ರಾಮಾಯಣ

ಶ್ರೀ ರಾಮ ಕಥನ

ಸಹಸ್ರಾರು ವರ್ಷಗಳ ಹಿಂದೆ, ದಶರಥನೆಂಬ ಮಹಾರಾಜನು ಅಯೋಧ್ಯೆಯನ್ನು ಆಳುತ್ತಿದ್ದ. ಈತನಿಗೆ ಮೂವರು ರಾಣಿಯರಿದ್ದರೂ ಮಕ್ಕಳೇ ಇರಲಿಲ್ಲ. ರಾಣಿಯರಲ್ಲಿ ಹಿರಿಯವಳು ಕೌಸಲ್ಯಾ, ಎರಡನೆಯವಳು ಸುಮಿತ್ರಾ, ಸುಂದರಿಯಾಗಿದ್ದ ಕೈಕೇಯಿ ಮೂರನೆಯವಳು, ಹಾಗೂ ರಾಜನ ಅಚ್ಚುಮೆಚ್ಚಿನ ಹೆಂಡತಿ.

ಮಕ್ಕಳನ್ನು ಪಡೆಯಲಿಕ್ಕಾಗಿ ಆತ ವಿಶೇಷ ಯಜ್ಞವನ್ನು ನಡೆಸಿದ. ಯಜ್ಞ ಕುಂಡದಿಂದ ಪ್ರತ್ಯಕ್ಷಗೊಂಡ ವಿಷ್ಣುದೂತ ರಾಜನ ಕೈಗೆ ಪಾಯಸ ತುಂಬಿದ ಕುಡಿಕೆಯನ್ನು ಆಶೀರ್ವಾದವಾಗಿ ಕೊಟ್ಟ. ಮೂವರು ರಾಣಿಯರು ಈ ಪಾಯಸವನ್ನು ಸೇವಿಸಿದರೆ ನಾಲ್ವರು ಶ್ರೇಷ್ಠ ಪುತ್ರರು ಅವರಿಗೆ ಜನಿಸುವರೆಂದು ಅವನು ರಾಜನಿಗೆ ತಿಳಿಸಿದ. ರಾಣಿಯರು ಆ ಪವಿತ್ರವಾದ ಪಾಯಸವನ್ನು ಸಂತೋಷದಿಂದ ಸೇವಿಸಿದರು.

ಶೀಘ್ರವೇ ರಾಣಿಯರು ತಾಯಿಯರಾದರು. ರಾಣಿ ಕೌಸಲ್ಯೆಯ ಮಗ ರಾಮ. ಸಜ್ಜನರಿಗೆ ಹಿಂಸೆ ನೀಡುತ್ತಿದ್ದ ಅಸುರರನ್ನು ಸಂಹರಿಸುವ ಸಲುವಾಗಿ, ಸ್ವತಃ ಭಗವಂತನೇ ಭೂಮಿಯಲ್ಲಿ ಅವತರಿಸಿ ಬಂದಿದ್ದ.

ಅವನು ಒಬ್ಬ ಪರಿಪೂರ್ಣ ರಾಜನಾದವನು ಹೇಗೆ ರಾಜ್ಯವಾಳಬೇಕೆಂಬುದನ್ನು ಕೂಡ ತನ್ನದೇ ಉದಾಹರಣೆಯಿಂದ ತೋರಿಸಿಕೊಡಲು ಬಯಸಿದ್ದ. ರಾಣಿ ಕೈಕೇಯಿಯ ಮಗ ಭರತ. ಸುಮಿತ್ರೆಯು ಪಾಯಸದ ಎರಡು ಪಾಲನ್ನು ಸೇವಿಸಿದ್ದರಿಂದ ಆಕೆಗೆ ಲಕ್ಷ್ಮಣ, ಶತ್ರುಘ್ನರೆಂಬ ಅವಳಿ ಮಕ್ಕಳು ಜನಿಸಿದರು.

ಕುಲ ಪುರೋಹಿತ ವಸಿಷ್ಠರು ರಾಜಕುಮಾರರಿಗೆ ಅಗತ್ಯವಿದ್ದ ಎಲ್ಲ ವಿದ್ಯೆಗಳನ್ನೂ ಕಲಿಸಿಕೊಟ್ಟರು. ಅವರು ವೇದಗಳನ್ನು ಕಲಿಯುವುದರ ಜೊತೆಗೆ, ಮುಂದೆ ರಾಜ್ಯವನ್ನಾಳಲು ಅಗತ್ಯವಾಗಿ ಬೇಕಾಗಿದ್ದ ಯುದ್ಧ ಕಲೆಗಳನ್ನು ಕೂಡ ಕಲಿತರು. ನಾಲ್ವರು ರಾಜಕುಮಾರರೂ ದೈವೀ ಗುಣಗಳಿಂದ ಕೂಡಿದವರಾಗಿದ್ದು, ರಾಜ್ಯದ ಜನತೆ ಅವರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು.

ಒಂದು ದಿನ ಅತ್ಯಂತ ಪ್ರಭಾವಶಾಲಿಯಾಗಿದ್ದ ಋಷಿ ವಿಶ್ವಾಮಿತ್ರರು ದಶರಥನ ಬಳಿಗೆ ಬಂದರು. ತಾವು ಆರಂಭಿಸಿದ್ದ ಯಜ್ಞವನ್ನು ಪೂರೈಸಲು ಬಿಡದೆ ಅಡ್ಡಿ ಮಾಡುತ್ತಿದ್ದ ತಾಟಕಿಯೆಂಬ ರಾಕ್ಷಸಿಯ ಬಗ್ಗೆ ಹೇಳಿಕೊಂಡರು. ಋಷಿಯು ರಾಜನನ್ನು ಕುರಿತು, “ನಿಮ್ಮ ಮಕ್ಕಳಲ್ಲಿ ಅತ್ಯಂತ ವೀರನೂ ಉತ್ತಮ ಯೋಧನೂ ಆಗಿರುವ ರಾಮನನ್ನು ರಾಕ್ಷಸರ ಸಂಹಾರಕ್ಕಾಗಿ ನನ್ನೊಡನೆ ಕಳುಹಿಸಿಕೊಡಿ” ಎಂದು ಬಿನ್ನಯಿಸಿದರು.

ದಶರಥನಿಗಾದರೋ, ರಾಮನೆಂದರೆ ಬಹಳ ಪ್ರೀತಿ. ಅವನನ್ನು ಒಂದು ದಿನದ ಮಟ್ಟಿಗೂ ಸಹ ಅಷ್ಟು ದೂರ ಕಳುಹಿಸಿಕೊಡುವುದನ್ನು ದಶರಥ ಊಹಿಸುವುದು ಕೂಡ ಸಾಧ್ಯವಿರಲಿಲ್ಲ. ಆದರೂ, ದಶರಥ ಒಬ್ಬ ರಾಜನಾಗಿದ್ದುದರಿಂದ, ತನ್ನನ್ನೇ ಆಶ್ರಯಿಸಿದವರನ್ನು ರಕ್ಷಿಸುವುದು ಅವನ ಕರ್ತವ್ಯವಾಗಿತ್ತು. ಅವನು ರಾಮ, ಲಕ್ಷ್ಮಣರನ್ನು ರಾಕ್ಷಸರ ಸಂಹಾರಕ್ಕಾಗಿ ಕಳುಹಿಸಿಕೊಡಲು ಒಪ್ಪಿದ.

ರಾಮನು ತಾಟಕಿ ವಾಸವಿದ್ದ ಕಾಡನ್ನು ಪ್ರವೇಶಿಸುತ್ತಿದ್ದ ಹಾಗೆಯೇ, ಅವಳನ್ನು ಹೋರಾಟಕ್ಕೆ ಕರೆಯುವ ಸಲುವಾಗಿ ಬಿಲ್ಲನ್ನು ಠೇಂಕರಿಸಿದ. ಕೇವಲ ಹದಿನಾರು ವರ್ಷದ ಹುಡುಗ ತನಗೆ ಸವಾಲೆಸೆದಿದ್ದು ತಾಟಕಿಗೆ ಕೋಪ ತರಿಸಿತು. ಅವಳು ರಾಮನತ್ತ ಮುನ್ನುಗ್ಗಿ ಬಂದಳು. ಭೀಕರ ಹೋರಾಟ ನಡೆದ ಅನಂತರ ರಾಮನು ತನ್ನ ಅತ್ಯಂತ ಶಕ್ತಿಶಾಲಿಯಾದ ಸುವರ್ಣಬಾಣದಿಂದ ತಾಟಕಿಯನ್ನು ಕೊಂದು ಹಾಕಿದ.

ಜನಕ ಮಹಾರಾಜನ ರಾಜಧಾನಿ ಮಿಥಿಲೆಯಲ್ಲಿ ರಾಜಕುಮಾರಿ ಸೀತೆಯ ಸ್ವಯಂವರ ಏರ್ಪಾಡಾಗಿತ್ತು. ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ಅಲ್ಲಿಗೆ ಕರೆದೊಯ್ಯಲು ನಿಶ್ಚಯಿಸಿದರು. ಜನಕ ಮಹಾರಾಜನ ಪುತ್ರಿ ಸೀತೆ, ದೈವೀ ಸೌಂದರ್ಯದಿಂದ ಕಂಗೊಳಿಸುತ್ತಿದ್ದಳು. ಮಹಾರಾಜನು ಆಕೆಗೆ ಸೂಕ್ತನಾದ ಪತಿಯನ್ನು ಹುಡುಕಲು ಬಯಸಿದ್ದ.

ಶಿವನಿಂದ ಮಿಥಿಲೆಯ ಅರಸರಿಗೆ ಕೊಡಲ್ಪಟ್ಟಿದ್ದ ಬಿಲ್ಲನ್ನು ಯಾರು ಹೆದೆಯೇರಿಸುತ್ತಾರೋ ಅವರು ತನ್ನ ಪುತ್ರಿಯನ್ನು ಜಯಿಸುತ್ತಾರೆ ಎಂದು ಘೋಷಿಸಿದ. ನೂರಾರು ರಾಜ, ಮಹಾರಾಜರು ಆಕೆಯ ಕೈಹಿಡಿಯುವ ಬಯಕೆಯಿಂದ ಮಿಥಿಲೆಗೆ ಬಂದು ಸೇರಿದರು.

ಮಿಥಿಲೆಗೆ ಸಾಗುವ ದಾರಿಯಲ್ಲಿ ರಾಮನು ಗೌತಮ ಮುನಿಯ ಆಶ್ರಮಕ್ಕೆ ಭೇಟಿ ನೀಡಿದ. ಶಾಪದಿಂದ ಕಲ್ಲಾಗಿದ್ದ ಗೌತಮನ ಪತ್ನಿ ಅಹಲ್ಯೆಗೆ ಶಾಪದಿಂದ ವಿಮೋಚಿಸಿ ಹರಸಿದ.

ಜನಕ ಮಹಾರಾಜನ ಅರಮನೆಯಲ್ಲಿ ರಾಮನು ಶಿವಧನುಸ್ಸನ್ನು ಹೆದೆಯೇರಿಸಿದ್ದು ಮಾತ್ರವಲ್ಲ, ಅದು ಅವನ ಬಲ ತಾಳಲಾರದೆ ಮುರಿದೇ ಹೋಯಿತು. ರಾಮನು ಭಗವಂತನಾದುದರಿಂದ, ನಮಗೆ ಅಸಾಧ್ಯವಾದುದನ್ನು ಅವನು ಲೀಲಾಜಾಲವಾಗಿ ಮಾಡಬಲ್ಲನು.

ಅನಂತರ ರಾಮನು ಸೀತೆಯನ್ನು ವರಿಸಿ, ಅಯೋಧ್ಯೆಯ ತನ್ನ ಮನೆಗೆ ಕರೆದೊಯ್ದ ವೃದ್ಧನಾಗಿದ್ದ ಮಹಾರಾಜ ದಶರಥನು ತನ್ನ ಉತ್ತರಾಧಿಕಾರಿಯಾಗಿ ರಾಮನಿಗೆ ಪಟ್ಟಾಭಿಷೇಕ ಮಾಡಲು ನಿಶ್ಚಯಿಸಿದ. ಭರತನನ್ನು ದಾದಿಯಾಗಿ ಸಲಹಿದ್ದ ಮಂಥರೆ ಇದನ್ನು ಕೇಳಿ, ಕೈಕೇಯಿಯ ಮನಸ್ಸಿಗೆ ವಿಷ ತುಂಬಿ, ಇದರ ವಿರುದ್ಧ ಎತ್ತಿ ಕಟ್ಟಿದಳು.

ಕೈಕೇಯಿಯು ದಶರಥನಲ್ಲಿ ಹಟ ಹಿಡಿದಳು, “ಭರತನನ್ನು ನಿನ್ನ ಉತ್ತರಾಧಿಕಾರಿಯಾಗಿ ಮಾಡು. ರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸು” ಎಂದು. ಕೈಕೇಯಿಯ ತಂದೆ ಕೇಕಯ ರಾಜನಿಗೆ ನೀಡಿದ್ದ ಮಾತನ್ನು ನಡೆಸುವುದಕ್ಕಾಗಿ ಭಾರವಾದ ಹೃದಯದಿಂದ ಮಹಾರಾಜ ದಶರಥನು ಅವಳ ಬಯಕೆಯನ್ನು ನೆರವೇರಿಸಬೇಕಾಯಿತು.

ರಣರಂಗದಲ್ಲಿ ಕೈಕೇಯಿಯು ಹಿಂದೊಮ್ಮೆ ದಶರಥನ ಪ್ರಾಣ ಉಳಿಸಿದ್ದಾಗ ಆತನು ಆಕೆಗೆ ವರ ನೀಡಿದ್ದ. ಅದನ್ನು ಈಡೇರಿಸುವುದಕ್ಕಾಗಿ ಈಗ ಅವಳ ಮಾತಿಗೆ ಸಮ್ಮತಿಸಬೇಕಾಯಿತು.

ತನ್ನ ಮೇಲೆ ಏರಿ ಬಂದ ಬದಲಾವಣೆಗಳನ್ನು ರಾಮ ಮರುಮಾತಿಲ್ಲದೆ ಒಪ್ಪಿಕೊಂಡ. ಆದರೆ ಸೀತಾ, ಲಕ್ಷ್ಮಣರು ಅವನನ್ನು ಒಂಟಿಯಾಗಿ ಕಾಡಿಗೆ ಹೋಗಲು ಬಿಡದಾದರು. “ನಿನ್ನನ್ನು ಅಗಲಿ ನಾವು ಬದುಕಲಾರೆವು, ಆದ್ದರಿಂದ ನಾವೂ ನಿನ್ನ ಜೊತೆ ಕಾಡಿಗೆ ಬರುತ್ತೇವೆ” ಎಂದು ತಾಕೀತು ಮಾಡಿದರು. ಸರಳ ಉಡುಗೆಗಳನ್ನು ತೊಟ್ಟ ಆ ಮೂವರು ತಮ್ಮ ತಂದೆ ತಾಯಿಯರನ್ನು ಹಾಗೂ ಅಯೋಧ್ಯೆಯನ್ನು ತೊರೆದು ಹೊರಟರು.

ಅಯೋಧ್ಯೆಯ ಸೀಮೆಯವರೆಗೆ ಅವರನ್ನು ರಥವು ಕರೆದೊಯ್ದಿತು. ಅಲ್ಲಿಂದ ಮುಂದೆ, ಭಕ್ತನಾಗಿದ್ದ ಬುಡಕಟ್ಟು ಮುಖಂಡ ಗುಹನ ನೌಕೆಯಲ್ಲಿ ಗಂಗೆಯ ಮತ್ತೊಂದು ದಡವನ್ನು ಅವರು ತಲಪಿದರು.

ಗಂಗೆಯನ್ನು ದಾಟಿದ ಬಳಿಕ ರಾಮನು ಗುಹನಿಗೆ ಹಿಂದಿರುಗುವಂತೆ ಹೇಳಿದ. ಅಲ್ಲಿಂದ ಕಾಲ್ನಡಿಗೆಯಲ್ಲಿ ಮುಂದುವರಿಯುವುದು ಅವನ ಉದ್ದೇಶವಾಗಿತ್ತು. ಕಾಡಿನಲ್ಲಿ ರಾಮಲಕ್ಷ್ಮಣರು ಸೀತೆಯನ್ನು ಅಪಾಯಗಳಿಂದ ರಕ್ಷಿಸುವ ಸಲುವಾಗಿ ಮಧ್ಯದಲ್ಲಿರಿಸಿಕೊಂಡು ಮುನ್ನಡೆದರು.

ಅವರು ಮಹರ್ಷಿ ಭಾರದ್ವಾಜರನ್ನು ಭೇಟಿ ಮಾಡುವ ಸಲುವಾಗಿ ಅವರ ಆಶ್ರಮಕ್ಕೆ ತೆರಳಿದರು. ಋಷಿಯು ಅವರನ್ನು ಸ್ವಾಗತಿಸಿ, ವಾಸ್ತವ್ಯಕ್ಕೆ ಅನುಕೂಲವಾದ ಸ್ಥಳ ನೀಡುವುದಾಗಿ ಹೇಳಿದರು.

ಆದರೆ ರಾಮ ಅದನ್ನು ನಿರಾಕರಿಸಿದ. ಭಾರದ್ವಾಜ ಮುನಿಗಳು ಹೇಳಿದರು, “ಯಮುನಾ ನದಿಯ ತೀರದಲ್ಲಿ ಚಿತ್ರಕೂಟವೆಂಬ ಸುಂದರವಾದ ಕಾಡಿದೆ. ಅಲ್ಲಿ ನೀವು ನಿಮ್ಮದೇ ಆದ ಕುಟೀರವನ್ನು ಆಶ್ರಮವನ್ನು ಕಟ್ಟಿಕೊಳ್ಳಬಹುದು. ಅಲ್ಲಿ ಬಹಳಷ್ಟು ಬಗೆಯ ಫಲ-ಪುಷ್ಪಗಳ ಮರಗಳಿದ್ದು, ನೀವು ಶಾಂತಿಯುತ ಜೀವನ ನಡೆಸಬಹುದು.”

ಮುನಿಗಳ ಸಲಹೆಯಂತೆ ಅವರು ಪವಿತ್ರವಾದ ಯಮುನಾ ತೀರದಲ್ಲಿದ್ದ ಚಿತ್ರಕೂಟ ಪರ್ವತದತ್ತ ಮುಂದುವರಿದರು. ಇಲ್ಲಿ ಅವರು, ವಾಲ್ಮೀಕಿ ಮುನಿಯ ಆಶ್ರಮದ ಬಳಿಯೇ ಚಿಕ್ಕದೊಂದು ಪರ್ಣಕುಟಿಯನ್ನು ಕಟ್ಟಿಕೊಂಡರು.

ಮಹಾರಾಜ ದಶರಥನಿಗೆ ರಾಮನನ್ನು ಅಗಲಿದ ಅನಂತರ ಒಂದು ದಿನವೂ ಜೀವದಿಂದಿರಲು ಸಾಧ್ಯವಾಗಲಿಲ್ಲ. ರಾಜಕುಮಾರನು ಅಯೋಧ್ಯೆಯನ್ನು ಬಿಟ್ಟು ತೆರಳಿದ ಅನಂತರ ವೃದ್ಧರಾಜನು ಒಡೆದ ಹೃದಯದವನಾಗಿ, ರಾಮನ ಅಗಲಿಕೆಯ ದುಃಖದಿಂದ ಜರ್ಝರಿತನಾಗಿ, ”ರಾಮಾ! ಓ ರಾಮಾ!!” ಎಂದು ಕರೆಯುತ್ತ ಅಸುನೀಗಿದ.

ಕೈಕೇಯಿಯು ರಾಮನನ್ನು ವನವಾಸಕ್ಕೆ ಕಳುಹಿಸಿ, ಭರತನನ್ನು ಮುಂದಿನ ರಾಜನಾಗಿ ಆರಿಸುವಂತೆ ದಶರಥನನ್ನು ಒತ್ತಾಯ ಪಡಿಸಿದ ಸಂದರ್ಭದಲ್ಲಿ ಭರತನು ಅಯೋಧ್ಯೆಯಲ್ಲಿರಲಿಲ್ಲ. ಮರಳಿ ಬಂದ ಅನಂತರ, ನಡೆದುದೆಲ್ಲವನ್ನು ತಿಳಿದ ಅವನು ತನ್ನ ತಾಯಿಯ ಮೇಲೆ ಬಹಳ ಅಸಮಾಧಾನಗೊಂಡ.

ಅವನಿಗೆ ರಾಜನಾಗುವ ಇಚ್ಛೆಯಿಲ್ಲದೆ ರಾಮನನ್ನು ಭೇಟಿಯಾಗಲು ಹೊರಟ. ಕಾಡನ್ನು ತಲಪಿದ ಭರತ ತಮ್ಮ ತಂದೆಯ ನಿಧನದ ವಾರ್ತೆಯನ್ನು ರಾಮನಿಗೆ ತಿಳಿಸಿದ. ಮರಳಿ ಅಯೋಧ್ಯೆಗೆ ಬಂದು ರಾಜನಾಗಿ ಆಳುವಂತೆ ಅವನು ರಾಮನನ್ನು ಪ್ರಾರ್ಥಿಸಿಕೊಂಡ.

ಆದರೆ ತನ್ನ ತಂದೆಗೆ ನೀಡಿದ್ದ ವಚನವನ್ನು ಮುರಿಯಲು ರಾಮನಿಗೆ ಇಷ್ಟವಿರಲಿಲ್ಲ, ಉಪಾಯಗಾಣದ ಭರತ, ರಾಮನ ಪಾದುಕೆಗಳನ್ನೇ ಸಿಂಹಾಸನದ ಮೇಲಿರಿಸಿ, ಅವನ ಪರವಾಗಿ ಮುಂದಿನ ಹದಿನಾಲ್ಕು ವರ್ಷಗಳ ಕಾಲ ರಾಜ್ಯವಾಳುವುದಾಗಿ ನಿಶ್ಚಯಿಸಿದ.

“ನಾನು ಅಯೋಧ್ಯಾ ನಗರದ ಹೊರವಲಯದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಾ, ನಿನ್ನ ಸೇವಕನಾಗಿ ರಾಜ್ಯವನ್ನು ಆಳುತ್ತೇನೆ’ ಎಂದು ನುಡಿದು ಅಲ್ಲಿಂದ ತೆರಳಿದ. ಹೀಗೆ ಅವನು, ಭಗವಂತನೇ ಪ್ರತಿಯೊಂದರ ಒಡೆಯನಾಗಿದ್ದಾನೆ ಎಂಬುದನ್ನು ನಮಗೆ ನೆನಪಿಸುತ್ತಾ ನಾವು ಅನುಸರಿಸಲು, ಕರ್ತವ್ಯ ನಿಭಾಯಿಸಲು ಸ್ವತಃ ಒಂದು ಮಾದರಿಯಾದ.

ಆರಂಭದಲ್ಲಿ ರಾಮ, ಲಕ್ಷ್ಮಣ, ಸೀತೆಯರಿಗೆ ಕಾಡಿನ ಪರ್ಣಕುಟಿಯ ಜೀವನ ಶಾಂತಿಯುತವಾಗಿಯೇ ಇತ್ತು. ಆಗೊಂದು ದಿನ ಶೂರ್ಪನಖಿಯೆಂಬ ರಾಕ್ಷಸಿ ಅಲ್ಲಿಗೆ ಬಂದು, ತನ್ನನ್ನು ಮದುವೆಯಾಗುವಂತೆ ರಾಮನನ್ನು ಪೀಡಿಸಲಾರಂಭಿಸಿದಳು. ಆದರೆ ಅವನು ತಿರಸ್ಕರಿಸಿದ. ಆ ಸುಂದರ ರಾಜಕುಮಾರನ ಪತ್ನಿ ಸೀತೆಯೆಂದು ತಿಳಿದಾಗ, ಶೂರ್ಪನಖಿಯು ಮತ್ಸರದಿಂದ ಅವಳ ಮೇಲೆರಗಿದಳು.

ಲಕ್ಷ್ಮಣನು ಸೀತೆಯನ್ನು ರಕ್ಷಿಸಿ, ಶೂರ್ಪನಖಿಯ ಕಿವಿ-ಮೂಗುಗಳನ್ನು ಕತ್ತರಿಸಿ ಹಾಕಿದ. ಗಾಯಗೊಂಡ ಶೂರ್ಪನಖಿ ಲಂಕೆಯ ರಾಜ, ಹತ್ತು ತಲೆಯ ಅಸುರ ರಾವಣನ ಬಳಿಗೋಡಿದಳು. ಅವಳಿಂದ ಸೀತೆಯ ಸೌಂದರ್ಯದ ಬಗೆಗೆ ಕೇಳಿದ ರಾವಣನು ಹೇಗಾದರೂ ರಾಮನನ್ನು ವಂಚಿಸಿ, ಸೀತೆಯನ್ನು ಪತ್ನಿಯಾಗಿ ಪಡೆಯಬೇಕೆಂದು ಆಶಿಸಿದ.

ಒಂದು ದಿನ ಸೀತೆಯು ಆಶ್ರಮದ ಬಳಿ ಸುಳಿಯುತ್ತಿದ್ದ, ಅಸಾಧಾರಣ ಚೆಲುವಿನ ಬಂಗಾರದ ಜಿಂಕೆಯನ್ನು ಕಂಡಳು. “ದಯವಿಟ್ಟು ಆ ಅದ್ಭುತ ಜಿಂಕೆಯನ್ನು ನನಗೆ ತಂದು ಕೊಡಿ, ಅದನ್ನು ನನ್ನ ಬಳಿಯೇ ಇರಿಸಿಕೊಳ್ಳುವೆ” ಎಂದವಳು ರಾಮನನ್ನು ಕೇಳಿದಳು. ಅಲ್ಲಿಂದ ಓಡಿ ಮರೆಯಾದ ಜಿಂಕೆಯನ್ನು ಹುಡುಕಲು ಹೊರಟ ರಾಮ, ಲಕ್ಷ್ಮಣನನ್ನು ಸೀತೆಯ ಕಾವಲಿಗಾಗಿ ನಿಲ್ಲಿಸಿದ.

ಸ್ವಲ್ಪ ಸಮಯದ ಅನಂತರ, ಸೀತೆ ಮತ್ತು ಲಕ್ಷ್ಮಣರಿಗೆ ರಾಮನು ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿಸಿತು. ಲಕ್ಷ್ಮಣನಿಗೆ ತನ್ನ ಸಹೋದರನ ಸಾಮರ್ಥ್ಯದ ಅರಿವಿದ್ದುದರಿಂದ ಅದು ಕಾಡಿನೊಳಗಿನ ಯಾವುದೋ ರಾಕ್ಷಸನ ವಂಚನೆಯೆಂದು ಅರಿತುಕೊಂಡ. ಆದರೆ ಬೆದರಿದ ಸೀತೆ, “ರಾಮನು ಅಪಾಯದಲ್ಲಿದ್ದಾನೆ!

ದಯವಿಟ್ಟು ಅವನ ಸಹಾಯಕ್ಕೆ ಹೋಗು!!” ಎ೦ದು ಬೇಡಿಕೊಂಡಳು. ಲಕ್ಷ್ಮಣ ಪರ್ಣಕುಟೀರದ ಸುತ್ತ ರಕ್ಷಣೆಗಾಗಿ ರೇಖೆಯನ್ನು ಎಳೆದ. ಅದನ್ನು ದಾಟುವ ಸಾಹಸ ಮಾಡುವವರು ಸುಟ್ಟು ಹೋಗುತ್ತಿದ್ದರು, ಮತ್ತು ಸೀತೆ ಒಳಗೇ ಇರುತ್ತಿದ್ದಳಾದಲ್ಲಿ, ಸುರಕ್ಷಿತವಾಗಿ ಉಳಿಯತ್ತಿದ್ದಳು. ಲಕ್ಷ್ಮಣ, ರಾಮನನ್ನು ಹುಡುಕುತ್ತ ಹೊರಟ.

ಸ್ವಲ್ಪ ಹೊತ್ತಾದ ಮೇಲೆ, ಭಿಕ್ಷೆಗಾಗಿ ಯಾಚಿಸುತ್ತಾ ಒಬ್ಬ ವೃದ್ಧ ಸಾಧು ಅಲ್ಲಿಗೆ ಬಂದ. ಅವನು ಕುಟೀರದ ಬಾಗಿಲಿನ ಬಳಿ ಹೋಗಲು ಯತ್ನಿಸುತ್ತಿದ್ದಂತೆಯೇ ಲಕ್ಷ್ಮಣ ಎಳೆದ ರೇಖೆಯಿಂದ ಉದ್ದನೆಯ ಜ್ವಾಲೆಗಳು ಎದ್ದು ಅವನನ್ನು ತಡೆದವು. ಸಾಧುವಿನ ಯಾಚನೆಯನ್ನು ಕೇಳಿದ ಸೀತೆ ಬಾಗಿಲಿನ ಬಳಿ ಬಂದಳು.

ಆತನಿಗೆ ಒಳ ಪ್ರವೇಶಿಸಲು ಅಸಾಧ್ಯವಾದುದನ್ನು ಕಂಡು, ತಾನೇ ರೇಖೆಯನ್ನು ದಾಟಲು ನಿಶ್ಚಯಿಸಿದಳು. ದಯಾಮಯಿಯಾದ ರಾಜಕುಮಾರಿಯು ತಾನು ತಂದ ಭಿಕ್ಷೆಯನ್ನು ನೀಡಲು ಕೈಚಾಚುತ್ತಿದ್ದಂತೆಯೇ ಸಾಧುವು ತನ್ನ ವೇಷವನ್ನು ಕಿತ್ತೆಸೆದು ಅವಳನ್ನು ಬಾಚಿ ಹಿಡಿದುಕೊಂಡ.

ಅಸುರ ರಾಜ ರಾವಣನನ್ನು ಕಂಡೊಡನೆಯೇ ಸೀತೆ ಭಯದಿಂದ ಕಿರುಚಿದಳು. ಅವನು ಆಕೆಯನ್ನು ಅಪಹರಿಸಿಕೊಂಡು ಹೊರಟ. ಅವನು ಸೀತೆಯನ್ನು ತನ್ನ ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿ, ಆಕಾಶ ಮಾರ್ಗದಲ್ಲಿ ಹಾರುತ್ತಾ ಸಾಗರವನ್ನು ದಾಟಿ, ರಾಜಧಾನಿ ಲಂಕೆಯನ್ನು ಸೇರಿದ.

ಇದೇ ವೇಳೆಗೆ ರಾಮನನ್ನು ಲಕ್ಷ್ಮಣನು ಆತನು ಸಹಾಯಕ್ಕಾಗಿ ತನ್ನನ್ನು ಕರೆಯಲಿಲ್ಲವೆಂಬುದನ್ನು ಅರಿತುಕೊಂಡ. ಬಂಗಾರದ ಜಿ೦ಕೆಯ ವೇಷ ಧರಿಸಿದ್ದ ಮಾರೀಚನೆಂಬ ಅಸುರನು ಲಕ್ಷ್ಮಣ ಮತ್ತು ಸೀತೆಯರ ಹೆಸರನ್ನು ರಾಮನ ದನಿಯಲ್ಲಿ ಕೂಗಿದ್ದ. ರಾಮನ ಬಾಣ ತಾಗುತ್ತಿದ್ದ ಹಾಗೆಯೇ ಅವನು ತನ್ನ ನಿಜರೂಪ ಧರಿಸಿ, ಅವರನ್ನು ಕೂಗುತ್ತ ಪ್ರಾಣ ತೊರೆದಿದ್ದ.

ಸತ್ತ ಅಸುರನನ್ನು ಕಂಡ ರಾಮ ಲಕ್ಷ್ಮಣರು, ಏನಾದರೂ ವಿಪತ್ತು ಸಂಭವಿಸಿರಬಹುದೆಂದು ಊಹಿಸಿ ಕುಟೀರದತ್ತ ಧಾವಿಸಿದರು. ಅಲ್ಲಿ ಸೀತೆಯನ್ನು ಕಾಣದಾದ ಅವರು, ಕಾಡಿನಲ್ಲಿ ಅವಳನ್ನು ಹುಡುಕುತ್ತ ಹೊರಟರು.

ದಾರಿಗೆದುರಾದ ಮರಗಿಡ ಬಳ್ಳಿಗಳನ್ನು, ಪ್ರಾಣಿಪಕ್ಷಿಗಳನ್ನು ಸೀತೆಯನ್ನು ಕಂಡಿರಾ?’ ಎಂದು ಅವರು ಕೇಳುತ್ತಿದ್ದರು. ಕಾಡಿನಲ್ಲಿ ಕಷ್ಟಕರವಾದ ಜೀವನ ನಡೆಸುತ್ತಿದ್ದ ರಾಜಕುಮಾರಿ ಈಗ ವಿಪತ್ತಿನಲ್ಲಿರುವಳು ಎಂದು ನೆನೆದ ರಾಮನ ಹೃದಯ ನೊಂದು ಹೋಗುತ್ತಿತ್ತು.

ಸೀತೆಯನ್ನು ಅರಸುತ್ತ ಹೊರಟ ಸಹೋದರರು ಅಂತಿಮವಾಗಿ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದ ಜಟಾಯುವಿನ ಬಳಿ ಬಂದರು. ಆ ಗೃಧ್ರರಾಜನು, ಲಂಕಾಧಿಪತಿ ರಾವಣನು ಸೀತೆಯನ್ನು ವಿಮಾನದಲ್ಲಿ ಅಪಹರಿಸಿಕೊಂಡು ಹೋದುದನ್ನು ತಾನು ಕಂಡುದಾಗಿ ತಿಳಿಸಿದನು. ಸೀತೆಯು ರಾಮನಿಗಾಗಿ ಆಕ್ರಂದನ ನಡೆಸುತ್ತಿದ್ದುದನ್ನು ನೋಡಿದ ಜಟಾಯು ರಾವಣನೊಡನೆ ಉಗ್ರ ಹೋರಾಟ ನಡೆಸಿ ಆಕೆಯನ್ನು ರಕ್ಷಿಸಲು ಯತ್ನಿಸಿದ್ದನು.

ಆದರೆ ವೃದ್ಧನೂ ನಿರಾಯುಧನೂ ಆಗಿದ್ದ ಆತನಿಂದ ಅದು ಸಾಧ್ಯವಾಗದೆ ಹೋಯಿತು. ತನ್ನ ಹರಿತವಾದ ಉಗುರು ಹಾಗೂ ಕೊಕ್ಕಿನಿಂದ ರಾವಣನಿಗೆ ಸಾಕಷ್ಟು ಘಾಸಿ ಮಾಡಿದರೂ ಆ ಅಸುರನ ಖಡ್ಗಕ್ಕೆ ಜಟಾಯುವಿನ ರಕ್ಕೆಗಳು ಆಹುತಿಯಾದವು. ರಾವಣನು ದಕ್ಷಿಣ ದಿಕ್ಕಿನತ್ತ ತನ್ನ ಪ್ರಯಾಣ ಮುಂದುವರಿಸಿದನು.

ಮರಣೋನ್ಮುಖನಾಗಿದ್ದ ಜಟಾಯು ಅದೆಲ್ಲವನ್ನೂ ರಾಮನಿಗೆ ತಿಳಿಸಿ, ಸಮಾಧಾನದಿ೦ದ ನೆಮ್ಮದಿಯಾಗಿ ಪ್ರಾಣಬಿಟ್ಟನು. ಮೈತುಂಬ ಗಾಯಹೊತ್ತು ನರಳಬೇಕಾಗಿ ಬಂದರೂ ತನಗೆ ತಿಳಿದುದನ್ನು ರಾಮನಿಗೆ ಹೇಳಿದ ಸೀತೆಯನ್ನು ರಕ್ಷಿಸಲು ಪ್ರಯತ್ನಪಟ್ಟ ಸಮಾಧಾನ ಅವನದಾಗಿತ್ತು.

ರಾಮ ಲಕ್ಷ್ಮಣರು ಸೀತೆಯ ಹುಟುಕಾಟದಲ್ಲಿ ಕಾಡಿನ ತುಂಬ ಅಲೆಯುತ್ತ ಅಲೆಯುತ್ತ ದೀರ್ಘ ಕಾಲದಿಂದ ರಾಮನ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಶಬರಿಯ ಆಶ್ರಮಕ್ಕೆ ಬಂದರು. ವೃದ್ಧೆ ಶಬರಿಯು ತಾನು ತನ್ನ ಇಹಲೋಕ ಯಾತ್ರೆ ಮುಗಿಸುವ ಮೊದಲು ರಾಮನನ್ನು ನೋಡಲು ಬಯಸಿದ್ದಳು. ಇದೀಗ ರಾಜಕುಮಾರರನ್ನು ಬರಮಾಡಿಕೊಳ್ಳಲು ಅವಳು ಅತೀವ ಸಂತೋಷಪಟ್ಟಳು.

ಅವರಿಗೆ ಚೆನ್ನಾಗಿ ಪಕ್ವವಾದ ಹಣ್ಣುಗಳನ್ನಿತ್ತು ಸತ್ಕರಿಸಿ ಆಶೀರ್ವಾದ ಪಡೆದಳು. ಅವಳು ರಾಮನಿಗೆ ಕೃತಜ್ಞತೆ ಸಲ್ಲಿಸುತ್ತಾ ಭಗವನ್! ನನ್ನ ಆಶ್ರಮಕ್ಕೆ ಭೇಟಿ ನೀಡಿ ನನ್ನ ಬಯಕೆಯನ್ನು ನೀನು ನೆರವೇರಿಸಿದೆ. ಇನ್ನು ನಾನು ನಿನ್ನ ಸ್ಮರಣೆಯಲ್ಲಿ ನಿನ್ನ ಮಂದಸ್ಮಿತ ದಿವ್ಯ ವದನವನ್ನು ನೆನೆಯುತ್ತ, ನೆಮ್ಮದಿಯಿಂದ ಜೀವ ತೊರೆಯಬಹುದು” ಎಂದು ನುಡಿದಳು.

ಮುಂದೆ ರಾಮ ಲಕ್ಷ್ಮಣರು ವೀರವಾನರ ಹನುಮಂತನನ್ನು ಭೇಟಿಯಾದರು. ಹನುಮಂತನು ಅವರನ್ನು ತನ್ನ ದೊರೆ ಸುಗ್ರೀವನ ಬಳಿ ಕರೆದೊಯ್ದನು. ಸುಗ್ರೀವನು ಸೀತೆಯನ್ನು ಹುಡುಕಲು ರಾಮನಿಗೆ ಸಹಾಯ ಮಾಡಿ, ಆಕೆಯನ್ನು ಮರಳಿ ತಂದೊಪ್ಪಿಸುವುದಾಗಿ ವಚನವಿತ್ತನು. ಆದರೆ ಅವನು ತನ್ನ ರಾಜ್ಯವನ್ನೂ ಪತ್ನಿಯನ್ನೂ ತನ್ನಿಂದ ಕಿತ್ತುಕೊಂಡಿದ್ದ ತನ್ನ ಸಹೋದರ ವಾಲಿಯನ್ನು ಕೊಲ್ಲಲು ರಾಮನ ಸಹಾಯವನ್ನು ಬಯಸಿದನು.

ಮೊದಲೇ ಯೋಜನೆ ಮಾಡಿಕೊಂಡು, ಸುಗ್ರೀವನು ವಾಲಿಯನ್ನು ದ್ವಂದ್ವ ಕಾಳಗಕ್ಕೆ ಆಹ್ವಾನಿಸಿದನು. ಕುಸ್ತಿ ನಡೆಯುತ್ತಿದ್ದಾಗ ರಾಮನು ಸೂಕ್ತ ಸಮಯಕ್ಕೆ ಕಾದಿದ್ದು, ಬಾಣ ಹೊಡೆದು ವಾಲಿಯನ್ನು ಕೊಂದನು. “ಸುಗ್ರೀವ, ಇಗೋ ನಿನ್ನ ರಾಜ್ಯವು ನಿನಗೆ ಮರಳಿ ದೊರೆಯಿತು” ಎಂದೊಪ್ಪಿಸಿದನು.

ರಾಮನು ತನ್ನ ಮಾತಿನಂತೆ ಸುಗ್ರೀವನ ರಾಜ್ಯವನ್ನು ಮರಳಿ ದೊರಕಿಸಿಕೊಟ್ಟನು. ಈಗ ರಾಮನಿಗೆ ಸಹಾಯ ಮಾಡುವ ಸರದಿ ವಾನರ ದೊರೆಯದಾಯಿತು. ಅವನು ಭೂಮಿಯ ಉದ್ದಗಲಕ್ಕೂ ತನ್ನ ದೂತರನ್ನಟ್ಟಿ, ಸೀತೆಯನ್ನು ಹುಡುಕಿ ತರುವಂತೆ, ಕೊನೆಯ ಪಕ್ಷ ಆಕೆಯ ಸುಳಿವನ್ನಾದರೂ ತರುವಂತೆ ಆದೇಶ ನೀಡಿದನು. ವಾಯುಪುತ್ರ ಹನುಮಂತನು ಹಲವು ವಿಶೇಷ ಶಕ್ತಿಗಳನ್ನು ಹೊಂದಿದ್ದು, ”ಜೈ ಶ್ರೀ ರಾಮ!” ಎಂದು ಉದ್ಗರಿಸುತ್ತಾ, ಸಾಗರವನ್ನು ದಾಟಿ ಸುವರ್ಣ ನಗರಿ ಲಂಕೆಯನ್ನು ತಲಪಿದನು.

ಅರಮನೆಯ ಉಪವನದಲ್ಲಿ ರಕ್ಕಸಿಯರಿಂದ ಸುತ್ತುವರಿಯಲ್ಪಟ್ಟು, ಮರದ ಕೆಳಗೆ ಕುಳಿತಿದ್ದ ಸೀತೆಯನ್ನು ಅವನು ಕಂಡನು. ಹನುಮಂತನು ಮರದಲ್ಲಿ ಅಡಗಿ ರಕ್ಕಸಿಯರು ನಿದ್ರೆಗೆ ಜಾರುವುದನ್ನೇ ಕಾದು ಕುಳಿತನು. ಅನಂತರ ಅವನು ಕೆಳಗಿಳಿದು, ಮೃದು ಧ್ವನಿಯಿಂದ ಸೀತೆಯೊಡನೆ ಮಾತನಾಡಿದನು.

ಅವನು ರಾಮನ ದೂತನೆಂದು ತಿಳಿದ ಸೀತೆಯ ಭಯವೆಲ್ಲ ಹಾರಿ ಹೋಯಿತು. ಅವಳು ಅವನನ್ನು ಕುರಿತು, ರಾಮನಿಗೆ ಬಂದು ತನ್ನನ್ನು ದುಷ್ಟ ರಾವಣನ ಸೆರೆಯಿಂದ ಬಿಡಿಸಿಕೊಂಡು ಹೋಗಲು ಹೇಳುವಂತೆ ಕೇಳಿಕೊಂಡಳು. ತನ್ನ ಆಭರಣವನ್ನಿತ್ತು ಇದನ್ನು ನೀನು ನನ್ನನ್ನು ಭೇಟಿಯಾದ ಕುರುಹಾಗಿ ಪ್ರಭು ಶ್ರೀರಾಮನಿಗೆ ನೀಡು” ಎಂದು ನುಡಿದಳು.

ವಾನರನಾಗಿದ್ದ ಹನುಮಂತನು ಸಹಜವಾಗಿಯೇ ಚೇಷ್ಟೆಯ ಪ್ರವೃತ್ತಿ ಹೊಂದಿದ್ದನು. ಮತ್ತು ಅರಮನೆಯ ಉಪವನವನ್ನು ಹಾಳುಗೆಡವಲು ಮುಂದಾದನು. ಅವನು ರಾವಣನನ್ನು ಭೇಟಿ ಮಾಡಲು ಬಯಸಿದ್ದನು. ಇಂತಹ ಚೇಷ್ಟೆ ಮಾಡಿ ಸಿಕ್ಕಿ ಬಿದ್ದರೆ, ತನ್ನನ್ನು ಆ ಅಸುರರಾಜನ ಎದುರು ಕರೆದೊಯ್ಯುತ್ತಾರೆ ಎಂಬುದನ್ನವನು ಅರಿತಿದ್ದನು.

ಸಾಕಷ್ಟು ಮರಗಿಡಗಳನ್ನು ಹಾಳು ಮಾಡಿದ ಆನಂತರ ಅವನು ರಾಕ್ಷಸರ ಕಾವಲು ಪಡೆಯ ಕೈಗೆ ಸಿಕ್ಕುಬಿದ್ದು, ರಾವಣನೆದುರು ಎಳೆದೊಯ್ಯಲ್ಪಟ್ಟನು. ಅವನು ರಾವಣನಿಗೆ, ತನ್ನ ಪ್ರಭು ಅಯೋಧ್ಯೆಯ ರಾಜ ಶ್ರೀರಾಮನು ತನ್ನ ಸೇನೆಯೊಡನೆ ಬಂದು, ಸೀತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಹೋಗುವುದಾಗಿ ಹೇಳಿದನು.

ತನಗಿಂತ ಬಲಶಾಲಿಗಳು ಯಾರಾದರೂ ಇರುವರೆಂಬುದನ್ನು ಕೇಳಲು ಬಯಸದ ರಾವಣನು ಹನುಮಂತನ ಮಾತಿನಿಂದ ರೊಚ್ಚಿಗೆದ್ದು, ಅವನ ಬಾಲವನ್ನು ಸುಟ್ಟು ಹಾಕುವಂತೆ ಆದೇಶಿಸಿದನು. ಇದು ಹನುಮಂತನ ಚೇಷ್ಟೆಗೆ ಮತ್ತೊಂದು ಅವಕಾಶ ನೀಡಿತು. ಅವನು ತನ್ನ ಬಾಲವನ್ನು ಸುತ್ತಲು ಅರಮನೆಯಲ್ಲಿ ಬಟ್ಟೆ ಇನ್ನಿಲ್ಲವಾಗುವವರೆಗೂ, ಬಾಲವನ್ನು ನೆನೆಸಲು ಎಣ್ಣೆಖಾಲಿಯಾಗುವವರೆಗೂ ಅದನ್ನು ಬೆಳೆಸುತ್ತಾ ಹೋದನು.

ಸುತ್ತಿಸುತ್ತಿಸುಸ್ತಾದ ರಕ್ಕಸರು ಕೊನೆಗೆ ಬಾಲಕ್ಕೆ ಬೆಂಕಿಯಿಟ್ಟರು. ಇದಕ್ಕಾಗಿಯೇ ಕಾಯುತ್ತಿದ್ದ ಹನುಮಂತನು ನಗರದ ತುಂಬೆಲ್ಲಾ ಹಾರಾಡುತ್ತ ಉರಿಯುವ ಬಾಲದಿಂದ ಮನೆ ಮಾರುಗಳನ್ನು ಸುಟ್ಟು ಹಾಕಿದನು. ನೋಡ ನೋಡುತ್ತಿದ್ದಂತೆಯೇ ಲಂಕಾ ನಗರವು ಬೆಂಕಿಯಿಂದ ಧಗಧಗಿಸತೊಡಗಿತು. ಪ್ರಜೆಗಳು ತಮ್ಮ ಮೇಲೆ ಎಗರಿ ಬಿದ್ದ ದುರದೃಷ್ಟದಿಂದ ಭೀತರಾದರು. ತಮ್ಮ ರಾಜನ ದುಷ್ಕೃತ್ಯದಿಂದಾಗಿ ಅವರು ಯಾತನೆ ಪಡುವಂತಾಗಿತ್ತು.

ಸೀತೆಯನ್ನು ಭೇಟಿ ಮಾಡಿದ ಸಂತೋಷದಿಂದ ಹನುಮಂತನು ರಾಮನ ಬಳಿ ಮರಳಿ, ಭೇಟಿಯ ಚಿಹ್ನೆಯಾಗಿ ಆಕೆ ನೀಡಿದ್ದ ಆಭರಣವನ್ನು ರಾಮನಿಗೆ ನೀಡಿದನು. ತನ್ನ ಪ್ರೀತಿಯ ರಾಜಕುಮಾರಿಯ ಆಭರಣವನ್ನು ಕಂಡ ರಾಮ ನೋವಿನಿಂದ ದುಃಖಿಸಿದನು. ಅನಂತರ ಅವನು ವಾನರ ಸೇನೆಯ ಸಹಾಯದಿಂದ ಲಂಕೆಯ ಮೇಲೆ ದಾಳಿ ಮಾಡಲು ಯೋಜನೆ ಹಾಕಿದನು.

ರಾವಣನ ಸಹೋದರ ವಿಭೀಷಣನಿಗೆ ಲಂಕಾಧಿರಾಜನ ದುಷ್ಕೃತ್ಯಗಳು ಇಷ್ಟವಾಗದೆ ಅದನ್ನು ವಿರೋಧಿಸಿದನು. ಈ ಕಾರಣದಿಂದಾಗಿ ರಾವಣನಿಂದ ನಗರದ ಹೊರದೂಡಲ್ಪಟ್ಟನು. ವಾನರರ ನಡುವೆ ಇದ್ದ ರಾಮನನ್ನು ಕಂಡು, ರಾವಣನನ್ನು ಸೋಲಿಸಿ ಸೀತೆಯನ್ನು ರಕ್ಷಿಸುವಲ್ಲಿ ಅವನಿಗೆ ಸಹಾಯ ನೀಡುವುದಾಗಿ ಹೇಳಿದನು.

ಹನುಮಂತನ ನೇತೃತ್ವದಲ್ಲಿ ವಾನರರು ಸಮುದ್ರದುದ್ದಕ್ಕೂ ಸೇತುವೆಯನ್ನು ನಿರ್ಮಿಸಿ, ಲಂಕೆಗೆ ದಾರಿ ಮಾಡಿದರು. ಈ ಸೇತುವೆಗೆ ಬಳಸಿದ ಕಲ್ಲುಗಳು ಅಚ್ಚರಿಯ ರೀತಿಯಲ್ಲಿ ತೇಲುತ್ತಿದ್ದವು. ಅವುಗಳ ಮೇಲೆ ‘ರಾಮ’ನ ಹೆಸರು ಬರೆದಿದ್ದರಿಂದ ಕಲ್ಲುಗಳು ಹಗುರಾಗಿ ತೇಲುತ್ತ ಸೇತುವೆ ನಿರ್ಮಾಣಕ್ಕೆ ಅನುಕೂಲವಾಗಿದ್ದವು.

ರಾಮನು ದಾಳಿ ನಡೆಸುವ ಸೂಚನೆ ಸಿಗುತ್ತಿದ್ದಂತೆಯೇ ಲಂಕೆಯಲ್ಲಿಯೂ ರಾಕ್ಷಸರ ಸೇನೆ ಯುದ್ಧದ ಸಿದ್ಧತೆ ನಡೆಸಲಾರಂಭಿಸಿತು. ತನ್ನೆಲ್ಲ ಬಲಿಷ್ಠ ರಾಕ್ಷಸ ಯೋಧರು, ಬಂಧುಗಳು, ವರ್ಷದಲ್ಲಿ ಆರು ತಿಂಗಳು ನಿದ್ರಿಸಿರುತ್ತಿದ್ದ ಕುಂಭಕರ್ಣನೂ ಸೇರಿದಂತೆ ದುಷ್ಟ ಸಹೋದರರು – ಎಲ್ಲರನ್ನೂ ಕರೆಸಿಕೊಂಡ ರಾವಣನಿಗೆ ತಾನೇ ಗೆಲ್ಲುವೆನೆಂಬ ಭರವಸೆಯಿತ್ತು.

ಯುದ್ಧವು ಆರಂಭಗೊಂಡಿತು. ಹಲವಾರು ರಾಕ್ಷಸರು ಮತ್ತು ವಾನರರು ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ವಾನರರು ಸಣ್ಣ ಸಂಖ್ಯೆಯಲ್ಲಿದ್ದರೂ ಅವರು ರಾಮನ ಪಕ್ಷವಹಿಸಿದ್ದುದರಿಂದ ಅತ್ಯಂತ ಬಲಶಾಲಿಗಳಾಗಿ ಹೋರಾಡಿದರು. ರಾವಣನ ಮಗ ಇಂದ್ರಜಿತುವಿನ ಬಾಣಕ್ಕೆ ತುತ್ತಾದ ಲಕ್ಷ್ಮಣನನ್ನು ಮರಳಿ ಎಚ್ಚರಿಸಲು ಹಿಮಾಲಯ ಶ್ರೇಣಿಯಲ್ಲಿ ಬೆಳೆಯುವ ಮೃತ ಸಂಜೀವಿನಿ ಮೂಲಿಕೆ ಬೇಕೆಂದು ವೈದ್ಯರು ಹೇಳಿದರು.

ಇದನ್ನು ಕೇಳಿದ ಹನುಮಂತನು ದಕ್ಷಿಣದ ಸಮುದ್ರದ ತುದಿಯಿಂದ ಉತ್ತರದ ಹಿಮಾಲಯದ ತುತ್ತ ತುದಿಯವರೆಗೂ ಹಾರಿದನು. ಅಲ್ಲಿ ಮೃತ ಸಂಜೀವಿನಿ ಮೂಲಿಕೆಯನ್ನು ಗುರುತಿಸಲಾಗದೆ ಇಡಿಯ ಬೆಟ್ಟವನ್ನೇ ಎತ್ತಿ, ಗಾಯಗೊಂಡು ಮೃತ್ಯು ಮುಖದಲ್ಲಿದ್ದ ಲಕ್ಷ್ಮಣನನ್ನು ಇರಿಸಿದ್ದ ಶಿಬಿರದ ಬಳಿ ತಂದನು. ವೈದ್ಯರು ಸಂಜೀವಿನಿ ಮೂಲಿಕೆಯನ್ನು ಆಯ್ದು, ಲಕ್ಷ್ಮಣನಿಗೆ ಚಿಕಿತ್ಸೆ ನೀಡಿ ಗುಣಮುಖವಾಗಿಸಿದರು. ಹನುಮಂತನು ಬೆಟ್ಟವನ್ನು ಮರಳಿ ಹಿಮಾಲಯ ಶ್ರೇಣಿಯಲ್ಲಿಯೇ ಇರಿಸಿ ಬಂದನು.

ಹನುಮಂತನು ಶ್ರೀರಾಮನನ್ನು ತನ್ನ ಪ್ರಭುವೆಂದು ಪರಿಗಣಿಸಿದ್ದುದರಿಂದ ಅವನಲ್ಲಿ ಆಸಾಧಾರಣ ಶಕ್ತಿ ಮನೆ ಮಾಡಿತ್ತು. ನಾವು ಕೂಡ ಶ್ರೀರಾಮನ ಪವಿತ್ರ ನಾಮ ಜಪಿಸುವುದರಿಂದ ಊಹಿಸಲೂ ಸಾಧ್ಯವಾಗದ ಕಾರ್ಯಗಳನ್ನು ಮಾಡಬಹುದು. ಏಕೆಂದರೆ, ನಾವು ಭಗವಂತನಿಗೆ ಸೇವೆ ಸಲ್ಲಿಸಲು ಬಯಸಿದಾಗ, ಅವನು ನಮಗೆ ಅದನ್ನು ನೆರವೇರಿಸಲು ಅಗತ್ಯವಿರುವ ಸಾಮರ್ಥ್ಯವನ್ನು ದಯಪಾಲಿಸುವನು.

ರಾಮ ಲಕ್ಷ್ಮಣರ ತೀಕ್ಷ್ಣ ಬಾಣಗಳಿಗೆ ಹಲವು ರಕ್ಕಸ ಯೋಧರು ಬಲಿಯಾದರು. ನುರಿತ ವೀರನೂ, ಮಾಯಾ ವಿದ್ಯೆಯಲ್ಲಿ ನಿಪುಣನೂ ಆಗಿದ್ದ ಇಂದ್ರಜಿತು ಕೂಡ ಯುದ್ಧದಲ್ಲಿ ಮಡಿದನು. ರಾವಣನ ಸೇನೆಯ ದುಷ್ಟ ಸೇನಾಧಿಪತಿಗಳು ಒಬ್ಬೊಬ್ಬರಾಗಿ ಉರುಳಿಬಿದ್ದರು. ಆದರೂ ರಾವಣನು ಸೀತೆಯನ್ನು ಆಕೆಯ ಪತಿಗೆ ಒಪ್ಪಿಸಲಿಲ್ಲ.

ಅಂತಿಮವಾಗಿ, ತನ್ನೆಲ್ಲ ವೀರ ಯೋಧರನ್ನೂ ಕಳೆದುಕೊಂಡ ಅನಂತರ ರಾವಣ ಸ್ವತಃ ತಾನೇ ಯುದ್ಧ ರಂಗಕ್ಕೆ ಬಂದ. ರಾಮ ಹಾಗೂ ರಾವಣರ ನಡುವೆ ದೀರ್ಘಕಾಲದ ಭೀಕರ ಕಾಳಗ ನಡೆಯಿತು. ಪ್ರತಿ ಬಾರಿ ರಾಮನು ರಾವಣನ ಹತ್ತರಲ್ಲಿ ಒಂದು ತಲೆಯನ್ನು ಕಡಿದಾಗಲೂ ಮತ್ತೊಂದು ಅಲ್ಲಿ ಬಂದು ಕೂರುತ್ತಿತ್ತು. ವಿಭೀಷಣನು ರಾಮನಿಗೆ ರಾವಣನನ್ನು ಕೊಲ್ಲುವ ಉಪಾಯ ಸೂಚಿಸಿದನು.

ರಾಮನು ಕ್ರೋಧದಿಂದ ನುಡಿದನು, ಸೀತೆಯ ಅಪಹರಣಕಾರನೇ, ನಿನ್ನನ್ನು ನೀನು ದೊಡ್ಡ ವೀರನೆಂದು ತಿಳಿದು ಮೂರ್ಖನಾಗಿರುವೆ. ನನ್ನನ್ನು ವಂಚಿಸಿ ನನ್ನ ಪತ್ನಿಯನ್ನು ಕದ್ದೊಯ್ದ ನೀನು ಒಬ್ಬ ಹೇಡಿಯೇ ಸರಿ, ನೀನು ಸೀತೆಗೆ ಇಷ್ಟೊಂದು ದುಃಖವನ್ನು ನೀಡಿರುವುದರಿಂದಲೇ ಇಂದು ನಿನ್ನ ಅಂತ್ಯವನ್ನು ಕಾಣುತ್ತಿರುವೆ!’ ಅನಂತರ ರಾಮನು ರಾವಣನ ಹೃದಯಕ್ಕೆ ನೇರವಾಗಿ ಬಾಣವನ್ನು ಹೊಡೆದು ಅವನನ್ನು ಸಂಹರಿಸಿದನು.

ರಾಮ ಸೀತೆಯರು ಮರಳಿ ಒಂದಾದ ಬಳಿಕ ತಮಗೆ ಸಹಾಯ ನೀಡಿದ ಎಲ್ಲ ಸ್ನೇಹಿತರನ್ನೂ ಬೀಳ್ಕೊಂಡು, ಲಕ್ಷ್ಮಣನೊಂದಿಗೆ ಪುಷ್ಪಕ ವಿಮಾನವೆಂಬ ದಿವ್ಯ ವಿಮಾನದಲ್ಲಿ ಅಯೋಧ್ಯೆಗೆ ಮರಳಿದರು. ಅವರ ಹದಿನಾಲ್ಕು ವರ್ಷಗಳ ವನವಾಸ ಮುಗಿದು, ರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷಿಕ್ತನಾದನು.

ಅಷ್ಟು ದೀರ್ಘಕಾಲದ ಅನಂತರ ರಾಜಕುಮಾರರಾದ ರಾಮ, ಲಕ್ಷ್ಮಣರನ್ನೂ, ರಾಜಕುಮಾರಿ ಸೀತೆಯನ್ನೂ ಕಂಡ ಪ್ರಜೆಗಳ ಆನಂದ ಮಿತಿ ಮೀರಿತ್ತು. ಇಡಿಯ ನಗರವು ಸಿಂಗಾರಗೊಂಡು ಅವರನ್ನು ಸ್ವಾಗತಿಸಿತು. ರಾತ್ರಿಯ ಆಕಾಶದಲ್ಲಿ ಪಟಾಕಿಗಳು ಸಿಡಿದವು.

”ಜೈ ಶ್ರೀ ರಾಮ! ಜೈ ಶ್ರೀ ರಾಮ!!’ ಎಂಬ ಘೋಷವು ಇಡಿಯ ವಾತಾವರಣದಲ್ಲಿ ಮೊಳಗಿ ಭೂಮಿಯನ್ನು ತುಂಬಿ ಹೋಯಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi