ಹಲ್ವಾವನ್ನು ಅನೇಕ ಮಿಶ್ರಣಗಳನ್ನು ಬಳಸಿ ನಾನಾ ವಿಧಗಳಲ್ಲಿ ತಯಾರಿಸುತ್ತಾರೆ. ಇದರಲ್ಲಿ `ಹಿಟ್ಟು’ ಬಳಸಿ ಮಾಡುವ ಹಲ್ವಾ ಒಂದು ಬಗೆಯಾದರೆ, ಇನ್ನೊಂದು ಬೀಜ, ತುಪ್ಪ, ತರಕಾರಿಗಳು ಮತ್ತು ಸಿಹಿ ಹಣ್ಣಿನ ರಸಗಳನ್ನು ಸೇರಿಸಿ ಮಾಡುತ್ತಾರೆ. ಬಾದಾಮಿ ಹಲ್ವಾ, ಹೆಸರುಬೇಳೆ ಹಲ್ವಾ, ಡ್ರೈಫ್ರೂಟ್ಸ್ ಹಲ್ವಾ, ಕ್ಯಾರೆಟ್ ಹಲ್ವಾ ಹೀಗೆ ಅನೇಕ ಬಗೆಯ ಹಲ್ವಾಗಳನ್ನು ಮಾಡುತ್ತಾರೆ. ಹಲ್ವಾವನ್ನು ದೇಶದಾದ್ಯಂತ ತಯಾರಿಸುತ್ತಾರೆಯಾದರೂ ಹಲವು ಕಡೆ ಹಲವು ರೀತಿಯಲ್ಲಿ ತಯಾರಿಸುತ್ತಾರೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಫ್ರೆಶ್ ಫ್ರೂಟ್ಸ್ ಹಲ್ವಾ

ಬೇಕಾಗುವ ಪದಾರ್ಥಗಳು :
ಬಾಳೆಹಣ್ಣಿನ ಚೂರುಗಳು – 1 ಕಪ್
ಸೇಬಿನ ಚೂರು – 1 ಕಪ್
ಕಿತ್ತಳೆ ಹಣ್ಣಿನ ತೊಳೆ – 1 ಕಪ್
ಹಸಿ ತೆಂಗಿನ ತುರಿ – 1 ಕಪ್
ಬಾದಾಮಿ ಪುಡಿ – 2 ಚಮಚ
ಸಕ್ಕರೆ – 1 1/2 ಕಪ್
ಗೋಡಂಬಿ ಚೂರು – 1 ಚಮಚ
ಒಣ ದ್ರಾಕ್ಷಿ – 1 ಚಮಚ
ಏಲಕ್ಕಿ ಪುಡಿ – 1/2 ಚಮಚ
ತುಪ್ಪ – 1/2 ಕಪ್
ಮಾಡುವ ವಿಧಾನ: ಮೊದಲು ಎಲ್ಲ ಹಣ್ಣುಗಳನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ. ಅದನ್ನೆಲ್ಲ ಮಿಕ್ಸಿಯಲ್ಲಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ. ಅನಂತರ ಹಸಿ ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದನ್ನೆಲ್ಲ ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಇದಕ್ಕೆ ಸಕ್ಕರೆ, ತುಪ್ಪ, ಏಲಕ್ಕಿಪುಡಿ, ಬಾದಾಮಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅನಂತರ ಇದನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಕೆದಕುತ್ತಿರಿ. ಇದು ಹಲ್ವಾ ಹದಕ್ಕೆ ಬಂದ ಅನಂತರ ಒಲೆಯಿಂದ ಇಳಿಸಿ. ಒಂದು ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಹಲ್ವಾವನ್ನು ಹಾಕಿ ಮೇಲೆ ದ್ರಾಕ್ಷಿ, ಗೋಡಂಬಿಯಿಂದ ಅಲಂಕರಿಸಿದರೆ ಫ್ರೆಶ್ ಫ್ರೂಟ್ಸ್ ಹಲ್ವಾ ಸವಿಯಲು ಸಿದ್ಧ.
ಕ್ಯಾರೆಟ್ ಹಲ್ವಾ

