ಪುರುಷೋತ್ತಮ ರಾಜನ ಕಥೆ

ಶ್ರೀ ಜಗನ್ನಾಥನ ಲೀಲೆಗಳು, ಭಾಗ-2

ಒಂದಾನೊಂದು ಕಾಲದಲ್ಲಿ ಒರಿಸ್ಸಾ ಪ್ರಾಂತ್ಯದಲ್ಲಿ ಗಂಗರಾಜ ವಂಶದ ಪರುಷೋತ್ತಮದೇವ ಎಂಬ ರಾಜನು ಆಳ್ವಿಕೆ ನಡೆಸುತ್ತಿದ್ದನು. ಅವನು ಭಗವಾನ್ ಜಗನ್ನಾಥನ ಅಪ್ರತಿಮ ಭಕ್ತನೂ, ಮಹಾಧರ್ಮಭೀರುವೂ ಆಗಿದ್ದು, ಪ್ರಜಾವತ್ಸಲನಾಗಿ ರಾಜ್ಯಭಾರ ನಡೆಸುತ್ತಿದ್ದನು.

ಪ್ರತಿವರ್ಷ ರಥಯಾತ್ರೆಯ ಸಂದರ್ಭದಲ್ಲಿ ರಾಜನು ಸ್ವತಃ ತಾನೇ ರಥಬೀದಿಯನ್ನು ಗುಡಿಸಿ ಸ್ವಚ್ಛಗೊಳಿಸುವ ಮೂಲಕ ಭಗವಂತನಿಗೆ ವೈಯಕ್ತಿಕ ಸೇವೆ ಸಲ್ಲಿಸುತ್ತಿದ್ದನು. ಅವನು ಭಗವಂತನೇ ಎಲ್ಲದರ ನಿರ್ವಾಹಕನೆಂದೂ ತಾನು ಆಳುತ್ತಿರುವ ರಾಜ್ಯದ ನೈಜ ಒಡೆಯನೂ ಭಗವಂತನೇ ಎಂದೂ ಚೆನ್ನಾಗಿ ಅರಿತಿದ್ದನು ಮತ್ತು ತನ್ನನ್ನು ತಾನು ಒಬ್ಬಸೇವಕನೆಂದು ಪರಿಗಣಿಸಿದ್ದನು.

ಪುರುಷೋತ್ತಮ ರಾಜನು ಒಮ್ಮೆ ದಕ್ಷಿಣಭಾರತ ಪ್ರವಾಸ ಕೈಗೊಂಡನು. ಹೀಗೆ ಸಾಗುತ್ತಾ ಅವನು ಕಂಚೀಪುರಿಯನ್ನು ತಲಪಿದನು. ನಗರದ ಉದ್ಯಾನವನವೊಂದರಲ್ಲಿ ತನ್ನ ಪರಿವಾರದೊಂದಿಗೆ ಬಿಡಾರ ಹೂಡಿದನು. ಈ ಉದ್ಯಾನವನಕ್ಕೆ ಆಗಮಿಸಿದ್ದ ಕಂಚಿ ರಾಜಕುಮಾರಿ ಪದ್ಮಾವತಿಯೊಡನೆ ಆಕಸ್ಮಿಕ ಭೇಟಿ ನಡೆಯಿತು.

ಪುರುಷೋತ್ತಮ ರಾಜ ಹಾಗೂ ಪದ್ಮಾವತಿಯರು ಪರಸ್ಪರ ಇಷ್ಟಪಟ್ಟರು. ಇದಾದ ಸ್ವಲ್ಪ ಸಮಯದಲ್ಲಿಯೇ ಪುರುಷೋತ್ತಮನಿಗೆ ಕಂಚಿಯ ಅರಸನಿಂದ ಆಹ್ವಾನ ಬಂದಿತು. ರಾಜರಾಣಿಯರಿಬ್ಬರೂ ಗಂಗ ಅರಸನನ್ನು ಕಂಡು ಮೆಚ್ಚಿದರು. ತಮ್ಮ ಪುತ್ರಿ ಪದ್ಮಾವತಿಯನ್ನು ಆತನಿಗೆ ಧಾರೆ ಎರೆದುಕೊಡುವ ಪ್ರಸ್ತಾವ ಆತನ ಮುಂದಿಟ್ಟರು. ಪುರುಷೋತ್ತಮ ರಾಜನಿಗೆ ಇದರಿಂದ ಬಹಳ ಆನಂದವಾಯಿತು. ಅವನು ಮನಃಪೂರ್ವಕವಾಗಿ ಮದುವೆಗೆ ಸಮ್ಮತಿಸಿ, ತನ್ನ ರಾಜ್ಯ ಒರಿಸ್ಸಾಗೆ ಹಿಂದಿರುಗಿದನು.

ಕೆಲ ಕಾಲಾನಂತರ ಕಂಚೀರಾಜನ ಮಂತ್ರಿಯು ತನ್ನ ರಾಜನಿಂದ ಕಳಿಸಲ್ಪಟ್ಟಿದ್ದ ಔಪಚಾರಿಕ ವಿವಾಹ ಪ್ರಸ್ತಾವವನ್ನು ಒರಿಸ್ಸಾಗೆ ಕೊಂಡೊಯ್ದನು. ಪುರುಷೋತ್ತಮ ರಾಜನು ಆತನನ್ನು ಅತ್ಯಂತ ಆದರಪೂರ್ವಕವಾಗಿ ಸ್ವಾಗತಿಸಿ, ಸತ್ಕರಿಸಿದನು.

ಕಂಚೀನಗರದ ಮಂತ್ರಿಯು ಬರುವ ಸಂದರ್ಭದಲ್ಲಿ ರಥಯಾತ್ರೆಯ ಸಿದ್ಧತೆಗಳು ನಡೆಯುತ್ತಿದ್ದವು. ತನ್ನ ಅತ್ಯಂತ ಪ್ರೀತಿಯ ಈ ಉತ್ಸವದ ಕಾರಣದಿಂದ ರಾಜನ ಹರ್ಷ ಪಾರು ಮೀರಿತ್ತು. ಇದೀಗ ಮಂತ್ರಿಯು ತಂದ ವಿವಾಹ ಪ್ರಸ್ತಾವ ಅವನ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿತು.

ಇನ್ನೇನು ಜಗತ್ಪ್ರಸಿದ್ದ ರಥಯಾತ್ರೆಯ ದಿನ ಸಮೀಪದಲ್ಲೇ ಇತ್ತು. ರಾಜನು ಕಂಚೀಪುರದ ಮಂತ್ರಿಗೆ ತನ್ನ ರಾಜ್ಯದಲ್ಲೇ ಕೆಲದಿನಗಳ ಮಟ್ಟಿಗೆ ಉಳಿದು, ರಥಯಾತ್ರೆಯನ್ನು ಪೂರೈಸಿಕೊಂಡು ಹೋಗಬೇಕೆಂದು ಕೋರಿದನು. ಈ ಆಹ್ವಾನವು ಮಂತ್ರಿಗೆ ಹಿತಕರವೇ ಆಗಿತ್ತು. ಆತನು ಅದಕ್ಕೆ ಸಮ್ಮತಿಸಿ, ಕಾತರನಾಗಿ ರಥಯಾತ್ರೆಯ ದಿನಕ್ಕಾಗಿ ಕಾಯುತ್ತ ಉಳಿದನು.

ಮಂಗಳಕರವಾದ ಆದಿನ ಬಂದಿತು. ಇಡಿಯ ಪುರಿ ಪಟ್ಟಣವೆ ರಥಯಾತ್ರೆಗಾಗಿ ಅಲಂಕೃತವಾಗಿ ನಿಂತಿತ್ತು. ಅಲ್ಲಿನ ನಿವಾಸಿಗಳ ಮನೆ ಬರಿದಾಗಿ, ಜನರೆಲ್ಲ ರಥಬೀದಿಯಲ್ಲಿ ನೆರೆದಿದ್ದರು. ವಿವಿಧ ಸ್ಥಳಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಒಟ್ಟಿನಲ್ಲಿ ಪುರಿಕ್ಷೇತ್ರವು ಜನ ಪ್ರವಾಹಕ್ಕೆ ಒಳಗಾದಂತೆ ತೋರುತ್ತಿತ್ತು!

ಕಂಚೀಪುರದ ಮಂತ್ರಿಯು ಈ ವೈಭವವನ್ನು ಕಣ್ತುಂಬಿಕೊಳ್ಳುತ್ತ ರಥಬೀದಿಗೆ ಆಗಮಿಸಿದನು. ಅದಾಗಲೇ ಬಲಭದ್ರ, ಜಗನ್ನಾಥ, ಸುಭದ್ರಾದೇವಿಯರು ರಥವನ್ನೇರಿದ್ದರು. ಅದನ್ನು ಕಂಡು ಸಂಭ್ರಮಪಡುತ್ತಿದ್ದಾಗಲೇ, ಅರೆ! ಏನದು? ಗಂಗರಸ ಪುರುಷೋತ್ತಮರಾಜನು ಸ್ವತಃ ಬೀದಿಯನ್ನು ಗುಡಿಸಲು ನಿಂತಿರುವನು!

ಅವನದನ್ನು ಭಗವಂತನ ಸೇವೆಯೆಂದೇ ಮಾಡುತ್ತಿರಬಹುದು. ಆದರೂ ಒಬ್ಬ ರಾಜನಿಗೆ ತೋಲಿಯಂತೆ ಕಸಗುಡಿಸುವ ಕೆಲಸ ತಕ್ಕನಾದುದೆ? ಮಂತ್ರಿಗೆ ಕಸಿವಿಸಿಯೆನಿಸಿತು. ಇತ್ತ ರಾಜನಾದರೋ ಸಂತೋಷದಿಂದ ರಥ ಸಾಗುವ ಬೀದಿಯನ್ನು ಗುಡಿಸುತ್ತ ನಡೆದನು. ಇದನ್ನು ನೋಡಿದ ಮಂತ್ರಿಗೆ ರಾಜನ ವರ್ತನೆಯು ಅವಮಾನಕರವಾಗಿ ತೋರಿತು.

ತೋಟಿಗನ ಹಾಗೆ ಕಸಗುಡಿಸುವ, ಚಾಂಡಾಲ ವರ್ತನೆಯ ರಾಜನಿಗೆ ಕಂಚಿಪುರದ ರಾಜಕುಮಾರಿಯನ್ನು ವಿವಾಹ ಮಾಡಿಕೊಡುವುದು ತನ್ನ ರಾಜ್ಯದ ಘನತೆಗೆ ತಕ್ಕುದಲ್ಲವೆಂದು ಅವನು ಭಾವಿಸಿದನು. ಪುರುಷೋತ್ತಮ ರಾಜನಿಗೆ ತಿಳಿಸದೆಯೇ ಆ ದಿನವೇ ಅಲ್ಲಿಂದ ಹೊರಟು, ಮರಳಿ ಕಂಚೀನಗರಿಯನ್ನು ಸೇರಿದನು.

ಕಂಚೀಪುರದ ರಾಜರಾಣಿಯರು ಮಂತ್ರಿಯ ಮಾತು ಕೇಳಿ ಚಿಂತಿತರಾದರು. ಪುರುಷೋತ್ತಮ ರಾಜನ ದೈನ್ಯ, ಭಗವದ್ಭಕ್ತಿಗಳು ಅವರ ಗ್ರಹಿಕೆಗೆ ನಿಲುಕಲಿಲ್ಲ. ಮಂತ್ರಿಯು “ಚಾಂಡಾಲನಂತೆ ಕಸಗುಡಿಸುವ ರಾಜನಿಗೆ ತಮ್ಮ ಮಗಳನ್ನು ಕೊಡಲಾದೀತೇ?’ ಎಂದು ಕೇಳಿದ ಪ್ರಶ್ನೆಯಷ್ಟೆ ಅವರ ಮನಸ್ಸಿಗೆ ನಾಟಿತ್ತು.

ಅವರು ಆ ಕೂಡಲೇ ತಮ್ಮ ಪುತ್ರಿಯೊಂದಿಗಿನ ವಿವಾಹ ಪ್ರಸ್ತಾವವನ್ನು ಹಿಂಪಡೆದು, ಪುರುಷೋತ್ತಮ ರಾಜನಿಗೆ ಓಲೆ ಕಳುಹಿಸಿದರು. ಇತ್ತ ಉತ್ಸವದ ಆನಂದದಲ್ಲಿ ಮೈಮರೆತಿದ್ದ ರಾಜನಿಗೆ ಇದರಿಂದ ಅತೀವ ಬೇಸರವು೦ಟಾಯಿತು. ಅವನು ಈ ತಿರಸ್ಕಾರಕ್ಕೆ ಕಾರಣವೇನೆಂದು ವಿಚಾರಿಸಲಾಗಿ, ತಾವು ಚಾಂಡಾಲ ವರ್ತನೆಯ ವ್ಯಕ್ತಿಯೊಬ್ಬನಿಗೆ ರಾಜಕುಮಾರಿಯನ್ನು ಧಾರೆಯೆರೆಯಲು ಸಿದ್ಧರಿಲ್ಲವೆಂಬ ಉತ್ತರ ದೊರೆಯಿತು.

ಈ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಕಂಚೀಪುರದ ರಾಜನು ತನ್ನ ಮಗಳ ವಿವಾಹ ಸ್ವಯಂವರವನ್ನು ಏರ್ಪಡಿಸಿದನು. ಈ ಸ್ವಯಂವರಕ್ಕೆ ಗಂಗರಸನ ಹೊರತಾಗಿ ಉಳಿದೆಲ್ಲ ರಾಜಕುಮಾರರನ್ನು ಆಹ್ವಾನಿಸಿದನು. ಇದು ಪದ್ಮಾವತಿಯ ವೇದನೆ ಹೆಚ್ಚುವಂತೆ ಮಾಡಿದ್ದಲ್ಲದೆ, ಪುರುಷೋತ್ತಮನಲ್ಲಿಯೂ ಆಕ್ರೋಶ ಮೂಡಿಸಿತು. ಅವನು ತನಗಾದ ಈ ಅವಮಾನಕ್ಕೆ ತಕ್ಕ ಸೇಡು ತೀರಿಸಿಕೊಳ್ಳದೆ ಇರಲಾರೆನೆಂದು ಶಪಥ ಮಾಡಿದನು. ಅದರಂತೆ ಕಂಚೀಪುರದ ಮೇಲೆ ದಂಡೆತ್ತಿ ಹೋದನು.

ದುರದೃಷ್ಟವಶಾತ್ ಪುರುಷೋತ್ತಮ ರಾಜನ ಸೇನಾ ಶಿಬಿರಕ್ಕೆ ಬೆಂಕಿ ತಗುಲಿ ಅವನು ರಣರಂಗದಿಂದ ಕಾಲ್ತೆಗೆಯಬೇಕಾಯಿತು. ಇದರಿಂದ ರಾಜನ ಅವಮಾನದ ಕ್ರೋಧಾಗ್ನಿಗೆ ಮತ್ತಷ್ಟು ತುಪ್ಪಸುರಿದಂತಾಯಿತು. ಯುದ್ಧಕ್ಕೆ ಮೊದಲು, ಇಬ್ಬರಲ್ಲಿ ಯಾವ ರಾಜನು ಗೆಲ್ಲುವನೋ ಅವನ ಪೂಜಾವೇದಿಕೆಯಲ್ಲಿ ಸೋತ ರಾಜನ ಇಷ್ಟದೇವತೆಯನ್ನು ಇರಿಸಬೇಕೆಂಬ ಕರಾರು ಹಾಕಲ್ಪಟ್ಟಿತ್ತು.

ಅದರಂತೆ ಕಂಚೀರಾಜನು ಸೋತರೆ, ಅವನ ಇಷ್ಟದೇವತೆ ಗಣೇಶ ವಿಗ್ರಹವನ್ನು ಜಗನ್ನಾಥನ ಪಾದದಡಿ ಇರಿಸಬೇಕೆಂದೂ, ಪುರುಷೋತ್ತಮ ಸೋತರೆ, ಅವನ ಇಷ್ಟದೇವತೆ ಜಗನ್ನಾಥನನ್ನು ಕಂಚಿಗೆ ತಂದಿರಿಸಬೇಕೆಂದೂ ಒಪ್ಪಂದವಾಗಿತ್ತು.

ಈಗ ಪುರುಷೋತ್ತಮ ರಾಜನಿಗೆ ಸೋಲಿನ ಪ್ರತಿಷ್ಠಾ ಭಂಗಕ್ಕಿಂತ, ಜಗನ್ನಾಥನನ್ನು ಬಿಟ್ಟುಕೊಡಬೇಕಾಗುವ ಖಿನ್ನತೆ ಆವರಿಸಿಬಿಟ್ಟಿತು. ಅವನು ದೀನನಾಗಿ ಜಗನ್ನಾಥನ ಪಾದಕ್ಕೆರಗಿ ತನ್ನನ್ನು ವಿಜಯಿಯಾಗಿಸುವಂತೆ, ತನ್ನ ಪಟ್ಟಣವನ್ನು ಬಿಟ್ಟು ಹೋಗದಂತೆ ಮೊರೆಯಿಟ್ಟನು. ಅಂದು ರಾತ್ರಿ ಜಗನ್ನಾಥ ಬಲಭದ್ರರು ರಾಜನ ಕನಸಿನಲ್ಲಿ ಬಂದು, ಯುದ್ಧವನ್ನು ಗೆಲ್ಲಿಸಿಕೊಡುವುದಾಗಿ ಅಭಯವಿತ್ತರು. ಅಷ್ಟೇ ಅಲ್ಲದೆ, ವೈಯಕ್ತಿಕವಾಗಿ ತಾವೇ ಯುದ್ಧದಲ್ಲಿ ಪಾಲ್ಗೊಳ್ಳುವುದಾಗಿ ವಾಗ್ದಾನ ನೀಡಿದರು.

ಮಾರನೇ ದಿನದ ಬೆಳಗು ಗಂಗರಸನ ಪಾಲಿಗೆ ವಿಶಿಷ್ಟವಾಗಿತ್ತು. ಕನಸಿನಲ್ಲಿ ಭಗವಂತನ ದರ್ಶನವಾದುದರಿಂದ ಅವನು ತೀವ್ರ ಉತ್ಸಾಹದಲ್ಲಿದ್ದನು. ಧೈರ್ಯ-ವಿಶ್ವಾಸಗಳಿಂದ ಕಂಚೀನಗರದತ್ತ ನಡೆಯುವಂತೆ ತನ್ನ ಸೇನೆಗೆ ಆದೇಶಿಸಿದನು. ಅದರಂತೆ ಯುದ್ಧ ತಯಾರಿ ಮಾಡಲಾಯಿತು.

ಇತ್ತ ಕೃಷ್ಣ ಬಲರಾಮರು ಕಪ್ಪು ಬಿಳಿ ಕುದುರೆಗಳನ್ನೇರಿ ಕಂಚಿಯತ್ತ ಹೊರಟರು. ಚಿಲ್ಕಾ ಸರೋವರವನ್ನು ಹಾದು ಹೋಗುವಾಗ ಅವರಿಗೆ ತೀವ್ರ ಬಾಯಾರಿಕೆಯೆನಿಸಿತು. ಅಲ್ಲಿ ಮಜ್ಜಿಗೆಯ ಮಡಿಕೆಯನ್ನು ಹೊತ್ತು ಸಾಗುತ್ತಿದ್ದ ವೃದ್ಧೆಯನ್ನು ಕಂಡು ಅವರಿಗೆ ಮಜ್ಜಿಗೆ ಕುಡಿಯುವ ಇಚ್ಛೆಯಾಯಿತು.

ಈ ಸಹೋದರರು ಕುದುರೆಯಿಂದಿಳಿದು ಆಕೆಯಿಂದ ಮಜ್ಜಿಗೆಯನ್ನು ಪಡೆದು ಮನಃತೃಪ್ತಿಯಾಗುವಂತೆ ಕುಡಿದರು. ಆದರೆ ಅದಕ್ಕೆ ಹಣ ನೀಡದೆ ಅವರು ಹೊರಟು ನಿಂತಾಗ ‘ಮಣಿಕಾ’ ಎಂಬ ಹೆಸರಿನ ಆ ವೃದ್ಧೆಯು ಅಳತೊಡಗಿದಳು. ಮಜ್ಜಿಗೆ ವ್ಯಾಪಾರದಿಂದಲೇ ಆಕೆ ತನ್ನ ಸಂಸಾರದ ದಿನದ ಅಗತ್ಯ ಪೂರೈಸಬೇಕಿತ್ತು.

ಅವಳು ಅದನ್ನೆಲ್ಲ ವಿವರಿಸಿ ಹೇಳಿದಾಗ ಕೃಷ್ಣ ಬಲರಾಮರು ಇಂಗಿತಜ್ಞರಾಗಿ ಪರಸ್ಪರ ನೋಡಿಕೊಂಡರು. ಅನಂತರ ಕೃಷ್ಣನು ತನ್ನ ಬೆರಳುಂಗುರವನ್ನು ಆಕೆಗೆ ನೀಡಿ, ‘ಸ್ವಲ್ಪ ಹೊತ್ತಿನಲ್ಲೇ ಗಂಗರಸ ಪುರುಷೋತ್ತಮ ರಾಜನು ಈ ಮಾರ್ಗದಲ್ಲಿ ಹಾದುಹೋಗುವನು. ಅವನಿಗೆ ಈ ಉಂಗುರ ನೀಡಿ, ಮಜ್ಜಿಗೆಯ ಹಣ ಪಡೆದುಕೋ’ ಎಂದು ಹೇಳಿದನು. ಇದಾದ ಅನಂತರ ಅವರಿಬ್ಬರು ಸಹೋದರರು ಕುದುರೆಯೇರಿ ಕಂಚಿಯತ್ತ ಧಾವಿಸಿದರು.

ವೃದ್ಧೆ ನಿರೀಕ್ಷಿಸುತ್ತಿದ್ದಂತೆ ರಾಜನು ಆ ಮಾರ್ಗವಾಗಿ ಬಂದನು. ಆಕೆಯು ತನ್ನಲ್ಲಿದ್ದ ಉಂಗುರವನ್ನು ನೀಡಿ, ನಡೆದ ಘಟನೆಯನ್ನು ವಿವರಿಸಿ, ಮಜ್ಜಿಗೆಯ ಹಣ ನೀಡುವಂತೆ ಕೋರಿದಳು. ಮಣಿಕಾ ನೀಡಿದ ಉಂಗುರವನ್ನು ನೋಡುತ್ತಿದ್ದಂತೆಯೇ ರಾಜನಿಗೆ ಅದು ಜಗನ್ನಾಥನ ವಜ್ರದುಂಗುರವೆಂದು ಗೊತ್ತಾಗಿಹೋಯಿತು.

ಕಪ್ಪು ಬಿಳಿ ಕುದುರೆಗಳ ಯುವ ಸವಾರರು ಬೇರಾರೂ ಆಗಿರದೆ ಕೃಷ್ಣ-ಬಲರಾಮರೇ ಎಂದು ಆಕೆಗೆ ಅವನು ತಿಳಿಸಿ ಹೇಳಿದನು. ಭಗವಂತನ ದರ್ಶನ ಭಾಗ್ಯ ಪಡೆದು, ಮಜ್ಜಿಗೆ ನೀಡುವ ಮೂಲಕ ಸೇವೆಗೈದ ಆಕೆಯನ್ನೇ ಭಕ್ತಿಯಿಂದ ಗೌರವಿಸಿ, ಹಲವಾರು ಗ್ರಾಮಗಳ ಉಂಬಳಿ ನೀಡಿದನು. ಕೃಷ್ಣ-ಬಲರಾಮರಿಗೆ ಮಣಿಕೆಯು ಮಜ್ಜಿಗೆ ನೀಡಿದ ಸ್ಥಳಕ್ಕೆ ‘ಮಣಿಕಾಪಟ್ಟಣ’ ವೆಂದು ನಾಮಕರಣ ಮಾಡಿದನು.

ಈ ಘಟನೆಯ ಅನಂತರ ರಾಜನು ಕಂಚಿಯನ್ನು ತಲಪಿ, ಯುದ್ಧ ಆರಂಭಿಸಿದನು. ಗಂಗರಾಜನ ಪಾಳಯಕ್ಕೆ ಹೊಸದಾಗಿ ಸೇರಿಕೊಂಡಿದ್ದ ಇಬ್ಬರು ಯುವ ಸೈನಿಕರು (ಕೃಷ್ಣ ಬಲರಾಮ) ಕಂಚೀ ಸೇನೆಯನ್ನು ಕಡಿದು ಹಾಕಿದರು. ಭಗವಂತನು ಭರವಸೆಯಿತ್ತಿದ್ದಂತೆ, ಗಂಗರಾಜನು ಗೆದ್ದನು.

ಕಂಚಿ ಅರಸನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆತನನ್ನು ಬಂಧಿಸದೆ, ಆತನ ಮಗಳು ಪದ್ಮಾವತಿಯನ್ನು ಬಂಧಿಸಿ ತನ್ನ ರಾಜ್ಯಕೊಯ್ದನು. ತನ್ನನ್ನು ಚಾಂಡಾಲನೆಂದು ಕರೆದು ಅವಮಾನಿಸಿದ್ದಕ್ಕೆ ಪ್ರತೀಕಾರವಾಗಿ, ಆಕೆಗೊಬ್ಬ ಚಾಂಡಾಲ ಯುವಕನೊಂದಿಗೆ ಮದುವೆ ಮಾಡುವುದಾಗಿ ಘೋಷಿಸಿದನು.

ರಾಜನಿಗೆ ಪದ್ಮಾವತಿಯ ಮೇಲೆ ಪ್ರೇಮವಿದ್ದರೂ ಕ್ರೋಧವಶನಾಗಿ ಇಂತಹ ನಿರ್ಧಾರ ತಳೆದಿದ್ದನು. ಪುರುಷೋತ್ತಮ ರಾಜನನ್ನು ಅದಾಗಲೇ ಮಾನಸಿಕವಾಗಿ ಪತಿಯೆಂದು ಸ್ವೀಕರಿಸಿದ್ದ ಪದ್ಮಾವತಿಗೆ ಆತನ ಈ ನಿರ್ಧಾರದಿಂದ ಆಘಾತವಾಯಿತು. ಆಕೆ ಅದರ ಬದಲು ಸಾವನ್ನೇ ಬಯಸಿದಳು.

ಆದರೆ ಗಂಗರಸನ ಚಾಣಾಕ್ಷ ಮಂತ್ರಿ ರಾಜನಿಗೆ ಕೊಂಚ ಕಾಲ ಸಹನೆ ತಾಳುವಂತೆ ಸಲಹೆ ನೀಡಿದನು. ‘ಪದ್ಮಾವತಿಗೆ ಸೂಕ್ತನಾದ ಕಸಗುಡಿಸುವ ತೋಟಿಗ ಸಿಕ್ಕ ಕೂಡಲೇ ಮದುವೆ ಏರ್ಪಾಡು ನಾನೇ ಮಾಡುವೆ” ಎಂದು ಹೇಳಿ, ರಾಜಕುಮಾರಿಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು.

ಈ ಯುದ್ಧ, ಅನಂತರದ ಆಡಳಿತ ಕಾರ್ಯಭಾರಗಳ ನಡುವೆ ಒಂದು ವರ್ಷ ಸಂದುಹೋಯಿತು. ಈಗ ಮತ್ತೆ ರಥಯಾತ್ರೆಯ ಕಾಲ!

ರಾಜನು ಪ್ರತಿಬಾರಿಯಂತೆ ಈ ಬಾರಿಯೂ ಸರ್ವಸಿದ್ಧತೆಗಳಲ್ಲಿ ತೊಡಗಿದನು. ಕಂಚೀರಾಜನೆದುರು ಯುದ್ಧ ಗೆಲ್ಲಿಸಿಕೊಟ್ಟ ಭಗವ೦ತನೆಡೆಗೆ ಆತ ಮತ್ತಷ್ಟು ದೀನನಾಗಿಯೂ, ಭಕ್ತಿಪುರಸ್ಸರವಾಗಿಯೂ ಇದ್ದನು. ರಥಯಾತ್ರೆಯ ದಿನ ಬಂದಿತು. ಪುರುಷೋತ್ತಮ ರಾಜನು ಚಿನ್ನದ ಹಿಡಿಕೆಯ ಕಸಬರಿಗೆ ಹಿಡಿದು ರಥದೆದುರು ನಿಂತನು.

ಇತ್ತ ಮಂತ್ರಿಯು ಪದ್ಮಾವತಿಯ ಮನವೊಲಿಸಿ, ವಧುವಿನ ಉಡುಪು ತೊಟ್ಟು ಸಿಂಗಾರಗೊಳ್ಳುವಂತೆ ಮಾಡಿದನು. ಆಕೆಯಾದರೋ ತಾನು ಒಬ್ಬತೋಟಿಗನನ್ನೇ ಮದುವೆಯಾಗಲಿರುವೆ ಎಂದು ನೆನೆದು ಕುಸಿದು ಹೋದಳು. ಆದರೂ ಮಂತ್ರಿಯ ಒತ್ತಾಯಕ್ಕೆ ಮಣಿದು ಆತನೊಂದಿಗೆ ನಡೆದಳು.

ರಾಜನು ರಥಬೀದಿ ಗುಡಿಸಲು ಸಜ್ಜಾಗಿ ನಿಂತಿದ್ದನು. ಮಂತ್ರಿ ಅವನ ಬಳಿ ಸಾರಿ, ”ರಾಜಾ, ನಾನು ಹೇಳಿದ್ದಂತೆ ಕಂಚೀರಾಜಕುಮಾರಿ ಪದ್ಮಾವತಿಗೆ ಸೂಕ್ತನಾದ ತೋಟಿಗನನ್ನು ಹುಡುಕಿರುವೆ. ವಿವಾಹ ಮಾಡುವುದಷ್ಟೆ ಬಾಕಿ ಉಳಿದಿದೆ” ಎಂದು ಅರಿಕೆ ಮಾಡಿಕೊಂಡನು. ರಥಯಾತ್ರೆಯ ಈ ಗೌಜಿಯ ನಡುವೆ ಮಂತ್ರಿಯ ಮಾತು ರಾಜನಿಗೆ ಕಿರಿಕಿರಿಯೆನಿಸಿತು. ತನಗೀಗ ಅದಕ್ಕೆಲ್ಲ ಸಮಯವಿಲ್ಲವೆಂದೂ ಆತನೇ ಅವಳ ಮದುವೆ ನೆರವೇರಿಸಬೇಕೆಂದೂ ಹೇಳಿದನು.

ಆಗ ಮಂತ್ರಿಯು ಪದ್ಮಾವತಿಯನ್ನು ಮುಂದೆ ಕರೆದು ಆಕೆಯ ಕೈಲೊಂದು ಮಾಲೆಯಿತ್ತು, ರಾಜನ ಕೈಗೊಂದು ಮಾಲೆ ನೀಡಿದನು. ಮತ್ತು “ರಾಜನ್! ಇಂದು ನೀನು ಕಸಬರಿಗೆ ಹಿಡಿದು ತೋಟಿಗನಾಗಿರುವೆ. ರಾಜಕುವರಿಗೆ ಸೂಕ್ತನಾದ ತೋಲಿಗ ನೀನೇ ಆಗಿರುವೆ. ನಾನು ನಿನ್ನೊಂದಿಗೆ ಈಕೆಯ ವಿವಾಹವನ್ನು ನೆರವೇರಿಸಲಿದ್ದೇನೆ” ಎಂದು ನುಡಿದನು.

ಅಕಾಲದಲ್ಲಾದರೂ ಮಂತ್ರಿಯ ಚಾಣಾಕ್ಷತೆಯು ರಾಜನ ಮುಖದಲ್ಲಿ ಮಂದಹಾಸ ಮೂಡಿಸಿತು. ಪದ್ಮಾವತಿಯಂತೂ ಅವನ ಮೆಚ್ಚಿನ ಹೆಣ್ಣೇ ಆಗಿದ್ದಳು. ಅವನು ಇದು ಕೂಡ ಜಗನ್ನಾಥನ ಇಚ್ಛೆಯೆಂದು ಆಕೆಗೆ ಮಾಲೆ ಹಾಕಿದನು. ಪದ್ಮಾವತಿ ಆನಂದದಿಂದ ಮೂರ್ಛೆ ಹೋದಳು. ಮುಂದೆ ಅವರಿಬ್ಬರೂ ದೀರ್ಘಕಾಲ ಸುಖ ದಾಂಪತ್ಯ ನಡೆಸಿದರು.

ಪುರುಷೋತ್ತಮ ರಾಜನು ಕಂಚೀ ಯುದ್ಧಗೆದ್ದು ಅಲ್ಲಿಂದ ತಂದ ಗಣೇಶ ವಿಗ್ರಹವನ್ನು ಇಂದಿಗೂ ಜಗನ್ನಾಥನ ಮಂದಿರದಲ್ಲಿ ಕಾಣಬಹುದು.

ಗಂಗರಸನ ಅಂದಿನ ನಡಾವಳಿಗೆ ಕುರುಹಾಗಿ, ಇಂದಿಗೂ ಒರಿಸ್ಸಾದ ರಾಜರು ರಥಯಾತ್ರೆಯ ದಿನ ರಥಬೀದಿ ಗುಡಿಸುವ ಪರಿಪಾಠವಿದೆ.

ಚಿಲ್ಕಾ ಸರೋವರದ ಬಳಿಯ ಮಣಿಕಾಪಟ್ಟಣ, ಅಂದಿನ ಕೃಷ್ಣ-ಬಲರಾಮರ ಲೀಲೆಗೆ ಸಾಕ್ಷಿಯಾಗಿ ನಿಂತಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi