ಶ್ರೀ ಬಿಲ್ವಮಂಗಲರ ಗೋವಿಂದ ದಾಮೋದರ ಸ್ತೋತ್ರ

– ಡಾ.ಬಿ.ಆರ್. ಸುಹಾಸ್

ದೂರ್ವಾಸಸೋ ವಾಕ್ಯಮುಪೇತ್ಯ ಕೃಷ್ಣಾ ಸಾ ಚಾಽಬ್ರವೀತ್‌ ಕಾನನವಾಸಿನೀಶಮ್ |

ಅಂತಃಪ್ರವಿಷ್ಟಂ ಮನಸಾ ಜುಹಾವ ಗೋವಿಂದ ದಾಮೋದರ ಮಾಧವೇತಿ ||

ಒಂದು ದಿನ ದೂರ್ವಾಸ ಮಹರ್ಷಿಗಳು ಇದ್ದಕ್ಕಿದ್ದಂತೆ ಪಾಂಡವರ ಆಶ್ರಮಕ್ಕೆ ಬಂದು ತಮಗೂ ತಮ್ಮ ಶಿಷ್ಯರಿಗೂ ಭೋಜನವನ್ನು ಯಾಚಿಸಿದರು. ಆಶ್ರಮದಲ್ಲಿ ಏನೂ ಉಳಿದಿರದಿದ್ದರೂ ದ್ರೌಪದಿಯು ಅವರಿಗೆ ಆಗಲಿ ಎಂದು ಹೇಳಿ, ಒಳಗೆ ಹೋಗಿ ಮನಸ್ಸಿನಿಂದಲೇ ಶ್ರೀಕೃಷ್ಣನನ್ನು ಗೋವಿಂದ, ದಾಮೋದರ, ಮಾಧವ’ ಎಂದು ಕೂಗಿದಳು.

ವಿ.ಸೂ.: ಈ ಕಥೆ ಮಹಾಭಾರತದಲ್ಲಿ ಬಂದಿದೆ. ಪಾಂಡವರು ಅರಣ್ಯವಾಸಿಗಳಾಗಿದ್ದಾಗ, ಅವರು ಸೂರ್ಯನ ಉಪಾಸನೆ ಮಾಡಿ ಅವನಿಂದ ಒಂದು ಅಕ್ಷಯ ಪಾತ್ರೆಯನ್ನು ಪಡೆದಿದ್ದರು. ಅದರಲ್ಲಿ ಮಾಡಿದ ಅಡುಗೆ ಅಕ್ಷಯವಾಗುತ್ತಿತ್ತು ಮತ್ತು ದ್ರೌಪದಿಯ ಊಟವಾದ ಬಳಿಕವಷ್ಟೇ ಅದು ಬರಿದಾಗುತ್ತಿತ್ತು.

ಹೀಗೆ ಪಾಂಡವರು ಋಷಿಮುನಿಗಳಿಗೆ ಉಣಬಡಿಸಿ ತಾವೂ ಉಂಡ ಬಳಿಕ, ದ್ರೌಪದಿಯು ಕಡೆಯಲ್ಲಿ ಊಟ ಮಾಡುತ್ತಿದ್ದಳು. ಒಂದು ದಿನ, ದೂರ್ವಾಸ ಮುನಿಗಳು ಹಸ್ತಿನಾಪುರಕ್ಕೆ ಹೋಗಲು, ದುರ್ಯೋಧನನು ಅವರನ್ನು ಚೆನ್ನಾಗಿ ಸತ್ಕರಿಸಿದನು. ಸಂತುಷ್ಟರಾದ ಅವರು ಅವನಿಗೊಂದು ವರ ನೀಡಲು, ಅವನು ಅವರಿಗೆ ದ್ರೌಪದಿಯ ಊಟವಾದ ಬಳಿಕ ಹೋಗಿ ಪಾಂಡವರ ಆತಿಥ್ಯ ಸ್ವೀಕರಿಸಬೇಕೆಂದು ಕೇಳಿಕೊಂಡನು.

ಇಷ್ಟವಿಲ್ಲದಿದ್ದರೂ ಒಪ್ಪಿ ದೂರ್ವಾಸರು ದ್ರೌಪದಿಯ ಊಟದ ಬಳಿಕ ತಮ್ಮ ನೂರು ಶಿಷ್ಯರೊಂದಿಗೆ ಪಾಂಡವರ ಆಶ್ರಮಕ್ಕೆ ಹೋದರು. ತಾವೆಲ್ಲರೂ ಸ್ನಾನ ಮುಗಿಸಿ ಭೋಜನಕ್ಕೆ ಬರುವುದಾಗಿ ಹೇಳಿ ಹೋದರು. ಆಶ್ರಮದಲ್ಲಿ ಏನೂ ಆಹಾರ ಇಲ್ಲದಿರಲು ದ್ರೌಪದಿಯು ಆರ್ತಳಾಗಿ ಶ್ರೀಕೃಷ್ಣನನ್ನು ಚಿಂತಿಸಿದಳು.

ಆಗ ಶ್ರೀಕೃಷ್ಣನೇ ಅಲ್ಲಿಗೆ ಬಂದು ತನಗೇ ಹಸಿವಾಗಿದೆಯೆಂದು, ಅಕ್ಷಯಪಾತ್ರೆಯಲ್ಲಿದ್ದ ಒಂದೇ ಅಗುಳು ಅನ್ನವನ್ನು ತಿನ್ನುತ್ತಾ ಇದರಿಂದ ಸಕಲ ಜೀವಿಗಳಿಗೂ ತೃಪ್ತಿಯಾಗಲಿ ಎಂದನು. ಆಗ ಸ್ನಾನ ಮಾಡುತ್ತಿದ್ದ ದೂರ್ವಾಸ ಮತ್ತು ಅವರ ಶಿಷ್ಯರೆಲ್ಲರಿಗೂ ಕೂಡಲೇ ಹೊಟ್ಟೆತುಂಬಿತು.

ಇನ್ನು ಅವರು ಪಾಂಡವರ ಬಳಿ ಹೋಗಿ ಊಟ ಮಾಡುವುದಿಲ್ಲ ಎಂದರೆ ಆ ಹರಿಭಕ್ತರ ಕೋಪಕ್ಕೆ ಗುರಿಯಾಗಬೇಕಾದೀತು ಎಂದು ಹೆದರಿ ಹಾಗೆಯೇ ಹೊರಟು ಹೋದರು. ನಕುಲನು ಅವರನ್ನು ಕರೆತರಲು ಬಂದಾಗ ಅವರು ಅಲ್ಲಿ ಇರಲೇ ಇಲ್ಲ. ಹೀಗೆ ಶ್ರೀಕೃಷ್ಣನು ದ್ರೌಪದಿಯನ್ನೂ ಪಾಂಡವರನ್ನೂ ದೂರ್ವಾಸರ ಕೋಪದಿಂದ ಕಾಪಾಡಿದನು.

ಧ್ಯೇಯ ಸದಾ ಯೋಗಿಭಿರಪ್ರಮೇಯಃ ಚಿಂತಾಹರಶ್ಚಿಂತಿತಪಾರಿಜಾತಃ |

ಕಸ್ತೂರಿಕಾಕಲ್ಪಿತ ನೀಲವರ್ಣೋ ಗೋವಿಂದ ದಾಮೋದರ ಮಾಧವೇತಿ ||

ಯೋಗಿಗಳಿಂದ ಅಪ್ರಮೇಯನಾದ ಶ್ರೀಕೃಷ್ಣನು ಸದಾ ಧ್ಯಾನಿಸಲ್ಪಡುತ್ತಾನೆ. ಅವನು ಎಲ್ಲರ ಚಿಂತಾಹಾರಕನಾಗಿದ್ದಾನೆ, ಹಾಗೂ ಚಿ೦ತಿಸುವವರಿಗೆ ಪಾರಿಜಾತವಾಗಿದ್ದಾನೆ (ಕೇಳಿದ್ದನ್ನು ಅನುಗ್ರಹಿಸುತ್ತಾನೆ). ಕಸ್ತೂರಿಯಂತೆ ಸುಗಂಧ ಸೂಸುವ ನೀಲವರ್ಣ ದಿವ್ಯದೇಹವನ್ನು ಅವನು ಹೊಂದಿದ್ದಾನೆ. ಇಂಥ ಭಗವಾನ್ ಶ್ರೀಕೃಷ್ಣನನ್ನು ‘ಗೋವಿಂದ, ದಾಮೋದರ, ಮಾಧವ’ ಎಂದು ಸದಾ ಧ್ಯಾನಿಸಬೇಕು.

ಸಂಸಾರಕೂಪೇ ಪತಿತೋಽತ್ಯಗಾಧೇ ಮೋಹಾಂಧಪೂರ್ಣೇ ವಿಷಯಾಭಿತಪ್ತೇ ।

ಕರಾವಲಂಬಂ ಮಮ ದೇಹಿ ವಿಷ್ಣೋ ಗೋವಿಂದ ದಾಮೋದರ ಮಾಧವೇತಿ ||

ಮೋಹವೆಂಬ ಅಂಧಕಾರದಿಂದ ತುಂಬಿರುವ ವಿಷಯಗಳೆಂಬ ಜ್ವಾಲೆಗಳಿಂದ ತಪ್ತವಾಗಿರುವ ಸಂಸಾರರೂಪದ ಅತ್ಯಂತ ಆಳವಾದ ಬಾವಿಯಲ್ಲಿ ಬಿದ್ದಿರುವ ಜೀವಿಯು, “ಹೇ ವಿಷ್ಣು! ನನಗೆ ನಿನ್ನ ಕೈ ಕೊಡು (ಕೈ ನೀಡಿ ಹಿಡಿದು ಮೇಲೆತ್ತು)” ಎಂದು ಭಗವಂತನನ್ನು ಪ್ರಾರ್ಥಿಸುತ್ತಾ, ‘ಗೋವಿಂದ, ದಾಮೋದರ, ಮಾಧವ’ ಎಂದು ಪದೇ ಪದೇ ಜಪಿಸುತ್ತಿರಬೇಕು.

ಸುಖಾವಸಾನೇ ತ್ವಿದಮೇವ ಸಾರಂ ದುಃಖಾವಸಾನೇ ತ್ವಿದಮೇವ ಗೇಯಮ್ |

ದೇಹಾವಸಾನೇ ತ್ವಿದಮೇವ ಜಾಪ್ಯಂ ಗೋವಿಂದ ದಾಮೋದರ ಮಾಧವೇತಿ ||

ಸುಖವು ಕೊನೆಯಾದರೆ, ಇದೇ ಸಾರ – ಭಗವಂತನ ನಾಮೋಚ್ಚಾರಣೆಯೇ ಸುಖ ಎಂಬುದು. ದುಃಖವು ಕೊನೆಗೊಳ್ಳಲು ಇದನ್ನೇ ಹಾಡಬೇಕು. ಭಗವಂತನ ನಾಮಾಮೃತವನ್ನೇ ಹಾಡಬೇಕು. ದೇಹವು ಕೊನೆಗೊಳ್ಳುವಾಗ, ಅರ್ಥಾತ್ ಸಾಯುವಾಗ ಇದನ್ನೇ ಜಪಿಸಬೇಕು – ಭಗವಂತನ ನಾಮಗಳನ್ನೇ ಜಪಿಸಬೇಕು. ಹೀಗೆ ಸದಾ ಮನುಷ್ಯನು ‘ಗೋವಿಂದ, ದಾಮೋದರ, ಮಾಧವ’ ಎ೦ದು ಜಪಿಸಬೇಕು.

ದುರ್ವಾರವಾಕ್ಯಂ ಪರಿಗೃಹ್ಯ ಕೃಷ್ಣಾ ಮೃಗೀವ ಭೀತಾ ತು ಕಥಂ ಕಥಂಚಿತ್ |

ಸಭಾಂ ಪ್ರವಿಷ್ಟಾ ಮನಸಾಜುವಾಹ ಗೋವಿಂದ ದಾಮೋದರ ಮಾಧವೇತಿ ||

ಪಾಂಡವರು ದ್ಯೂತದಲ್ಲಿ ಕೌರವರಿಗೆ ಸೋತಾಗ, ದುಃಶ್ಯಾಸನನು ಅವರ ಪತ್ನಿ ದ್ರೌಪದಿಯನ್ನು ಮುಡಿ ಹಿಡಿದು ಸಭೆಗೆ ಎಳೆತಂದನು. ಕೇಳಲು ಅಸಹ್ಯವಾದ ಅವನ ಮಾತುಗಳನ್ನು ಸಹಿಸಿಕೊಳ್ಳುತ್ತಾ ವ್ಯಾಧನನ್ನು ಕಂಡ ಜಿಂಕೆಯಂತೆ ಭೀತಳಾಗಿ ನಡುಗುತ್ತಾ ಸೆಳೆಯಲ್ಪಟ್ಟು ಹೇಗೋ ಕಷ್ಟದಿಂದ (ಏಕವಸ್ತ್ರವನ್ನು ಮಾತ್ರ ಧರಿಸಿದ್ದರಿಂದಲೂ ಸಭೆಯನ್ನು ಪ್ರವೇಶಿಸಿದಳು. ಆಗ ಅವಳು ಮನಸ್ಸಿನಿಂದಲೇ, ‘ಗೋವಿಂದ, ದಾಮೋದರ, ಮಾಧವ’ ಎಂದು ಭಗವಂತನನ್ನು ಸ್ಮರಿಸಿದಳು.

ತ್ವಾಮೇವ ಯಾಚೇ ಮಮ ದೇಹಿ ಜಿಪ್ಪೇ ಸಮಾಗತೇ ದಂಡಧರೇ ಕೃತಾಂತೇ |

ವಕ್ತವ್ಯಮೇವಂ ಮಧುರಂ ಸುಭಾ ಗೋವಿಂದ ದಾಮೋದರ ಮಾಧವೇತಿ ||

ಹೇ ಜಿಹ್ವೆಯೇ (ನಾಲಗೆಯೇ) ನಿನ್ನನ್ನು ನಾನು ಒಂದೇ ಒಂದು ಭಿಕ್ಷೆಯನ್ನು ಬೇಡಿಕೊಳ್ಳುತ್ತೇನೆ. ನಿನ್ನನ್ನೇ ಬೇಡುತ್ತೇನೆ, ದಯವಿಟ್ಟು ಕೊಡು. ಅದೇನೆಂದರೆ, ಯಮನು ದಂಡವನ್ನು ಹಿಡಿದು ನನ್ನ ಬಳಿಗೆ ಬಂದಾಗ (ನನಗೆ ಸಾವು ಸಮೀಪಿಸಿದಾಗ), ನೀನು ಚೆನ್ನಾದ ಭಕ್ತಿಯಿಂದ, ಮಧುರವಾದ ‘ಗೋವಿಂದ, ದಾಮೋದರ, ಮಾಧವ’ ಎಂಬ ನಾಮಗಳನ್ನು ಉಚ್ಚರಿಸಬೇಕು.”

ಭಜಸ್ವ ಮಂತ್ರಂ ಭವಬಂಧಮುಕ್ತೈ ಜಿಹ್ವೇ ರಸಜ್ಞೇ ಸುಲಭಂ ಮನೋಜ್ಞಮ್ |

ದ್ವೈಪಾಯನಾದ್ಯೈ ರ್ಮುನಿಭಿಃ ಪ್ರಜಪ್ತಂ ಗೋವಿಂದ ದಾಮೋದರ ಮಾಧವೇತಿ ||

““ಹೇ ಜಿಹ್ವೇ ರಸಜ್ಞೆಯೇ, ಸುಲಭವೂ ಮನೋಜ್ಞವೂ ಆದ ಈ ಕೃಷ್ಣಮಂತ್ರವನ್ನು ಭವಬಂಧನದ ಮುಕ್ತಿಗಾಗಿ ಜಪಿಸು. ಶ್ರೀಕೃಷ್ಣದ್ವೈಪಾಯನವ್ಯಾಸರೇ ಮೊದಲಾದ ಮುನಿಗಳಿಂದ, ‘ಗೋವಿಂದ, ದಾಮೋದರ, ಮಾಧವ’ ಎಂದು ಈ ಕೃಷ್ಣಮಂತ್ರವು ಜಪಿಸಲ್ಪಟ್ಟಿದೆ. ಅಂಥ ಪರಮಪವಿತ್ರ ಮಂತ್ರವನ್ನು ನೀನು ಜಪಿಸು.”

ತಾತಾಜ್ಞಯಾ ಗಚ್ಛತಿ ರಾಮಚಂದ್ರೇ ಸಲಕ್ಷ್ಮಣೇಽರಣ್ಯಚಯೇ ಸಸೀತೇ ।

ಚಕ್ರಂದ ರಾಮಸ್ಯ ನಿಜಾ ಜನಿತ್ರೀ ಗೋವಿಂದ ದಾಮೋದರ ಮಾಧವೇತಿ ||

ತಂದೆಯಾದ ದಶರಥನು ಆಜ್ಞೆಮಾಡಲು, ಶ್ರೀರಾಮಚಂದ್ರನು ತನ್ನ ತಮ್ಮನಾದ ಲಕ್ಷ್ಮಣ ಮತ್ತು ಪತ್ನಿ ಸೀತಾದೇವಿಯೊಂದಿಗೆ ಕಾಡಿಗೆ ಹೋಗಲು, ಶ್ರೀರಾಮನ ತಾಯಿಯಾದ ಕೌಸಲ್ಯಾದೇವಿಯು, ‘ಗೋವಿಂದ, ದಾಮೋದರ, ಮಾಧವ’ ಎಂದು ವಿಲಪಿಸಿದಳು.

ವಿ.ಸೂ: ಇಲ್ಲಿಂದ ಆರು ಶ್ಲೋಕಗಳಿಗೆ ಗೋವಿಂದ, ದಾಮೋದರ, ರಾಘವತಿ’ ಎಂಬ ಪಾಠಾಂತರವಿದ್ದು, ಇವಿಷ್ಟನ್ನು ಶ್ರೀರಾಮರಘುನಂದನ ಸ್ತೋತ್ರವಾಗಿ ಕೆಲವು ಸಂಗ್ರಹಕರ್ತರು ಸಂಗ್ರಹಿಸಿದ್ದಾರೆ.

ಏಕಾಕಿನೀ ದಂಡಕಕಾನನಾಂತಾತ್ ಸಾ ನೀಯಮಾನಾ ದಶಕಂಧರೇಣ |

ಸೀತಾ ತದಾಽಽಕ್ರಂದದನನ್ಯನಾಥಾ ಗೋವಿಂದ ದಾಮೋದರ ಮಾಧವೇತಿ ||

ಏಕಾಕಿನಿಯಾಗಿದ್ದ ಸೀತಾದೇವಿಯನ್ನು ದಶಕಂಠ ರಾವಣನು ದಂಡಕಾರಣ್ಯದಿಂದ ಅಪಹರಿಸಿಕೊಂಡು ಹೋಗುತ್ತಿದ್ದಾಗ, ಇನ್ನಾರೂ ನಾಥನಿಲ್ಲದೇ (ಶ್ರೀರಾಮನು ಇಲ್ಲದಿದ್ದುದರಿಂದ), ‘ಗೋವಿಂದ, ದಾಮೋದರ, ಮಾಧವ’ ಎಂದು ಆಕ್ರಂದನ ಮಾಡಿದಳು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi