ರಾಮಾಯಣದ ರಾವಣನಂತೆ ಈಗಿನ ಸಿನಿಮಾ ನಾಯಕ, ನಾಯಕಿಯರಲ್ಲಿ ತಪ್ಪಿಸಲಾಗದ ಕೊರತೆಗಳಿವೆ.
ರಾಮಾಯಣವು ಪರಾಕ್ರಮ, ಪ್ರೀತಿ-ಪ್ರೇಮ, ವಿವೇಕ ಮತ್ತು ಸಾಹಸದ ಪುರಾತನ ವೈದಿಕ ವೀರ ಚರಿತೆಯಾಗಿದೆ. ಅದು ಸಹಸ್ರಾರು ವರ್ಷಗಳಿಂದ ವಿಶ್ವದ ಜನಸಂಖ್ಯೆಯ ನಾಲ್ಕನೆಯ ಒಂದು ಭಾಗಕ್ಕೆ ಸ್ಫೂರ್ತಿ ನೀಡಿರುವ ಸಾಹಸ ಕಥೆಯಾಗಿದೆ. ದಿವ್ಯ ಶಕ್ತಿಗಳು ನಮ್ಮ ಭೌತಿಕ ಲೋಕದ ಮೇಲೆ ಪ್ರಭಾವ ಬೀರಿದ ಗತಕಾಲವನ್ನು ಬಿಂಬಿಸುವ ಕಥನವಾಗಿದೆ. ಪಾಪ ಮತ್ತು ಪುಣ್ಯಗಳ ನಡುವಣ ಹೋರಾಟದ ಕಥೆಯಾಗಿದೆ. ಇದು ಭಗವಂತನು ನಮ್ಮ ಬಳಿಗೆ ಬಂದು ಪರಿಶುದ್ಧ ನಡವಳಿಕೆಯ ಸ್ವಯಂ ನಿದರ್ಶನಗಳ ಮೂಲಕ ನಮಗೆ ಸದ್ಗುಣ, ನ್ಯಾಯಪರತೆ ಮತ್ತು ಅಧ್ಯಾತ್ಮವನ್ನು ಬೋಧಿಸಿದ ಅದ್ಭುತ ಕಥೆಯಾಗಿದೆ.

ಐತಿಹಾಸಿಕ ಪ್ರಾಚೀನತೆ ಇದ್ದರೂ ರಾಮಾಯಣದ ಮೂಲ ಕಥಾನಕವು ಪಕ್ಕಾ ಚಲನಚಿತ್ರದ ಕಥೆಯಂತೆಯೇ ಇದೆ : ಅದು ನಾಯಕ, ನಾಯಕಿ ಮತ್ತು ನಾಯಕಿಯತ್ತ ಕಾಮ ದೃಷ್ಟಿ ಬೀರುವ ಖಳ ನಾಯಕ ಲಕ್ಷಣಗಳನ್ನು ಹೊಂದಿದೆ. ಅದು ನಾಯಕ ಮತ್ತು ಖಳ ನಾಯಕನ ಮುಖಾಮುಖಿ, ಖಳ ನಾಯಕನ ಸಾವಿನಲ್ಲಿ ಅಂತ್ಯ ಮತ್ತು ನಾಯಕ ನಾಯಕಿಯರ ಪುನರ್ ಮಿಲನ. ಆದರೆ ರಾಮಯಾಣ ಮತ್ತು ಆಧುನಿಕ ಚಲನಚಿತ್ರದ ಮಧ್ಯೆ ಒಂದು ಮುಖ್ಯವಾದ ವ್ಯತ್ಯಾಸವಿದೆ : ಸಿನಿಮಾದಲ್ಲಿ ನಾಯಕ, ನಾಯಕಿ ಮತ್ತು ಖಳ ನಾಯಕ ಎಲ್ಲರೂ ವಾಸ್ತವವಾಗಿ ಖಳರೇ.
ಏಕೆ? ಇತರರನ್ನು ಶೋಷಿಸಿ ಅವರಿಗೆ ಅಪಾಯ ಉಂಟುಮಾಡಿ ಆನಂದಿಸುವವರನ್ನು ಖಳ ನಾಯಕರೆಂದು ಅನೇಕ ಜನರು ಭಾವಿಸುತ್ತಾರೆ. ತಪ್ಪಲ್ಲವಾದರೂ ಪಾಪದ ಈ ಗ್ರಹಿಕೆಯು ಅಪೂರ್ಣ ಮತ್ತು ಬಾಲಿಶ. ಏಕೆಂದರೆ, ಇದು ಒಂದು ಮೂಲಭೂತ ವಾಸ್ತವಾಂಶವನ್ನು, ನಮ್ಮ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರೀತಿಸುವ ತಂದೆ ಭಗವಂತನನ್ನು ನಿರ್ಲಕ್ಷಿಸುತ್ತದೆ. ನಮ್ಮ ದಿನ ನಿತ್ಯದ ಅಗತ್ಯಗಳನ್ನು ಭಗವಂತನು ನಿಸ್ವಾರ್ಥದಿಂದ ಒದಗಿಸುತ್ತಾನೆ ಎಂಬುವುದನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಆಧ್ಯಾತ್ಮಿಕ ಶಿಕ್ಷಣವು ನಮ್ಮಲ್ಲಿ ಅನೇಕ ಜನರಿಗೆ ಎಂದೂ ದೊರೆಯಲಿಲ್ಲ. ನಮ್ಮ ಜೀವನೋಪಾಯಕ್ಕೆ ನಾವು ಶ್ರಮ ಪಡಬೇಕು, ನಿಜ. ಆದರೆ ನಮ್ಮ ಶ್ರಮವು ಗೌಣ. ಇದು ಹೇಗೆಂದರೆ, ಕಾಳಿಗಾಗಿ ಹುಡುಕುವ ಹಕ್ಕಿಗಳ ಶ್ರಮದಂತೆ. ಭಗವಂತನು ಪ್ರಕೃತಿಯ ಮೂಲಕ ಧಾನ್ಯವನ್ನು ಒದಗಿಸದಿದ್ದರೆ, ಎಷ್ಟೇ ಸಂಕಷ್ಟದ್ದಾಗಿದ್ದರೂ ಅವುಗಳ ಹುಡುಕಾಟವು ನಿಷ್ಫಲವಾಗುತ್ತದೆ. ಅದೇ ರೀತಿ “ಮಣ್ಣನ್ನು ಮಾವು” ಆಗಿ (ಅತ್ಯುತ್ತಮ ವಿಜ್ಞಾನಿ ಮತ್ತು ಅತ್ಯಾಧುನಿಕ ಕಂಪ್ಯೂಟರ್ ಅನ್ನು ಮೀರಿದ ಅದ್ಭುತ ಕ್ರಿಯೆ) ಪರಿವರ್ತಿಸುವ ಅಲೌಕಿಕ ಯಾಂತ್ರಿಕ ಕೌಶಲ ಜೀವ ರಾಸಾಯನಿಕ ಕ್ರಿಯೆಯನ್ನು (ಫೋಟೋಸಿಂತಿಸಿಸ್) ಭಗವಂತನು ರೂಪಿಸಿರದಿದ್ದರೆ ನಮಗೆ ಎಂದಿಗೂ ಯಾವ ಆಹಾರವೂ ಸಿಗುತ್ತಿರಲಿಲ್ಲ. ನಾವೆಷ್ಟೇ ಶ್ರಮಪಟ್ಟರೂ ಅದು ಅಲಭ್ಯ. ಶಾಖ, ಬೆಳಕು, ಗಾಳಿ, ನೀರು, ಆರೋಗ್ಯ ಮುಂತಾದ ಇತರ ಎಲ್ಲ ನಮ್ಮ ಅಗತ್ಯಗಳೂ ಮುಖ್ಯವಾಗಿ ದಿವ್ಯ ವ್ಯವಸ್ಥೆಯಿಂದ, ಎರಡನೆಯದಾಗಿ ನಮ್ಮ ಶ್ರಮದಿಂದ ಈಡೇರುತ್ತವೆ.
ದುರದೃಷ್ಟವಶಾತ್ ನಮ್ಮ ಮಾಧ್ಯಮ, ಸಂಸ್ಕೃತಿ ಮತ್ತು ಶಿಕ್ಷಣವು ಎಷ್ಟೊಂದು ಭೌತಿಕ ಆಕರ್ಷಣೆಗಳಲ್ಲಿ ನಮ್ಮನ್ನು ಮುಳುಗಿಸಿಬಿಟ್ಟಿವೆ ಎಂದರೆ ನಾವು ಭಗವಂತನ ಮೇಲಿನ ನಮ್ಮ ಅವಲಂಬನೆ ಮತ್ತು ಅವನಿಗೆ ಕೃತಜ್ಞರಾಗಿರಬೇಕೆಂಬ ವಾಸ್ತವಾಂಶಗಳ ಬಗೆಗೆ ಅಂಧರಾಗಿದ್ದೇವೆ. ತುಂಟ ಮತ್ತು ಅಶಾಂತ ಮಗುವು ಶಿಸ್ತಿನಿಂದಿರಲು ಮತ್ತು ಜವಾಬ್ದಾರಿಯುತವಾಗಲು ಅದನ್ನು ಪ್ರೀತಿಸುವ ತಂದೆಯ ಬಗೆಗೆ ಮಗುವಿಗೆ ಆರೋಗ್ಯಪೂರ್ಣ ಭಯ ಅಗತ್ಯವಾಗಿರುವಂತೆ ಭಗವಂತನ ಬಗೆಗೆ ಭಯವೆಂದರೆ ವಿವೇಕ, ಜ್ಞಾನದ ಆರಂಭ. ಉದಾತ್ತ ತಂದೆಗೆ ತೋರುವ ಕೃತಜ್ಞತೆ ಮತ್ತು ಪ್ರೀತಿಯು ಬೆಳೆದ ಮಗುವಿನ ಪರಿಪಕ್ವತೆಯನ್ನು ತೋರಿಸುವಂತೆ ಭಗವಂತನ ಪ್ರೇಮವು ಜ್ಞಾನದ ಪರಾಕಾಷ್ಠೆ.
ಆದರೂ ದುಃಖದಿಂದ ಹೇಳಬೇಕೆಂದರೆ, ನಮ್ಮ ಸಮಾಜವು ಭಗವಂತನ ಪ್ರೀತಿ ಅಥವಾ ಭಯವನ್ನು ಪೋಷಿಸುವುದಿಲ್ಲ. ಬದಲಿಗೆ, ದೇವರಹಿತ, ಸ್ವಾರ್ಥ ಭೌತಿಕತೆಯನ್ನು ವೈಭವೀಕರಿಸುತ್ತದೆ. ಪರಿಣಾಮವಾಗಿ, ಈಗೆಲ್ಲ ಅನೇಕ ಜನರು ಭಗವಂತನೊಂದಿಗಿನ ತಮ್ಮ ಬಾಂಧವ್ಯದ ವಿಷಯದಲ್ಲಿ ತುಂಬ ಸ್ವಾರ್ಥಿಗಳಾಗಿದ್ದಾರೆ. ಅವರು ತಮಗೆ ಬದುಕನ್ನೇ ಕೊಟ್ಟಿರುವ ವ್ಯಕ್ತಿಗೆ ಕೆಲವು ಕ್ಷಣಗಳನ್ನೂ ಮೀಸಲಿಡುವುದಿಲ್ಲ. ಕುಟುಂಬವೊಂದರಲ್ಲಿ, ಒಬ್ಬ ಮಗನು ತನ್ನ ಸೋದರರೊಂದಿಗಿನ ಸಂಪರ್ಕ ಕೊಂಡಿಯಾದ ತನ್ನ ತಂದೆಯನ್ನೇ ಲಕ್ಷಿಸದಿದ್ದರೆ, ಅವನು ಅತಿ ಶೀಘ್ರದಲ್ಲಿ ತನ್ನ ಸೋದರರನ್ನೂ ಲಕ್ಷಿಸುವುದಿಲ್ಲ. ಅವರು ಉತ್ತರಾಧಿಕಾರದಲ್ಲಿ ಅವನ ಸ್ಪರ್ಧಿಗಳಾಗುವುದರಿಂದ ಅವನು ಅವರಿಗೆ ಕೇಡೆಣಿಸಲೂಬಹುದು. ಅದೇ ರೀತಿ, ಭಗವಂತನ ಬಗೆಗೆ ಸ್ವಾರ್ಥವು ಎಲ್ಲ ಪಾಪಗಳಿಗೆ ಮೂಲ. ನಾವೆಲ್ಲರೂ ಆ ಪಾಪದ ಬೀಜವನ್ನು ನಮ್ಮ ಹೃದಯಗಳಲ್ಲಿ ಬಿತ್ತಿದ್ದೇವೆ ಮತ್ತು ಈಗ ಅದರ ಕಹಿ ಫಲಗಳಾದ ಭಯೋತ್ಪಾದನೆ, ಭ್ರಷ್ಟಾಚಾರ, ಅಪರಾಧ ಮತ್ತು ಶೋಷಣೆಯನ್ನು ಪರಸ್ಪರ ಬಲವಂತವಾಗಿ ಉಣ್ಣಿಸುತ್ತಿದ್ದೇವೆ. ಇವೆಲ್ಲವೂ ಭಗವಂತನು ನಮಗೆ ನೀಡಿರುವ ವಿಶ್ವ ಸಂಪನ್ಮೂಲಗಳಿಗಾಗಿ ನಾವು ಪರಸ್ಪರ ನಡೆಸುತ್ತಿರುವ ಹೋರಾಟಗಳಿಂದ ಹುಟ್ಟಿಕೊಂಡವು.
ದಿವ್ಯ ವೀರರು
ರಾಮಾಯಣವು ನಮಗೆ ಶೌರ್ಯ ಮತ್ತು ದುಷ್ಟತನದ ಹಾಗೂ ನಿಸ್ವಾರ್ಥ ಪ್ರೀತಿ ಮತ್ತು ಸ್ವಾರ್ಥ ಕಾಮದ ಬಗೆಗೆ ಮಿನುಗುನೋಟವನ್ನು ನೀಡುತ್ತದೆ. ಶ್ರೀರಾಮ ಮತ್ತು ಅವನ ಸತಿ ಸೀತಾ ಚಿರಂತನ ನಾಯಕ, ನಾಯಕಿಯರು. ದೈವೀ ನಾಯಕ ಹನುಮಂತನು ಭಗವಂತನಿಗೆ ಅವನ ದಿವ್ಯ ಪ್ರೇಮದಲ್ಲಿ ನೆರವಾಗಲು ಒಲವಿನ ಸಾಕಾರ ಮೂರ್ತಿಯಾದರೆ, ದೇವರಹಿತ ದುಷ್ಟನಾದ ರಾವಣನು ತನ್ನದೇ ಕಾಮ ತೃಪ್ತಿಗಾಗಿ ಸ್ವಾರ್ಥದಿಂದ ಭಗವಂತನ ಆಸ್ತಿಯನ್ನು ಕಬಳಿಸುವ ಒಲವಿನ ಸಾಕಾರ ಮೂರ್ತಿಯಾಗಿದ್ದಾನೆ. ದೈವೀ ನಾಯಕನು ಭಗವಂತನೊಂದಿಗೆ ಆನಂದಿಸುವುದನ್ನು ಅಪೇಕ್ಷಿಸಿದರೆ, ದೇವರಹಿತ ದುಷ್ಟನು ದೇವರಂತೆ ಆನಂದಿಸಲು ಅಪೇಕ್ಷಿಸುತ್ತಾನೆ.

ಮತ್ತೊಂದು ಕಡೆ, ಒಂದು ಪಕ್ಕಾ ಸಿನಿಮಾದಲ್ಲಿ, ನಾಯಕ, ನಾಯಕಿ ಮತ್ತು ಖಳ ನಾಯಕ ಎಲ್ಲ ಮುಖ್ಯ ಪಾತ್ರಗಳು ಭಗವಂತನನ್ನು ಲಕ್ಷಿಸದೆ ಸುಖಿಸಬೇಕೆಂಬ ಅದೇ ದುಷ್ಟ ಮನಸ್ಥಿತಿ ಹೊಂದಿವೆ. ನಾಯಕ ಮತ್ತು ನಾಯಕಿಯರಲ್ಲಿ ಪ್ರೇಮದ ತೋರ್ಕೆಯು ಆ ಮನಸ್ಥಿತಿಗೆ ಮುಸುಕು ಹಾಕಿದರೆ, ಖಳನು ಅದನ್ನು ಯಾವ ಎಗ್ಗೂ ಇಲ್ಲದೆ ವ್ಯಕ್ತಪಡಿಸುತ್ತಾನೆ. ಆದರೆ ಅವರೆಲ್ಲರೂ ರಾವಣರೇ. ವ್ಯತ್ಯಾಸವಿರುವುದು ಅವರ ಛಾಯೆಗಳಲ್ಲಿ ಮಾತ್ರ.
ಸಿನಿಮಾ ಅಥವಾ ನಿಜ ಜೀವನ ಯಾವುದರಲ್ಲಿಯೇ ಆಗಲಿ, ಕೃತಕ ನಾಯಕರಾಗಬೇಕೆಂಬ ನಮ್ಮ ಪ್ರಯತ್ನಗಳು ಸಹಜವಾಗಿಯೇ ಪಾಪ ಮತ್ತು ಅವು ನಾವು ಭಯಪಡುವ ಎಲ್ಲ ದೊಡ್ಡ ದುಷ್ಟತನಗಳನ್ನು ಉದ್ರೇಕಿಸುತ್ತವೆ. ಅಂತಿಮವಾಗಿ ನಮ್ಮ ಪಾಪವು ನಮ್ಮ ಮೇಲೆ ತಿರುಗು ಬಾಣವಾಗುತ್ತದೆ. ಏಕೆಂದರೆ ಅದು ನಮ್ಮ ದೈಹಿಕ ತಪ್ಪು ಗುರುತಿಸುವಿಕೆಯ ಭ್ರಮೆಯನ್ನು ಶಾಶ್ವತಗೊಳಿಸುತ್ತದೆ. ಮತ್ತು ನಮ್ಮ ದೇಹವು ವೃದ್ಧಾಪ್ಯ, ರೋಗ, ಸಾವು ಮತ್ತು ಪುನರ್ ಜನ್ಮದ ಹಿಂಸೆಗೆ ಪದೇ ಪದೇ ಒಳಗಾಗುತ್ತದೆ.
ಹಾಗೆಂದು ವಿಶೇಷವಾಗಿರಬೇಕೆಂಬ ನಮ್ಮ ಸ್ವಾಭಾವಿಕ ಹಂಬಲವನ್ನು ನಾವು ತಡೆಹಿಡಿಯಬೇಕಾಗಿಲ್ಲ. ಹನುಮಂತನಂತೆಯೇ ನಾವೂ ಕೂಡ ನಾಯಕರಾಗಬಹುದು. ಹೇಗೆ? ಪರಮ ನಾಯಕನಿಗೆ ಸೇವೆ ಸಲ್ಲಿಸುವ ಮೂಲಕ. ದುರದೃಷ್ಟವಶಾತ್, ನಮ್ಮ ಸಮಾಜವು ರಾವಣ ಪ್ರವೃತ್ತಿಯನ್ನು ಶೌರ್ಯವೆಂದು ಮತ್ತು ಹನುಮಂತನ ಪ್ರವೃತ್ತಿಯನ್ನು ಗತಕಾಲದ್ದೆಂದು ಬಿಂಬಿಸುತ್ತದೆ.
ಆಶಯದ ಪಾಠ
ಅಸಾಧಾರಣ ಸಮೃದ್ಧಿ ಇದ್ದರೂ ರಾವಣನು ತೃಪ್ತನಾಗಿರಲಿಲ್ಲ ಎಂದು ರಾಮಾಯಣವು ತಿಳಿಸುತ್ತದೆ. ಅವನು ಸದಾ ಕಾಮಾಸಕ್ತನಾಗಿದ್ದ ಮತ್ತು ದುರಾಸೆಹೊಂದಿದ್ದ. ನಮ್ಮ ಆಧುನಿಕ ನಾಗರಿಕತೆಯ ಸ್ಥಿತಿಯೂ ಅದೇ ಅಲ್ಲವೆ? ರಾವಣನ ಎಲ್ಲ ಶಕ್ತಿ ಮತ್ತು ಸಂಪತ್ತು ಅವನಿಗೆ ಸುಖವನ್ನೂ ನೀಡಲಿಲ್ಲ ಅಥವಾ ಸಂಭಾವ್ಯ ನಾಶದಿಂದ ಅವನನ್ನು ಕಾಪಾಡಲೂ ಇಲ್ಲ. ಅಂತಿಮವಾಗಿ, ನಮ್ಮ ಸಮಾಜವು ತನ್ನ ದೇವರಹಿತ ಸ್ವಾರ್ಥದಲ್ಲಿಯೇ ಮುಂದುವರಿದರೆ ಅದಕ್ಕೆ ಕಾದಿರುವ ವಿಧಿಯನ್ನು ರಾವಣನ ಪರಾಜಯವು ನಮಗೆ ನೆನಪಿಸುತ್ತದೆ.

ಆದರೂ ರಾವಣನ ಪತನವು ಕೇವಲ ಅಳಿವಿನ ಎಚ್ಚರಿಕೆಯಲ್ಲ. ಅದು ಆಶಯ ಮತ್ತು ಆನಂದದ ಸಂಕೇತವೂ ಆಗಿದೆ. ಏಕೆಂದರೆ ಅದು ಭಗವಂತನು ಒಳಗಿನ ಮತ್ತು ಹೊರಗಿನ ದುಷ್ಟ ಶಕ್ತಿಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂದೂ ಬೋಧಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ ರಾವಣನನ್ನು ಸಂಹರಿಸಿದ ಅದೇ ಶ್ರೀರಾಮನು ಜನರ ಹೃದಯದೊಳಗಿನ ರಾವಣರನ್ನು ನಾಶಪಡಿಸಲು ತನ್ನ ಪವಿತ್ರ ನಾಮವಾಗಿ ಪುನಃ ಅವತರಿಸಿದ್ದಾನೆ. ಪವಿತ್ರ ನಾಮವು ನಮಗೆ ನಿಜವಾದ ಸುಖವನ್ನು ನೀಡುತ್ತದೆ. ಅದು ಭಗವಂತನನ್ನು ಅನುಕರಣೆ ಮಾಡುವುದರಿಂದ ಅಲ್ಲ, ಪ್ರಭುವನ್ನು ಪ್ರೀತಿಸುವುದರಿಂದ; ಕೃತಕ ನಾಯಕನಾಗಿ ಅಲ್ಲ, ಸೇವಕ ನಾಯಕನಾಗಿ.






Leave a Reply