ಸೌಭರಿ ಋಷಿಯ ಅಧಃಪತನ

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂದಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ.

ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂದದ 6 ಮತ್ತು 7ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಸೌಭರಿ ಋಷಿಯ ಅಧಃಪತನ ಕುರಿತ ಕುತೂಹಲಕಾರಿ ಕಥಾನಕವನ್ನು ನಿಮಗಾಗಿ ಅವರು ನೀಡಿದ್ದಾರೆ.

ಸೌಭರಿ ಮುನಿಯ ಅಧಃಪತನದ ಹಿನ್ನೆಲೆ

“ನಾಗಾಲಯವೆಂಬ ದ್ವೀಪದಲ್ಲಿ ಸರ್ಪಗಳು ವಾಸವಾಗಿದ್ದವು. ಅಲ್ಲಿನ ಮುಖ್ಯ ಸರ್ಪಗಳಲ್ಲಿ ಕಾಳಿಯನು ಒಬ್ಬ. ಗರುಡನು ಆ ದ್ವೀಪಕ್ಕೆ ಬಂದು ಮನಬಂದಂತೆ ಸರ್ಪಗಳನ್ನು ಕೊಲ್ಲುತ್ತಿದ್ದನು. ಕೆಲವನ್ನು ತಿಂದು ಉಳಿದವನ್ನು ಅನಗತ್ಯವಾಗಿ ಕೊಂದನು. ಉರಗ ಸಮಾಜಕ್ಕೆ ಎಷ್ಟು ಕಳವಳವಾಯಿತೆಂದರೆ ಅವರ ನಾಯಕನಾದ ವಾಸುಕಿಯು ತಮ್ಮನ್ನು ರಕ್ಷಿಸಬೇಕೆಂದು ಬ್ರಹ್ಮನಿಗೆ ಪ್ರಾರ್ಥನೆ ಮಾಡಿದನು.

ಬ್ರಹ್ಮದೇವನು ಒಂದು ವ್ಯವಸ್ಥೆಯನ್ನು ಮಾಡಿದನು. ಇದರ ಪ್ರಕಾರ ಗರುಡನು ಪ್ರಕ್ಷುಬ್ಧತೆಯನ್ನು ಉಂಟು ಮಾಡಬಾರದು; ಪ್ರತಿ ಅಷ್ಟಮಿಯ ದಿನ ಉರಗ ಸಮಾಜವು ಗರುಡನಿಗೆ ಒಂದು ಹಾವನ್ನು ಕೊಡತಕ್ಕದ್ದು. ಹಾವನ್ನು ಗರುಡನಿಗೆ ಬಲಿಯಾಗಿ ಒಂದು ಮರದ ಕೆಳಗೆ ಇಡಬೇಕು. ಈ ಒಪ್ಪಂದದಿಂದ ಗರುಡನಿಗೆ ಸಂತೋಷವಾಯಿತು. ಅಂದಿನಿಂದ ಅವನು ಬೇರೆ ಸರ್ಪಗಳಿಗೆ ತೊಂದರೆ ಕೊಡುತ್ತಿರಲಿಲ್ಲ.

ಆದರೆ ಕ್ರಮೇಣ ಕಾಳಿಯನು ಈ ಸನ್ನಿವೇಶದ ಲಾಭವನ್ನು ಪಡೆದುಕೊಂಡನು. ತನ್ನಲ್ಲಿ ಸೇರಿಕೊಂಡಿದ್ದ ವಿಷದ ಪ್ರಮಾಣದಿಂದಲೂ, ತನ್ನ ಶಕ್ತಿಯಿಂದಲೂ ಅವನಿಗೆ ಮಿತಿಮೀರಿದ ಅಹ೦ಕಾರವಾಯಿತು. ‘ಗರುಡನಿಗೆ ಈ ಬಲಿಯನ್ನು ಏಕೆ ಒಪ್ಪಿಸಬೇಕು?’ ಎಂದು ಅವನು ಯೋಚಿಸಿದನು. ಅವನು ಬಲಿಕೊಡುವುದನ್ನೇ ನಿಲ್ಲಿಸಿಬಿಟ್ಟನು; ಅದರ ಬದಲು ಗರುಡನಿಗೆಂದು ಇಟ್ಟ ಬಲಿಯನ್ನು ತಾನೇ ತಿಂದುಬಿಡುತ್ತಿದ್ದನು.

ವಿಷ್ಣುವಿನ ಪರಮ ಭಕ್ತನೂ ವಾಹನವೂ ಆದ ಗರುಡನಿಗೆ ಕಾಳಿಯನು ತನಗಾಗಿ ಇಟ್ಟ ಬಲಿಯನ್ನು ತಿಂದುಬಿಡುತ್ತಿದ್ದ ಎಂದು ಅರ್ಥವಾಯಿತು. ಅವನಿಗೆ ತುಂಬಾ ಕೋಪ ಬಂದಿತು. ಅಪರಾಧಿ ಸರ್ಪವನ್ನು ಕೊಲ್ಲಲು ದ್ವೀಪಕ್ಕೆ ಧಾವಿಸಿದ. ಕಾಳಿಯನು ಗರುಡನೊಂದಿಗೆ ಹೋರಾಡಲು ಪ್ರಯತ್ನಿಸಿದನು. ತನ್ನ ಬಹು ಸಂಖ್ಯೆಯ ಹೆಡೆಗಳಿಂದಲೂ ವಿಷ ತುಂಬಿದ ಹಲ್ಲುಗಳಿಂದಲೂ ಅವನನ್ನು ಎದುರಿಸಿದನು. ಕಾಳಿಯನು ಅವನನ್ನು ಕಚ್ಚಲು ಪ್ರಯತ್ನಿಸಿದನು.

ತಾರ್ಕಷ್ಟನ ಮಗನಾದ ಗರುಡನು ಬಹು ಕೋಪದಿಂದ ವಿಷ್ಣು ವಾಹನನಿಗೆ ಯೋಗ್ಯವಾದ ಶಕ್ತಿಯಿಂದ ತನ್ನ ಪ್ರಕಾಶಮಾನವಾದ ಚಿನ್ನದ ರೆಕ್ಕೆಗಳಿಂದ ಕಾಳಿಯನ ದೇಹಕ್ಕೆ ಪ್ರಹಾರ ಮಾಡಿದನು. ಕಾಳಿಯನಿಗೆ ಕದ್ರೂಸುತ ಎಂದರೆ ಕದ್ರುವಿನ ಮಗ ಎಂದು ಹೆಸರು. ಅವರು ಯಮುನಾ ನದಿಯ ಕೆಳಗಿದ್ದ ಕಾಳಿಯದಹ ಎನ್ನುವ ಸರೋವರಕ್ಕೆ ಓಡಿಹೋದನು, ಗರುಡನು ಅಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಕಾಳಿಯನು ಯಮುನಾ ನದಿಯ ನೀರಿನಲ್ಲಿ ಆಶ್ರಯ ಪಡೆಯಲು ಕಾರಣ ಇದು.

ಕಾಳಿಯ ಸರ್ಪದ ದ್ವೀಪಕ್ಕೆ ಹೋಗುತ್ತಿದ್ದಂತೆಯೇ ಗರುಡನು ಮೀನುಗಳನ್ನು ಹಿಡಿದು ತಿನ್ನಲು ಯಮುನಾ ನದಿಗೆ ಹೋಗುತ್ತಿದ್ದನು. ಆದರೆ ಸೌಭರಿ ಮುನಿ ಎನ್ನುವ ಮಹಾಯೋಗಿಯು ಆ ನದಿಯಲ್ಲಿ ಧ್ಯಾನ ಮಾಡುತ್ತಿದ್ದನು, ಅವನಿಗೆ ಮೀನುಗಳಲ್ಲಿ ಕರುಣೆ. ಅಲ್ಲಿಗೆ ಬಂದು ಮೀನುಗಳಿಗೆ ತೊಂದರೆ ಕೊಡಬಾರದೆಂದು ಅವನು ಗರುಡನಿಗೆ ಹೇಳಿದನು. ವಿಷ್ಣು ವಾಹನನಾದ ಗರುಡನು ಯಾರ ಅಪ್ಪಣೆಯನ್ನೂ ಪಾಲಿಸಬೇಕಾಗಿರಲಿಲ್ಲ, ಆದರೆ ಅವನು ಮಹಾಯೋಗಿಯ ಅಪ್ಪಣೆಯನ್ನು ಮೀರಲಿಲ್ಲ.

ಅಲ್ಲಿಯೇ ಇದ್ದು ಹಲವಾರು ಮೀನುಗಳನ್ನು ತಿನ್ನುವ ಬದಲು ಅವನು ಅವುಗಳ ನಾಯಕನಾದ ಒಂದು ದೊಡ್ಡ ಮೀನನ್ನು ತೆಗೆದುಕೊಂಡು ಹೋದನು. ಮೀನುಗಳ ಒಬ್ಬ ನಾಯಕನನ್ನು ಗರುಡನು ಹೊತ್ತುಕೊಂಡು ಹೋದದ್ದರಿಂದ ಸೌಭರಿ ಮುನಿಗೆ ದುಃಖವಾಯಿತು. ಮೀನುಗಳನ್ನು ರಕ್ಷಿಸಬೇಕೆಂದು ಅವನು, ‘ಇಂದಿನಿಂದ ಮೀನುಗಳನ್ನು ಹಿಡಿಯಲು ಗರುಡನು ಇಲ್ಲಿಗೆ ಬಂದರೆ ಅವನು ಕೂಡಲೇ ಸಾಯುತ್ತಾನೆ ಎಂದು ನನ್ನ ಶಕ್ತಿಯನ್ನೆಲ್ಲ ಬಳಸಿ ಹೇಳುತ್ತಿದ್ದೇನೆ’ ಎಂದು ಶಾಪಕೊಟ್ಟನು.

ಈ ಶಾಪದ ವಿಷಯವು ಕಾಳಿಯನಿಗೆ ಮಾತ್ರ ತಿಳಿದಿತ್ತು. ಆದುದರಿಂದ ಗರುಡನು ಅಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ ಎಂಬ ಧೈರ್ಯದಿಂದ ಯಮುನಾ ನದಿಯೊಳಗಿನ ಸರೋವರದಲ್ಲಿ ಆಶ್ರಯ ಪಡೆಯುವುದು ವಿವೇಕ ಎಂದು ಯೋಚಿಸಿದನು. ಆದರೆ ಕಾಳಿಯನು ಸೌಭರಿ ಮುನಿಯ ಆಶ್ರಯವನ್ನು ಪಡೆದದ್ದು ಪ್ರಯೋಜನವಾಗಲಿಲ್ಲ. ಗರುಡನ ಒಡೆಯನಾದ ಕೃಷ್ಣನು ಅವನನ್ನು ಯಮುನಾ ನದಿಯಿಂದ ಓಡಿಸಿಬಿಟ್ಟನು.

ಗರುಡನಿಗೆ ದೇವೋತ್ತಮ ಪರಮ ಪುರುಷನ ನೇರವಾದ ಸಂಬಂಧವಿದೆ. ಅವನು ಎಷ್ಟು ಶಕ್ತಿವಂತನೆಂದರೆ ಯಾರ ಅಪ್ಪಣೆಗಾಗಲೀ, ಶಾಪಕ್ಕಾಗಲೀ ಮಣಿಯಬೇಕಾಗಿಲ್ಲ ಎನ್ನುವುದನ್ನು ಗಮನಿಸಬೇಕು. ವಾಸ್ತವವಾಗಿ ಶ್ರೀಮದ್ಭಾಗವತದಲ್ಲಿ ಗರುಡನು ದೇವೋತ್ತಮ ಪರಮ ಪುರುಷನಿಗೆ, ಭಗವಂತನಿಗೆ ಸಮಾನ ಎಂದು ಹೇಳಿದೆ.