ಬೇಕಾಗುವ ಪದಾರ್ಥಗಳು :
ಕ್ಯಾರೆಟ್ ತುರಿ – 2 ಕಪ್
ಸಕ್ಕರೆ – 1 ಕಪ್
ಹಾಲು – 2 ಕಪ್
ಖೋವಾ – 1/2 ಕಪ್
ಗೋಡಂಬಿ – 15
ಏಲಕ್ಕಿಪುಡಿ – 1/2 ಚಮಚ
ತುಪ್ಪ – 5 ಚಮಚ
ಮಾಡುವ ವಿಧಾನ : ತಾಜಾ ಕ್ಯಾರೆಟ್ ಅನ್ನು ಸಿಪ್ಪೆ ತೆಗೆದು ತುರಿದುಕೊಳ್ಳಿ. ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಗೆ ತುರಿದ ಕ್ಯಾರೆಟ್ ಮತ್ತು ಹಾಲನ್ನು ಹಾಕಿ ಬೇಯಲು ಇಡಿ. ಕ್ಯಾರೆಟ್ ಹಾಲಿನಲ್ಲೇ ಬೆಂದರೆ ಹಲ್ವಾ ತಿನ್ನಲು ತುಂಬ ರುಚಿಯಾಗಿರುತ್ತದೆ. ಬೆಂದ ಕ್ಯಾರೆಟ್‌ಗೆ ಏಲಕ್ಕಿಪುಡಿ, ಸಕ್ಕರೆ ಹಾಕಿ ಕೈಯಾಡಿಸುತ್ತಿರಿ. ಅನಂತರ ಖೋವಾ ಮತ್ತು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಐದು ನಿಮಿಷದ ಅನಂತರ ಒಲೆಯಿಂದ ಕೆಳಗಿಳಿಸಿ. ಗೋಡಂಬಿಯಿಂದ ಅಲಂಕರಿಸಿ.
ಡ್ರೈಫ್ರೂಟ್ಸ್ ಹಲ್ವಾ

ಬೇಕಾಗುವ ಪದಾರ್ಥಗಳು :
ಒಣ ಖರ್ಜೂರ – 1/2 ಕಪ್
ಬಾದಾಮಿ – 1 ಕಪ್
ಗೋಡಂಬಿ – 1 ಕಪ್
ಒಣದ್ರಾಕ್ಷಿ – 1/2 ಕಪ್
ಹಾಲು – 2 ಕಪ್
ತುಪ್ಪ – 1/2 ಕಪ್
ಸಕ್ಕರೆ – 1 1/2 ಕಪ್
ರೋಸ್ ಎಸೆನ್ಸ್ – 1 ಚಮಚ
ಮೈದಾ – 2 ಚಮಚ
ಮಾಡುವ ವಿಧಾನ : ಒಂದು ಬಟ್ಟಲಿನಲ್ಲಿ ಹಾಲು ಹಾಕಿ ಅದರಲ್ಲಿ ಒಣ ಖರ್ಜೂರವನ್ನು 4 ಗಂಟೆಗಳ ಕಾಲ ನೆನೆಸಿಡಿ. ಬಾದಾಮಿ ಮತ್ತು ಗೋಡಂಬಿಯನ್ನು ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ. ನೆನೆದ ಒಣ ಖರ್ಜೂರವನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬಾದಾಮಿ, ಗೋಡಂಬಿ, ದ್ರಾಕ್ಷಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಹಾಲು, ಸಕ್ಕರೆ ಹಾಕಿ ಕಾಯಲು ಇಡಿ. ಹಾಲು ಕಾಯುತ್ತಿದ್ದಂತೆ ಇದಕ್ಕೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಅನಂತರ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕುತ್ತಾ ಕೈಯಾಡಿಸುತ್ತಿರಿ. ಇದಕ್ಕೆ ಮೈದಾ ಮತ್ತು ರೋಸ್ ಎಸೆನ್ಸ್ ಹಾಕಿ ಬೇಯಿಸಿ. ಇದು ಬೆಂದು ಗಟ್ಟಿಯಾಗುತ್ತಿದ್ದಂತೆ ಒಲೆಯಿಂದ ಇಳಿಸಿ. ಬಿಸಿಯಿರುವಾಗಲೇ ತಿನ್ನಲು ಬಳಸಿ.
ಸೇಬಿನ ಹಲ್ವಾ

ಬೇಕಾಗುವ ಪದಾರ್ಥಗಳು :
ಸೇಬಿನ ಚೂರುಗಳು – 3 ಕಪ್
ಬೆಲ್ಲದ ಪುಡಿ – 2 ಕಪ್
ಚಿರೋಟಿ ರವೆ – 1/2 ಕಪ್
ಹಾಲು – 1 ಕಪ್
ಏಲಕ್ಕಿಪುಡಿ – 1 ಚಮಚ
ಗೋಡಂಬಿ ಚೂರು – 2 ಚಮಚ
ತುಪ್ಪ – 1/2 ಕಪ್
ಮಾಡುವ ವಿಧಾನ: ಕುದಿಯುತ್ತಿರುವ ನೀರಿಗೆ ಕತ್ತರಿಸಿದ ಸೇಬನ್ನು ಹಾಕಿ ಬೇಯಿಸಿ. ಬೆಂದ ಸೇಬಿನಿಂದ ನೀರಿನ ಅಂಶವನ್ನೆಲ್ಲಾ ತೆಗೆದು ಚೆನ್ನಾಗಿ ಮಸೆದುಕೊಳ್ಳಿ. ರವೆಯನ್ನು ಸ್ವಲ್ಪ ಹುರಿದುಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಪಾಕವನ್ನು ತಯಾರಿಸಿ. ಇದಕ್ಕೆ ಹುರಿದ ರವೆ, ಹಾಲು, ಏಲಕ್ಕಿ ಪುಡಿಯನ್ನು ಹಾಕಿ ಬೇಯಿಸಿ. ಅನಂತರ ಮಸೆದ ಸೇಬನ್ನು ಹಾಕಿ, ಹಲ್ವಾ ಪಾತ್ರೆಯ ಅಂಚು ಬಿಡುತ್ತಿರುವಾಗ ಅದಕ್ಕೆ ತುಪ್ಪ ಮತ್ತು ಗೋಡಂಬಿಯನ್ನು ಸೇರಿಸಿ ಮಿಕ್ಸ್ ಮಾಡಿ. ಅನಂತರ ಒಂದು ಪ್ಲೇಟ್‌ಗೆ ಸ್ವಲ್ಪ ತುಪ್ಪ ಸವರಿ ಅದಕ್ಕೆ ತಯಾರಾದ ಹಲ್ವಾವನ್ನು ಹಾಕಿ. ಆರಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.
ಕಾಶಿ ಹಲ್ವಾ

ಬೇಕಾಗುವ ಪದಾರ್ಥಗಳು :
ಬೂದು ಕುಂಬಳ ಕಾಯಿ ತುರಿ – 3 ಕಪ್
ಹಾಲು – 2 ಕಪ್
ಸಕ್ಕರೆ – 2 ಕಪ್
ಖೋವಾ – 1 ಕಪ್
ಗೋಡಂಬಿ ಚೂರು – 2 ಚಮಚ
ಒಣ ದ್ರಾಕ್ಷಿ – 1 ಚಮಚ
ಏಲಕ್ಕಿ ಪುಡಿ – 1 ಚಮಚ
ಕೇಸರಿ ದಳ – 10
ತುಪ್ಪ – 8 ಚಮಚ
ಮಾಡುವ ವಿಧಾನ: ಮೊದಲು ಬೂದುಕುಂಬಳಕಾಯಿಯ ಸಿಪ್ಪೆ ಮತ್ತು ತಿರುಳನ್ನು ತೆಗೆದು ತುರಿದುಕೊಳ್ಳಿ. ನೀರನ್ನು ಹಿಂಡಿ ತೆಗೆಯಿರಿ. ಇದನ್ನು ಹಾಲಿನಲ್ಲಿ ಬೇಯಿಸಿ. ಇದು ಬೆಂದ ಮೇಲೆ ಸಕ್ಕರೆ, ಖೋವಾ ಹಾಕಿ ಕೈಯಾಡಿಸುತ್ತಿರಿ. ಇಲ್ಲದಿದ್ದರೆ ತಳ ಹಿಡಿಯುತ್ತದೆ. ಕೊನೆಯದಾಗಿ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಏಲಕ್ಕಿಪುಡಿ, ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಕುಂಬಳ ಕಾಯಿ ಹಲ್ವಾ ಸವಿಯಲು ಸಿದ್ಧ.






Leave a Reply