ಯಕ್ತಿತ್ವದಲ್ಲಿ ದಿವ್ಯಜ್ಞಾನ ಮತ್ತು ಐಹಿಕ ಆಕರ್ಷಣೆಯ ವಿರಕ್ತಿಗಳ ಔನ್ನತ್ಯದ ಮಹತ್ತ್ವವು ಚೆನ್ನಾಗಿ ಪ್ರಕಟವಾಗುತ್ತದೆ. ಆತನಿಗೆ ಪ್ರಿಯ-ಅಪ್ರಿಯ ಎನ್ನುವುದು ಇಲ್ಲ. ಏಕೆಂದರೆ ಅವನು ತನ್ನ ಇಂದ್ರಿಯ ಸುಖಾನುಭವಕ್ಕಾಗಿ ಯಾವ ರೀತಿಯಲ್ಲೂ ಏನನ್ನೂ ಮಾಡುವುದಿಲ್ಲ. ಏನನ್ನು ಮಾಡಿದರೂ, ಏನನ್ನು ಯೋಚಿಸಿದರೂ ದೇವೋತ್ತಮ ಪುರುಷನ ತೃಪ್ತಿಗಾಗಿ. ಐಹಿಕ ಜಗತ್ತಿನಲ್ಲಾಗಲೀ ಅಥವಾ ಆಧ್ಯಾತ್ಮಿಕ ಜಗತ್ತಿನಲ್ಲಾಗಲೀ ಅವನ ಮಾನಸಿಕ ಸಮತೆಯು ವ್ಯಕ್ತವಾಗುತ್ತಿರುತ್ತದೆ. ಈ ಐಹಿಕ ಜಗತ್ತಿನಲ್ಲಿ ಯಾವುದೂ ಒಳ್ಳೆಯದಲ್ಲವೆಂದು ಅವನಿಗೆ ಗೊತ್ತು. ಎಲ್ಲವೂ ಐಹಿಕ ಗುಣದ ಲೇಪನದಿಂದ ಕಲುಷಿತಗೊಂಡು ಕೆಟ್ಟದಾಗಿರುತ್ತದೆ. ಐಹಿಕವಾದಿಗಳು ತಾಳುವ ಒಳ್ಳೆಯದು-ಕೆಟ್ಟದು, ನೈತಿಕ-ಅನೈತಿಕ ಇತ್ಯಾದಿ ನಿರ್ಣಯಗಳು ಕೇವಲ ಭ್ರಾಮಕ ಅಥವಾ ಮಾನಸಿಕ ನೆಲೆಯ ನಿಲುವುಗಳು. ಹಾಗೆ ನೋಡಿದರೆ ವಾಸ್ತವವಾಗಿ ಐಹಿಕ ಜಗತ್ತಿನಲ್ಲಿ ಒಳ್ಳೆಯದೆನ್ನುವುದು ಇಲ್ಲವೇ ಇಲ್ಲ. ಆಧ್ಯಾತ್ಮಿಕ ಜಗತ್ತಿನಲ್ಲಿ ಎಲ್ಲವೂ ಸಂಪೂರ್ಣ ಒಳ್ಳೆಯದು. ಆಧ್ಯಾತ್ಮಿಕ ವೈವಿಧ್ಯದಲ್ಲಿ ಅಪೂರ್ಣತೆ ಎಂಬುದಿಲ್ಲ. ಏಕೆಂದರೆ ಭಕ್ತನು ಪ್ರತಿಯೊಂದನ್ನೂ ಆಧ್ಯಾತ್ಮಿಕ ದರ್ಶನದ ಮೂಲಕ ಸ್ವೀಕರಿಸುತ್ತಾನೆ. ಹೀಗಾಗಿ ಅವನು ಸಮದೃಷ್ಟಿಯುಳ್ಳವನಾಗಿರುತ್ತಾನೆ. ಅವನು ದಿವ್ಯ ಸ್ಥಿತಿಗೆ ಏರಿದ್ದಾನೆ ಎಂಬುದಕ್ಕೆ ಇದೇ ಗುರುತು. ಅವನು ಸಹಜವಾಗಿ ವೈರಾಗ್ಯ, ಅನಂತರ ಜ್ಞಾನ, ಅನಂತರ ವಾಸ್ತವ ದಿವ್ಯಜ್ಞಾನವನ್ನು ಪಡೆಯುತ್ತಾನೆ. ಒಟ್ಟು ತಾತ್ಪರ್ಯವೇನೆಂದರೆ ಉನ್ನತ ನೆಲೆಯ ಭಕ್ತನು ಭಗವಂತನ ದಿವ್ಯಗುಣಗಳೊಂದಿಗೆ ಹೊಂದಿಕೊಳ್ಳುತ್ತಾನೆ. ಆ ಅರ್ಥದಲ್ಲಿ ಅವನು ಗುಣಾತ್ಮಕವಾಗಿ ದೇವೋತ್ತಮ ಪರಮ ಪುರುಷನೊಡನೆ ಒಂದಾಗುತ್ತಾನೆ.
ಶ್ರೀ ಕಪಿಲನು “ಕಾಮ್ಯಕರ್ಮಗಳ ಬಂಧನ” ಎಂಬ ಈ ಅಧ್ಯಾಯದಲ್ಲಿ ಮಾತೆ ದೇವಹೂತಿಗೆ ಬೋಧಿಸುತ್ತಿದ್ದಾನೆ. ಶ್ರೀ ಕಪಿಲನು ಭಕ್ತಿಸೇವೆಯ ವಿವಿಧ ಆಂಶಗಳನ್ನು ತನ್ನ ತಾಯಿಗೆ ಹೇಳುತ್ತಿದ್ದಾನೆ. ಮಾನವ ಜೀವಿಯು ಈ ಲೌಕಿಕ ಲೋಕಕ್ಕೆ ಬಂದಾಗ ಹೇಗೆ ಅನೇಕ ಕಾಮ್ಯಕರ್ಮಗಳ ಬಂಧನದಲ್ಲಿ ಸಿಲುಕುತ್ತಾನೆ ಎಂದು ವಿವರಿಸುವ ಅವನು, ಈ ಬಂಧನದಿಂದ ಮುಕ್ತವಾಗುವ ಹಾದಿಯ ಬಗೆಗೆ ತಿಳಿಸುತ್ತಾನೆ.
ಅವನು ಹೇಳುತ್ತಾನೆ, “ನನ್ನ ಪ್ರೀತಿಯ ಮಾತೆಯೇ, ಆದುದರಿಂದ ನೀನು ದೇವೋತ್ತಮ ಪರಮ ಪುರುಷನಲ್ಲಿ ಆಶ್ರಯ ಪಡೆಯಬೇಕೆಂದು ನಾನು ಸೂಚಿಸುತ್ತೇನೆ.” ಅದೇ ಹಾದಿ ಮತ್ತು ದೇವೋತ್ತಮ ಪರಮ ಪುರುಷನಲ್ಲಿ ಹೇಗೆ ಆಶ್ರಯ ಪಡೆಯಬೇಕು? ಸಂಪೂರ್ಣ ಭಕ್ತಿ ಮತ್ತು ಪ್ರೀತಿಯಿಂದ. ಅದು ತುಂಬ ಮುಖ್ಯ. ಅದೇ ದೇವೋತ್ತಮನಲ್ಲಿ ಆಶ್ರಯ ಪಡೆಯುವ ಮಾರ್ಗ. ಹಾಗೆ ಮಾಡಿದಾಗ ನಾವು ಅಲೌಕಿಕ ಭಕ್ತಿಸೇವೆಯಲ್ಲಿ ನೆಲೆಸಬಹುದು.
ಅತೀತನಾದ ಭಕ್ತ
ಈ ಶ್ಲೋಕದಲ್ಲಿರುವಂತೆ, ಇಂದ್ರಿಯ ಸುಖಾನುಭವಗಳಲ್ಲಿ ಉನ್ನತ ಹಂತದ ಭಕ್ತನ ಮನಸ್ಸು ಸಮಚಿತ್ತವಾಗಿರುತ್ತದೆ ಎಂದು ಹೇಳುತ್ತಿದ್ದಾನೆ. ಸಮಚಿತ್ತವೆಂದರೆ ಮನಸ್ಸು ಗೊಂದಲಗೊಳ್ಳುವುದಿಲ್ಲ, ಕ್ಷೋಭೆಗೆ ಒಳಗಾಗುವುದಿಲ್ಲ. ಈಗ ನಮ್ಮ ಮನಸ್ಸು ಸ್ಥಿರವಾಗಿಲ್ಲ. ಅದು ಸಮಚಿತ್ತವಾಗಿಲ್ಲ. ವಿವಿಧ ಇಂದ್ರಿಯ ಚಟುವಟಿಕೆಗಳಿಂದ ಅದು ತುಂಬ ಬೇಗ ಕ್ಷೋಭೆಗೆ ಒಳಗಾಗುತ್ತದೆ. ನಾವು ಮಾಡುವ, ನಾವು ವ್ಯವಹರಿಸುವ ಚಟುವಟಿಕೆಗಳು ಚೆನ್ನಾಗಿದ್ದರೆ ನಾವು ಸಂತೋಷಪಡುತ್ತೇವೆ. ಅದು ಕೆಟ್ಟದ್ದಾಗಿದ್ದರೆ ನಾವು ತೊಂದರೆಗೆ ಒಳಗಾಗುತ್ತೇವೆ.
ಭಕ್ತನು ಒಪ್ಪಿತ ಮತ್ತು ತಿರಸ್ಕೃತ ಎರಡಕ್ಕೂ ಅತೀತನಾಗುತ್ತಾನೆ. ಹಾಗೆಂದರೆ ಏನು ಅರ್ಥ? ಒಪ್ಪಿತ ಎಂದರೆ ಪ್ರಿಯಂ ಮತ್ತು ಒಪ್ಪಿತವಲ್ಲದ್ದು ಎಂದರೆ ಅಪ್ರಿಯಂ. ಯಾವುದು ಒಪ್ಪಿತ ಅಥವಾ ಯಾವುದು ತಿರಸ್ಕೃತ ಎನ್ನುವುದಕ್ಕೆ ಭಕ್ತನು ಹೇಗೆ ಅತೀತ ಎನ್ನುವುದನ್ನು ಪ್ರಭುಪಾದರು ಭಾವಾರ್ಥದಲ್ಲಿ ವಿವರಿಸಿದ್ದಾರೆ, “ಅವನು ತನ್ನ ಇಂದ್ರಿಯ ಸುಖಾನುಭವಕ್ಕಾಗಿ ಯಾವುದೇ ರೀತಿಯ ಕ್ರಿಯೆಯಲ್ಲಿ ತೊಡಗದಿರುವುದರಿಂದ ಅವನಿಗೆ ಒಪ್ಪಿತ ಅಥವಾ ತಿರಸ್ಕೃತ ಎನ್ನುವುದಿಲ್ಲ.” ಇದು ಒಪ್ಪಿತ ಮತ್ತು ತಿರಸ್ಕೃತದ ಅರ್ಥ.
ಸಾಮಾನ್ಯವಾಗಿ ಲೌಕಿಕ ದೃಷ್ಟಿಯಲ್ಲಿ, ನೀವು ಏನಾದರೂ ಮಾಡಬೇಕಾದರೆ ಅಥವಾ ನೀವು ಏನನ್ನಾದರೂ ಕಂಡರೆ, ನಾವು ವಿಶ್ಲೇಷಿಸುತ್ತೇವೆ ಮತ್ತು ಹೇಳುತ್ತೇವೆ, “ಇದು ನನಗೆ ಸರಿ” ಅಥವಾ “ಇದು ನನಗೆ ಸರಿಯಲ್ಲ.” ಕೆಲವು ವಿಷಯಗಳು ನಿಮಗೆ ಒಪ್ಪಿತ, ಕೆಲವು ಒಪ್ಪಿತವಾಗುವುದಿಲ್ಲ, ಅಲ್ಲವೇ? ಕೆಲವನ್ನು ನಾನು ಒಪ್ಪುತ್ತೇನೆ ಮತ್ತು ಕೆಲವನ್ನು ಏಕೆ ಒಪ್ಪುವುದಿಲ್ಲ? ಏಕೆಂದರೆ, ನಾನು ಆ ಪರಿಸ್ಥಿತಿಯನ್ನು ನನ್ನ ಲೌಕಿಕ ದೃಷ್ಟಿಯಿಂದ ನೋಡುವೆ. ನನ್ನ ಇಂದ್ರಿಯಗಳಿಗೆ ತೃಪ್ತಿಯಾದರೆ ನಾನು ಕೆಲವು ವಿಷಯಗಳಿಗೆ ಒಪ್ಪುತ್ತೇನೆ. “ಇದು ನನ್ನ ಆಲೋಚನೆಗೆ ಸೂಕ್ತವಾದುದಲ್ಲ” ಎಂದು ನಾನು ಭಾವಿಸಿದರೆ ಅದು ಒಪ್ಪಿತವಲ್ಲ. ಮತ್ತು ಮನಸ್ಸು ಈಗ ಕಲುಷಿತಗೊಂಡಿದೆ. ಅದೂ ಒಪ್ಪಿತವಲ್ಲ. ಇದೇ ಒಪ್ಪಿತ ಮತ್ತು ತಿರಸ್ಕೃತ.

ಆದರೆ ಭಕ್ತಿಸೇವೆಗಾಗಿ ಬರುವುದೆಲ್ಲ ಕೃಷ್ಣನ ಸೇವೆಗಾಗಿ ಎಂದು ನಾನು ಕಂಡಾಗ, ಅಲ್ಲಿ ಒಪ್ಪಿತ ಅಥವಾ ತಿರಸ್ಕೃತ ಎಂಬ ಪ್ರಶ್ನೆಯೇ ಇಲ್ಲ. ಅದು ಕೃಷ್ಣನಿಗಾಗಿರುವುದರಿಂದ ಅದು ಒಳ್ಳೆಯದೇ ಆಗಿರುತ್ತದೆ. ಒಬ್ಬ ತಾಯಿಯಂತೆ. ಮಗುವನ್ನು ಪೋಷಿಸುವಾಗ, ಲೌಕಿಕ ದೃಷ್ಟಿಯಿಂದ ಅನೇಕ ವಿಷಯಗಳು ಅವಳಿಗೆ ಇಷ್ಟವಾಗದಿರಬಹುದು. ಆದರೆ ಒಪ್ಪಿತವೋ ತಿರಸ್ಕೃತವೋ, “ಇದನ್ನು ಮಾಡಿದರೆ ಅದು ಮಗುವಿನ ಒಳಿತಿಗಾಗಿ” ಎಂದು ಅವಳಿಗೆ ಗೊತ್ತು. ಅಲ್ಲಿ ದೃಷ್ಟಿಯು ಮಗುವಿನಲ್ಲಿ ಕೇಂದ್ರೀಕೃತವಾಗಿರುತ್ತದೆ.
ಅದೇ ರೀತಿ, ನಮ್ಮ ಭಕ್ತಿಸೇವೆಯಲ್ಲಿ ಗಮನವು “ಇದು ಕೃಷ್ಣನಿಗಾಗಿ” ಯಲ್ಲಿ ಕೇಂದ್ರೀಕೃತವಾಗಿದ್ದರೆ, ನಮ್ಮ ಭಕ್ತಿಸೇವೆಯಲ್ಲಿ ಚೆನ್ನಾದ ಮನೋಭಾವವನ್ನು ನೀವು ಕಾಣುವಿರಿ. ನಾವು ಒಪ್ಪಿತ ಅಥವಾ ತಿರಸ್ಕೃತಕ್ಕೆ ಅತೀತರಲ್ಲ? ಏಕೆಂದರೆ ನಾವು ನಮ್ಮ ಇಂದ್ರಿಯ ಸುಖಕ್ಕಾಗಿ ಕ್ರಿಯಾಶೀಲರಾಗಿರುತ್ತೇವೆ ಎಂದು ಪ್ರಭುಪಾದರು ಬರೆಯುತ್ತಾರೆ.
ನಮಗೆಲ್ಲ ನಮ್ಮ ಇಂದ್ರಿಯಸುಖ ಬೇಕು. ಇಂದ್ರಿಯಸುಖ ಎಂದರೇನು? ನಾನು ನನ್ನ ಸೇವೆಯನ್ನು ಭಗವಂತನಲ್ಲಿ ಕೇಂದ್ರೀಕರಿಸಿದರೆ, ಖಂಡಿತ ಅಲ್ಲಿ ಸುಖವಿರುತ್ತದೆ. ಅದು ಅಲೌಕಿಕ ಇಂದ್ರಿಯಸುಖ. ಭಾಗವತವು ಅಂತಹ ಸುಖದ ಬಗೆಯೇ ಮಾತನಾಡುತ್ತಿರುವುದು. “ನೀವು ಇಂದ್ರಿಯಸುಖ ಅನುಭವಿಸುವುದಿಲ್ಲ. ನೀವು ಎಲ್ಲವನ್ನೂ ಬಿಟ್ಟುಬಿಡುತ್ತೀರಿ” ಎಂದು ಅನೇಕ ಬಾರಿ ಜನರು ಯೋಚಿಸುತ್ತಾರೆ. ಆದರೆ ವಾಸ್ತವವಾಗಿ ಲೌಕಿಕವಾದಿಯು ಅನುಭವಿಸುವ ಇಂದ್ರಿಯಸುಖಕ್ಕಿಂತ ನಾವು ಹೆಚ್ಚು ಇಂದ್ರಿಯ ಸುಖವನ್ನು ಅನುಭವಿಸುತ್ತೇವೆ. ಆದುದರಿಂದಲೇ ನಾವೆಲ್ಲ ಇಲ್ಲಿ ಇದ್ದೇವೆ. ಕೃಷ್ಣಪ್ರಜ್ಞೆಯಲ್ಲಿ ಸಂತೋಷ ಸಿಗದಿದ್ದರೆ ನಾವು ಇಲ್ಲಿ ಏಕೆ ಇದ್ದೇವೆ? ಆದುದರಿಂದ ಇಲ್ಲಿ ಅಲೌಕಿಕ ಸುಖವಿದೆ. ಲೌಕಿಕ ಇಂದ್ರಿಯಸುಖವೆಂದರೆ, ಕೇವಲ ತಿನ್ನುವುದು, ಮಲಗುವುದು, ಲೈಂಗಿಕ ಕ್ರಿಯೆ ಮತ್ತು ರಕ್ಷಿಸಿಕೊಳ್ಳುವುದು. ಮಹಾಭಾರತವು ಹೇಳುವುದು ನಮಗೆ ಗೊತ್ತು,
ಆಹಾರ ನಿದ್ರಾ ಭಯ ಮೈಥುನಂ ಚ
ಸಾಮಾನ್ಯಂ ಏತತ್ ಪಶುಭಿರ್ ನರಾಣಾಂ
ಧರ್ಮೋ ಹಿ ತೇಶಾಂ ಅಧಿಕೋ ವಿಶೇಷೋ
ಧರ್ಮೇಣ ಹೀನಾಃ ಪಶುಭಿಃ ಸಮಾನಾಃ
ಧರ್ಮಗ್ರಂಥಗಳು ಇಂದ್ರಿಯ ಸುಖವನ್ನು ಪ್ರಾಣಿಯಂತೆ ಎಂದು ಹೋಲಿಸುತ್ತಿವೆ. ನಾವು ಲೌಕಿಕ ಇಂದ್ರಿಯ ಸುಖದಲ್ಲಿ ತೊಡಗಿದ್ದಾಗ ನಮ್ಮನ್ನು ಹೇಗೆ ಪ್ರಾಣಿಗಳಿಗೆ ಹೋಲಿಸಲಾಗುತ್ತದೆ ಎನ್ನುವುದನ್ನು ಪ್ರಭುಪಾದರು ಬಳಸುವ ಕೆಲವು ಶಬ್ದಗಳು ನಮ್ಮ ಗಮನ ಸೆಳೆಯುತ್ತದೆ. ಧರ್ಮೇಣ ಹೀನಾಃ ಪಶುಭಿಃ ಸಮಾನಾಃ.
ಒಂದು ಶ್ಲೋಕ ಹೇಳುತ್ತದೆ,
ವಿಷಯತೃಷೋ (ಭಾಗವತ 6.16.38) – ತೃಷೋ ಎಂದರೆ ನೀವು ಹಂಬಲಿಸುತ್ತಿರುವಿರಿ, ಕಾತರರಾಗಿರುವಿರಿ, ತೃಷ್ಣಾ.
ವಿಷಯತೃಷೋ ನರಪಶವೋ – ಅಂದರೆ, ಅವನು ವಿಷಯಕ್ಕಾಗಿ ತೃಷ, ಕಾತರನಾಗಿದ್ದರೆ, ನರ – ಈ ಮಾನವ ಜೀವಿಯು ಪಶುವಿನಂತೆ.
ಮುಂದೆ ಅನುವಾದದಲ್ಲಿ ಪ್ರಭುಪಾದರು ಬರೆಯುತ್ತಾರೆ, “ನಾವು ಮಾನವ ರೂಪದ ಪ್ರಾಣಿಗಳು. ಏನೂ ವ್ಯತ್ಯಾಸವಿಲ್ಲ. ನಮಗೆ ಕೇವಲ ಮಾನವ ಎಂಬ ಈ ದೇಹವಿದೆ. ನಾವು ಮಾನವ ರೂಪದ ಪ್ರಾಣಿಗಳು. ಯಾರು ಇಂದ್ರಿಯ ಸುಖದಲ್ಲಿಯೇ ತೊಡಗಿರುವರೋ ಅವರು ಮಾನವ ರೂಪದಲ್ಲಿರುವ ಪ್ರಾಣಿಗಳು. ನಮಗೆ ಒಂದು ರೂಪವಿದೆ, ಈ ಮಾನವ ದೇಹಕ್ಕೆ ಒಂದು ಅಕಾರವಿದೆ, ಇದು ಮಾನವ ಆಕಾರವಾದರೂ ನಡೆದುಕೊಳ್ಳುವುದು ಪ್ರಾಣಿಗಳ ಹಾಗೆ.
ಮಾನವ ಮತ್ತು ಪ್ರಾಣಿ
ಇದನ್ನು ಕಲ್ಪಿಸಿಕೊಳ್ಳಿ : ಮಾನವನಂತಹ ಪ್ರಾಣಿಗಳು, ಮಾನವ ರೂಪದಲ್ಲಿ ಪ್ರಾಣಿಗಳು ಮತ್ತು ಮಾನವ ಆಕಾರ ಆದರೆ ಪ್ರಾಣಿಗಳಂತೆ ವರ್ತನೆ. ಇದನ್ನು ವಿಷಯತೃಷೋ ನರಪಶವೋ ಎಂದು ಕರೆಯುತ್ತಾರೆ. ಆದುದರಿಂದ ಬೇರೆ ಕಡೆಗಳಲ್ಲಿ ಕೆಲವು ಬಾರಿ ಮಾನವ ಜೀವಿಗಳನ್ನು ದ್ವಿಪಾದ ಪಶು ಎಂದು ವರ್ಣಿಸುತ್ತಾರೆ. ದ್ವಿಪಾದ ಪಶು ಎಂದರೆ ನಮ್ಮಲ್ಲಿ ನಾಲ್ಕು ಪಾದಗಳ ಪಶುಗಳುಂಟು ಮತ್ತು ನಾವು ಎರಡು ಪಾದಗಳ ಪ್ರಾಣಿಗಳು. ಈ ರೀತಿ ಧರ್ಮಗ್ರಂಥಗಳು ಇಂದ್ರಿಯಸುಖದಲ್ಲಿ ತೊಡಗಿರುವ ಮಾನವ ಜೀವಿಗಳನ್ನು ಹೋಲಿಸುತ್ತವೆ. ಕಾರ್ಯಕಾರಿಯಾಗಿ ಪ್ರಾಣಿ ವೇದಿಕೆಯ ಮೇಲೆ. “ಇದು ತುಂಬ ಗಂಭೀರ ಹೋಲಿಕೆ. ಇದು ಏಕೆ ಹೀಗೆ? ಧರ್ಮಗ್ರಂಥಗಳು ನರಪಶವೋ ಎಂದು ಏಕೆ ಹೇಳುತ್ತಿವೆ? ಏಕೆಂದರೆ ಇಂದ್ರಿಯ ಸುಖವು ಎಲ್ಲ ಜೀವಿಗಳಲ್ಲಿಯೂ ಉಂಟು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದುಕಿನ ಎಲ್ಲ ರೂಪಗಳಲ್ಲಿಯೂ ಇಂದ್ರಿಯಸುಖ ಇರುವುದರಿಂದ, ನಾನು ಏಕೆ ಮಾನವ ರೂಪದಲ್ಲಿ ಹುಟ್ಟಿರುವೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬೇಕು. ಏಕೆಂದರೆ ಪ್ರಾಣಿ ರೂಪದಲ್ಲಿ ಇಲ್ಲದಿರುವುದು, ಏನೋ ಮಾನವ ರೂಪದಲ್ಲಿ ನನಗೆ ಲಭಿಸಿದೆ. ಅದೇ ಕೃಷ್ಣಪ್ರಜ್ಞೆ.
ದುರದೃಷ್ಟವಶಾತ್ ನಮ್ಮ ಪರಿಸ್ಥಿತಿಯಿಂದಾಗಿ ನಾವು ಇಂದ್ರಿಯ ಸುಖದತ್ತ ಆಕರ್ಷಿತರಾಗುತ್ತಿದ್ದೇವೆ. ಆದುದರಿಂದ “ನನ್ನ ಪ್ರೀತಿಯ ಪ್ರಭುವೆ, ದಯೆಯಿಟ್ಟು ನನ್ನನ್ನು ಈ ಇಂದ್ರಿಯ ಸುಖದಿಂದ ಹೊರತರಬೇಕೆಂದು ಕೋರುವೆ. ನಿನ್ನ ಭಕ್ತಿಸೇವೆಯಲ್ಲಿ ತೊಡಗುವಂತೆ ಮಾಡು. ಇಂದ್ರಿಯ ಸುಖಕ್ಕಾಗಿ ನನಗೆ ತುಂಬ ಆಕರ್ಷಣೆಗಳಿವೆ” ಎಂದು ಭಕ್ತನು ಪ್ರಾರ್ಥಿಸುತ್ತಾನೆ. ನಾವು ಜಪಿಸುತ್ತಿದ್ದೇವೆ, ಓದುತ್ತಿದ್ದೇವೆ ಮತ್ತು ಇತರ ಅನೇಕ ಕ್ರಮಗಳನ್ನು ಪ್ರಯತ್ನಿಸುತ್ತಿದ್ದೇವೆ. ಭಕ್ತನು “ನನಗೆ ಸಹಾಯ ಮಾಡು” ಎಂದು ದೇವರಲ್ಲಿ ಪ್ರಾರ್ಥಿಸುತ್ತಾನೆ. “ನಿಜ, ನಾನು ಬಂಧನಕ್ಕೆ ಒಳಗಾಗಿದ್ದೇನೆ. ದೇವೋತ್ತಮನೊಬ್ಬನೇ ರಕ್ಷಕ” ಎಂದು ಭಕ್ತನು ಅರ್ಥಮಾಡಿಕೊಂಡು ಭಗವಂತನಲ್ಲಿ ಪ್ರಾರ್ಥಿಸಬೇಕು. ಭಕ್ತಿವಿನೋದ ಠಾಕುರರು ಪ್ರಾರ್ಥಿಸುವಂತೆ,
ವಿಷಯೇ ಜೇ ಪ್ರೀತಿ ಏಬೇ ಆಛಯೇ ಆಮಾರ್
ಅವರು ಪ್ರಾರ್ಥಿಸುತ್ತಿದ್ದಾರೆ, ವಿಷಯೇ ಜೇ ಪ್ರೀತಿ, ನನ್ನ ಬಳಿ ಪ್ರೀತಿ ಇದೆ, ನನಗೆ ವಿಷಯವು ತುಂಬ ಇಷ್ಟ, ಇಂದ್ರಿಯ ಸುಖಕ್ಕಾಗಿ.
ಸೇಯ್ ಮತ ಪ್ರೀತಿ ಹೌಕ್ ಚರಣೇ ತೋಮಾರ್, ದೇವರೇ, ಇಂದ್ರಿಯ ಸುಖಕ್ಕಾಗಿ ನನಗಿರುವ ಆಕರ್ಷಣೆಯಂತೆಯೇ, ಅದೇ ರೀತಿಯ ಒಲವು ಮತ್ತು ಆಕರ್ಷಣೆ ನಿನ್ನ ಚರಣ ಕಮಲವನ್ನು ಕುರಿತಂತೆ ಇರಲಿ ಎನ್ನುವುದೇ ನನ್ನ ಪ್ರಾರ್ಥನೆ.
ಇದು ಭಕ್ತಿವಿನೋದ ಠಾಕುರರ ಒಂದು ಚೆನ್ನಾದ ಪ್ರಾರ್ಥನೆ. ಅದೇ ರೀತಿ ಧರ್ಮಗ್ರಂಥಗಳಲ್ಲಿ ಅನೇಕ ಪ್ರಾರ್ಥನೆ ಗೀತೆಗಳಿವೆ.
ಪ್ರಭುಪಾದರು ಅನೇಕ ಬಾರಿ ಇದನ್ನು ಉಲ್ಲೇಖಿಸಿದ್ದಾರೆ,
ಯುವತೀನಾಂ ಯಥಾ ಯೂನಿ
ಯೂನಾಂ ಚ ಯುವತೌ ಯಥಾ
ಮನೋ ಅಭಿರಮತೇ ತದ್ವನ್
ಮನೋ ಮೇ ರಮತಾಂ ತ್ವಯೀ
(ವಿಷ್ಣು ಪುರಾಣ 1.20.19)
ಯುವತಿ-ಯುವಕರ ಮನಸ್ಸು ಪರಸ್ಪರ ಆಕರ್ಷಣೆಗೆ ಒಳಗಾಗುತ್ತದೆ. ಅದು ಸಹಜ. ಈ ಹಂತದಲ್ಲಿ ಅದು ಸ್ವಾಭಾವಿಕ. ಆದುದರಿಂದ ಭಕ್ತನು ಪ್ರಾರ್ಥಿಸುತ್ತಿದ್ದಾನೆ, ಮನೋ ಅಭಿರಮತೇ ತದ್ವನ್, ಅದೇ ರೀತಿ ನನ್ನ ಮನಸ್ಸು ಕೂಡ ನಿನ್ನತ್ತ, ನಿನ್ನ ಚರಣ ಕಮಲದತ್ತ ಆಕರ್ಷಣೆಗೆ ಒಳಗಾಗಲಿ. ಮನೋ ಮೇ ರಮತಾಂ ತ್ವಯೀ, ನನ್ನ ಮನಸ್ಸು ನಿನ್ನ ಚರಣಕಮಲಗಳಲ್ಲಿ ಮಾತ್ರ ಆನಂದವನ್ನು ಪಡೆಯಲಿ.
ಈ ಲೌಕಿಕ ಶಕ್ತಿಯು ನಮ್ಮನ್ನು ಎಳೆಯುತ್ತಿದ್ದಾಗ ನಾವು ಭಗವಂತನಿಗೆ ಈ ರೀತಿಯ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಈ ಲೌಕಿಕ ಶಕ್ತಿಯು ತುಂಬ ಶಕ್ತಿಶಾಲಿ ಮತ್ತು ನಾವು ಹೋರಾಡುತ್ತಿದ್ದೇವೆ. ಆದರೆ ನಾವು ಭಗವಂತನಿಗೆ ಶರಣಾದರೆ, ಪ್ರಾಮಾಣಿಕವಾಗಿ ಭಕ್ತಿಸೇವೆಯಲ್ಲಿ ತೊಡಗಿದರೆ, ಪ್ರಾಮಾಣಿಕವಾಗಿ ದೇವೋತ್ತಮನಿಗೆ ಪ್ರಾರ್ಥನೆ ಸಲ್ಲಿಸಿದರೆ ಅದು ಸಾಧ್ಯ. ಕೃಷ್ಣನು ನಮ್ಮನ್ನು ರಕ್ಷಿಸುತ್ತಾನೆ.

ಭಕ್ತನು ಯಾವುದೇ ರೀತಿಯಲ್ಲಿಯೂ ತನ್ನ ಇಂದ್ರಿಯಸುಖಕ್ಕಾಗಿ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾದರೆ ಅವನು ಹೇಗೆ ನಿರ್ವಹಿಸುತ್ತಾನೆ? ಅವನು ಏನು ಮಾಡಿದರೂ, ಏನು ಯೋಚಿಸಿದರೂ ಅದು ದೇವೋತ್ತಮ ಪರಮ ಪುರುಷನನ್ನು ಪ್ರಸನ್ನಗೊಳಿಸಲು ಮಾತ್ರ. ಸದಾ ಭಗವಂತನನ್ನು ಪ್ರಸನ್ನಗೊಳಿಸಬೇಕೆನ್ನುವುದೇ ಭಕ್ತನ ಅರ್ಥಗ್ರಹಿಕೆ. ನಾನು ಏನನ್ನಾದರೂ ಮಾಡುತ್ತಿದ್ದರೆ ಅದನ್ನು ಪರಿಶೀಲಿಸುವೆ. ಪರಿಶೀಲನೆ ಎಂದರೆ, ಇದನ್ನು ಮಾಡುವುದರಿಂದ ನಾನು ಭಗವಂತನನ್ನು ಆನಂದಪಡಿಸುವೆನಾ? ನನ್ನ ಈ ಕ್ರಿಯೆಯು ಭಗವಂತನಿಗೆ ಆನಂದ ಉಂಟುಮಾಡಿದರೆ, ನಾನು ಅದನ್ನು ಮಾಡುವೆ. ಆಗ ಭಗವಂತನು ಸಂತೋಷಪಡುತ್ತಾನೆ. ದೇವರಿಗೆ ಆನಂದ ಉಂಟುಮಾಡದ್ದನ್ನು ಏನಾದರೂ ನಾನು ಮಾಡಿದರೆ, ಅದು ಒಳ್ಳೆಯದೋ ಕೆಟ್ಟದ್ದೋ ಎಂದು ಯೋಚಿಸುವುದು ಭ್ರಾಮಕ ನಿಲುವು. ಇದು ಕೆಟ್ಟದ್ದು.
ಪ್ರಭುಪಾದರು ಇನ್ನಷ್ಟು ಬರೆಯುತ್ತಾರೆ, “ಈ ಐಹಿಕ ಜಗತ್ತಿನಲ್ಲಿ ಯಾವುದೂ ಒಳ್ಳೆಯದಲ್ಲವೆಂದು ಅವನಿಗೆ ಗೊತ್ತು. ಎಲ್ಲವೂ ಐಹಿಕ ಗುಣದ ಲೇಪನದಿಂದ ಕಲುಷಿತಗೊಂಡು ಕೆಟ್ಟದಾಗಿರುತ್ತದೆ. ಐಹಿಕವಾದಿಗಳು ತಾಳುವ ಒಳ್ಳೆಯದು-ಕೆಟ್ಟದು, ನೈತಿಕ-ಅನೈತಿಕ ಇತ್ಯಾದಿ ನಿರ್ಣಯಗಳು ಕೇವಲ ಭ್ರಾಮಕ ಅಥವಾ ಮಾನಸಿಕ ನೆಲೆಯ ನಿಲುವುಗಳು. ಹಾಗೆ ನೋಡಿದರೆ ವಾಸ್ತವವಾಗಿ ಐಹಿಕ ಜಗತ್ತಿನಲ್ಲಿ ಒಳ್ಳೆಯದೆನ್ನುವುದು ಇಲ್ಲವೇ ಇಲ್ಲ.”
ಚೈತನ್ಯ ಚರಿತಾಮೃತದಲ್ಲಿ ಚೆನ್ನಾಗಿ ವಿವರಿಸುವ ಶ್ಲೋಕವೊಂದು ಇದೆ. ದ್ವಿತ್ವದ ಈ ಭೌತಿಕ ಲೋಕದಲ್ಲಿ ಎಲ್ಲವೂ ಎರಡು. (ದ್ವಿತ್ವ ಎಂದರೆ ಎರಡು-ಒಳ್ಳೆಯದು, ಕೆಟ್ಟದ್ದು). ದ್ವೈತೇ ಭದ್ರಾಭದ್ರ ಜ್ಞಾನ, ಈ ಭೌತಿಕ ಲೋಕದಲ್ಲಿ ಕೆಲವು ಜ್ಞಾನವು ಒಳ್ಳೆಯದು, ಕೆಲವು ಜ್ಞಾನ ಕೆಟ್ಟದ್ದು. ಐ ಸಬ “ಭ್ರಮ.” ಎಲ್ಲವೂ ಕೆಟ್ಟದ್ದು. ಪ್ರಭುಪಾದರು ಕೆಲವು ಬಾರಿ ಈ ಉದಾಹರಣೆಯನ್ನು ನೀಡಿದ್ದಾರೆ, ದ್ರವ ರೂಪದ ಮಲ, ಒಣ ಮಲ. ಅದು ದ್ರವ ಅಥವಾ ಒಣ ರೀತಿಯ ಮಲವಾಗಿದ್ದರೂ, ಮಲ ಮಲವೇ. ಇದು ಒಳ್ಳೆಯದು ಅಥವಾ ಇದು ಕೆಟ್ಟದ್ದು ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ.
ಇದು ಒಳ್ಳೆಯದೋ ಕೆಟ್ಟದ್ದೋ ಎಂದು ಲೌಕಿಕ ಮಟ್ಟದಲ್ಲಿ ನಾವು ಕೇವಲ ಯೋಚಿಸುತ್ತಿದ್ದರೆ, ಅದು ಕೆಟ್ಟದ್ದೆ. ಏಕೆಂದರೆ, ಲೌಕಿಕ ಮಟ್ಟದಲ್ಲಿ ಅದು ನಮ್ಮನ್ನು ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ. ಅದು ಆಧ್ಯಾತ್ಮಿಕ ಮಟ್ಟದಲ್ಲಾದರೆ, ಅದು ಕೃಷ್ಣನಿಗಾದರೆ, ಆಗ ಎಲ್ಲವೂ ಒಳ್ಳೆಯದೇ. ಅದು ಲೌಕಿಕ ಮಟ್ಟದಲ್ಲಾದರೆ, ಎಲ್ಲವು ಕೆಟ್ಟದು. ಆದುದರಿಂದ ಒಳ್ಳೆಯದ್ದೋ ಕೆಟ್ಟದ್ದೋ ಎಂದು ಯೋಚಿಸುವುದರಲ್ಲಿ ಅರ್ಥವೇ ಇಲ್ಲ. ಉದಾಹರಣೆಗೆ ಕನಸು. ನಿಮಗೆ ಒಳ್ಳೆಯ ಅಥವಾ ಕೆಟ್ಟ ಕನಸಾಗಬಹುದು. ಆದರೆ ಅದು ಒಳ್ಳೆಯ ಅಥವಾ ಕೆಟ್ಟ ಕನಸು ಎನ್ನುವುದು ಮುಖ್ಯವಾಗುವುದಿಲ್ಲ. ನಿಜ, ನಿಮಗೆ ಆಧ್ಯಾತ್ಮಿಕವಾದ ಕನಸಾದರೆ, ಅದು ಬೇರೆಯ ವಿಷಯ. ಆದರೆ ಲೌಕಿಕ ಮಟ್ಟದಲ್ಲಿ ಕೆಟ್ಟ ಅಥವಾ ಒಳ್ಳೆಯದು ಎನ್ನುವುದು ಮುಖ್ಯವಾಗುವುದೇ ಇಲ್ಲ. ಆದರೆ ಅದು ಕೃಷ್ಣನಿಗೆ ಸಂಬಂಧಿಸಿದ್ದಾದರೆ, ಅದು ಒಳ್ಳೆಯದು. ಆ ರೀತಿ ನಾವು ಪರೀಕ್ಷಿಸಬೇಕು.
ಪ್ರಬೋಧಾನಂದ ಸರಸ್ವತೀ ಅವರು ಹೇಳುವಂತೆ, ವಿಶ್ವಂ ಪೂರ್ಣ ಸುಖಾಯತೇ, ಇಡೀ ಲೋಕ ತುಂಬ ಚೆನ್ನ. ನಾವು ಪ್ರತಿ ದಿನ ಪ್ರಾರ್ಥಿಸುತ್ತೇವೆ, ಸಂಸಾರ ದಾವಾನಲ : ಈ ಭೌತಿಕ ಲೋಕವು ಕಾಡಿನ ಬೆಂಕಿಯಂತೆ. ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ, ಭವ ಮಹಾ ದಾವಾಗ್ನಿ. ಆದರೆ ಭಕ್ತರಾದ ಪ್ರಬೋಧಾನಂದ ಸರಸ್ವತಿಯವರು ವಿಶ್ವಂ ಪೂರ್ಣ ಸುಖಾಯತೇ, ಎಂದು ಪ್ರಾರ್ಥಿಸುತ್ತಿದ್ದಾರೆ. ಅವರಿಗೆ ಇಡೀ ವಿಶ್ವವು ಸುಖಮಯ. ಏಕೆ? ಏಕೆಂದರೆ ಅವರು ಮೂಲತಃ ದೇವೋತ್ತಮನನ್ನು ಕುರಿತು ಯೋಚಿಸುತ್ತಿದ್ದಾರೆ, ಅವರು ಚೈತನ್ಯ ಮಹಾಪ್ರಭುಗಳನ್ನು ಕುರಿತು ಯೋಚಿಸುತ್ತಿದ್ದಾರೆ ಮತ್ತು “ದೇವೋತ್ತಮ ಚೈತನ್ಯ ಮಹಾಪ್ರಭುಗಳಿಂದ ನಾನು ಒಂದು ಹನಿ ಕೃಪೆಯನ್ನು ಪಡೆದಿರುವುದರಿಂದ ನಾನು ಎಲ್ಲವನ್ನೂ ಒಳ್ಳೆಯದಾಗಿಯೇ ನೋಡುತ್ತೇನೆ.”
ವಾಸ್ತವವಾಗಿ ಭೌತಿಕ ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದನ್ನು ಕಾಣುತ್ತೇವೆ. ಕೃಷ್ಣನಿಲ್ಲದಿದ್ದರೆ ಮತ್ತು ನಾವು ಕೃಷ್ಣನ ಬಗೆಗೆ ಯೋಚಿಸದಿದ್ದರೆ ಅದು ಕೆಟ್ಟದ್ದು. ಅದು ಕೃಷ್ಣನೊಂದಿಗಾದರೆ ಅದು ಒಳ್ಳೆಯದು.
ರಾಜಕೀಯದ ಉಲ್ಲೇಖ
ಅರ್ಥಮಾಡಿಕೊಳ್ಳಲು ಪ್ರಭುಪಾದರು ಭಾರತದ ರಾಜಕೀಯವನ್ನು ಉಲ್ಲೇಖಿಸಿದ್ದನ್ನು ಉಪನ್ಯಾಸದಲ್ಲಿ ಓದುತ್ತಿದ್ದೆ. ದೇಶದ ನಾನಾ ಭಾಗಗಳಲ್ಲಿ ಚುನಾವಣೆ ನಡೆಯುತ್ತಿದೆ. “ಏಯ್ ಭಾಲ, ಏಯ್ ಮಂದ” ವನ್ನು ಅರ್ಥಮಾಡಿಕೊಳ್ಳಲು ನಾವು ಭಾರತದ ರಾಜಕೀಯವನ್ನು ಅದಕ್ಕೆ ಅನ್ವಯಿಸೋಣ. ಒಂದು ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದುಕೊಳ್ಳಿ. ಅದು ಒಂದು ಅವಧಿಗೆ. ಮತ್ತೊಂದು ಅವಧಿಗೆ ಬೇರೊಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ಮುಂದಿನ ಅವಧಿಗೆ ಹಿಂದಿನ ಅವಧಿಯಲ್ಲಿ ಅಧಿಕಾರದಿಂದ ಹೊರಗಿದ್ದ ಪಕ್ಷವು ಆಡಳಿತಕ್ಕೆ ಬರುತ್ತದೆ. ಏನು ಇದರ ಅರ್ಥ? “ಈ ಬಾರಿ ಈ ಪಕ್ಷ ಒಳ್ಳೆಯದು, ಇದಕ್ಕೆ ಮತ ಹಾಕೋಣ” ಎಂದು ನಾವು ಯೋಚಿಸುತ್ತೇವೆ. ಮುಂದಿನ ಅವಧಿಗೆ “ಈ ಪಕ್ಷವು ಸರಿಯಾಗಿಲ್ಲ. ಆ ಪಕ್ಷಕ್ಕೆ ಮತ ಹಾಕೋಣ” ಎಂದು ಯೋಚಿಸುತ್ತೇವೆ. ಆದರೆ ವಾಸ್ತವವಾಗಿ ಆ ಪಕ್ಷ ಅಥವಾ ಈ ಪಕ್ಷ ಯಾವುದು ಅಧಿಕಾರಕ್ಕೆ ಬಂದರೂ ನಮ್ಮ ಪರಿಸ್ಥಿತಿ ಒಂದೇ ರೀತಿಯದಾಗಿರುತ್ತದೆ. ನಮ್ಮ ಪರಿಸ್ಥಿತಿ ಬದಲಾಗಿಲ್ಲ. ಸಂಕಷ್ಟ ಇದ್ದೇ ಇದೆ. ಬೆಲೆ ಏರಿಕೆ ಹಾಗೆಯೇ ಇದೆ ಮತ್ತು ಯಾತನೆ, ನೋವು ಮುಂದುವರಿದಿದೆ. ಆದುದರಿಂದ ಲೌಕಿಕ ಮಟ್ಟದಲ್ಲಿ ಎಲ್ಲವೂ ಕೆಟ್ಟದ್ದು.
ಆದುದರಿಂದ ದೇವರನ್ನು ಮರೆಯುವುದು ಕೆಟ್ಟದ್ದು ಮತ್ತು ನೆನಪು ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಎಲ್ಲವೂ ಕೆಟ್ಟದ್ದು. ಭೌತಿಕ ಲೋಕದಲ್ಲಿ ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವುದಿಲ್ಲ ಎಂದು ಚೈತನ್ಯ ಮಹಾಪ್ರಭುಗಳೂ ಹೇಳಿದ್ದರು. ನಮ್ಮಲ್ಲಿರುವ ಒಂದು ಒಳ್ಳೆಯದೆಂದರೆ, ಕೃಷ್ಣನೊಂದಿಗೆ ಸಂಪರ್ಕಹೊಂದುವ ಅವಕಾಶ ನಮಗೆ ಇರುವುದು. ಕೃಷ್ಣನನ್ನು ಸ್ಮರಿಸುವ ಅವಕಾಶ ನಮಗಿದೆ. ನಾವು ಕೃಷ್ಣನನ್ನು ಮರೆತಿದ್ದೇವೆ. ಆದುದರಿಂದ ಕೃಷ್ಣನ ಬಗೆಗೆ ಕೇಳಲು ನಾವು ತುಂಬ ಕಾತರರಾಗಿರಬೇಕು. ಕೃಷ್ಣನ ಬಗೆಗೆ ಕೇಳುವುದರಿಂದ ಭೌತಿಕ ಲೋಕದ ಎಲ್ಲ ಒಳ್ಳೆಯ ಮತ್ತು ಕೆಟ್ಟದ್ದನ್ನು ನಾವು ಮರೆಯಬಹುದು. ಕೃಷ್ಣನನ್ನು ಸ್ಮರಿಸುವ, ಕೃಷ್ಣನನ್ನು ಅರ್ಥಮಾಡಿಕೊಳ್ಳುವ ಸ್ಥಿತಿಗೆ ನಾವು ಬರುತ್ತೇವೆ.
ಇಟಲಿಯಲ್ಲಿ ಉಪನ್ಯಾಸ
ಇದು ಇಟಲಿಯಲ್ಲಿ ನಡೆದದ್ದು. ಪ್ರಭುಪಾದರು ರೋಂಗೆ ಭೇಟಿ ನೀಡಿದ್ದಾಗ ಅಲ್ಲಿ ಉಪನ್ಯಾಸ ನೀಡುವಾಗ ನಡೆದದ್ದು. ಧನಂಜಯ ದಾಸ ಎಂಬ ಭಕ್ತರು ಇದನ್ನು ನೆನಪು ಮಾಡಿಕೊಂಡಿದ್ದಾರೆ. ಪ್ರಭುಪಾದರು ಇಟಲಿಯಲ್ಲಿ ಮೊದಲ ಬಾರಿಗೆ ದೊಡ್ಡ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಈ ಕಾರ್ಯಕ್ರಮವು ಪಾರ್ಕೊ ಡೀ ಪ್ರಿನ್ಸಿಪಿ ಹೊಟೇಲ್‌ನಲ್ಲಿ ನಡೆಯಿತು. ಅದು ವಿಲ್ಲಾ ಬೊರ್ಗಿಸ್ ಎಂಬ ಸುಂದರ ಉದ್ಯಾನದಲ್ಲಿತ್ತು. ಈ ಹೊಟೇಲ್‌ನಲ್ಲಿ 500 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣವಿತ್ತು. ಅದು ರೋಂನ ಹೃದಯ ಭಾಗದಲ್ಲಿತ್ತು. ಅದೊಂದು ದೊಡ್ಡ ಕಾರ್ಯಕ್ರಮವಾಗಿತ್ತು.

ಪ್ರಭುಪಾದರಿಗಾಗಿ ಈ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದ್ದ ಭಕ್ತರಿಗೆ ಆತಂಕವಿತ್ತು. ಕೇವಲ 20-25 ಜನರು ಬಂದರೇನು ಮಾಡುವುದು? ಏಕೆಂದರೆ ನ್ಯೂಯಾರ್ಕ್‌ನಲ್ಲಿ ಒಂದೆರಡು ಬಾರಿ ಹಾಗೆ ಆಗಿತ್ತು. ಭಕ್ತರು ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು. ಕೆಲವೇ ಜನರು ಬಂದಿದ್ದರು. ಅದು ಆಂದೋಲನದ ಆರಂಭದ ಕಾಲ. ಈಗಲೂ 20-25 ಮಂದಿ ಬಂದರೇನು ಮಾಡುವುದು ಎಂದು ಭಕ್ತರು ಚಿಂತಿತರಾಗಿದ್ದರು. ಪ್ರಭುಪಾದರು ಏನು ಯೋಚಿಸಬಹುದು, ನಾವು ಹೇಗೆ ಮುಖ ತೋರಿಸುವುದು ಎಂದು ಆ ಭಕ್ತರು ಆತಂಕಗೊಂಡಿದ್ದರು.
ಕಾರ್ಯಕ್ರಮವು ಸಂಜೆಗಿತ್ತು. ಪ್ರಭುಪಾದರು ಇತರ ಭಕ್ತರೊಂದಿಗೆ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತ ಗಡಿಬಿಡಿಯಲ್ಲಿದ್ದರು. ಕಾರ್ಯಕ್ರಮ ಆರಂಭವಾಗುವುದಕ್ಕೆ ಕೆಲವೇ ನಿಮಿಷ ಮೊದಲು ಬಂದರು. ಆಗ ಸಭಾಂಗಣದಲ್ಲಿ ಕತ್ತಲು. ದೀಪಗಳನ್ನು ನಂದಿಸಲಾಗಿತ್ತು. ದಿ ವರ್ಲ್ಡ್ ಆಫ್ ಹರೇ ಕೃಷ್ಣ ಎಂಬ ಚಲನಚಿತ್ರವನ್ನು ತೋರಿಸಲಾಗುತ್ತಿತ್ತು. ಪ್ರಭುಪಾದರು ಭಕ್ತರೊಂದಿಗೆ ಹೊರಗೆ ಕಾಯುತ್ತಿದ್ದರು. 5-10 ನಿಮಿಷಗಳ ಅನಂತರ ಕಾರ್ಯಕ್ರಮದ ಸಂಘಟಕರು ಪ್ರಭುಪಾದರನ್ನು ವೇದಿಕೆಗೆ ಬಂದು ಉಪನ್ಯಾಸ ನೀಡಲು ಕರೆದರು. ಸಭಾಭವನದಲ್ಲಿ ಎಷ್ಟು ಜನರಿದ್ದಾರೋ ಎಂಬ ಅಳುಕು ಭಕ್ತರನ್ನು ಕಾಡುತ್ತಿತ್ತು.
ಈ ಭಕ್ತರು ನೆನಪು ಮಾಡಿಕೊಂಡರು, “ನಾವು ವೇದಿಕೆ ಮೇಲೆ ಬಂದಾಗ ದೀಪಗಳನ್ನು ಬೆಳಗಲಾಯಿತು. ಪ್ರತಿಯೊಂದು ಆಸನದಲ್ಲಿಯೂ ಜನರು ಕುಳಿತಿದ್ದರು. ನಿಜಕ್ಕೂ ಅಚ್ಚರಿ, ಅದ್ಭುತ. ಸಭಾಂಗಣದ ಹಿಂಬದಿ ಗೋಡೆಯ ಬಳಿ ಜನರು ನಿಂತಿದ್ದನ್ನು ಕಂಡೆ. ಸಭಾಂಗಣದ ಎರಡೂ ಕಡೆ ಜನರಿದ್ದರು ಮತ್ತು ನಡುದಾರಿಯಲ್ಲಿಯೂ ಕುಳಿತಿದ್ದನ್ನು ಗಮನಿಸಿದೆ. ಇಡೀ ಸಭಾಂಗಣವು ತುಂಬಿತ್ತು. ಸ್ವಲ್ಪವೂ ಜಾಗವಿರಲಿಲ್ಲ. ಶ್ರೀಲ ಪ್ರಭುಪಾದರ ಉಪನ್ಯಾಸವನ್ನು ಕೇಳಲು ಜನರು ಅಷ್ಟು ಕಾತರರಾಗಿದ್ದರು. ಸಭಾಂಗಣವು 500 ಜನರಿಗಾಗಿ ಇದ್ದರೂ ಅಲ್ಲಿ ಕೊನೆಪಕ್ಷ 800 ಜನರಿದ್ದರು.”
ಪ್ರಭುಪಾದರು ಈ ಭಕ್ತನತ್ತ ತಿರುಗಿ ಹೇಳಿದರು, “ಓ, ಈ ಇಟಾಲಿಯನ್ನರು ಕೃಷ್ಣಪ್ರಜ್ಞೆಯಲ್ಲಿ ತುಂಬ ಆಸಕ್ತಿ ಹೊಂದಿದ್ದಾರೆ. ಅವರಿಗೆ ಕೇಳಬೇಕೆನಿಸಿದೆ.” ಜನರ ಈ ಉತ್ಸಾಹ ಕಂಡು ಪ್ರಭುಪಾದರಿಗೆ ತುಂಬ ಸಂತೋಷವಾಯಿತು.
ಕೀರ್ತನೆಯ ಅನಂತರ ಪ್ರಭುಪಾದರು ಮಾತನಾಡಲಾರಂಭಿಸಿದರು. ಇಟಲಿಯ ಭಕ್ತರೊಬ್ಬರು ಅವರ ಭಾಷಣವನ್ನು ಅನುವಾದಿಸುತ್ತಿದ್ದರು. ಪ್ರಭುಪಾದರು ಸುಮಾರು 45 ನಿಮಿಷ ಮಾತನಾಡಿದರು. ಎಲ್ಲರೂ ಆಸಕ್ತಿಯಿಂದ ಕೇಳುತ್ತಿದ್ದರು. ಅನಂತರ ಪ್ರಭುಪಾದರು ಪ್ರಶ್ನೆಗಳನ್ನು ಕೇಳುವಂತೆ ಕೋರಿದರು. “ಎಷ್ಟು ಜನರು ಪ್ರಶ್ನೆ ಕೇಳುವರೋ” ಎಂದು ಈ ಭಕ್ತರು ಪುನಃ ಆತಂಕಕ್ಕೆ ಒಳಗಾದರು. ಪ್ರಶ್ನೆ ಕೇಳಲು ಉತ್ಸುಕರಾದ ಅನೇಕ ಜನರು ತಮ್ಮ ಕೈಗಳನ್ನು ಎತ್ತಿದರು. ಅದು ಅದ್ಭುತ. ನೂರಾರು ಜನರು ಒಂದು ನಿರ್ದಿಷ್ಟ ಪ್ರಶ್ನೆಯನ್ನು ಕೇಳಲು ಮುಂದಾದರು. ಪ್ರಭುಪಾದರು ಈ ಭಕ್ತರತ್ತ ತಿರುಗಿ ಹೇಳಿದರು, “ನೋಡಿ. ಅವರಿಗೆ ನಿಜವಾಗಿಯೂ ಅರ್ಥಮಾಡಿಕೊಳ್ಳುವುದು ಬೇಕಾಗಿದೆ. ಕೃಷ್ಣಪ್ರಜ್ಞೆಯನ್ನು ಅರಿಯಲು ಅವರಿಗೆ ಇರುವ ಉತ್ಸಾಹ ಕಂಡು ನನಗೆ ತುಂಬ ಸಂತೋಷವಾಗಿದೆ.” ಪ್ರಭುಪಾದರು 45 ನಿಮಿಷಗಳ ಕಾಲ ಉಪನ್ಯಾಸ ನೀಡಿದರು ಮತ್ತು ಸುಮಾರು ಒಂದು ತಾಸು ಪ್ರಶ್ನೆಗಳಿಗೆ ಉತ್ತರಿಸಿದರು. ಅನಂತರ ಕೀರ್ತನೆ ನಡೆಯಿತು. ಆಮೇಲೆ ಪ್ರಸಾದವನ್ನು ವಿತರಿಸಲಾಯಿತು.
ಅರಿಯಲು ಕಾತರವಿರಲಿ

ಅಥಾತೋ ಬ್ರಹ್ಮ ಜಿಜ್ಞಾಸಾ, ಪ್ರಭುಪಾದರನ್ನು ಕೇಳಲು ನಾವು ತುಂಬ ಕಾತರದಿಂದ ಇರಬೇಕು. ಪ್ರತಿ ದಿನ ನಾವು ಪ್ರಭುಪಾದರನ್ನು ಕೇಳುತ್ತಿರಬಹುದು. “ನನ್ನ ಪುಸ್ತಕಗಳ ಮೂಲಕ ನೀವು ನನ್ನೊಂದಿಗೆ ಸಂಪರ್ಕ ಇಟ್ಟುಕೊಂಡರೆ ನೀವು ನನ್ನ ಅನುಪಸ್ಥಿತಿಯನ್ನು ಅನುಭವಿಸುವುದಿಲ್ಲ” ಎಂದು ಪ್ರಭುಪಾದರು ಹೇಳಿದ್ದರು. ಈ ಲೋಕಕ್ಕೆ ಪ್ರಭುಪಾದರ ಶ್ರೇಷ್ಠ ಕೊಡುಗೆ ಎಂದರೆ ಅವರ ಪುಸ್ತಕಗಳು. ಆದುದರಿಂದ ಅವರ ಪುಸ್ತಕಗಳನ್ನು ಓದಲು ನಾವು ಕಾತರರಾಗಿರಬೇಕು. ಅವರು ಎಷ್ಟೊಂದು ಪುಸ್ತಕಗಳನ್ನು ಬರೆದಿದ್ದಾರೆ. ನೀವು ಜೀವಮಾನವಿಡೀ ಓದಬಹುದು. ಆದರೂ ಅದನ್ನು ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಆದುದರಿಂದ ಈ ಒಂದು ವಿಷಯದಲ್ಲಿ ನಾವು ಕಾತರರಾಗಿರಬೇಕು – ಪ್ರತಿ ದಿನ ನಾವು ಸಮಯವನ್ನು ನಿಗದಿಪಡಿಸಿಕೊಂಡು ಓದಬೇಕು, ಕೇಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಈ ಭಕ್ತಿಸೇವೆಯಿಂದ ಭಕ್ತಿಲತೆಯು ಕ್ಷಿಪ್ರವಾಗಿ ಬೆಳೆಯುತ್ತದೆ. ಇದನ್ನು ನಾವು ಮರೆಯಬಾರದು. ಬೇರೆ ಬೇರೆ ಸೇವೆಗಳಿಂದಾಗಿ ಕೆಲವು ಬಾರಿ ಭಕ್ತರು ಓದುವುದರಲ್ಲಿ ಸ್ವಲ್ಪ ಉದಾಸೀನ ತೋರುತ್ತಾರೆ. ಆದರೆ ಓದಲೇಬೇಕು. ನಾವು ಪ್ರಭುಪಾದರನ್ನು ಆನಂದಪಡಿಸೋಣ, ನಮ್ಮ ಕೃಷ್ಣಪ್ರಜ್ಞೆ ಬೇಗನೆ ಬೆಳೆಯುತ್ತದೆ. ಪ್ರಭುಪಾದರ ಪುಸ್ತಕಗಳನ್ನು ಓದುವುದರಿಂದ ನಾವು ಶುದ್ಧ ಭಕ್ತರೊಂದಿಗೆ ನೇರ ಸಹವಾಸ ಹೊಂದುತ್ತೇವೆ.






Leave a Reply