ಅವನಿಗೆ ಶಾಪವನ್ನು ಕೊಟ್ಟಿದ್ದು ಸೌಭರಿ ಮುನಿಯ ಅಪರಾಧ. ಗರುಡನು ಪ್ರತೀಕಾರ ಮಾಡಲು ಪ್ರಯತ್ನಿಸದಿದ್ದರೂ ಒಬ್ಬ ಮಹಾನ್ ವೈಷ್ಣವನಿಗೆ ವಿರುದ್ಧವಾಗಿ ನಡೆದುಕೊಂಡದ್ದಕ್ಕಾಗಿ ಮುನಿಗೆ ಶಿಕ್ಷೆಯಾಗದೆ ಇರಲಿಲ್ಲ. ಈ ಅಪರಾಧಕ್ಕಾಗಿ ತನ್ನ ಉನ್ನತ ಯೋಗಸ್ಥಿತಿಯಿಂದ ಪತನಗೊಂಡು ಈ ಭೌತಿಕ ಜಗತ್ತಿನಲ್ಲಿ ಇಂದ್ರಿಯ ಸುಖಗಳನ್ನು ಪಡೆವ ಗೃಹಸ್ಥನಾದನು.

ಧ್ಯಾನದಿಂದ ಆತ್ಮಾನಂದದಲ್ಲಿ ಲೀನನಾಗಿದ್ದವನು ಎನಿಸಿಕೊಂಡಿದ್ದ ಸೌಭರಿ ಮುನಿಯ ಪತನವು ವೈಷ್ಣವರಾಗಿದ್ದೂ, ಅಪರಾಧ ಮಾಡುವವರಿಗೆ ಒಂದು ಆ ಕಾಲದಲ್ಲಿ ಇದ್ದ ಸೌಭರಿ ಎನ್ನುವ ಋಷಿ ಯಾವಾಗಲೂ ತಪಸ್ಸಿಲ್ಲಿಯೇ ಮಗ್ನರಾಗಿದ್ದವರು. ತಮ್ಮ ದೀರ್ಘ ತಪಸ್ಸಿನಿಂದ ಅವರು ಅಪೂರ್ವ ತೇಜೋಶಕ್ತಿಯನ್ನು ಮತ್ತು ಮಂತ್ರಶಕ್ತಿಯನ್ನು ಸಂಪಾದಿಸಿಕೊಂಡಿದ್ದರು.

ನಿರಂತರವಾಗಿ ಯೋಗಾಭ್ಯಾಸ ಮಾಡುತ್ತ ಯಮುನಾ ನದಿಯ ಮಡುವಿನಲ್ಲಿ ಮುಳುಗಿ ತಪೋಮಗ್ನರಾಗಿದ್ದಾಗ, ಒಮ್ಮೆ ತಮ್ಮ ಮುಂದೆಯೇ ಮೀನುಗಳ ಜೋಡಿಯೊಂದು ಮೈಥುನದಲ್ಲಿ ಮಗ್ನವಾಗಿರುವುದನ್ನು ನೋಡಿದರು. ಆ ಕ್ಷಣವೇ ಅವರ ಮೈಮನಸ್ಸು ಕಾವೇರಿ ಕಾಮನೆಯಲ್ಲಿ ಮುಳುಗಿ ಹೋಯಿತು. ಹೆಣ್ಣಿನ ಸಂಗವನ್ನು ಬಯಸಿತು. ಮಾಡುತ್ತಿದ್ದ ತಪಸ್ಸನ್ನು ಹಾಗೆಯೇ ನಿಲ್ಲಿಸಿದರು.

ಮಥುರೆಯ ರಾಜ ಮಾಂಧಾತನಿಗೆ ಐವತ್ತು ಹೆಣ್ಣು ಮಕ್ಕಳಿದ್ದಾರೆ, ಅವರಲ್ಲಿ ಒಬ್ಬಳನ್ನು ಕೇಳಿ ಪಡೆದುಕೊಂಡು ತಮಾಸೆ ತೀರಿಸಿಕೊಳ್ಳಬಹುದು ಎನಿಸಿತವರಿಗೆ.

ಕೂಡಲೇ ಮಾಂಧಾತನ ಹತ್ತಿರ ಬಂದರು. ‘ರಾಜನ್, ನನಗೆ ಮದುವೆ ಆಗಬೇಕೆಂದೆನ್ನಿಸಿದೆ. ನಿನ್ನ ಐವತ್ತು ಮಕ್ಕಳಲ್ಲಿ ಒಬ್ಬಳನ್ನು ನನಗೆ ಮದುವೆ ಮಾಡಿಕೊಡು! – ಎಂದು ಕೇಳಿದರು.

ಮುಪ್ಪಿನಿಂದ ದುರ್ಬಲರಾಗಿದ್ದ ಕೂದಲು ಹಣ್ಣಾಗಿದ್ದ ಚರ್ಮ ಸುಕ್ಕುಗಟ್ಟಿದ್ದ, ತಲೆ ಸದಾ ಕಂಪಿಸುತ್ತಿದ್ದ ಈ ಉದ್ದ ಗಡ್ಡದ ಕೌಪೀನ ಯೋಗಿಗೆ ತನ್ನ ರಾಜಕುಮಾರಿಯೊಬ್ಬಳನ್ನು ಹೇಗೆ ಮದುವೆ ಮಾಡಿ ಕೊಡುವುದು? ಸುಕುಮಾರಿಯಾದವಳಿಗೆ ಈ ಸಂಬಂಧ ಸುಖವಾಗಿರುವುದೇ? ರಾಜ ಯೋಚಿಸಿ ಯೋಚಿಸಿ ಕಂಗೆಟ್ಟ.

ಕೊನೆಗೆ ಒಂದು ಹಾರಿಕೆಯ ಉತ್ತರ ಕೊಟ್ಟ: ‘ಪೂಜ್ಯ ಋಷಿಪುಂಗವರೆ, ನನ್ನ ಐವತ್ತು ಹೆಣ್ಣು ಮಕ್ಕಳನ್ನೂ ನಿಮ್ಮ ಮುಂದೆ ನಿಲ್ಲಿಸುತ್ತೇನೆ. ಅವರಲ್ಲಿ ಯಾರಾದರೊಬ್ಬರು ನಿಮ್ಮನ್ನು ಮದುವೆಯಾಗಲು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ!”

