ಪನೀರ್‌ ವಿಶೇಷ

– ಗಾಯತ್ರಿ ಶೆಣೈ

ಪನೀರ್ ಮಾಡುವ ವಿಧಾನ :

1 ಲೀಟರ್‌ನಷ್ಟು ಹಾಲು ಕುದಿಸಿ, ಅನಂತರ ಅದಕ್ಕೆ 2-3 ಹಣ್ಣಿನ ಲಿಂಬೆರಸ ಜೊತೆಗೆ ಚೆನ್ನಾಗಿ ಕಾಯಿಸಿ ಪುಡಿ ಮಾಡಿದ ಜೋಳ ಸ್ವಲ್ಪ ಹಾಗೂ 2 ಚಿಟಿಕೆ ಉಪ್ಪು ಸೇರಿಸಿ ಹಾಲು ಒಡೆಯುವ ತನಕ ನಿಧಾನವಾಗಿ ತಿರುಗಿಸುತ್ತಿರಿ. ಅದನ್ನು ಒಂದು ತೆಳ್ಳಗಿನ ಬಟ್ಟೆಯಲ್ಲಿ ಹಾಕಿ ಸಡಿಲವಾಗಿ ಗಂಟು ಕಟ್ಟಿ ನೀರು ಇಳಿಯುವಂತೆ ತೂಗು ಹಾಕಿ, ನೀರೆಲ್ಲಾ ಹರಿದು ಹೋದ ಬಳಿಕ ಅದು ಗಟ್ಟಿಮುದ್ದೆಯಾಗುವುದು. ಅದನ್ನು ತೀಡಿ ಪನೀರ್ ಮಾಡಿ ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಬಹುದು.

ಇಲ್ಲದಿದ್ದಲ್ಲಿ ಹಾಲಿನ ಮಾರಾಟಗಾರರಲ್ಲಿ ತಾಜಾವಾಗಿ ದೊರೆಯುವ ಪನೀರ್ ಕೊಂಡುಕೊಳ್ಳಬಹುದು. ಇಲ್ಲಿ ಕೊಟ್ಟಿರುವ ಪನೀರ್ ಕುರ್ಮಾ, ಪನೀರ್ ಬಟಾಣಿ ಮಸಾಲಾ ಹಾಗೂ ಪಾಲಕ್ ಪನೀರ್‌ಗಳನ್ನು ಪೂರಿ, ಪರಾಟಗಳೊಂದಿಗೆ ಹಚ್ಚಿಕೊಳ್ಳಲು ಮಾಡಬಹುದು. ಇದನ್ನು ಮೊದಲು ಕೃಷ್ಣನಿಗರ್ಪಿಸಿ ಸ್ವೀಕರಿಸಲು ಮರೆಯದಿರಿ.

ಪನೀರ್ ಕುರ್ಮಾ

ಬೇಕಾಗುವ ಪದಾರ್ಥ :

ಪನೀರ್ – 200 ಗ್ರಾಂ

ಟೊಮ್ಯಾಟೋ – 100 ಗ್ರಾಂ

ಹಸಿ ಮೆಣಸಿನಕಾಯಿ – 4-5

ಅಚ್ಚ ಮೆಣಸಿನಕಾಯಿಪುಡಿ – 2 ಚಿಕ್ಕ ಚಮಚ (ಅಥವಾ ರುಚಿಗೆ ತಕ್ಕಷ್ಟು)

ಗರಂ ಮಸಾಲೆ ಪುಡಿ – 1/2 ಚಿಕ್ಕ ಚಮಚ

ತೆಂಗಿನಕಾಯಿ ತುರಿ – 4 ದೊಡ್ಡ ಚಮಚ

ಗಸಗಸೆ – 1 ದೊಡ್ಡ ಚಮಚ

ಗೋಡಂಬಿ – 50 ಗ್ರಾಂ

ಶುಂಠಿ ಪೇಸ್ಟ್ – 1/2 ಚಿಕ್ಕ ಚಮಚ

ಅರಿಶಿನ ಪುಡಿ – 1/2 ಚಿಕ್ಕ ಚಮಚ

ಖಾದ್ಯ ತೈಲ – 2 ದೊಡ್ಡ ಚಮಚ

ಕರಿಬೇವು – 2 ಎಸಳು

ಕೊತ್ತಂಬರಿ ಸೊಪ್ಪು – ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ದಪ್ಪ ತಳದ ಬಾಣಲೆಗೆ ಖಾದ್ಯ ತೈಲ ಹಾಕಿ ಬಿಸಿಯಾದನಂತರ ಕರಿಬೇವಿನ ಎಲೆ, ಶುಂಠಿ ಪೇಸ್ಟ್ ಹಾಗೂ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಒಗ್ಗರಣೆ ಮಾಡಿ, ಅದಕ್ಕೆ ಸಣ್ಣಗೆ ಹೆಚ್ಚಿದ ಟೊಮ್ಯಾಟೋ, ಅಚ್ಚ ಮೆಣಸಿನಕಾಯಿ ಪುಡಿ ಅರಿಶಿನ ಪುಡಿ, ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.

ಅನಂತರ ಸಣ್ಣಗೆ ತುಂಡು ಮಾಡಿದ ಪನೀರ್‌ಗಳನ್ನು ಬೆರೆಸಿ ಸ್ವಲ್ಪ ಹೊತ್ತು ಹುರಿಯಿರಿ. ಅನಂತರ ಅದಕ್ಕೆ ನೆನೆಸಿದ ಗಸಗಸೆ, ಗೋಡಂಬಿ ಮತ್ತು ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿ ಅರ್ಧ ಬಟ್ಟಲು ನೀರಿನೊಂದಿಗೆ ಬೆರೆಸಿ 5-10 ನಿಮಿಷಗಳ ಕಾಲ ಬೇಯಿಸಿರಿ. ಮಸಾಲೆ ತಳಹತ್ತದಂತೆ ಆಗಾಗ ಕೆದಕುತ್ತಿರಿ. ಪನೀರ್‌ನ್ನು ಸ್ವಲ್ಪ ಪುಡಿ ಮಾಡಿ ಗಟ್ಟಿಯಾಗುವವರೆಗೆ ಬೇಯಿಸಬೇಕು.

ಕೊನೆಗೆ ಗರಂ ಮಸಾಲೆ ಹಾಗೂ ಕೊತ್ತಂಬರಿ ಸೊಪ್ಪನ್ನು ಬೆರಸಿ 2-3 ನಿಮಿಷಗಳ ಕಾಲ ಬೇಯಿಸಿರಿ.

ಪನೀರ್ ಬಟಾಣಿ ಮಸಾಲ

ಬೇಕಾಗುವ ಪದಾರ್ಥ :

ಪನೀರ್ – 150 ಗ್ರಾಂ

ಹಸಿ ಬಟಾಣಿ – 300 ಗ್ರಾಂ

ಟೊಮ್ಯಾಟೋ – 200 ಗ್ರಾಂ

ಕೊತ್ತಂಬರಿ ಬೀಜ – 1 ಚಿಕ್ಕ ಚಮಚ

ಅಚ್ಚಮೆಣಸಿನಕಾಯಿ ಪುಡಿ – 1/2 ಚಿಕ್ಕ ಚಮಚ

ಅರಿಶಿನಪುಡಿ 2 ಚಿಟಿಕೆ

ಗರಂ ಮಸಾಲೆ ಪುಡಿ – 1/2 ಚಿಕ್ಕ ಚಮಚ

ಗೋಡಂಬಿ – 50 ಗ್ರಾಂ

ಮೊಸರು – ಚಿಕ್ಕ ಬಟ್ಟಲು

ಶುಂಠಿ ಪೇಸ್ಟ್ – 1/2 ಚಿಕ್ಕ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಖಾದ್ಯ ತೈಲ – 4 ದೊಡ್ಡ ಚಮಚ

ಮಾಡುವ ವಿಧಾನ : ಒಂದು ದಪ್ಪತಳದ ಬಾಣಲೆಯಲ್ಲಿ ಖಾದ್ಯತೈಲ ಬಿಸಿ ಮಾಡಿ ಅದರಲ್ಲಿ ಪನೀರ್‌ನ ಚೂರುಗಳನ್ನು ಹಾಕಿ ನಸುಗೆಂಪು ಬಣ್ಣ ಬರುವವರೆಗೂ ಹುರಿದು ಪ್ರತ್ಯೇಕವಾಗಿ ತೆಗೆದಿಡಿ. ಅದೇ ತೈಲಕ್ಕೆ ರುಬ್ಬಿದ ಶುಂಠಿ ಪೇಸ್ಟ್ ಕೊತ್ತಂಬರಿ ಬೀಜದ ಪುಡಿ, ಅರಿಶಿನ ಪುಡಿ, ಗರಂ ಮಸಾಲೆ ಪುಡಿ ಬೆರೆಸಿ ಪರಿಮಳ ಬಂದ ಕೂಡಲೇ ಬಟಾಣಿ ಸೇರಿಸಿ, ಸಣ್ಣ ಸಣ್ಣಗೆ ಚೂರು ಮಾಡಿದ ಟೊಮ್ಯಾಟೋ ಹಾಗೂ ಸ್ವಲ್ಪ ನೀರು ಸೇರಿಸಿ ಬೇಯಿಸಿ.

ಬಟಾಣಿ ಬೆಂದನಂತರ ಪನೀರ್ ಸೇರಿಸಬೇಕು ಹಾಗೂ ನೆನೆಸಿ ರುಬ್ಬಿದ ಗೋಡಂಬಿ ಪೇಸ್ಟನ್ನು ಬೆರೆಸಿ ಮೊಸರು ಸೇರಿಸಿ ಕದಡಿಸಿ, ಎಲ್ಲವೂ ಚೆನ್ನಾಗಿ ಬೆರೆತು ಬೆಂದನಂತರ ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು.

ಪಾಲಕ್ ಪನೀರ್

ಬೇಕಾಗುವ ಪದಾರ್ಥ :

ಪನೀರ್ – 150 ಗ್ರಾಂ

ಪಾಲಕ್ ಸೊಪ್ಪು – 2 ಅಥವಾ 3 ಕಟ್ಟು

ಹಸಿ ಮೆಣಸಿನಕಾಯಿ – 8-10 (ಅಥವಾ ರುಚಿಗೆ ತಕ್ಕಷ್ಟು)

ಶುಂಠಿ – ಸಣ್ಣ ಚೂರು

ಅಡಿಗೆ ಸೋಡಾ – ಒಂದು ಚಿಟಿಕೆ

ಅರಿಶಿನ ಪುಡಿ – 1/2 ಚಿಕ್ಕ ಚಮಚ

ಅಚ್ಚಮೆಣಸಿನಕಾಯಿ ಪುಡಿ – 1/2 ಚಿಕ್ಕ ಚಮಚ (ಅಥವಾ ರುಚಿಗೆ ತಕ್ಕಷ್ಟು)

ಟೊಮ್ಯಾಟೋ ರಸ – 1 ಬಟ್ಟಲು (ಗಟ್ಟಿರಸ)

ಜೀರಿಗೆ – 1/2 ಚಿಕ್ಕ ಚಮಚ

ಗರಂ ಮಸಾಲೆ ಪುಡಿ – 1/2 ಚಿಕ್ಕ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಖಾದ್ಯ ತೈಲ – 3 ದೊಡ್ಡ ಚಮಚ

ಮಾಡುವ ವಿಧಾನ : ಬಾಣಲೆಯಲ್ಲಿ ಸ್ವಲ್ಪ ಖಾದ್ಯ ತೈಲವನ್ನು ಬಿಸಿ ಮಾಡಿ ಜೀರಿಗೆ ಒಗ್ಗರಣೆ ಮಾಡಿ, ನಂತರ ಟೊಮ್ಯಾಟೋ ರಸ, ಮೆಣಸಿನ ಕಾಯಿಪುಡಿ, ಅರಿಶಿನ ಪುಡಿ ಸೇರಿಸಿ 5-6 ನಿಮಿಷ ಬೇಯಿಸಿರಿ. ಆನಂತರ ಅದಕ್ಕೆ ಪಾಲಕ್ ಸೊಪ್ಪು, ಹಸಿಮೆಣಸಿನಕಾಯಿ, ಅಡಿಗೆ ಸೋಡಾ, ಶುಂಠಿ ತುಂಡು ಎಲ್ಲವನ್ನು ಕುಕ್ಕರಿನಲ್ಲಿ ಹಾಕಿ 1/2 ಬಟ್ಟಲು ನೀರಿನೊಂದಿಗೆ ಒಂದು ವಿಸಲ್ ಬರುವವರೆಗೆ ಬೇಯಿಸಿರಿ.

ಬೆಂದು ಅರಿದನಂತರ ಸೋಸಿ ನುಣ್ಣಗೆ ರುಬ್ಬಿ, ಸೋಸಿದ ನೀರನ್ನು ಮತ್ತೆ ಬೆರೆಸಿ ಜೊತೆಗೆ ರುಚಿಗೆ ತಕ್ಕ ಉಪ್ಪು ಸೇರಿಸಿ 5-6 ನಿಮಿಷ ಕುದಿಸಿ.

ಅನಂತರ ಉಳಿದ ತೈಲವನ್ನು ಸಣ್ಣ ಬಾಣಲೆಯಲ್ಲಿ ಬಿಸಿಮಾಡಿ ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿದ ಪನೀರನ್ನು ಹಾಕಿ ಕರಿಯಿರಿ ಮತ್ತು ಮಸಾಲೆಗೆ ಸೇರಿಸಿ ಬೇಯಿಸಿರಿ. ಇಳಿಸುವ ಮೊದಲು ಗರಂ ಮಸಾಲೆ ಪುಡಿ ಸೇರಿಸಿ 2-3 ನಿಮಿಷ ಕುದಿಸಿ ಇಳಿಸಿ.

ಪನೀರ್ ಪಲಾವ್

ಬೇಕಾಗುವ ಪದಾರ್ಥ:

ಅಕ್ಕಿ – 500 ಗ್ರಾಂ

ಪನೀರ್ – 100 ಗ್ರಾಂ

ಚಕ್ಕೆ – ಚಿಕ್ಕ ಚೂರು

ಏಲಕ್ಕಿ – 1-2

ಪಲಾವ್ ಎಲೆ – 2-3 (ಸಣ್ಣದು)

ಗರಂ ಮಸಾಲೆ ಪುಡಿ – 1/2 ಚಿಕ್ಕ ಚಮಚ

ಅರಿಶಿನ ಪುಡಿ – 1/2 ಚಿಕ್ಕ ಚಮಚ

ಪುದೀನ ಸೊಪ್ಪು – 1/2 ಕಟ್ಟು

ಕೊತ್ತಂಬರಿ – ಸೊಪ್ಪು ಸ್ವಲ್ಪ

ಕೊತ್ತಂಬರಿ ಬೀಜದ ಪುಡಿ – 1/2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಖಾದ್ಯತೈಲ – 3-4 ದೊಡ್ಡ ಚಮಚ

ಶುಂಠಿ – 1 ಚಿಕ್ಕ ಚೂರು

ಗೋಡಂಬಿ – 50 ಗ್ರಾಂ

ಹಸಿಮೆಣಸಿನಕಾಯಿ – 7-8 (ರುಚಿಗೆ ತಕ್ಕಷ್ಟು)

ಮಾಡುವ ವಿಧಾನ : ಅಕ್ಕಿ ತೊಳೆದು ಕುಕ್ಕರಿನಲ್ಲಿ ಪ್ರತ್ಯೇಕವಾಗಿ ಬೇಯಿಸಿಟ್ಟುಕೊಳ್ಳಿ. ಸಣ್ಣ ಬಾಣಲೆಯಲ್ಲಿ ಖಾದ್ಯತೈಲ ಬಿಸಿ ಮಾಡಿ ಸಣ್ಣಗೆ ತುಂಡು ಮಾಡಿದ ಪನೀರ್ ಕರಿದಿಟ್ಟುಕೊಳ್ಳಿ.

ಅನಂತರ ಒಂದು ದಪ್ಪತಳದ ಬಾಣಲೆಯಲ್ಲಿ ಉಳಿದ ಖಾದ್ಯ ತೈಲವನ್ನು ಬಿಸಿಮಾಡಿ ಅದರಲ್ಲಿ ಏಲಕ್ಕಿ, ಚೆಕ್ಕೆಯ ಚೂರು, ಹಾಕಿ ಹುರಿಯಿರಿ. ಅನಂತರ ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಕೊತ್ತಂಬರಿ ಬೀಜದ ಪುಡಿ, ಗರಂ ಮಸಾಲೆ ಪುಡಿ, ಅರಿಶಿನ ಪುಡಿ, ಶುಂಠಿ ಚೂರು ಎಲ್ಲವನ್ನು ಬೆರೆಸಿ ರುಬ್ಬಿದ ಮಸಾಲೆಯನ್ನು ಬೆರೆಸಿ 2-3 ನಿಮಿಷ ಹುರಿಯಿರಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಜೊತೆಗೆ ಮೊದಲೇ ಮಾಡಿಟ್ಟ ಅನ್ನ ಹಾಗೂ ಕರಿದಿಟ್ಟ ಪನೀರ್ ಬೆರೆಸಿ ಬಿಸಿ ಮಾಡಿ ಪನೀರ್ ಪಲಾವ್ ಸಿದ್ಧ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi