ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ
– ಸಂಗ್ರಹಾನುವಾದ: ಡಾ.ಕೆ.ವೈ.ಬಾಲರಾಜ್, ಆಧಾರ: ಕಾವನಾರು ಕೃಷ್ಣನಲ್ಲದೆ – ಕುಂತಿದೇವಿಯ ಧರ್ಮಬೋಧನೆ
“ನನ್ನ ಬಂಧು ಬಾಂಧವರಲ್ಲಿ ನನಗಿರುವ ಮಮತೆಯೆಂಬ ಗಂಟನ್ನು ಕತ್ತರಿಸಿಬಿಡು, ಈ ವ್ಯಾಮೋಹದ ಸಂಸಾರದಿಂದ ನನ್ನನ್ನು ವಿಮುಕ್ತಗೊಳಿಸು” ಕುಂತಿದೇವಿಯು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತಾಳೆ.

ಆದರೆ ಸಾಮಾನ್ಯರಾದ ನಾವು ನಾನು, ನನ್ನದು ಎಂದು ಯೋಚಿಸುತ್ತಲೇ ಇಡೀ ಜೀವನವನ್ನು ಕಳೆಯುತ್ತಿರುತ್ತೇವೆ. ಈ ಮೋಹ, ಭ್ರಾಂತಿ ನಮಗೆ ಹೇಗೆ ಬಂತು? ಹೆಣ್ಣು- ಗಂಡಿನ ಸ್ವಾಭಾವಿಕ ಆಕರ್ಷಣೆಯಿಂದ ಇದು ಮೊದಲಾಗುತ್ತದೆ.
ವಿವಾಹ, ಮನೆ, ಸಂಪಾದನೆ, ಮಕ್ಕಳು, ಬದುಕಿನಲ್ಲಿ ಇನ್ನಷ್ಟು ಶ್ರೀಮಂತಿಕೆ, ಆಡಂಬರ, ಬಂಧು ಬಾಂಧವರು, ಸ್ನೇಹಿತರಿಂದ ಪ್ರಶಂಸೆಯ ಮಾತುಗಳು ಹೀಗೆ ಮೋಹ ಪಾಠಗಳು ಬೆಳೆಯುತ್ತಲೇ ಹೋಗುತ್ತವೆ.
ಇದು ಸಾಮಾನ್ಯನ ಪಾಡಾದರೆ ಶುದ್ಧ ಭಕ್ತನು ತನ್ನ ಕುಟುಂಬದ ಬಗೆಗಿನ ಅಲ್ಪ ವಾತ್ಸಲ್ಯದ ಬಂಧನವನ್ನು ಕಡಿದುಕೊಂಡು ತನ್ನ ಕಾರ್ಯಶೀಲತೆಯನ್ನು ಭಕ್ತಿ ಸೇವೆಗೆ ವಿಸ್ತರಿಸಿಕೊಳ್ಳುತ್ತಾನೆ. ಸಂಸಾರದ ಮೋಹ ಪಾಶಗಳಿಂದ ಕಳಚಿಕೊಳ್ಳುವುದೆಂದರೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಂತೆ.
ಆದರೆ ಬಹಳ ಮಂದಿ ಭಕ್ತರೆನಿಸಿಕೊ೦ಡವರು ಈ ಐಹಿಕ ಜಗತ್ತಿನಲ್ಲಿ ತಮ್ಮ ಸಂಪತ್ತನ್ನು ವರ್ಧಿಸಿಕೊಳ್ಳಲು, ಲೌಕಿಕ ಸ್ಥಾನಮಾನಗಳನ್ನು ಬಯಸಿ ಭಗವಂತನನ್ನು ಪೂಜಿಸುತ್ತಾರೆ. ಒಂದು ದೃಷ್ಟಿಯಲ್ಲಿ ಇದು ಒಳ್ಳೆಯದೇ ಆದರೂ ಇದೇ ಜೀವನದ ಅಂತಿಮ ಗುರಿಯಲ್ಲ ಮತ್ತು ಅಪೇಕ್ಷಣೀಯವಾದುದಲ್ಲ.
ವ್ಯಕ್ತಿ ಈ ಪ್ರಾಪಂಚಿಕ ಒಲವುಗಳಿಂದ ಮುಕ್ತನಾದಾಗಲೇ ನಿಜವಾದ ಭಕ್ತಿಯೋಗದ ಸಾಧನೆ ಸಾಧ್ಯವಾಗುವುದು. ಈ ಪ್ರಾಪಂಚಿಕ ವಸ್ತು- ವಿಷಯಗಳಲ್ಲಿನ ಮೋಹವೇ ನಮ್ಮ ಎಲ್ಲ ದುಃಖಗಳಿಗೂ, ಪಾಪ- ಪುಣ್ಯಕರ್ಮಗಳಿಗೂ ಕಾರಣವಾಗುತ್ತದೆ.

ಪರಮ ಪ್ರಭುವಿನ ಭಕ್ತನಾಗಲು ಮೊದಲು ವೈರಾಗ್ಯವನ್ನು ನಾವು ಗಳಿಸಬೇಕು. ವೈರಾಗ್ಯವೆಂದರೆ ನಮ್ಮಲ್ಲಿರುವ ನಿಜವಾದ ಸಂಸಾರ ಮೋಹಪಾಶಗಳ ಬಂಧನದ ತುಂಡರಿಸುವಿಕೆಯೇ ಹೊರತು ಅದು ಅಭಾವ ವೈರಾಗ್ಯವಾಗಿರಬಾರದು. ನಮ್ಮನ್ನು ಬಂಧನಕ್ಕೆ ತಳ್ಳುವ ಸಮಾಜ, ಗೆಳೆತನ ಹಾಗೂ ಪ್ರೇಮ ಇವುಗಳನ್ನು ಪರಿತ್ಯಜಿಸಲೇಬೇಕು.
ಈ ದೇಹವೇ ಬದುಕೆಂಬ ಗ್ರಹಿಕೆಯಿಂದ ಮುಕ್ತಿ ದೊರಕಿಸುವ ಶಿಕ್ಷಣವು ನಮಗೀಗ ಅಗತ್ಯವಾಗಿದೆ. ದುರದೃಷ್ಟವಶಾತ್ ಈಗಿನ ಆಡಂಬರ ಜೀವನ, ವಿಜ್ಞಾನ, ರಾಜಕಾರಣ ಎಲ್ಲವೂ ಮನುಷ್ಯನ ಭೋಗ ಜೀವನ ಸುಖಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯವನ್ನು ನೀಡುತ್ತಿದೆ. ಇಂತಹ ಅವಿವೇಕಿಗಳು ಜನರನ್ನು ದೈಹಿಕ ಉಪಾಧಿಗಳ ಕಡೆ ಸೆಳೆಯುತ್ತಿದ್ದಾರೆ.
ಮಾನವನ ಬದುಕು ನಾಯಿ ಬೆಕ್ಕುಗಳಂತೆ ತಿನ್ನುವುದು, ಮಲಗುವುದು, ಮೈಥುನ ಮತ್ತು ರಕ್ಷಣೆಗಳಲ್ಲಿಯೇ ಕಳೆಯುತ್ತಿದೆ. ಹಣದ ಹಿಂದೆ ಓಡುತ್ತಿರುವ ಈ ಬದುಕು ತನ್ನ ಮೌಲ್ಯಗಳನ್ನು ಕಳೆದುಕೊಂಡು ನಿಸ್ತೇಜವಾಗುತ್ತಿದೆ. ಭಗವಂತನ ನಾಮಸ್ಮರಣೆ ಮಾಡುವಷ್ಟು ವ್ಯವಧಾನವನ್ನು ಕೂಡ ಕಳೆದುಕೊಂಡುಬಿಟ್ಟಿದೆ.
ಭಗವಂತನು ಜಗದೊಡೆಯ. ಬ್ರಹ್ಮಾಂಡದ ಮನೋವ್ಯಾಪಾರದ ನಾಯಕನಾಗಿದ್ದಾನೆ. ಇದು ಸಂಸಾರ ಬಂಧನವೆಂಬ ಕಗ್ಗಂಟನ್ನು ಕಳಚಿ ಹಾಕುವ ಸಾಮರ್ಥ್ಯವು ಸೇರಿದಂತೆ ಭಗವಂತನ ಸರ್ವಶಕ್ತಿತ್ವವನ್ನು ಸೂಚಿಸುತ್ತದೆ.
ಪರಮ ಪ್ರಭುವಾದ ಭಗವ೦ತನು ಮನೋದೌರ್ಬಲ್ಯವಿರುವ ದುರ್ಬಲ ಭಕ್ತನಲ್ಲಿ ವಿಶೇಷ ಮಮತೆಯನ್ನಿಟ್ಟು ಸನ್ನಿವೇಶಗಳ ಒತ್ತಡದಿಂದ ನಿರ್ಮಿತವಾದ ಸಂಸಾರ ಮೋಹವೆಂಬ ಕಗ್ಗಂಟನ್ನು ತನ್ನ ಸರ್ವಶಕ್ತತೆಯ ನೆರವಿನಿಂದ ಕತ್ತರಿಸಿ ಹಾಕುತ್ತಾನೆ.

ಈ ಬಗೆಯಲ್ಲಿ ಭಕ್ತನು ತನ್ನನ್ನೇ ಸಂಪೂರ್ಣವಾಗಿ ಅವಲಂಬಿಸುವಂತೆ ಮಾಡುವ ಪ್ರಭು ಭಗವದ್ಧಾಮಕ್ಕೆ ಮರಳುವ ಭಕ್ತನ ಹಾದಿಯನ್ನು ಸುಗಮಗೊಳಿಸುತ್ತಾನೆ. ಭಕ್ತಿಯು ಒಂದು ಐಹಿಕ ಪ್ರಪಂಚದ ಮೇಲಿನ ಮಮತೆಯಿಂದ ಮುಕ್ತವಾಗುವುದು ಮತ್ತು ಅದೇ ಸಮಯದಲ್ಲಿ ಕೃಷ್ಣನಲ್ಲಿ ಪ್ರೇಮ ತೋರುವುದು ಈ ಎರಡೂ ಬಗೆಯ ಕ್ರಿಯೆಗಳನ್ನು ಒಳಗೊಂಡಿದೆ.
ಕೃಷ್ಣನು ದುಷ್ಟ ಸಂಹಾರ, ಶಿಷ್ಟರ ರಕ್ಷಣೆಗಾಗಿ ಎಷ್ಟು ಸಮಯ ಯಾವುದಕ್ಕೆ ಹೆಚ್ಚಾಗಿ ವಿನಿಯೋಗಿಸಿದ ಎಂದು ಲೆಕ್ಕ ಹಾಕಿದರೆ ಆತನ ಸಂಹಾರ ಕಾರ್ಯಕ್ಕೇನೆ ಹೆಚ್ಚಿನ ಸಮಯ ವಿನಿಯೋಗಿಸಿದ ಎಂದು ತಿಳಿಯುತ್ತದೆ. ಆದುದರಿಂದ ಕೃಷ್ಣಪ್ರಜ್ಞಾವಂತರು ದಾನವ ಗುಣಗಳು, ಅಜ್ಞಾನವನ್ನು ಸಂಹಾರ ಮಾಡಬೇಕು.
ಈ ಕಲಿಯುಗದಲ್ಲಿ ಜನರು ವಿಶೇಷವಾಗಿ ಬಡವರೇ ಆಗಿರುವುದರಿಂದ ಅಂತಹವರಿಗೆ ಆಧ್ಯಾತ್ಮಿಕ ತಿಳುವಳಿಕೆಯಿಂದ ಸತ್ಯದರ್ಶನ ಮಾಡಿಸಬೇಕು. ಹರೇ ಕೃಷ್ಣ ಮಹಾ ಮಂತ್ರ ಜಪವೇ ಪ್ರತಿಯೊಬ್ಬರ ಉಸಿರಾಗಬೇಕು.
ಇಂದ್ರಿಯ ತೃಪ್ತಿಯೇ ಜೀವನವಾಗಬಾರದು. ಕೃಷ್ಣನಲ್ಲಿ ಪ್ರೇಮ ತೋರಲು ಅಥವಾ ಪರಮ ಪ್ರಭುವಿನಲ್ಲಿ ಭಕ್ತಿಸೇವೆಯ ಒಲವು ತಾಳಲು ಲೋಕದ ಮೇಲಿನ ವ್ಯಾಮೋಹವನ್ನು ಮೋಹಪಾಶಗಳನ್ನು ಪರಿತ್ಯಜಿಸಿ ಅವನಲ್ಲಿ ಶರಣಾಗತರಾಗಬೇಕು.






Leave a Reply