ಸೌಭರಿ ಮುನಿಗೆ ರಾಜನ ಮಾತಿನ ಅಂತರಾಳ ಅರ್ಥವಾಯಿತು. ತನ್ನಂತಹ ಮುದುಕನಿಗೆ ಮಗಳನ್ನು ಕೊಡಲು ಇಷ್ಟವಿಲ್ಲದೆ ಒಂದು ದಾರಿಯನ್ನು ಹುಡುಕಿದ್ದಾನೆ ಎನಿಸಿತು. ಕೂಡಲೇ ಹೇಳಿದರು : “ಹಾಗೇ ಆಗಲಿ, ಯಾರಿಗೆ ಇಷ್ಟವಾಗುತ್ತದೋ ಅವರನ್ನೇ ಮದುವೆಯಾಗುತ್ತೇನೆ.!”

ಆ ಐವತ್ತು ರಾಜಕನ್ಯೆಯರು ತಮ್ಮ ಮುಂದೆ ಬಂದು ನಿಲ್ಲುವ ವೇಳೆಗೆ ಸರಿಯಾಗಿ ಈ ಋಷಿ ಮಂತ್ರಶಕ್ತಿಯಿಂದ ತಮ್ಮ ಆಕಾರವನ್ನು ಅತಿ ಸುಂದರ ಪುರುಷನನ್ನಾಗಿ ಪರಿವರ್ತಿಸಿಕೊಂಡು ಬಿಟ್ಟರು.

ಅತಿ ಆಕರ್ಷಕ ಮನ್ಮಥ ಪುರುಷನಾದರು. ಆ ಹೆಣ್ಣುಗಳು ಇವರ ಮುಂದೆ ಬಂದು ನಿಂತಾಗ, ಅವರವರಲ್ಲೇ ಸ್ಪರ್ಧೆ ಮೊದಲಾಗಿತ್ತು. ಈ ಸುಂದರನನ್ನು ಮದುವೆಯಾಗಲು ಎಲ್ಲರೂ ಸಿದ್ಧರಾಗಿ ಬಿಟ್ಟರು. ರಾಜನಿಗೆ ಬೇರೆ ದಾರಿಕಾಣದೆ ತನ್ನ ಐವತ್ತು ರಾಜಕುಮಾರಿಯರನ್ನು ಆ ಕಾಡಿನ ಋಷಿಗೆ ಧಾರೆಯೆರೆದುಬಿಟ್ಟ.

ಸೌಭರಿ ಮುನಿ ತಮ್ಮ ಮಂತ್ರಬಲದಿಂದ ತಮ್ಮಈ ಐವತ್ತು ಹೆಂಡತಿಯರಿಗೆ ಐವತ್ತು ವೈಭವದ ಅರಮನೆಗಳನ್ನು ನಿರ್ಮಿಸಿದರು. ಉಡುಗೆ ತೊಡಗೆ, ಆಳುಕಾಳು, ಉದ್ಯಾನಗಳು, ಸರೋವರ ಹೂದೋಟಗಳು ಅಲ್ಲಿದ್ದವು. ಮೃದುತಲ್ಪ ಸುಖಾಸನ, ಆಭರಣ, ಸ್ನಾನಗೃಹಗಳು, ರುಚಿಕರ  ಆಹಾರ ಎಲ್ಲವೂ ಇದ್ದವು. ಸೌಭರಿಯ ಕಾಮಲಾಲಸೆ ಐವತ್ತು ರೂಪಗಳಲ್ಲಿ ತೃಪ್ತಗೊಳ್ಳತೊಡಗಿತು.

ಇವೆಲ್ಲಕ್ಕೂ ಒಂದು ಕೊನೆಗಾಲ ಬಂದಿತು. ಸಮಸ್ತ ಸೌಖ್ಯವನ್ನೂ ಅನುಭವಿಸಿದ ಸೌಭರಿ ಕೊನೆಗೊಮ್ಮೆ ಅಪೂರ್ಣತೆಯ ಅಶಾಂತಭಾವ ಅನುಭವಿಸುವಂತಾಯಿತು. ಐಹಿಕ ಸಮೃದ್ಧಿ ಅತೃಪ್ತಿ ತಂದಿತು. ಗೃಹಸ್ಥಾಶ್ರಮ ಸಾಕಾಯಿತು. ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಕಾಡಿಗೆ ಹೋಗಬೇಕೆನಿಸಿತು.

ಮೀನುಗಳ ಮೈಥುನ ಕ್ರಿಯೆಯನ್ನು ಹತ್ತಿರದಿಂದ ಕಂಡದ್ದೇ ಈ ಅಧಃಪತನಕ್ಕೆ ಕಾರಣವಾಯಿತು ಎಂದು ಅರ್ಥಮಾಡಿಕೊಂಡರು. ‘ಅಯ್ಯೋ, ಮಡುವಿನ ಆಳದಲ್ಲಿ ತಪಸ್ಸು ಮಾಡುತ್ತಿದ್ದೆ. ಸಾಧುಪುರುಷರು ರೂಢಿಸಿದ್ದ ವಿಧಿ ನಿಯಮಗಳನ್ನು ಪಾಲಿಸಿದ್ದೆ. ಆದರೂ ನನ್ನ ದೀರ್ಘ ತಪಸ್ಸಿನ ಫಲವನ್ನು ಕಳೆದುಕೊಂಡೆ!’ ಎನಿಸಿತವರಿಗೆ.

ಸೂತ ಮುನಿಗಳು ಹೇಳಿದರು.

“ಈ ಸಂದರ್ಭದಲ್ಲಿ ವೇದವ್ಯಾಸರು ಸರ್ವಕಾಲಿಕವಾದ ಒಂದು ಎಚ್ಚರಿಕೆಯ ಬುದ್ಧಿವಾದವನ್ನು ಹೇಳಿದ್ದಾರೆ. ಐಹಿಕ ಬಂಧನದಿಂದ ಮುಕ್ತಿಯನ್ನು ಬಯಸುವವನು ಕಾಮ ಜೀವನದಲ್ಲಿ ಆಸಕ್ತರಾದವರ ಒಡನಾಟವನ್ನು ತ್ಯಜಿಸಬೇಕು. ಇಂದ್ರಿಯಗಳನ್ನು ಬಹಿರ್ಮುಖವಾಗಿ ಪ್ರಚೋದಿಸಬಾರದು. ಸದಾ ನಿರ್ಜನ ಪ್ರದೇಶದಲ್ಲಿ ನೆಲೆಸಬೇಕು.

