ಸಿಹಿ ಗೆಣಸೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಇದು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಸಿಹಿ ಗೆಣಸನ್ನು ಖಾರವಾಗಿಯೂ ಮಾಡಿ ತಿನ್ನಬಹುದು, ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಸಿಹಿ ಗೆಣಸಿನ ಪಲ್ಯ

ಬೇಕಾಗುವ ಪದಾರ್ಥಗಳು :
ದೊಡ್ಡ ಗಾತ್ರದ ಗೆಣಸು – 1
ಅಚ್ಚ ಖಾರದ ಪುಡಿ – 1 1/2 ಚಮಚ
ಹಸಿ ತೆಂಗಿನ ತುರಿ – 1/2 ಕಪ್
ಅರಿಶಿನ – ಚಿಟಿಕೆ
ಸಾಸಿವೆ – 1/2 ಚಮಚ
ಉದ್ದಿನ ಬೇಳೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 3 ಚಮಚ
ಮಾಡುವ ವಿಧಾನ: ಮೊದಲು ಗೆಣಸನ್ನು ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಂದು ಬಾಣಲೆಯಲ್ಲಿ ಮೂರು ಚಮಚ ಎಣ್ಣೆ ಹಾಕಿ ಬಿಸಿಮಾಡಿ. ಕಾದ ಎಣ್ಣೆಗೆ ಸಾಸಿವೆ, ಉದ್ದಿನಬೇಳೆ ಹಾಕಿ ಬಾಡಿಸಿ. ಅನಂತರ ಇದಕ್ಕೆ ಹೆಚ್ಚಿದ ಗೆಣಸು, ಅಚ್ಚ ಖಾರದ ಪುಡಿ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಅರ್ಧ ಕಪ್ ನೀರು ಹಾಕಿ ಮುಚ್ಚಿಟ್ಟು ಬೇಯಿಸಿ. ಇದು ಬೆಂದ ಅನಂತರ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ಕೆಳಗಿಳಿಸಿ. ಊಟದ ಜೊತೆ ಗೆಣಸಿನ ಪಲ್ಯ ರುಚಿಯಾಗಿರುತ್ತದೆ.
ಗೆಣಸಿನ ಬಜ್ಜಿ

ಬೇಕಾಗುವ ಪದಾರ್ಥಗಳು :
ಗೆಣಸು – 1
ಕಡಲೆ ಹಿಟ್ಟು – 1 ಕಪ್
ಅಚ್ಚ ಖಾರದ ಪುಡಿ – 1 ಚಮಚ
ಇಂಗು – 2 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ : ಗೆಣಸನ್ನು ತೊಳೆದು ಬೇಕಾದ ಆಕಾರಕ್ಕೆ ತೆಳ್ಳಗೆ ಕತ್ತರಿಸಿ. ಕಡಲೆ ಹಿಟ್ಟಿಗೆ, ಉಪ್ಪು, ಇಂಗು, ಅಚ್ಚ ಖಾರದ ಪುಡಿ, ನೀರು ಹಾಕಿ ದೋಸೆ ಹಿಟ್ಟಿನಂತೆ ಕಲಸಿ. ಎಣ್ಣೆಯನ್ನು ಕಾಯಲು ಇಡಿ. ಎಣ್ಣೆ ಕಾದ ಅನಂತರ ಕತ್ತರಿಸಿದ ಗೆಣಸಿನ ಹೋಳುಗಳನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಎರಡೂ ಕಡೆಯೂ ಕೆಂಪಗಾದ ಅನಂತರ ತೆಗೆದರೆ ಬಿಸಿ ಬಿಸಿಯಾದ ಗೆಣಸಿನ ಬಜ್ಜಿ ತಿನ್ನಲು ಸಿದ್ಧ.
ಗೆಣಸು – ಪಾಲಕ್ ಫ್ರೈ

ಬೇಕಾಗುವ ಪದಾರ್ಥಗಳು :
ಗೆಣಸು – 2
ಪಾಲಕ್ ಸೊಪ್ಪು – 2 ಕಟ್ಟು
ಹಸಿಮೆಣಸಿನಕಾಯಿ – 3
ಗರಂ ಮಸಾಲ – 1/2 ಚಮಚ
ಅಚ್ಚ ಖಾರದ ಪುಡಿ -1/2 ಚಮಚ
ಆಮ್ಚೂರ್ ಪೌಡರ್ – 1/4 ಚಮಚ
ಸಾಸಿವೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬೆಣ್ಣೆ – 2 ಚಮಚ
ಮಾಡುವ ವಿಧಾನ : ಮೊದಲು ಗೆಣಸನ್ನು ತೊಳೆದು ಸಣ್ಣದಾಗಿ ಕತ್ತರಿಸಿ ಉಪ್ಪು ಹಾಕಿ ನೀರಿನಲ್ಲಿ ಸ್ವಲ್ಪವೇ ಬೇಯಿಸಿ. ಒಂದು ಬಾಣಲೆಯಲ್ಲಿ ಬೆಣ್ಣೆ ಹಾಕಿ ಕಾಯಿಸಿ. ಕಾದ ಬೆಣ್ಣೆಗೆ ಸಾಸಿವೆ ಹಾಕಿ ಅನಂತರ ಇದಕ್ಕೆ ತೊಳೆದು ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪನ್ನು ಹಾಕಿ ಬಾಡಿಸಿ. ಇದಕ್ಕೆ ಬೇಯಿಸಿದ ಗೆಣಸನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಪಾಲಕ್ ಸೊಪ್ಪಿನ ಬಣ್ಣ ಬದಲಾಗುವವರೆಗೂ ಸ್ವಲ್ಪ ನೀರಿನಲ್ಲಿ ಬೇಯಿಸಿ. ಅನಂತರ ಇದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಅಚ್ಚ ಖಾರದ ಪುಡಿ, ಗರಂ ಮಸಾಲ, ಆಮ್ಚೂರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿದರೆ ಸಿಹಿಗೆಣಸು ಪಾಲಕ್ ಸೊಪ್ಪಿನ ಫ್ರೈ ಸವಿಯಲು ಸಿದ್ಧ.
ಸಿಹಿ ಗೆಣಸಿನ ಹೋಳಿಗೆ

ಬೇಕಾಗುವ ಪದಾರ್ಥಗಳು :
ಬೇಯಿಸಿದ ಗೆಣಸು – 3
ಬೆಲ್ಲ – 1 1/2 ಕಪ್
ಮೈದಾ – 2 ಕಪ್
ಚಿರೋಟಿ ರವೆ – 2 ಚಮಚ
ಅರಿಶಿನ – 1 ಚಿಟಿಕೆ
ಉಪ್ಪು – 1 ಚಿಟಿಕೆ
ಏಲಕ್ಕಿ ಪುಡಿ – 1/2 ಚಮಚ
ಎಣ್ಣೆ – ಅಗತ್ಯವಿದ್ದಷ್ಟು
ಮಾಡುವ ವಿಧಾನ : ಮೊದಲು ಮೈದಾ, ಚಿರೋಟಿ ರವೆಗೆ ಚಿಟಿಕೆ ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿ ಕಲಸಿಟ್ಟುಕೊಳ್ಳಿ. ಕಲಸಿಕೊಂಡ ಹಿಟ್ಟಿನ ಮೇಲೆ ಎಣ್ಣೆಯನ್ನು ಹಾಕಿ ಎರಡು ಗಂಟೆ ನೆನೆಯಲು ಬಿಡಿ. ಗೆಣಸನ್ನು ತೊಳೆದು ಸ್ವಲ್ಪ ನೀರಿನಲ್ಲಿ ಬೇಯಿಸಿಕೊಳ್ಳಿ. ಅನಂತರ ಇದರ ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಿ. ಬೆಲ್ಲವನ್ನು ಪುಡಿಮಾಡಿ ಗೆಣಸಿನೊಂದಿಗೆ ಬೆರೆಸಿ ಮತ್ತೆ ಒಲೆಯ ಮೇಲೆ ಇಟ್ಟು ಬೇಯಿಸಿ. ಬೆಲ್ಲ ಮತ್ತು ಗೆಣಸಿನ ಹೂರಣ ತಯಾರಾದ ಮೇಲೆ ಒಲೆಯಿಂದ ಕೆಳಗಿಳಿಸಿ ಆರಲು ಬಿಡಿ. ಈಗ ಕಣಕವನ್ನು ಉಂಡೆಯಾಕಾರ ಮಾಡಿಕೊಂಡು ಕೈಯಿಂದ ತಟ್ಟಿ ಅದರಲ್ಲಿ ಹೂರಣವನ್ನು ತುಂಬಿ ಎಲ್ಲ ಕೊನೆಯಿಂದ ಮುಚ್ಚಿ. ಇದನ್ನು ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ಕಾದ ಹಂಚಿನ ಮೇಲೆ ಎಣ್ಣೆ ಹಾಕಿ ಬೇಯಿಸಿದರೆ ಗೆಣಸಿನ ಹೋಳಿಗೆ ಸವಿಯಲು ಸಿದ್ಧ. ಇದನ್ನು ಬಿಸಿಯಿರುವಾಗಲೇ ಬಳಸಿ.
ಗೆಣಸಿನ ಚಿಪ್ಸ್

ಬೇಕಾಗುವ ಪದಾರ್ಥಗಳು :
ಗೆಣಸು – ಅಗತ್ಯವಿದ್ದಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನ: ಗೆಣಸನ್ನು ತೊಳೆದು ಗುಂಡಗೆ ತೆಳುವಾಗಿ ಕತ್ತರಿಸಿ. ಎಣ್ಣೆಯನ್ನು ಕಾಯಲು ಇಡಿ. ಕಾದ ಎಣ್ಣೆಗೆ ಗೆಣಸನ್ನು ಹಾಕಿ ಸ್ವಲ್ಪ ಹೊತ್ತಿನ ಅನಂತರ ಉಪ್ಪು ಬೆರೆಸಿದ ನೀರನ್ನು ಚಿಮುಕಿಸಿ. ಕೆಂಪಗಾದಾಗ ತೆಗೆದರೆ ಗರಿ ಗರಿಯಾದ ಚಿಪ್ಸ್ ಸಿದ್ಧ. ಇದನ್ನು ಡಬ್ಬದಲ್ಲಿ ಹಾಕಿಟ್ಟರೆ ಎರಡು ವಾರವಾದರೂ ಕೆಡುವುದಿಲ್ಲ.






Leave a Reply