(ಚಿತ್ರಕೇತುವಿನ ಕಥೆ)
ಆಧಾರ: ಭಾಗವತದ ಕಥೆಗಳು 6ನೇ ಸ್ಕಂಧ, ಅಧ್ಯಾಯ 14-17
ತ್ವಷ್ಟೃವಿನ ಪುತ್ರ ವೃತ್ರಾಸುರ ರಕ್ಕಸನಾಗಿದ್ದರೂ ವಿಷ್ಣುಭಕ್ತಿ ಪ್ರದರ್ಶಿಸಿದ್ದು ಹೇಗೆ? ಇದಕ್ಕೊಂದು ಹಿನ್ನೆಲೆಯಿತ್ತು. ಪೂರ್ವಜನ್ಮದಲ್ಲಿ ವೃತ್ರ, ಮಹಾ ವಿಷ್ಣುಭಕ್ತ ಚಿತ್ರಕೇತು ಮಹಾರಾಜನಾಗಿ ಜೀವಿಸಿದ್ದ. ಶಿವಾನಿ ಪಾರ್ವತೀದೇವಿಯ ಕೋಪಕ್ಕೆ ತುತ್ತಾಗಿ, ಶಪಿಸಲ್ಪಟ್ಟು ಅಸುರನಾಗಿ ಜನಿಸಿದ್ದ. ಅಂತಹ ಚಿತ್ರಕೇತು ಮಹಾರಾಜನ ಕಥೆ ಇದು.
“ಮಹಾರಾಜ!” ಅಂಗಿರಸರು ಹೇಳಿದರು, “ಶೋಕದಿಂದ ನಿನ್ನ ಮನಸ್ಸು ಮಂಕಾಗಿದೆ! ನನ್ನ ಗುರುತು ಸಿಗಲಿಲ್ಲವೇ?! ನಾನು ಅಂಗಿರಸ! ಪುತ್ರಕಾಮದಿಂದ ಕೂಡಿದ್ದ ನಿನ್ನ ಬಳಿ ಅಂದು ನಾನು ಬಂದು ಯಜ್ಞ ಮಾಡಿಸಲಿಲ್ಲವೇ? ಇನ್ನು ಇವರು, ಬ್ರಹ್ಮಮಾನಸಪುತ್ರರಾದ ನಾರದರು! ಏಳು ರಾಜ, ಶೋಕವನ್ನು ಬಿಡು! ನಿನ್ನ ಸಂತಾನರಾಹಿತ್ಯ ವಿಧಿಸಂಕಲ್ಪವೇ ಆಗಿದೆ. ಅದನ್ನು ಮೀರಲಾಗದು! ಆದ್ದರಿಂದಲೇ ಅಂದು ನಾನು ಹರ್ಷ, ಶೋಕಗಳೆರಡನ್ನೂ ತರುವ ಪುತ್ರನು ಜನಿಸುತ್ತಾನೆಂದು ಹೇಳಿದ್ದೆ. ಎಲೈ ರಾಜ, ನೀನು ಭಗವಂತನ ಭಕ್ತನಾಗಿರುವೆ! ನಿನ್ನಂಥವನು ಈ ರೀತಿ ಶೋಕಿಸುತ್ತಾ ಅಜ್ಞಾನಾಂಧಕಾರದಲ್ಲಿ ಮುಳುಗಬಾರದು! ನಿನ್ನನ್ನು ಅನುಗ್ರಹಿಸಲೆಂದೇ ನಾವಿಬ್ಬರೂ ಬಂದಿದ್ದೇವೆ. ಅಂದೇ ನಾನು ನಿನಗೆ ಜ್ಞಾನೋಪದೇಶ ಮಾಡಬೇಕೆಂದಿದ್ದೆ! ಆದರೆ ಪುತ್ರಕಾಮನೆಯಿಂದ ನಿನ್ನ ಮನಸ್ಸು ಚಿಂತೆಗೊಳಗಾಗಿದ್ದುದರಿಂದ ನಾನು ನಿನಗೆ ಪುತ್ರನನ್ನೇ ನೀಡಿದೆ. ಮಹಾರಾಜ, ಈಗ ನೀನು ಪುತ್ರವಂತರ ಶೋಕ ಏನೆಂದು ಅರಿಯುತ್ತಿರುವೆ! ಇದೇ ರೀತಿಯೇ ಪತ್ನಿ, ಮನೆ, ಐಶ್ವರ್ಯ, ವಿವಿಧ ವಿಷಯ ಸುಖಗಳು, ರಾಜ್ಯ, ಬಲ, ಕೋಶಗಳು, ಸೇವಕರು, ಅಮಾತ್ಯರು, ಸ್ನೇಹಿತರು, ಈ ಎಲ್ಲವೂ ಅಶಾಶ್ವತವಾಗಿದ್ದು ಒಂದೊಂದು ರೀತಿಯಲ್ಲಿ ಶೋಕವುಂಟುಮಾಡುತ್ತವೆ. ಇವೆಲ್ಲಾ ಆಕಾಶದಲ್ಲಿ ಮೋಡಗಳ ಸಮೂಹದಿಂದ ಉಂಟಾಗುವ ಗಂಧರ್ವ ನಗರದಂತೆ, ಸ್ವಪ್ನಗಳಂತೆ, ಮನಸ್ಸಿನ ಕಲ್ಪನೆಗಳಂತೆ; ಇರುವಂತೆ ಕಂಡರೂ ಕಾಲಾಂತರದಲ್ಲಿ ಇಲ್ಲವಾಗುತ್ತವೆ! ಒಬ್ಬನು ಕನಸಿನಲ್ಲಿ ಹುಲಿ, ಹಾವು, ಇವುಗಳೆಲ್ಲವನ್ನೂ ಕಂಡರೂ, ಅವು ವಾಸ್ತವವಾಗಿರದೇ ಬರಿಯ ಮನಸ್ಸಿನ ಕಲ್ಪನೆಗಳಾಗಿರುತ್ತವೆ. ಕನಸು ಮುರಿದ ಬಳಿಕ ಅವು ಕಾಣುವುದಿಲ್ಲ. ಅಂತೆಯೇ, ಈ ಭೌತಿಕ ಪ್ರಪಂಚದಲ್ಲಿ ಕಾಣುವ ವಿವಿಧ ವಿಷಯಗಳು ಮನಸ್ಸಿನಿಂದ ಉಂಟಾದ ಪೂರ್ವ ಕರ್ಮಗಳಿಗನುಗುಣವಾಗಿ ಕಾಣುತ್ತವೆ ಮತ್ತು ಮರೆಯಾಗುತ್ತವೆ! ದೇಹಸ್ಥವಾಗಿರುವ ಆತ್ಮನು ವಾಸ್ತವವಾಗಿ ಇದಾವುದಕ್ಕೂ ಸಂಬಂಧಿಸಿರದೇ ಶುದ್ಧನಾಗಿರುತ್ತಾನೆ. ಆದರೆ ದೇಹದ ಇಂದ್ರಿಯಗಳ ಮತ್ತು ಮನಸ್ಸಿನ ಸಂಗದಿಂದ ವಿವಿಧ ಸಂತಾಪಗಳನ್ನು ಅನುಭವಿಸುತ್ತಾನೆ. ಆದ್ದರಿಂದ ರಾಜಾ, ಸ್ವಸ್ಥಮನಸ್ಕನಾಗಿ ವಿಚಾರಮಾಡು; ಆತ್ಮದ ನಿಜಸ್ಥಿತಿಯನ್ನು ಅರಿತುಕೋ! ಆಗ ಈ ದ್ವಂದ್ವಗಳು ಮತ್ತು ವಿಷಯಗಳ ಸಂಗ ದೂರವಾಗಿ ಶಾಂತಿಯು ಲಭಿಸುತ್ತದೆ.”
ರಾಜನಿಗೆ ಈಗ ಆ ಮಹಾಮುನಿಗಳು ಯಾರೆಂದು ಅರಿವಾಗಿ ಅವರ ಪಾದಗಳಿಗೆ ಪ್ರಣಾಮ ಮಾಡಿದನು; ಅಳುವುದನ್ನು ನಿಲ್ಲಿಸಿದನು. ಆದರೂ ಮಗನ ಮೃತದೇಹವನ್ನು ಪುನಃ ನೋಡಿ ವಿಷಣ್ಣನಾಗಿ ತಲೆಬಾಗಿಸಿ ಕುಳಿತನು.
* * *
ಅಂಗಿರಸರು ಚಿತ್ರಕೇತುವಿಗೆ ಜ್ಞಾನೋಪದೇಶ ಮಾಡಿ ಅವನನ್ನು ಸಮಾಧಾನ ಪಡಿಸಲೆತ್ನಿಸಿದರೂ ಅವನು ಶೋಕಪೂರಿತನಾಗಿಯೇ ಕುಳಿತದ್ದನ್ನು ಕಂಡ ನಾರದರು ಬೇರೊಂದು ರೀತಿಯ ಉಪಾಯದಿಂದ ಅವನಿಗೆ ಜ್ಞಾನೋದಯ ಮಾಡಿಸಲೆತ್ನಿಸಿದರು. ಅವರು ತಮ್ಮ ಯೋಗಶಕ್ತಿಯಿಂದ ಬಾಲಕನ ಮೃತದೇಹವನ್ನು ಆ ಜೀವಾತ್ಮನು ಪುನಃ ಪ್ರವೇಶಿಸುವಂತೆ ಮಾಡಿದರು! ಬಾಲಕನು ಪುನಃ ಎದ್ದು ಕೂರಲು, ಚಿತ್ರಕೇತುವು ಸೇರಿದಂತೆ ಎಲ್ಲರೂ ಆಶ್ಚರ್ಯದಿಂದ ಸ್ತಂಭೀಭೂತರಾದರು! ಆಗ ನಾರದರು ಆ ಜೀವಾತ್ಮನನ್ನು ಉದ್ದೇಶಿಸಿ ಹೇಳಿದರು, “ಎಲೈ ಜೀವಾತ್ಮ! ನಿನಗೆ ಮಂಗಳವಾಗಲಿ! ನಿನ್ನ ತಾಯ್ತಂದೆಯರನ್ನು ನೋಡು! ಅವರೂ ನಿನ್ನ ಬಂಧುಬಾಂಧವರೆಲ್ಲರೂ ನೀನು ಹೋಗಿಬಿಟ್ಟೆ ಎಂದು ಶೋಕಾವಿಷ್ಟರಾಗಿ ಅಳುತ್ತಿದ್ದಾರೆ! ನೀನು ಅಕಾಲದಲ್ಲಿ ಮೃತ್ಯು ಹೊಂದಿದೆಯಾದ್ದರಿಂದ ಇನ್ನೂ ನಿನ್ನ ಆಯುಷ್ಯ ಉಳಿದಿದೆ. ಈಗ ಈ ದೇಹದಲ್ಲಿದ್ದು ಅದನ್ನು ಅನುಭವಿಸು! ಬಂಧು ಬಾಂಧವರಿಂದ ಸುತ್ತುವರಿಯಲ್ಪಟ್ಟು ನಿನ್ನ ತಂದೆಯು ನೀಡುವ ರಾಜ್ಯವನ್ನು ಅನುಭವಿಸು!”

ಬಾಲಕನ ದೇಹದಲ್ಲಿದ್ದ ಜೀವಾತ್ಮವು ದೇಹದ ಮೂಲಕವೇ ಹೇಳಿತು, “ಇವರು ನನ್ನ ತಾಯ್ತಂದೆಯರೇ?! ಯಾವ ಜನ್ಮದಲ್ಲಿ? ನನ್ನ ಕರ್ಮಗಳಿಗನುಸಾರವಾಗಿ, ದೇವತೆಗಳ, ಮಾನವರ, ಮತ್ತು ಕೆಲವೊಮ್ಮೆ ಸಸ್ಯಗಳ ಮತ್ತು ಪ್ರಾಣಿಗಳ ಯೋನಿಗಳನ್ನು ಪ್ರವೇಶಿಸಿ ವಿವಿಧ ಜನ್ಮಗಳನ್ನೆತ್ತುತ್ತಿರುತ್ತೇನೆ! ಹೀಗಿರುವಾಗ ಇವರಿಬ್ಬರನ್ನೂ ನನ್ನ ಯಾವ ಜನ್ಮದ ಮಾತಾಪಿತೃಗಳೆಂದು ಪರಿಗಣಿಸಲಿ? ನದಿಯಂತಹ ಈ ಪ್ರಪಂಚದಲ್ಲಿ ಜೀವಿಗಳು, ವಿವಿಧ ರೀತಿಗಳಲ್ಲಿ ಒಬ್ಬರಿಗೊಬ್ಬರು ಸಂಬಂಧಿಸಿರುತ್ತಾರೆ. ಕೆಲವರು ಮಿತ್ರರಾಗುತ್ತಾರೆ; ಕೆಲವರು ಬಂಧುಗಳಾಗುತ್ತಾರೆ; ಕೆಲವರು ಶತ್ರುಗಳಾಗುತ್ತಾರೆ; ಇನ್ನು ಕೆಲವರು ಯಾವುದೇ ಭಾವನೆಗಳಿಲ್ಲದೇ ಉದಾಸೀನರಾಗುತ್ತಾರೆ. ಆದರೆ ಕ್ರಮೇಣ ಯಾವ ಸಂಬಂಧಗಳೂ ಶಾಶ್ವತ ಉಳಿಯುವುದಿಲ್ಲ! ಚಿನ್ನವೇ ಮೊದಲಾದ ವಸ್ತುಗಳು, ಕೊಳ್ಳುವ ಮತ್ತು ಮಾರುವ ನೆಪದಿಂದ ಒಬ್ಬರ ಬಳಿಯಿಂದ ಇನ್ನೊಬ್ಬರ ಬಳಿಗೆ ಹೋಗುತ್ತಿರುತ್ತವೆಯಲ್ಲವೇ? ಅಂತೆಯೇ ಜೀವಾತ್ಮನೂ ತನ್ನ ಕರ್ಮಗಳ ಫಲದಿಂದ ಒಂದು ಯೋನಿಯಿಂದ ಇನ್ನೊಂದು ಯೋನಿಗೆ ಸುತ್ತುತ್ತಿರುತ್ತಾನೆ! ಈ ಜೀವನದಲ್ಲಿ ನಾವು ಕಂಡಿರುವಂತೆಯೇ ಪ್ರಾಣಿಗಳೇ ಮೊದಲಾಗಿ ಅನೇಕ ವಸ್ತುಗಳು ಒಬ್ಬನ ಬಳಿಯಿದ್ದಾಗ, ಅವನು ಅವನ್ನು ಶಾಶ್ವತವೆಂದೇ ಭಾವಿಸಿರುತ್ತಾನೆ. ಆದರೆ ಅವು ಇನ್ನೊಬ್ಬನ ಕೈ ಸೇರತ್ತಲೇ, ಮೊದಲನೆಯವನ ಪಾಲಿಗೆ ಅಶಾಶ್ವತವಾಗಿ ಕಾಣುತ್ತವೆ. ಎಲ್ಲಿಯವರೆಗೆ ವಸ್ತುಗಳ ಸಂಬಂಧಗಳು ಉಳಿದಿರುತ್ತವೆಯೋ, ಅಲ್ಲಿಯವರೆಗೆ ಮಮಕಾರವಿರುತ್ತದೆ; ಅವು ವ್ಯಕ್ತಿಯ ಬಳಿ ಇಲ್ಲದಾಗ ಆ ಮಮಕಾರ ಹೊರಟುಹೋಗುತ್ತದೆ. ಅಂತೆಯೇ, ಒಂದು ಯೋನಿಯನ್ನು ಪ್ರವೇಶಿಸುವ ಜೀವವು ದೇಹ ತಾಳಿ ಹುಟ್ಟುತ್ತದೆ; ನಿಜವಾಗಿ ದೇಹಕ್ಕೆ ಸಂಬಂಧಿಸಿಲ್ಲದ ಅದು ಶಾಶ್ವತವಾಗಿರುತ್ತದೆ; ಎಲ್ಲಿಯವರೆಗೆ ಆ ದೇಹದೊಂದಿಗಿರುತ್ತದೆಯೋ, ಅಲ್ಲಿಯವರೆಗೆ ಅದರ ತಾಯ್ತಂದೆಯರಿಗೆ ಅದು ನನ್ನದು ಎಂಬ ಸಂಬಂಧವಿರುತ್ತದೆ. ಆದರೆ ಅದು ದೇಹವನ್ನು ಬಿಟ್ಟು ಹೋದ ಬಳಿಕ, ಆ ಸಂಬಂಧ ಮುರಿದುಹೋಗುತ್ತದೆ. ಈ ಜೀವಾತ್ಮನು ನಿತ್ಯನು, ನಾಶವಾಗದ ಅವ್ಯಯನು, ಸೂಕ್ಷ್ಮನು, ಸ್ವಪ್ರಭೆಯುಳ್ಳವನು, ಸ್ವಯಂ ದೃಷ್ಟಿಯುಳ್ಳವನು, ಮತ್ತು ವಿವಿಧ ದೇಹಗಳಿಗೆ ಇವನೇ ಆಶ್ರಯನು; ಹೀಗೆ ಪರಮಾತ್ಮನ ಅಂಶವಾಗಿ, ಪರಮಾತ್ಮನ ಗುಣಗಳನ್ನೇ ಹೊಂದಿದ್ದರೂ, ಸೂಕ್ಷ್ಮನಾದ್ದರಿಂದ, ಮಾಯೆಯ ಪ್ರಭಾವಕ್ಕೆ ಸಿಕ್ಕಿ, ವಿವಿಧ ಕಾಮನೆಗಳಿಗನುಗುಣವಾಗಿ ವಿವಿಧ ದೇಹಗಳನ್ನು ತಾನೇ ಸೃಷ್ಟಿಸಿಕೊಳ್ಳುವನು! ಆದರೆ ನಿಜವಾಗಿ ಇವನಿಗೆ ಪ್ರಿಯರಾಗಲೀ ಅಪ್ರಿಯರಾಗಲೀ, ತನ್ನವರಾಗಲೀ ಪರರಾಗಲೀ ಯಾರೂ ಇಲ್ಲ! ಒಬ್ಬನೇ ಆದ ಇವನು, ಗುಣದೋಷಗಳ ಕಾರ್ಯಗಳನ್ನು ವೀಕ್ಷಿಸುತ್ತಿರುವನಷ್ಟೇ! ಅಂದರೆ ಅವುಗಳನ್ನು ಸ್ವೀಕರಿಸದೇ ಉದಾಸೀನನೇ ಆಗಿರುವನು! ಆದರೆ ಮಾಯೆಯ ಪ್ರಭಾವದಿಂದ, ಅವುಗಳ ವ್ಯತ್ಯಯಗಳು ತನಗೇ ಆಗುತ್ತಿವೆಯೆಂದು ಭ್ರಮಿಸಿ, ಕರ್ಮಫಲಗಳ ಪರಿಣಾಮಗಳನ್ನು ಅನುಭವಿಸುವನು! ಇದಕ್ಕೆ ವ್ಯತಿರಿಕ್ತವಾಗಿ, ಜೀವಾತ್ಮನಿಗೆ ಮೂಲನಾದ ಪರಮಾತ್ಮನು ಮಾಯಾತೀತನಾಗಿ, ಈ ಯಾವ ವ್ಯತ್ಯಯಗಳ ಭ್ರಮೆಗೂ ಸಿಲುಕದೇ ಸರ್ವಸಾಕ್ಷಿಯಾಗೇ ಇರುವನು.”
ಇಷ್ಟು ಹೇಳಿ, ಆ ಜೀವಾತ್ಮನು ಹೊರಟುಹೋಯಿತು! ಚಿತ್ರಕೇತುವೇ ಮೊದಲಾಗಿ ಎಲ್ಲರೂ ಮೂಕವಿಸ್ಮಿತರಾಗಿ ಕೆಲನಿಮಿಷಗಳ ಕಾಲ, ಮೌನವಾಗಿ ಕುಳಿತರು! ಅನಂತರ, ಜ್ಞಾನೋಪದೇಶದ ಕಾರಣ, ಎಲ್ಲರೂ ತಮ್ಮ ಮನಸ್ಸಿನಿಂದ ಶೋಕವನ್ನು ದೂರಮಾಡಿ, ತ್ಯಜಿಸಲು ದುಃಸಾಧ್ಯವಾದ ಮಗುವಿನ ಮಮಕಾರವನ್ನು ತ್ಯಜಿಸಿದರು! ಆ ಮಗುವಿನ ಉತ್ತರಕ್ರಿಯೆಗಳನ್ನು ಚಿತ್ರಕೇತುವೂ ಕೃತದ್ಯುತಿಯೂ ಯಥಾವತ್ತಾಗಿ ಮಾಡಿದರು. ಚಿತ್ರಕೇತುವಿನ ಇತರ ಪತ್ನಿಯರು ತಾವು ಮಾಡಿದ ದುಷ್ಕೃತ್ಯಕ್ಕೆ ಬಹಳ ನಾಚಿ ಎಲ್ಲರ ಮುಂದೆ ತಮ್ಮ ತಪ್ಪನ್ನೊಪ್ಪಿಕೊಂಡರು. ಜ್ಞಾನೋದಯವಾಗಿದ್ದ ಚಿತ್ರಕೇತುವೂ ಕೃತದ್ಯುತಿಯೂ ಅವರ ಮೇಲೆ ಸ್ವಲ್ಪವೂ ಕೋಪಗೊಳ್ಳಲಿಲ್ಲ. ಬಾಲಹತ್ಯೆಯಿಂದ ಕಾಂತಿಹೀನರಾಗಿ ಪಾಪಸಂಪಾದನೆ ಮಾಡಿದ್ದ ಅವರಿಗೆ ಬ್ರಾಹ್ಮಣರು ಪ್ರಾಯಶ್ಚಿತ್ತ ವಿಧಿಗಳನ್ನು ನಿರೂಪಿಸಿದರು. ಅದರಂತೆ ಅವರು ವ್ರತವನ್ನಾಚರಿಸಿ ಯಮುನಾ ನದಿಯಲ್ಲಿ ಮಿಂದು ಪ್ರಾಯಶ್ಚಿತ್ತ ಮಾಡಿಕೊಂಡರು.
ಚಿತ್ರಕೇತುವಾದರೋ ಮಹಾಮುನಿಗಳ ಉಪದೇಶದಿಂದ ಆತ್ಮಜ್ಞಾನಸಂಪನ್ನನಾಗಿ, ಆನೆಯು ಕೆಸರಿನ ಹೊಂಡದಿಂದ ಹೊರಬಂದಂತೆ ಗೃಹಾಂಧಕೂಪದಿಂದ ಹೊರಬಂದನು! ಅವನೂ ಯಮುನೆಯಲ್ಲಿ ವಿಧಿವತ್ತಾಗಿ ಮಿಂದು ದೇವತೆಗಳಿಗೂ ಪಿತೃಗಳಿಗೂ ತರ್ಪಣ ನೀಡಿ, ಇಂದ್ರಿಯಗಳನ್ನು ನಿಗ್ರಹಿಸಿ ಮೌನದಿಂದ ಇಬ್ಬರು ಮುನಿಗಳಿಗೂ ವಂದಿಸಿದನು.
* * *
ರಾಜಾ ಚಿತ್ರಕೇತುವು ಜ್ಞಾನಸಂಪನ್ನನಾಗಿ ಇಬ್ಬರೂ ಮುನಿಗಳಿಗೆ ಅಭಿವಾದನ ಮಾಡಲು, ನಾರದರು ಅವನಲ್ಲಿ ಸುಪ್ರೀತರಾಗಿ ಹೇಳಿದರು, “ಮಹಾರಾಜಾ! ನಾನು ನಿನಗೆ ದಿವ್ಯವಾದ ಒಂದು ಮಂತ್ರೋಪದೇಶವನ್ನು ಮಾಡುತ್ತೇನೆ. ನೀನು ಶ್ರದ್ಧಾಭಕ್ತಿಗಳಿಂದ ಅದನ್ನು ಜಪಿಸಿದರೆ, ಏಳು ರಾತ್ರಿಗಳಲ್ಲೇ ಭಗವಾನ್ ಸಂಕರ್ಷಣನನ್ನು ದರ್ಶನ ಮಾಡಬಹುದು! ಸೃಷ್ಟಿಯ ಲಯಕ್ಕಾಗಿ ಭಗವಂತನು ತಾನೇ ವಿಸ್ತರಿಸಿಕೊಂಡಿರುವ ಅನಂತ ಅಥವಾ ಸಂಕರ್ಷಣದೇವನ ಪಾದಮೂಲಗಳನ್ನಾಶ್ರಯಿಸಿ ಶಿವನೇ ಮೊದಲಾಗಿ ಅನೇಕ ದೇವತೆಗಳು ದ್ವಂದ್ವಗಳ ಭ್ರಮೆಯನ್ನು ಮೀರಿ ಮಹಾಮಹಿಮಾವಂತರಾದರು! ನೀನೂ ಬೇಗನೆ ಹಾಗೆಯೇ ಆಗುವೆ!”
ಹೀಗೆ ಹೇಳಿ ನಾರದರು ಚಿತ್ರಕೇತುವಿಗೆ ಮಹಾಮಂತ್ರವೊಂದನ್ನು ಉಪದೇಶಿಸಿ ಅಂಗಿರಸರೊಂದಿಗೆ ಬ್ರಹ್ಮಲೋಕಕ್ಕೆ ತೆರಳಿದರು.
ಭಗವಾನ್ ಸಂಕರ್ಷಣದೇವನಿಗೆ ಮಹಾಮಂತ್ರವನ್ನು ಚಿತ್ರಕೇತುವು ಅತ್ಯಂತ ಶ್ರದ್ಧಾಭಕ್ತಿಗಳಿಂದ ಬರಿಯ ನೀರನ್ನು ಮಾತ್ರ ಸೇವಿಸುತ್ತಾ ಏಳು ಹಗಲು, ಏಳು ರಾತ್ರಿಗಳ ಕಾಲ ಸತತವಾಗಿ ಜಪಿಸಿದನು! ತತ್ಫಲವಾಗಿ ಅವನಿಗೆ ವಿದ್ಯಾಧರ ಆಧಿಪತ್ಯವೇ ದೊರೆಯಿತು! ಇನ್ನು ಕೆಲದಿನಗಳಲ್ಲಿ ಅವನು ಆ ವಿದ್ಯೆಯ ಸಿದ್ಧಿಯ ಬಲದಿಂದ ಭಗವಾನ್ ಅನಂತನ ಪಾದಮೂಲಗಳ ಬಳಿಗೆ ಹೋಗಿ ಸೇರಿದನು!
ಭಗವಾನ್ ಆದಿಶೇಷನು ಶೋಭಾಯಮಾನ ಗೌರವರ್ಣದಿಂದ ಕೂಡಿದ್ದು, ನೀಲ ವರ್ಣದ ವಸ್ತ್ರಗಳಿಂದಲೂ, ಹೊಳೆ ಹೊಳೆಯುವ ಕಿರೀಟ, ಕಂಕಣ, ಕೇಯೂರ, ಕಟಿಬಂಧಗಳಿಂದಲೂ ರಾರಾಜಿಸುತ್ತಿದ್ದನು! ನಸುಗೆಂಪು ಬಣ್ಣದ ಸುಂದರ ಕಂಗಳನ್ನು ಹೊಂದಿದ್ದ ಭಗವಂತನು, ಸಿದ್ಧಪುರುಷರಿಂದ ಸುತ್ತುವರಿಯಲ್ಪಟ್ಟು ಪ್ರಸನ್ನತೆಯಿಂದ ನಸುನಗೆ ಬೀರುತ್ತಿದ್ದನು!
ಆದಿಪುರುಷನ ದಿವ್ಯದರ್ಶನದಿಂದ ಸಕಲ ಕಲ್ಮಷಗಳಿಂದಲೂ ಮುಕ್ತನಾದ ಚಿತ್ರಕೇತುವು ಶುದ್ಧವಾದ ಅಂತಃಕರಣದಿಂದ ಕೂಡಿ, ಕೂಡಲೇ ಅವನ ಪಾದಾರವಿಂದಗಳಿಗೆ ಸಾಷ್ಟಾಂಗವೆರಗಿದನು! ಭಕ್ತಿ, ಪ್ರೇಮಗಳಿಂದ ರೋಮಾಂಚನಗೊಂಡ ರಾಜನು ಆನಂದಬಾಷ್ಪಗಳನ್ನು ಸುರಿಸುತ್ತಾ ಭಗವಂತನ ಚರಣಾರವಿಂದಗಳನ್ನು ತೋಯಿಸಿಬಿಟ್ಟನು! ಪ್ರೇಮವಿಹ್ವಲತೆಯಿಂದ ಅವನ ಕಂಠವು ಗದ್ಗದಿತವಾಗಲು, ಅವನು ಬಹಳ ಹೊತ್ತಿನವರೆಗೂ ಭಗವಂತನ ಸ್ತುತಿಗಾಗಿ ಒಂದು ಅಕ್ಷರವನ್ನೂ ಉಚ್ಚರಿಸಲಾಗದೇ ಮೌನವಾಗಿದ್ದುಬಿಟ್ಟನು! ಅನಂತರ, ಬಹಳ ಕಷ್ಟದಿಂದ ತನ್ನ ಮನೇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಭಗವಂತನನ್ನು ಮನದುಂಬಿ ಸ್ತುತಿಸಿದನು!
ಚಿತ್ರಕೇತುವಿನ ಸ್ತುತಿಯಿಂದ ಸುಪ್ರೀತನಾದ ದೇವೋತ್ತಮ ಪರಮಪುರುಷನು ಅವನಿಗೆ ಜ್ಞಾನೋಪದೇಶ ಮಾಡಿದನು, “ಓ ರಾಜಾ, ನಾರದರಿಂದಲೂ, ಅಂಗಿರಸರಿಂದಲೂ ಉಪದಿಷ್ಟನಾಗಿ, ವಿಶೇಷ ವಿದ್ಯೆಯ ಬಲದಿಂದಲೂ ನನ್ನ ದರ್ಶನದಿಂದಲೂ ಸಿದ್ಧಪುರುಷನಾಗಿರುವೆ! ಹೇ ರಾಜಾ, ಸಕಲ ಜೀವಿಗಳೂ ನನ್ನ ಅಂಶಗಳಾದುದರಿಂದ ಅವರೆಲ್ಲರೂ ನಾನೇ ಆಗಿದ್ದೇನೆ. ಶಬ್ದ ಬ್ರಹ್ಮವೆನಿಸುವ ಓಂಕಾರವೇ ಮೊದಲಾದ ವೇದಮಂತ್ರಗಳು ನಾನೇ ಆಗಿದ್ದೇನೆ; ಪರಬ್ರಹ್ಮನೆನಿಸುವ ನಿರ್ಗುಣಬ್ರಹ್ಮ ಮತ್ತು ಸಗುಣಬ್ರಹ್ಮ ನಾನೇ ಆಗಿದ್ದೇನೆ. ಎಲೈ ರಾಜ, ವ್ಯಕ್ತಿಯು ನಿದ್ರಿಸುತ್ತಿರುವಾಗ, ಕನಸಿನಲ್ಲಿ ಇಡೀ ವಿಶ್ವವನ್ನೇ ಕಾಣಬಹುದು. ಆದರೆ ಅವನು ಎಚ್ಚರಗೊಂಡಾಗ, ತಾನು ವಿಶ್ವದ ಯಾವುದೋ ಒಂದು ಮೂಲೆಯಲ್ಲಿರುವುದಾಗಿ ಕಾಣುತ್ತಾನೆ! ಆಗ ಅವನಿಗೆ ತಾನು ಕಂಡದ್ದು ಕನಸು, ಅದು ಮಾಯಾಕಲ್ಪಿತವಾದುದು ಎಂಬ ಅರಿವಾಗುತ್ತದೆ. ಇದೇ ರೀತಿ, ಅವನು ತಾನು ಇಂಥ ವ್ಯಕ್ತಿ, ಜಾತಿ, ಮೊದಲಾಗಿ ಭಾವಿಸುವ ಜಾಗೃತ ಸ್ಥಿತಿಯೂ ಮಾಯಾಕಲ್ಪಿತವಾದ ಕನಸಿನಂತೆ! ಅವನು ಸುಷುಪ್ತಿ ಅಥವಾ ಆಳನಿದ್ರೆಯಲ್ಲಿರುವಾಗ ಈ ಭಾವನೆಗಳಿಂದ ಬಿಡುಗಡೆಗೊಂಡು ಅತೀಂದ್ರಿಯ ಆನಂದದ ಸ್ಥಿತಿಯಲ್ಲಿರುತ್ತಾನೆ. ಈ ಅನುಭವಕ್ಕೆ ಕಾರಣವಾದ ಅವನ ಅಂತರಾತ್ಮ, ಅಥವಾ ಬ್ರಹ್ಮ, ನಾನೇ ಆಗಿದ್ದೇನೆ! ಹೀಗೆ, ಕನಸು ಮತ್ತು ಜಾಗೃದಾವಸ್ಥೆಗಳೆರಡನ್ನೂ ಅನುಭವಿಸುವ ಜೀವನು, ವಾಸ್ತವವಾಗಿ ಅವೆರಡರಿಂದಲೂ ಬೇರೆಯಾದ ಜ್ಞಾನ ಮತ್ತು ಆನಂದ ಸ್ವರೂಪದ ಪರವಸ್ತುವಾಗಿದ್ದಾನೆ; ಅವನು ಈ ಭೌತಿಕ ವಸ್ತು ಅಥವಾ ತಾನು ಈ ಅವಸ್ಥೆಗಳಲ್ಲಿ ಭಾವಿಸಿಕೊಳ್ಳುವ ವ್ಯಕ್ತಿ ಅಲ್ಲ ! ಅವನು ಯಾವ ಜ್ಞಾನಾನಂದ ಸ್ವರೂಪದವನಾಗಿರುವನೋ, ಆ ಸ್ವರೂಪ ನನ್ನದೇ ಆಗಿದೆ! ಹೀಗೆ ಸ್ವರೂಪದಲ್ಲಿ ನನ್ನೊಡನೆ ಒಂದಾಗಿರುವ ಜೀವನು ಈ ಪರಭಾವವನ್ನು ಮರೆತು, ನನ್ನಿಂದ ಬೇರೆಯೆಂದು ಯಾವಾಗ ಭಾವಿಸುವನೋ, ಆಗ ಅವನಿಗೆ ಈ ಸಂಸಾರ, ದೇಹದಿಂದ ದೇಹಗಮನ, ಮತ್ತೆ ಮತ್ತೆ ಮರಣ, ಇವೆಲ್ಲವೂ ಪ್ರಾಪ್ತವಾಗುವುವು! ಆದರೆ ಹೀಗೆ ಸಂಸಾರಚಕ್ರದಲ್ಲಿ ಸಾಗುತ್ತಿರುವಾಗ ಯಾವಾಗಲಾದರೊಮ್ಮೆ ಮಾನುಷಜನ್ಮ ದೊರೆತರೆ, ಜ್ಞಾನವಿಜ್ಞಾನಗಳನ್ನು ಅರಿಯಲು ಸಾಧ್ಯವಾಗುವ ಬುದ್ಧಿ ಅವನಿಗೆ ಸಿಗುತ್ತದೆ. ಆದರೆ ಅವನು ಆ ಬುದ್ಧಿಯನ್ನು ತನ್ನ ನಿಜಸ್ವರೂಪವನ್ನು ತಿಳಿಯಲು ಬಳಸದಿದ್ದರೆ, ಅವನಿಗೆ ಇನ್ನೆಲ್ಲೂ ಯಾವ ಜನ್ಮದಲ್ಲೂ ಕ್ಷೇಮವುಂಟಾಗುವುದಿಲ್ಲ!
ಕೃಮಿವಿಡ್‌ಭಸ್ಮಸಂಜ್ಞಾಸೀದ್ಯಸ್ಯೇಶಾಭಿಹಿತಸ್ಯ ಚ ।
ಭೂತಧ್ರುಕ್ ತತ್ಕೃತೇ ಸ್ವಾರ್ಥಂ ಕಿಂ ವೇದ ನಿರಯೋ ಯತಃ ॥
ರಾಜರೆಂದು ಮತ್ತು ಮಹಾನಾಯಕರೆಂದು ಖ್ಯಾತರಾದ ಎಲ್ಲ ಆಡಳಿತಗಾರರು ಸತ್ತಾಗ ಅವರ ದೇಹಗಳು ಕ್ರಿಮಿ, ಮಲ ಅಥವಾ ಬೂದಿಯಾಗಿ ಪರಿಣಮಿಸುತ್ತವೆ. ಅಂತಹ ದೇಹರಕ್ಷಣೆಗಾಗಿ ವ್ಯಕ್ತಿಯು ಅಸೂಯೆಯಿಂದ ಇತರರನ್ನು ಕೊಂದರೆ, ಅವನು ಜೀವನದ ನಿಜಹಿತವನ್ನು ವಾಸ್ತವಿಕವಾಗಿ ತಿಳಿದಿರುವನೇ? ಖಂಡಿತ ಇಲ್ಲ, ಏಕೆಂದರೆ ವ್ಯಕ್ತಿಯು ಇತರ ಜೀವಿಗಳ ಬಗ್ಗೆ ಅಸೂಯೆಯನ್ನು ತಾಳಿದರೆ ಅವನು ಖಂಡಿತ ನರಕಕ್ಕೆ ಹೋಗುತ್ತಾನೆ. (ಭಾಗವತ 6.18.25)
“ಮಹಾರಾಜ! ಈ ಪ್ರಪಂಚದಲ್ಲಿ ಜನರು ಎಷ್ಟು ಕ್ಲೇಶಗಳನ್ನು ಅನುಭವಿಸುತ್ತಾರೆ ನೋಡು! ಅವರು ಯಾವ ಫಲಗಳು ಬೇಕೆಂದು ಕಾರ್ಯರತರಾಗುವರೋ, ತದ್ವಿರುದ್ಧ ಫಲಗಳೇ ದೊರೆಯುತ್ತವೆ! ದಂಪತಿಗಳು ದುಃಖದಿಂದ ಬಿಡುಗಡೆಯಾಗಲೆಂದೂ ಸುಖಪ್ರಾಪ್ತಿಯಾಗಲೆಂದೂ ಬಹಳ ಕಷ್ಟಪಡುತ್ತಾರೆ. ಆದರೆ ದುಃಖನಿವೃತ್ತಿಯೂ ಸುಖಪ್ರಾಪ್ತಿಯೂ ಆಗುವುದೇ ಇಲ್ಲ! ಇವನ್ನು ವಿಚಾರಿಸಿ, ಬುದ್ಧಿವಂತನು ಆಸೆಯನ್ನು ಬಿಟ್ಟು, ಅನಾಸಕ್ತನಾಗಿ ಕೆಲಸ ಮಾಡಬೇಕು. ವಿಷಯಗಳನ್ನು ನೋಡಿ, ಕೇಳಿ, ಮತ್ತು ತನ್ನ ಅನುಭವದಿಂದ ಅರಿತು, ಜ್ಞಾನವಿಜ್ಞಾನಗಳಿಂದ ಸಂತೃಪ್ತನಾಗಿ ನನ್ನ ಭಕ್ತನಾಗಬೇಕು. ಆತ್ಮನು ಜಾಗೃತ್, ಸ್ವಪ್ನಾ, ಸುಷುಪ್ತಿಗಳೆಂಬ ಮೂರು ಸ್ಥಿತಿಗಳಿಗಿಂತಲೂ ಬೇರೆಯಾಗಿದ್ದಾನೆಂದು ಅರಿಯಬೇಕು. ಮನುಷ್ಯರಿಗೆ, ಯೋಗ, ನೈಪುಣ್ಯ, ಬುದ್ಧಿಗಳ ಅಂತಿಮ ಪ್ರಯೋಜನವೆಂದರೆ, ಈ ಆತ್ಮ, ನನ್ನ ಅಂಶವಾಗಿರುವುದರಿಂದ ನನ್ನೊಡನೆ ಒಂದಾಗಿದೆಯೆಂದು ಅರಿಯುವುದೇ ಆಗಿದೆ.
“ಎಲೈ ರಾಜ! ಈ ನನ್ನ ಮಾತುಗಳನ್ನು ಶ್ರದ್ಧಾಭಕ್ತಿಗಳಿಂದ, ಅಪ್ರಮತ್ತನಾಗಿ ಮನಸ್ಸಿನಲ್ಲಿ ಧ್ಯಾನಿಸಿ ಅರಿತು ಅಳವಡಿಸಿಕೊಂಡರೆ, ನೀನು ಮಹಾಸಿದ್ಧಿಯನ್ನು ಪಡೆಯುವೆ!”
ಭಗವಂತನು ಹೀಗೆ ಜ್ಞಾನೋಪದೇಶ ಮಾಡಿ, ಚಿತ್ರಕೇತುವು ನೋಡು ನೋಡುತ್ತಿದ್ದಂತೆಯೇ ಅಂತರ್ಧಾನನಾದನು. ಚಿತ್ರಕೇತುವಿಗೆ ಭಕ್ತಿತುಂಬಿ ಬಂದು, ಭಗವಂತನಿದ್ದ ದಿಕ್ಕಿಗೆ ಅವನು ಮತ್ತೆ ಮತ್ತೆ ನಮಸ್ಕರಿಸಿದನು!
* * *
ಭಗವದ್ಭಕ್ತಿಯಿಂದ ಸಂಪನ್ನನಾಗಿದ್ದ ಚಿತ್ರಕೇತುವು ಭಗವಂತನ ದರ್ಶನವನ್ನೇ ಪಡೆದನಲ್ಲದೇ ವಿದ್ಯಾಧರಾಧಿಪತ್ಯವನ್ನೂ ಪಡೆದನು! ವಿಷ್ಣುವು ದಯಪಾಲಿಸಿದ್ದ ದಿವ್ಯವಿಮಾನವನ್ನೇರಿ ಅವನು ಆಕಾಶಗಾಮಿಯಾಗಿ ಎಲ್ಲೆಲ್ಲೂ ಸಂಚರಿಸತೊಡಗಿದನು! ಸಿದ್ಧಚಾರಣರೂ ಮುನಿಗಳೂ ಅವನ ಗುಣಗಾನ ಮಾಡತೊಡಗಿದರು! ಶಕ್ತಿಗುಂದದ ಬಲ, ಇಂದ್ರಿಯಗಳಿಂದ ಯುಕ್ತನಾಗಿದ್ದ ಅವನು, ಹರಿನಾಮಗಾನ ಮಾಡುತ್ತಿದ್ದ ಸುಂದರ ವಿದ್ಯಾಧರ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟು, ಸಕಲ ಸಿದ್ಧಿಗಳಿಗೂ ತಾಣವಾದ ಸುಮೇರು ಪರ್ವತದ ಕಣಿವೆಗಳಲ್ಲಿ ಯಥೇಚ್ಛವಾಗಿ ವಿಹರಿಸಿದನು! ಹೀಗೆ ಕೋಟ್ಯಂತರ ವರ್ಷಗಳ ಕಾಲ ಅವನು ವಿಶ್ವಪರ್ಯಟನೆ ಮಾಡುತ್ತಾ ಸುಖವಾಗಿ ಕಳೆದನು!
ಚಿತ್ರಕೇತುವು ಹೀಗೆಯೇ ಒಂದು ದಿನ ಆ ದಿವ್ಯ ವಿಮಾನವನ್ನೇರಿ ಸಂಚರಿಸುತ್ತಿದ್ದಾಗ, ಸಿದ್ಧಚಾರಣಮುನಿಗಳಿಂದ ಕೂಡಿದ್ದ ಒಂದು ದೊಡ್ಡ ಸಭೆಯಲ್ಲಿ ಭಗವಾನ್ ಶಿವನು ಕುಳಿತಿದ್ದುದನ್ನು ಕಂಡನು. ಶಿವನು ಆಗ ಪಾರ್ವತಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅವಳನ್ನು ಆಲಿಂಗಿಸಿಕೊಂಡಿದ್ದನು. ಇದನ್ನು ಕಂಡು ಚಿತ್ರಕೇತುವು ಜೋರಾಗಿ ನಗುತ್ತಾ, ಪಾರ್ವತಿಗೆ ಕೇಳುವಂತೆಯೇ ಜೋರಾಗಿ ಹೇಳಿದನು, “ಆಹಾ…..! ಈ ಶಿವನು ಲೋಕಗುರು! ದೇಹಧಾರಿಗಳಾದ ಜೀವಿಗಳಿಗೆ ಧರ್ಮವನ್ನು ಬೋಧಿಸುವವನು! ಅಂಥವನು ಇಂಥ ದೊಡ್ಡ ಸಭೆಯಲ್ಲಿ ಹೆಂಡತಿಯನ್ನು ಹೀಗೆ ಅಪ್ಪಿಕೊಂಡು ಕುಳಿತಿರುವನಲ್ಲಾ….! ಜಟಾಧಾರಿಯೂ, ಮಹಾತಪಸ್ವಿಯೂ, ಬ್ರಹ್ಮಜ್ಞಾನಿಗಳ ಸಭಾಪತಿಯೂ ಆಗಿರುವ ಈ ಶಿವನು, ಸಾಮಾನ್ಯ ಜನರಂತೆ, ನಾಚಿಕೆಯಿಲ್ಲದೇ ಹೀಗೆ ಸಭೆಯಲ್ಲಿ ಪತ್ನಿಯನ್ನು ತೊಡೆಯ ಮೇಲೆ ಕೂರಿಸಿಕೊಳ್ಳುವುದೇ?! ಬಹುಶಃ, ಸಾಮಾನ್ಯ ಜನರೂ ತಮ್ಮ ಪತ್ನಿಯರನ್ನು ಏಕಾಂತದಲ್ಲಷ್ಟೇ ಆಲಿಂಗಿಸಿಕೊಳ್ಳುತ್ತಾರೆ! ಆದರೆ ಈ ಶಿವನು ಸಭೆಯಲ್ಲೆ ಪತ್ನಿಯನ್ನು ಆಲಿಂಗಿಸಿಕೊಂಡಿರುವನಲ್ಲಾ…..!”

ಶಿವನ ಮಹಿಮೆಯನ್ನರಿಯದೇ ಚಿತ್ರಕೇತುವು ಹೀಗೆ ಅಯುಕ್ತವಾದ, ಶೋಭಿಸದ ಮಾತುಗಳನ್ನಾಡಿಬಿಟ್ಟನು! ತಾನು ಭಗವಂತನನ್ನೇ ಸಂದರ್ಶಿಸಿಬಿಟ್ಟೆನೆಂದು ಸಣ್ಣ ಅಹಂಕಾರ ತಾಳಿದ್ದನು! ತತ್ಫಲವಾಗಿ, ಇಂದ್ರಿಯನಿಗ್ರಹದಲ್ಲಿ ತಾನೇ ಶಿವನಿಗಿಂತ ಮಿಗಿಲೆಂಬ ಅಭಿಮಾನದಿಂದ ಹೀಗೆ ಶಿವನನ್ನೇ ನಿಂದಿಸಿಬಿಟ್ಟನು! ಆದರೆ ಶಿವನು ಸುಮ್ಮನೆ ನಕ್ಕು ಮೌನವಾಗಿಯೇ ಇದ್ದನು! ಅವನ ಮನಸ್ಸು ಕೆರಳಲಿಲ್ಲ. ಸಭಾಸದರೆಲ್ಲರೂ ಅವನನ್ನೇ ಅನುಸರಿಸಿ ಮೌನವಾಗುಳಿದರು. ಆದರೆ ಪಾರ್ವತಿಗೆ ಇದು ಸಹ್ಯವಾಗಲಿಲ್ಲ! ತನ್ನ ಪತಿಯನ್ನು ಯಾರಾದರೂ ನಿಂದಿಸಿದರೆ ಯಾವ ಪತ್ನಿ ಸಹಿಸುತ್ತಾಳೆ? ಕೋಪದಿಂದ ಕಂಗಳು ಕೆಂಪಾಗಲು, ದೇವಿಯು ನುಡಿದಳು, “ಲೋಕದಲ್ಲಿ ದಂಡವನ್ನು ಹಿಡಿದು ನಮ್ಮಂತಹ ನಿರ್ಲಜ್ಜಿತರನ್ನು ಶಿಕ್ಷಿಸಲು ಹೊರಟ ಶಾಸಕನಾದಂತಿದೆ ಇವನು ! ಅಯ್ಯೋ! ಬ್ರಹ್ಮದೇವನೂ ಸನಕಸನಂದಾದಿ ಬ್ರಹ್ಮಪುತ್ರರೂ ಭೃಗುಮಹರ್ಷಿಗಳೂ ನಾರದರೂ ಕಪಿಲರೂ ಮನುವೂ ಇವರಾರೂ ಧರ್ಮವನ್ನು ತಿಳಿದೇ ಇಲ್ಲ! ಆದ್ದರಿಂದಲೇ ಇವರಾರೂ ಶಿವನ ಈ ಮರ್ಯಾದರಹಿತ ಕಾರ್ಯವನ್ನು ತಡೆಯುತ್ತಿಲ್ಲ! ಈ ಮಹಾತ್ಮರೆಲ್ಲರೂ ಪರಶಿವನ ಪಾದಾರವಿಂದಗಳನ್ನು ಸದಾ ಧ್ಯಾನಿಸುತ್ತಾರೆ. ಮಂಗಳಕ್ಕೂ ಪರಮ ಮಂಗಳಕರನಾದ ಪರಶಿವನು ಜಗತ್ತಿಗೇ ಪರಮಗುರು! ಅಂಥ ಶಿವನನ್ನೇ ನಿಂದಿಸಿ ಈ ಕ್ಷತ್ರಿಯಾಧಮನು ಉದ್ಧಟತನದಿಂದ ಈ ಎಲ್ಲಾ ದೇವತೆಗಳನ್ನೂ ಅತಿಕ್ರಮಿಸಿದ್ದಾನೆ! ಇವನು ಖಂಡಿತವಾಗಿಯೂ ಶ್ರೀಹರಿಯ ಪಾದಾರವಿಂದಗಳಲ್ಲಿರಲು ಯೋಗ್ಯನಲ್ಲ! ತನ್ನನ್ನು ತಾನೇ ಬಹಳ ದೊಡ್ಡ ವ್ಯಕ್ತಿಯೆಂದು ಭಾವಿಸಿರುವ ಇವನು ಶಿಕ್ಷಾರ್ಹನು! ಆದ್ದರಿಂದ ಎಲೈ ಪಾಪಿಯೇ, ನನ್ನ ಶಾಪವನ್ನು ಹಿಡಿ! ದುರ್ಮತಿಯೇ, ನೀನು ಅಸುರಯೋನಿಯಲ್ಲಿ ಜನಿಸು! ಆಗ ನೀನು ಪುನಃ ಮಹಾತ್ಮರ ವಿಷಯದಲ್ಲಿ ಇಂಥ ತಪ್ಪನ್ನಾಚರಿಸುವುದಿಲ್ಲ!”
ಪಾರ್ವತಿದೇವಿಯು ಹೀಗೆ ಚಿತ್ರಕೇತುವನ್ನು ಶಪಿಸಲು, ಅವನು ಕೂಡಲೇ ವಿಮಾನದಿಂದಿಳಿದು ಅವಳಿಗೆ ತಲೆಬಾಗಿ ನಮ್ರತೆಯಿಂದ ಅವಳನ್ನು ಪ್ರಸನ್ನಗೊಳಿಸಿದನು, “ದೇವಿ! ಅಂಬೆ! ಪ್ರಸನ್ನಳಾಗು! ನಾನು ಅಂಜಲೀಬದ್ಧನಾಗಿ ನಿನ್ನ ಶಾಪವನ್ನು ಸ್ವೀಕರಿಸುತ್ತೇನೆ. ಒಬ್ಬನ ಪೂರ್ವಾರ್ಜಿತ ಕರ್ಮಗಳಿಗನುಗುಣವಾಗಿಯೇ ದೇವತೆಗಳು ಸುಖದುಃಖಗಳನ್ನು ನೀಡುವರು. ಜೀವನು ಈ ಸಂಸಾರಚಕ್ರದಲ್ಲಿ ಸುತ್ತುತ್ತಾ ಅಜ್ಞಾನದಿಂದ ಮೋಹಿತನಾಗಿ ಎಲ್ಲೆಲ್ಲೂ ಯಾವಾಗಲೂ ಸುಖದುಃಖಗಳನ್ನು ಅನುಭವಿಸುತ್ತಾನೆ. ಈ ಸುಖದುಃಖಗಳಿಗೆ ತಾನೂ ಕಾರಣನಲ್ಲ, ಪರರೂ ಕಾರಣರಲ್ಲ. ಆದರೆ ಅಜ್ಞಾನದಿಂದ ತಾನು ಇಲ್ಲವೇ ಪರರು ಇವುಗಳಿಗೆ ಕಾರಣರೆಂದು ತಿಳಿಯುತ್ತಾನೆ. ಸತ್ತ್ವ, ರಜಸ್ಸು, ಮತ್ತು ತಮಸ್ಸೆಂಬ ಗುಣಗಳ ಪ್ರವಾಹವೇ ಆಗಿರುವ ಈ ಪ್ರಪಂಚದಲ್ಲಿ ಯಾವುದು ಶಾಪ? ಯಾವುದು ಅನುಗ್ರಹ? ಯಾವುದು ಸ್ವರ್ಗ? ಯಾವುದು ನರಕ? ಯಾವುದು ಸುಖ? ಯಾವುದು ದುಃಖ? ಇವೆಲ್ಲವೂ ಈ ಗುಣಗಳ ಕಾರಣದಿಂದಾಗಿವೆ! ಒಬ್ಬನೇ ಭಗವಂತನು ಜೀವಿಗಳನ್ನು ತನ್ನ ಆತ್ಮಮಾಯೆಯಿಂದ ಸೃಷ್ಟಿಸುತ್ತಾನೆ. ಅವನೇ ತನ್ನ ಬಹಿರಂಗ ಮಾಯೆಯಿಂದ ಇವರ ಬಂಧನ, ಮೋಕ್ಷ, ಸುಖ, ದುಃಖಗಳನ್ನು ಉಂಟುಮಾಡುತ್ತಾನೆ. ಅವನಿಗೆ ಯಾರೂ ಪ್ರಿಯರಲ್ಲ, ಯಾರೂ ತನ್ನವರು, ಬಂಧುಗಳು, ಅಥವಾ ಪರರು ಎಂಬುದಿಲ್ಲ. ಸರ್ವಸಮಾನನಾದ ಅವನಿಗೆ ಸುಖದಲ್ಲಿ ಆಸಕ್ತಿಯಿಲ್ಲ. ಇನ್ನು ಕೋಪವೆಲ್ಲಿಂದ ಬಂದೀತು? ಆದರೂ ತನ್ನ ಮಾಯಾಶಕ್ತಿಯಿಂದ ಜೀವಿಗಳಿಗೆ ಸುಖ, ದುಃಖ, ಹಿತ, ಅಹಿತ, ಬಂಧನ, ಮೋಕ್ಷ, ಜನನ, ಮರಣ, ಇವುಗಳನ್ನು ಸೃಷ್ಟಿಸುತ್ತಾನೆ. ಆದ್ದರಿಂದ ಹೇ ದೇವಿ! ನಾನು ನಿನ್ನನ್ನು ಶಾಪವಿಮೋಚನೆಗಾಗಿ ಪ್ರಸನ್ನಗೊಳಿಸುತ್ತಿಲ್ಲ. ನಾನು ಹೇಳಿದುದು ಅಯುಕ್ತವೆನಿಸಿದರೆ ನನ್ನನ್ನು ದಯವಿಟ್ಟು ಕ್ಷಮಿಸಿಬಿಡು ತಾಯಿ!”
ಚಿತ್ರಕೇತುವು ಹೀಗೆ ಹೇಳಿ ಶಿವಪಾರ್ವತಿಯರನ್ನು ಪ್ರಸನ್ನಗೊಳಿಸಿದನು. ಶಾಪದಿಂದ ಅವನೇನು ಹೆದರದುದನ್ನು ಕಂಡು ಅವರು ಮುಗುಳ್ನಕ್ಕರು. ಆಗ ಅವನು ತನ್ನ ವಿಮಾನವನ್ನೇರಿ ಹೊರಟುಹೋದನು.
ಅನಂತರ ಶಿವನು ಎಲ್ಲರೂ ಕೇಳುವಂತೆಯೇ ಪಾರ್ವತಿಗೆ ಹೇಳಿದನು, “ದೇವಿ! ಹರಿದಾಸರ ಮಹಿಮೆಯನ್ನು ನೋಡಿದೆಯಲ್ಲವೇ? ಹರಿಯ ಭಕ್ತರ ದಾಸರಾದ ಅವರು ಯಾವುದರಲ್ಲೂ ಆಸೆಯಿರಿಸಿಕೊಳ್ಳದ ಮಹಾತ್ಮರು! ಸದಾಕಾಲವೂ ನಾರಾಯಣನನ್ನು ಧ್ಯಾನಿಸುವ ಅವರು ಯಾವುದಕ್ಕೂ ಹೆದರುವುದಿಲ್ಲ. ಅವರು ಸ್ವರ್ಗ, ನರಕ, ಮತ್ತು ಮೋಕ್ಷಗಳನ್ನೂ ಸಮವಾಗಿಯೇ ಕಾಣುತ್ತಾರೆ! ಆ ಭಗವಂತನ ಮಾಯೆಯಿಂದ, ದೇಹಗತರಾಗಿರುವ ಜೀವಿಗಳಿಗೆ ಸುಖ, ದುಃಖ, ಜನನ, ಮರಣ, ಶಾಪ, ಅನುಗ್ರಹ ಮೊದಲಾದ ದ್ವಂದ್ವಗಳು ಕಾಣುತ್ತವೆ. ಪುಷ್ಪಮಾಲೆಯನ್ನು ಸರ್ಪವೆಂದು ಭ್ರಮಿಸುವಂತೆ, ಆತ್ಮನಲ್ಲಿ ಗುಣದೋಷಗಳ ಭೇದ ಕಾಣುತ್ತದೆ. ಶ್ರೀಕೃಷ್ಣನಲ್ಲಿ ಭಕ್ತಿಯಿರಿಸುವವರಿಗೆ ಜ್ಞಾನ, ವೈರಾಗ್ಯಗಳೂ ಉಂಟಾಗಿ, ಈ ಪ್ರಪಂಚದ ಸುಖ,ದುಃಖಗಳೆಂಬ ಭ್ರಮೆಯಲ್ಲಿ ಅವರು ಸಿಲುಕುವುದಿಲ್ಲ.
“ದೇವಿ! ನಾನಾಗಲೀ, ಬ್ರಹ್ಮದೇವನಾಗಲೀ, ನಾರದರಾಗಲೀ, ಸನಕಾದಿ ಕುಮಾರರಾಗಲೀ, ಬ್ರಹ್ಮಮಾನಸಪುತ್ರರಾದ ಮಹಾಮುನಿಗಳಾಗಲೀ, ದೇವತೆಗಳಾಗಲೀ, ಆ ದೇವೋತ್ತಮ ಪರಮಪುರುಷನ ಲೀಲೆಗಳನ್ನು ಅರಿಯಲಾರೆವು! ಅವನ ಅಂಶಗಳಾದ ನಾವು, ನಮ್ಮನ್ನೇ ಅವನಿಂದ ಸ್ವತಂತ್ರರಾದ ಈಶ್ವರರೆಂದು ಭಾವಿಸಿ ಅವನ ಸ್ವರೂಪವನ್ನು ತಿಳಿಯುವುದಿಲ್ಲ! ಆ ಪುರುಷೋತ್ತಮನಾದ ಶ್ರೀಹರಿಗೆ ಪ್ರಿಯರಾಗಲೀ ಅಪ್ರಿಯರಾಗಲೀ ಯಾರೂ ಇಲ್ಲ; ತನ್ನವರು, ಪರರು ಎಂಬ ಭೇದವೂ ಇಲ್ಲ. ಎಲ್ಲಾ ಜೀವಿಗಳ ಅಂತರಾತ್ಮನಾಗಿರುವ ಅವನು ಎಲ್ಲಾ ಜೀವಿಗಳಿಗೂ ಪ್ರಿಯನೇ ಆಗಿದ್ದಾನೆ.
“ದೇವಿ! ಈ ಚಿತ್ರಕೇತುವಾದರೋ, ಭಗವಂತನಿಗೆ ಪ್ರಿಯನಾದ ಮಹಾಭಕ್ತ! ಎಲ್ಲೆಲ್ಲೂ ಸಮದೃಷ್ಟಿಯಿರಿಸಿರುವ ಶಾಂತಚಿತ್ತ! ಅಂತೆಯೇ ನಾನೂ ಶ್ರೀಮನ್ನಾರಾಯಣನಿಗೆ ಪ್ರಿಯನಾದವನು! ಆದ್ದರಿಂದ ಇಂಥ ಮಹಾಭಕ್ತರ ಕೆಲವು ಕಾರ್ಯಗಳಿಂದ ಆಶ್ಚರ್ಯಪಡಬೇಕಾದ್ದೇನಿಲ್ಲ! ಸಮದರ್ಶಿಗಳೂ ಶಾಂತಚಿತ್ತರೂ ಆದ ಅವರು ಒಮ್ಮೊಮ್ಮೆ ಹೀಗೆ ಮಾತನಾಡುತ್ತಾರೆ ಅಷ್ಟೆ! ನೋಡು, ನೀನು ಶಾಪವಿತ್ತರೂ ಕೋಪಗೊಳ್ಳದೇ ಸಮಾಧಾನಚಿತ್ತದಿಂದ ಅದನ್ನು ಸ್ವೀಕರಿಸಿದ!”
ಭಗವಾನ್ ಶಿವನು ಹೀಗೆ ಹೇಳಲು, ಉಮಾದೇವಿಯು ಕೋಪ ವಿಸ್ಮಯದೂರಳಾಗಿ ಶಾಂತಳಾದಳು.
* * *
ಮಹಾಭಕ್ತನಾದ ಚಿತ್ರಕೇತುವು ಭಗವಂತನ ದರ್ಶನವನ್ನೇ ಮಾಡಿದ ಪುಣ್ಯಾತ್ಮನು. ಆದರೆ ಒಂದು ಸಣ್ಣ ತಪ್ಪಿನಿಂದ ಪಾರ್ವತಿಯ ಶಾಪಕ್ಕೆ ಗುರಿಯಾದನು. ಅವನು ದೇವಿಗೂ ಪ್ರತಿಶಾಪ ಕೊಡಲು ಶಕ್ತನಾಗಿದ್ದರೂ ಹಾಗೆ ಮಾಡದೇ ಸಾಧುಸಜ್ಜನಿಕೆಯನ್ನು ತೋರಿದನು. ಅವನೇ ತ್ವಷ್ಟೃವಿನ ಯಾಗಾಗ್ನಿಯಿಂದ ವೃತ್ರಾಸುರನಾಗಿ ಹುಟ್ಟಿದನು. ಆದರೆ ಆ ರಾಕ್ಷಸ ಜನ್ಮದಲ್ಲೂ ಭಗವದ್ಭಕ್ತಿಯಿಂದ ಯುಕ್ತನಾಗಿದ್ದು, ಆ ಜನ್ಮ ಕಳೆಯಲು ಮುಕ್ತನಾದನು.
ಭಗವದ್ಭಕ್ತಿಯಿಂದ ಕೂಡಿರುವ ಈ ಚಿತ್ರಕೇತುವಿನ ಕಥೆಯನ್ನು ಭಕ್ತರಿಂದ ಕೇಳಿದರೆ, ಕೇಳುಗರು ಸಂಸಾರಬಂಧನದಿಂದ ಮುಕ್ತರಾಗುತ್ತಾರೆ. ಪ್ರಾತಃಕಾಲದಲ್ಲಿ ಎದ್ದು ಹರಿಸ್ಮರಣೆ ಮಾಡುತ್ತಾ ಯಾರು ಈ ಇತಿಹಾಸವನ್ನು ಪಠಿಸುವರೋ ಅವರು ಪರಮಗತಿಯನ್ನು ಪಡೆಯುತ್ತಾರೆ.