ಅನಂತನಾದ ದೇವೋತ್ತಮ ಪರಮ ಪುರುಷನ ಪಾದಕಮಲಗಳಲ್ಲಿ ಮನಸ್ಸನ್ನು ಸಂಪೂರ್ಣವಾಗಿ ಸ್ಥಿರಗೊಳಿಸಬೇಕು. ಸಂಗ ಮಾಡಲು ಬಯಸಿದ್ದೇ ಆದಲ್ಲಿ ಸಮಾನ ಮನಸ್ಕರ ಸಂಗ ಮಾಡಬೇಕು. “ಇವತ್ತು ಹೆಂಡತಿಯರು ಒಬ್ಬೊಬ್ಬರಿಗೆ ನೂರು ನೂರು ಮಕ್ಕಳು, ಹೀಗೆ ಐಹಿಕ ತ್ರಿಗುಣಗಳ ಪ್ರಭಾವದಿಂದ ನಾನು ಪತಿತನಾದೆ.

ಈ ಜನ್ಮದಲ್ಲೂ ಮುಂದಿನ ಜನ್ಮದಲ್ಲೂ ನನ್ನ ಪ್ರಾಪಂಚಿಕ ಅನುಭೋಗದ ಬಯಕೆಗೆ ಕೊನೆಯೇ ಇಲ್ಲವಾಯಿತು!” ಎಂದೆಲ್ಲ ಸೌಭರಿ ಮುನಿ ಪಶ್ಚಾತ್ತಾಪ ಪಡುವಂತಾಯಿತು. ಆತ್ಮವನ್ನು ಅರಿತ ಈ ಮುನಿ ಅನಂತರ ಕಾಡಿಗೆ ಹೋಗಿ ಘೋರ ತಪಸ್ಸು ಮಾಡಿ ಅಲ್ಲಿಯೆ ಅಗ್ನಿಗೆ ಆಹುತಿಯಾದರು. ಪತಿವ್ರತೆಯರಾಗಿದ್ದ ಅವರ ಐವತ್ತು ಹೆಂಡತಿಯರೂ ಪತಿಯ ದಾರಿಯನ್ನು ಹಿಂಬಾಲಿಸಿದರು. ಮುನಿಗಳೇ, ಬೆಂಕಿಯೇ ಆರಿದಾಗ ಜ್ವಾಲೆಗಳು ಎಲ್ಲಿರುತ್ತವೆ? ಆ ಋಷಿಯೊಂದಿಗೆ ಆ ಹೆಂಡತಿಯರೂ ಇಲ್ಲವಾದರು.!’

ನೈಮಿಷಾರಣ್ಯದಲ್ಲಿ ಕೆಲ ಕ್ಷಣ ಮೌನ ಆವರಿಸಿಕೊಂಡಿತು. ಮಹಾತಪಸ್ವಿಯೊಬ್ಬರು ಹೇಗೆ ಐಹಿಕ ಸುಖಭೋಗಗಳ ಆಮಿಷದಿಂದ ಅಧಃಪತನಕ್ಕಿಳಿಯಬಹುದು ಎನ್ನುವುದನ್ನು ಸೌಭರಿ ಮುನಿಯ ಕಥೆಯ ಮೂಲಕ ಕೇಳಿದ ಮೇಲೆ ಅಲ್ಲಿ ನೆರದಿದ್ದ ಮುನಿಗಳೆಲ್ಲರೂ ಆಲೋಚನ ಪರರಾದರು, ಬದುಕಿನ ಒಂದು ತಪ್ಪು ಹೆಜ್ಜೆ ಏನೇನು ಮಾಡಬಹುದೆಂಬ ಕಟು ಸತ್ಯ ಅವರನ್ನು ದಿಗ್ಮೂಢರನ್ನಾಗಿಸಿತ್ತು.

ಸೂತ ಮುನಿಗಳು ಹೇಳಿದರು : “ದೇವೋತ್ತಮ ಪರಮ ಪುರುಷನ ಮೇಲೆ ದೃಷ್ಟಿ ಇಟ್ಟವರು ಮನಸ್ಸನ್ನು ಅತ್ತಿತ್ತ ಸರಿಸಬಾರದು. ಹಾಗೆ ಮಾಡಿದಾಗ ಕಳೆದುಕೊಳ್ಳುವುದು ಬಹಳ ದೊಡ್ಡದಾಗಿರುತ್ತದೆ!”

ಅನಂತರ ಅವರು ಭಾಗವತ ಕಥೆ ಮುಂದುವರಿಸಿದರು-

ಸೌಭರಿಗೆ ಐವತ್ತು ಹೆಣ್ಣು ಮಕ್ಕಳನ್ನು ಧಾರೆಯೆರೆದುಕೊಟ್ಟ ಮಾಂಧಾತ ಮಹಾರಾಜನ ಮೂವರು ಗಂಡು ಮಕ್ಕಳಲ್ಲಿ ಅಂಬರೀಷನೇ ಬಹಳ ಪ್ರಖ್ಯಾತನಾದವನು. ಇನ್ನೊಬ್ಬ ಮಗ ಪುರುಕುತ್ಸನಿಗೆ ಸರ್ಪಸೋದರರು ತಮ್ಮ ಸೋದರಿಯನ್ನು ನೀಡಿ ಅವರನ್ನು ರಸತಾಲಕ್ಕೆ ಕಳುಹಿಸಿಕೊಟ್ಟರು. ಇಲ್ಲಿ ಅವನು ಸರ್ಪಗಳಿಂದಲೂ ವರವನ್ನು ಪಡೆದನು.

ಇವನ ಮಗ ತ್ರಸದ್ದಸ್ಯು. ಅವನ ಮಗ ಅನರಣ್ಯ. ಇವನ ಮಗ ಹರ್ಯಶ್ವ, ಇವನ ಮಗ ಪ್ರಾರುಣ. ಇವನ ಮಗ ತ್ರಿಬಂಧನ. ಈ ತ್ರಿಬಂಧನನ ಮಗನೇ ತ್ರಿಶಂಕು ಎಂದು ಕುಪ್ರಸಿದ್ದನಾದ, ಕೀರ್ತಿ ಸ್ಥಾನಮಾನಗಳನ್ನು ಗಳಿಸಿದ ಸತ್ಯವ್ರತ. ಇವನು ತಂದೆಯಿಂದಲೇ ಶಾಪಗ್ರಹಸ್ಥನಾಗಿ, ತಾನು ಹೇಗಾದರೂ ಸ್ವರ್ಗಕ್ಕೆ ಹೋಗಲೇಬೇಕೆಂದು ವಿಶ್ವಾಮಿತ್ರ ಋಷಿಗಳ ಬಳಿಗೆ ಬಂದು ಕೇಳಿದ: ‘ಮಹಾತಪಸ್ವಿ, ನನ್ನ ತಂದೆ ನನಗೆ ಚಂಡಾಲನಾಗು ಎಂದು ಶಪಿಸಿಬಿಟ್ಟಿದ್ದಾನೆ.

ಈ ಕಾರಣಕ್ಕಾಗಿ ನಾನು ಸ್ವರ್ಗಕ್ಕೆ ಅರ್ಹನಾಗುವುದಿಲ್ಲ, ಆದರೆ, ನಿಮ್ಮ ತಪಸ್ಸಿನ ಪ್ರಭಾವದಿಂದ ನನ್ನನ್ನು ಸ್ವರ್ಗಕ್ಕೆ ಕಳುಹಿಸಬೇಕೆಂದು ಪ್ರಾರ್ಥಿಸುತ್ತೇನೆ. ಇದಕ್ಕಾಗಿ ನೀವು ಹೇಳುವ ಯಾಗವನ್ನು ಮಾಡುತ್ತೇನೆ! ಎಂದು ಹೇಳಿದ. ವಿಶ್ವಾಮಿತ್ರರು ಒಪ್ಪಿಯಾಗ ಮಾಡಿ, ತಮ್ಮ ಶಕ್ತಿಯಿಂದ ಅವನನ್ನು ಸ್ವರ್ಗದ ದಾರಿಯಲ್ಲಿ ಕಳುಹಿಸಿದರು.

ಆದರೆ ದೇವತೆಗಳು ಅವನನ್ನು ಸ್ವರ್ಗದೊಳಗೆ ಬಿಡದೆ ತಳ್ಳಿಬಿಟ್ಟರು. ಮುಖ ಕೆಳಗೆ ಮಾಡಿಕೊಳ್ಳುತ್ತ ಬೀಳುತ್ತಿದ್ದ ಅವನನ್ನು ನೋಡಿ ವಿಶ್ವಾಮಿತ್ರರು ‘ಬೀಳಬೇಡ, ಅಲ್ಲಿಯೇ ನಿಲ್ಲು!’ ಎಂದರು. ಅವನು ತಲೆಕೆಳಗಾಗಿ ಹಾಗೆಯೇ ನಿಂತ. ವಿಶ್ವಾಮಿತ್ರರು ಅವನಿಗಾಗಿ ಅಲ್ಲಿಯೇ ಒಂದು ಸ್ವರ್ಗಲೋಕವನ್ನು ಸೃಷ್ಟಿಸಿದರು. ಅದಕ್ಕೆ ತ್ರಿಶಂಕು ಸ್ವರ್ಗ ಎಂದೇ ಹೆಸರಾಯಿತು.

ಈ ತ್ರಿಶಂಕುವಿನ ಮಗನೇ ರಾಜಾ ಹರಿಶ್ಚಂದ್ರ, ಮಹಾ ಪರಾಕ್ರಮಶಾಲಿ, ಮಹಾಸತ್ಯವಂತ. ವಿಶ್ವಾಮಿತ್ರ-ವಸಿಷ್ಟರ ತಿಕ್ಕಾಟದಲ್ಲಿ ಇವನನ್ನು ಘೋರ ಪರೀಕ್ಷೆಗೊಡ್ಡಿದ್ದರು. ಹರಿಶ್ಚಂದ್ರನಿಗೆ ಮಕ್ಕಳಿರಲಿಲ್ಲ. ಬಹಳ ಚಿಂತಿತನಾಗಿದ್ದ ಆಗೊಮ್ಮೆ ನಾರದರು ಬ೦ದು, ‘ಹರಿಶ್ಚಂದ್ರ, ನಿನಗೆ ಪುತ್ರಪ್ರಾಪ್ತಿಯಾಗಬೇಕಾದರೆ ವರುಣದೇವರ ಮೊರೆ ಹೋಗು’ ಎಂದರು.

ಅದರಂತೆ ಹರಿಶ್ಚಂದ್ರ ವರುಣದೇವನನ್ನು ಕುರಿತು ಪ್ರಾರ್ಥಿಸಿದ. ವರುಣನ ದರ್ಶನವಾದಾಗ, “ದೇವರೇ, ನನಗೆ ಮಗನಿಲ್ಲ, ನನಗೊಬ್ಬ ಮಗನನ್ನು ಕರುಣಿಸುತ್ತೀಯಾ?” ಎಂದದ್ದಷ್ಟೇ ಅಲ್ಲ, ಪ್ರಭೂ ನನಗೊಬ್ಬ ಮಗನನ್ನು ನೀಡಿದರೆ, ಅವನನ್ನು ನಿನ್ನ ತೃಪ್ತಿಗೋಸ್ಕರ ಯಜ್ಞಕ್ಕೆ ಅರ್ಪಿಸಿ ಬಿಡುತ್ತೇನೆ!” ಎಂದೂ ಹೇಳಿಬಿಟ್ಟ.

