ಓ, ರೋಮಿಯೋ ಏನಾಯ್ತು?

ಇನ್ನೂ ಹೆಚ್ಚು ಅಳಲಿನ ಒಂದು ಕಥೆ

ಆಂಗ್ಲ ಮೂಲ : ರಾಧಾ ಕೃಷ್ಣ ಸ್ವಾಮಿ

ಶೇಕ್ಸ್‌ಪಿಯರನ ರೋಮಿಯೋ ಜೂಲಿಯೆಟ್‌ ಕಥೆಯು ನಿಜವಾದ ಪ್ರೇಮಕ್ಕೆ ಅತ್ಯುತ್ತಮ ಉದಾಹರಣೆ ಎಂದು ವಿಶ್ವಾದ್ಯಂತ ಪರಿಗಣಿಸಲಾಗಿದೆ. ಈ ಮನಮೋಹಕ ನಾಟಕವನ್ನು ನೋಡುವ ಅಥವಾ ಓದುವವರ ಮನ ಕರಗುತ್ತದೆ. ತಮ್ಮ ಆದರ್ಶ ಪ್ರೇಮದ ಜೊತೆಗೆ ರಾಜಿ ಮಾಡಿಕೊಳ್ಳುವುದಕ್ಕಿಂತ ಸಾಯುವುದು ಮೇಲು ಎಂಬ ಆ ಪ್ರೇಮಿಗಳ ನಿರ್ಧಾರಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಪ್ರೇಮಿಗಳು ತಮ್ಮ ಬದುಕಿನಲ್ಲಿ ಹೇಗೆ ಸಂತೋಷದಿಂದ ವಂಚಿತರಾದರೆಂದು ತಿಳಿದು ಇನ್ನೂ ಕೆಲವರು ಮಮ್ಮಲ ಮರುಗಿದರು. ಕೆಲವರಂತೂ ತಮ್ಮದೇ ಬದುಕಿನ ಹಂಬಲ ಮತ್ತು ಹತಾಶೆಯನ್ನು ರೋಮಿಯೋ ಜೂಲಿಯೆಟ್‌ ಕಥೆಯಲ್ಲಿ ಕಾಣುತ್ತಾರೆ.

ಕಥೆಯು ಮಾಡಿರುವ ಮೋಡಿಗೆ ಕಾರಣಗಳೇನೇ ಇರಲಿ, ಈ ದುರಂತ ಕಥೆಯ ಅಂತ್ಯವು ಭಿನ್ನವಾಗಿದ್ದರೆ ಏನಾಗಬಹುದಿತ್ತು ಎಂಬ ಊಹೆ ಕುತೂಹಲದಾಯಕ. ಹಾಗೆ ನೋಡಿದರೆ ರೋಮಾಂಚಕ ಪ್ರೇಮ ಕಥೆಗಳಲ್ಲಿ ನಾಯಕ ಮತ್ತು ನಾಯಕಿ ಕಷ್ಟಗಳನ್ನೆಲ್ಲ ದಾಟಿ, ಮದುವೆಯಾಗಿ ಸುಖವಾಗಿ ಬದುಕುತ್ತಾರೆ.

ಜೂಲಿಯೆಟ್‌ಳನ್ನು ಗಡೀಪಾರಾಗಿದ್ದ ಅವಳ ಪತಿ ರೋಮಿಯೋ ಜೊತೆ ಪುನರ್‌ ಮಿಲನಗೊಳಿಸುವ ಫ್ರಿಯರ್‌ ಲಾರೆನ್ಸ್‌ನ ಯೋಜನೆ ಫಲಪ್ರದವಾಯಿತೆಂದು ಭಾವಿಸೋಣ. ಯುವ ಪ್ರೇಮಿಗಳು ಮಂಟುವಾಗೆ ಹೋಗಿ ತಮ್ಮ ಹೊಸ ಜೀವನ ಆರಂಭಿಸುವುದು. ದುರಂತದ ಅಂತ್ಯವಿಲ್ಲ, ಅಕಾಲ ಮೃತ್ಯುವಿಲ್ಲ, ವಿಧಿಯ ಅಣಕವಿಲ್ಲ.

ಎರಡು ದಶಕದ ನಂತರ

ಸುಮಾರು 20 ವರ್ಷಗಳ ಅನಂತರ ಈ ಕಲ್ಪಿತ ಪ್ರೇಮಿಗಳು ಹೇಗೆ ಸುಖವಾಗಿ ಬದುಕುತ್ತಿದ್ದಾರೆ ಎಂಬುವುದನ್ನು ಅವರ ಮನೆಗೆ ಹೋಗಿ ನೋಡೋಣ. ರೋಮಿಯೋ ಜೂಲಿಯೆಟ್‌ಗೆ ಎಂಟನೆಯ ಮಗುವಾಯಿತೆಂದು ಅಲ್ಲಿಗೆ ಹೋದ ಕೂಡಲೇ ನಮಗೆ ತಿಳಿಯುತ್ತದೆ. ಪಾಪ! ಜೂಲಿಯೆಟ್‌ ಮೇಲೆ ಎಂಟು ಮಕ್ಕಳನ್ನು ಹೆತ್ತ ಪರಿಣಾಮ ಬೀರಿದೆ. ಈಗ ಅವಳು ಹಲವು ವರ್ಷಗಳ ಹಿಂದೆ ರೋಮಿಯೋ ಭೇಟಿ ಮಾಡಿದ್ದ ಮನಮೋಹಕ ಸುಂದರಿಯಂತೆ ಕಾಣುತ್ತಿಲ್ಲ. ಅವಳು ಆಯಾಸಗೊಂಡಂತೆ ಮತ್ತು ವಯಸ್ಸಾದಂತೆಯೂ ಕಾಣುತ್ತಿದ್ದಾಳೆ. ರೋಮಿಯೋ ಅವಳನ್ನು `ಕುಂಬಳಕಾಯಿ’ ಎಂದು ಗೇಲಿ ಮಾಡಲು ಆರಂಭಿಸಿದ್ದಾನೆ. ಅಧುನಿಕ ಸೌಲಭ್ಯ ಇಲ್ಲ. ಹೀಗಾಗಿ `ಅನಂತರ ಸುಖವಾಗಿದ್ದರು’ ಎಂಬುವುದು `ಬದುಕಿನ ಬಲೆ’ಯಾಗಿತ್ತು.

ತಮ್ಮ ಈಗಿನ ಬದುಕಿನಿಂದ ಉಂಟಾಗಿರುವ ಹತಾಶೆ ಬಗೆಗೆ ರೋಮಿಯೋ ಜೊತೆ ಚರ್ಚಿಸಬೇಕೆಂದು ಜೂಲಿಯೆಟ್‌ ಯೋಚಿಸುತ್ತಿದ್ದಾಳೆ. ಆಗಿನ ರೋಮಾಂಚಕ ಪ್ರೀತಿ ಈಗಿಲ್ಲ. ಬದುಕಿನ ನಿತ್ಯಗಟ್ಟಲೆ ಬೇಸರ ಮೂಡಿಸಿದೆ. ವೆರೋನಾದಲ್ಲಿ ರೋಮಿಯೋವನ್ನು ರಹಸ್ಯವಾಗಿ ಭೇಟಿ ಮಾಡುತ್ತಿದ್ದ ಕಾಲದಲ್ಲಿ ಕಾಣದ ದೋಷಗಳನ್ನು ಜೂಲಿಯೆಟ್‌ ಈಗ ಕಾಣಲಾರಂಭಿಸಿದಳು. ಸದ್ಯ ಈಗ ರೋಮಿಯೋಗಿದ್ದ ಪ್ರಣಯಿಗಳ ಬಗೆಗೆ ಅವಳಿಗೆ ಅರಿವಿಲ್ಲ. ಮೌಢ್ಯವೂ ವರದಾನವೇ!

ರೋಮಿಯೋ ಕೂಡ ಅಂತಹ ಅದ್ಭುತ ಸಾಧನೆ ಮಾಡಿಲ್ಲ. ವೆರೋನಾದಲ್ಲಿ ಅವನಿಗೆ ಕ್ಷಮೆ ಸಿಗಲಿಲ್ಲ. ಬದಲಿಗೆ ಗಡೀಪಾರು. ಹೀಗಾಗಿ ಯುವ ಪ್ರೇಮಿಗಳು ಮಂಟುವಾದಲ್ಲಿ ನೆಲೆಸಿದರು. ಸ್ವಲ್ಪ ಸಮಯ ರೋಮಿಯೋ ನಿರುದ್ಯೋಗಿಯಾಗಿದ್ದ. ಅನಂತರ ಗುಮಾಸ್ತನ ಕೆಲಸ ದೊರೆಯಿತು. ಅಲ್ಲಿನ ಸಂಬಳ ಯಾತಕ್ಕೂ ಸಾಲದು. ಇಬ್ಬರೂ ಹಿಂದೆ ಶ್ರೀಮಂತ ಕುಟುಂಬದವರಾಗಿ, ವೈಭವೋಪೇತ ಜೀವನ ನಡೆಸಿದ್ದರು. ಈಗ ಆ ಜೀವನ ಮಟ್ಟ ಇಲ್ಲ. ಕುಟುಂಬದ ಕೋಪಕ್ಕೆ ಗುರಿಯಾಗಿದ್ದರಿಂದ ಅವರ ನೆರವಿನ ನಿರೀಕ್ಷೆಯೂ ಇಲ್ಲ.

ಇತ್ತೀಚೆಗೆ ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಅವನಿಗೆ ಭಯ ಮತ್ತು ಹತಾಶೆ ಉಂಟಾಯಿತು. ತಲೆಗೂದಲು ಕಡಮೆಯಾಗಿದೆ, ಸೊಂಟ ದಪ್ಪನಾಗಿದೆ ಮತ್ತು ಮುಖದಲ್ಲಿ ಅನೇಕ ಗೆರೆಗಳು. ಇದರೊಂದಿಗೆ ಜೂಲಿಯೆಟ್‌ ತಾನು ಹಿಂದೆ ಅಂದುಕೊಂಡಿದ್ದಂತೆ ತೀಕ್ಷ್ಣಮತಿಯಲ್ಲ ಎಂಬುವುದು ಈಗ ಅವನ ಅರಿವಿಗೆ ಬಂದಿದೆ. ಅವಳಿಗೆ ಈಗ ತಾಳ್ಮೆ ಇಲ್ಲ. ವಾಸ್ತವಿಕ ಬದುಕಿಗೆ ಕಿಂಚಿಂತ್ತೂ ಸಿದ್ಧವಾಗಿರದ `ಹಾಳಾದ’ ಮಗುವಿನಂತೆ ಇದ್ದಾಳೆ. ಅಷ್ಟೊಂದು ಮಕ್ಕಳು ಮತ್ತು ಮನೆ ಕೆಲಸಗಳಿಂದಾಗಿ ರೋಮಿಯೋಗೆ ನೀಡಲು ಅವಳ ಬಳಿ ಸಮಯವೇ ಇಲ್ಲ.

ಅವರಿಬ್ಬರೂ ಕಾಲಕ್ಕೆ ಮುಂಚಿನ ಮಧ್ಯವಯಸ್ಸಿನ ಸಂದಿಗ್ಧತೆಯನ್ನು ಎದುರಿಸುತ್ತಿದ್ದಾರೆ. ಮತ್ತು ಅವರ ಭವಿಷ್ಯದ ಬಗೆಗೆ ಬರೆಯಲು ಯೋಗ್ಯವಾಗಿರುವುದೇನೂ ಇಲ್ಲ. ಇನ್ನು ಖ್ಯಾತ ಶೇಕ್ಸ್‌ಪಿಯರ್‌ ಬಗೆಗೆ ಹೇಳುವುದೇನು? ಅವರು ಸಾಕಾರಗೊಳ್ಳದ ಕನಸುಗಳ ಭಯದ ಚಿಂತೆಯಲ್ಲಿ, ತುಂಟ ಮಕ್ಕಳಲ್ಲಿ, ಸನ್ನಿಹಿತವಾಗುತ್ತಿದ್ದ ವೃದ್ಧಾಪ್ಯ, ಅನಿವಾರ್ಯದ ರೋಗಗಳು ಮತ್ತು ಅಂತಿಮವಾಗಿ ಸಾವಿನ ಯೋಚನೆ ಇವುಗಳಲ್ಲಿಯೇ ಮಗ್ನರಾಗಿಬಿಟ್ಟದ್ದಾರೆ.

ರೋಮಿಯೋ ಮತ್ತು ಜೂಲಿಯೆಟ್‌ ಕಥೆಯು ಶೇಕ್ಸ್‌ಪಿಯರ್‌ನ ದುರಂತ ನಾಟಕದಲ್ಲಿರುವ ಹಾಗೆ ಇರದೆ ಈಗ ಹೇಳಿರುವ ಕಥೆಯಾಗಿದ್ದರೆ ಅವರು ಎಂದಿಗೂ ಖ್ಯಾತರಾಗುತ್ತಿರಲಿಲ್ಲ. ಅವರ ಕಥೆಯು ಜಗತ್ತಿನಲ್ಲಿ ದಿನ ನಿತ್ಯ ನಡೆಯುವ ಅಸಂಖ್ಯ ನೀರಸ `ಪ್ರೇಮ ಕಥೆ’ಯೇ ಆಗಿಬಿಡುತ್ತಿತ್ತು.

ವಿಶ್ಲೇಷಣೆ

ನಾವು ಈಗ ಶೇಕ್ಸ್‌ಪಿಯರನ ರೋಮಿಯೋ ಜೂಲಿಯೆಟ್‌ ಕಥೆಯನ್ನು ಭಾರತದ ಪ್ರಾಚೀನ ಜ್ಞಾನದ ದೃಷ್ಟಿಕೋನದಿಂದ ವಿಶ್ಲೇಷಿಸೋಣ. ಭಗವದ್ಗೀತೆಯಲ್ಲಿ (2.62-63) ಶ್ರೀ ಕೃಷ್ಣನು ಲೌಕಿಕ ಜೀವನದ ಬಂಧನಗಳ/ತೊಡಕಿನ ಚಕ್ರವನ್ನು ವಿವರಿಸುತ್ತಾನೆ. ಅವನು ಹೇಳುತ್ತಾನೆ, “ಇಂದ್ರಿಯ ವಸ್ತುಗಳ ಬಗೆಗೆ ಚಿಂತಿಸುವ ಮನುಷ್ಯನಿಗೆ ಅದರಲ್ಲಿ ಆಸಕ್ತಿ ಹುಟ್ಟುತ್ತದೆ.” ರೋಮಿಯೋವು ಜೂಲಿಯೆಟ್‌ಗಾಗಿ ಹಂಬಲಿಸಿದ. ಏಕೆಂದರೆ ಅವನು ಅವಳನ್ನು ಸಂತೋಷ ಕೂಟವೊಂದರಲ್ಲಿ ಅಕಸ್ಮಾತ್‌ ನೋಡಿದ. ಇಲ್ಲವಾದರೆ ಅವನು ತನ್ನ ಗೆಳತಿ ರೋಸಲಿನ್‌ ಜೊತೆಗೆ ಹೋಗುತ್ತಿದ್ದ ಅಥವಾ ಮತ್ತೊಬ್ಬ ಪ್ರಿಯಕರಳನ್ನು ಹುಡುಕಿಕೊಳ್ಳುತ್ತಿದ್ದ.

ಫ್ರಿಯರ್‌ ಲಾರೆನ್ಸ್‌ ಹೇಳಿದಂತೆ, “ನೀನು ಅಷ್ಟೊಂದು ಪ್ರೀತಿಸುತ್ತಿದ್ದ ರೋಸಲಿನ್‌ಳನ್ನು ಇಷ್ಟು ಬೇಗ ಮರೆತುಬಿಟ್ಟೆಯಾ? ಹಾಗಾದರೆ, ಯುವಕರ ಪ್ರೀತಿಯು ಹೃದಯದಲ್ಲಿ ಅಲ್ಲ, ಅವರ ಕಣ್ಣುಗಳಲ್ಲಿ ಇರುತ್ತದೆ.” ಮುಂದುವರಿದು ಕೃಷ್ಣನು ಹೇಳುತ್ತಾನೆ, “ಅಂತಹ ಆಸಕ್ತಿಯಿಂದ ಕಾಮವು ಹುಟ್ಟುತ್ತದೆ.” ಕಾಮವು ಯಾವುದನ್ನಾದರೂ ಯಾರನ್ನಾದರೂ ಆನಂದಿಸುವ ಸಮ್ಮೋಹಕ ಪ್ರಚೋದಕ ಶಕ್ತಿಯಾಗಿದೆ. ರೋಮಿಯೋವು ರೋಸಲಿನ್‌ ಅಥವಾ ಜೂಲಿಯೆಟ್‌ಗಾಗಿ ಹಾತೊರೆದಂತೆ. ಆ ಕಾಮದ ಪ್ರಭಾವದಿಂದ ರೋಮಿಯೋವು ಬೇಲಿ ಹಾರಿದ, ಗೋಡೆ ಏರಿದ, ಭದ್ರತಾ ಪಡೆಯವರ ಕಣ್ಣಿಗೆ ಬಿದ್ದು ಕೊಲ್ಲಲ್ಪಡುವ ಅಪಾಯಗಳಿಗೆ ಒಡ್ಡಿಕೊಂಡ ಮತ್ತು ಅವಳೊಂದಿಗೆ ಪರಾರಿಯಾಗುವ ತಂತ್ರ ಹೂಡಿ. ಇವೆಲ್ಲವೂ ಇಟಲಿಯ ಒಬ್ಬ ಸಭ್ಯ ನಾಗರಿಕನಿಗೆ ಯೋಗ್ಯವಲ್ಲದ ಹಾಸ್ಯಾಸ್ಪದ ವರ್ತನೆ ಎಂದು ಅವನು ಭಾವೋದ್ರೇಕ ಕಡಮೆ ಇದ್ದ ಸಂದರ್ಭದಲ್ಲಿ ತನಗೇ ತಾನೇ ಯೋಚಿಸಬಹುದಾಗಿತ್ತು.

“ಕಾಮದಿಂದ ಕ್ರೋಧ, ಕೋಪದಿಂದ ಭ್ರಮೆ ಮತ್ತು ಭ್ರಮೆ / ಭ್ರಾಂತಿಯಿಂದ ನೆನಪು ಗೊಂದಲ”ಗೊಳ್ಳುತ್ತದೆ. ಕೋಪ ಪ್ರಕಟಗೊಳ್ಳುತ್ತದೆ, ಏಕೆಂದರೆ ಇಂದ್ರಿಯ ವಸ್ತುಗಳು ಕೈ ಬಿಡುತ್ತವೆ. ಸ್ವಲ್ಪ ಸಮಯದ ನಂತರ ನಮಗೆ ಅದರಿಂದ ಬೇಸರವಾಗಬಹುದು ಅಥವಾ ಅದನ್ನು ಆನಂದಿಸುವ ನಮ್ಮ ಯೋಜನೆ ವಿಫಲವಾಗಬಹುದು. ಯಾವುದೇ ಪ್ರಸಂಗದಲ್ಲಿಯೂ ನಮಗೆ ಅದನ್ನು ಸದಾ ಆನಂದಿಸುವುದು ಸಾಧ್ಯವಾಗದು. ರೋಮಿಯೋ ಜೂಲಿಯೆಟ್‌ ವಿಷಯವನ್ನೇ ತೆಗೆದುಕೊಂಡರೆ, ಪರಸ್ಪರ ಆನಂದಿಸಬೇಕೆಂದು ಅವರಿಬ್ಬರೂ ಅಪೇಕ್ಷಿಸಿದ್ದರು. ಆದರೆ ಅವರಿಬ್ಬರ ಕುಟುಂಬಗಳ ನಡುವಣ ದ್ವೇಷವು ಅದಕ್ಕೆ ತಡೆ ಹಾಕಿತು. ಆದುದರಿಂದ ಅವರ ಮನದಲ್ಲಿ ಕೋಪ, ಭ್ರಮೆ ಮತ್ತು ಗೊಂದಲ ತ್ವರಿತವಾಗಿ ಕಂಡುಬಂದಿತು.

ಅಲ್ಲಿಂದ “ಬುದ್ಧಿ ಕಳೆದುಹೋಯಿತು ಮತ್ತು ವ್ಯಕ್ತಿ ಪುನಃ ಲೌಕಿಕದ ಕೊಳಕ್ಕೆ ಬೀಳುತ್ತಾನೆ.” ತಮ್ಮ ಸಂತೋಷಕ್ಕೆ ಅಡೆತಡೆಗಳಿದ್ದರಿಂದ ರೋಮಿಯೋ ಜೂಲಿಯೆಟ್‌ ಕ್ರಮೇಣ ತಮ್ಮ ವಿವೇಚನೆಯನ್ನು ಕಳೆದುಕೊಂಡರು ಮತ್ತು ಅದು ಅವರ ದುರಂತ ಸಾವಿಗೆ ಕಾರಣವಾಯಿತು.

ವಿಧಿ ಕರುಣಾಹೀನ

ಭಗವದ್ಗೀತೆಯ ಹಿನ್ನೆಲೆಯಲ್ಲಿ ಕಥೆಯನ್ನು ಶೇಕ್ಸ್‌ಪಿಯರನ ಬರಹದ ರೂಪದಲ್ಲಿ ನೋಡಿದರೆ, ನಾವು ಹೀಗೆ ಸಮಾಪನಗೊಳಿಸಬಹುದು – ವಿಧಿಯು ರೋಮಿಯೋ ಜೂಲಿಯೆಟ್‌ ವಿಷಯದಲ್ಲಿ ಕರುಣಾಹೀನವಾಗಿತ್ತು ಮತ್ತು ಮೇಲೆ ತಿಳಿಸಿದ ಲೌಕಿಕ ಬಂಧನಗಳ ಚಕ್ರದ ಅಂತಿಮ ಹಂತಕ್ಕೆ ಬಲು ಬೇಗೆ ತಳ್ಳಿಬಿಟ್ಟಿತು ಎಂಬುವುದು ಜನರನ್ನು ತಟ್ಟುತ್ತದೆ. ಆ ವೃತ್ತದ ಆರಂಭ ಹಂತದಲ್ಲಿ ಕಂಡುಬರುವ `ಸಾಮಾನ್ಯ’ ಆನಂದವನ್ನೂ ಅನುಭವಿಸಲು ಅವರಿಗೆ ಅವಕಾಶ ಇಲ್ಲವಾಯಿತು ಎಂದು ಜನರು ಸಂತಾಪಪಡುತ್ತಾರೆ. ನಮ್ಮ ಸುಧಾರಿತ ಮತ್ತು ಭಾವೋದ್ರೇಕ ಕಡಮೆ ಇರುವ ಕಥೆಯ ರೂಪವು ಜನರ ಮನ ಕರಗಿಸದು. ಏಕೆಂದರೆ ಅದೇ ಚಕ್ರವು ಹೆಚ್ಚು ಸ್ವಾಭಾವಿಕ ಮಾರ್ಗವನ್ನು ಅನುಸರಿಸಿತು.

ಗೀತೆ ಎಲ್ಲರಿಗೂ ಅನ್ವಯ    

ಭಗವದ್ಗೀತೆಯಲ್ಲಿ ವಿವರಿಸಿರುವ ಬಂಧನದ ಚಕ್ರವು ಸಾರ್ವತ್ರಿಕ. ಲೌಕಿಕ ಜೀವನದಲ್ಲಿ ಪ್ರತಿಯೊಬ್ಬರಿಗೂ ಎಲ್ಲ ಸಂದರ್ಭಗಳಲ್ಲಿಯೂ ಅನ್ವಯಿಸುವಂತಹುದು. ಅವರು ಎಂದೂ ಭೇಟಿಯಾಗದಿದ್ದರೂ ಅಥವಾ ಭೇಟಿಯಾದ ಮೇಲೆ ತಮ್ಮದೇ ಹಾದಿಯಲ್ಲಿ ಸಾಗಿದ್ದರೂ ಅಥವಾ ಮದುವೆಯಾದ ಮೇಲೆ ಪರಿಪೂರ್ಣ ಕೌಟುಂಬಿಕ ಜೀವನಹೊಂದಿದ್ದರೂ ಅದು ರೋಮಿಯೋ ಜೂಲಿಯೆಟ್‌ಗೆ ವೈಯಕ್ತಿಕವಾಗಿ ಅನ್ವಯಿಸುತ್ತಿತ್ತು.

ಬಂಧನದ ವೃತ್ತವು ಇತಿಹಾಸ, ಸಂಪತ್ತು ಮುಂತಾದವುಗಳಲ್ಲಿ ಲಿಂಗ, ಧರ್ಮ, ಸಮಯದ ಭೇದವನ್ನು ತೋರುವುದಿಲ್ಲ. ಆದುದರಿಂದ ನಾವು ಆನಂದಪಡಲು ಲೌಕಿಕ ಮಾರ್ಗದತ್ತ ಸಾಗಿದಾಗ ಅದು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಅದು ಮುಗ್ಧವಾಗಿಯೇ ಆರಂಭವಾಗುತ್ತದೆ. ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಇತರ ಜನರ ತೋರ್ಕೆ, ಸ್ವಾಧೀನದಲ್ಲಿರುವ ಸ್ವತ್ತು ಇತ್ಯಾದಿ ಮತ್ತು ಸಾಮಾಜಿಕ ಜೀವನವನ್ನು ಕಾಣುತ್ತೇವೆ. ನಾವು ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳನ್ನೂ ನೋಡುತ್ತೇವೆ ಮತ್ತು ಟಿವಿ, ಸಿನಿಮಾಗಳಲ್ಲಿ ರೋಮಾಂಚಕ ದೃಶ್ಯಗಳನ್ನು ವೀಕ್ಷಿಸುತ್ತೇವೆ ಹಾಗೂ ರೋಮಿಯೋ ಜೂಲಿಯೆಟ್‌ರಂತಹ ಕಥೆಗಳನ್ನು ಕೇಳುತ್ತೇವೆ, ನೋಡುತ್ತೇವೆ. ಕ್ರಮೇಣ ನಾವು ಈ ವಸ್ತುಗಳಿಂದ ಆಕರ್ಷಿಸಲ್ಪಡುತ್ತೇವೆ ಮತ್ತು ತದನಂತರ ಸಂತೋಷದಿಂದ ಬಾಳಲು ನೆರವಾಗುತ್ತದೆಂದು ನಾವು ಭಾವಿಸುವ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.

ನಾವು ನಮ್ಮ ಕನಸನ್ನು ಸಾಕಾರಗೊಳಿಸಲು ಪೂರ್ಣ ಶಕ್ತಿಯಿಂದ ಪ್ರಯತ್ನಿಸುತ್ತೇವೆ. ಆದರೆ ಈ ಹಂತದಲ್ಲಿ ವಿಷಯಗಳು ಜಟಿಲಗೊಳ್ಳುತ್ತವೆ. ಏಕೆಂದರೆ ನಮ್ಮ ಸಂಕುಚಿತ ಮನದ ಆಶಾವಾದವು ಆಗಾಗ್ಗೆ ನಮ್ಮ ಕನಸಿನ ಜೊತೆಗೆ ರೂಪುಗೊಳ್ಳುವ ಹತಾಶ ದುಷ್ಪರಿಣಾಮವನ್ನು ಬದಿಗೊತ್ತಿಬಿಡುತ್ತದೆ. ಆದರೆ ಮುಂದೆ ಪರಿಣಮಿಸುವ ತೊಡಕುಗಳು ನಮ್ಮ ಬದುಕಿನಲ್ಲಿ ಪ್ರಮುಖ ಅಂಶವಾಗುತ್ತದೆ. ಅಥವಾ ನಾವು ನಮ್ಮ ಕನಸಿನ ಸಾಕಾರ ರೂಪವನ್ನು ಕಾಣಬಹುದು, ಆದರೆ ಅದು ನಾವು ಅಂದುಕೊಂಡಷ್ಟು ಸಂತೋಷವನ್ನು ತರುವುದಿಲ್ಲ. ಅಥವಾ ನಮಗೆ ಸದಾ ಅದರಲ್ಲಿಯೇ ನೆಲೆ ನಿಲ್ಲಲಾಗುವುದಿಲ್ಲ. ಆವೇಳೆಗೆ ಸಾಮಾನ್ಯವಾಗಿ ನಮ್ಮಲ್ಲಿ ಶಕ್ತಿ ಉಳಿದಿರುವುದಿಲ್ಲ ಅಥವಾ ಮತ್ತೊಮ್ಮೆ ಎಲ್ಲವನ್ನೂ ಆರಂಭಿಸಲು ಸಾಧ್ಯವಿಲ್ಲ. ಆದುದರಿಂದ ನಾವು ನಮ್ಮ ನಿರೀಕ್ಷೆಗಳನ್ನು ಹೊಂದಿಸಿಕೊಳ್ಳಬೇಕು ಮತ್ತು ನಮ್ಮ ಸುತ್ತಲಿನ ವಾಸ್ತವಿಕತೆ ಜೊತೆಗೆ ಬದುಕಲು ಕಲಿಯಬೇಕು.

ಇವೆಲ್ಲವೂ ಆನಂದವನ್ನು ಪಡೆಯುವ ನಮ್ಮ ಲೌಕಿಕ ಪ್ರಯತ್ನಗಳ ಪರಿಣಾಮವಾಗಿದ್ದು ನಾವು ಸುದೀರ್ಘ ಕಾಲದ ಆನಂದಕ್ಕಾಗಿ ಬೇರೆ ಕಡೆ ದೃಷ್ಟಿ ಹರಿಸಬೇಕಾದ ಅಗತ್ಯವಿದೆ.

ಐಹಿಕ ಲೋಕದ ಆನಂದವು ಲೌಕಿಕ ಜೀವನದ ಬಂಧನಗಳ ವೃತ್ತಕ್ಕೆ ಒಳಪಟ್ಟಿದೆ ಎಂದು ಭಗವದ್ಗೀತೆಯು ನಮಗೆ ಎಚ್ಚರಿಕೆ ನೀಡುತ್ತದೆ. ಗೀತೆಯು ನಮಗೆ ಪರ್ಯಾಯವನ್ನು ಸೂಚಿಸಿದೆ : ನಮ್ಮ ಮೂಲ, ಆಧ್ಯಾತ್ಮಿಕ ಸ್ವಭಾವಕ್ಕೆ ಸೂಕ್ತವಾದ ಆನಂದವನ್ನು ಕಂಡುಕೊಳ್ಳುವುದು.

ಕರ್ಮವು ನಮಗೆ ಇನ್ನಷ್ಟು ತೊಡಕು ಉಂಟುಮಾಡದೆ ಕ್ರಮೇಣ ನಮ್ಮನ್ನು ಮುಕ್ತಗೊಳಿಸುವ ಬದುಕೊಂದು ಇದೆ. ಅದೆಂತಹ ಬದುಕೆಂದರೆ, ಅಲ್ಲಿ ಜಗತ್ತನ್ನು ತೋರ್ಕೆಯಂತೆ ಅಲ್ಲ, ವಾಸ್ತವವಾಗಿ ನೋಡಲಾಗುತ್ತದೆ: ಸಮಯವನ್ನು ಸುಮ್ಮನೆ ಕಳೆಯುವುದಲ್ಲ, ಉನ್ನತ ಗುರಿ ಸಾಧನೆಗೆ ಬಳಸುವಂತಿರುತ್ತದೆ; ಮತ್ತು ಆನಂದವು ವಿಷಯಗಳ ಜೊತೆಗಿನ ವಿನಿಮಯದಿಂದ ಅಲ್ಲ, ನಮ್ಮೊಳಗಿನಿಂದ ಬರುತ್ತದೆ. ಅಂತಹ ಜೀವನವು ಸಾಕ್ಷಾತ್ಕಾರಕ್ಕೆ ಒಂದು ಮಾರ್ಗ ಮತ್ತು ಹರೇ ಕೃಷ್ಣ ಮಹಾ ಮಂತ್ರದ ಜಪದಿಂದ ಅದು ಆರಂಭಗೊಳ್ಳುತ್ತದೆ.

ಎಲ್ಲ ರೋಮಿಯೋ ಜೂಲಿಯೆಟ್‌ಗಳಿಗೆ ಮತ್ತು ಇತರ ಅಪೇಕ್ಷಿತರಿಗೆ ನಾವು ಹರೇ ಕೃಷ್ಣ ಆಂದೋಲನದ ಸಂಸ್ಥಾಪಕರು ಮತ್ತು ಆಚಾರ್ಯರಾದ ಶ್ರೀಲ ಪ್ರಭುಪಾದರ ಸಲಹೆಯನ್ನು ನೀಡುತ್ತೇವೆ : “ಲೌಕಿಕ ಇಂದ್ರಿಯ ಆನಂದಕ್ಕೆ ಲೌಕಿಕ ಇಂದ್ರಿಯಗಳ ಜೊತೆ ಅವುಗಳ ವಸ್ತುಗಳ ಸಂಪರ್ಕವೇ ಕಾರಣ. ದೇಹವೇ ಶಾಶ್ವತವಾಗಿಲ್ಲದಿರುವುದರಿಂದ ಈ ಆನಂದವು ತಾತ್ಕಾಲಿಕ. ತಾತ್ಕಾಲಿಕವಾಗಿರುವ ಯಾವುದರ ಬಗೆಗೂ ಮುಕ್ತ ಆತ್ಮಕ್ಕೆ ಆಸಕ್ತಿ ಇಲ್ಲ. ಅಲೌಕಿಕ ಆನಂದದ ಸಂತೋಷವನ್ನು ಚೆನ್ನಾಗಿ ಬಲ್ಲ ಮುಕ್ತ ಆತ್ಮವು ಹುಸಿ ಆನಂದವನ್ನು ಅನುಭವಿಸಲು ಹೇಗೆ ತಾನೆ ಒಪ್ಪುತ್ತದೆ? ಲೌಕಿಕ ಅಸ್ತಿತ್ವದ ಮುಂದುವರಿಕೆಗೆ ಕಾರಣಗಳಾಗಿರುವ ಇಂದ್ರಿಯ ಆನಂದಗಳಿಂದ ನಿಜವಾದ ಯೋಗಿಗಳು ಅಥವಾ ವಿದ್ವಾಂಸರಾದ ಅಲೌಕಿಕವಾದಿಗಳು ಆಕರ್ಷಿಸಲ್ಪಡುವುದಿಲ್ಲ. ಲೌಕಿಕ ಆನಂದದ ಚಟ ಬೆಳೆಸಿಕೊಂಡಷ್ಟೂ ಐಹಿಕ ಸಂಕಟಗಳಿಗೆ ಸಿಲುಕುವಿರಿ.”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi