
ಸುವರ್ಣಗಡ್ಡೆಗೆ ಇಂಗ್ಲಿಷ್‌ನಲ್ಲಿ ಎಲಿಫಂಟ್ ಯಾಮ್ ಎನ್ನುತ್ತಾರೆ. ಏಕೆಂದರೆ ಅದರ ಗಿಡವು ಆನೆಯ ಪಾದಗಳಂತೆ ಕಾಣುತ್ತದೆ ಮತ್ತು ದೊಡ್ಡದಾಗಿಯೇ ಇದೆ. ಆಫ್ರಿಕಾದಲ್ಲಿ ಸುವರ್ಣಗಡ್ಡೆಯ ಅಧಿಕ ಬಳಕೆ ಎಂದು ಕಂಡು ಬಂದಿದೆ. ಇದನ್ನು ಉಪಯೋಗಿಸುವ ಅನಂತರ ಸ್ಥಾನ ಭಾರತದಂತಹ ಏಷ್ಯಾ ರಾಷ್ಟ್ರಗಳು. ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗೆಗೆ ಹೇಳುವುದಾದರೆ, ಈ ಗಡ್ಡೆಯು ಕಾರ್ಬ್ಸ್ (ಕಾರ್ಬನ್ ಉಳ್ಳ ಎಂಬ ಅರ್ಥದ) ಮತ್ತು ಪ್ರೋಟಿನ್, ಕೆಲವು ವಿಟಮಿನ್‌ಗಳಿಗೆ ಮೂಲವಾಗಿದೆ.
ಸುವರ್ಣಗಡ್ಡೆಯಲ್ಲಿ ನಾರಿನಂಶ ಸ್ವಾಭಾವಿಕವಾಗಿ ಅಧಿಕವಾಗಿದ್ದು ತೂಕ ಇಳಿತವನ್ನು ಉತ್ತೇಜಿಸುತ್ತದೆ. ಅಲ್ಲದೆ ದೇಹದಲ್ಲಿನ ಕೊಲೆಸ್ಟರಾಲ್ ಮಟ್ಟವನ್ನು ಕಡಮೆ ಮಾಡುತ್ತದೆ. ಸರಿಯಾದ ಕ್ರಮದಲ್ಲಿ ಸುವರ್ಣಗಡ್ಡೆಯಿಂದ ಅಡುಗೆ ಮಾಡಿದರೆ, ತೂಕ ಹೆಚ್ಚಾಗುತ್ತದೆಂಬ ಭಯವಿಲ್ಲದೆ ಅನಾಯಾಸವಾಗಿ ಸೇವಿಸಬಹುದು.
ಇದು ದೇಹವನ್ನು ತಂಪಾಗಿಸುತ್ತದೆ. ಆದುದರಿಂದ ಇದು ಅಧಿಕ ಒತ್ತಡ ಅನುಭವಿಸುತ್ತಿರುವ ಜನರಿಗೆ ಉತ್ತಮ ಆಹಾರ.
ಸುವರ್ಣಗಡ್ಡೆಯು ಒಮೇಗ 2 ಕೊಬ್ಬುಗಳ ಆಮ್ಲದಿಂದ ಭರಿತವಾಗಿದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲ್ ಅನ್ನು ಕಡಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟರಾಲ್ ಅನ್ನು ಹೆಚ್ಚಿಸುತ್ತದೆ. ಪೈಲ್ಸ್‌ಗಾಗಿ (ಮೂಲ ವ್ಯಾಧಿ) ಚಿಕಿತ್ಸೆ ಪಡೆಯುತ್ತಿರುವವರಿಗೆ ಸುವರ್ಣಗಡ್ಡೆಯನ್ನು ಹೆಚ್ಚು ಸೇವಿಸಲು ಸಲಹೆ ನೀಡಲಾಗುತ್ತದೆ.
ಸುವರ್ಣಗಡ್ಡೆಯಿಂದ ಮಾಡುವ ತಿನಿಸುಗಳನ್ನು ನೀಡಿದ್ದೇವೆ. ಈ ಎಲ್ಲವನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಸುವರ್ಣಗಡ್ಡೆ ಪಚಡಿ

ಬೇಕಾಗುವ ಪದಾರ್ಥಗಳು :
ಸುವರ್ಣಗಡ್ಡೆ – 200 ಗ್ರಾಂ
ಬಿಳಿ ಎಳ್ಳು – 1 ಚಮಚ
ಕಡಲೆಕಾಯಿ ಬೀಜ – 1/4 ಕಪ್
ಹಸಿ ಮೆಣಸಿನಕಾಯಿ – 4
ಕೊಬ್ಬರಿ ತುರಿ – 4 ಚಮಚ
ಶುಂಠಿ – 1/2 ಇಂಚು
ಗರಂ ಮಸಾಲ – 1/2 ಚಮಚ
ನಿಂಬೆರಸ – 1 ಚಮಚ
ಸಕ್ಕರೆ – 1 ಚಮಚ
ಉಪ್ಪು – ರುಚಿಗೆ
ಮಾಡುವ ವಿಧಾನ : ಸುವರ್ಣಗಡ್ಡೆಯ ಸಿಪ್ಪೆ ತೆಗೆದು ತೊಳೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಅನಂತರ ಇದನ್ನು ನೀರಿನಲ್ಲಿ ಸ್ವಲ್ಪ ಹಾಕಿ ಬೇಯಿಸಿ. ಬೇಯಿಸುವಾಗ ನಿಂಬೆರಸ ಹಾಕಿ. ಚೆನ್ನಾಗಿ ಬೆಂದ ಅನಂತರ ಕೆಳಗಿಳಿಸಿ ನೀರು ಬಸಿದು ಇಡಿ. ಆರಿದ ಅನಂತರ ಇದನ್ನು ಚೆನ್ನಾಗಿ ಮಸೆದು ಇಡಿ. ಎಳ್ಳು ಹುರಿದು ಪುಡಿ ಮಾಡಿ, ಕಡಲೆಕಾಯಿ ಬೀಜ, ಶುಂಠಿ, ಹಸಿ ಮೆಣಸಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಮಸೆದ ಸುವರ್ಣಗಡ್ಡೆಗೆ ರುಬ್ಬಿದ ಮಿಶ್ರಣ, ಎಳ್ಳು ಪುಡಿ, ಗರಂ ಮಸಾಲ, ಕೊಬ್ಬರಿ ತುರಿ, ಸಕ್ಕರೆ, ಉಪ್ಪನ್ನು ಸೇರಿಸಿ ಚೆನ್ನಾಗಿ ಕಲೆಸಿ. ಮೇಲೆ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಯಾದ ಸುವರ್ಣಗಡ್ಡೆ ಪಚಡಿ ಸವಿಯಲು ಸಿದ್ಧ.
ಸುವರ್ಣ ಬಜ್ಜಿ

ಉಳಿದೆಲ್ಲ ಸಾಮಾನ್ಯ ಬಜ್ಜಿಗಳಂತೆ ಸುವರ್ಣಗಡ್ಡೆಯ ತೆಳುವಾದ ಹೋಳುಗಳನ್ನು ಕಡ್ಲೆ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಲಾಗುವುದು. ಆದರೆ ಇತರೆ ಬಜ್ಜಿಗೂ ಸುವರ್ಣ ಬಜ್ಜಿಗೂ ವ್ಯತ್ಯಾಸವಿದೆ. ಹಿಟ್ಟಿನಲ್ಲಿ ಹೋಳುಗಳನ್ನು ಅದ್ದಿದ ಮೇಲೆ ಎಣ್ಣೆಯಲ್ಲಿ ಕರಿಯುವ ಮುನ್ನ ಅದಕ್ಕೆ ಹಾಕುವ ಧನಿಯಾ ಪುಡಿ, ಎಳ್ಳು, ತಾಜಾ ಮೆಣಸಿನ ಪುಡಿಯು ಎಲ್ಲ ಹೊಸ ರುಚಿಯನ್ನೂ ನೀಡುತ್ತದೆ!
ಬೇಕಾಗುವ ಸಾಮಾನುಗಳು
ಸಿಪ್ಪೆ ತೆಗೆದು ತೆಳ್ಳಗೆ ಹೋಳು ಮಾಡಿದ ಸುವರ್ಣಗಡ್ಡೆ – ಅಗತ್ಯವಿದ್ದಷ್ಟು
ಪುಡಿ ಮಾಡಿದ ಧನಿಯಾ – 1 ಚಮಚ
ಎಳ್ಳು – 2 ಚಮಚ
ಕಾಲಾ ಮಿರ್ಚಿಯ ತರಿಯಾದ ಪುಡಿ – 2 ಚಮಚ
ಉಪ್ಪು – ರುಚಿಗೆ
ಎಣ್ಣೆ – ಕರಿಯಲು
ತೆಳುವಾದ ಬಜ್ಜಿಯ ಹಿಟ್ಟಿಗೆ
ಕಡಲೆ ಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 1/4 ಕಪ್
ಇಂಗು – ಸ್ವಲ್ಪ
ಮೆಣಸಿನಕಾಯಿ ಪುಡಿ – 1 ಚಮಚ
ಕಾಯಿಸಿದ ಎಣ್ಣೆ – 1 ಚಮಚ
ಉಪ್ಪು – ರುಚಿಗೆ
ಮಾಡುವ ವಿಧಾನ: ಸುವರ್ಣ ಗಡ್ಡೆಯ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ನಿಮಗೆ ಬೇಕಾದ ಆಕಾರದಲ್ಲಿ ತೆಳುವಾಗಿ ಕತ್ತರಿಸಿಕೊಳ್ಳಿ. ಅನಂತರ ಇದನ್ನು ಬಜ್ಜಿಯ ಹಿಟ್ಟಿನಲ್ಲಿ ಚೆನ್ನಾಗಿ ಮುಳುಗಿಸಿ. ಎಲ್ಲ ಕಡೆ ಹಿಟ್ಟು ಅಂಟಿಕೊಳ್ಳಲಿ. ಹೋಳನ್ನು ಹೊರತೆಗೆದು ಧನಿಯಾ ಪುಡಿ, ಕರಿಮೆಣಸಿನ ಪುಡಿ ಮತ್ತು ಎಳ್ಳನ್ನು ಹೋಳಿನ ಮೇಲೆ ಚಿಮುಕಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಕಾದ ಎಣ್ಣೆಗೆ ಹೋಳುಗಳನ್ನು ಹಾಕಿ ಚಿನ್ನದ ಕಂದು ಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆ ಹೀರುವ ಕಾಗದದಲ್ಲಿ ಹಾಕಿ. ಇದನ್ನು ನಿಮಗಿಷ್ಟವಾದ ಚಟ್ನಿ ಜೊತೆ ತಿನ್ನಲು ಕೊಡಿ.
ಸುವರ್ಣಗಡ್ಡೆ ಮಸಾಲೆ

ಬೇಕಾಗುವ ಪದಾರ್ಥಗಳು:
ಸುವರ್ಣಗಡ್ಡೆ – 250 ಗ್ರಾಂ
ಮೊಸರು – 1/2 ಕಪ್
ಜೀರಿಗೆ – 1 ಚಮಚ
ಧನಿಯಾ ಪುಡಿ – 1 ಚಮಚ
ಶುಂಠಿ – 1 ಇಂಚು
ಹಸಿ ಮೆಣಸಿನಕಾಯಿ – 3
ಏಲಕ್ಕಿ – 1
ಸಕ್ಕರೆ – 1 ಚಮಚ
ಸಾಸಿವೆ – 1/2 ಚಮಚ
ಅರಿಶಿನ – 1/4 ಚಮಚ
ಕೆಂಪು ಮೆಣಸಿನಕಾಯಿ ಪುಡಿ – 1/2 ಚಮಚ
ಉಪ್ಪು – ರುಚಿಗೆ
ಎಣ್ಣೆ – 2 ಚಮಚ
ಮಾಡುವ ವಿಧಾನ : ಸುವರ್ಣಗಡ್ಡೆ ಸಿಪ್ಪೆ ತೆಗೆದು ಉಪ್ಪು ನೀರಿನಲ್ಲಿ ಬೇಯಿಸಿ, ಬೇಯಿಸುವಾಗ ಇದಕ್ಕೆ ಒಂದು ಚಮಚ ವಿನಿಗರ್ ಹಾಕಿ. ಬೆಂದ ಮೇಲೆ ನೀರೆಲ್ಲಾ ಬಸಿದುಬಿಡಿ. ಜೀರಿಗೆ, ಏಲಕ್ಕಿ, ಮೆಣಸಿನಕಾಯಿ, ಶುಂಠಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ್ದಕ್ಕೆ ಧನಿಯಾ ಪುಡಿ, ಮೊಸರು, ಕೆಂಪು ಮೆಣಸಿನಕಾಯಿ ಪುಡಿ, ಸಕ್ಕರೆ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಚೆನ್ನಾಗಿ ಕುದಿ ಬಂದ ಮೇಲೆ ಇದಕ್ಕೆ ಬೇಯಿಸಿದ ಸುವರ್ಣಗಡ್ಡೆ ಹಾಕಿ. ಅನಂತರ ಇದಕ್ಕೆ ಒಗ್ಗರಣೆ ಹಾಕಿದರೆ ಬಿಸಿಯಾದ ಸುವರ್ಣಗಡ್ಡೆ ಮಸಾಲೆ ಸಿದ್ಧ.
ಕಿವಿಮಾತು
* ಶುಂಠಿ ಸಿಪ್ಪೆ ತೆಗೆಯುವುದು ಕಷ್ಟವೇ? ಚಾಕುವಿನ ಬದಲು ಚಮಚ ಬಳಸಿ ನೋಡಿ. ಸಿಪ್ಪೆ ತೆಗೆಯುವುದು ಸುಲಭ ಮತ್ತು ಶುಂಠಿ ನಷ್ಟವಾಗುವುದೂ ಇಲ್ಲ.
* ನಿಂಬೆಯಿಂದ ಗರಿಷ್ಠ ರಸ ಪಡೆಯಲು ಅದನ್ನು ಕೈಯಲ್ಲಿ ಗಟ್ಟಿಯಾಗಿ ಹೊರಳಿಸಿ ಹಿಂಡಿ. ಮೈಕ್ರೋವೇವ್‌ನಲ್ಲಿ 10 ಸೆಕೆಂಡ್ ಇಟ್ಟು ಹೊರತೆಗೆದು ಹಿಂಡಿದರೂ ಗರಿಷ್ಠ ರಸ ಲಭ್ಯ.
* ವಡೆ ಹಿಟ್ಟು ನೀರಾಯಿತೆ? ಹಿಟ್ಟಿಗೆ ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಿ. ವಡೆ ಹಿಟ್ಟು ಎಣ್ಣೆಯಲ್ಲಿ ಹರಡುವುದಿಲ್ಲ.
* ಯಾವುದೆ ಸೊಪ್ಪು ಬೇಯಿಸುವಾಗ ಒಂದು ಚಿಟಿಕೆ ಸಕ್ಕರೆ ಹಾಕಿ. ಸೊಪ್ಪು ಹಸಿರಾಗಿಯೇ ಉಳಿಯುವುದು.
* ಸೂಪ್ ಗಟ್ಟಿಯಾಗಿರಲು ಅದಕ್ಕೆ ನೀರಿನಲ್ಲಿ ಮಿಶ್ರಣ ಮಾಡಿದ ಮುಸುಕಿನ ಜೋಳದ ಹಿಟ್ಟು ಹಾಕಿ ಕಲಸಿ.
* ಕರಿಯುವಾಗ ಎಣ್ಣೆ ಉಕ್ಕುತ್ತಿದ್ದರೆ ಚೂರು ಹುಣಿಸೇಹಣ್ಣು ಹಾಕಿ.






Leave a Reply