ಹರಿಶ್ಚಂದ್ರನಿಗೆ ವರುಣಾನುಗ್ರಹದಿಂದ ಪುತ್ರ ಸಂತಾನವಾಯಿತು. ರೋಹಿತ ಎನ್ನುವ ಹೆಸರನ್ನಿಟ್ಟ. ಪುತ್ರ ಸಂತಾನವಾದ ಕೂಡಲೇ ವರುಣ ಬಂದು ಹರಿಶ್ಚಂದ್ರನನ್ನು ಕೇಳಿದ: ‘ಮಗ ಹುಟ್ಟಿದನಲ್ಲ ಯಜ್ಞ ಮಾಡು, ನನಗರ್ಪಿಸು!’ ಎಂದ. ‘ಹತ್ತು ದಿನ ಕಳೆಯಲಿ, ಅನಂತರ ಯಜ್ಞ ಪ್ರಾರಂಭಿಸುತ್ತೇನೆ’ ಎಂದ ಹರಿಶ್ಚಂದ್ರ.

ಹತ್ತು ದಿನ ಕಳೆದ ಮೇಲೆ ವರುಣ ಮತ್ತೆ ಬಂದು ಕೇಳಿದ. “ಬಲಿಪಶುವಾದ ನನ್ನ ಮಗನಿಗೆ ಹಲ್ಲು ಹುಟ್ಟಿದಾಗ ಅದು ಯಜ್ಞಕ್ಕೆ ತಕ್ಕಷ್ಟು ಪವಿತ್ರವಾಗುತ್ತದೆ!’ ಎಂದ ಹರಿಶ್ಚಂದ್ರ. ಹಲ್ಲುಗಳು ಹುಟ್ಟಿದ್ದೂ ಆಯಿತು. ವರುಣ ಮತ್ತೆ ಪ್ರತ್ಯಕ್ಷನಾದಾಗ, ‘ಮಗುವಿನ ಹಲ್ಲುಗಳೆಲ್ಲ ಬಿದ್ದು ಹೋದಾಗ ಅದು ಯಜ್ಞಕ್ಕೆ ತಕ್ಕದ್ದಾಗುತ್ತದೆ!.” ಎಂದುತ್ತರ ಬಂದಿತು.

ಹಾಲು ದಂತಗಳೆಲ್ಲ ಬಿದ್ದ ಮೇಲೆ ವರುಣ ಮತ್ತೆ ಬಂದ. ‘ಹಲ್ಲುಗಳು ಬಿದ್ದಾಯಿತಲ್ಲ ಯಜ್ಞ ಮಾಡು’ – ಎಂದ. ಆಗ ಹರಿಶ್ಚಂದ್ರ ಹೇಳಿದ: ‘ಪಶುವಿನ ಹಲ್ಲು ಮತ್ತೆ ಹುಟ್ಟಿದಾಗ ಅದು ಯಜ್ಞಕ್ಕೆ ತಕ್ಕಷ್ಟು ಪವಿತ್ರವಾಗುತ್ತದೆ.!’

ರೋಹಿತ ರಾಜಕುಮಾರನಿಗೆ ಮತ್ತೆ ಹಲ್ಲುಗಳು ಹುಟ್ಟಿದವು. ವರುಣ ಕಾಣಿಸಿಕೊಂಡ ‘ಪ್ರಭುವೇ, ಯಜ್ಞಪಶುವು ಕ್ಷತ್ರಿಯನಾಗಿ, ವೈರಿಗಳೊಂದಿಗೆ ಕಾದಾಡಲು ಸ್ವಯಂ ಶಸ್ತ್ರ ಸನ್ನದ್ಧನಾದಾಗ ಪವಿತ್ರವಾಗುವುದು!’ ಎಂದ ಹರಿಶ್ಚಂದ್ರ.

ಅಷ್ಟು ಸಮಯದಲ್ಲಿ ಹರಿಶ್ಚಂದ್ರನಿಗೆ ಅಪಾರವಾದ ಪುತ್ರವ್ಯಾಮೋಹ ಹುಟ್ಟಿಬಿಟ್ಟಿತ್ತು. ಪುತ್ರವಾತ್ಸಲ್ಯವನ್ನು ಹತ್ತಿಕ್ಕಲಾರದೆ ದಿನಗಳನ್ನು ಮುಂದುಡುತ್ತ ಬಂದ. ವರುಣ  ಕಾಯುತ್ತಲೇ ಇದ್ದ.

ದೊಡ್ಡ ಬಾಲಕನಾಗಿ ಬೆಳೆದ ಮೇಲೆ ರೋಹಿತನಿಗೆ ಎಲ್ಲವೂ ಅರ್ಥವಾಗಿ ಹೋಗಿತ್ತು. ತನ್ನ ತಂದೆ ತನ್ನನ್ನು ಯಜ್ಞಪಶು ಮಾಡಲಿದ್ದಾನೆ ಎಂದೂ ತಿಳಿದುಹೋಯಿತು. ಅದರಿಂದ ಪಾರಾಗಲಿಕ್ಕಾಗಿ ಬಿಲ್ಲುಬಾಣ ಹಿಡಿದು ಕಾಡಿಗೆ ನಡೆದು ಬಿಟ್ಟ.

ಮುಂದೊಮ್ಮೆ ಅವನಿಗೆ ಹೃದಯ ವಿದ್ರಾವಕ ಸುದ್ದಿಯೊಂದು ಬಂದು ತಲುಪಿತು. ತಂದೆ ಹರಿಶ್ಚಂದ್ರ ಜಲೋದರ ರೋಗಕ್ಕೆ ತುತ್ತಾಗಿದ್ದಾನೆ ಎನ್ನುವುದು ತಿಳಿಯಿತು. ತಂದೆಯನ್ನು ನೋಡಲು ಹೊರಟು ನಿಂತ ಅವನನ್ನು ದೇವೇಂದ್ರ ತಡೆದು ನಿಲ್ಲಿಸಿದ. “ನಾನಾ ತೀರ್ಥಕ್ಷೇತ್ರಗಳನ್ನು, ಪವಿತ್ರ ಪ್ರದೇಶಗಳನ್ನೂ ಸಂಚರಿಸಿಕೊಂಡು ಬಾ, ಆಗ ಪುಣ್ಯ ಸಂಗ್ರಹವಾಗಿ ನಿಮ್ಮ ತಂದೆಗೆ ಒಳ್ಳೆಯದಾಗುತ್ತದೆ ಎಂದು ಹೇಳಿದ. ರೋಹಿತ ಒಂದು ವರ್ಷ ಸುತ್ತಾಡಿ ಕಳೆದ. ಹೀಗೆ ಎರಡು ಮೂರು, ನಾಲ್ಕು ಐದು ವರ್ಷಗಳು ಇಂದ್ರನ ಮಾತಿನಂತೆ ಹೋಗದೆ ತಡೆದ.

ಐದನೆಯ ವರ್ಷದ ಕೊನೆಯಲ್ಲಿ “ಈ ಸಲ ಹೊರಟೇ ಬಿಡುತ್ತೇನೆ!” ಎಂದು ಹೊರಟಾಗಲೂ ದೇವೇಂದ್ರ ಮತ್ತೆ ಬಂದು ತಡೆದು ನಿಲ್ಲಿಸಿದ. ಆರನೆಯ ವರ್ಷ ಅವನಿಗೆ ತಡೆಯಲಾಗಲಿಲ್ಲ. ಇಂದ್ರನ ಮಾತನ್ನೂ ಕೇಳದೆ ಹೊರಟು ತಂದೆಯ ರಾಜಧಾನಿಗೆ ಹಿಂತಿರುಗಿದ. ಆದರೆ, ಒಂದು ಜಾಣತನದ ಮುನ್ನೆಚ್ಚರಿಕೆಯ ಕೆಲಸ ಮಾಡಿದ್ದ.

ತಂದೆಯ ಯಜ್ಞಕ್ಕೆ ಪಶುವಾಗಿ ಬಳಸಲು ಶುನಶ್ಯೇಪ ಎನ್ನುವನೊಬ್ಬ ಹುಡುಗನನ್ನೂ ಕೊಂಡು ತಂದಿದ್ದ.  ಹರಿಶ್ಚಂದ್ರನ ಪುರುಷಮೇಧ ಮಹಾಯಜ್ಞ ಸಾಂಗವಾಗಿ ನೆರವೇರಿತು. ದೇವತೆಗಳೂ ಸಂತುಷ್ಟರಾದರು. ದೇವತೆಗಳಿಂದ ಉಂಟಾದ ಮಹೋದರ ರೋಗವೂ ಗುಣವಾಯಿತು. ಯಾಗದಿಂದ ಪ್ರಸನ್ನನಾದ ದೇವೇಂದ್ರ ಒಂದು ಚಿನ್ನದ ತೇರನ್ನು ಹರಿಶ್ಚಂದ್ರನಿಗೆ ಉಡುಗೊರೆಯಾಗಿ ನೀಡಿದ.

ವಿಶ್ವಾಮಿತ್ರಾದಿ ಋಷಿಗಳೆಲ್ಲರಿಗೂ ಹರಿಶ್ಚಂದ್ರನ ಸತ್ಯಪರತೆ, ತಾಳ್ಮೆ,  ಸಾರಗ್ರಹಣ ಚೆನ್ನಾಗಿ ತಿಳಿಯಿತು. ಹರಿಶ್ಚಂದ್ರನಿಗೆ ಅಪಾರ ಜ್ಞಾನವನ್ನು ಕರುಣಿಸಲಾಯಿತು.

ಸೂತ ಮುನಿಗಳು ಹೇಳಿದರು –

“ಹರಿಶ್ಚಂದ್ರ ಮಹಾರಾಜನ ಮನಸ್ಸು ಐಹಿಕ ಅನುಭೋಗದಿಂದ ತುಂಬಿತು; ಅದನ್ನು ಪೃಥ್ವಿಯಲ್ಲಿ ಲೀನಗೊಳಿಸಿ ಮೊದಲು ಶುಚಿ ಮಾಡಿದನು. ಅನಂತರ ಪೃಥ್ವಿಯನ್ನು ಜಲದಲ್ಲೂ,  ಜಲವನ್ನು ತೇಜಸ್ಸಿನಲ್ಲೂ, ತೇಜಸ್ಸನ್ನು ವಾಯುವಿನಲ್ಲೂ ವಾಯುವನ್ನು ಆಕಾಶದಲ್ಲೂ ಲೀನಗೊಳಿಸಿದನು.

ಆ ಬಳಿಕ ಆಕಾಶವನ್ನು ಮಹತ್ ತತ್ವದಲ್ಲೂ, ಮಹತ್-ತತ್ವವನ್ನು ಆಧ್ಯಾತ್ಮಿಕ ಜ್ಞಾನದಲ್ಲೂ ಲೀನಗೊಳಿಸಿದನು. ತಾನು ದೇವೋತ್ತಮ ಪರಮ ಪುರುಷನಾದ ಕೃಷ್ಣನ ಅಂಶವೆಂದು ಸಾಕ್ಷಾತ್ಕಾರ ಪಡೆದುಕೊಳ್ಳುವುದೇ ಈ ಆಧ್ಯಾತ್ಮಿಕ ಜ್ಞಾನ. ಆತ್ಮ ಸಾಕ್ಷಾತ್ಕಾರ ಪಡೆದ ಆಧ್ಯಾತ್ಮಿಕ ‘ಚೇತನನು ಭಗವಂತನ ಸೇವೆಯಲ್ಲಿ ನಿರತನಾದಾಗ, ಶಾಶ್ವತವಾಗಿ ಅಗ್ರಾಹ್ಯರೂ, ಅಂಚಿತ್ಯನೂ ಆಗುತ್ತಾನೆ. ಹೀಗೆ ಆಧ್ಯಾತ್ಮಿಕ ಜ್ಞಾನದಲ್ಲಿ ನೆಲೆಸಿ, ಆತನು ಐಹಿಕ ಬಂಧನದಿಂದ ಸಂಪೂರ್ಣವಾಗಿ ಮುಕ್ತನಾಗುತ್ತಾನೆ.

ವ್ಯಾಸದರ್ಶನವೇ ತಮಗಾದಂತೆ ನೈಮಿಷಾರಣ್ಯದ ಮುನಿಗಳೆಲ್ಲ ಭಕ್ತಿ-ಗೌರವಗಳಿಂದ ಸೂತ ಮುನಿಗಳನ್ನು ನೋಡುತ್ತ ಕುಳಿತರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi