ನನಗಿಷ್ಟವಾದ ಶ್ರೀಕೃಷ್ಣನ ಬಾಲಲೀಲೆ

ಶ್ರೀವಿಷ್ಣು, 9ನೇ ತರಗತಿ, ವಿವೇಕಾನಂದ ಹೈಸ್ಕೂಲ್, ಶಿವಮೊಗ್ಗ

ಕೃಷ್ಣ ಎಂದರೆ ಯಾರಿಗೆ ಇಷ್ಟವಿಲ್ಲ? ‘ಕೃಷ್ಣ’ ಎನ್ನುವ ಪದ ನುಡಿಯಲಿಕ್ಕೇ ಮನಸ್ಸು ಉತ್ಸಾಹದಿಂದ ಪುಟಿದೇಳುತ್ತದೆ. ಹೇಳಲಾಗದ ಯಾವುದೋ ಆನಂದ ಮನ ತುಂಬುತ್ತದೆ. ಬಹುತೇಕವಾಗಿ ಕೃಷ್ಣ ಇಷ್ಟವಾಗುವುದು ಬಾಲಕೃಷ್ಣನಾಗಿ. ಕೃಷ್ಣ ವೃಂದಾವನ ಬಿಟ್ಟು ಮಥುರೆಗೆ ಸೇರಿದ ಮೇಲೆ ಯದುವಂಶದ ರಾಜಕಾರಣದಲ್ಲಿ ಮುಳುಗಿಬಿಡುತ್ತಾನೆ.

ಅತ್ತೆಯ ಮಕ್ಕಳಾದ ಪಾಂಡವರ ಬೆಂಗಾವಲಾಗಿ ನಿಲ್ಲುವಲ್ಲಿ ಯದುಕುಲದ ನೂತನ ರಾಜ್ಯ ದ್ವಾರಕೆ ಕಟ್ಟುವಲ್ಲಿ ತಲ್ಲೀನನಾಗುತ್ತಾನೆ. ಆದರೂ ಆ ಎಲ್ಲ ಸನ್ನಿವೇಶಗಳಲ್ಲೂ ಅವನ ‘ಕೃಷ್ಣತನ’ ಮಾತ್ರ ವಿಶೇಷವಾಗಿ ಉಳಿದುಕೊಂಡೇ ಸಾಗುತ್ತದೆ.

ಶ್ರೀಕೃಷ್ಣನ ಬಾಲಲೀಲೆಗಳು ನಮ್ಮನ್ನು ಬಹಳವಾಗಿ ತಟ್ಟುತ್ತವೆ. ಇಲ್ಲಿ ಕೃಷ್ಣ ನಮ್ಮ ಸಮವಯಸ್ಕನಾಗಿ ಬಿಡುತ್ತಾನೆ. ಹೀಗಾಗಿ ಅವನು ನಮಗೆ ತೀರಾ ಹತ್ತಿರದವನಾಗಿ, ಆಪ್ತನೆನಿಸುತ್ತಾನೆ. ನನಗಿಷ್ಟವಾಗುವ ಕೃಷ್ಣನ ಲೀಲೆ – ಗೋವರ್ಧನಗಿರಿಯ ಪೂಜೆ ಮಾಡಿದ್ದು, ಗೋವರ್ಧನೋದ್ಧಾರಕನಾಗಿ, ಗಿರಿಧಾರಿಯಾಗಿದ್ದು.

ನಮ್ಮ ಈ ಪ್ರೌಢತೆಗೆ ಕಾಲಿಡುವ ವಯಸ್ಸು ಪರಿವರ್ತನೆಗೆ, ಹೊಸತನಕ್ಕೆ ತೆರೆದುಕೊಳ್ಳುವಂಥದ್ದು, ಸರಿಯಲ್ಲದ್ದನ್ನು ಖಂಡಿಸುವ ಹುಮ್ಮಸ್ಸು ತೋರುವಂಥದ್ದು. ಈ ಕಾರಣಕ್ಕಾಗಿಯೇ ಕೃಷ್ಣನ ಈ ಲೀಲೆ ನನಗಿಷ್ಟ.

ವ್ರಜವಾಸಿಗಳು ತಲತಲಾಂತರದಿಂದ ಇಂದ್ರನ ಪೂಜೆಯನ್ನು ಮಾಡಿಕೊಂಡು ಬಂದಿರುತ್ತಾರೆ. ಆದರೆ, ನಮ್ಮ ಕೃಷ್ಣನಿಗೇಕೋ ತಮಗೆಲ್ಲ ಉಪಕಾರಿಯಾಗಿರುವ, ತಮ್ಮ ಗೋವುಗಳಿಗೆ ಆಶ್ರಯದಾತನಾಗಿರುವ ಗೋವರ್ಧನಗಿರಿಗೇ ಪೂಜೆ ಸಲ್ಲಿಸುವುದು ಸೂಕ್ತ ಎನಿಸುತ್ತದೆ. ಅಲ್ಲಿನ ಗೋಪ ಜನರಾದರೂ ಅಷ್ಟೇ. ‘ಕೃಷ್ಣ ಇನ್ನೂ ಬಾಲಕ’ ಎಂದು ಅವನ ಸಲಹೆಯನ್ನು ತಳ್ಳಿ ಹಾಕುವುದಿಲ್ಲ, ಅಲ್ಲದೆ, ಕೃಷ್ಣ ಹೇಳಿದ ವಿಷಯ ಸಮಂಜಸವಾಗಿದ್ದು, ಅದನ್ನು ಅನುಸರಿಸುವುದೇ ಸರಿ ಎಂದೆನಿಸುತ್ತದೆ ಅವರಿಗೆ.

ಹೀಗೆ ವೃಂದಾವನದ ಗೋಪರೆಲ್ಲರೂ ಗೋವರ್ಧನ ಗಿರಿಯ ಪೂಜೆಯಲ್ಲಿ ತೊಡಗಿದ್ದಾಗ, ಕುಪಿತನಾದ ಇಂದ್ರ, ವಜ್ರಾಯುಧ ಪ್ರಹಾರದಿಂದ ಮೋಡಗಳನ್ನು ಒಡೆದು, ಕೊಚ್ಚಿಹೋಗುವಂಥ ಮಳೆ ಸುರಿಸುತ್ತಾನೆ. ಗಿರಿಯ ಬಳಿ ಸೇರಿದ ಗೋವುಗಳು, ಆಬಾಲ ವೃದ್ಧ ಸ್ತ್ರೀಯರಾದಿಯಾಗಿ ಎಲ್ಲರೂ ಕಳವಳಪಡುತ್ತಾರೆ.

ಆವರೆಗೂ ತೆರೆಯ ಮರೆಯಲ್ಲೋ, ಯಾರೂ ಇಲ್ಲದಲ್ಲೋ ತನ್ನ ಅತಿಮಾನುಷ ಶಕ್ತಿಯನ್ನು ಹೊರಗೆಡುವುತ್ತಿದ್ದ ಕೃಷ್ಣನಿಗೆ, ಈಗ ಎಲ್ಲರೆದುರಲ್ಲೇ ತನ್ನ ಚಮತ್ಕಾರ ತೋರುವ ಅನಿವಾರ್ಯ ಒದಗುತ್ತದೆ. ಅಂತೆಯೇ ಆತ ತನ್ನ ಕಿರುಬೆರಳಲ್ಲಿ ಗೋವರ್ಧನ ಗಿರಿಯನ್ನೆತ್ತಿ ವ್ರಜವಾಸಿಗಳೆಲ್ಲರಿಗೂ ಅದರ ಕೆಳಗೆ ರಕ್ಷಣೆ ನೀಡುತ್ತಾನೆ.

ನಮ್ಮಲ್ಲಿ, ಹೊಸತೊಂದು ದಾರಿ ತೋರಿಸಿ – ಅಲ್ಲಿ ಅಪಾಯ ಎದುರಾದರೆ ತಪ್ಪಿಸಿಕೊಂಡು ಹೋಗುವವರೇ ಹೆಚ್ಚು. ದೇವೋತ್ತಮ ಪರಮಪುರುಷ ಶ್ರೀಕೃಷ್ಣ ಮಾನವ ರೂಪ ತಳೆದು ಬಂದಾಗ ಹೇಗೆ ಮಾನವರು ತಮ್ಮ ಕರ್ತವ್ಯ ನಿಭಾಯಿಸಬೇಕೆಂದು ಸ್ವತಃ ಉದಾಹರಣೆಯಾಗಿ ತೋರಿಸಿಕೊಟ್ಟಿದ್ದಾನೆ.

ಮಾನವರ ನಡುವೆ ಇದ್ದು, ಮಾನವರಂತೆಯೇ ವ್ಯವಹರಿಸಿ ಕೃಷ್ಣಪ್ರಜ್ಞೆಗೇರಲು ಅನುಸರಿಸಬೇಕಾದ ಮಾರ್ಗತೋರಿದ ಶ್ರೀಕೃಷ್ಣನ ಒಂದೆರಡಲ್ಲ, ಪ್ರತಿಯೊಂದು ಲೀಲೆಯೂ ನನಗೆ ವಿಶೇಷವೆಂದೆನಿಸಿ ಬಹಳ, ಬಹಳ ಮೆಚ್ಚುಗೆಯಾಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi